ಮೋದಿ ಸರಕಾರ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಮೊದಲ ಬಾರಿಗೆ ನಿನ್ನೆ ಅಂದರೆ 2023 ಅಗಸ್ಟ್ 19ರಂದು ಲಡಾಖ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ಆರೆಸ್ಸೆಸ್ ನಿಂದ ನಿಯೋಜಿತರಾಗಿರುವವರು ವಾಸ್ತವವಾಗಿ ದೇಶದ ಸಚಿವಾಲಯಗಳನ್ನು ನಡೆಸುತ್ತಿದ್ದಾರೆ ಮತ್ತು ಎಲ್ಲವನ್ನೂ ಸೂಚಿಸುತ್ತಿದ್ದಾರೆ' ಎಂದು ಹೇಳಿದ್ದನ್ನು ಉಲ್ಲೇಖಿಸಿಕೊಂಡು ಹಾಗೂ ನೋಟು ಬ್ಯಾನ್ ನಡೆದು 6¾ ವರ್ಷ ತುಂಬಿರುವ ಈ ಹೊತ್ತಿನಲ್ಲಿ ಆ ಕುರಿತು ಯೋಚನೆಗೆ ಹಚ್ಚುವ, ಚರ್ಚೆಗೆಳೆವ ಒಂದು ಸಣ್ಣ ಪ್ರಯತ್ನದ ಭಾಗವಾಗಿ ಒಂದು ವರ್ಷ ಹಿಂದಿನ ಈ ಸಂಪಾದಕೀಯ ಲೇಖನವನ್ನು ಇಲ್ಲಿ ಮರುಪ್ರಕಟಿಸಲಾಗಿದೆ.
ಆಡಳಿತಾತ್ಮಕವಾಗಿ ನೋಡುವುದಾದರೆ ನೋಟುಬ್ಯಾನ್ ಮೋದಿ ಸರ್ಕಾರದ ತಪ್ಪು ನಡೆಯಲ್ಲ. ಆದರೆ ಅದು ಅವರ "ಸರ್ಕಾರದ ಕುತಂತ್ರಿ ಸಲಹೆಗಾರರ ಹಿಡೆನ್ ಅಜೆಂಡಾದ ಭಾಗ"ವಾಗಿತ್ತು ಎಂಬ ಅಭಿಪ್ರಾಯ ದೇಶದ ಆರ್ಥಿಕ ತಜ್ಞರಲ್ಲಿ ಇದೆ.
ನೋಟುಬ್ಯಾನ್ ಏಕೆ ತಪ್ಪು ನಡೆಯಲ್ಲ?ತಪ್ಪುನಡೆಯಲ್ಲವಾದರೆ ಕಪ್ಪು ಹಣ ಅದೇಕೆ ದೇಶದ ಖಜಾನೆ ಸೇರಲಿಲ್ಲ? ಯಾರು ಆ ಕುತಂತ್ರಿ ಸಲಹೆಗಾರರು? ಏನು ಆ ಕುತಂತ್ರದ ಭಾಗ? ನಿಜಕ್ಕೂ ಅದರಿಂದ ಲಾಭ ಪಡೆದವರು ಯಾರು? ಹಾಗಾದರೆ ಸ್ವಾತಂತ್ರ್ಯಾ ನಂತರದ ಈ ಎಪ್ಪತ್ತು ವರ್ಷಗಳಲ್ಲಿ ಹಂತಹಂತವಾಗಿ ಸೃಷ್ಟಿಯಾಗಿ ದೇಶದ ಮಾರುಕಟ್ಟೆಯಲ್ಲಿ "ನೋಟಿನ ರೂಪದಲ್ಲಿ ಕೈ ಬದಲಾವಣೆಗೊಳ್ಳುತ್ತಿದ್ದ ಕಪ್ಪುಹಣ" ಇದೀಗ ಯಾರ ಖಜಾನೆ ಸೇರಿದೆ?
ಅಥವಾ... ಮೋದಿಯವರಿಗಿಂತಲೂ ಮೊದಲು ಈ ದೇಶವನ್ನಾಳಿದ ಕಾಂಗ್ರೆಸ್ ಸರ್ಕಾರಗಳ ಬಿಗು ಆರ್ಥಿಕ ನೀತಿಯಿಂದಾಗಿ ದೇಶದಲ್ಲಿ ಕಪ್ಪುಹಣವೇ ಇದ್ದಿರಲೇ ಇಲ್ಲವೇ?
