Advertisement

ಬಿಜೆಪಿ ಸರ್ಕಾರದ ನಿರ್ಣಯದ ಫಲವೇ ವಿದ್ಯುತ್ ಬಿಲ್ ಹೆಚ್ಚಳ: ಜಿಲ್ಲಾ ಕಾಂಗ್ರೆಸ್ ಆರೋಪ

Advertisement

ಈ ತನಕವೂ ಪ್ರತಿಪಕ್ಷ ನಾಯಕನ ಹೆಸರು ಘೋಷಿಸಲಾಗದಷ್ಟು ಹೀನಾಯವಾಗಿ ಸೋತಿರುವ ಬಿಜೆಪಿಯು ಇದೀಗ ಕಾಂಗ್ರೆಸ್‌ನ ಯಶಸ್ಸನ್ನು ಸಹಿಸಲಾಗದೆ ಕಾಂಗ್ರೆಸ್‌ ಪಕ್ಷದ ಐದು ಗ್ಯಾರಂಟಿಗಳ ಕುರಿತು ಅಪಪ್ರಚಾರ ನಡೆಸುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.

ವಿಧಾನಸಭೆಯಲ್ಲಿ ಪ್ರತಿಪಕ್ಷವಾಗಿ ಕೂತು ಈ ವರೆಗೂ ತನ್ನ ನಾಯಕನನ್ನು ಆಯ್ಕೆ ಮಾಡುವ ಕನಿಷ್ಠ ಸಾಮರ್ಥ್ಯ ಇಲ್ಲದ ಬಿಜೆಪಿ ತನ್ನ ಅಸ್ತಿತ್ವ ತೋರಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳ ಬಗ್ಗೆ ವ್ಯರ್ಥ ಪ್ರಲಾಪ ಮಾಡುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.

ವಿದ್ಯುತ್ ಬಿಲ್ ಯುನಿಟಿಗೆ 70 ಪೃಸೆ ಹೆಚ್ಚಳ ಆದೇಶ ಬಿಜೆಪಿ ಆಡಳಿತಾವದಿಯದ್ದೇ ಹೊರತು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರದ್ದಲ್ಲ. 22-23ನೇ ವರ್ಷದ ಇಂಧನ ಹೊಂದಾಣಿಕೆ ಶುಲ್ಕ, ಆರ್ಥಿಕ ಕ್ರೋಢೀಕರಣದ ಗುರಿಯೊಂದಿಗೆ ರಾಜ್ಯದ 5ಎಸ್ಕಾಂಗಳು ಈ ವರ್ಷಾರಂಭದಲ್ಲಿ ಸಲ್ಲಿಸಿದ ಬೇಡಿಕೆಯಂತೆ ಕರ್ನಾಟಕ ವಿಧ್ಯುತ್ ನಿಯಂತ್ರಣ ಆಯೋಗ ಎಪ್ರಿಲ್ ಒಂದರಿಂದಲೇ ಪೂರ್ವಾನ್ವಯವಾಗುವಂತೆ ಮೇ 8ರಂದು ಈ ಪ್ರಸ್ತಾವನೆಯನ್ನು ಅನುಮೋದಿಸಿ ಮೇ 12ರಂದು ಆದೇಶಿಸಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರಲಿಲ್ಲ. ಆದರೆ 200ಯುನಿಟ್ ಉಚಿತ ವಿಧ್ಯುತ್ ಹಾಗೂ ಇತರ ಗ್ಯಾರಂಟಿಗಳ ವಿರುದ್ದ ಅಪಪ್ರಚಾರ ಮಾಡುತ್ತಲೇ ಇರುವ ಬಿಜೆಪಿ ಈ ಬಿಲ್ ದರ ಏರಿಕೆಯನ್ನು ಕಾಂಗ್ರೆಸ್ಸಿನ ತಲೆಗೆ ಕಟ್ಟಲು ನೋಡಿ ತಾನು ಜನ ವಿರೋಧಿ ಎಂಬುದನ್ನು ಸಾಭೀತು ಮಾಡಿದೆ ಎಂದು ಕಾಂಗ್ರೆಸ್ ಹೇಳಿದೆ.

