ಕಾಂಗ್ರೆಸ್ ಪಕ್ಷ "ಬ್ರಿಟೀಷರ ದಾಸ್ಯ" ದಿಂದ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಪಕ್ಷ. ಸ್ವಾತಂತ್ರ್ಯಾ ನಂತರ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕದ 562 ರಾಜಸಂಸ್ಥಾನಗಳ ಅರಸರುಗಳ ಮನಒಲಿಸಿ "ನವಭಾರತ" ನಿರ್ಮಿಸಿದ ಪಕ್ಷ. "ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು" ಸಿದ್ಧಾಂತದ ಅಂಬೇಡ್ಕರ್ ಸಂವಿಧಾನವನ್ನು ಜಾರಿಗೊಳಿಸುವ ಮೂಲಕ ಮನುವಾದಿಗಳ ಶತಶತಮಾನಗಳ ಶೋಷಣೆಯಿಂದ ಈ ನೆಲದ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ) ವರ್ಗಕ್ಕೆ ಮುಕ್ತಿ ದೊರಕಿಸಿಕೊಟ್ಟ ಪಕ್ಷ. ದೇಶದ ಗ್ರಾಮಗ್ರಾಮಗಳ ಮೂಲೆಮೂಲೆಗಳಲ್ಲಿ ಶಾಲೆಗಳನ್ನು ನಿರ್ಮಿಸಿ ಶಿಕ್ಷಣವನ್ನು ಕಡ್ಡಾಯಗೊಳಿಸಿ ದೇಶದ ಜನರಿಗೆ ವಿದ್ಯೆ ನೀಡಿ, ಉದ್ಯೋಗ ನೀಡಿ ವಿಶ್ವದ ಮುಂದುವರಿದ ರಾಷ್ಟ್ರಗಳ ಸಾಲಿಗೆ ಭಾರತವನ್ನು ತಲೆಎತ್ತಿ ನಿಲ್ಲಿಸಿದ ಪಕ್ಷ. ದರಖಾಸ್ತು, ಡಿಕ್ಲರೇಷನ್ ಖಾಯ್ದೆ, ಅಕ್ರಮ ಸಕ್ರಮದ ಮೂಲಕ ಸರಕಾರಿ ಭೂಮಿಯನ್ನು ದೇಶದ ರೈತರಿಗೆ ಹಂಚಿಕೆ ಮಾಡಿದ ದೇಶದ ಏಕೈಕ ಪಕ್ಷ. ಇಂತಹ ಕಾಂಗ್ರೆಸ್ ಇದೀಗ ನಿರಂತರವಾಗಿ ಮನುವಾದಿಗಳಿಂದ ಅಪಪ್ರಚಾರಕ್ಕೆ ಒಳಗಾಗುತ್ತಿದೆ. ಕಾಂಗ್ರೆಸ್ ಸಾಧನೆಗಳ ಕುರಿತು ಹಿಂದೆ ಮುಂದೆ ತಿಳಿಯದ ಒಂದಷ್ಟು ಜನಗಳು ಮನುವಾದಿಗಳ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಈ ನೆಲದ ಶೋಷಿತರ ಪರವಾದ ಹೋರಾಟದಲ್ಲಿ ಈಗಲೂ ಪ್ರಮುಖ ಪಾತ್ರ ವಹಿಸಿದೆ.
ಅದರ ಮುಂದುವರಿದ ಭಾಗ ಎಂಬಂತೆ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ಕು ಪ್ರಮುಖ ಘೋಷಣೆಗಳನ್ನು ಮಾಡಿದ್ದು ಅದರಲ್ಲಿ ಮೊದಲನೆಯದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಪದವೀಧರರಿಗೆ ಉದ್ಯೋಗವನ್ನು ಕೊಡುತ್ತದೆ ಮತ್ತು "ಯುವನಿಧಿ" ಯೋಜನೆಯಡಿಯಲ್ಲಿ ಮಾಸಿಕ 3000 ರೂಪಾಯಿ ನಿರುದ್ಯೋಗ ಭತ್ಯೆಯನ್ನೂ ಕೊಡುತ್ತದೆ. ಡಿಪ್ಲೊಮಾ ಪದವಿದರರಿಗೆ 1500 ನಿರುದ್ಯೋಗ ಭತ್ಯೆಯನ್ನು ಕೊಡುತ್ತದೆ.
