Advertisement

ಬಿಜೆಪಿಗರ ಹಿಂದುತ್ವವು ಹಿಂಸೆಯನ್ನು ಪ್ರತಿಪಾದಿಸುತ್ತದೆಯೇ? : ಬಿಳಿಮಲೆ

Advertisement

ಬರಹ: ಪುರುಷೋತ್ತಮ ಬಿಳಿಮಲೆ (ಲೇಖಕರು ಜೆಎನ್‌ಯು ಮಾಜಿ ಪ್ರಾಧ್ಯಾಪಕರು, ಜನಪದ ವಿದ್ವಾಂಸರು ಮತ್ತು ಜನಪರ ಚಿಂತಕರು)

ಹಿಂಸೆಗೆ ಕರೆನೀಡುವವರನ್ನು ಕೂಡಲೇ ಬಂಧಿಸಿ ಜೈಲಿಗೆ ತಳ್ಳಿರಿ: ಕರ್ನಾಟಕದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ, ನಿನ್ನೆ ಬಿಜೆಪಿಯ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮತ್ತು ನಳಿನ್ ಕುಮಾರ್ ಕಟೀಲ್ ಅವರು ನೇರವಾಗಿ ಹಿಂಸೆಗೆ ಕರೆ ನೀಡಿದ್ದಾರೆ. ಕಟೀಲ್‌ ಹೇಳಿಕೆಯ ಬಗ್ಗೆ ರಾಷ್ಟ್ರೀಯ ಚಾನೆಲ್‌ ಗಳಲ್ಲಿ ತೀವ್ರವಾದ ಆಕ್ರೋಶವೂ ವ್ಯಕ್ತವಾಗಿದೆ.

‘ಟಿಪ್ಪುವನ್ನು ಪ್ರೀತಿಸುವವರು ಉಳಿಯಬಾರದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೊಪ್ಪಳದಲ್ಲಿ ಹೇಳಿದ್ದರೆ, ‘ಟಿಪ್ಪುವನ್ನು ಮೇಲಕ್ಕೆ ಕಳುಹಿಸಿದಂತೆ ಸಿದ್ದರಾಮಯ್ಯ ಅವರನ್ನೂ ಕಳುಹಿಸಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಾತನೂರಲ್ಲಿ ಹೇಳಿದ್ದಾರೆ. ಇವರಿಬ್ಬರ ಭಾಷಣದಿಂದ ಪ್ರೇರಿತನಾದ ಯಾರೋ ಒಬ್ಬನು ನೇರವಾಗಿ ಹಿಂಸೆಗೆ ಇಳಿದರೂ ಇಳಿಯಬಹುದು. ಗೌರಿ ಮತ್ತು ಕಲಬುರ್ಗಿ ಕೊಲೆ ಪ್ರಕರಣದಲ್ಲಿ ನಾವಿದನ್ನು ಕಂಡಿದ್ದೇವೆ.
ಇಂಥ ಹೇಳಿಕೆಯನ್ನು ಬಿಜೆಪಿಯೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಖಂಡಿಸದೇ ಹೋದರೆ ಕರ್ನಾಟಕದ ಚುನಾವಣಾ ಸಂದರ್ಭದಲ್ಲಿ ರಕ್ತದ ಹೊಳೆಯೇ ಹರಿಯಬಹುದು. ಚುನಾವಣೆಯೇ ನಡೆಯದಿರಬಹುದು. ಕಾರಣ, ಹಿಂಸೆಗೆ ಪ್ರಚೋದನೆ ನೀಡುವವರನ್ನು ಕೂಡಲೇ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (UAPA) ಅಡಿ ಬಂಧಿಸಿ ಜೈಲಿಗೆ ತಳ್ಳಬೇಕು.
ಸರ್ವಜನಾಂಗದ ಶಾಂತಿಯ ತೋಟಕ್ಕೆ ಭಂಗಬರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದು.

