ಉರಿಗೌಡ, ನಂಜೇಗೌಡ ಹೆಸರುಗಳ ಸೃಷ್ಟಿಯ ಹಿಂದಿರುವ ಒಕ್ಕಲಿಗ ವಿರೋಧಿ ಮನಸ್ಥಿತಿ?

"ವಾಟ್ಸ್ಯಾಪ್ ಯೂನಿವರ್ಸಿಟಿ" ರಾತ್ರಿ ಬೆಳಗಾಗುವದರೊಳಗಾಗಿ ದೇಶದ ಇತಿಹಾಸವನ್ನು ಅದು ಹೇಗೆ ಬದಲಾಯಿಸಬಲ್ಲುದು ಎಂಬುದಕ್ಕೆ ದೇಶದ ಪ್ರಧಾನಿಯವರನ್ನು ಸ್ವಾಗತಿಸಲು ಮಂಡ್ಯದಲ್ಲಿ ನಿರ್ಮಿತಗೊಂಡಿರುವ ಟಿಪ್ಪುವನ್ನು ಕೊಂದರೆಂಬ ಉರಿಗೌಡ, ನಂಜೇಗೌಡ ಎಂಬ ಈ ಇತಿಹಾಸದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದ ಕಪೋಲಕಲ್ಪಿತ ವ್ಯಕ್ತಿಗಳ ಹೆಸರಿನ ಕಮಾನು ಸಾಕ್ಷಿಯಾಗಬಲ್ಲುದು.

- ಈ ಕುರಿತಾದ ಜನಪ್ರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ನವೀನ್ ಸೂರಿಂಜೆರವರ ಕಿರುಬರಹ.

ಮಂಡ್ಯ ಎನ್ನುವುದು ಸ್ವಾತಂತ್ರ್ಯ ಚಳವಳಿಯಲ್ಲಿ ದೊಡ್ಡ ಹೆಸರು. ಬ್ರಿಟೀಷರ ಎದೆ ನಡುಗಿಸಿದ ಸ್ವಾತಂತ್ರ್ಯ ಚಳವಳಿ ಈ ನೆಲದಲ್ಲಿ ನಡೆದಿತ್ತು. ಇಂತಹ ಮಂಡ್ಯಕ್ಕೆ ಈ ದೇಶದ ಪ್ರಧಾನಿ ಆಗಮಿಸುವಾಗ ಸ್ವಾಗತ ಧ್ವಾರ ನಿರ್ಮಿಸಲು ಒಬ್ಬ ಅಸಲಿ ಸ್ವಾತಂತ್ರ್ಯ ಹೋರಾಟಗಾರನ ಹೆಸರು ನೆನಪಿಗೆ ಬರಲಿಲ್ಲವೇ? ಪ್ರಧಾನಿ ಬಿಜೆಪಿಯವರೇ ಆಗಿರಲಿ, ಸುಳ್ಳುಕೋರನೇ ಆಗಲೀ. "ದೇಶದ ಪ್ರಧಾನಿ ಮಂಡ್ಯ ಜಿಲ್ಲೆಗೆ ಬಂದಿದ್ದರು" ಎಂಬುದು ಇತಿಹಾಸದ ಪುಟದಲ್ಲಿ ಉಳಿಯುತ್ತದೆ. ಅಂತಹ ಇತಿಹಾಸದ ಪುಟದಲ್ಲಿ ಒಕ್ಕಲಿಗರ ಅವಹೇಳನ ಸೇರ್ಪಡೆಗೊಳ್ಳುವುದು ಸರಿಯೇ ?