ಎರಡನೆಯದಾಗಿ ಅಕ್ಕಿ, ಬೇಳೆ, ಮೆಣಸು ಮುಂತಾದ ಅಗತ್ಯ ದಿನಸಿ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿಮೆ ಮಾಡುತ್ತದೆ ಮತ್ತು "ಗೃಹಲಕ್ಷ್ಮಿ" ಯೋಜನೆಯಡಿ ಪ್ರತಿ ಮನೆಯ ಯಜಮಾನತಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಸಹಾಯಧನ ಕೊಡುತ್ತದೆ.
ಮೂರನೆಯದಾಗಿ ಪೆಟ್ರೋಲ್, ಡಿಸೇಲ್, ಗ್ಯಾಸ್ ಮುಂತಾದವುಗಳ ಮೇಲಿನ ತೆರಿಗೆ ಇಳಿಸುತ್ತದೆ ಮತ್ತು "ಗೃಹಜ್ಯೋತಿ" ಯೋಜನೆಯಡಿ 200 ಯೂನಿಟ್ ತನಕದ ವಿದ್ಯುತ್ ಅನ್ನು ಪ್ರತಿ ಮನೆಗೆ ಉಚಿತವಾಗಿ ಕೊಡುತ್ತದೆ.
ನಾಲ್ಕನೆಯದಾಗಿ ಇದೆಲ್ಲವುದರ ಜೊತೆಗೆ "ಅನ್ನಭಾಗ್ಯ" ಯೋಜನೆಯಡಿ ಹತ್ತು ಕೆ.ಜಿ ಯಷ್ಟು ಅಕ್ಕಿಯನ್ನು ಉಚಿತವಾಗಿ ಕೊಡುತ್ತದೆ. ಆ ಮೂಲಕ ಉತ್ತಮವಾದ ಬದುಕನ್ನು ರೂಪಿಸುತ್ತದೆ.
ಆದರೆ ಅಕಸ್ಮಾತ್ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ರಾಜ್ಯದಲ್ಲಿ ಹಿಜಾಬ್ ಹೆಸರಲ್ಲಿ, ಹಲಾಲ್ ಹೆಸರಲ್ಲಿ, ಅಝಾನ್ ಹೆಸರಲ್ಲಿ ಮತ್ತು ಲವ್ ಜಿಹಾದ್ ಹೆಸರಲ್ಲಿ ರಾಜ್ಯದ ಜನರ ನಡುವಿನ ಸೌಹಾರ್ಧತೆಯನ್ನು ಕೆಡಿಸುತ್ತದೆ. ಕಾಲೇಜಿಗೆ ಹೋಗುವ ಬಡವರ ಮನೆಯ ಮಕ್ಕಳನ್ನು ಹೊಡೆದಾಟಕ್ಕೆ ಪ್ರೇರೇಪಿಸುತ್ತದೆ. ಆ ಮೂಲಕ ಜನರ ಬದುಕನ್ನು ನಾಶಗೊಳಿಸುತ್ತದೆ.
ಹಾಗೆಯೇ ಈ ಮೇಲೆ ವಿವರಿಸಲಾದ ಕಾಂಗ್ರೆಸ್ ಯೋಜನೆಗಳ ಜೊತೆಯಲ್ಲಿ ಇದೀಗ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಇಪ್ಪತೈದು ವರ್ಷಗಳಿಂದ ನೆರವೇರದೆ ಉಳಿದ ಬೇಡಿಕೆಗಳ ಪಟ್ಟಿಯನ್ನು ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆಯವರು ಬಿಡುಗಡೆ ಮಾಡಿದ್ದು "ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ಡೆಯವರು ಶಾಸಕರಾಗಿ ಆಯ್ಕೆಯಾದಲ್ಲಿ ಪ್ರಥಮ ಆದ್ಯತೆಯ ಮೇಲೆ ಈ ಕೆಳಗೆ ವಿವರಿಸಲಾದ ವಿಚಾರಗಳ ಈಡೇರಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಿದ್ದಾರೆ" ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1) ವಾರಾಹಿ ನೀರಾವರಿ ಯೋಜನೆಯ ಮೂಲ ಯೋಜನೆಯ 15000 ಹೆಕ್ಟೇರ್ ಕೃಷಿ ಭೂಮಿಗೆ ನೀರು.