ಬಿಜೆಪಿ ಮತ್ತು ಹಿಂಸೆ:

ಈ ಬಿಜೆಪಿಯವರಿಗೆ ಹಿಂಸೆ ಎಂದರೆ ಯಾಕಿಷ್ಟು ಪ್ರೀತಿಯೋ ಕಾಣೆ. ಅವರು ನಂಬುವ ಹಿಂದುತ್ವವು ಹಿಂಸೆಯನ್ನು ಪ್ರತಿಪಾದಿಸುತ್ತದೋ ತಿಳಿದವರು ಹೇಳಬೇಕು. ಕ್ಷಾತ್ರ ತೇಜಸ್ಸು ಎಂದರೆ ನಮ್ಮವರನ್ನೇ ಕೊಲ್ಲುವುದಾ? ಇವರ ಮಾತುಗಳನ್ನು ಕೇಳಿದರೆ ಮೂಲದಲ್ಲಿಯೇ ಏನೋ ದೋಷ ಇದ್ದಂತಿದೆ. ಇದನ್ನು ಗಮನಿಸಿಯೇ ಯಾರೋ ʼ ಎಲ್ಲರೂ ಸುಖವಾಗಿರಲಿ ( ಸರ್ವೇ ಜನಾಃ ಸುಖಿನೋ ಭವಂತು ) ಎಂದು ಹಾರೈಸಿರಬೇಕು.
ನಮ್ಮಲ್ಲಿ ಹಿಂಸೆಯೇ ಮೂಲಪದ. ಅಹಿಂಸೆ ಸಾಧಿತ ಪದ, ಅದನ್ನು ಕಷ್ಟಪಟ್ಟು ಸಾಧಿಸಿಕೊಳ್ಳಬೇಕು. ಅದಕ್ಕೆ ಸಾಕಷ್ಟು ತಯಾರಿಯೂ ಬೇಕು, ಧೈರ್ಯವೂ ಬೇಕು. ಚಿಂತನೆ, ಮಾತು, ನಡತೆ, ಯೋಚನೆಗಳಲ್ಲಿ ಅದು ಪ್ರತಿಫಲಿತವಾಗಬೇಕು. ತ್ಯಾಗ, ಕರುಣೆ, ಪ್ರೀತಿ, ಕ್ಷಮೆ ಅದರ ಗುಣಗಳು. ಆದರೆ, ಮಾನವನು ಮೂಲತಃ ಹಿಂಸಾ ಮನೋವೃತ್ತಿಯುಳ್ಳವನು. ಆದ್ದರಿಂದ ಹಿಂಸೆ ಮಾಡುವುದು ಅವನಿಗೆ ಸುಲಭ, ಅದು ಅವನ ಸಹಜ ಗುಣ. ʼ ಈ ಅಹಿಂಸೆ ಎಂಬುದು ನಮ್ಮಲ್ಲಿ ಇರಲಿಲ್ಲ, ನಾನದನ್ನು ತರುತ್ತಿದ್ದೇನೆʼ ಎಂದು ಒಮ್ಮೆ ಗಾಂಧಿ ನಗುತ್ತಾ ಹೇಳಿದ್ದರಂತೆ. ಗಾಂಧಿಯನ್ನು ಓದಿದವರಿಗೆ ಅಹಿಂಸಾ ಪದದ ಅರ್ಥವ್ಯಾಪ್ತಿ ಚೆನ್ನಾಗಿ ತಿಳಿದಿರುತ್ತದೆ. ಅವರದನ್ನು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಿಸ್ತಾರದಲ್ಲಿ ಗ್ರಹಿಸಿದರು. ಗಾಂಧಿಯನ್ನು ಕೊಂದವರಿಗೂ ‘ಅಹಿಂಸೆ’ ಪದದ ಅರ್ಥ ತಿಳಿದಿತ್ತು. ಹಾಗಾಗಿಯೇ ಅವರು ಅಹಿಂಸೆಗಿಂತ ಹಿಂಸೆಯೇ ಮೇಲೆಂದು ಭಾವಿಸಿ ಗಾಂಧಿಯನ್ನು ಕೊಂದರು. ಓಶೋ ಗಾಂಧಿಯ ಅಹಿಂಸೆ ಕೂಡಾ ಒಂದು ಬಗೆಯ ಹಿಂಸೆಯೆಂದೇ ವಾದಿಸಿದ. ಏನಿದ್ದರೂ ಅಹಿಂಸಾವಾದಿಗಳ ಕೈಯಲ್ಲಿ ಆಯುಧಗಳಿರುವುದಿಲ್ಲ. ಯೇಸುವಿನ ಕಣ್ಣಲ್ಲಿ ಕರುಣೆಯಿತ್ತು. ಬುದ್ಧನ ಮುಖದಲ್ಲಿ ಮುಗುಳ್ನಗೆಯಿತ್ತು, ಮಹಾವೀರನ ಮಾತುಗಳಲ್ಲಿ ಅಹಿಂಸೆಯಿತ್ತು, ಬಸವನ ವಚನಗಳಲ್ಲಿ ದಯೆಯಿತ್ತು.
ಈಚಿನ ದಿನಗಳಲ್ಲಿ ಮಾನವನ ಮೂಲಭೂತ ಗುಣವಾದ ಹಿಂಸೆಯೇ ವಿಜೃಂಭಿಸಿ, ಅಹಿಂಸೆ ಹಿಂದಕ್ಕೆ ಸರಿಯುತ್ತಿದೆ. ಮತ್ತೆ ಹಿಂಸೆ ಎಂದರೆ ಯುದ್ಧ ಅಥವಾ ಕೊಲೆಯೇ ಆಗಬೇಕೆಂದೇನೂ ಇಲ್ಲ. ಆಧುನಿಕ ಸಮಾಜವು ಬಗೆ ಬಗೆಯ ಹಿಂಸಾ ರೂಪಗಳನ್ನು ಬೆಳೆಸಿಕೊಂಡಿದೆ. ಇನ್ನೊಬ್ಬರ ಬಗ್ಗೆ ಅತ್ಯಂತ ಕನಿಷ್ಠವಾಗಿ ಮಾತಾಡುವುದು, ಬರೆಯುವುದು, ಚಾರಿತ್ರ್ಯ ಹರಣ ಮಾಡುವುದು- ಇವೆಲ್ಲವೂ ಹಿಂಸೆಯ ಬೇರೆ ಬೇರೆ ರೂಪಗಳೇ ಹೌದು. ಹಿಂಸಾ ಮನೋವೃತ್ತಿಗೆ ಮಾಂಸಾಹಾರವೇ ಕಾರಣವೆಂದು ಹೇಳುವ ಸಸ್ಯಾಹಾರಿಗಳು ಆ ಮೂಲಕವೇ ಮಾಂಸಾಹಾರಿಗಳಿಗೆ ಚಿತ್ರ ಹಿಂಸೆ ನೀಡುತ್ತಾರೆ. ಹಿಂದೂ ಸಮಾಜವು ಇಂಥ ಅನೇಕ ಹಿಂಸಾ ರೂಪಗಳನ್ನು ಅತ್ಯಂತ ಜಾಣ್ಮೆಯಿಂದ ಮೈಗೂಡಿಸಿಕೊಂಡು, ಅದಕ್ಕೆ ಶಾಸ್ತ್ರದ ಹೊದಿಕೆ ತೊಡಿಸಿ ಜತನದಿಂದ ಕಾಪಾಡಿಕೊಂಡು ಬಂದಿದೆ. ಪ್ರಜಾಪ್ರಭುತ್ವದ ಈ ಕಾಲದಲ್ಲಿ ನಾವು ಹಿಂಸೆಯ ಬಗ್ಗೆ ಮತ್ತೆ ಮತ್ತೆ ಮಾತಾಡುತ್ತಿದ್ದೇವೆ ಎಂದರೆ ನಾಗರಿಕತೆ ಆಂತರಿಕವಾಗಿ ಕುಸಿದಿದೆ ಎಂದೇ ಅರ್ಥ. ಇದಕ್ಕೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಪತ್ರಿಕೋದ್ಯಮಿಗಳು, ರಾಜಕಾರಣಿಗಳು, ಅಂಕಣಕಾರರು, ಪ್ರಾಧ್ಯಾಪಕರು, ವಕೀಲರು, ಟ್ರೋಲ್ ಪಡೆಗಳು -ಹೀಗೆ ಹಲವರು ಕಾರಣ.

