Advertisement

ಸ್ವಾತಂತ್ರ್ಯ 76, ಶೋಷಣೆ, ಗಾದೆಯ ಮಾತುಗಳು ಮತ್ತು ಉಪೇಂದ್ರ!

Advertisement

ಸಂಪಾದಕೀಯ ಬರಹ: ಚಂದ್ರಶೇಖರ ಶೆಟ್ಟಿ.

ನಿಜ ಹೇಳಬೇಕೆಂದರೆ, ಕರಾವಳಿಗರಾದ ಅದರಲ್ಲೂ ಮುಖ್ಯವಾಗಿ ಕೃಷಿಕರಾದ ನಮಗೆ ಅರಿವಿದ್ದೋ- ಅರಿವಿಲ್ಲದೆಯೋ ಹಲವು "ಗಾದೆ ಮಾತುಗಳು" ನಮ್ಮ ರಕ್ತದಲ್ಲಿ ಐಕ್ಯಗೊಂಡಿವೆ. ವಿವರಗಳನ್ನು ಖಡಿತಗೊಳಿಸಲು ನಾವು ಮಾತುಮಾತಿಗೂ ಗಾದೆಗಳನ್ನು ಉಪಯೋಗಿಸುತ್ತೇವೆ. ಅಥವಾ ಕೆಲವು ಗಾದೆಗಳು ಸಾಂದರ್ಭಿಕವಾಗಿ ನಮ್ಮ ಮಾತುಗಳ ನಡುವೆ ನಮಗೆ ಅರಿವಿಲ್ಲದೆಯೇ ವ್ಯಕ್ತವಾಗುತ್ತಲೇ ಇರುತ್ತವೆ. ಅಷ್ಟೊಂದು ಗಾದೆಯ ಮಾತುಗಳು ನಮ್ಮ ನಡುವೆ ಇವೆ.

ಈ ಮಾತನ್ನು ಅದೇಕೆ ಇಲ್ಲಿ ವಿವರಿಸುತ್ತಿದ್ದೆನೆಂದರೆ ಕರಾವಳಿಗರಾದ ಅದರಲ್ಲೂ ಕುಂದಾಪುರದ ತೆಕ್ಕಟ್ಟೆ ಮೂಲದ ನಟ, ನಿರ್ದೇಶಕ ಉಪೇಂದ್ರ ಆಡಿದ ಗಾದೆಯ ಮಾತೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಅವರ ಮೇಲೆ ಕೇಸುಗಳು ದಾಖಲಾಗಿವೆ. ನಾನು ಅವರ ಆ ವಿಡಿಯೋವನ್ನು ಆಲಿಸಿದ ಪ್ರಕಾರ ಅವರ ಮಾತಿನ ನಡುವೆ ಆ ಗಾದೆ ಮಾತು ಅಭಿವ್ಯಕ್ತಿಗೊಂಡಿದೆಯೇ ಹೊರತೂ ಅವರು ಅದರಲ್ಲಿ ಯಾವುದೇ ಸಮುದಾಯವನ್ನು ಅವಮಾನಿಸಲು ಆ ಗಾದೆಯನ್ನು ಉಪಯೋಗಿಸಿದಂತೆ ಅನ್ನಿಸುವುದಿಲ್ಲ. ಹಾಗೇನಾದರೂ ಯಾವುದೇ ಒಂದು ಸಮುದಾಯದ ಕುರಿತು ಅವರು ಆ ಗಾದೆಗೆ ಹೊರತಾದ ಮತ್ತೊಂದು ಮಾತನಾಡಿದ್ದರೂ 'ಉದ್ದೇಶಪೂರ್ವಕವಾಗಿ ಮಾತನಾಡಿದ್ದಾರೆ' ಎಂದು ನಾವು ಅವರನ್ನು ಅಪರಾಧಿಯನ್ನಾಗಿಸಬಹುದಾಗಿತ್ತು. ಆದರೆ ಅಲ್ಲಿ ಬೇರೊಂದು ವಿಚಾರ ಮಾತನಾಡುವ ನಡುವೆ ಆ ಗಾದೆಯನ್ನು ಉದಾಹರಣೆಯಾಗಿ ಉಪಯೋಗಿಸಿದ್ದಂತೆ ಕಂಡುಬರುತ್ತದೆ. ಆದರೂ ಅದು ಸಮರ್ಥನೀಯವಲ್ಲ ನಿಜ!

