ಸಂಘಿಗಳ ಉರಿನಂಜುಗಳು ಮತ್ತು ಸಿಟಿಜನ್ ಟಿಪ್ಪು ಸುಲ್ತಾನರು!
ಬರಹ- ಶಿವಸುಂದರ್
ಒಂದು ಪ್ರಜಾತಂತ್ರದಲ್ಲಿ ಜನರು ಸರ್ಕಾರವನ್ನು ಆಯ್ಕೆ ಮಾಡುತ್ತಾರೆ. ಹಾಗೆ ಆಯ್ಕೆಯಾದ ಸರ್ಕಾರವು ಜನರ ಮತ್ತು ಇತಿಹಾಸದ ವಿಶ್ವಾಸವನ್ನು ಪಡೆದುಕೊಳ್ಳಬೇಕು.
ಆದರೆ, ಹಿಟ್ಲರನ ಕಾಲದಲ್ಲಿ ಬ್ರೆಕ್ಟ್ ಹೇಳಿದ್ದನ್ನೇ ಸ್ವಲ್ಪ ತಿದ್ದಿ ಹೇಳುವುದಾದರೆ:
ಈ ಫ಼್ಯಾಸಿಸ್ಟ್ ಕಾಲದಲ್ಲಿ ಜನತೆ ಮತ್ತು ಇತಿಹಾಸ ಸರ್ಕಾರದ ವಿಶ್ವಾಸ ಕಳೆದುಕೊಂಡಿರುವುದರಿಂದ ಮೋದಿ ಸರ್ಕಾರವೇ ಈಗ ಸರಿಯಾದ ಜನರನ್ನು ಚುನಾಯಿಸುತ್ತಿದೆ ಹಾಗೂ ಸರಿಯಾದ ಇತಿಹಾಸ ವನ್ನು ಆಯ್ಕೆ ಮಾಡುತ್ತಿದೆ!
ಇತ್ತೀಚೆಗೆ ಮಂತ್ರಿ ಅಶ್ವತ್ಥ ನಾರಾಯಣ ಮತ್ತು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲರು ಈ ದೇಶದಲ್ಲಿ ಹನುಮಾನ್ ಭಕ್ತರು ಮಾತ್ರ ಇರಬೇಕು , ಟಿಪ್ಪು ಅನುಯಾಯಿಗಳನು ದೇಶ ಬಿಟ್ಟು ತೊಲಗಬೇಕೆಂದೂ, ಟಿಪ್ಪುವನ್ನು ಮೇಲೆ ಕಳಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಮೇಲಕ್ಕೆ ಕಳಿಸಬೇಕು ಎಂದು ಕರೆ ನೀಡಿರುವುದು ಸರ್ಕಾರವೇ ತನಗೇ ಬೇಕಾದ ಜನರನ್ನು ಆಯ್ಕೆ ಮಾಡಿಕೊಳ್ಳುವ, ತನಗೇ ಸೂಕ್ತವಾದ ಇತಿಹಾಸ ಕಟ್ಟುವ ಫ಼್ಯಾಸಿಸ್ಟ್ ಪ್ರಕ್ರಿಯೆಯ ಭಾಗವೇ ಆಗಿದೆ.
ಟಿಪ್ಪು ಮೇಲಿನ ದಾಳಿಗಳು ಹಳೇ ಮೈಸೂರು ಪ್ರಾಂತ್ರ್ಯದಲ್ಲಿ ಮುಸ್ಲಿಂ ದ್ವೇಷದ ಆಧಾರದಲ್ಲಿ ಹಿಂದೂ ಓಟುಗಳನ್ನು ಧ್ರುವೀಕರಿಸುವ ಭಾಗ ಎನ್ನುವುದು ಸುಸ್ಪಷ್ಟ. ಏಕೆಂದರೆ ಮೈಸೂರು ಪ್ರಾಂತ್ಯವು ಬಿಜೆಪಿಗೆ ದಕ್ಕದಿರುವುದಕ್ಕೆ ಟಿಪ್ಪು-ಹೈದರ್ ಗಳು ಜಾರಿ ಮಾಡಿದ ಸಾಮಾಜಿಕ-ಆರ್ಥಿಕ ನೀತಿಗಳಿಂದ ರೂಪುಗೊಂಡ ಹಿಂದೂ-ಮುಸ್ಲಿಂ ಐಕ್ಯತೆ ಹಾಗೂ ಕೃಷಿ ಆಧಾರಿತ ಹಾಗೂ ದಲಿತ ಜಾತಿಗಳ ಏಳಿಗೆಯ ಇತಿಹಾಸವೂ ಕಾರಣ.
ಹೀಗಾಗಿ ಇಲ್ಲಿ ಟಿಪ್ಪುವನ್ನು ವಿಲನ್ ಮಾಡದೆ ಈ ಐಕ್ಯತೆಯನ್ನು ಮುರಿಯಲು ಸಾಧ್ಯವಿಲ್ಲ. ಹಾಗೆಯೇ ಕೃಷಿಯಾಧಾರಿತ ಗ್ರಾಮ ಸಮುದಾಯದ ಬದುಕಿನ ಮಗ್ಗಲು ಮುರಿಯುತ್ತಿದ್ದ ವಸಾಹತು ಶಾಹಿ ಮತ್ತು ಬ್ರಾಹ್ಮಣಶಾಹಿ ಗಳ ವಿರುದ್ಧ ಟಿಪ್ಪು ನಡೆಸಿದ ಸೈನಿಕ-ರಾಜಕೀಯ- ಸಾಮಾಜಿಕ ಸಮರವನ್ನು ಕಡೆಗಣಿಸದೆ ಅಥವಾ ಅದರ ಬಗ್ಗೆಯು ಸುಳ್ಳುಪೊಳ್ಳುಗಳಿಂದ ಕೂಡಿದ ಅಪಪ್ರಚಾರ ಮಾಡದೆ ಬಿಜೆಪಿಗೆ ಈ ಚುನಾವಣೆಯಲ್ಲಿ ಅಮಿತ್ ಶಾ ನೀಡಿರುವ ಗುರಿಗಳನ್ನು ಈಡೇರಿಸಲು ಸಾಧ್ಯವಿಲ್ಲ. ಈ ಚುನಾವಣಾ ಸಮರಕ್ಕಾಗಿಯೇ ಬಿಜೆಪಿ ಯು ಕಳೆದ ಒಂದು ವರ್ಷದಲ್ಲಿ ಕಷ್ಟಪಟ್ಟು ಇಬ್ಬರು ಹುಸಿ ಸೈನಿಕರನ್ನು ಸೃಷ್ಟಿಸಿದೆ.
"ಅವರೇ ಈ ಉರಿಗೌಡ ಮತ್ತು ನಂಜೇಗೌಡ."
ಇವರಿಬ್ಬರು ಈ ದೇಶದ ದುಡಿಯುವ ಜನರ ಬಗ್ಗೆ ಸಂಘಪರಿವಾರಕ್ಕೆ ಇರುವ ಬ್ರಾಹ್ಮಣ್ಯದ ಉರಿ ಮತ್ತು ದ್ವೇಷದ ನಂಜಿನ ಪ್ರತೀಕ ಎಂಬುದು ಅವರ ಬಗ್ಗೆ ಸಂಘಿಗಳು ಬಿತ್ತುತ್ತಿರುವ ಕಥನಗಳೇ ಸ್ಪಷ್ಟವಾಗಿ ಹೇಳುತ್ತವೆ.
ಸಂಘಿಗಳ ಈ ನಂಜಿನ ಕಥನದ ಪ್ರಕಾರ 1799ರ ಮೇ 4 ರಂದು ಟಿಪ್ಪುವನ್ನು ಕೊಂದದ್ದು ಬ್ರಿಟಿಷ್ ಸೈನಿಕರಲ್ಲ. ಬದಲಿಗೆ ಈ ನಂಜೇಗೌಡ ಮತ್ತು ಉರಿಗೌಡ ಎಂಬ ಇಬ್ಬರು ಒಕ್ಕಲಿಗ ಯೋಧರು. ಟಿಪ್ಪು ಮುಸ್ಲೀಮ್ ಮತಾಂಧ ರಾಜನಾಗಿ ಹಿಂದೂಗಳ ಮೇಲೆ ನಡೆಸುತ್ತಿದ್ದ ಅತ್ಯಾಚಾರಗಳನ್ನು ಕಂಡು ಕುದಿಯುತ್ತಿದ್ದ ಈ ಇಬ್ಬರು ಒಕ್ಕಲಿಗ ಯೋಧರು ಟಿಪ್ಪುವನ್ನು ಕೊಂದು ಸಕಲ ಹಿಂದೂಗಳ ಪರವಾಗಿ ಸೇಡು ತೀರಿಸಿಕೊಂಡರು ಎಂಬುದು ಸಂಘಿಗಳ ಕಥನ.
ಈ ಸುಳ್ಳು ಕಥನದ ಮೂಲಕ ಸಂಘಿಗಳು ಟಿಪ್ಪುವನ್ನು ಇತಿಹಾಸದಲ್ಲಿ ಮತಾಂಧನನ್ನಾಗಿ ಚಿತ್ರಿಸುವ ಉದ್ದೇಶವನ್ನು ಹೊಂದಿದ್ದಾರೆ. ಅದರ ಜೊತೆಗೆ ಟಿಪ್ಪು ತಾನು ತಂದ ಸುಧಾರಣೆಗಳ ಮೂಲಕ ಬ್ರಾಹ್ಮಣಶಾಹಿ ಸಾಮಾಜಿಕ- ಆಡಳಿತಾತ್ಮಕ ಹಿಡಿತದಲ್ಲಿ ನಲಗುತ್ತಿದ್ದ ಸಕಲ ಕೃಷಿ ಸಮುದಾಯವನ್ನು ಬಿಡುಗಡೆ ಮಾಡಿ ದಲಿತ- ಶೂದ್ರ ಜಾತಿಗಳ ಅಭಿಮಾನದ ಬೆಂಬಲವನ್ನು ಪಡೆದುಕೊಂಡದ್ದನ್ನೂ ನಿರಾಕರಿಸುವ ದುಷ್ಟ ಬ್ರಾಹ್ಮಣೀಯ ಸಂಚನ್ನು ಮಾಡುತ್ತಿದೆ.
ಹಾಗೆ ನೋಡಿದರೆ ಟಿಪ್ಪು-ಹೈದರ್ ತಂದ ರಾಜಕೀಯ ಹಾಗೂ ಸಾಮಾಜಿಕ ಸುಧಾರಣೆಗಳು, ಆ ನಂತರ ನಾಲ್ಮಡಿ ಒಡೆಯರ ಮುಂದುವರೆಸಿದ ಸಾಮಾಜಿಕ ನ್ಯಾಯದ ಸುಧಾರಣೆಗಳೇ ಇಡೀ ಮೈಸೂರು ಪ್ರಾಂತ್ಯವನ್ನು ಈವರೆಗೆ ದೇಶದ ಹಲವಾರು ಭಾಗಗಳಿಗಿಂತ ಸಾಮಾಜಿಕ- ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿ ಶೀಲವನ್ನಾಗಿಸಿದೆ. ಹೀಗಾಗಿ ಟಿಪ್ಪು ಕನ್ನಡಿಗರೆಲ್ಲರ ಹೆಮ್ಮೆ. ಅಂಥಾ ಹೆಮ್ಮೆಯನ್ನು ದುರುಳೀಕರಿಸುವ ಮೂಲಕ ಸಂಘಿಗಳು ಇಡೀ ಕನ್ನಡಿಗರಿಗೆ, ಕರ್ನಾಟಕಕ್ಕೆ ಮತ್ತು ದೇಶಕ್ಕೆ ಅಪಮಾನವೆಸಗುತ್ತಿವೆ.