2) ಕೇರಳ, ಗೋವಾ, ಮಹಾರಾಷ್ಟ್ರ ಮಾದರಿಯಂತೆ ಸಿ ಆರ್ ಝಡ್ ನಿಯಮದಲ್ಲಿ ಸಡಲೀಕರಣ.
3) ತಿಂಗಳಿಗೊಮ್ಮೆ ಜನ ಸಂಪರ್ಕ ಸಭೆ.
4) ಹದಿನೈದು ದಿನಕ್ಕೊಮ್ಮೆ ಒಂದೊಂದು ಸರ್ಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಹಾಗೂ ಸಾರ್ವಜನಿಕರ ಕುಂದುಕೊರತೆಗಳ ಸಭೆ.
5) ಅಧಿವೇಶನ ಹಾಗೂ ಇನ್ನಿತರೆ ಶಾಸಕರಿಗೆ ಭಾಗವಹಿಸಲು ಅವಕಾಶವಿರುವ ಎಲ್ಲಾ ಸಭೆಗಳಲ್ಲಿ ಸಕ್ರೀಯ ಭಾಗಹವಿಸುವಿಕೆ ಹಾಗೂ ಕ್ಷೇತ್ರದ ಬಗ್ಗೆ ಚರ್ಚೆ.
6) ಡೀಮ್ಡ್ ಅರಣ್ಯ ಸಮಸ್ಯೆಯ ಪರಿಹಾರದ ಬಗ್ಗೆ ಪ್ರಯತ್ನ.
7) ಅಕ್ರಮ ಸಕ್ರಮ ಬಾಕಿ ಇರುವ ಅರ್ಜಿಗಳ ಶೀಘ್ರ ವಿಲೇವಾರಿ ಹಾಗೂ ಹಕ್ಕುಪತ್ರ ವಿತರಣೆ.
8) ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಂಸ್ಥೆಗಳನ್ನು ಕ್ಷೇತ್ರಕ್ಕೆ ಕರೆತರುವುದು.
9) ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ಉದ್ಯೋಗ ಮೇಳ.
10) ಸರ್ಕಾರಿ ವೈದ್ಯಕೀಯ ಹಾಗೂ ತಾಂತ್ರಿಕ ಕಾಲೇಜು ಮಂಜೂರಾತಿಗೆ ಪ್ರಯತ್ನ.
11) ಅಕ್ರಮ ಸಕ್ರಮ, ಭೂ ನ್ಯಾಯ ಮಂಡಳಿ, ಆಶ್ರಯ, ಆರಾಧನ ಇತರೆ ಎಲ್ಲಾ ಸಮಿತಿಗಳ ಶೀಘ್ರ ರಚನೆ ಹಾಗೂ ಸಮಯಕ್ಕೆ ಸರಿಯಾಗಿ ಸಭೆ.
12) ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ.
13)ಮೀನುಗಾರಿಕೆ ರಸ್ತೆಗಳ, ಕಿರು ಬಂದರುಗಳ ಅಭಿವೃದ್ಧಿ.
14)ಸಮಯಕ್ಕೆ ಸರಿಯಾಗಿ, ಬೇಡಿಕೆಗೆ ಅನುಗುಣವಾಗಿ ಸಬ್ಸಿಡಿ ಸೀಮೆಎಣ್ಣೆ ಹಾಗೂ ಡೀಸೆಲ್ ಪೂರೈಕೆ.
15) ಮೂರ್ತೆದಾರರ ಬೇಡಿಕೆ ಹಾಗೂ ಸಮಸ್ಯೆಗಳ ಪರಿಹಾರ.
16) ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮಳಿಗೆ ಸ್ಥಾಪನೆ ಹಾಗೂ ಬೆಂಬಲ ಬೆಲೆ ಸಮಯಕ್ಕೆ ಸರಿಯಾಗಿ ನೀಡಲು ಸರ್ಕಾರಕ್ಕೆ ಒತ್ತಡ.
17) ಬಹುಗ್ರಾಮ ಕುಡಿಯುವ ನೀರಿಗೆ ಆದ್ಯತೆ ಆದರೆ ನೀರಿನ ಮೂಲಕ್ಕೆ ಮೊದಲ ಆದ್ಯತೆ.
18) ಶೂನ್ಯ ಶಿಕ್ಷಕರಿರುವ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕ.
19)ಕಾಡು ಪ್ರಾಣಿಗಳ ಹಾವಳಿ ತಡೆಗೆ ಕ್ರಮ ಹಾಗೂ ಹೆಚ್ಚಿನ ಪರಿಹಾರಕ್ಕೆ ಕ್ರಮ.
20) ಅಗತ್ಯವಿರುವ ಕಡೆ ಆದ್ಯತೆಗೆ ಅನುಗುಣವಾಗಿ ರಸ್ತೆ, ಸೇತುವೆ, ಕಿಂಡಿ ಅಣೆಕಟ್ಟುಗಳ ನಿರ್ಮಾಣ ಹಾಗೂ ಸಮರ್ಪಕ ನಿರ್ವಹಣೆಗೆ ಆದ್ಯತೆ.
21) ಕ್ಷೇತ್ರದಲ್ಲಿ ಒಂದು ಕ್ರೀಡಾ ಹಾಸ್ಟೆಲ್ ನಿರ್ಮಾಣ.
22) ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ವೈದ್ಯರು, ಸಿಬ್ಬಂದಿ, ಪರಿಕರ ಪೂರೈಕೆ.
23) ಪಶು ಚಿಕಿಸ್ಸಾಲಯಗಳಿಗೆ ವೈದ್ಯರು, ಸಿಬ್ಬಂದಿ, ಪರಿಕರಗಳ ಪೂರೈಕೆ.
24) ಕುಂದಾಪುರ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ಗಳಿಗೆ ಅಗತ್ಯ ಸಿಬ್ಬಂದಿ ಪೂರೈಕೆ, ಸಮಸ್ಯೆಗಳ ಪರಿಹಾರಕ್ಕೆ ಕ್ರಮ.
25) ಗ್ರಾಮೀಣ ಸಂಸ್ಥೆಗಳ ಸದಸ್ಯರ ಧ್ವನಿಯಾಗುವ ಪ್ರಯತ್ನ.
26) ಅರ್ಹ ಫಲಾನುಭವಿಗಳಿಗೆ ಸಾಮಾಜಿಕ ಪಿಂಚಣಿಗಳಾದ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನ ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ.
27) ಸಾಮಾಜಿಕ ನ್ಯಾಯದ ಪರವಾದ ಧ್ವನಿಯಾಗಿ ಕೆಲಸ.
28) ಅಜೀರ್ಣಾವಸ್ಥೆಯ ದೈವಸ್ಥಾನ ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ ಸರ್ಕಾರದ ಅನುದಾನ ದೊರಕಿಸಿಕೊದುವುದು.
29) ಆದ್ಯತೆಯ ಮೇಲೆ ಸಮುದಾಯ ಭವನಗಳ ನಿರ್ಮಾಣ.
30) ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು, ಸಮಿತಿ ಸಭೆಗಳಲ್ಲಿ ಸಕ್ರೀಯ ಭಾಗವಹಿಸುವಿಕೆ.
31) ಕುಂದಾಪುರದಲ್ಲಿ ಉಪ ಸಾರಿಗೆ ಆಯುಕ್ತರ ಕಛೇರಿ ನಿರ್ಮಾಣ.
32) ಕುಂದಾಪುರ ನಗರದಲ್ಲಿ ಒಂದು ಸುಸಜ್ಜಿತ ಪುರಭವನ ನಿರ್ಮಾಣ.
33) ವಲಸೆ ಕಾರ್ಮಿಕರಿಗೆ ವಸತಿ ಹಾಗೂ ಶೌಚಾಲಯ ವ್ಯವಸ್ಥೆ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ವ್ಯವಸ್ಥೆ.