ಈ ನಡುವೆ "ನೋಟು ಬ್ಯಾನ್ ಸ್ವತಂತ್ರ ಭಾರತದ ಅತಿದೊಡ್ಡ ಆರ್ಥಿಕ ಹಗರಣ" ಎಂದು ದೇಶದ ಖ್ಯಾತ ಆರ್ಥಿಕ ತಜ್ಞರುಗಳು ನೋಟುಬ್ಯಾನ್ ನಡೆದ ಕೆಲವೇ ಕೆಲವು ತಿಂಗಳ ನಂತರದಲ್ಲಿ ನೀಡಿದ್ದ ಹೇಳಿಕೆಗಳನ್ನು ನಾವಿಲ್ಲಿ ಉಲ್ಲೇಖಿಸಲೇ ಬೇಕಾಗುತ್ತದೆ!
ಹಾಗೆಯೇ ಈ ನೋಟುಬ್ಯಾನ್ 2016ರ ನವೆಂಬರ್ 8ರ ರಾತ್ರಿ 8ಗಂಟೆಗೆ ಏಕಾಏಕಿಯಾಗಿ ಪ್ರಧಾನಿ ಮೋದಿಯವರ ತಲೆಯಿಂದ ಬಂದ ಆಲೋಚನಾ ಲಹರಿಯೂ ಆಗಿರಲಿಲ್ಲ. ಅದು ಕಳೆದ ನಾಲ್ಕಾರು ದಶಕಗಳ ಕಾಲದಿಂದಲೂ ದೇಶದ ಆರ್ಥಿಕತೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದ, ಅಭ್ಯಸಿಸಿದ ದೇಶದ ದೊಡ್ಡ ದೊಡ್ಡ ಆರ್ಥಿಕ ತಜ್ಞರುಗಳ ಪ್ರಾಮಾಣಿಕ ಕಾಳಜಿಯ ವರದಿಗಳ ಫಲವಾಗಿ ನಡೆದಿತ್ತು. ಹಾಗೆಯೇ ಅದು ಮೋದಿ ಸರ್ಕಾರದ ತಪ್ಪು ನಡೆಯೂ ಆಗಿರಲಿಲ್ಲ. ಬದಲಿಗೆ ಅದು ಪೂರ್ವತಯಾರಿ ಇಲ್ಲದ ಅಥವಾ ಈ ಮೇಲೆ ಹೇಳಿದಂತೆ ''ಹಿಡೆನ್ ಅಜೆಂಡಾ (ಗುಪ್ತ ಕಾರ್ಯಸೂಚಿ) ಹೊಂದಿರುವ ಸಲಹೆಗಾರರ ಸಲಹೆ"ಗಳನ್ನು ಗಡಿಬಿಡಿಯಲ್ಲಿ ಮೋದಿ ಸರ್ಕಾರ ಜಾರಿಗೊಳಿಸಿದ ಕಾರಣಕ್ಕಾಗಿ ದೇಶದ ಆರ್ಥಿಕತೆಯನ್ನು ಬುಡಮೇಲುಗೊಳಿಸಿತು ಎನ್ನುವುದರಲ್ಲಿ ಎರಡು ಮಾತಿಲ್ಲ.
ವರದಿಯೊಂದರ ಪ್ರಕಾರ, "ಸಣ್ಣ ಮಧ್ಯಮ ವ್ಯಾಪಾರಿಗಳ ಕೈಯಲ್ಲಿ ದೈನಂದಿನ ವ್ಯವಹಾರಕ್ಕೆ ಸಾಮಗ್ರಿಗಳ ರೂಪದಲ್ಲಿ ಕೈ ಬದಲಾವಣೆಯಾಗುತ್ತಿದ್ದ, ಮೂಲತಃ ದೊಡ್ಡ ದೊಡ್ಡ ಉಧ್ಯಮಿಗಳ ಆ ಕಪ್ಪುಹಣವನ್ನು ಮಾರುಕಟ್ಟೆಯಲ್ಲಿ ಹಾಗೆಯೇ ಇರಲು ಬಿಟ್ಟರೆ, ದೇಶದ ಆರ್ಥಿಕತೆಯನ್ನು ಬಹುಸುಲಭವಾಗಿ ದ್ವಿಗುಣಗೊಳಿಸುತ್ತಾ ಸಾಗಬಹುದು" ಎಂಬ ಆರ್ಥಿಕ ತಜ್ಞರುಗಳ ವರದಿಗಳ ಆಧಾರದ ಮೇಲೆ ಆ ಕುರಿತು ಮೋದಿಗಿಂತಲೂ ಹಿಂದೆ ಆಳಿದ ಎಲ್ಲಾ ಸರ್ಕಾರಗಳು ತಳೆದ ಧೃಡ ನಿಲುವಿನ ಫಲವಾಗಿ ಅದು ಮಾರುಕಟ್ಟೆಯಲ್ಲೆ ಖಾಯಂ ಉಳಿದು ದೇಶದ ಆರ್ಥಿಕತೆಗೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಲೇ ಬಂದಿತ್ತು.