"ಟಿಪ್ಪುವಿನ ದುರುಳೀಕರಣ- ಸ್ವಾತಂತ್ರ್ಯ ಸಮರದ ದುರುಳೀಕರಣ"
ಏಕೆಂದರೆ ಟಿಪ್ಪುವಿನ ಬ್ರಿಟಿಷ್ ವಿರೋಧಿ ಸಮರ ಸುಭಾಶ್ ಚಂದ್ರ ಬೋಸರ ಆಜಾದ್ ಹಿಂದ್ ಫ಼ೌಜಿಗೂ ಸ್ಪೂರ್ತಿ ನೀಡಿತ್ತು. ಆಜಾದ್ ಹಿಂದ್ ಫ಼ೌಜಿನ ಬಾವುಟದಲ್ಲಿ ಇದ್ದದ್ದು ಟಿಪ್ಪುವಿನ ಹುಲಿ. ಸುಭಾಶರು ತಮ್ಮ ಸ್ವಾತಂತ್ರ್ಯ ಹೋರಾಟವನ್ನು ಟಿಪ್ಪು ಶುರು ಮಾಡಿದ ಹೋರಾಟದ ಮುಂದುವರೆಕೆಯೆಂದೇ ಭಾವಿಸಿದ್ದರು. ಟಿಪ್ಪುವಿನ ಸಮರ ಭಾರತದಾದ್ಯಂತ ನಡೆದ ಸ್ವಾತಂತ್ರ್ಯ ಹೋರಾಟಕ್ಕೂ ಸ್ಪೂರ್ತಿ ನೀಡಿತ್ತು. ಆದ್ದರಿಂದಲೇ ಭಾರತದ ಸಂವಿಧಾನದ ಕರಡಿನಲ್ಲಿ ಭಾರತದ ಚರಿತ್ರೆಯ ಹೆಮ್ಮೆಯ ಗುರುತಾಗಿ ಬಳಸಲಾದ ಹಲವಾರು ಚಿತ್ರಗಳಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನರ ಚಿತ್ರವೂ ಇದೆ.
ಆದ್ದರಿಂದ ಟಿಪ್ಪುವನ್ನು ದುರುಳೀಕರಿಸುವ ಸಂಘಿಗಳ ಈ ಸಂಚು ದೇಶದ್ರೋಹವೂ ಅಗಿದೆ. ಆ ನಾಡದ್ರೋಹ ಹಾಗೂ ಜನದ್ರೋಹದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರಮುಖವಾಗಿ ಅರ್ಥಮಾಡಿಕೊಳ್ಳ ಬೇಕಿರುವುದು ಟಿಪ್ಪುವಿನ ಕೃಷಿ ನೀತಿಗಳು ಮತ್ತು ಅದು ಒಕ್ಕಲು ಸಮುದಾಯಕ್ಕೆ ಪಾಳೆಗಾರರಿಂದ ಮತ್ತು ಬ್ರಾಹ್ಮಣಶಾಹಿ ಆಡಳಿತ ವ್ಯವಸ್ಥೆಯಿಂದ ತಂದುಕೊಟ್ಟ ವಿಮೋಚನೆಯನ್ನು . ಆಗ ಮಾತ್ರ ಸಂಘಿಗಳು ವಿರೋಧಿಸುತ್ತಿರುವುದು ಏನನ್ನು ಎಂಬುದು ಇನ್ನಷ್ಟು ಸ್ಪಷ್ಟವಾಗುತ್ತದೆ.
ಅದೇ ರೀತಿ ಟಿಪ್ಪುವಿನ ಸಾಮ್ರಾಜ್ಯದ ಅವಸಾನವಾದರೆ ಹಳೆಯ ಊಳಿಗಮಾನ್ಯ ವ್ಯವಸ್ಥೆಯ ಶೋಷಣೆಗೆ ಗುರಿಯಾಗಬೇಕಾದೀತೆಂಬ ಎಚ್ಚರದಿಂದ ಎಲ್ಲಾ ಒಕ್ಕಲು ಸಮುದಾಯಗಳು ಟಿಪ್ಪುವಿನ ಬ್ರಿಟಿಷ್ ವಿರೋಧಿ ಸಮರದಲ್ಲಿ ಭಾಗವಹಿಸಿದ್ದು ಮತ್ತು ಟಿಪ್ಪುವಿನ ನಂತರದಲ್ಲೂ ಅದನ್ನು ಮುಂದುವರೆಸಿದ ಇತಿಹಾಸವನ್ನು ಅರ್ಥ ಮಾಡಿಕೊಂಡರೆ ಉರಿಗೌಡ ಮತ್ತು ನಂಜೇಗೌಡ ಕಥನ ಹೇಗೆ ಇಂದಿನ ಬ್ರಾಹ್ಮಣಶಾಹಿಗಳ ಮರುಸೃಷ್ಟಿ ಎಂಬುದು ಕೂಡ ತಾನಾಗಿಯೇ ಆರ್ಥವಾಗುತ್ತದೆ.
ಆದರೂ ಇತಿಹಾಸದ ಆ ಪ್ರಮುಖ ಅಂಶವನ್ನು ಚರ್ಚೆ ಮಾಡುವ ಮುನ್ನ ಈ ಉರಿಗೌಡ ಮತ್ತು ನಂಜೇಗೌಡರೆಂಬ ಸುಳ್ಳು ಸೈನಿಕರು ಇತಿಹಾಸದಲ್ಲಿ ಎಲ್ಲಾದರೂ ಕಾಣಿಸಿಕೊಂಡಿದ್ದರೆ ಎಂಬುದನ್ನು ಸಂಕ್ಷಿಪ್ತವಾಗಿ ಪರಿಶೀಲಿಸೋಣ.
"ಕೇಶವಕೃಪದಲ್ಲಿ ಜನ್ಮ ಪಡೆದ ಉರಿಗೌಡ- ನಂಜೇಗೌಡ"
ಉರಿಗೌಡ-ನಂಜೇಗೌಡರು ಸಂಘಪರಿವಾರದ ಸೃಷ್ಟಿ ಎಂಬುದನ್ನು ಅರ್ಥಮಾಡಿಕೊಳ್ಳಲು ಕಾಮನ್ ಸೆನ್ಸ್ ಸಾಕು ಹಾಗೂ ಬಿಜೆಪಿಯ ನಾಯಕರ ಖಾಸಗಿ ಮಾತುಕತೆಗಳನ್ನು ಆಲಿಸಿದರೂ ಸಾಕು. ವಿಶೇಷ ಬೌದ್ಧಿಕ ಕಸರತ್ತಿನ ಅಗತ್ಯವಿಲ್ಲ. ಆದರೂ ಇತಿಹಾಸದಲ್ಲಿ ಇಂಥಾ ಒಂದು ಪ್ರಕರಣದ ದಾಖಲೆಯೇನಾದರೂ ಇದೆಯೇ ಎಂದು ಶೈಕ್ಷಣಿಕ ಶಿಸ್ತಿನಿಂದ ಅನ್ವೇಷಣೆ ಮಾಡಿದರೂ ಸಂಘಿಗಳ ಈ ವಾದದಲ್ಲಿ ಹುರುಳಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಮೊದಲನೆಯದಾಗಿ ಸಂಘಪರಿವಾರ ಟಿಪ್ಪುವಿನ ಜನಾನುರಾಗಿ ಆಡಳಿತದ ವಿರುದ್ಧ ಎತ್ತುತ್ತಿರುವ ಎಲ್ಲಾ ಅಪಕಥೆಗಳಿಗೂ ಮೂಲ ಟಿಪ್ಪುವನ್ನು ಖಂಡಾತುಂಡವಾಗಿ ದ್ವೇಷಿಸುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ಮತ್ತು ಈಸ್ಟ್ ಇಂಡಿಯಾ ಕಂಪನಿಯು ನಿಯೋಜಿಸಿದ ಇತಿಹಾಸಕಾರರು ಬರೆದ ಗ್ರಂಥಗಳೇ.
ತಮಗೆ ಏಳು ನದಿಗಳ ನೀರು ಕುಡಿಸಿದ ಟಿಪ್ಪುವಿನ ಬಗ್ಗೆ ಸಹಜವಾಗಿಯೇ ಬ್ರಿಟಿಷ್ ವಸಾಹತುಶಾಹಿಗಳಿಗೆ ದ್ವೇಷವಿತ್ತು. ಹಾಗೂ ಟಿಪ್ಪುವನ್ನು ಜನಮಾನಸದಿಂದ ಕಿತ್ತುಹಾಕದೆ ಅವರ ಸಾಮ್ರಾಜ್ಯ ಸುರಕ್ಷಿತವಾಗಿಯೂ ಇರಲು ಸಾಧ್ಯವಿರಲಿಲ್ಲ. ಹೀಗಾಗಿ ತಮ್ಮ ಮೂಗಿನ ನೇರದ ಇತಿಹಾಸವನ್ನು ಬರೆಯಲು ಅವರು ವಿಶೇಷ ಪ್ರಯತ್ನಗಳನ್ನೇ ಹಾಕಿದರು.
ಟಿಪ್ಪು ಹುತಾತ್ಮನಾದ ಮರುವರ್ಷವೇ ಇಡೀ ಮೈಸೂರು ಪ್ರಾಂತ್ಯದ ಸಾಮಾಜಿಕ ಪರಿಸ್ಥಿತಿಗಳನ್ನು ದಾಖಲಿಸಿದ ಫ಼್ರಾನ್ಸಿಸ್ ಬುಖಾನನ್, 1840 ರಲ್ಲಿ ಮೈಸೂರು ಪ್ರಾಂತ್ಯದ ಆಡಳಿತಾತ್ಮಕ ಇತಿಹಾಸ ಬರೆದ ಬ್ರಿಟಿಷ್ ಅಧಿಕಾರಿ ಸ್ಟೋಕ್ಸ್, ಆ ನಂತರದ ರೈಸ್ , ಅದಕ್ಕೆ ಮುಂಚಿನ ಅಲೆಕ್ಸಾಂಡರ್ ಬೀಟ್ಸನ್, ಜೇಮ್ಸ್ ಸಾಲಂಡ್, ಇ. ಡಬ್ಲ್ಯು. ಥಾಮ್ಸನ್..ಇನ್ನಿತರ ಹಲವಾರು ಬ್ರಿಟಿಷ್ ಇತಿಹಾಸಕಾರರು ಟಿಪ್ಪುವಿನ ಆಡಳಿತದ ಬಗ್ಗೆ , ಸಮರ ಕೌಶಲ್ಯದ ಬಗ್ಗೆ ಹಾಗೂ ನಿರ್ದಿಷ್ಟವಾಗಿ 1799ರ ಕೊನೆಯ ಆಂಗ್ಲೋ- ಮೈಸೂರ್ ಯುದ್ಧದ ಬಗ್ಗೆ ಮತ್ತು 1799 ರ ಮೇ 4 ರಂದು ಟಿಪ್ಪು ರಣರಂಗದಲ್ಲೇ ಹತನಾದ ಬಗ್ಗೆ ವಿವರವಾಗಿ ದಾಖಲಿಸಿದ್ದಾರೆ.