ಉರಿಗೌಡ ನಂಜೇಗೌಡ ಎಂಬುವರು ಟಿಪ್ಪುವನ್ನು ಕೊಂದರು ಎಂದು ಯಾವ ಇತಿಹಾಸದ ದಾಖಲೆಗಳೂ ಹೇಳುವುದಿಲ್ಲ. ಉರಿ ಮತ್ತು ನಂಜು ಎಂಬ ಹೆಸರನ್ನು ಸೃಷ್ಟಿಸಿರುವ ಹಿಂದೆ 'ಒಕ್ಕಲಿಗ ವಿರೋಧಿ ಮನಸ್ಥಿತಿ' ಇರುವುದು ಸ್ಪಷ್ಟ. ಟಿಪ್ಪು ಬ್ರಿಟೀಷರ ವಿರುದ್ದ ಹೋರಾಟ ಮಾಡುತ್ತಿರುವಾಗ ಒಕ್ಕಲಿಗರು ಟಿಪ್ಪುವನ್ನು ಕೊಂದರು ಎನ್ನುವ ಮೂಲಕ ಏಕಕಾಲದಲ್ಲಿ ಒಕ್ಕಲಿಗರನ್ನು ದೇಶದ್ರೋಹಿಗಳನ್ನಾಗಿಯೂ, ಕೋಮುವಾದಿಯನ್ನಾಗಿಯೂ ಮಾಡುವ ಕುತಂತ್ರವಲ್ಲದೇ ಇನ್ನೇನೂ ಅಲ್ಲ.

ಪ್ರಧಾನಿಯೊಬ್ಬರು ಜಿಲ್ಲೆಗೆ ಬಂದಾಗ ಅವರನ್ನು ಸ್ವಾಗತಿಸಲು ಆ ನೆಲದ ವೀರರ ಹೆಸರುಗಳನ್ನು ದ್ವಾರಕ್ಕೆ ಇಡುವುದು ವಾಡಿಕೆ. ಸ್ವಾತಂತ್ರ್ಯ ಪೂರ್ವದ ಹೆಸರುಗಳೇ ಬೇಕಾಗಿದ್ದರೆ "ಶಿವಪುರ ಮಹಾದ್ವಾರ" ಎಂದು ಹೆಸರಿಡಬಹುದಿತ್ತು.

ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳವಳಿಯ ದಿಕ್ಕುದೆಸೆ ಬದಲಿಸಿದ್ದು ಹಳೇ ಮೈಸೂರು ಭಾಗದ ಮಂಡ್ಯದ ಜಿಲ್ಲೆಯ ಮದ್ದೂರಿನ ಶಿವಪುರದ ಸತ್ಯಾಗ್ರಹ ಸೌಧ. ಕರ್ನಾಟಕದಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿದ್ದೇ ಇಲ್ಲಿ. ಅಂದಿನ ಬ್ರಿಟೀಷ್ ಜಿಲ್ಲಾಧಿಕಾರಿಯು ಈ ದ್ವಜಾರೋಹಣಕ್ಕೆ ನಿಷೇದ ಹೇರಿದ್ದರಂತೆ. ಆದರೂ ನಿಷೇಧ ಉಲ್ಲಂಘಿಸಿ ಹೋರಾಟಗಾರರಾದ ಎಚ್.ಕೆ.ವೀರಣ್ಣಗೌಡ, ಗೋಪಾಲ ಶೆಟ್ಟಿ, ಸಾಹುಕಾರ್ ಚೆನ್ನಯ್ಯ, ಎಂ.ಜಿ.ಬಂಡಿಗೌಡರು ಸೇರಿದಂತೆ ಹಲವಾರು ದ್ವಜಾರೋಹಣ ನಡೆಸಿದ್ದರಂತೆ. ! 1938 ಏಪ್ರಿಲ್ 09, 10, 11 ರಂದು ಮೂರು ದಿನಗಳ ಕಾಲ ಶಿವಪುರದಲ್ಲಿ ಸತ್ಯಾಗ್ರಹ ನಡೆದಿತ್ತಂತೆ. ಈ ಸ್ವಾತಂತ್ರ್ಯ ಸತ್ಯಾಗ್ರಹದಲ್ಲಿ 40 ಸಾವಿರ ಜನರು ಪಾಲ್ಗೊಂಡಿದ್ದರಂತೆ. ಇಂತಹ ಐತಿಹಾಸಿಕ ಸ್ವಾತಂತ್ರ್ಯದ ನೆಲದಲ್ಲಿ ಕುಹಕಕ್ಕಾಗಿ ಸೃಷ್ಟಿಸಿಕೊಂಡ ನಕಲಿ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಪ್ರಧಾನಿ ಸ್ವಾಗತ ದ್ವಾರಕ್ಕೆ ಇಡುವುದು ಎಷ್ಟು ಸರಿ?

