ಸಂತೆಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ರಚಿಸುವ ಬೃಹತ್ ಯೋಜನೆ ಯಾವುದೇ ಸರ್ವೇ ನಡೆಸದೆ, ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಕಾಮಗಾರಿ ಆರಂಭಿಸಿ ಒಂದೇ ದಿನದಲ್ಲಿ ನಿಲ್ಲಿಸಿರುವ ಹಿಂದಿನ ಮರ್ಮವೇನು ಎನ್ನುವುದನ್ನು ಶಾಸಕ ರಘುಪತಿ ಭಟ್ ಸ್ಪಷ್ಟಪಡಿಸಬೇಕು ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಕಲ್ಯಾಣಪುರ ಸಂತೆಕಟ್ಟೆ ಸಮೀಪ ಗೋಪಾಲಪುರ ಕ್ರಾಸ್ ಬಳಿ ಅಂಡರ್ ಪಾಸ್ ರಚಿಸುವ ಬೃಹತ್ ಯೋಜನೆ ಒಂದು ಯಾವುದೇ ಮುನ್ಸೂಚನೆ ಅಥವಾ ಯಾವುದೇ ತಾಂತ್ರಿಕ ಸರ್ವೆಗಳಿಲ್ಲದೆ, ಯಾವುದೇ ಚರ್ಚೆ ಸಾರ್ವಜನಿಕರೊಂದಿಗೆ ನಡೆಸದೆ, ಕೇವಲ ಗುತ್ತಿಗೆದಾರರ ಜೊತೆ ಮಾತನಾಡಿ, ಹೈವೇ ಪ್ರಾಧಿಕಾರವು ಕಾಮಗಾರಿ ಆರಂಭಿಸಿತು. ಆದರೆ ಒಂದೇ ದಿನದಲ್ಲಿ ಅಗೆದ ರಾಷ್ಟ್ರೀಯ ಹೆದ್ದಾರಿಯನ್ನು ಮತ್ತೆ ಪುನಃ ಸಂಚಾರಕ್ಕೆ ಹಿಂದಿನಂತೆಯೇ ಅನುವು ಮಾಡಿಕೊಟ್ಟಿರುವುದು ಕಂಡುಬಂದಿದೆ. ಈ ವಿಷಯ ಸ್ಥಳೀಯ ಶಾಸಕರಿಗೆ ಹಾಗೂ ಸಂಸದರಿಗೆ ಗೊತ್ತಿಲ್ಲದೆ ನಡೆದಿದೆ ಎಂದರೆ ಅದು ಅಪ್ಪಟ ಸುಳ್ಳು. ಅಭಿಯಂತರ ರವರು ಶಾಸಕರ ಗಮನಕ್ಕೆ ಈ ವಿಷಯ ತಂದಿರಬಹುದು.