ಆ ಎಲ್ಲಾ ದಾಖಲೆಗಳಲ್ಲೂ ಟಿಪ್ಪುವನ್ನು ಒಬ್ಬ ಕ್ರೂರಿ ಎಂದು ಚಿತ್ರಿಸುವ ವಸಾಹತು ಧೋರಣೆ ಸ್ಪಷ್ಟವಾಗಿ ಇದ್ದರೂ ಸಂಘಿಗಳ ರೀತಿ ಎಲ್ಲೂ ಅವರುಗಳು ತಾವು ಕಾಣದ್ದನ್ನು ಮತ್ತು ಇಲ್ಲದನ್ನು ಬರೆದಿಲ್ಲ. ಹಾಗೆಯೇ ಮೈಸೂರಿನವರೇ ಆದ ಹಯವದನರಾವ್ ಎಂಬ ಅಧಿಕಾರಿ 1920ರಲ್ಲಿ ಬರೆದ ಪುಸ್ತಕವೂ ಇದೆ.
ಹೆಚ್ಚೂ ಕಡಿಮೆ ಈ ಎಲ್ಲಾ ದಾಖಲೆಗಳು 1799ರ ಮೇ 4 ರಂದು ನಡೆದ ಘಟನೆಗಳನ್ನು ಹೀಗೆ ಕಟ್ಟಿ ಕೊಡುತ್ತವೆ:
1799 ಮೇ 4 ರಂದು ಸಿಪಾಯಿಗಳಿಗೆ ಸಂಬಳಕೊಡುವ ನೆಪದಲ್ಲಿ ಮೀರ್‌ಸಾಧಿಕ್ ಬಿರುಕುಬಿಟ್ಟ ಕೋಟೆಯ ರಕ್ಷಣೆಯಲ್ಲಿದ್ದ ಮೈಸೂರು ಸೈನಿಕರನ್ನು ಅಲ್ಲಿಂದ ಬೇರೆಕಡೆ ಕಳುಹಿಸಿದ. ಇದೆ ಸಮಯ ಸಾಧಿಸಿ ಬ್ರಿಟಿಷ್ ಸೈನ್ಯ ಶ್ರೀರಂಗಪಟ್ಟಣದ ಕೋಟೆಯೊಳಗೆ ನುಗ್ಗಿತು. ಮೇ 4ರ ಬೆಳಿಗ್ಗೆ ಕೋಟೆಯ ಬಿರುಕನ್ನು ಪರಿಶೀಲಿಸಿದ ಟಿಪ್ಪುವಿಗೆ ಸಂಸ್ಥಾನಕ್ಕೆ ಬಂದಿರುವ ಆಪತ್ತಿನ ಅರಿವಾಗಿತ್ತು.
ಮಧ್ಯಾಹ್ನ ಊಟ ಮಾಡುವವೇಳೆಗೆ ಕೋಟೆಯ ರಕ್ಷಣೆಯಲ್ಲಿದ್ದ ತನ್ನ ನೆಚ್ಚಿನ ಸೇನಾಧಿಕಾರಿ ಗಫ಼ೂರ್ ಮರಣ ಹೊಂದಿದ ವಾರ್ತೆ ಬರುತ್ತದೆ. ಕೂಡಲೇ ಊಟ ಬಿಟ್ಟು ಟಿಪ್ಪು ರಣರಂಗಕ್ಕೆ ಧಾವಿಸುತ್ತಾನೆ. ಬ್ರಿಟಿಷ್ ಸೇನೆ ಆ ವೇಳೆಗಾಗಲೇ ಶ್ರೀರಂಗಪಟ್ಟಣದ ಒಳ ನುಗ್ಗಿ ಲೂಟಿ-ಕಗ್ಗೊಲೆ ಆರಂಭಿಸಿತ್ತು. ಆಗ ಟಿಪ್ಪು ಕೆಲವು ಸೈನಿಕರ ಜೊತೆಗೂಡಿ ಬ್ರಿಟಿಷ್ ಸೈನ್ಯದೊಂದಿಗೆ ಕಾದಾಡುತ್ತಿದ್ದ. ಆ ವೇಳೆಗಾಗಲೆ ನಾಲ್ಕಾರು ಗುಂಡೇಟುಗಳು ಟಿಪ್ಪುವಿನ ದೇಹ ಹೊಕ್ಕಿದ್ದವು. ಕಾಳಗದಲ್ಲಿ ಟಿಪ್ಪುವಿನ ಕುದುರೆ ಗುಂಡೇಟಿನಿಂದ ಪ್ರಾಣಬಿಟ್ಟಿತು. ಆದರೆ ಟಿಪ್ಪು ತನ್ನ ಕೊನೆಯುಸಿರು ಇರುವವರೆಗೂ ಬ್ರಿಟಿಷ್ ಸೇನೆಯನ್ನು ಪ್ರತಿರೋಧಿಸುತ್ತಾ ಅಂತಿಮವಾಗಿ ನಿತ್ರಾಣನಾಗಿ ಕೆಳಗೆ ಕುಸಿದ. ಆತನ ಬಳಿ ಇದ್ದ ವಜ್ರದ ಹಿಡಿಯ ಖಡ್ಗ ಕಿತ್ತುಕೊಳ್ಳಲು ಬಂದ ಬ್ರಿಟಿಷ್ ಸೈನಿಕ ಟಿಪ್ಪುವನ್ನು ಒಬ್ಬ ಸೈನಿಕನೆಂದೇ ತಿಳಿದು ತಲೆಗೆ ಗುಂಡಿಟ್ಟು ಹೊಡೆದು ಖಡ್ಗ ಕಸಿದುಕೊಂಡ"
ಹೀಗೆ ನಾಲ್ಕು ದಶಕಗಳ ಕಾಲ ಬ್ರಿಟಿಷ್ ವಸಾಹತು ಶಾಹಿಯಿಂದ ಮೈಸೂರು ಜನತೆಯನ್ನು ರಕ್ಷಿಸಿದ್ದ ಟಿಪ್ಪು ಸುಲ್ತಾನ್ ಹುತಾತ್ಮನಾದ. ಇದರೊಂದಿಗೆ ಕರ್ನಾಟಕದ ಮಾತ್ರವಲ್ಲ, ಭಾರತದ ಸ್ವಾತಂತ್ರ್ಯದ ಸೂರ್ಯನೇ ಅಸ್ತಂಗತನಾದ.
ಬ್ರಿಟಿಷ್‌ರಿಗೆ ಈ ಸುದ್ದಿ ತಿಳಿಯುತ್ತಿದ್ದಂತೆ ವೆಲ್ಲೆಸ್ಲಿ "ಇದೀಗ ಇಂಡಿಯಾ ನಮ್ಮದು!" ಎಂದು ಉದ್ಗರಿಸಿದನಂತೆ. ಅತ್ತ ಇಂಗ್ಲೆಂಡಿನಲ್ಲಿ ಈಸ್ಟ್ ಇಂಡಿಯಾ ಕಂಪನಿಯ ದೊರೆಗಳು ಟಿಪ್ಪುವಿನ ಸಾವಿನ ಸುದ್ದಿ ತಿಳಿದು ಇದೋ ಭಾರತದ ಹೆಣದ ಮೇಲೆ ಮತ್ತೊಂದು ಗುಟುಕು, ಸ್ವಸ್ತಿಪಾನ ಎಂದು ಸಂಭ್ರಮಿಸಿದರಂತೆ!
ಹೀಗೆ ಮೇಲಿನ ಲಿಖಿತ, ಬ್ರಿಟಿಷರ ಅಧಿಕೃತ ಇತಿಹಾಸಗಳಲ್ಲಿ ದಾಖಲಿಸಿರುವಂತೆ ಬ್ರಿಟಿಷ್ ಸೈನಿಕರು ತಾವು ಕೊಲ್ಲುತ್ತಿರುವುದು ಟಿಪ್ಪು ಎಂದು ಗೊತ್ತಿಲ್ಲದೆ, ಗುಂಡೇಟಿನಿಂದ ಗಾಯಗೊಂಡು ರಕ್ತಸಿಕ್ತನಾಗಿದ್ದ ಟಿಪ್ಪುವಿನ ಬಳಿ ಇದ್ದ ವಜ್ರದ ಹಿಡಿಯ ಖಡ್ಗವನ್ನು ಕಸಿಯುತ್ತಾ ಕೊಂದುಹಾಕಿದರು.
-ಇಲ್ಲೆಲ್ಲೂ ನಂಜೇಗೌಡನ ಅಥವಾ ಉರಿಗೌಡರ ಪ್ರಸ್ತಾಪ ಇಲ್ಲವೇ ಇಲ್ಲ!
ಎಲ್ಲಕ್ಕಿಂತ ಹೆಚ್ಚಾಗಿ ಉರಿ-ನಂಜುಗಳು ನಿಜವೇ ಆಗಿದ್ದರೆ ಬ್ರಿಟಿಷರು ಆ ಕಥೆಗೆ ಬೇಕಾದಷ್ಟು ಟಿಪ್ಪು ವಿರೋಧಿ ಮಸಾಲೆ ಸೇರಿಸಿ ದೇಶದೆದುರು ಮತ್ತು ಜಗತ್ತಿನೆದುರು ಉಣಬಡಿಸುತ್ತಿರಲಿಲ್ಲವೇ?
ಏಕೆಂದರೆ ಬ್ರಿಟಿಷರು ಟಿಪ್ಪುವನ್ನು ಕ್ರೂರಿಯೆಂದೂ, ಜನವಿರೋಧಿ ರಾಜನೆಂದೂ, ತಮ್ಮನ್ನು ವಿಮೋಚಕರೆಂದೂ ತೋರಿಸಿಕೊಳ್ಳುವ ಹವಣಿಕೆಯಲ್ಲಿದ್ದರು. ಉರಿನಂಜರು ನಿಜವೇ ಆಗಿದ್ದರೆ ಅವರನ್ನು ತಮ್ಮ ಪ್ರತಿನಿಧಿಗಳನ್ನಾಗಿ ಮೈಸೂರು ಸಂಸ್ಥಾನದಲ್ಲಿ ಸ್ಥಾಪಿಸಿಬಿಟ್ಟಿರುತ್ತಿದ್ದರು.