ನಿಜ ಹೇಳಬೇಕೆಂದರೆ, ದೇಶದ ಮಾರುಕಟ್ಟೆಯಲ್ಲಿದ್ದ ಕಪ್ಪುಹಣ ಮೋದಿ ಸರ್ಕಾರ ಜಾರಿಗೊಳಿಸಿದ ನೋಟು ಬ್ಯಾನ್‌ನ ಪರಿಣಾಮವಾಗಿ, ನೇರವಾಗಿ ಸರ್ಕಾರದ ಖಜಾನೆ ಸೇರಿದ್ದರೆ ದೇಶವಿಂದು ಜಗತ್ತಿನ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿತ್ತು. ಏಕೆಂದರೆ ಮತ್ತೊಂದು ವರದಿಯ ಪ್ರಕಾರ ನೋಟು ಬ್ಯಾನ್ ಮಾಡಲಾದ ಸಮಯದ ವರೆಗೆ ಸರ್ಕಾರ ಮುದ್ರಿಸಿದ್ದ ಕೇವಲ 500 ಮತ್ತು 1000 ರೂಪಾಯಿಯ ನೋಟುಗಳು ಮೊತ್ತವೇ ಬರೋಬ್ಬರಿ 15.44 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಮತ್ತು ಅದೇ ವರದಿಯ ಪ್ರಕಾರ ದೇಶದ ಉಧ್ಯಮಿಗಳು ಸರ್ಕಾರಕ್ಕೆ ಲೆಕ್ಕ ಕೊಡದ ಅಥವಾ ದೇಶದ ಮಾರುಕಟ್ಟೆಗೆ ಹರಿಯಬಿಟ್ಟಿದ್ದ ಕಪ್ಪುಹಣ ಕನಿಷ್ಟ 4ರಿಂದ 5ಲಕ್ಷ ಕೋಟಿ ರೂಪಾಯಿ ಆಗಿತ್ತು. ಅಂದರೆ ಕನಿಷ್ಠ 30ರಿಂದ 35 % ರಷ್ಟು ಅಂದಾಜು ಕಪ್ಪುಹಣ ನೋಟಿನ ರೂಪದಲ್ಲೆ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿತ್ತು.
ಅಂದರೆ, ಮಾರುಕಟ್ಟೆಯಲ್ಲಿನ ಆ ಕಪ್ಪುಹಣದ ಮೂಲಕವೇ ದೇಶದಾದ್ಯಂತ ಕೋಟ್ಯಾಂತರ ಉದ್ಯೋಗಗಳು ಸೃಷ್ಟಿಯಾಗಿ ನಿರುದ್ಯೋಗಿ ಬಡವರ ಮನೆಗಳು ಉದ್ಧಾರವಾಗಿದ್ದವು. ಆ ಮೂಲಕ ಕಾಳಧನಿಕರ ದುಡ್ಡಿನಲ್ಲಿ, ಸಣ್ಣ ವ್ಯಾಪಾರಿಗಳ ವ್ಯಾಪಾರ ಲೀಲಾಜಾಲವಾಗಿ ನಡೆದು ಆ ಮೂಲಕ ಪರೋಕ್ಷ ತೆರಿಗೆ ಕೂಡ ಸರ್ಕಾರದ ಖಜಾನೆ ಸೇರ್ಪಡೆಗೊಳ್ಳುತ್ತಿತ್ತು.
