Advertisement

ಕೇರಳದ "ಪೊದಿಚೋರು" ಮತ್ತು "ಡಿವೈಎಫ್‌ಐ" ಕಾರ್ಯಕರ್ತರು!

Advertisement

ನನಗೆ ಈ ಕೇರಳ ಮತ್ತು ಎಡಪಂಥಿಯರು ಅಂದರೆ ಬಲು ಇಷ್ಟ ಆಗೋದು ಇದೇ ಕಾರಣಕ್ಕಾಗಿ: ಪತ್ರಿಕೆ ತಿರುವುತ್ತಿದ್ದಂತೆ ಎದೆಗೆ ನಾಟುವ "ಮಣಿಪುರದ ನಗ್ನ ಮೆರವಣಿಗೆ, ಅತ್ಯಾಚಾರ, ಕೊಲೆ" ಮುಂತಾದ ಸುದ್ದಿಗಳಿಂದ ತತ್ತರಿಸಿಹೋಗುತ್ತಿರುವಾಗ ಕೇರಳದಿಂದ ವರದಿಯಾದ ಸುದ್ದಿಯೊಂದು ಕೊಂಚ ಖುಷಿ ನೀಡಿತು. ಅದನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ.

‘THE HINDU’ Magazine ನಲ್ಲಿ ಇತ್ತೀಚೆಗೆ ಪ್ರಕಟವಾದ ಲೇಖನವಿದು. (ಲೇಖನ : ಆದರ್ಶ ಬಿ.ಪ್ರದೀಪ್ | ತುಳಸಿ ಕಕ್ಕಟ್.)

ಕೇರಳದ ತಿರುವನಂತಪುರದ ಅಂಬಲಮೆಡು ಎಂಬ ಪುಟ್ಟ ಊರಿನಲ್ಲಿ ಆರು ವರ್ಷಗಳ ಹಿಂದೆ ಒಂದು ಪದ್ದತಿಯನ್ನು ಆರಂಭಿಸಲಾಯಿತು. ಈ ಪದ್ದತಿ ತುಂಬ ಸರಳ. ಏನೆಂದರೆ ಈ ಊರಿನ ಜನ ಪ್ರತಿನಿತ್ಯ ತಮಗೆ ತಿಂಡಿ ಊಟ ತಯಾರಿಸಿಕೊಳ್ಳುವಾಗ ಸ್ವಲ್ಪ ಹೆಚ್ಚೇ ತಯಾರಿಸುತ್ತಾರೆ. ಹೀಗೆ ಹೆಚ್ಚುವರಿಯಾಗಿ ತಯಾರಿಸಿದ ತಿಂಡಿ, ಊಟವನ್ನು ಬಾಳೆ ಎಲೆಗಳಲ್ಲಿ ಪ್ಯಾಕ್ ಮಾಡುತ್ತಾರೆ. ಹೀಗೆ ಪ್ಯಾಕ್ ಮಾಡಿದ ಆಹಾರದ ಪೊಟ್ಟಣಗಳನ್ನು ಹತ್ತಿರದ ಆಸ್ಪತ್ರೆ ಗಳಿಗೆ ಕೊಂಡೊಯ್ಯುತ್ತಾರೆ. ಅಲ್ಲಿ ಅದನ್ನು ಬಡ ರೋಗಿಗಳಿಗೆ, ರೋಗಿಗಳನ್ನು ನೋಡಿಕೊಳ್ಳಲು ಬಂದ ಪೋಷಕರಿಗೆ ಕೊಡುತ್ತಾರೆ. ಸ್ವೀಕರಿಸುವವರು ಯಾವ ಜಾತಿ, ಯಾವ ಧರ್ಮ ಯಾರಿಗೂ ಗೊತ್ತಿಲ್ಲ. ಆಹಾರ ಪೊಟ್ಟಣ ಕೊಡುತ್ತಿರುವವರು ಕೆಳ ಮಧ್ಯಮ ವರ್ಗದವರು, ಬಾಡಿಗೆ ಮನೆಯಲ್ಲಿರುವವರು, ಶ್ರೀಮಂತರಲ್ಲ. ಆದರೆ ಹಂಚಿ ತಿನ್ನೋಣ ಎಂಬ ಹೃದಯ ಶ್ರೀಮಂತಿಕೆಯುಳ್ಳವರು. ಇದು ಪೋದಿಚೋರು ಎಂದು ಪ್ರಸಿದ್ಧವಾಗಿದೆ.
( ಕೇರಳ ಮೂಲದ ಡಾ.ಕಲ್ಪನಾ "ಪೋದಿಚೋರು" ಬಗ್ಗೆ ವಿವರಣೆ ನೀಡಿದ್ದಾರೆ: ಈ ಶಬ್ದವನ್ನು "ಅನ್ನದ ಬುತ್ತಿಯನ್ನೇ ಬಾಳೆ ಎಲೆಯಲ್ಲಿ ಹೊದಿಸಲಾಗಿದೆ" ಎಂಬರ್ಥದಲ್ಲಿ ಬಳಸಲಾಗುತ್ತದೆ. ಬಾಳೆ ಎಲೆಯಲ್ಲಿ ಬಿಸಿಯಾದ ಅನ್ನ, ಮೂರು ತರಹದ ಪಲ್ಯಗಳು, ಉಪ್ಪಿನಕಾಯಿ, ಮೀನು ಹುರಿದದ್ದು ಇಟ್ಟು ಸುತ್ತಲಾಗುತ್ತದೆ. ಅತ್ಯಂತ ರುಚಿಕರವಾಗಿರುತ್ತದೆ.)