ಹಾಗೆ ನೋಡಿದರೆ ಹೆಚ್ಚಿನ ಗಾದೆಯ ಮಾತುಗಳು ಮತ್ತೊಬ್ಬರನ್ನು/ ಮತ್ತೊಂದು ಸಮುದಾಯವನ್ನು ಯಾ ಮುಗ್ಧ ಪ್ರಾಣಿಗಳನ್ನು ಅವಮಾನಿಸುತ್ತಲೇ ಬಂದಿದೆ.

ಹಾಗೆಯೇ ಇಂತಹ ಗಾದೆಗಳ ಮೂಲಕ ಶತಶತಮಾನಗಳಿಂದಲೂ ಈ 'ಶೋಷಿತ ಸಮುದಾಯ'ವನ್ನು ಆ 'ಶೋಷಕ ಸಮುದಾಯ' ಅಪಮಾನಿಸುತ್ತಲೇ ಬಂದಿದೆ. 'ಮೇಲರಿಮೆ' (superiority complex)ಯ ಭ್ರಮೆ ಸೃಷ್ಟಿಸಿಕೊಂಡು ಅದರಲ್ಲೇ ತೇಲಾಡುತ್ತಿರುವ ಆ ಶೋಷಕ ಸಮುದಾಯ ಈ ನೆಲದ ಇತರರ ನಡುವೆ ಜಾತಿ ವ್ಯವಸ್ಥೆಯನ್ನು ಹುಟ್ಟುಹಾಕಿ ಆ ಸಮುದಾಯದಲ್ಲಿ ತಮ್ಮ ಬಗೆಗೆ 'ಕೀಳರಿಮೆ' (inferiority complex)ಯ ಭ್ರಮೆ ಹುಟ್ಟುವಂತೆ ಮಾಡಿ ಆದಿಯಿಂದಲೂ ಆ ಸಮುದಾಯ 'ನಿರ್ಧಿಷ್ಟವಾದ ಬಿಟ್ಟಿ ಚಾಕರಿ'ಗಳನ್ನು ಮಾಡಿಸಿಕೊಳ್ಳುತ್ತಲೇ ಬಂದಿದೆ. ಹಾಗೆಯೇ, ಶೋಷಿತ ಸಮುದಾಯ ಶಿಲಾಯುಗದಲ್ಲಿ ಇದ್ದಂತೆಯೇ ಸ್ವಾತಂತ್ರ್ಯ ಸಿಕ್ಕ 76 ವರ್ಷಗಳ ನಂತರವೂ ಇರಬೇಕೆಂದು ಶೋಷಕ ಸಮುದಾಯ ಬಯಸಿದೆ.

ಬಹುಶಃ ಮೇಲಿನ ವಿಚಾರಕ್ಕೆ ಪೂರಕ ಎಂಬಂತೆ ಈ 'ಶೋಷಿತ ಸಮುದಾಯ'ಕ್ಕೆ ಆ 'ಶೋಷಕ ಸಮುದಾಯ' ಸ್ವಾತಂತ್ರ್ಯ ನಂತರ ಅಂಬೇಡ್ಕರ್ ನಂವಿಧಾನದ ಮೂಲಕ ನೆಹರೂ ಸರಕಾರ ಹಕ್ಕಾಗಿ ನೀಡಿದ್ದ 'ಮೀಸಲಾತಿ' ಯನ್ನು ಹೀಯಾಳಿಸುತ್ತಲೇ, ಅದರ ಕುರಿತು ಅಪಪ್ರಚಾರ ನಡೆಸುತ್ತಲೇ ಬಂದಿದೆ. ಅದನ್ನು ಕೊನೆಗಾಣಿಸಲು ಹೆಣಗಾಡುತ್ತಲೇ ಬಂದಿದೆ. ಹಣಗಾಡುತ್ತಲೇ ಇದೆ.