"ಲಾವಣಿಗಳು ಹೇಳುವ ನೈಜ ಇತಿಹಾಸ"
ಈ ಬ್ರಿಟಿಷ್ ಕಥನಗಳಿಗಿಂತ, ಲಿಪಿಕ ದಾಖಲೆಗಳಿಗಿಂತ ಅಂದಿನ ದಿನಮಾನಗಳ ಸತ್ಯವನ್ನು ಬಿಚ್ಚಿಡುವುದು ಜನರ ಬಾಯಿಂದ ಬಾಯಿಗೆ ಹರಿದು ಬಂದಿರುವ ಟಿಪ್ಪುವಿನ ಲಾವಣಿಗಳು. ರಾಜೋಜಿ, ನೀಲಕಂಠ , ಹಿ.ಮ. ನಾಗಯ್ಯ ಇನ್ನಿತರರು ಸಂಗ್ರಹಿಸಿರುವ ಈ ಲಾವಣಿಗಳಲ್ಲಿ 1799 ರ ಮೇ 4 ಮತ್ತು ಟಿಪ್ಪುವಿನ ಶೌರ್ಯ ದಾಖಲಾಗಿರುವುದು ಹೀಗೆ:
ಖಾಸಾ ದಂಡಿನ ಶ್ರೇಷ್ಠ ಮುಖಂಡರ ಮೋಸವು ಸುಲ್ತಾನರಿಗೆ ಅರಿವಾಯ್ತು|
ಮಸಲತ್ ಮಾಡಿದ ಮೀರಸಾಧಕನಿಗೆ ದೇಶದ್ರೋಹಿ ಎಂಬ್ಹೆಸರಾಯ್ತು||
ಪರಾಕ್ರಮದಿ ಬಲು ಹೋರಾಡಿ ಬಿದ್ದನು ಸಾರಂಗ ಬಾಗಿಲ ಗವಿಯ ಬಳಿ|
ಫರಂಗಿ ಪೋಜಿನ ತರಂಗ ನುಗ್ಗಿತು ಶ್ರೀರಂಗನ ಧಾಮನ ಪಟ್ಣದಲಿ||
ಹಿಮ ನಾಗಯ್ಯನವರು ತಮ್ಮ "ಭವ್ಯ ಭಾರತ ಭಾಗ್ಯೋದಯ- ಸ್ವಾತಂತ್ರ್ಯ ಸಂಗ್ರಾಮ ಮಹಾಕಾವ್ಯ" ದಲ್ಲಿ ಟಿಪ್ಪುವಿನ ಅಂತ್ಯವನ್ನು ಹೀಗೆ ವರ್ಣಿಸಿದ್ದಾರೆ :
ನಾಲ್ಕನೇ ಯುದ್ಧವದು ಮೇಲೇರಿ ಬಂತಕಟ
ಶಸ್ತ್ರಸ್ತ್ರದಲ್ಲಿ ಗೆಲ್ಲದಾಗಿದ್ದ ಆಂಗ್ಲಪಡೆ
ಚಿನ್ನದಾಸೆಯನು ತೋರಿ ಹಣದಾಸೆಯನು ಬೀರಿ
ಟಿಪ್ಪುವಿನ ಮಂತ್ರಿಗಳ ಕೊಂಡರದೇನೆಂಬೆ
ಮೋಸ ಮಾಡಿದರವರು ಮಂತ್ರಿಗಳು ಕುಹಕಿಗಳು
ಕತ್ತುಕೊಯ್ದರು ಒಳಗೆ ಕ್ರೂರವಾಯಿತು ಘಳಿಗೆ ॒
ರಾಜೋಜಿಯವರು ಸಂಗ್ರಹಿಸಿರುವ ಲಾವಣಿಗಳಲ್ಲಿ 1799 ರ ಮೇ 4 ಹೀಗೆ ದಾಖಲಾಗಿದೆ:
ನೇತ್ರವ ಬಿಟ್ಟು ರೌದ್ರಾಕಾರದಿ ಕತ್ತರಿಸಿದ
ಸೊಳ್ಜರ್ ಕೈದೆ ಕಡಿತ ತಕ್ಷಣ ಕರವೂ ಬಿದ್ದಿತು
ಕುಣಿಯುತ್ತಿತ್ತು ಕೀಲು ಬೊಂಬೆಯಂಗೆ
ಆಗ ಸಿಪಾಯಿ ಕಡುಕೋಪದಿಂದ ಹೊಡೆದನು
ಗೋಲಿಯನು ದೊರೆಯ ಮೈಗೆ
ಹೀಗೆ ಜನಮಾನಸದಲ್ಲಿ ಟಿಪ್ಪುವಿನ ಅಂತ್ಯಕ್ಕೆ ಕಾರಣರಾದ ದ್ರೋಹಿಗಳ ಬಗ್ಗೆ ಆಕ್ರೋಶವಿದೆ. ಮತ್ತು ಬ್ರಿಟಿಷ್ ಸೈನಿಕರಿಗೆ ಬಲಿಯಾದ ಟಿಪ್ಪುವಿನ ಅಂತ್ಯದ ವಿವರಗಳಿವೆ.
ಇಲ್ಲಿಯೂ ಉರಿನಂಜುಗಳ ಪ್ರಸ್ತಾಪವೇ ಇಲ್ಲ.
ಒಂದು ವೇಳೆ ಈ ಉರಿನಂಜುಗಳು ಇದ್ದದ್ದೇ ಆದರೆ ಮತ್ತು ಅವರು ಜನಸಾಮಾನ್ಯರಲ್ಲಿ ಟಿಪ್ಪುವಿನ ಬಗ್ಗೆ ಇದ್ದ ಆಕ್ರೋಶದ ಭಾಗವಾಗಿ ಟಿಪ್ಪುವನ್ನು ಬಲಿ ತೆಗೆದುಕೊಂಡಿದ್ದರೆ ಲಾವಣಿಯಾಗುತ್ತಿದ್ದದ್ದು ಉರಿನಂಜರೇ ಹೊರತು ಟಿಪ್ಪುವಲ್ಲ.
ಹೀಗಾಗಿ ಈ ಉರಿನಂಜರು ಈ ಚುನಾವಣೆಗಾಗಿ ಮತ್ತು ಇತಿಹಾಸವನ್ನು ಬದಲು ಮಾಡುವ ದುಷ್ಟ ಸಂಚಿನ ಭಾಗವಾಗಿ ಕೇಶವಕೃಪದಲ್ಲಿ ಸೃಷ್ಟಿಯಾದ ಹುಸಿ ಸೈನಿಕರೇ ಹೊರತು ನಿಜವಲ್ಲ.
ಆದರೆ ಇದಕ್ಕಿಂತ ಮುಖ್ಯವಾದ ಸಂಗತಿ ಸಂಘಿಗಳು ಹೇಳುವಂತೆ ಈ ನಾಡಿನ ರೈತಾಪಿಗೆ ಟಿಪ್ಪುವಿನ ವಿರುದ್ಧ ಆಕ್ರೋಶವಿತ್ತೇ ಅಥವಾ ಅಭಿಮಾನವಿತ್ತೇ ಎಂಬುದು.
ಇದಕ್ಕೆ ಉತ್ತರವನ್ನು ಪಡೆದುಕೊಳ್ಳುವುದು ಕೇವಲ ಇತಿಹಾಸದ ದೃಷ್ಟಿಯಿಂದಲ್ಲ. ಭವಿಷ್ಯದ ದೃಷ್ಟಿಯಿಂದಲೂ ಮುಖ್ಯವಾದುದು.
ಟಿಪ್ಪು ಸುಧಾರಣೆ: ಪಾಳೇಗಾರರಿಂದ- ಬ್ರಾಹ್ಮಣಶಾಹಿಯಿಂದ ರೈತಾಪಿಯ ಬಿಡುಗಡೆ.
ಟಿಪ್ಪುವಿನ ಸಾವಿನಿಂದ ತಾವು ಗಳಿಸಿದ್ದೇನೆಂದು ಬ್ರಿಟೀಷ್ ವಸಾಹತುಶಾಹಿಗಳು ಸ್ಪಷ್ಟವಾಗಿ ಅರಿತುಕೊಂಡಿದ್ದರು.. ಹಾಗೆಯೇ ಟಿಪ್ಪುವನ್ನು ವಿಲನೀಕರಿಸಿದರೆ ಆಗುವ ಲಾಭವನ್ನು ಸಂಘಿಗಳು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ.
ಆದರೆ ಟಿಪ್ಪುವಿನ ಸಾವಿನಿಂದ ಅಂದು ತಾವು ಕಳೆದುಕೊಂಡಿದ್ದೇನು ಹಾಗೂ ಇಂದು ಸಂಘಿಗಳು ಟಿಪ್ಪುವನ್ನು ದುರುಳೀಕರಿಸುತ್ತಿರುವುದರಿಂದ ನಾಡಿಗಿರುವ ಅಪಾಯವೇನು ಎಂಬ ಸಂಪೂರ್ಣ ತಿಳುವಳಿಕೆಯು ಇದುವರೆಗೂ ಕರ್ನಾಟಕ ಮತ್ತು ಭಾರತೀಯ ಜನತೆಯ ಅರಿವಿಗೆ ಬಂದಂತಿಲ್ಲ.
ಈ ವಿಷಯದ ಬಗ್ಗೆ ಟಿಪ್ಪುವಿನ ಬಗ್ಗೆ ಅನನ್ಯ ಅಧ್ಯಯನ ಮಾಡಿರುವ ಇತಿಹಾಸಕಾರ ಶೇಕ್ ಅಲಿ ಮತ್ತು ಕ್ರಾಂತಿಕಾರಿ ವಿದ್ವಾಂಸ ಸಾಕೇತ್ ರಾಜನ್ ಹಾಗೂ ಇನ್ನೂ ಹಲವಾರು ಇತಿಹಾಸಕಾರರು ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಅದನ್ನು ಆಧರಿಸಿ ಹಲವಾರು ಕಿರು ಹೊತ್ತಿಗೆಗಳು ಕನ್ನಡದಲ್ಲಿ ಪ್ರಕಟವಾಗಿವೆ.
ಅವುಗಳೆಲ್ಲಾ ಹೇಳುವ ಸಾರಂಶವಿಷ್ಟು:
ಇತರ ಊಳಿಗಮಾನ್ಯ ರಾಜರಂತೆ ಟಿಪ್ಪು ಮತ್ತು ಹೈದರಾಲಿಗಳು ಕೂಡಾ ತಮ್ಮ ಸಂಸ್ಥಾನವನ್ನು ಉಳಿಸಿಕೊಳ್ಳಲು ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಹೋರಾಡಿದರೂ, ಅಷ್ಟೇ ನಿಜವಲ್ಲ.
ಅವರು ಊಳಿಗಮಾನ್ಯ ವಿರೋಧಿ ಧೋರಣೆ ಮತ್ತು ಆಧುನಿಕ ದೃಷ್ಟಿ ಇದ್ದ ರಾಜರುಗಳು. ಆದ್ದರಿಂದಲೆ ಟಿಪ್ಪು ಬೇರೆ ಯಾವ ರಾಜರು ಜಾರಿ ಮಾಡದಂಥ ಊಳಿಗಮಾನ್ಯ ಸುಧಾರಣೆಗಳನ್ನು ಮೈಸೂರು ಸಂಸ್ಥಾನದಲ್ಲಿ ಜಾರಿಗೆ ತಂದು ದಲಿತ- ಶೂದ್ರ- ರೈತಾಪಿಗೈಗೆ ಬಿಡುಗಡೆ ತಂದುಕೊಟ್ಟ.
ಆತ ಫ಼್ರೆಂಚ್ ಕ್ರಾಂತಿಯ ಆಶಯಗಳನ್ನು ಮೆಚ್ಚಿಕೊಂಡಿದ್ದ . ತನ್ನನ್ನು ತಾನು 'ಸಿಟಿಜನ್ ಟಿಪ್ಪು' ಎಂದು ಕರೆಸಿಕೊಳ್ಳಲು ಇಷ್ಟಪಡುತ್ತಿದ್ದ.