ಇತ್ತೀಚಿನ ವರದಿಯಂತೆ ರಾಜ್ಯದ ಈ ಎಲ್ಲ ಉಚಿತ ಯೋಜನೆಗಳಿಗೆ ಬೇಕಿರುವುದು ಸುಮಾರು 53ರಿಂದ 56ಸಾವಿರ ಕೋಟಿ ರೂ. ಈ ಉಚಿತ ಯೋಜನೆಯ ಗ್ಯಾರಂಟಿಯಿಂದ ದೇಶ ದಿವಾಳಿಯಾಗುತ್ತದೆ ಎನ್ನುವ ದೇಶದ ಪ್ರಧಾನಿ ಆದಿಯಾಗಿ ಬಿಜೆಪಿ ನಾಯಕರಿಗೆ ದೇಶದ 6.25ಲಕ್ಷ ಕೋಟಿಯ ಉದ್ಧಿಮೆಯನ್ನು ಖಾಸಗಿಯವರಿಗೆ ನೀಡಿದಾಗ, ದೇಶದ ಬೃಹತ್ ಉದ್ಧಿಮೆದಾರರಿಗೆ 2.25ಲಕ್ಷ ಕೋಟಿ ರೂ. ತೆರಿಗೆ ವಿನಾಯತಿ ನೀಡಿದಾಗ, ಬೃಹತ್ ಉದ್ದಿಮೆದಾರರ ಸುಮಾರು 10 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದಾಗ, ತಮ್ಮ ವೈಯಕ್ತಿಕ ಪ್ರತಿಷ್ಟೆಗಾಗಿ ಅನಗತ್ಯ ಯೋಜನೆಗಳಿಗಾಗಿ ಕೋಟಿಗಟ್ಟಲೆ ಹಣ ವ್ಯಯಿಸಿದಾಗ ಮತ್ತು ನಮ್ಮ ಆರ್ಥಿಕ ಶಕ್ತಿಯನ್ನು ಮೀರಿ ಅನ್ಯರಾಷ್ಟ್ರಗಳಿಗೆ ನಮ್ಮ ಜನರ ತೆರಿಗೆಯ ಹಣವನ್ನು ಸಾಲದ ರೂಪದಲ್ಲಿಯೋ ಅನುಧಾನದ ರೂಪದಲ್ಲಿಯೋ ನೀಡಿದಾಗ ದಿವಾಳಿಯಾಗದ ಈ ದೇಶ, ರಾಜ್ಯವೊಂದು ಬಡವರಿಗಾಗಿ ತನ್ನ ಆದಾಯದಲ್ಲಿ 56 ಸಾವಿರ ಕೋಟಿ ರೂ. ವೆಚ್ಚದ ಜನಪರ ಉದಾರ ಯೋಜನೆಯೊಂದನ್ನು ಹಮ್ಮಿಕೊಂಡಾಗ ದಿವಾಳಿಯಾಗಲು ಸಾಧ್ಯವೇ ಈ ಬಗ್ಗೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್ ಹೇಳಿದೆ.

ಈಗ ತಾನೆ ಅಧಿಕಾರ ಹಿಡಿದ ರಾಜ್ಯ ಸರಕಾರದ ಉಚಿತ ಯೋಜನೆಗಳನ್ನು ಟೀಕಿಸುವವರು ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಯಶಸ್ವಿ ಆಡಳಿತ, ಆರ್ಥಿಕ ನೀತಿಯ ಮತ್ತು ಅಂದು ಜಾರಿಗೆ ತಂದ ಯೋಜನೆಗಳ ಬಗ್ಗೆ ಪುನರಾವಲೋಕನ ಮಾಡಿಕೊಳ್ಳಲಿ. ಸೋಲಿನಿಂದ ಧೃತಿಗೆಟ್ಟು ಸುಳ್ಳು ಹೇಳಿಕೆಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತೇವೆ ಎಂಬ ಭ್ರಮೆಯನ್ನು ಬಿಟ್ಟು , ತಾಕತ್ತಿದ್ದರೆ ಈ ಉಚಿತ ಜನಪರ ಯೋಜನೆಗಳು ಬೇಕೇ ಬೇಡವೇ ಎಂಬುದನ್ನು ಜನರ ಮುಂದೆ ನೇರವಾಗಿ ಹೇಳಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Recent Posts
Advertisement