Advertisement

ಅಂಬಾನಿ, ಅದಾನಿಗಳ ಸಾಲಮನ್ನಾ ಮಾಡುವ ಬಿಜೆಪಿ ಕಡುಬಡವರ ಮೇಲೆ ವಿಪರೀತ ತೆರಿಗೆ ಹೇರುತ್ತಿದೆ: ಸಿದ್ದರಾಮಯ್ಯ

Advertisement

"ಹಿಂದುಳಿದ ವರ್ಗದ ಬಡವರು, ದಲಿತರು, ಅಲ್ಪಸಂಖ್ಯಾತರು, ರೈತರು, ಮಹಿಳೆಯರಿಗಾಗಿ ಬಿಜೆಪಿ ಸರ್ಕಾರ ಏನು ಮಾಡಿದೆ? ಅಂಬೆಡ್ಕರ್ ಸಂವಿಧಾನದ ಮೂಲಕ ಮಹಿಳೆಯರು ಮತ್ತು ಶೋಷಿತರಿಗೆ ಸಮಾನತೆಯ ಹಕ್ಕು ನೀಡಿದ್ದು ಕಾಂಗ್ರೆಸ್!"

"ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರ ಮಧ್ಯೆ ಅಸಮಾನತೆ ಇದ್ದರೆ ಶೋಷಣೆಗೆ ಅವಕಾಶವಾಗುತ್ತದೆ. ಹೀಗಾಗಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಪುರುಷರಿಗಿರುವಷ್ಟೇ ಹಕ್ಕುಗಳನ್ನು ಮಹಿಳೆಯರಿಗೂ ಸಂವಿಧಾನದ ಮೂಲಕ ನೀಡಿದ್ದಾರೆ. ಸಂವಿಧಾನ ಜಾರಿ ಬರುವ ಮೊದಲು ಈ ಸಮಾನತೆಯ ಹಕ್ಕುಗಳು ಇರಲಿಲ್ಲ, ಸ್ವಾತಂತ್ರ್ಯ ಬಂದ ನಂತರ ಲಿಂಗ ತಾರತಮ್ಯ ನಿಷೇಧ ಕಾಯ್ದೆ, ವಿಧವಾ ಪುನರ್‌ ವಿವಾಹ ಕಾಯ್ದೆ, ಆಸ್ತಿ ಹಕ್ಕಿನ ಕಾಯ್ದೆ, ಉದ್ಯೋಗದಲ್ಲಿ ಮೀಸಲಾತಿ ನೀಡುವ ಕಾಯ್ದೆ, ರಾಜಕೀಯ ಮೀಸಲಾತಿ ಕಾಯ್ದೆ ಹೀಗೆ ಈ ಎಲ್ಲಾ ಕಾಯ್ದೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್‌ ಸರ್ಕಾರವೇ ಹೊರತು ಬಿಜೆಪಿ ಅಲ್ಲ. ಬಿಜೆಪಿಯವರು ಯಾವತ್ತೂ ಕೂಡ ಮಹಿಳೆಯರಿಗೆ ನ್ಯಾಯಯುತ ಹಕ್ಕುಗಳನ್ನು ನೀಡುವ ಕೆಲಸ ಮಾಡಿಲ್ಲ. ಬಿಜೆಪಿಯವರು ಹೆಣ್ಣುಮಕ್ಕಳು ಮನೆಗಳಿಗೆ ಸೀಮಿತ ಎಂಬ ಮನಸ್ಥಿತಿ ಹೊಂದಿದ್ದಾರೆ. ದೇಶದಲ್ಲಿ ತಾರತಮ್ಯ ಹೋಗಬೇಕಾದರೆ ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲರಾಗಿರುವ ಜನರಿಗೆ ನ್ಯಾಯ ಕೊಡಿಸಿದಾಗ ಮಾತ್ರ ಸಾಧ್ಯ" ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಹೇಳಿದ್ದಾರೆ.