ಆದ್ದರಿಂದಲೇ ಸಂಘಿಗಳಿಗೆ ಟಿಪ್ಪುವಿನ ವಿರುದ್ಧ ಇರುವ ಸಿಟ್ಟಿಗೆ ಆತ ಮುಸ್ಲಿಂ ರಾಜನಾಗಿದ್ದದ್ದು ಮಾತ್ರ ಕಾರಣವಲ್ಲ. ಬದಲಿಗೆ ಆತನ ಬ್ರಾಹ್ಮಣಶಾಹಿ ಊಳಿಗಮಾನ್ಯ ವಿರೋಧಿ ಆಡಳಿತವೂ ಕಾರಣವಾಗಿದೆ.
ಉದಾಹರಣೆಗೆ ಹೈದರ್-ಟಿಪ್ಪು ಆಳ್ವಿಕೆಗೆ ಮುನ್ನ ಮೈಸೂರು ಸಂಸ್ಥಾನದಲ್ಲಿನ ಜೀವಿತವೂ ಇತರೆಡೆಗಳಿಗಿಂತ ಅಷ್ಟೇನೂ ಭಿನ್ನವಾಗಿರಲಿಲ್ಲ. ವಿಜಯನಗರದ ಪತನಾನಂತರ ಅದರಡಿ ಇದ್ದ ನಾಯಕರುಗಳು ಸ್ವಾತಂತ್ರ್ಯ ಘೋಷಿಸಿಕೊಂಡರು. ನಂತರದ ದಿನಗಳಲ್ಲಿ ಈ ಹಲವಾರು ಸಣ್ಣ-ಪುಟ್ಟ ನಾಯಕರುಗಳಿಗೂ ಹಳ್ಳಿಯ ಗೌಡರುಗಳಿಗೂ ನಡುವೆ ರೈತರನ್ನು ಸುಲಿಯುವ ’ಪಾಳೆಗಾರ’ರೆಂಬ ಮತ್ತೊಂದು ಪದರ ಹುಟ್ಟಿಕೊಂಡಿತು. ಸಾಧಾರಣವಾಗಿ ದಕ್ಷಿಣ ಕರ್ನಾಟಕದ ಈ ಪಾಳೆಗಾರರು 10ರಿಂದ 50 ಹಳ್ಳಿಗಳನ್ನು ನಿಯಂತ್ರಣ ದಲ್ಲಿಟ್ಟುಕೊಂಡಿರುತ್ತಿದ್ದರು. ರೈತರ ಸುಲಿಗೆಯನ್ನು ಸಲೀಸಾಗಿ ನಡೆಸಲು ಅವರು ಅಶ್ವದಳಗಳನ್ನು, ಕಾಲಾಳುಗಳನ್ನು ತಮ್ಮೊಡನೆ ಇಟ್ಟುಕೊಂಡಿರುತ್ತಿದ್ದರು. ಇತರ ಪಾಳೆಗಾರರಿಂದ ಹಾಗೂ ಕೆಲವೊಮ್ಮೆ ತಮ್ಮ ಜನರಿಂದಲೇ ತಮ್ಮನ್ನು ರಕ್ಷಿಸಿಕೊಳ್ಳಲು ಬೆಟ್ಟದ ಮೇಲೆ ದುರ್ಗಗಳನ್ನು ಕಟ್ಟಿಕೊಂಡಿರುತ್ತಿದ್ದರು. ತಮ್ಮ ಈ ಸೇನಾ ಬಲದಿಂದ ಈ ಜನಕಂಟಕ ಪಾಳೆಗಾರರು ರೈತರ ಮೇಲೆ, ಕುಶಲಕರ್ಮಿಗಳ ಮೇಲೆ, ವ್ಯಾಪಾರಿಗಳ ಮೇಲೆ ಅಪಾರ ತೆರಿಗೆ ವಿಧಿಸಿ ಅವರ ರಕ್ತ ಹೀರುತ್ತಿದ್ದರು. ಈ ಶೋಷಕ ಪಾಳೆಗಾರರ ಕೋಟೆಗಳು ನಾಡಿನಾದ್ಯಂತ ಎಷ್ಟೊಂದು ವಿಸ್ತೃತವಾಗಿ ಹರಡಿ ಹೋಗಿದ್ದವೆಂದರೆ ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ಅಂಥ 120 ಕೋಟೆಗಳು ಇದ್ದುದನ್ನು ದಾಖಲಿಸಲಾಗಿದೆ.
"ಪಾಳೆಗಾರಿ ವರ್ಗದ ನಿರ್ಮೂಲನ"
ತಾವು ರಾಜ್ಯಾಧಿಕಾರ ಪಡೆದುಕೊಂಡ ನಂತರ ಹೈದರ್-ಟಿಪ್ಪು ಮಾಡಿದ ಮೊದಲ ಕೆಲಸವೆಂದರೆ ರೈತರ ರಕ್ತ ಹೀರುತ್ತಿದ್ದ ಪರಾವಲಂಬಿ ಪಾಳೆಗಾರ ವರ್ಗವನ್ನು ನಾಮಾವಶೇಷಗೊಳಿಸಿದ್ದು. ಹೈದರಾಲಿ ಹಾಗೂ ಟಿಪ್ಪು ಸುಲ್ತಾನರು ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿತ್ರದುರ್ಗ, ರಾಯಚೂರು, ಬಳ್ಳಾರಿ, ಧಾರವಾಡ, ತುಮಕೂರು ಹಾಗೂ ಕೊಲಾರಗಳಲ್ಲಿ ಇಂತಹ ಸುಮಾರು 200 ಪಾಳೆಗಾರರನ್ನು ಸೆದೆಬಡಿದರು ಇಲ್ಲವೇ ನಾಮಾವಶೇಷ ಗೊಳಿಸಿದರು. ಕೇರಳದ ಉತ್ತರ ಮಲಬಾರಿನಲ್ಲಿ ಸುಲಿಗೆ ಮಾಡುತ್ತಿದ್ದ ಎಲ್ಲಾ 42 ಪಾಳೆಗಾರರನ್ನು ಹೈದರಾಲಿ ನಾಶಮಾಡಿದ. ಹೀಗಾಗಿ 1799 ರ ಟಿಪ್ಪುವಿನ ಪತನದ ನಂತರ ಮೈಸೂರು ಪ್ರಾಂತ್ಯದ ಸಂಪೂರ್ಣ ಅಧ್ಯಯನ ಮಾಡಿದ ಬ್ರಿಟಿಷ್ ತಜ್ಞ ಫ್ರಾನ್ಸಿಸ್ ಬುಕಾನನ್ ಗುರುತಿಸಿದಂತೆ ಮೈಸೂರು ಅರಸರಾದ ಹೈದರ್-ಟಿಪ್ಪು ಅವರ ಪಾಳೆಗಾರ-ವಿರೋಧಿ ಸೈನಿಕ ಕಾರ್ಯಚರಣೆಗಳಿಂದಾಗಿ ಮೈಸೂರು ಪ್ರಾಂತ್ಯದಲ್ಲಿ ಊಳಿಗಮಾನ್ಯ ವ್ಯವಸ್ಥೆ ಕುಸಿದು ಬಿದ್ದಿತು.
ಹೈದರಾಲಿಯೂ ಕೆಲವು ಶರಣಾದ ಪಾಳೆಗಾರರಿಂದ ಮೈಸೂರಿಗೆ ನಿಷ್ಠೆ ಉಳಿಸಿಕೊಳ್ಳುವ ಹಾಗೂ ಕಪ್ಪಕಟ್ಟುವ ಪ್ರಮಾಣಪಡೆದು ಉಳಿಯಗೊಡುತ್ತಿದ್ದರೆ, ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ಪಾಳೆಗಾರರ ವರ್ಗದ ದಮನ ಮತ್ತೊಂದು ಹೆಜ್ಜೆ ಮುಂದೆ ಹೋಯಿತು. ಪಾಳೆಗಾರರ ಹಿಡಿತವನ್ನು ಸಂಪೂರ್ಣವಾಗಿ ಮುರಿಯಲಾಯಿತಲ್ಲದೆ, ಆ ಭೂಮಿಯನ್ನು ರೈತಾಪಿಗೆ ಹಂಚಲಾಗುತ್ತಿತ್ತು ಅಥವಾ ರಾಜಪ್ರಭುತ್ವವೇ ನೇರವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಿತ್ತು.
ಈ ಹೊಸ ಪದ್ದತಿಯಲ್ಲಿ ಪ್ರಭುತ್ವಕ್ಕೂ-ರೈತಾಪಿಗೂ ನಡುವೆ ಇದ್ದ ಪರಾವಲಂಬಿ ವರ್ಗವು ಸಂಪೂರ್ಣವಾಗಿ ಕಣ್ಮರೆಯಾಗಿ ಮೊಟ್ಟಮೊದಲ ಬಾರಿಗೆ ಪ್ರಭುತ್ವವೇ ನೇರವಾಗಿ ತನ್ನ ರೈತಾಪಿಯೊಡನೆ ಸಂಬಂಧವಿರಿಸಿಕೊಂಡಿತು. ಇದರಿಂದ ಪಾಳೆಗಾರರ ಪ್ರಭಾವ ಹಾಗೂ ಹಿಡಿತದಿಂದ ರೈತಾಪಿ ಸಂಪೂರ್ಣವಾಗಿ ಮುಕ್ತವಾಯಿತು
ಈ ಹಿಂದಿನ ಊಳಿಗಮಾನ್ಯ ರಾಜಪ್ರಭುತ್ವಗಳ ಆಕ್ರಮಣ, ಗೆಲುವು-ಸೋಲುಗಳ ರೈತಾಪಿಯ ಬದುಕಿನಲ್ಲಿ, ಸಾಮಾಜಿಕ ಸಂಬಂಧಗಳಲ್ಲಿ ಯಾವುದೇ ಬದಲಾವಣೆ ತಂದಿರಲಿಲ್ಲ. ಆದರೆ, ಹೈದರಾಲಿ ಹಾಗೂ ಟಿಪ್ಪುಇವರುಗಳು ನಡೆಸಿದ ಸಾಮ್ರಾಜ್ಯದ ವಿಸ್ತರಣೆಯಲ್ಲಿ, ಅವರ ಆಳ್ವಿಕೆಯಡಿ ಬಂದ ಜನತೆಯ ಬದುಕಿನಲ್ಲಿ ಪ್ರಗತಿಪರ ಬದಲಾವಣೆಯೇ ಬಂದುಬಿಟ್ಟಿತು.
ಏಕೆಂದರೆ ಅವರ ಪ್ರಭುತ್ವ ಯಾವಾಗಲೂ ಪರಾವಲಂಬಿ ಪಾಳೆಗಾರಿ ವರ್ಗವನ್ನು ನಾಶಗೊಳಿಸಿ ರೈತಾಪಿ, ಕುಶಲಕರ್ಮಿ ಹಾಗೂ ವ್ಯಾಪಾರಿ ವರ್ಗಗಳ ಮೇಲಿನ ಭಾರವನ್ನು ಹಗುರಗೊಳಿಸುತ್ತಿತ್ತು. ಈ ಪಾಳೆಗಾರರು ಎಷ್ಟು ಜನಕಂಟಕರಾಗಿದ್ದರೆಂದರೆ ಹಲವಾರು ಕಡೆ ಸೆರೆಯಾಳುಗಳು ಹಾಗೂ ಗ್ರಾಮದ ಜನತೆಯೇ ಅತ್ಯಂತ ಉತ್ಸಾಹದಿಂದ ಮೈಸೂರಿನ ಸೈನ್ಯವನ್ನು ಸ್ವಾಗತಿಸುತ್ತಿದ್ದರು.