ಆದರೆ ನೋಟು ಬ್ಯಾನ್ ಆಗಿ ಬರೋಬ್ಬರಿ ಹತ್ತು ತಿಂಗಳ ತರುವಾಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಸರ್ಕಾರ ಮುದ್ರಿಸಿದ ನೋಟುಗಳ 99.3%ರಷ್ಟು ಆರ್‌ಬಿಐ ಗೆ ವಾಪಾಸಾಗಿತ್ತು. ಹಾಗಾದರೆ, ಇದು ಹೇಗೆ ಸಾಧ್ಯ? ಸಾಧ್ಯವಾಗಬೇಕಿದ್ದರೆ, ಈ ಮೇಲೆ ಉಲ್ಲೇಖಿಸಿದಂತೆ, ಒಂದೋ 2014ಕ್ಕೂ ಮುಂಚೆ ಈ ದೇಶವನ್ನಾಳಿದ ಕಾಂಗ್ರೆಸ್‌ನ ಬಿಗು ಆಡಳಿತದಿಂದಾಗಿ ದೇಶದಲ್ಲಿ ಕಪ್ಪುಹಣವೇ ಇದ್ದಿರಲಿಲ್ಲ ಎಂದು ಮೋದಿ ಸರ್ಕಾರ ಒಪ್ಪಿಕೊಳ್ಳಬೇಕು ಇಲ್ಲವೇ ತನ್ನದೇ ಸರ್ಕಾರದೊಳಗಿನ "ನೋಟು ಬ್ಯಾನ್‌ನ ಹಿಡೆನ್ ಅಜೆಂಡಾದ ರೂವಾರಿ"ಗಳು ಕಪ್ಪುಹಣವನ್ನು ಕಮಿಷನ್ ಪಡೆದು ಬದಲಾಯಿಸಿ ಕೊಟ್ಟಿದ್ದರು ಎಂಬುವುದನ್ನಾದರೂ ಒಪ್ಪಿಕೊಳ್ಳಬೇಕಾಗುತ್ತದೆ.
ನಿಜಕ್ಕೂ ವಿಷಯವಿರುವುದು ಇಲ್ಲಿಯೇ... ಅದು ಏನೆಂದರೆ,
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಪರವಾಗಿ ದೇಶದ ಯುವಕರನ್ನು ಬ್ರಿಟಿಷ್ ಸೈನ್ಯಕ್ಕೆ ಸೇರ್ಪಡೆಗೊಳಿಸುತ್ತಾ, ಸ್ವಾತಂತ್ರ್ಯ ಹೋರಾಟಗಾರರ ವಿರುದ್ದ ಬ್ರಿಟೀಷರ ಪರ ಮಾಹಿತಿದಾರರಾಗಿ ಕೆಲಸ ಮಾಡುತ್ತಾ ಹಾಗೂ ಸ್ವಾತಂತ್ರ್ಯ ಸಿಗುವ ವೇಳೆಗೆ ಸ್ವಾತಂತ್ರ್ಯದ ಪರವಾಗಿ ಹೋರಾಡಿದ್ದ ನೈಜ ದೇಶಪ್ರೇಮಿಗಳ ಪ್ರಭಾವದಿಂದಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಾಗದೆ ಅವಕಾಶ ವಂಚಿತಗೊಂಡಿದ್ದ "ಮನುವಾದಿ ಸಂಘ ಟನೆ" ಹಂತಹಂತವಾಗಿ ಆಡಳಿತ ಯಂತ್ರದೊಳಗೆ ತುರುಕಿಕೊಂಡು ತನ್ನ ಹಿಡೆನ್ ಅಜೆಂಡಾದ ಜಾರಿಗನುಗುಣವಾಗಿ ಕೆಲಸ ಮಾಡುತ್ತಲೇ ಬಂತು ಎನ್ನುವ ಅಂಶ ಸ್ವಾತಂತ್ರ್ಯ ನಂತರದ ಇತಿಹಾಸವನ್ನು ಅಭ್ಯಸಿಸಿದರೆ ತಿಳಿದು ಬರುವ ಸತ್ಯವಾಗಿದೆ.