ಮೂರು ಲೇನುಗಳಲ್ಲಿ ನಿರಂತರವಾಗಿ ಸಂಚರಿಸುವ ಟ್ರಾಫಿಕ್ ಅನ್ನು ಒಂದು ಸರ್ವಿಸ್ ರೋಡಿನಲ್ಲಿ ನಡೆಸಲು ಸಾಧ್ಯವೇ? ಒಬ್ಬ ಸಾಮಾನ್ಯ ವಾಹನ ಚಾಲಕನಿಗೆ ಕೇಳಿದರೂ ಅದನ್ನು ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಇವತ್ತಿನ ಪರಿಸ್ಥಿತಿಯಲ್ಲಿ ಇಲಾಖೆಗಳಿಗೆ ಮತ್ತು ಶಾಸಕರಿಗೆ ಅಭಿವೃದ್ಧಿ ಹೇಳಿದರೆ ಅದರ ಮೊತ್ತ ಎಷ್ಟು ಕೋಟಿ ಮತ್ತು 40 % ಪರ್ಸೆಂಟ್ ಎಷ್ಟಾಗುತ್ತದೆ ? ನಮ್ಮ ಖಾತೆಗೆ ಯಾವಾಗ ಹಣ ಬರುತ್ತದೆ ? ಎಂಬ ವಿಚಾರ ಬಿಟ್ಟರೆ ,ಆ ಕಾಮಗಾರಿ ಎಲ್ಲಿ ನಡೆಯುತ್ತದೆ ? ಅದರ ಸಾಧಕ ಬಾದಕಗಳು ಏನು ?ಎಂದು ಯೋಚಿಸದೆ ಒಂದು ಬಾರಿ ಮಾಡಿಬಿಡಿ ಎಂದು ಹೇಳುವುದು ಬಿಟ್ಟರೆ ಬೇರೆ ಯಾವ ಯೋಚನೆ ಕೂಡ ಇಲ್ಲವಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಡೆದು ಡಿವೈಡರನ್ನು ಕಟ್ ಮಾಡಿ ರಸ್ತೆಯನ್ನು ಅಗೆದು ಮತ್ತೆ ಪುನಃ ಅಲ್ಲಿಯೇ ಡಾಂಬರು ಹಾಕಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ, ಈ ನಡುವೆ ಪ್ರಯಾಣಿಕರ, ವಾಹನ ಸವಾರರ ಕಷ್ಟ ಸಂಕಷ್ಟಕ್ಕೆ ಏನು ಪರಿಹಾರ ಯೋಚಿಸಲಿಲ್ಲ. ಜನರು ಮತ್ತು ವಾಹನ ಚಾಲಕರ ಆಕ್ರೋಶ ಮಿತಿ ಮೀರಿದಾಗ ಮರುದಿನ ರಾತ್ರಿ ಮತ್ತೆ ಡಾಮರಿಕರಣ ನಡೆಸಿ ಅಗೆದ ರಸ್ತೆಯನ್ನು ಜೋಡಿಸಿ ಯೋಜನೆಯನ್ನು ತಡೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಇದಕ್ಕೆಲ್ಲ ಖರ್ಚು ಮಾಡಿದ ಹಣ ಯಾರದ್ದು?, ಜನಸಾಮಾನ್ಯರ ರಕ್ತ ಹೀರಿ ಜಿಎಸ್ ಟಿ ಹೆಸರಿನಲ್ಲಿ ಜನರಿಂದ ದೋಚಿದ ಹಣವನ್ನು ಪೋಲು ಮಾಡುತ್ತಿರುವುದು ಖಂಡನೀಯವಾಗಿದೆ.