"ಉಳುವವನಿಗೇ ಭೂಮಿ"
1792 ರಲ್ಲಿ ಬ್ರಿಟಿಷರ ವಿರುದ್ಧ ಮೂರನೇ ಯುದ್ಧದಲ್ಲಿ ಸೋತು ಮಕ್ಕಳನ್ನು ಅಡವಿಟ್ಟರೂ ಎದೆಗುಂದದ ಟಿಪ್ಪು ಅದೇ ವರ್ಷ ಭೂ ಕಂದಾಯ ಕಾಯಿದೆ ಯನ್ನು ಜಾರಿಗೆ ತಂದ. ಎಂತಹ ಅಡೆತಡೆಗಳೂ ಟಿಪ್ಪುವಿನ ಐತಿಹಾಸಿಕ ಊಳಿಗಮಾನ್ಯ-ವಿರೋಧಿ ಉಪಕ್ರಮಗಳನ್ನು ನಿಲ್ಲಿಸುವಂತಿರಲಿಲ್ಲ. ಕಬೀರ್ ಕೌಸರ್ ಎಂಬುವರು ಗುರುತಿಸಿರುವಂತೆ ರೈತನ ಜಾತಿ, ಧರ್ಮ, ಪಂಥವೇನೆ ಇದ್ದರೂ ಉಳುವವನಿಗೇ ಭೂಮಿ ಸಿಗಬೇಕು ಎನ್ನುವುದು ಟಿಪ್ಪುವಿನ ಕೃಷಿ ನೀತಿಯಾಗಿತ್ತು. ಇದರೊಡನೆ, ಹಿಂದಿನ ಪ್ರಭುತ್ವಗಳು ಜಹಗೀರುಗಳನ್ನು ನೀಡುವಮೂಲಕ ಪರಾವಲಂಬಿ ವರ್ಗವನ್ನು ಸೃಷ್ಟಿ ಮಾಡುತ್ತಿದ್ದುದನ್ನು ಹೈದರನು ಕಡಿತಗೊಳಿಸಿದರೆ ಟಿಪ್ಪು ಸಂಪೂರ್ಣವಾಗಿ ನಿಲ್ಲಿಸಿಯೇ ಬಿಟ್ಟ. ತನ್ನ ಇಡೀ ಜೀವಿತಾವಧಿಯಲ್ಲಿ ಟಿಪ್ಪು ಕೇವಲ ಎರಡು ಹಳ್ಳಿಗಳನ್ನು ಮಾತ್ರ ಜಹಗೀರಾಗಿ ನೀಡಿದ್ದ. ಪ್ರಾಕ್ಸಿ ಫರ್ನಾಂಡೀಸ್ ಎಂಬುವವರು ಬರೆಯುವಂತೆ ದಕ್ಷಿಣ ಮರಾಠ ಪ್ರಾಂತ್ಯದ ಧಾರವಾಡ-ಬಿಜಾಪುರಗಳಲ್ಲಿ ದೇಶಮುಖರ ಪರಿಸ್ಥಿತಿ ದಯನೀಯವಾಗಿತ್ತು. ಹಲವಾರು ಕಡೆಗಳಲ್ಲಿ ಟಿಪ್ಪು ಭೂಮಿಯ ಮೇಲಿನ ಅವರ ಎಲ್ಲಾ ಹಕ್ಕುಗಳನ್ನು ಕಿತ್ತುಕೊಂಡು ರೈತರಿಗೆ ಹಂಚಿದ್ದ. ಅದೇ ರೀತಿ ಹೆಚ್.ಜೆ.ಸ್ಟೋಕ್ಸ್ ಎಂಬುವವರು ಬರೆದಂತೆ ಟಿಪ್ಪುವಿನ ಕಾಲಾವಧಿಯಲ್ಲಿ ದೇಸಾಯರುಗಳಿಗೆ ನೀಡಿದ್ದ ಎಲ್ಲಾ ಜಾಗೀರನ್ನು ಟಿಪ್ಪುವಿನ ಸೇನಾಧಿಕಾರಿ ಜಮಾಲ್ ಖಾನ್ ವಾಪಸ್ ಪಡೆದಿದ್ದಲ್ಲದೇ ಕೇವಲ ಅವರ ಬಾಳ್ವಿಕೆಗೆ ಬೇಕಾದಷ್ಟು ಭೂಮಿಯನ್ನು ಮಾತ್ರ ಬಿಟ್ಟುಕೊಡಲಾಗಿತ್ತು.
"ಮಠ-ಮಾನ್ಯಗಳ ರೆಕ್ಕೆಗಳಿಗೆ ಕತ್ತರಿ''
ಕರ್ನಾಟಕದಲ್ಲಿ ಆಗ ಅಸ್ತಿತ್ವದಲ್ಲಿದ್ದ ಊಳಿಗಮಾನ್ಯ ಪದ್ದತಿಯ ಮತ್ತೊಂದು ಮಾದರಿ, ಬ್ರಾಹ್ಮಣ-ಮಠ ಮಾನ್ಯಗಳಿಗೆ ನೀಡುತ್ತಿದ್ದ ದತ್ತಿಗಳು. ವಾಸ್ತವವಾಗಿ ಆಗ ಬ್ರಾಹ್ಮಣ ಮಠಗಳೇ ಅತಿದೊಡ್ಡ ಜಾಗೀರದಾರಿ ಊಳಿಗಮಾನ್ಯ ಶಕ್ತಿಗಳಾಗಿದ್ದವು. ಅತಿದೊಡ್ಡ ಸಂಖ್ಯೆಯ ಶೂದ್ರ ರೈತಾಪಿಯನ್ನು ಈ ಮಠ ಮಾನ್ಯಗಳು ದೈವದ ಹೆಸರಿನಲ್ಲಿ ಶೋಷಿಸುತ್ತಿದ್ದವು. ಟಿಪ್ಪು ಸುಲ್ತಾನನ ರಾಜಖಡ್ಗ ಮಠ ಮಾನ್ಯಗಳ ಈ ಹಕ್ಕನ್ನು ಕತ್ತರಿಸಿತು. ಅಷ್ಟು ಮಾತ್ರವಲ್ಲ, ಹಲವಾರು ಕಡೆ ಟಿಪ್ಪು ದೇವಸ್ಥಾನದ ಭೂಮಿಯನ್ನು ಶೂದ್ರ ರೈತಾಪಿಗೆ ಹಂಚಿ ಕ್ರಾಂತಿಕಾರಿ ಬದಲಾವಣೆಗೆ ಕಾರಣನಾದ. ಉದಾಹರಣೆಗೆ ಬ್ರಿಟೀಷ್ ಇತಿಹಾಸಕಾರ ಬುಕಾನನ್ ದಾಖಲಿಸಿರುವಂತೆ ನಂಜನಗೂಡಿನಲ್ಲಿ 500 ಬ್ರಾಹ್ಮಣ ಮನೆಗಳಿದ್ದೂ ವಾರ್ಷಿಕ 14,000 ಪಗೋಡಾಗಳಷ್ಟು ಆದಾಯ ತರುತ್ತಿದ್ದ ಜಮೀನನ್ನು ಹೊಂದಿದ್ದವು. ಅದೇ ಊರಿನಲ್ಲಿ 700 ಶೂದ್ರ ಮನೆಗಳಿದ್ದೂ ಅವರು ಈ ಭೂಮಿಯಲ್ಲಿ ಚಾಕರಿ ಮಾಡಿದರೂ ಊರ ಹೊರಗೆ ಬದುಕಬೇಕಾಗಿತ್ತು. ಟಿಪ್ಪು ಬ್ರಾಹ್ಮಣರ ಅಧಿಕಾರವನ್ನು ಮೊಟಕುಗೊಳಿಸಿದ್ದಲ್ಲದೆ ಅವರಿಗೆ ಕೇವಲ 100 ಪಗೋಡಾಗಳಷ್ಟು ಮಾಸಿಕ ನಿವೃತ್ತಿ ವೇತನ ನೀಡಿದ.
ಇದನ್ನೇ ದೊಡ್ಡ ಬ್ರಾಹ್ಮಣ-ವಿರೋಧಿ ಮತಾಂಧ ಕ್ರಮವೆಂದು ಈಗಿನ ಬ್ರಾಹ್ಮಣ ಶಾಹಿಗಳು ಬಣ್ಣಿಸುತ್ತಿದ್ದಾರೆ. ಆದರೆ ಟಿಪ್ಪು ಬ್ರಾಹ್ಮಣರಲ್ಲೂ ಸಹ ವೈದಿಕ ಹಾಗೂ ಲೌಕಿಕ ಬ್ರಾಹ್ಮಣರೆಂಬ ವಿಧಗಳನ್ನು ಗುರುತಿಸಿದ. ಶ್ರಮದ ಕೊಡುಗೆ ನೀಡಿ ಸಮಾಜದ ಅಭಿವೃದ್ದಿಗೆ ಪೂರಕವಾಗಿದ್ದ ಲೌಕಿಕ ಬ್ರಾಹ್ಮಣರಿಗೆ ಟಿಪ್ಪುವಿನಿಂದ ತೊಂದರೆಯಿರಲಿಲ್ಲ. ಕಿಂಚಿತ್ತೂ ಶ್ರಮವಹಿಸದೇ ರೈತರ ಶೋಷಣೆ ಹಾಗೂ ಶ್ರಮದ ಮೇಲೆ ಬಾಳ್ವೆ ಮಾಡುತ್ತಿದ್ದ ವೈದಿಕ ಬ್ರಾಹ್ಮಣರು ಮಾತ್ರ ಟಿಪ್ಪುವಿನ ಸುಧಾರಣಾ ಕ್ರಮಗಳಿಗೆ ನೇರವಾಗಿ ಗುರಿಯಾದರು.
ಅದೆ ರೀತಿ ಮೂಡಬಿದ್ರೆಯಲ್ಲಿ ಜೈನ ಮಠದಡಿ 360 ಪಗೋಡಗಳಷ್ಟು ವಾರ್ಷಿಕ ಆದಾಯ ತರುತ್ತಿದ್ದ ಬಸದಿ ಭೂಮಿಯನ್ನು ಟಿಪ್ಪು ಸಂಪೂರ್ಣ ವಶಪಡಿಸಿಕೊಂಡು ಅವರನ್ನು ವಾರ್ಷಿಕ 90 ಪಗೋಡಗಳ ವೇತನದ ಮೇಲೆ ಜೀವಿಸುವಂತೆ ಮಾಡಿದ.
"ಪಟೇಲ ಊರ ಗೌಡನಲ್ಲ- ಸಾಮಾನ್ಯ ರೈತ!"
