Advertisement

ಸಚಿವ ಅಶ್ವಥ್ ‌ನಾರಾಯಣ್‌ರ ಹೇಳಿಕೆ ಕೇವಲ ಕ್ಷಮೆ ಯಾಚಿಸಿದಾಕ್ಷಣ ಬಿಟ್ಟು ಬಿಡುವ ಸಣ್ಣ ವಿಚಾರವೇ?

Advertisement

ಬರಹ: ನವೀನ್ ಸೂರಿಂಜೆ (ಲೇಖಕರು ಜನಪ್ರಿಯ ಪತ್ರಕರ್ತರು ಹಾಗೂ ಜನಪರ ಚಿಂತಕರು)

ಕಾಂಗ್ರೆಸ್ ನಂತಹ ಬುದ್ದಿಗೇಡಿ ಪಕ್ಷ ಇನ್ನೊಂದಿರಲಾರದೇನೋ ? ಸಿದ್ದರಾಮಯ್ಯರನ್ನು ಟಿಪ್ಪುವಿನಂತೆಯೇ ಮುಗಿಸಿಬಿಡಬೇಕು ಎಂದು ಅಶ್ವಥನಾರಾಯಣ ಹೇಳಿರುವುದನ್ನು ಕಾಂಗ್ರೆಸ್ ಇಂದು ಸದನದಲ್ಲಿ ಚರ್ಚೆಗೆ ಕೈಗೆತ್ತಿಕೊಂಡಿತ್ತು. ಚರ್ಚೆಯ ಮಧ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗರ ಮಧ್ಯೆ ವಾಗ್ಸಮರ ಏರ್ಪಟ್ಟಿತ್ತು.ಈ ಗದ್ದಲದ ಮಧ್ಯೆಯೇ ಅಶ್ವಥನಾರಾಯಣ ಅವರು ಸದನದಲ್ಲಿ ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದರು‌. ಗದ್ದಲದ ಕಾರಣದಿಂದ ಹದಿನೈದು ನಿಮಿಷ ಸದನವನ್ನು ಮುಂದೂಡಲಾಯಿತು. ನಂತರ ಸರ್ವ ಪಕ್ಷ ಸದಸ್ಯರ ಸಭೆ ಕರೆದು ಮತ್ತೆ ಸದನ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಗದ್ದಲಕ್ಕೆ ಪರಸ್ಪರ ಕ್ಷಮೆ ಕೇಳಿ ಸದನ ಪ್ರಾರಂಭಿಸಲಾಯಿತು. ದ್ವೇಷ ಭಾಷಣ, ಕೋಮುರಾಜಕಾರಣ, ಅಶ್ವಥನಾರಾಯಣ ಹೇಳಿಕೆ ಬಗ್ಗೆ ಚರ್ಚೆ ನಡೆಯಲೇ ಇಲ್ಲ. ಸದನ ಮತ್ತೆ ಆರಂಭಗೊಂಡಾಗ ಯು ಟಿ ಖಾದರ್ ಎದ್ದು ನಿಂತು "ಅಶ್ವಥನಾರಾಯಣ ಅವರು ಕ್ಷಮೆ ಕೇಳಬೇಕು" ಎಂದು ಆಗ್ರಹಿಸಿದರು. ಕ್ಷಮೆ ಕೇಳಾಗಿದೆಯಲ್ವಾ, ಮುಂದಿನ ವಿಷಯಕ್ಕೆ ಹೋಗೋಣಾ ಎಂದು ಸ್ಪೀಕರ್ ಹೇಳುತ್ತಿದ್ದಂತೆ ಕಾಂಗ್ರೆಸ್ಸಿಗರು ಮರು ಮಾತಾಡದೇ ಕುಳಿತುಬಿಟ್ಟರು.