ಕೆಲ ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಇದೇ ರೀತಿ ಯಾವುದೇ ಸಾಧಕ ಬಾದಕಗಳ ಬಗ್ಗೆ ಯೋಚಿಸದೆ ಯಾರೋ ಒಬ್ಬ ತಜ್ಞರ ಸಲಹೆ ಕೇಳಿ ರಾತ್ರೋರಾತ್ರಿ ನೋಟ್ ಬ್ಯಾನ್ ಮಾಡಿದರು. ಇದರಿಂದಾಗಿ ಬಡ ಜನರು ಹಣಕ್ಕಾಗಿ ಪರದಾಡಿ ರಸ್ತೆಯಲ್ಲಿ ಪ್ರಾಣ ಬಿಡುವ ಪರಿಸ್ಥಿತಿ ಉಂಟಾಯಿತು. ರಿಸರ್ವ್ ಬ್ಯಾಂಕ್ ಪ್ರಕಾರ ಶೇಕಡ 99 ರಷ್ಟು ಹಣ ಬ್ಯಾಂಕುಗಳಿಗೆ ಹಿಂದೆ ಬಂತು. , ಯಾವುದೇ ತಾಂತ್ರಿಕ ಯೋಚನೆ ಇಲ್ಲದೆ, ದೇಶದ ಬಡಜನರ ಬಾಳನ್ನು ಗೋಳು ಮಾಡಿದ, ಹಲವು ಬಡವರ ಜೀವನವನ್ನು ರಸ್ತೆಗೆ ಚೆಲ್ಲಿದ ಯೋಜನೆ ಇದು. ಅದನ್ನು ಹೊಗಳುವ ಜನರು ಇಂತಹ ಅವೈಜ್ಞಾನಿಕ ಕೆಲಸಗಳನ್ನು ಮಾಡುತ್ತಿದ್ದಾರೆ
ಕೆಲವು ತಿಂಗಳ ಹಿಂದೆ ಮಲ್ಪೆಯ ಸಮುದ್ರದಲ್ಲಿ ಫ್ಲೋಟಿಂಗ್ ಬ್ರಿಡ್ಜ್ ನ್ನು ಲಕ್ಷಗಟ್ಟಲೆ ಖರ್ಚು ಮಾಡಿ ನಿರ್ಮಿಸಿದರು. ಉದ್ಘಾಟನೆಗೊಂಡು ಎರಡು ದಿನಗಳಲ್ಲಿ ತೇಲುವ ಸೇತುವೆ ಅರಬ್ಬಿ ಸಮುದ್ರದಲ್ಲಿ ತೇಲಿ ಹೋಯಿತು. ಯಾರು ಕೊಟ್ಟ ಸಲಹೆ ಇದು? ಯಾವ ತಾಂತ್ರಿಕ ಸರ್ವೆಯನ್ನು ಮಾಡಿ ಮಾಡಿದ ಯೋಜನೆ ಇದು? ಬರೀ 40% ಕಮಿಷನ್ ಗೋಸ್ಕರ ಇಂತಹ ಅವೈಜ್ಞಾನಿಕ ಯೋಜನೆಗಳು ನಡೆಯುತ್ತವೆ. ಇದರಿಂದ ಜನರ ತೆರಿಗೆ ಹಣ ಪೋಲು ಮಾಡುವುದು ಬಿಟ್ಟರೆ ಬೇರೆ ಯಾವುದೇ ಉದ್ದೇಶವಿಲ್ಲ. ಸರ್ಕಾರದ ಖಜಾನೆಯಲ್ಲಿ ಹಣ ಇದೆ ಎಂದಾದರೆ ಬಡವರಿಗೆ ವಸತಿ ಮನೆಗಳನ್ನು ಕೊಡಬಹುದಲ್ಲವೇ ?ಬಸವ ವಸತಿ ಯೋಜನೆ ಅಂಬೇಡ್ಕರ್ ಯೋಜನೆ ಮೀನುಗಾರಿಕಾ ಮನೆಗಳು ಬಡವರಿಗೆ ಕೊಟ್ಟು ಒಂದು ಸೂರು ಕೊಡುವ ಬಗ್ಗೆ ನಿಮಗೆ ಚಿಂತೆ ಇಲ್ಲ . ಏಕೆಂದರೆ ಅದರಲ್ಲಿ 40% ತೆಗೆದುಕೊಳ್ಳಲು ಆಗುವುದಿಲ್ಲ
ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಇರುವ ಡಬ್ಬಲ್ ಇಂಜಿನ್ ಸರಕಾರ ಬರೀ ಇಂತಹದೇ ಲೂಟಿ ಹೊಡೆಯುವ ಕೆಲಸಗಳಲ್ಲಿ ತೊಡಗಿದೆ ಮತ್ತೆ ಇಂತಹ ಶಾಸಕರು ಹಾಗೂ ಸಂಸದರು ಅಧಿಕಾರಕ್ಕೆ ಬಂದರೆ ಬಡ ಜನರ ಗತಿ ಏನು ಎಂಬುದನ್ನು ಜನತೆ ಆಲೋಚಿಸಬೇಕಾಗಿದೆ. ಉಡುಪಿಯ ಸಂಸದರೇ ಹಾಗೂ ಶಾಸಕರೇ ನಮ್ಮ ಈ ಕೆಲವು ಪ್ರಶ್ನೆಗಳಿಗೆ ತಾವು ಉತ್ತರ ನೀಡಬೇಕಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.