ಅದೆ ರೀತಿ ಹಳ್ಳಿಗಳಲ್ಲಿ ರಾಜಪ್ರಭುತ್ವದ ಪರವಾಗಿ ರೈತರನ್ನು ಸುಲಿಯುತ್ತಿದ್ದ ಕೊನೆಯ ಕೊಂಡಿ ಊರ ಪಟೇಲನಾಗಿದ್ದ. ಇದೊಂದು ವಂಶಪಾರಂಪರ್ಯ ಸ್ಥಾನವಾಗಿದ್ದು ಈ ಪ್ರಭುತ್ವದ ಪ್ರತಿನಿಧಿಯ ಸ್ಥಾನವು ಉಳ್ಳವರಿಗೆ ಹಾಗೂ ಮೇಲ್ಜಾತಿಗಳಿಗೆ ದೊರೆಯುತ್ತಿತ್ತು. ಆದರೆ ಟಿಪ್ಪು ಇದನ್ನು ಅಮೂಲಾಗ್ರವಾಗಿ ಬುಡಮೇಲು ಮಾಡಿದ. ಟಿಪ್ಪು ಜಾರಿಗೆ ತಂದ "ಭೂ ಕಂದಾಯ ಕಾಯ್ದೆಯ" 11 ನೇ ಕಲಮು ಹೀಗೆ ಹೇಳುತ್ತದೆ;
"ತುಂಬಾ ವರ್ಷಗಳಿಂದ ಪ್ರತಿಯೊಂದು ಹಳ್ಳಿಗೂ ಪಟೇಲನೊಬ್ಬನನ್ನು ನೇಮಿಸಲಾಗುತ್ತಿದೆ. ಇನ್ನು ಮುಂದೆ ಎಲ್ಲೆಲ್ಲಿ ಆ ಸ್ಥಾನಕ್ಕೆ ಈಗಿರುವ ಪಟೇಲರು ಅರ್ಹರಾಗಿಲ್ಲವೋ ಅವರನ್ನು ತೆಗೆದು ಹಾಕಿ ಆ ಸ್ಥಾನಕ್ಕೆ ರೈತನಿಂದಲೇ ಸಮರ್ಥರಾದವರನ್ನು ನೇಮಕ ಮಾಡಬೇಕು ಮತ್ತು ಹಳೆಯ ಪಟೇಲ, ರೈತನ ಸ್ಥಾನಕ್ಕಿಳಿದು ನೇಗಿಲು ಹಿಡಿದು ನೆಲ ಉಳಬೇಕು".
ಇದೇ ಕಾಯ್ದೆಯ 12 ನೆಯ ಕಲಮು ಹೇಳುವುದು ಹೀಗೆ;
"ಹಳ್ಳಿಯ ವ್ಯವಹಾರಗಳಲ್ಲಿ ಇನ್ನು ಮುಂದೆ ಶಾನುಭೋಗರು ಮೂಗು ತೂರಿಸುವ ಅಗತ್ಯವಿಲ್ಲ. ಅವರಿಗೆ ಭೂಮಿಕೊಡಲಾಗುವುದಿಲ್ಲ. ಆದರೆ ಅವರನ್ನು ಕರಣಿಕರಂತೆ ಮಾತ್ರ ವೇತನದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು"
.
ಅದೇ ರೀತಿ ಭೂ ಕಂದಾಯ ಕಾಯ್ದೆಯ 5 ನೇ ಕಲಮಿನಂತೆ;
" ಬಹಳ ಸಮಯದಿಂದ ಈ ಪಟೇಲರುಗಳು ಸರ್ಕಾರಿ ಭೂಮಿಗೆ ಸಂಪೂರ್ಣವಾಗಿ ಕಂದಾಯವನ್ನು ಸಂದಾಯ ಮಾಡುತ್ತಿಲ್ಲ. ಇದನ್ನು ಕೂಡಲೇ ತನಿಖೆ ಮಾಡಿ ಇತರ ರೈತರ ಜಮೀನಿನಂತೆ ಅದನ್ನು ಅಂದಾಜು ಮಾಡಿ ತೆರಿಗೆ ನಿಗದಿಮಾಡಬೇಕು. ರೈತರು ಪಟೇಲರ ಜಮೀನನ್ನು ಉಳಬೇಕಿಲ್ಲ. ಪಟೇಲರೇ ತಮ್ಮ ಜಮೀನನ್ನು ಖುದ್ದು ಉಳಬೇಕು. ಒಂದುವೇಳೆ ಅವರೇನಾದರೂ ರೈತರನ್ನು ಉಳುವಂತೆ ಮಾಡಿದರೆ ಸಂಪೂರ್ಣ ಉತ್ಪನ್ನವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವುದು. ಒಂದು ವೇಳೆ ಶಾನಭೋಗರು ತಮ್ಮ ಕೂಲಿಯ ಬದಲಿಗೆ ಸರಿಸಮನಾದ ಭೂಮಿಕೇಳಿದರೆ ಅವರಿಗೆ ಉಳುಮೆ ಮಾಡಿರದ ಬೆದ್ದಲು ಭೂಮಿ ನೀಡಲಾಗುವುದು".
"ಸೈನಿಕರಿಗೆ ಭೂಮಿ"
ಟಿಪ್ಪುವಿನ ಆಳ್ವಿಕೆ ಪರಿಚಯಿಸಿದ ಮತ್ತೊಂದು ಮುಖ್ಯ ಸುಧಾರಣೆಯೆಂದರೆ ಸೈನಿಕರಿಗೆ ಭೂಮಿ ನೀಡಿದ್ದು. ಸುಮಾರು 3 ಲಕ್ಷ ಸೈನಿಕರಿಗೆ ಈ ರೀತಿ ಭೂಮಿ ನೀಡಲಾಯಿತು. ಇದೊಂದು ಬೃಹತ್ ಸುಧಾರಣೆಯಾಗಿದ್ದು ಆ ಕಾಲದ ಕೃಷಿ ವ್ಯವಸ್ಥೆಯ ಪ್ರಧಾನ ಭಾಗವಾಗಿತ್ತು. ಇದರಿಂದಾಗಿ ಒಂದೆಡೆ ಬೃಹತ್ ಸಂಖ್ಯೆಯಲ್ಲಿ ಸಣ್ಣ ರೈತರು ಉಗಮವಾಗಿ ಊಳಿಗಮಾನ್ಯ ಹಿಡಿತದಿಂದ ಮುಕ್ತವಾದರೆ ಮತ್ತೊಂದೆಡೆ ಅಪಾರ ಸಂಖ್ಯೆಯಲ್ಲಿ ಸೇರುತ್ತಿದ್ದ ಶೋಷಿತ ಜಾತಿಗಳಾದ ಬೇಡ, ಕುರುಬ, ಈಡಿಗ, ಒಕ್ಕಲಿಗ ಮತ್ತು ಲಿಂಗಾಯಿತ ರೈತ ಮಕ್ಕಳು ಜಾತಿ ಶೋಷಣೆಯಿಂದಲೂ ಸ್ವಲ್ಪ ಮಟ್ಟಿಗೆ ಬಿಡುಗಡೆ ಹೊಂದಿದರು.
"ಕೃಷಿ ವಿಸ್ತರಣೆ"
ಅದೇ ರೀತಿ ಬೀಳು ಬಿದ್ದಿದ್ದ ಸಾವಿರಾರು ಎಕರೆ ಭೂಮಿಯನ್ನು ಟಿಪ್ಪು ಕೃಷಿ ಯೋಗ್ಯ ಮಾಡಲು ಶ್ರಮಿಸಿದ. ನಿಕಿಲಸ್ ಗುಹಾ ಎಂಬುವವರು ಬರೆಯುವಂತೆ:
"ಟಿಪ್ಪು ತನ್ನ ಸಾಮ್ರಾಜ್ಯದಲ್ಲಿ ಕೃಷಿ ವಿಸ್ತರಣೆಯ ಬಗ್ಗೆಯೂ ಹಲವಾರು ಕ್ರಮಗಳನ್ನು ಕೈಗೊಂಡ. ಹತ್ತು ಹಲವು ವರ್ಷಗಳಿಂದ ಬೀಳು ಬಿದ್ದಿದ್ದ ಭೂಮಿಯನ್ನು ರೈತರಿಗೆ ಕೂಲಿಯ ಆಧಾರದಲ್ಲಿ ಉಳಲು ನೀಡಲಾಗುತ್ತಿತ್ತು. ಮೊದಲ ವರ್ಷದಲ್ಲಿ ಅದರ ಮೇಲೆ ಯಾವುದೇ ತೆರಿಗೆಯನ್ನು ವಿಧಿಸುತ್ತಿರಲಿಲ್ಲ. ಅದೇ ರೀತಿ ಬೆದ್ದಲು ಹಾಗೂ ಬೆಟ್ಟ-ಗುಡ್ಡಗಳ ಜಮೀನನ್ನು ರೈತರಿಗೆ ಹಂಚಿ ತೆರಿಗೆ ರಹಿತವಾಗಿ ಉಳುಮೆಗೆ ಅವಕಾಶ ನೀಡಿ ಉತ್ತೇಜಿಸಲಾಗುತ್ತಿತ್ತು. ಒಂದು ಅಂದಾಜಿನಂತೆ ಹೈದರಾಲಿಯೊಬ್ಬನೇ ಯುದ್ದದ ನಂತರ ಮದ್ರಾಸಿನ ಪ್ರಾಂತ್ಯಗಳಿಂದ 60,000 ಕುಟುಂಬಗಳನ್ನು ಈ ಹೊಸ ವಿಸ್ತರಣಾ ಭೂಮಿಯಲ್ಲಿ ನೆಲೆಗೊಳಿಸಿ ಕೃಷಿ ವಿಸ್ತರಣೆಗೆ ಕಾರಣನಾಗಿದ್ದ. ಹೀಗೆ ಪಾಳೆಗಾರಿ ದಮನ, ಜಾಗೀರು ರದ್ದತಿ, ಮಠ-ಮಾನ್ಯಗಳ ಭೂಮಿಯ ವಂಶ ಪಾರಂಪರ್ಯ ಪಟೇಲಗಿರಿ -ಶಾನುಭೋಗಗಿರಿಯ ಬದಲಾವಣೆ, ಸೈನಿಕರಿಗೆ ಜಮೀನು, ಶೋಷಿತ-ದಮನಿತ ರೈತರು ವಲಸೆ ಬಂದು ಸ್ವತಂತ್ರವಾಗಿ ಕೃಷಿ ಚಟುವಟಿಕೆ ಕೈಗೊಳ್ಳಲು ಉತ್ತೇಜನ-ಇವುಗಳು ಕರ್ನಾಟಕದ ಬದುಕಿನಲ್ಲಿ ಬೃಹತ್ ಪ್ರಗತಿಪರ ಬದಲಾವಣೆ ತಂದು ಕರ್ನಾಟಕವನ್ನು ಐತಿಹಾಸಿಕ ಪ್ರಗತಿಯೆಡೆ ಮುನ್ನಡೆಸಿದವು ಹಾಗೂ ನೇರವಾಗಿ ರೈತಾಪಿಯನ್ನು ಊಳಿಗಮಾನ್ಯ ಶೋಷಣೆಯಿಂದ ಪಾರುಮಾಡಿ ಸ್ವತಂತ್ರಗೊಳಿಸಿದವು. ಕರ್ನಾಟಕದ ಇತಿಹಾಸದಲ್ಲೇಕೆ ಇಡೀ ಭಾರತದ ಇತಿಹಾಸದಲ್ಲಿ ಪ್ರಭುತ್ವವೊಂದು ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹಾಗೂ ಅಮೂಲಾಗ್ರವಾಗಿ ರೈತಾಪಿಯ ಬದುಕನ್ನೇ ಬದಲಾಯಿಸಿದ ಮತ್ತೊಂದು ಉದಾಹರಣೆಯಿಲ್ಲ".