ಪ್ರಧಾನಿ ಸ್ವಾಗತ ದ್ವಾರಕ್ಕೆ ಒಕ್ಕಲಿಗ ಸ್ವಾತಂತ್ರ್ಯ ಹೋರಾಟಗಾರರ ಹೆಸರೇ ಬೇಕಾಗಿದ್ದಲ್ಲಿ ಎಚ್ ಕೆ ವೀರಣ್ಣ ಗೌಡ, ಹೆಚ್ ಜಿ ಮಾದೇಗೌಡ, ಎಂ ಜಿ ಬಂಡೀಗೌಡರ ಹೆಸರುಗಳನ್ನು ಇಡಬಹುದಿತ್ತು. ಪ್ರಧಾನಿಗಳು ಯಾವ ಸಿದ್ದಾಂತಿಯೇ ಆಗಿರಲಿ. ಅವರು ಮಂಡ್ಯಕ್ಕೆ ಬಂದಿದ್ದರು ಎಂಬ ಅಂಶವನ್ನು ಯಾವುದೋ ಒಂದು ಕಾರಣಕ್ಕೆ ಇನ್ನೊಂದು ಐವತ್ತು ವರ್ಷದ ಬಳಿಕ ಓದುವಾಗ ಒಕ್ಕಲಿಗರಿಗೆ ಅವಮಾನ ಆಗುವಂತಿರಬಾರದಲ್ಲವೇ ? ಅದಕ್ಕಾಗಿ ಒಕ್ಕಲಿಗರು ಅಥವಾ ಮಂಡ್ಯದವರು "ಉರಿ-ನಂಜಿ ಗೌಡ ಎಂಬ ಒಕ್ಕಲಿಗರನ್ನು ಅವಮಾನಿಸುವ ದ್ವಾರ"ವನ್ನು ಕಿತ್ತೆಸೆಯಲು ಒತ್ತಾಯಿಸಬೇಕಲ್ಲವೇ ?


ಈ ಕುರಿತು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಟ್ವೀಟ್:

ಟಿಪ್ಪು ಸಲ್ತಾನ ಮತ್ತು ಒಕ್ಕಲಿಗರ ನಡುವಿನ ಸಂಬಂಧಗಳೇನು? ಉರಿಗೌಡ, ನಂಜೇಗೌಡ ಪಾತ್ರಗಳನ್ನು ಸೃಷ್ಠಿಸಿ ಒಕ್ಕಲಿಗರನ್ನು ದೇಶದ್ರೋಹಿಗಳೆಂದು ಬಿಂಬಿಸುವ ಒಕ್ಕಲಿಗ ವಿರೋಧಿ ಮನಸ್ಥಿತಿಯ ಸಂಚು ಅಡಗಿದೆಯೇ?

"ಟಿಪ್ಪು ಸುಲ್ತಾನ್ ನನ್ನು ಗೌಡರು ಕೊಂದರು" ಎಂದು ಸಂಘಪರಿವಾರ ಹೊಸ ಕತೆಯನ್ನು ಸೃಷ್ಟಿಸುವುದರ ಹಿಂದೆ , ಒಕ್ಕಲಿಗರನ್ನು ದೇಶದ್ರೋಹಿಗಳು ಎಂದು ಬಿಂಬಿಸುವ ಗುಪ್ತ ಕಾರ್ಯಸೂಚಿ (ಹಿಡೆನ್ ಅಜೆಂಡಾ) ಹೊಂದಿದೆ. ಮುಂದಿನ ಪೀಳಿಗೆಯು ಇತಿಹಾಸವನ್ನು ಅಧ್ಯಯನ ಮಾಡುವಾಗ ಒಕ್ಕಲಿಗರು ಬ್ರಿಟೀಷರ ಜೊತೆ ಇದ್ದರು ಎಂಬ ಸುಳ್ಳು ಅಂಶ ಇರಕೂಡದು ಎಂದಿದ್ದರೆ ಸಂಘಪರಿವಾರದ ಈ ಹಿಡನ್ ಅಜೆಂಡಾವನ್ನು ಈಗಿಂದೀಗಲೇ ಒಕ್ಕಲಿಗ ಸಮುದಾಯ ವಿರೋಧಿಸಬೇಕು.