ವಿಷಯ ಅಶ್ವಥನಾರಾಯಣ ಅವರು ಕ್ಷಮೆ ಕೇಳಿದಾಕ್ಷಣ ಬಿಟ್ಟು ಬಿಡುವಷ್ಟು ಸರಳವಾಗಿಲ್ಲ. ಅಶ್ವಥನಾರಾಯಣ ಹೇಳಿದ ತಕ್ಷಣ ವಿಪಕ್ಷ ನಾಯಕ ಸಿದ್ದರಾಮಯ್ಯರ ಕೊಲೆಯೂ ಆಗುವುದಿಲ್ಲ. ಕ್ಯಾಬಿನೆಟ್ ಮಿನಿಸ್ಟರ್ ಗಿಂತಲೂ ಹೆಚ್ಚು, ಮುಖ್ಯಮಂತ್ರಿಗಿಂತ ಸ್ವಲ್ಪ ಕಡಿಮೆ ಭದ್ರತೆಯನ್ನು ವಿಪಕ್ಷ ನಾಯಕರು ಹೊಂದಿರುತ್ತಾರೆ. ಅದಲ್ಲದೇ, ಬಿಜೆಪಿ ಪಕ್ಷದಲ್ಲಿ ಅಶ್ವಥನಾರಾಯಣರಿಗೆ ಎಷ್ಟು ಸ್ನೇಹಿತರಿದ್ದಾರೋ ಅದಕ್ಕಿಂತಲೂ ಹೆಚ್ಚು ಬಿಜೆಪಿಯೊಳಗೆ ಸಿದ್ದರಾಮಯ್ಯರ ಅಭಿಮಾನಿಗಳಿದ್ದಾರೆ. ಕಾಂಗ್ರೆಸ್ಸಿನಲ್ಲಾದರೂ ಸಿದ್ದರಾಮಯ್ಯ ವಿರೋಧಿಗಳಿರಬಹುದು, ಬಿಜೆಪಿಯ ಎಲ್ಲಾ ನಾಯಕರು ಸಿದ್ದರಾಮಯ್ಯರ ಅಭಿಮಾನಿಗಳೇ ಆಗಿದ್ದಾರೆ. ದ್ವೇಷ ರಾಜಕಾರಣಕ್ಕೆ ಸಿದ್ದರಾಮಯ್ಯರಂತವರು ಕೊಲೆಯಾಗಲ್ಲ. ಕೊಲೆ ಆಗೋದು ಗೌರಿ, ಕಲಬುರ್ಗಿಯಂತಹ ಹೋರಾಟಗಾರರು, ಜನಪರ ಚಿಂತಕರ ಪರಂಪರೆಯವರು ಮತ್ತು ಅಮಾಯಕ ದಲಿತ, ಮುಸ್ಲೀಮರೂ ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತರು. ಹಾಗಿರುವಾಗ ಅಶ್ವಥನಾರಾಯಣ ಹೇಳಿಕೆ ಕೇವಲ ಸಿದ್ದರಾಮಯ್ಯರ ಕ್ಷಮೆ ಕೇಳುವಷ್ಟು ಸರಳ ವಿಷಯವೇ ? ಮಾಜಿ ಮುಖ್ಯಮಂತ್ರಿ, ರಾಜ್ಯದ ಮಾಸ್ ಲೀಡರ್, ವಿಪಕ್ಷ ನಾಯಕರ ಕೊಲೆಗೇ ಪ್ರಚೋದಿಸಿ ದ್ವೇಷದ ಭಾಷಣ ಮಾಡುತ್ತಾರೆ ಎಂದರೆ ಈ ನೆಲದ ದಲಿತ, ಮುಸ್ಲೀಮ್, ಮಹಿಳೆಯರ ರಕ್ಷಣೆಯ ಕತೆ ಏನು ? ಅಶ್ವಥನಾರಾಯಣ್ ಹೇಳಿಕೆಯನ್ನು ಕೇವಲ ಸಿದ್ದರಾಮಯ್ಯರಿಗೆ ಸೀಮಿತಗೊಳಿಸದೇ ಈ ರಾಜ್ಯದಲ್ಲಿ ನಡೆಯುತ್ತಿರುವ ಮತೀಯ ರಾಜಕಾರಣದ ಬಗ್ಗೆ ಬೆಳಕು ಚೆಲ್ಲಿ ಸದನದ ಮೂಲಕ ಕಾರ್ಯಾಂಗ, ನ್ಯಾಯಾಂಗಕ್ಕೊಂದು ಸ್ಪಷ್ಟ ಸಂದೇಶ ರವಾನಿಸಬೇಕಿತ್ತಲ್ಲವೇ ? ದ್ವೇಷ ಭಾಷಣ, ಮತೀಯ ಸಂಘರ್ಷದ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡುವವರೆಗೆ ಚರ್ಚೆ ತೀವ್ರ ಸ್ವರೂಪ ಪಡೆಯಬೇಕಿತ್ತಲ್ಲವೇ ? ಅಶ್ವಥನಾರಾಯಣ ಅವರು ಸಿದ್ದರಾಮಯ್ಯರ ಬಳಿ ಕ್ಷಮೆ ಕೇಳಿದರೆ ಈ ರಾಜ್ಯದಲ್ಲಿ ಕೋಮುರಾಜಕಾರಣ, ದ್ವೇಷದ ಭಾಷಣ, ಕೊಲೆಗಳು ನಿಂತು ಬಿಡುತ್ತವೆಯೇ ?

ಈ ರೀತಿಯ ಮೃದು ಹಿಂದುತ್ವ, ಹೊಂದಾಣಿಕೆಯ ರಾಜಕಾರಣ, ವಿಷಯವನ್ನು ಗ್ರಹಿಸುವಲ್ಲಿನ ವಿಫಲತೆ, ಹೋರಾಟವಿಲ್ಲದ ರಾಜಕಾರಣದಿಂದಾಗಿಯೇ ಕಾಂಗ್ರೆಸ್ ಈ ಮಟ್ಟಕ್ಕೆ ಬಂದು ನಿಂತಿದೆ. ಇನ್ನೂ ಕಾಂಗ್ರೆಸ್ ಬುದ್ದಿ ಕಲಿತಿಲ್ಲ.

•ನವೀನ್ ಸೂರಿಂಜೆ

Advertisement
Advertisement
Recent Posts
Advertisement