ಕೋಲಾರದ ವೇಮಗಲ್ ನಲ್ಲಿ ಆಯೋಜಿಸಿದ್ದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ, ಮಹಿಳಾ ಸಬಲೀಕರಣದಲ್ಲಿ ಕಾಂಗ್ರೆಸ್ ನ ಕೊಡುಗೆಗಳು ಮತ್ತು ಬಿಜೆಪಿ ಸರ್ಕಾರದ ಬೆಲೆಯೇರಿಕೆ ನೀತಿಯಿಂದಾಗಿ ನಾಡಿನ ತಾಯಂದಿರು ಎದುರಿಸುತ್ತಿರುವ ಕಷ್ಟ ನಷ್ಟಗಳ ಕುರಿತು ಅವರು ಮಾತನಾಡಿದರು.

"ಭಾರತದಲ್ಲಿ ಕೈಗಾರಿಕಾ ಕ್ಷೇತ್ರಗಳಲ್ಲಿ ಇಂದೂ ಕೂಡ ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣ ಕಡಿಮೆಯಿದೆ. ಹೀಗಾಗಿ ನಮ್ಮ ದೇಶದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿನ ಭಾಗವಹಿಸುವಿಕೆ 19% ಮಾತ್ರ ಇದೆ. ಬೇರೆ ದೇಶದಲ್ಲಿ ಈ ಪ್ರಮಾಣ 50 ರಿಂದ 80% ವರೆಗಿದೆ. ಈ ದೇಶದ ಜಿಡಿಪಿ ಜಾಸ್ತಿಯಾಗಬೇಕಾದರೆ ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕು, ಆ ಮೂಲಕ ಜನರ ಕೈಗೆ ಹಣ ಸಿಗುವಂತೆ ಮಾಡಬೇಕು. ನಮ್ಮದು ಕೃಷಿ ಪ್ರಧಾನವಾದ ದೇಶ, ಇಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿ ಕೃಷಿಯನ್ನು ಅವಲಂಬಿಸಿದೆ. ಈ ಕೃಷಿ ಮತ್ತು ಸಂಬಂಧಿತ ಕ್ಷೇತ್ರಕ್ಕೆ ಬಲ ತುಂಬದೇ ಹೋದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ" ಎಂದವರು ಪ್ರತಿಪಾದಿಸಿದ್ದಾರೆ.

"ಹಳ್ಳಿಗಾಡಿನಲ್ಲಿ ಸಂಸಾರದ ಜವಾಬ್ದಾರಿ ಹೊತ್ತಿರುವ ಹೆಣ್ಣು ಮಕ್ಕಳು ಬೆಲೆಯೇರಿಕೆಯಿಂದ ಕಂಗಾಲಾಗಿದ್ದಾರೆ. ಬಿಜೆಪಿ ಸರ್ಕಾರ ಸಾಮಾನ್ಯ ಜನರ ಮೇಲೆ ಹೆಚ್ಚು ತೆರಿಗೆ ವಿಧಿಸುವ ಪ್ರವೃತ್ತಿ ಬೆಳೆಸಿಕೊಂಡಿದೆ. ಹಾಲು, ಮೊಸರು, ಮಜ್ಜಿಗೆ, ಮಕ್ಕಳು ಬಳಕೆ ಮಾಡುವ ಪೆನ್ನು, ಪೆನ್ಸಿಲ್‌, ನೋಟ್‌ ಬುಕ್‌ ಗಳ ಮೇಲೆ 5 ರಿಂದ 18% ವರೆಗೆ ತೆರಿಗೆ ಹಾಕಿ ಜನರ ಸುಲಿಗೆ ಮಾಡುತ್ತಿದ್ದಾರೆ. ತೆರಿಗೆ ಕಟ್ಟುವ ಶಕ್ತಿಯಿರುವ ಜನರಿಂದ ತೆರಿಗೆ ವಸೂಲಿ ಮಾಡಬೇಕು, ಇದು ನ್ಯಾಯ ಕೂಡ. ಆದರೆ ಶ್ರೀಮಂತರ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಬಡವರಿಂದ ತೆರಿಗೆ ಹೆಚ್ಚು ವಸೂಲಿ ಮಾಡುವುದು ಈ ದೇಶಕ್ಕೆ ಮಾರಕವಾದುದ್ದು. ಬಂಡವಾಳಶಾಹಿಗಳ ಆದಾಯ ಪ್ರತೀ ವರ್ಷ ಹೆಚ್ಚಾಗುತ್ತಲೇ ಹೋಗುತ್ತಿದೆ, ಆದರೂ ಇಂಥವರ ಮೇಲಿರುವ ಸಾಲವನ್ನು ನರೇಂದ್ರ ಮೋದಿ ಅವರು ಮನ್ನಾ ಮಾಡಿದ್ದಾರೆ. ಉದ್ಯಮಿಗಳು, ಬಂಡವಾಳಶಾಹಿಗಳ ಸುಮಾರು 14 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದ್ದಾರೆ. ರೈತರು, ಮಹಿಳೆಯರು, ಬಡವರ ಒಂದು ರೂಪಾಯಿ ಸಾಲ ಮನ್ನಾ ಮಾಡಿದ್ದಾರ?" ಎಂದು ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ.