ಬೆಂಕಿ ಹಚ್ಚುವ ಕೆಲಸ ಸುಲಭ, ಅದನ್ನು ಆರಿಸುವುದು ಕಷ್ಟ.

ಉರಿಗೌಡ, ನಂಜೇಗೌಡ ಮತ್ತು ಟಿಪ್ಪೂ ಸುಲ್ತಾನ್‌:

ಕರ್ನಾಟಕದ ಒಕ್ಕಲಿಗರ ಮನ ಗೆದ್ದರೆ ಬಿಜೆಪಿಗೆ ವಿಧಾನ ಸಭೆಯಲ್ಲಿ ನಿಚ್ಚಳ ಬಹುಮತ ದೊರಕುವುದು ಬಹಳ ಸುಲಭ. ಇದಕ್ಕಾಗಿ ಹಿಂದೆ, ಯಡಿಯೂರಪ್ಪ, ಜಗದೀಶ ಶೆಟ್ಟರ್, ಆರ್. ಅಶೋಕ್ ಮುಂತಾದವರು ಒಕ್ಕಲಿಗರಿಗೆ ಆಪ್ತನಾಗಿದ್ದ ಟಿಪ್ಪುವಿನ ಟೊಪ್ಪಿ ಧರಿಸಿ, ಕತ್ತಿ ಹಿಡಿದರು.