34) ಕುಂದಾಪುರ ಹಾಗೂ ಬಾರ್ಕೂರು ರೈಲ್ವೆ ನಿಲ್ದಾಣಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು.
35) ಬೇಡಿಕೆ ಹಾಗೂ ಅಗತ್ಯತೆಗೆ ಅನುಗುಣವಾಗಿ ಸರ್ಕಾರಿ ಕಿರಿಯ, ಹಿರಿಯ, ಪ್ರೌಢ ಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ನಿರ್ಮಾಣ.
36) ಕುಂದಾಪುರದ ತಾಲ್ಲೂಕು ಆಸ್ಪತ್ರೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಬೇಡಿಕೆಗೆ ಅನುಗುಣವಾಗಿ ಕಿಡ್ನಿ ಡಯಾಲಿಸಿಸ್ ಯಂತ್ರಗಳ ಪೂರೈಕೆ.
37) ಪ್ರತೀ ಗ್ರಾಮ ಪಂಚಾಯತ್ಗಳಲ್ಲಿ ನಿವೇಶನಗಳ ಗುರುತಿಸುವಿಕೆ ಹಾಗೂ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ.
38) ಘನ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣ ಹಾಗೂ ಸಮರ್ಪಕ ನಿರ್ವಹಣೆಗೆ ಆದ್ಯತೆ.
39) ಪ್ರತಿ ಗ್ರಾಮಕ್ಕೆ ಭೇಟಿಕೊಟ್ಟು ಅಲ್ಲಿನ ಜನರೊಂದಿಗೆ ಜನಸಂಪರ್ಕ ಸಭೆ ನಡೆಸಿ ಅಲ್ಲಿನ ಕುಂದುಕೊರತೆಗಳನ್ನು, ಜನಸಾಮಾನ್ಯರ ಬೇಡಿಕೆ, ಆಗ್ರಹಗಳ ಬಗ್ಗೆ ಚರ್ಚಿಸಿ ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ.
ಕುಂದಾಪುರ ಎಂದೊಡನೆಯ ರಾಜ್ಯಾದ್ಯಂತ ಜನರು ಪ್ರಪ್ರಥಮವಾಗಿ ನೆನಪಿಸುವುದು ವಿಧಾನಪರಿಷತ್ ಅಧ್ಯಕ್ಷರಾಗಿ ರೈತಪರ ಹೋರಾಟ ನಡೆಸಿದ ಪ್ರತಾಪ್ ಚಂದ್ರ ಶೆಟ್ಟಿಯವರನ್ನು. ಅವರ ಕುರಿತು ಜನಜನಿತವಾದ ಮಾತೊಂದಿದೆ. ಅದು ಏನೆಂದರೆ "ಪ್ರತಾಪ್ ರವರು ಹಿಡಿದ ಕೆಲಸವನ್ನು ಯಾವುದೇ ಕಾರಣಕ್ಕೂ ಬಿಡುವವರಲ್ಲ ಹಾಗೂ ಅಧಿಕಾರದ ಸ್ಥಾನಕ್ಕಾಗಿ ಯಾವುದೇ ಆರ್ಥಿಕ ಲಾಭಕ್ಕಾಗಿ ಎಂದೂ ತನ್ನ ಸ್ವಾಭಿಮಾನವನ್ನು ಬಲಿ ಕೊಡುವವರೂ ಅಲ್ಲ" ಎಂದು. ಸ್ವಾಭಿಮಾನಕ್ಕಾಗಿ, ಸಿದ್ದಾಂತಕ್ಕಾಗಿ ಎಂತಹ ತ್ಯಾಗಕ್ಕೂ ಅವರು ಸಿದ್ದರು ಎನ್ನುವುದಕ್ಕೆ ಅವರು ರೈತರ ಪರವಾದ ಧ್ವನಿಯಾಗಿ ಸಭಾಪತಿ ಸ್ಥಾನವನ್ನು ತ್ಯಜಿಸಿರುವುದು ಉತ್ತಮವಾದ ಉದಾಹರಣೆಯಾಗಿದೆ. ಹಾಗೆಯೇ, ಇಂತಹ ಮೌಲ್ಯಾಧಾರಿತ ರಾಜಕಾರಣಿ ಪ್ರತಾಪ್ ರವರ ಗರಡಿಯಲ್ಲಿ ಬೆಳೆದ ಯುವ ನಾಯಕ ಮೊಳಹಳ್ಳಿ ದಿನೇಶ್ ಹೆಗ್ಡೆಯವರು ಇದೀಗ ಅಭ್ಯರ್ಥಿಯಾಗಿದ್ದಾರೆ ಎನ್ನುವುದು ಕುಂದಾಪುರ ಕಾಂಗ್ರೆಸ್ ಕಾರ್ಯಕರ್ತರ ಹೆಮ್ಮೆಗೆ ಕಾರಣವಾಗಿದೆ.