"ಒಮ್ಮೆ ಕಾಂಗ್ರೆಸ್ ನಾಯಕ ಉಗ್ರಪ್ಪನವರು ಯಡಿಯೂರಪ್ಪ ಅವರನ್ನು ಸಾಲ ಮನ್ನಾ ಮಾಡುವಂತೆ ಒತ್ತಾಯ ಮಾಡಿದ್ದಕ್ಕೆ, ಯಡಿಯೂರಪ್ಪ ಅವರು ನಮ್ಮ ಸರ್ಕಾರದ ಬಳಿ ನೋಟ್‌ ಪ್ರಿಂಟ್‌ ಮಾಡುವ ಮೆಷಿನ್‌ ಇಟ್ಟುಕೊಂಡಿಲ್ಲ ಎಂದು ದರ್ಪದ ಉತ್ತರ ನೀಡಿದ್ದರು. ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ರೈತರ 72,000 ಕೋಟಿ ರೂ. ಸಾಲ ಮನ್ನಾ ಮಾಡಿದ್ದರು. ನಾನು ಮುಖ್ಯಮಂತ್ರಿಯಾಗಿರುವಾಗ 22 ಲಕ್ಷ 27 ಸಾವಿರ ರೈತರ 50,000 ರೂ. ವರೆಗಿನ ಒಟ್ಟು 8,165 ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದೆ. ಕಾಂಗ್ರೆಸ್ ನಿಂದ ಇದು ಸಾಧ್ಯ ಎಂದಾದರೆ, ಬಿಜೆಪಿ ಸರ್ಕಾರಕ್ಕೇನು ರೋಗ? ಹೀಗಾದರೆ ದೇಶದ ಅಭಿವೃದ್ಧಿ ಆಗುವುದು ಹೇಗೆ? ರೈತರು ಉದ್ಧಾರ ಆಗುವುದು ಹೇಗೆ? ಇತ್ತೀಚೆಗೆ ತೇಜಸ್ವಿ ಸೂರ್ಯ ಎಂಬ ಸಂಸದ ರೈತರ ಸಾಲ ಮನ್ನಾ ಮಾಡುವುದರಿಂದ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ಶ್ರೀಮಂತರ ಸಾಲ ಮನ್ನಾ ಮಾಡಿದ್ರೆ ದೇಶಕ್ಕೆ ಅನುಕೂಲವಾಗುತ್ತ ಎಂದು ನಾವು, ನೀವು ಕೇಳಬೇಕಲ್ವ?" ಎಂದವರು ಪ್ರಶ್ನಿಸಿದ್ದಾರೆ.

