Advertisement

ನಂದಿನಿ ಅಪಾಯದಲ್ಲಿ? ನಂದಿನಿ ಉಳಿಸಿ!

Advertisement

ರಾಜ್ಯದ ಮಾರುಕಟ್ಟೆಗೆ ಅಮುಲ್ ಹಾಲು ಮತ್ತು ಮೊಸರನ್ನು ಹರಿಯ ಬಿಟ್ಟಿರುವುದರ ಹಿಂದೆ, ಕೆಎಂಎಫ್ ನಂದಿನಿಯನ್ನು ಗುಜರಾತಿನ ಅಮೂಲ್ ನೊಂದಿಗೆ ವಿಲೀನಗೊಳಿಸುವ ವ್ಯವಸ್ಥಿತ ಪಿತೂರಿ ಅಡಗಿದೆ. ಇದು ಆಳುವ ಬಿಜೆಪಿ ದೇಶದ ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಮಹಾಮೋಸವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.

ದೇಶದಲ್ಲಿ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ (ಕೆಎಂಎಫ್) ಕರ್ನಾಟಕ ಹಾಲು ಉತ್ಪಾದಕ ಮಹಾಮಂಡಳಿಯ ನಂದಿನಿ ಹಾಲು ಮೊಸರು ತುಪ್ಪ ವಿಶ್ವಮಾರುಕಟ್ಟೆಯಲ್ಲಿ ಗುರುತಿಸಲ್ಪಟ್ಟಿದೆ. ರಾಜ್ಯದ 16 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಸುಮಾರು 15,043 ಗ್ರಾಮೀಣ ಹಾಲು ಉತ್ಪಾದಕ ಸಹಕಾರಿ ಸಂಘಗಳನ್ನು ಹೊಂದಿರುವುದಷ್ಟೇ ಅಲ್ಲ ಸುಮಾರು 30 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರ ಸದಸ್ಯತ್ವವನ್ನು ಹೊಂದಿದೆ. ಬಹುಶಃ ಇದರ ಶ್ರೀಮಂತಿಕೆಯ ಮೇಲೆ ಕಣ್ಣು ಹಾಕಿರುವ ಕೇಂದ್ರ ಸಚಿವ ಅಮಿತ್ ಷಾ ನಂದಿನಿಯನ್ನು ತನ್ನ ರಾಜ್ಯದ ಅಮೂಲಿನ ಗೂಟಕ್ಕೆ ಕಟ್ಟಿ ಹಾಕುವ ವ್ಯವಸ್ಥಿತ ಹುನ್ನಾರ ನಡೆಸುತ್ತಿರುವುದು ವಿಷಾದನೀಯ. ನಂದಿನಿ ಮೊಸರಿನ ಪ್ಯಾಕೇಟ್ ಮೇಲೆ ಹಿಂದಿಯ 'ದೈ' ಹೇರಿರುವುದು ಇದಕ್ಕೆ ಸಾಕ್ಷಿಯಾಗಿದೆ. ಕೆಎಂಎಫ್ ನ್ನು ತನ್ನದೇ ರಾಜ್ಯದ ಗುಜರಾತ್ ಕೋ- ಓಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ನಿನಡಿ ತಂದು, ಈಗಾಗಲೇ ಉತ್ತರ ಭಾರತದಲ್ಲಿ ಅನ್ಯ ಸಂಸ್ಥೆಗಳ ಹಾಲಿನ ಆಕ್ರಮಣದಿಂದ ಜರ್ಜರಿತವಾಗಿರುವ ಅಮೂಲನ್ನು ದೇಶವ್ಯಾಪಿಗೋಳಿಸುವುದು ಮತ್ತು ಹಾಲು ಉತ್ಪಾದನೆಯಲ್ಲಿಯೂ ಗುಜರಾತ್ ಏಕಸಾಮ್ಯ ಮೆರೆಸುವುದು ಇವರ ಗುರಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ಅಷ್ಟಕ್ಕೂ ಕೆಎಂಎಫ್ ರಾಜ್ಯದ ಸಹಕಾರಿ ಸಂಸ್ಥೆಗಳ ಕಾನೂನಿನಡಿ ನೊಂದಾಯಿತ ಸಂಸ್ಥೆ. ಇದನ್ನು ದೇಶದ ಇನ್ನೊಂದು ರಾಜ್ಯ ನೊಂದಾಯಿತ ಸಹಕಾರಿ ಸಂಸ್ಥೆಯೊಂದಿಗಾಗಲಿ ಅಥವಾ ಬಹುರಾಜ್ಯ ನೊಂದಾಯಿತ ಸಹಕಾರಿ ಸಂಸ್ಥೆಯೊಂದಿಗಾಗಲಿ ವಿಲೀನ ಗೊಳಿಸುವುದು ಸಹಕಾರಿ ಸಂಸ್ಥೆಗಳ ನಿಯಮಾವಳಿಗಳ ಉಲ್ಲಂಘನೆ ಎನ್ನ ಬಹುದಾಗಿದೆ. ಇದು ದೇಶದ ಸಹಕಾರಿ ಕ್ಷೇತ್ರವನ್ನು ದುರ್ಬಲಗೊಳಿಸುವ ಹುನ್ನಾರವಾಗಿದೆ. ಬಹುಶಃ ಈ ಘಟನೆ ಲಾಭದಲ್ಲಿದ್ದ ಈ ನಾಡಿನ ಹೆಮ್ಮೆಯ ವಿಜಯ ಬ್ಯಾಂಕನ್ನು ಗುಜರಾತ್ ಮೂಲದ ನಷ್ಟದಲ್ಲಿದ್ದ ಬರೋಡ ಬ್ಯಾಂಕಿನೊಂದಿಗೆ ವಿಲೀನಗೊಳಿಸಿರುವ ಈ ಸರಕಾರದ ಜನ ವಿರೋಧಿ ಪ್ರಕ್ರಿಯೆಯನ್ನು ನೆನಪಿಸುತ್ತದೆ.

ಬಹುಶಃ ಯಾವುದೇ ಕಾರಣಕ್ಕೂ ನಂದಿನಿಯನ್ನು ಅಮೂಲ್ ನೊಂದಿಗೆ ವಿಲೀನ ಗೊಳಿಸದಂತೆ ನೋಡಿಕೊಳ್ಳುವುದು ಈ ಸಹಕಾರಿ ಸಂಸ್ಥೆಯ ಎಲ್ಲ ಸದಸ್ಯರ, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಆದರೆ ದುರಾದೃಷ್ಟವಶಾತ್ ಇಲ್ಲಿಯೂ ಪಕ್ಷ ರಾಜಕೀಯದ ಕಪಿಮುಷ್ಠಿಗೆ ಸಿಲುಕಿ ಅದನ್ನು ಬೆಂಬಲಿಸುವ ಮಂದಿ ಸಂಸ್ಥೆಯ ಒಳಗಿದ್ದೇ ನಂದಿನಿಗೆ ವಿಷ ಹಾಕುತ್ತಿರುವುದು ಖಂಡನೀಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Recent Posts
Advertisement