ಪ್ರತಿಪಕ್ಷನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಟಿಪ್ಪುವನ್ನು ಹೊಡೆದು ಹಾಕಿದಂತೆ ಹೊಡೆದು ಹಾಕಬೇಕೆಂದು ತನ್ನ ಕಾರ್ಯಕರ್ತರ ವೇದಿಕೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಸಚಿವ ಡಾ. ಅಶ್ವಥ್ ನಾರಾಯಣರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಿ ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸುವಂತೆ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸ ಬೇಕು. ಇಲ್ಲವಾದರೆ ತನ್ನ ಹುದ್ದೆಯ ಗೌರವ ಎತ್ತಿಹಿಡಿಯುವ ನಿಟ್ಟಿನಲ್ಲಿ ರಾಜೀನಾಮೆ ಕೊಡಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದೆ.
ಚುನಾವಣೆ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಸಚಿವರ ಈ ಹೇಳಿಕೆ ರಾಜ್ಯದಲ್ಲಿ ಚುನಾವಣಾಪೂರ್ವ ಗಲಭೆಯನ್ನು ಹುಟ್ಪು ಹಾಕಿ ತನ್ನ ರಾಜಕೀಯದ ಬೇಳೆ ಬೇಯಿಸುವ ಗುರಿಯನ್ನು ಹೊಂದಿದೆ ಎನ್ನ ಬಹುದಾಗಿದೆ. ಇದು ಬಿಜೆಪಿಯ ಪರಂಪರಾನುಗತ ರಾಜಕೀಯ ಕಾರ್ಯತಂತ್ರವಾಗಿದೆ. ಕಾರ್ಯಕರ್ತರು ಟಿಪ್ಪುವನ್ನು ಕೊಂದ ಉರಿಗೌಡ ನಂಜೆಗೌಡರಂತಾಗ ಬೇಕು ಎಂಬ ಸಚಿವರ ಹೇಳಿಕೆ ಮತ್ತು ಟಿಪ್ಪುವನ್ನು ಪ್ರೀತಿಸುವವರು ಈ ನೆಲದಲ್ಲಿ ಇರಬಾರದು ಎಂಬ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ಇದಕ್ಕೆ ಇಂಬು ನೀಡಿದೆ. ಇದು ಸಂವಿಧಾನ ಬಾಹಿರ ನಡೆಯಾಗಿದ್ದು, ಶಾಂತಿ ಸುವ್ಯವಸ್ಥೆಯ ಹೊಣೆಹೊತ್ತ ರಾಜ್ಯದ ಸಾಂಸ್ಥಿಕ ಸಂಸ್ಥೆಗಳು ಇವರ ವಿರುದ್ದ ಸ್ವಯಂ ಪ್ರೇರಿತ ಕಾನೂನಾತ್ಮಕ ಕ್ರಮ ಕೈಗೊಳ್ಳ ಬೇಕು ಎಂದು ಕಾಂಗ್ರೆಸ್ ಹೇಳಿದೆ.
ಬಿಜೆಪಿ ಆಡಳಿತದಲ್ಲಿ ರಾಜಧರ್ಮ ಕುಲಗೆಟ್ಟು ಹೋಗಿರುವುದಕ್ಕೆ ಈ ಪ್ರಕರಣ ಜೀವಂತ ಸಾಕ್ಷಿ. ಇದೊಂದು ಪುಂಡಾಟಿಕೆಯ ಸರಕಾರ. ಕೊಲೆಯತ್ನ, ಗುಂಪುಗಲಭೆ, ವಂಚನೆ, ಭ್ರಷ್ಟಾಚಾರ, ಶೋಷಣೆ, ಸುಲಿಗೆ, ಮತಾಂಧತೆಯೇ ಮೊದಲಾದ ಸಮಾಜಘಾತುಕ ಶಕ್ತಿಗಳಿಗೆ ಪ್ರಚೋದನೆ ನೀಡುವ ಸರಕಾರ. ಈಗಾಗಲೆ ಸರಕಾರದ ಮಾಜಿ ಸಚಿವ ಈಶ್ವರಪ್ಪ , ಸಿಟಿ ರವಿಯೂ ಸೇರಿ ಒಟ್ಟು 33 ಹಾಲಿ ಸಚಿವರು ಹಾಗೂ ಶಾಸಕರ ಮೇಲೆ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ಇವೆ. ಇಂತ ಸರಕಾರದಲ್ಲಿ ಸಚಿವನಾಗಿರುವವನೊಬ್ಬ , ಒಬ್ಬ ಸಮರ್ಥ ಜನಪರ ಚಿಂತಕ ಸಿದ್ಧರಾಮಯ್ಯ ನಂತವರನ್ನು ಹೊಡೆದು ಹಾಕಲು ಹೇಳಿರುವುದರಲ್ಲಿ ಆಶ್ಚರ್ಯವಿಲ್ಲ. ಇಂತಹ ಸಚಿವರಿರುವ ಸರಕಾರ ರಾಜ್ಯವಾಳಲು ಯೋಗ್ಯವಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.