"ಕೃಷಿ, ಗುಡಿ ಕೈಗಾರಿಕೆ ಮೇಲೆ ಅವಂಬಿತವಾಗಿರುವ ಮಹಿಳೆಯರು, ಸ್ವಸಹಾಯ ಸಂಘಗಳ ಸದಸ್ಯರಿಗೆ 50,000 ರೂ. ವರೆಗೆ ಬಡ್ಡಿ ರಹಿತವಾಗಿ ಸಾಲ ನೀಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿತ್ತು. ಈಗ ನನ್ನಲ್ಲಿ ಒಂದಷ್ಟು ಮನವಿಗಳನ್ನು ನೀಡಿದ್ದಾರೆ. ರೂ.50,000 ವರೆಗೆ ನೀಡುತ್ತಿರುವ ಬಡ್ಡಿ ರಹಿತ ಸಾಲವನ್ನು ಒಂದು ಲಕ್ಷವರೆಗೆ ಹೆಚ್ಚಿಸಬೇಕು ಎಂಬ ಒತ್ತಾಯವಿದೆ, ನಮ್ಮ ಸರ್ಕಾರ ಬಂದ ನಂತರ ಇದನ್ನು ಜಾರಿ ಮಾಡುತ್ತೇವೆ. ಪ್ರಾಮಾಣಿಕವಾಗಿ ಈ ವರೆಗೆ ಯಾರೆಲ್ಲ ಕಂತುಗಳನ್ನು ಕಟ್ಟುತ್ತಾ ಬಂದಿದ್ದಾರೆ, ಅವರೆಲ್ಲ ನಮ್ಮ ಸರ್ಕಾರ ಬರುವವರೆಗೆ ಹೀಗೆ ಕಟ್ಟುತ್ತಾ ಹೋಗಲಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಉಳಿಕೆ ಕಂತುಗಳನ್ನು ಮನ್ನಾ ಮಾಡುವ ಕೆಲಸವನ್ನೂ ಮಾಡುತ್ತೇವೆ" ಎಂದು ಸಿದ್ದರಾಮಯ್ಯನವರು ಭರವಸೆ ನೀಡಿದರು.

"ರೈತರಿಗೆ ಸಹಕಾರಿ ಸಂಸ್ಥೆಗಳ ಮೂಲಕ 3 ಲಕ್ಷದ ವರೆಗೆ ಬಡ್ಡಿ ರಹಿತವಾಗಿ ಸಾಲ ನೀಡುತ್ತಿದ್ದೆವು, ಇದನ್ನು 5 ಲಕ್ಷದ ವರೆಗೆ ಏರಿಕೆ ಮಾಡುವ ಕೆಲಸ ಮಾಡುತ್ತೇವೆ. 10 ಲಕ್ಷದ ವರೆಗೆ 3% ಮಾತ್ರ ಬಡ್ಡಿ ವಸೂಲಿ ಮಾಡಲಾಗುತ್ತಿತ್ತು, ಇದನ್ನು 20 ಲಕ್ಷದ ವರೆಗೆ ಹೆಚ್ಚಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಇದನ್ನು ಕೂಡ ನಮ್ಮ ಪ್ರಣಾಳಿಕೆ ಸಮಿತಿಯವರ ಜೊತೆ ಚರ್ಚೆ ಮಾಡಿ ಪ್ರಣಾಳಿಕೆಯಲ್ಲಿ ಸೇರಿಸುವ ಕೆಲಸ ಮಾಡುತ್ತೇನೆ. ಹೈನುಗಾರಿಕೆ ಉದ್ದೇಶಕ್ಕೆ ಸಾಲ ಪಡೆಯಲು ಸಹಕಾರಿಯಾಗಲು ಪಶುಭಾಗ್ಯ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ" ಎಂದವರು ಹೇಳಿದರು.

"ಕೋಲಾರದ ಎಪಿಎಂಸಿ ಯಲ್ಲಿ 18 ಎಕರೆ ಜಾಗ ಮಾತ್ರ ಇದೆ, ನೂರು ಎಕರೆ ಭೂಮಿ ಬೇಕು ಎಂದು ಮನವಿ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ಕೂಡಲೇ 100 ಎಕರೆ ಜಮೀನು ನೀಡುತ್ತೇವೆ. ಕೋಲಾರದಲ್ಲಿ ಮುಖ್ಯವಾಗಿ ಟೊಮೆಟೊ ಮತ್ತು ಮಾವು ಕೃಷಿ ಮಾಡುತ್ತಾರೆ, ಹೀಗಾಗಿ ಇಲ್ಲಿ ಈ ಬೆಳೆಗಳ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ, ಇದನ್ನು ಮಾಡಿಕೊಡುತ್ತೇವೆ. ರಾಜ್ಯ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದರಿಂದ ಎಪಿಎಂಸಿಗಳು ಹಾಳಾಗಿ ಮುಚ್ಚಿಹೋಗುವ ಹಂತದಲ್ಲಿದೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಈ ಕಾಯ್ದೆಗಳನ್ನು ವಾಪಾಸು ಪಡೆಯುವ ಕೆಲಸ ಮಾಡುತ್ತೇವೆ" ಎಂದವರು ಭರವಸೆ ನೀಡಿದರು.