ನಮ್ಮ ನಾಡಿನ ಹೆಮ್ಮೆಯ ಒಕ್ಕಲಿಗರು ಟಿಪ್ಪುವಿನಂತೆಯೇ ಬ್ರಿಟೀಷರ ವಿರುದ್ಧವಿದ್ದರು. ಬ್ರೀಟಿಷರ ಪರವಿದ್ದಾರೆ ಎಂಬ ಅನುಮಾನದಲ್ಲಿ ಕೊಡವರು, ಕ್ರಿಶ್ಚಿಯನ್ನರು, ನಾಯರ್ ಗಳನ್ನು ಟಿಪ್ಪು ವಿಚಾರಣೆ ನಡೆಸಿದ್ದ ಮತ್ತು ಅವರ ಮೇಲೆ ನಿಗಾ ಇರಿಸುತ್ತಿದ್ದ ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆಯೇ ಹೊರತು ಒಕ್ಕಲಿಗರನ್ನು ಟಿಪ್ಪು ಟಾರ್ಗೆಟ್ ಮಾಡಿದ ದಾಖಲೆಗಳು ಎಲ್ಲಯೂ ಸಿಗುವುದಿಲ್ಲ. ಹಾಗೆ ನೋಡಿದರೆ ಒಕ್ಕಲಿಗರು ಅಥವಾ ಬಂಟರು ಶಿಫಾರಸ್ಸು ಮಾಡಿದರೆ ಟಿಪ್ಪು ಯಾರ ಮೇಲಿನ ದಾಳಿಯನ್ನಾದರೂ ನಿಲ್ಲಿಸಿಬಿಡುತ್ತಿದ್ದ. ಬ್ರಿಟೀಷರು ಚರ್ಚ್ ಕಟ್ಟುತ್ತಿದ್ದಾರೆ ಎಂಬ ಅನುಮಾನದಲ್ಲಿ ಕ್ರಿಶ್ಚಿಯನ್ ಚರ್ಚ್ ಮೇಲೆ ಟಿಪ್ಪು ದಾಳಿ ಮಾಡಿದಾಗ ಒಕ್ಕಲಿಗರಾಗಿರುವ ಬಂಟರ ಮನವಿ ಮೇರೆಗೆ ದಾಳಿಯನ್ನೇ ಕೈ ಬಿಟ್ಟ ಉದಾಹರಣೆಗಳು ನಮ್ಮ ಮುಂದಿವೆ.

ಹಾಗೆ ನೋಡಿದರೆ ಟಿಪ್ಪು ಕಾಲದಲ್ಲಿ ಒಕ್ಕಲಿಗರು ಪ್ರತಿಷ್ಠೆಯ ಜೀವನ ನಡೆಸಿದ್ದರು. ಬ್ರಾಹ್ಮಣರ ಶಾನುಭೋಗ ವ್ಯವಸ್ಥೆಯನ್ನು ರದ್ದು ಮಾಡಿ "ಊರ ಗೌಡ" ಪದ್ದತಿಯನ್ನು ಜಾರಿಗೆ ತಂದಿದ್ದನು. ಬ್ರಾಹ್ಮಣರು ಶಾನುಭೋಗರಾಗಿದ್ದರೆ ಒಕ್ಕಲಿಗರು ಮತ್ತಿತರ ಜಾತಿಗಳು ಬ್ರಾಹ್ಮಣರ ಮನೆಯಲ್ಲಿ ಬಿಟ್ಟಿ ಚಾಕರಿ ಮಾಡಬೇಕಿತ್ತು. ಬ್ರಾಹ್ಮಣರಿಗೆ ಉಚಿತವಾಗಿ ಕೃಷಿ ಉತ್ಪನ್ನಗಳನ್ನು ಕೊಡಬೇಕಿತ್ತು. ಇದು ಕೃಷಿ ಮೇಲೆ ಪರಿಣಾಮ ಬಿದ್ದು ಆರ್ಥಿಕ ವ್ಯವಸ್ಥೆ ಹಾಳಾಗುತ್ತಿತ್ತು. ಹಾಗಾಗಿ ಕೃಷಿಕರೇ ಊರ ಗೌಡನಾಗಿರಬೇಕು ಎಂದು ಆದೇಶ ಹೊರಡಿಸಿದ. ಕಂದಾಯ ಲೆಕ್ಕಪತ್ರ ನೋಡಲು ಅಕ್ಷರಾಭ್ಯಾಸ ಇದ್ದ ಬ್ರಾಹ್ಮಣರ ಅವಶ್ಯಕತೆ ಇದ್ದಿದ್ದರಿಂದ ಬ್ರಾಹ್ಮಣರನ್ನು ಸಂಬಳಕ್ಕೆ ಕುಲಕರ್ಣಿಗಳನ್ನಾಗಿ ನೇಮಿಸಿದ. ಕುಲಕರ್ಣಿಗಳಿಗೆ ಸಂಬಳವನ್ನು ಊರ ಗೌಡರೇ ಕೊಡಬೇಕಿದ್ದರಿಂದ ಗೌಡರು ಸಾಮಾಜಿಕ ಪ್ರತಿಷ್ಟೆಯನ್ನು ಉಳಿಸಿಕೊಂಡಿದ್ದರು.