ಈ ರೀತಿಯಲ್ಲಿ ಕೃಷಿ ಸುಧಾರಣೆ, ನೀರಾವರಿ, ಹೊಸ ತಳಿಗಳ ಪ್ರಚಾರ, ವಾಣಿಜ್ಯ ಕೃಷಿ ವಿಸ್ತರಣೆ ಹಾಗೂ ರೈತರಿಗೆ ತಕಾವಿ ಕೃಷಿ ಸಾಲ ಇವುಗಳ ಭೂ-ಆಸ್ತಿ ಸಂಬಂಧಗಳಲ್ಲೂ ವಿಶೇಷ ಪರಿಣಾಮ ಹಾಗೂ ಪ್ರಭಾವವನ್ನು ಉಂಟುಮಾಡಿದವು. ಕರ್ನಾಟಕದ ಜನತೆಯ ಹೋರಾಟಗಳ ಇತಿಹಾಸವನ್ನು ಸಮಗ್ರವಾಗಿ ಕಟ್ಟಿಕೊಟ್ಟಿರುವ "ಮೇಕಿಂಗ್ ಹಿಸ್ಟರಿ" ಎಂಬ ಪುಸ್ತಕದಲ್ಲಿ ಕ್ರಾಂತಿಕಾರಿ ವಿದ್ವಾಂಸ ಸಾಕೇತ್ ರಾಜನ್ ವಿವರಿಸುವಂತೆ:
ಟಿಪ್ಪುವಿನ ಈ ಎಲ್ಲಾ ಕ್ರಮಗಳಿಂದ ಕರ್ನಾಟಕದಲ್ಲಿ ಊಳಿಗೆಮಾನ್ಯತೆಯ ಆಧಾರವಾಗಿದ್ದ ಭೂಮಿಯ ಒಡೆತನದ ಮೇಲೆ ಊಳಿಗಮಾನ್ಯ ವರ್ಗಗಳ ಸಂಪೂರ್ಣ ಏಕಸ್ವಾಮ್ಯವನ್ನು ಮುರಿಯಿತು. ಅದರ ಜಾಗದಲ್ಲಿ 3 ರಿಂದ 4 ಲಕ್ಷ ರೈತರೇ ಭೂ ಒಡೆಯರಾಗಿ ಸಣ್ಣ ರೈತ ಹಿಡುವಳಿಗಳು ಹುಟ್ಟಿಕೊಂಡರು. ಟಿಪ್ಪುವಿನ ಕಾನೂನಿನಂತೆ ಆ ಭೂಮಿಯಿಂದ ಯಾರೂ ರೈತರನ್ನು ಸ್ಥಳಾಂತರಿಸುವಂತಿರಲಿಲ್ಲ. ಈ ಬಗೆಯ, ರೈತ ಖಾಸಗಿ ಆಸ್ತಿ ಹಿಡುವಳಿಯು ಭೂ-ಮಾಲೀಕ ವರ್ಗಗಳ ರಾಜಕೀಯ-ಆರ್ಥಿಕ ಏಕಸ್ವಾಮ್ಯಕ್ಕೆ ಬಲವಾದ ಪೆಟ್ಟು ಕೊಟ್ಟಿತು.
ಮೇಲಿನ ವಿವರಗಳು ಸ್ಪಷ್ಟಪಡಿಸುವಂತೆ, ಈ ಎಲ್ಲಾ ಸಾಮಾಜಿಕ-ಆರ್ಥಿಕ ಬದಲಾವಣೆಗಳ ಪ್ರಧಾನ ಫಲಾನುಭವಿಗಳು ದಲಿತರು ಮತ್ತು ಶೂದ್ರ ರೈತಾಪಿಗಳು.
"ಟಿಪ್ಪು ಎಂದರೆ ರೈತರಿಗೆ ಪಂಜು- ಸಂಘಿಗಳಿಗೆ ಮಾತ್ರ ಉರಿನಂಜು"
ರೈತರಿಗೆ ಟಿಪ್ಪುವಿನ ಬಗ್ಗೆ ಅಭಿಮಾನ, ವಿಶ್ವಾಸ ಮತ್ತು ನಿಷ್ಠೆ ಇತ್ತೇ ವಿನಹ ನಂಜಾಗಲಿ, ಉರಿಯಾಗಲೀ ಇರಲಿಲ್ಲ.
ಹೀಗಾಗಿಯೇ ಟಿಪ್ಪುವಿನ ಸೈನ್ಯದಲ್ಲಿ ರೈತ ಮಕ್ಕಳು ಭರ್ತಿಯಾಗುತ್ತಿದ್ದದ್ದು ಬಾಡಿಗೆ ಕೂಲಿಗಳಾಗಲ್ಲ. ಬದಲಿಗೆ ಟಿಪ್ಪುವಿನ ಈ ರೈತ ಪರ ಸಾಮ್ರಾಜ್ಯದ ಉಳಿವಿನಲ್ಲೇ ತಮ್ಮ ಏಳಿಗೆಯೆಂದು ಸೈನಿಕರಾಗುತ್ತಿದ್ದರು. ಹಾಗೂ ಬ್ರಿಟಿಶ್ ವಸಾಹತುಶಾಹಿಗಳ ವಿರುದ್ಧ ತಮ್ಮ ಸಮಸ್ತವನ್ನು ಪಣವಾಗಿಟ್ಟು ಹೋರಾಡುತ್ತಿದ್ದರು. ಉಳಿದೆಲ್ಲಾ ರಾಜ ಸಂಸ್ಥಾನಗಳನ್ನು ಸೋಲಿಸಿದ ನಂತರ ಬ್ರಿಟಿಷರು ಆ ಸಂಸ್ಥಾನದ ಸೈನ್ಯವನ್ನು ತಮ್ಮ ಭರ್ತಿ ಮಾಡಿಕೊಳ್ಳುತ್ತಿದ್ದರು.
ಆದರೆ ಟಿಪ್ಪುವಿನ ಸೈನ್ಯವನ್ನು ಮಾತ್ರ ಬ್ರಿಟಿಷರು ಬರ್ಖಾಸ್ತು ಮಾಡಿದರು. ಅದಕ್ಕೆ ಕಾರಣ ಟಿಪ್ಪುವಿನ ಸೈನ್ಯ ಪಕ್ಕಾ ನಾಡಪ್ರೇಮಿ, ರೈತ ಪ್ರೇಮಿ ರೈತ ಸೈನ್ಯವಾಗಿತ್ತು. ಆದ್ದರಿಂದಲೇ ಟಿಪ್ಪುವಿನ ಪತನಾನಂತರವೂ ಹಲವಾರು ಟಿಪ್ಪು ಸೈನಿಕರು ಒಕ್ಕಲುತನದಲ್ಲಿದ ಹಲವಾರು ಸಮುದಾಯಗಳು ಬೆಂಬಲದೊಂದಿಗೆ ನಾಡಿನಾದ್ಯಂತ ಬ್ರಿಟಿಷರ ವಿರುದ್ಧ ಸಮರ ಮುಂದುವರೆಸುತ್ತಾರೆ.
ಇದು ಒಕ್ಕಲು ಸಮುದಾಯಗಳಿಗೂ, ಟಿಪ್ಪುವಿಗೂ ಇದ್ದ ಅವಿನಾಭವ ಸಂಬಂಧ.
ಈ ಸಂಬಂಧದಲ್ಲಿ ಜನಿಸಿದ್ದು ನಾಡಪ್ರೇಮ, ಸಂಗ್ರಾಮವೇ ಹೊರತು ಉರಿನಂಜುಗಳಲ್ಲ.
ಈ ಸಾಮಾಜಿಕ ಹಿನ್ನೆಲೆಯ ಮುಂದುವರೆಕೆಯಾಗಿಯೇ 20 ನೇ ಶತಮಾನದಲ್ಲಿ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರು ಬ್ರಾಹ್ಮಣಶಾಹಿ ಮೇಲಾಧಿಪತ್ಯದ ವಿರುದ್ಧ ಅಬ್ರಾಹ್ಮಣ ರಾಜಕೀಯಕ್ಕೆ ಪೋಷಣೆ ನೀಡುತ್ತಾರೆ. ಆ ಮೈತ್ರಿಯಲ್ಲೂ ಒಕ್ಕಲಿಗ-ಮುಸ್ಲಿಂ ಮೈತ್ರಿ ಪ್ರಧಾನವಾದ ಪಾತ್ರ ವಹಿಸಿದೆ. ಸ್ವಾತಂತ್ರ್ಯ ನಂತರದ ಕರ್ನಾಟಕ ರಚನೆಯಾದ ನಂತರವೂ ಜನ ಚಳವಳಿಗಳಲ್ಲಿ, ಹೊಸ ರಾಜಕಾರಣದ ಸಮೀಕರಣಗಳಲ್ಲಿ ಈ ಸೌಹಾರ್ದತೆ ಮುಂದುವರೆದಿದೆ. ಆದ್ದರಿಂದಲೇ ಸಂಘಿಗಳ ಕೋಮು ಧ್ರುವೀಕರಣ ರಾಜಕಾರಣ ಟಿಪ್ಪುವಿನ ಮೈಸೂರಿನಲ್ಲಿ ಸಫ಼ಲವಾಗುತ್ತಿಲ್ಲ.
ಈ ಕಾರಣಕ್ಕಾಗಿಯೇ ಸಂಘಿಗಳಿಗೆ ಟಿಪ್ಪು ಎಂದರೆ ಉರಿನಂಜು. ಆದರಿಂದಲೇ ಅವರು ಟಿಪ್ಪುವನ್ನು ನಿರತರವಾಗಿ ದುರುಳೀಕರಿಸುವ ಪ್ರಯತ್ನಗಳನ್ನು ನಡೆಸಿದ್ದಾರೆ. ಹೀಗೆ ಟಿಪ್ಪುವನ್ನು ಕಂಡರೆ ಅಗಲೂ- ಈಗಲೂ ಉರಿನಂಜುಗಳು ಇರುವುದು ಬ್ರಾಹ್ಮಣಶಾಹಿಗಳಿಗೇ. ಅದರ ರಾಹು ಬಡಿದಿರುವ ಶೂದ್ರ ಸಮುದಾಯದ ಅಸ್ವಸ್ಥ ನವಬ್ರಾಹ್ಮಣಶಾಹಿಗಳಿಗೆ.
ಆದ್ದರಿಂದಲೇ ಟಿಪ್ಪುವನ್ನು ವಿಲನ್ ಆಗಿಸುವ ಮೂಲಕ ಸಂಘ ಪರಿವಾರ ದಾಳಿ ಮಾಡುತ್ತಿರುವುದು ರೈತಾಪಿ ಬದುಕಿನ ಮೇಲೆ. ಬ್ರಾಹ್ಮಣಶಾಹಿಗೆ ಸಡ್ಡು ಹೊಡೆದು ನಿಂತಿದ್ದ ಒಕ್ಕಲಿಗರ ಸ್ವಾಭಿಮಾನದ ಮೇಲೆ. ಈ ನಾಡನ್ನು ಕಟ್ಟಿದ್ದ ಸೌಹಾರ್ದ ನಾಗರಿಕತೆ ಯ ಮೇಲೆ.
-ಈ ಉರಿನಂಜುಗಳಿಂದ ಈ ನಾಡನ್ನು ಉಳಿಸಿಕೊಳ್ಳೋಣ!
(ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು.)
ಕೃಪೆ: ವಾರ್ತಾಭಾರತಿ