"ಈಗ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ, ನಾವು ಅಧಿಕಾರಕ್ಕೆ ಬಂದ ಕೂಡಲೇ ಇದನ್ನು 6 ರೂ.ಗೆ ಹೆಚ್ಚಿಸುವ ಕೆಲಸ ಮಾಡುತ್ತೇವೆ. ಕೆಸಿ ವ್ಯಾಲಿ ಯೋಜನೆ ಮಾಡಿಕೊಡಬೇಕು ಎಂದು ಈ ಜಿಲ್ಲೆಯ ಎಲ್ಲ ಮುಖಂಡರು ಮನವಿ ಮಾಡಿದ್ದರು. ಅದಕ್ಕೆ ನಾನು ಮುಖ್ಯಮಂತ್ರಿ ಆಗಿರುವಾಗ 1,400 ಕೋಟಿ ರೂ. ಹಣ ನೀಡಿ, ಯೋಜನೆ ಜಾರಿ ಮಾಡಿದ್ದರಿಂದ ಇಂದು ಜಿಲ್ಲೆಯ ಕೆರೆಗಳು ತುಂಬಿವೆ. ಜೆಡಿಎಸ್‌ ನವರು ತ್ಯಾಜ್ಯ ನೀರನ್ನು ಕೆರೆಗಳಿಗೆ ತುಂಬಿಸಿದ್ರೆ ಬೆಳೆ ಹಾಳಾಗುತ್ತದೆ, ಈ ನೀರಿನಲ್ಲಿ ವಿಷ ಇರುತ್ತದೆ ಎಂದು ಅಪಪ್ರಚಾರ ಮಾಡಿದ್ದರು. ಈ ನೀರಿಗೆ 3ನೇ ಹಂತದ ಶುದ್ಧೀಕರಣ ಘಟಕವನ್ನು ಸ್ಥಾಪನೆ ಮಾಡಿ ಈಗ ಇರುವುದಕ್ಕಿಂತ ಇನ್ನೂ ಹೆಚ್ಚಿನ ಶುದ್ಧ ನೀರನ್ನು ಕೊಡುವ ಕೆಲಸ ಮುಂದೆ ಮಾಡುತ್ತೇವೆ. ನಾವು ಎತ್ತಿನಹೊಳೆ ಯೋಜನೆಯನ್ನು ಆರಂಭ ಮಾಡಿದ್ದೆವು, ಈಗ ಯೋಜನೆಯ ಕಾಮಗಾರಿ ನಿಂತು ಹೋಗಿದೆ. ನಾವು ಅಧಿಕಾರಕ್ಕೆ ಬಂದ ನಂತರ ಮತ್ತೆ ಯೋಜನೆಗೆ ಚಾಲನೆ ನೀಡಿ, 2 ವರ್ಷಗಳಲ್ಲಿ ಕಾಮಗಾರಿ ಮುಗಿಸಿ ಈ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಕೊಡುತ್ತೇವೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

"ಬೆಲೆಯೇರಿಕೆಯಿಂದ ಮಹಿಳೆಯರು ಮತ್ತು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ನಾವು ಅಧಿಕಾರಕ್ಕೆ ಬಂದ ಮೇಲೆ ಪ್ರತೀ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುತ್ತೇವೆ ಹಾಗೂ ಪ್ರತೀ ಮನೆಯ ಯಜಮಾನಿಗೆ ಕುಟುಂಬ ನಿರ್ವಹಣೆಗಾಗಿ ತಿಂಗಳಿಗೆ 2000 ರೂ. ನಂತೆ ವರ್ಷಕ್ಕೆ 24,000 ರೂ. ನೀಡುತ್ತೇವೆ. ಈ ಎರಡೇ ಕಾರ್ಯಕ್ರಮಗಳಿಂದ ವರ್ಷಕ್ಕೆ 40,000 ಕೋಟಿ ರೂ. ಬೊಕ್ಕಸಕ್ಕೆ ಖರ್ಚು ಬರುತ್ತದೆ. ನಾವು ಇದ್ದಾಗ 7 ಕೆ.ಜಿ ಅಕ್ಕಿ ಉಚಿತವಾಗಿ ನೀಡುತ್ತಿದ್ದೆವು, ಈಗದನ್ನು 5 ಕೆ.ಜಿ ಮಾಡಿದ್ದಾರೆ, ನಾವು ಅಧಿಕಾರಕ್ಕೆ ಬಂದ ಕೂಡಲೇ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ" ಎಂದವರು ಹೇಳಿದರು.