‘ಪೋದಿಚೋರು’ ಈಗ ಒಂದು ವ್ಯವಸ್ಥಿತ ರೂಪ ತಾಳಿದೆ. ಆರಂಭವಾದಾಗ 200 ರಷ್ಟು ಆಹಾರದ ಪೊಟ್ಟಣಗಳು ಸಿದ್ಧಗೊಳ್ಳುತ್ತಿದ್ದರೆ ಈಗ ಅದು 45,000 ರಷ್ಟು ಬೃಹತ್ ಗಾತ್ರಕ್ಕೆ ಬೆಳೆದಿದೆ. ಇದುವರೆಗೆ ಆರೂವರೆ ಕೋಟಿ ಪೋದಿಚೋರು ಆಹಾರದ ಪಟ್ಟಣಗಳನ್ನು ಹಂಚಲಾಗಿದೆ. ಈಗ ಕೇರಳದಾದ್ಯಂತ ಈ ಪದ್ಧತಿ ವ್ಯಾಪಿಸಿದೆ. DYFI ಕಾರ್ಯಕರ್ತರು ‘ಪೋದಿಚೋರು’ ಆಹಾರ ಪೊಟ್ಟಣಗಳನ್ನು ಹಂಚಲು ವ್ಯವಸ್ಥಿತ ಜಾಲವೊಂದನ್ನು ರೂಪಿಸಿಕೊಂಡಿದ್ದಾರೆ. ಇವರು ಮನೆಮನೆಗಳಿಂದ ಪ್ರತಿನಿತ್ಯ ಬೆಳಿಗ್ಗೆ 9 ಗಂಟೆಗೆ ಬಂದು ಆಹಾರ ಪೊಟ್ಟಣ ಸಂಗ್ರಹಿಸುತ್ತಾರೆ. ಈಗ ಆಸ್ಪತ್ರೆಗಳಲ್ಲದೆ, ಡ್ರೈವರ್ ಗಳಿಗೆ, ಅಟೆಂಡರ್ಸ್ ಗಳಿಗೆ, ನರ್ಸ್ ಗಳಿಗೆ, ವಿದ್ಯಾರ್ಥಿಗಳಿಗೆ, ಸೆಕ್ಯುರಿಟಿ ಗಾರ್ಡ್ ಗಳಿಗೆ ಪ್ರತಿದಿನ ಈ ಆಹಾರದ ಪೊಟ್ಟಣಗಳನ್ನು ನೀಡಲಾಗುತ್ತಿದೆ.

ಹಸಿದವರಿಗೆ ಮನೆಯ ಊಟ ಸಿಗುತ್ತಿದೆ ಎಂಬುದು ಮಾತ್ರ ಖುಷಿಯ ಸಂಗತಿಯಲ್ಲ. ಈ ಪೋದಿಚೋರು ಮೂಲಕ ಗಟ್ಟಿಗೊಳ್ಳುತ್ತಿರುವ ಮಾನವ ಸಂಬಂಧಗಳು… ಇದಕ್ಕೆ ಬೆಲೆ ಕಟ್ಟಲು ಸಾಧ್ಯವೆ? ಇಲ್ಲಿ ಮಣಿಪುರ ಕಲಿಯಬೇಕಾದ ಪಾಠವಿದೆ. ನಮ್ಮದೇ ಕರ್ನಾಟಕವೂ ಕಲಿಯಬೇಕಾದ ಪಾಠವಿದೆ. ಶರಣು ಡಿವೈಎಫ್‌ಐ ಗೆಳೆಯರೆ, ನಮಸ್ತೆ ಕೇರಳ.

~ ಡಾ. ಸರ್ಜಾಶಂಕರ್ ಹರಳಿಮಠ (ಕೃಪೆ: ವಾಟ್ಸ್ಯಾಪ್)

Advertisement
Advertisement
Recent Posts
Advertisement