1999 ರಲ್ಲಿ ಕೇವಲ 1020 ಮತಗಳ ಸಣ್ಣ ಅಂತರದಿಂದ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿಯವರೆದುರು ಸೋತ ಪ್ರತಾಪ್ ಚಂದ್ರ ಶೆಟ್ಟಿಯವರು ಮುಂದೆ ನಿರಂತರವಾಗಿ ನಾಲ್ಕು ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಕಾರಣಕ್ಕಾಗಿ ಆ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಫಯರ್ ಬ್ರಾಂಡ್ ಎಂದೇ ಹೆಸರಾಗಿದ್ದ ದಿವಂಗತ ಅಶೋಕ್ ಹೆಗ್ಡೆಯವರು ಸ್ಪರ್ದಿಸಿದ್ದರೆ, ಆ ನಂತರದ 2008ರ ಚುನಾವಣೆಯಲ್ಲಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆಯವರು ಸ್ಪರ್ದಿಸಿದ್ದರು. 2013ರ ಚುನಾವಣೆಯಲ್ಲಿ ವಿಪಕ್ಷಿಯರು ಕೂಡ ಗೌರವಿಸುವ ಕುಂದಾಪುರ ಕ್ಷೇತ್ರದ ಜನರ ಪ್ರೀತಿಯ ಹಾಗೂ ಸರಳ ನಾಯಕರಾಗಿದ್ದ ಮಲ್ಯಾಡಿ ಶಿವರಾಮ ಶೆಟ್ಟಿಯವರು ಸ್ಪರ್ದಿಸಿದ್ದರು ಹಾಗೂ 2018ರ ಚುನಾವಣೆಯಲ್ಲಿ ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿಯವರು ಸ್ಪರ್ದಿಸಿ ಸೋತಿದ್ದರು.
ಬಹುಶಃ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಓರ್ವ ಶಾಸಕ ಅಭ್ಯರ್ಥಿಯಾಗುವವರಿಗೆ ಒಂದಷ್ಟು ಮೌಲ್ಯಯುತ ಹಿನ್ನೆಲೆ, ಪ್ರಾಮಾಣಿಕತೆ ಮತ್ತು ಕ್ಷೇತ್ರದ ಸಮಸ್ಯೆಗಳ ಕುರಿತು ಕಾಳಜಿ, ಜ್ಞಾನ ಇರಲೇಬೇಕಾಗುತ್ತದೆ. ಅಂತಹ ಪ್ರಾಮಾಣಿಕತೆ, ಕ್ಷೇತ್ರದ ಸಮಸ್ಯೆಗಳ ಕುರಿತು ಕಾಳಜಿ ಹಾಗೂ ಜ್ಞಾನ ಹೊಂದಿರುವ ದಿನೇಶ್ ಹೆಗ್ಡೆಯವರು ಕುಂದಾಪುರದ ಶಾಸಕರಾಗಿ ಆಯ್ಕೆಯಾಗಲಿ. ಆ ಮೂಲಕ ಕುಂದಾಪುರ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ ಪಡೆಯುವಂತಾಗಲಿ ಎಂದು ಕನ್ನಡ ಮೀಡಿಯಾ ಡಾಟ್ ಕಾಮ್ ಪತ್ರಿಕಾ ಬಳಗ ಹಾರೈಸುತ್ತದೆ.