"ಇಷ್ಟೆಲ್ಲಾ ಘೋಷಣೆಗಳನ್ನು ನಾವು ನಿಮಗಾಗಿ ನೀಡುತ್ತಿದ್ದೇವೆ, ನೀವು ಮುಂಬರುವ ಚುನಾವಣೆಯಲ್ಲಿ ನಮಗೆ ಮತ ನೀಡಬೇಕು. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ, ಇದಕ್ಕೆ ತಪ್ಪಿದರೆ ಒಂದು ಕ್ಷಣ ರಾಜಕೀಯದಲ್ಲಿ ಇರುವುದಿಲ್ಲ. ನನ್ನನ್ನು ಕೋಲಾರದಿಂದ ಸ್ಪರ್ಧೆ ಮಾಡುವಂತೆ ಸ್ಥಳೀಯ ಮುಖಂಡರು ಒತ್ತಾಯ ಮಾಡುತ್ತಿದ್ದಾರೆ, ತಾವೆಲ್ಲ ನನಗೆ ಆಶೀರ್ವಾದ ಮಾಡುವ ಭರವಸೆ ನೀಡಿದರೆ ನಾನು ಇಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ" ಎಂದವರು ಹೇಳಿದ್ದಾರೆ.

"ಈ ಬಿಜೆಪಿಯವರ ಮಾತನ್ನು ಕೇಳಬೇಡಿ, ಅವರು ನಿಮಗಾಗಿ ಏನೂ ಮಾಡಿಲ್ಲ. ನಾವು ಮಾಡಿದ ಯೋಜನೆಗಳನ್ನೇ ತಮ್ಮದು ಎಂದು ಹೇಳುತ್ತಿದ್ದಾರೆ. ಬಿಜೆಪಿಯವರು ಮಹಿಳೆಯರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ, ದುರ್ಬಲ ವರ್ಗದ ಜನರಿಗೆ ಯಾವ ಕೆಲಸ ಮಾಡದೆ ಸಮಾಜದಲ್ಲಿ ದ್ವೇಷ ಹುಟ್ಟುಹಾಕುವ ಕೆಲಸ ಮಾಡುತ್ತಾರೆ. ಹಿಂದೂಗಳನ್ನು ಮುಸ್ಲಿಂಮರ ವಿರುದ್ಧ, ಮುಸ್ಲಿಂಮರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟಿ ಸಮಾಜ ಒಡೆಯುವ ಕೆಲಸ ಮಾಡುತ್ತಾ, ಬಾಯಿ ಮಾತಿಗೆ ಸಬ್‌ ಕ ಸಾತ್‌, ಸಬ್‌ ಕ ವಿಕಾಸ್‌ ಎನ್ನುತ್ತಾರೆ. ಈ ವಿಕಾಸದೊಳಗೆ ದಲಿತರು, ಹಿಂದುಳಿದ ವರ್ಗದ ಬಡವರು, ಅಲ್ಪಸಂಖ್ಯಾತರು, ರೈತರು, ಮಹಿಳೆಯರು ಬರುವುದಿಲ್ಲ ಯಾಕೆ?" ಎಂದವರು ಪ್ರಶ್ನಿಸಿದ್ದಾರೆ.

"ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಪರವಾಗಿ ಇರುವವರನ್ನು ಗುರುತಿಸಿ ಆಶೀರ್ವಾದ ಮಾಡಬೇಕಾಗಿರುವುದು ನಿಮ್ಮ ಕರ್ತವ್ಯವಾಗಿದೆ. ಇದನ್ನು ನೀವು ಮಾಡುತ್ತೀರ ಎಂಬ ಭರವಸೆ ನನಗಿದೆ" ಎಂದು ಸಿದ್ದರಾಮಯ್ಯನವರು ಸಭೆಯಲ್ಲಿ ನೆರೆದ ಸಭಿಕರನ್ನು ಉದ್ದೇಶಿಸಿ ಹೇಳಿದ್ದಾರೆ.

Advertisement
Advertisement
Recent Posts
Advertisement