ಟಿಪ್ಪುವಿನ ಸೈನ್ಯದಲ್ಲಿ ಮೈಸೂರು, ಮಂಡ್ಯ ಭಾಗದ ಒಕ್ಕಲಿಗ ಮತ್ತು ಕುರುಬರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆ ಕಾರಣಕ್ಕಾಗಿ ಸೈನಿಕರಿಗೆ ಭೂಮಿ ನೀಡುವ ಯೋಜನೆ ಜಾರಿಗೆ ತಂದ. ಇದರ ದೊಡ್ಡ ಫಲಾನುಭವಿಗಳು ಒಕ್ಕಲಿಗರು.

ಪಾಳೇಗಾರ ವ್ಯವಸ್ಥೆಯನ್ನು ನಾಶ ಮಾಡಿ ಸಾಮಾನ್ಯ ಒಕ್ಕಲಿಗರಿಗೆ ಭೂಮಿಯನ್ನು ಹಂಚಿದ‌. ಹಾಗಾಗಿಯೇ ಭೂ ರಹಿತ ಒಕ್ಕಲಿಗರೇ ಇಲ್ಲವೇನೋ ಎನ್ನುವಂತೆ ಒಕ್ಕಲಿಗರು ಕೃಷಿಯಲ್ಲಿ ಅಭಿವೃದ್ದಿಯನ್ನು ಕಂಡರು. ಕೃಷಿಕರು ಅಂದರೆ ಒಕ್ಕಲಿಗರು ಎಂಬಷ್ಟು ಕೃಷಿ ಉತ್ಪಾದನೆಯಲ್ಲಿ ಹಿಡಿತ ಸಾಧಿಸಿದರು.

ಟಿಪ್ಪುವಿನ ಕಾಲದಲ್ಲಿ ಸೈನಿಕರಿಗೆ ಭೂಮಿ ಮತ್ತು ಉತ್ತಮ ಸಂಬಳ ದೊರಕುವುದರ ಜೊತೆಗೆ ಸಾಮಾಜಿಕ ಸ್ಥಾನಮಾನಗಳೂ ಸಿಕ್ಕಿರುವಾಗ ಒಕ್ಕಲಿಗರು ಯಾಕೆ ಬ್ರಿಟೀಷರ ಸೈನ್ಯ ಸೇರುತ್ತಾರೆ ?

ಇತಿಹಾಸದಲ್ಲಿ ಘಟಿಸದೇ ಇರುವ ಘಟನೆಯನ್ನು ಸೃಷ್ಟಿಸಿ ಟಿಪ್ಪು ಕೊಂದ ವೀರರೆಂದು ಒಕ್ಕಲಿಗರನ್ನು ಹೊಗಳುವುದರ ಹಿಂದೆ ಒಕ್ಕಲಿಗರನ್ನು ದೇಶದ್ರೋಹಿಗಳು ಅಥವಾ ಬ್ರಿಟೀಷರ ಏಜೆಂಟರೆಂದು ಬಿಂಬಿಸುವ ಬ್ರಾಹ್ಮಣ್ಯದ ಸಂಚು ಅಡಗಿದೆ ಎಂಬುದು ತಿಳಿದಿರಲಿ.