ಆದರೆ ಒಕ್ಕಲಿಗರು ಈ ಯಾವ ನಾಟಕಕ್ಕೂ ಮರುಳಾಗಲಿಲ್ಲ. ಕಾರಣ ಇದೀಗ ಉರಿಗೌಡ, ನಂಜೇ ಗೌಡರ ಕತೆಯನ್ನು ಹರಿಯಬಿಡಲಾಗಿದೆ. ಮುಸ್ಲಿಂ ದ್ವೇಷಕ್ಕೆ ಪೂರಕವಾದ ಈ ಕಲ್ಪಿತ ಕತೆಗೆ ಒಕ್ಕಲಿಗರು ಬಲಿಯಾದರೆ ಆ ಇಡೀ ಸಮುದಾಯ ನೂರು ವರ್ಷಗಳಷ್ಟು ಹಿಂದಕ್ಕೆ ಸರಿಯುವುದರಲ್ಲಿ ಯಾವ ಅನುಮಾನವೂ ಬೇಡ.
ಟಿಪ್ಪುವಿನ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಹೆಚ್ಚು ಪ್ರಯೋಜನ ಪಡೆದವರು ಒಕ್ಕಲಿಗರು. ಅದು ರೇಶ್ಮೆ ಉದ್ಯಮ, ನೀರಿನ ಒದಗಣೆ, ಮಾರುಕಟ್ಟೆ ಸ್ಥಾಪನೆ , ರಸ್ತೆಗಳ ನಿರ್ಮಾಣ, ಕೃಷಿಗೆ ಸಾಲ ನೀಡಿಕೆ, ಕಬ್ಬು ಬೆಳೆಗೆ ಪ್ರೋತ್ಸಾಹ, ತೆಂಗು, ವೀಳ್ಯದೆಲೆ ಮತ್ತು ಮಾವಿನ ಕೃಷಿಗೆ ಅಪಾರ ಬೆಂಬಲ, ಕೆರೆಗಳ ನಿರ್ಮಾಣ ಇತ್ಯಾದಿಗಳಿಗೆ ಸಂಬಂಧಿಸಿದೆ. ʼಕೃಷಿಕರು ನಾಡು ಕಟ್ಟುವ ಸೈನಿಕರುʼ ಎಂದು ಹೇಳುತ್ತಿದ್ದ ಟಿಪ್ಪೂವನ್ನು ದ್ವೇಷಿಸಲು ಒಕ್ಕಲಿಗರಿಗೆ ಕಾರಣಗಳೇ ಇಲ್ಲ. ರೈತರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳನ್ನ ಟಿಪ್ಪೂ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದ. ಟಿಪ್ಪೂವಿನ ಸೈನ್ಯದಲ್ಲಿ ಒಕ್ಕಲಿಗರು ದೊಡ್ಡ ಸಂಖ್ಯೆಯಲ್ಲಿ ಇದ್ದರು.
ಹಳೆ ಮೈಸೂರು ಪ್ರದೇಶದಲ್ಲಿ ಒಕ್ಕಲಿಗರು ಕೃಷಿ ಮಾಡುತ್ತಾರೆ. ಕೃಷಿ ಉತ್ಪನ್ನಗಳನ್ನು ಮುಸ್ಲಿಮ್‌ ವ್ಯಾಪಾರಿಗಳಿಗೆ ಮಾರುತ್ತಾರೆ. ಈ ಸಂಬಂಧಗಳನ್ನು ಮುರಿದರೆ, ಒಕ್ಕಲಿಗರ ಆರ್ಥಿಕತೆಯೇ ಕುಸಿಯುತ್ತದೆ. ಟಿಪ್ಪೂವಿನ ಆನಂತರ ಮೈಸೂರು ಪ್ರಾಂತ್ಯವನ್ನಾಳಿದ ಒಡೆಯರುಗಳು, ಅದರಲ್ಲೂ ಮುಖ್ಯವಾಗಿ ನಾಲ್ವಡಿಯವರು ಒಕ್ಕಲಿಗರ ಮತ್ತು ಮುಸ್ಲಿಮರ ಸೌಹಾರ್ದತೆಯನ್ನು ಹೆಚ್ಚಿಸಿದ್ದರಿಂದಾಗಿಯೇ ಅವರಿಗೆ ʼಮಾದರಿ ಮೈಸೂರನ್ನುʼ ಕಟ್ಟಲು ಸಾಧ್ಯವಾಯಿತು. ಒಕ್ಕಲಿಗರೇ ಹೆಚ್ಚಿರುವ ಸುಳ್ಯ ಪರಿಸರದಲ್ಲಿ ಗೌಡರು ಬೆಳೆವ ಅಡಿಕೆಗೆ ಹೆಚ್ಚು ಬೆಲೆ ನೀಡಿ ಖರೀದಿಸುವರು ಮುಸ್ಲಿಮರು.
ಹಳೇ ಮೈಸೂರು ಭಾಗದಿಂದ ಒಕ್ಕಲಿಗರು ( ಮುಖ್ಯವಾಗಿ ಗಂಗಡಿಕಾರರು) ಹಾಸನದ ಕೆಂಚಮ್ಮನ ಹೊಸಕೋಟೆ, ಐಗೂರು, ಒಣಗೂರುಗಳತ್ತ ವಲಸೆ ಹೋಗಿ, ಅಲ್ಲಿಂದ ಸುಳ್ಯ ಪರಿಸರದತ್ತ ಚಲಿಸಿ , ಕುಮಾರಧಾರ ನದಿ ದಂಡೆಗಳಲ್ಲಿ ನೆಲೆಸಿದರು. ಈ ಒಕ್ಕಲಿಗರು, ಟಿಪ್ಪು ಸತ್ತ ಕೇವಲ ೩೦ ವರ್ಷಗಳ ಆನಂತರ ಬ್ರಿಟಿಷರ ವಿರುದ್ಧ ಅತಿ ಮಹತ್ವದ ಹೋರಾಟವನ್ನು ಸಂಘಟಿಸಿದ್ದರು. ನಾಲ್ಕು ವರ್ಷಗಳ ಕಾಲ ನಡೆದ ( ೧೮೩೨-೧೮೩೬) ಈ ಹೋರಾಟದಲ್ಲಿ ಗೌಡರು ಮತ್ತು ಮುಸ್ಲಿಮರು ಜೊತೆಯಾಗಿಯೇ ಇದ್ದು ಕೆಲದಿನಗಳ ಮಟ್ಟಿಗಾದರೂ ಬ್ರಿಟಿಷರನ್ನು ಮಂಗಳೂರು ಪ್ರಾಂತ್ಯದಿಂದ ಹೊರದಬ್ಬುವಲ್ಲಿ ಯಶಸ್ವಿಯಾಗಿದ್ದರು.
ಒಕ್ಕಲಿಗರು ಕೋಮುವಾದಿಗಳಾದರೆ ಅವರ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುತ್ತದೆ ಎಂಬುದು ಒಂದು ವಿಷಯವಾದರೆ, ಅವರು ಬ್ರಿಟಿಷರ ವಿರುದ್ಧ ನಿರ್ಣಾಯಕವಾಗಿ ಹೋರಾಡಿದ್ದರು ಎಂಬುದು ಎರಡನೇ ಅಂಶ.
ಒಕ್ಕಲಿಗರು ಬ್ರಿಟಿಷರ ಪರವಾಗಿದ್ದು ಟಿಪ್ಪೂವಿಗೆ ವಿರುದ್ಧವಾಗಿದ್ದರು ಎಂಬುದನ್ನು ನಂಬಲು ಯಾವುದೇ ಆಧಾರಗಳಿಲ್ಲ. ಕಲ್ಪಿತ ಕತೆಗಳಿಗೆ ಒಂದು ಸಮುದಾಯವನ್ನು ನಾಶಮಾಡಲೂ ಸಾಧ್ಯವಿಲ್ಲ.

Advertisement
Advertisement
Recent Posts
Advertisement