ರಾಜ್ಯಾದ್ಯಂತ ಅಧಿಕಾರ ಕಳೆದುಕೊಂಡು, ಹೀನಾಯವಾದ ಸೋಲಿನ ಹತಾಶೆಯಲ್ಲಿರುವ 'ತಲೆಯೇ ಇಲ್ಲದ ಕಬಂಧ ಮನಸ್ಥಿತಿ'ಯವರು ತಲೆ ಬೋಳಿಸಿಕೊಳ್ಳುವ ಸವಾಲೆಸೆಯುವುದು ಒಂದು ಸಮಸ್ಯೆಯೇ ಅಲ್ಲ. ಬಹುಶಃ ಈ ಭಂಡ ದೈರ್ಯದಿಂದಲೇ ಅಂತವರು ತಲೆ ಬೋಳಿಸಿಕೊಳ್ಳುವ ಪ್ರತಿಜ್ಞೆ ಮಾಡುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆಯೊಂದನ್ನು ಉಲ್ಲೇಖಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಲೇವಡಿ ಮಾಡಿದೆ.
ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಮತದಾರರಿಗೆ ನೀಡಿದ ಐದು ಭರವಸೆಗಳನ್ನು ತಾನು ಅಧಿಕಾರಕ್ಕೆ ಬರುತ್ತಲೆ ತನ್ನ ಸರಕಾರದ ಸಂವಿಧಾನದತ್ತ ಅಧಿಕಾರ ಬಳಸಿಕೊಂಡು ಕಾನೂನಾತ್ಮಕ ಬದ್ಧತೆಯೊಂದಿಗೆ ಹಂತಹಂತವಾಗಿ ಅನುಷ್ಠಾನಗೊಳಿಸಿ ಜನರಿಗೆ ತಲುಪಿಸುವ ದಿನಾಂಕ ಘೋಷಿಸಿದೆ. ಇದನ್ನು ಕಂಡು ದೃತಿಗೆಟ್ಟು ಹತಾಶರಾದ ಉಡುಪಿ ಜಿಲ್ಲೆಯ ಬಿಜೆಪಿಯ ನಾಯಕರೆನ್ನಿಸಿಕೊಂಡವರು ತಲೆ ಬೋಳಿಸುವ ಪ್ರತಿಜ್ಞೆಯ ಹಂತಕ್ಕೆ ಇಳಿದದ್ದು ಅವರ ಮನೋವೈಕಲ್ಯಕ್ಕೆ ಸಾಕ್ಷಿ. ಇವರ ರಾಜಕೀಯ ನಡೆಯ ಜನವಿರೋಧಿ ನಿಲುವು ಈ ಮೂಲಕ ಬಟಾ ಬಯಲಾಗಿದೆ. ಬಹುಶಃ ಕಳೆದ ಐದು ವರ್ಷಗಳಿಂದ ಜನರನ್ನು ಸುಲಿದೇ ಬಲಿದು ಅಧಿಕಾರ ನಡೆಸಿದ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಪಕ್ಷದ ಈ ಜನಪರ ಚಿಂತನೆಯ ಯೋಜನೆಗಳು ತಮ್ಮ ಅಧಿಕಾರ ಹರಣದ ಮಗ್ಗುಲ ಮುಳ್ಳಾಗಿ ಕಾಡಿ ಇಂತಹ ಅಪಸವ್ಯದ ಪ್ರತಿಜ್ಞೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಪಕ್ಷದ ಜನಾಭಿವೃದ್ದಿಯ ಕೊಡುಗೆಗಳನ್ನು ಠೀಕಿಸುವುದನ್ನು ರಾಜಕೀಯ ಕಾಯಕವಾಗಿಸಿಕೊಂಡ ಬಿಜೆಪಿ ಜಿಲ್ಲಾಧ್ಯಕ್ಷರು ಈ ಮೊದಲು ಲೋಕಸಭಾ ಚುನಾವಣೆಯ ಮುನ್ನ ದೇಶವಾಸಿಗಳಿಗೆ ನೀಡಿದ ಭರವಸೆಗಳು ಏನಾದವು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಕಾಂಗ್ರೆಸ್ ಆಡಳಿತಾವದಿಯಲ್ಲಿ ವಿಶ್ವದ ಅಭಿವೃದ್ದಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಈ ದೇಶವನ್ನು ತನ್ನ ಆಡಳಿತಾವದಿಯ ಅಪರ ಆರ್ಥಿಕ ನೀತಿಯಡಿಯಲ್ಲಿ 164ನೇ ಸ್ಥಾನಕ್ಕೆ ತಳ್ಳಿದ ಬಿಜೆಪಿಯವರಿಗೆ ಈ ಬಗ್ಗೆ ಆತ್ಮಾಮಾವಲೋಕನ ಮಾಡಿಕೊಳ್ಳುವ ಶಕ್ತಿಯಾದರು ಎಲ್ಲಿಂದ ಬರಬೇಕು. ಸುಳ್ಳು ಭರವಸೆಗಳ ಸರದಾರರಿಗೆ ಕಾಂಗ್ರೆಸ್ ಪಕ್ಷದ ಭರವಸೆಗಳು ಸುಳ್ಳಾಗಿ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಈ ಬಗ್ಗೆ ಕಾಂಗ್ರೆಸ್ ತಲೆ ಕೆಡಿಸಿಕೊಳ್ಳಲಾರದು.. ಆದರೆ ಅವರು ತಮ್ಮ ಪ್ರತಿಜ್ಞೆಯಂತೆ ತಲೆಬೋಳಿಸಿಕೊಳ್ಳುವುದು ಯಾವಾಗ ಎಂದು ಘೋಷಿಸಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.