ಹಾಗೆಯೇ, ಹಳೆಚಾಳಿ ಮುಂದುವರಿಸಿದ ಆ ಮನುವಾದಿ ಸಂಘ ಟನೆ ಒಂದೆಡೆ ದೇಶದ ಯುವಕರನ್ನು ದೇಶಪ್ರೇಮದ ಹೆಸರಿನಲ್ಲಿ ಬ್ರೈನ್‌ವಾಷ್ ಮಾಡಿ ಸ್ವಾತಂತ್ರ್ಯ ಹೋರಾಟಗಾರರ ವಿರುದ್ದ, ಜನಪರ ಕಾರ್ಯಕ್ರಮಗಳ ಜಾರಿಯಲ್ಲಿ ತೊಡಗಿರುವ ಕಾಂಗ್ರೆಸ್ ವಿರುದ್ಧ ಸಂಘಟಿಸುತ್ತಲೇ ಬಂದರೆ, ಮತ್ತೊಂದೆಡೆ ಒಂದಷ್ಟು ಬ್ರೈನ್‌ವಾಷ್ ಗೊಳಗಾದ ಯುವಕರನ್ನು ದೇಶದ ಸೈನ್ಯ, ಪೋಲಿಸ್ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಐಎಎಸ್ ಹುದ್ದೆ ಮುಂತಾದ ಆಯಕಟ್ಟಿನ ಜಾಗಗಳಲ್ಲಿ ತುರುಕುತ್ತಲೇ ಬಂತು ಮತ್ತು ಆ ಮೂಲಕ ಎಲ್ಲಾ ಇಲಾಖೆಗಳಲ್ಲೂ ಹಿಂದೆ ಆಳಿದ ಮತ್ತು ಇದೀಗ ಆಡಳಿತ ನಡೆಸುವ ಸರ್ಕಾರದ ಸಚಿವರುಗಿಳಿಗಿಂತಲೂ ಹೆಚ್ಚು ಹಿಡಿತ ಸಾಧಿಸುತ್ತಲೇ ಬಂತು... ಹಾಗೆಯೇ, ಹಿಂದೆ ಆಡಳಿತ ನಡೆಸುತ್ತಿದ್ದ ಬೇರೆಬೇರೆ ಪಕ್ಷಗಳ ಸರ್ಕಾರಗಳ ಪ್ರಭಾವಿ ನಾಯಕರುಗಳು ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡಿದ್ದ ತಪ್ಪು ತೀರ್ಮಾನಗಳ, ಭ್ರಷ್ಟಾಚಾರಗಳ ಫೈಲುಗಳನ್ನು ಸಂಗ್ರಹಿಸುತ್ತಲೇ ಬಂತು ಮತ್ತು ಆ ಮೂಲಕ ಆ ಸಚಿವರುಗಳನ್ನು ತನ್ನ ಹಿಡಿತದಲ್ಲಿರಿಸಿಕೊಂಡು ತನ್ನ ಹಿಡೆನ್ ಅಜೆಂಡಾ (ಗುಪ್ತ ಕಾರ್ಯಸೂಚಿ)ಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸುತ್ತಲೇ ಬಂತು.
ಇದೀಗ, ನೋಟುಬ್ಯಾನ್ ಮಾಡುವ ಮೂಲಕ ಸರ್ಕಾರದ ಹಿಂದಿರುವ ಆ ಸಂಘ ಟನೆ ಆರ್ಥಿಕವಾಗಿ ಯಶಸ್ಸನ್ನೂ ಪಡೆಯಿತು. ಅರ್ಥಾತ್, ಸ್ವಾತಂತ್ಯಾ ನಂತರದ ಕಳೆದ ಎಪ್ಪತ್ತು ವರ್ಷಗಳ ಅವಧಿಯಲ್ಲಿ ಸೃಷ್ಟಿಯಾಗಿ ದೇಶದ ಮಾರುಕಟ್ಟೆಯಲ್ಲಿ ಸುಗಮವಾಗಿ ಕೈಬದಲಾಗುತ್ತಿದ್ದ ಅಷ್ಟೂ ಕಪ್ಪುಹಣವನ್ನು ತನ್ನ ಕೈವಶ ಮಾಡಿಕೊಂಡಿತು.
ಬಹುಶಃ ಇದನ್ನೆ, ನಮ್ಮ ದೇಶನಿಷ್ಠ ಆರ್ಥಿಕ ತಜ್ಞರುಗಳು ನೋಟು ಬ್ಯಾನ್ "ಸ್ವತಂತ್ರ ಭಾರತದ ಅತಿದೊಡ್ಡ ಆರ್ಥಿಕ ಹಗರಣ" ಎಂದು ವ್ಯಾಖ್ಯಾನಿಸಿರುವುದಾಗಿದೆ... ಹಾಗಾದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆ ಅಷ್ಟೂ ಹಣದ ನೇರ ಹಕ್ಕುದಾರರಾದ ನಾವು (ಪ್ರಜೆಗಳು) ಆ ಕುರಿತು ತನಿಖೆಗೆ ಆಗ್ರಹಿಸುವುದು ಬೇಡವೇ? ಹಾಗಾದರೆ ಏಕೆ ಆಗ್ರಹಿಸುತ್ತಿಲ್ಲ?
ಕೊನೆಗೂ ಉಳಿಯುವ ಪ್ರಶ್ನೆ: ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?