ಬಹುಶಃ ಅಂತಹ ಅಪಪ್ರಚಾರ ಯಾವ ಮಟ್ಟಿಗೆ ಜನಜನಿತಗೊಂಡಿದೆಯೆಂದರೇ ಸ್ವತಃ ಮೀಸಲಾತಿಯ ಮೂಲಕ ವಿದ್ಯೆ ಪಡೆದು, ಸರಕಾರಿ ಉದ್ಯೋಗ ಪಡೆದು ಲಕ್ಷಗಟ್ಟಲೆ ಸಂಬಳದ ಸವಲತ್ತು ಪಡೆದು ಬಲಿಷ್ಠರಾದವರ ಮಕ್ಕಳು ಕೂಡ ಅದೇ ಮೀಸಲಾತಿಯಡಿ ವಿದ್ಯೆ ಪಡೆದು ಡಾಕ್ಟರ್, ಇಂಜಿನಿಯರ್ ಆಗಿ ಇದೀಗ ತಾವು ಸ್ವತಃ ಆ ಸಮುದಾಯದಿಂದ, ಅದೇ ಮೀಸಲಾತಿ ಪಡೆದು ಮೇಲೆ ಬಂದವರೆಂದು ಒಪ್ಪಿಕೊಳ್ಳಲು ತಯಾರಿಲ್ಲದೇ (ಬಹುಶಃ ಅದು ಸ್ವತಃ ತಮಗೆ ಅವಮಾನ ಎಂಬ ಕೀಳರಿಮೆಯ ಕಾರಣಕ್ಕಾಗಿ?) ಅದೇ ಶೋಷಕ ವರ್ಗದ ಜನರ ಜೊತೆ ಸೇರಿಕೊಂಡು ಮೀಸಲಾತಿ ಮತ್ತು ಅಂಬೇಡ್ಕರ್ ಸಂವಿಧಾನಗಳ ಹಿಂದಿನ ಶಕ್ತಿಯಾದ ನೆಹರೂರವರನ್ನು ಹೀನಾಯವಾಗಿ ಸಂಬೋಧಿಸುತ್ತಿದ್ದಾರೆ. ಬಹುಶಃ ಇದುವೇ ಶೋಷಕ ವರ್ಗದ ನೈಜ ಜಯವಾಗಿದೆ.

ಹಾಗೆಯೇ ಈ ಮೇಲಿನ ವಿಚಾರಕ್ಕೆ ಮತ್ತೊಂದು ಆಯಾಮದಲ್ಲಿನ ನೈಜ ಹಾಗೂ ನವ ಉದಾಹರಣೆ ಎಂದರೆ ಇತ್ತೀಚೆಗೆ ಶೋಷಕ ವರ್ಗದ ಅಪಪ್ರಚಾರದಿಂದ ಪ್ರೇರೇಪಿತರಾದವರ ನೇತೃತ್ವದಲ್ಲಿ ಮಣಿಪುರದಲ್ಲಿ ಶೋಷಿತ ವರ್ಗದ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದಾಗ ಅದೇ ಶೋಷಕ ವರ್ಗದ ನೇತೃತ್ವದ ಕೇಂದ್ರ ಸರಕಾರದ ಅಡಿಯಲ್ಲಿ ಅದೇ ಮೀಸಲಾತಿಯ ಲಾಭ ಪಡೆದು ಉನ್ನತ ಸ್ಥಾನಕ್ಕೇರಿದ್ದವರು ಕೂಡ ಏನೂ ತಪ್ಪಾಗಿಲ್ಲ ಎಂಬಂತೆ ಬಾಯಿ ಮುಚ್ಚಿ ಕುಳಿತುಕೊಂಡಿರುವುದೇ ಆಗಿದೆ.

ಬಹುಶಃ ಇಂತಹ ಘಟನೆಗಳೇ ಶತಶತಮಾನಗಳಿಂದ ಶೋಷಕ ವರ್ಗ ತಮ್ಮ ಪ್ರಾಬಲ್ಯವನ್ನು ಕಾಯ್ದುಕೊಂಡು ಬಂದಿರುವ ಮತ್ತು ಆ ಮೂಲಕ ಗಳಿಸುತ್ತಲೇ ಬಂದಿರುವ ಶೋಷಿತ ವರ್ಗದ ಮೇಲಿನ ಜಯಕ್ಕೆ ಕಾರಣವಾಗಿದೆ.

ಸಂಪೂರ್ಣ 76 ಮುಗಿದು ಸ್ವಾತಂತ್ಯೋತ್ಸವದ 77 ವರ್ಷಾಚರಣೆಯ ಈ ದಿನದಂದು ಇಷ್ಟೆಲ್ಲವನ್ನೂ ಅದೇಕೆ ಇಲ್ಲಿ ಉಲ್ಲೇಖಿಸಿದೇನೆಂದರೆ ಕೇವಲ ಒಂದು ಗಾದೆಯ ಮಾತಿನ ಉಲ್ಲೇಖದ ವಿರುದ್ಧ ನಡೆಯುತ್ತಿರುವ ಒಗ್ಗಟ್ಟಿನ ಹೋರಾಟ ಅದೇಕೆ ನಿರಂತರವಾಗಿ ನಡೆಯುತ್ತಿರುವ ಮೇಲೆ ವಿವರಿಸಿದಂತಹ ದೈಹಿಕ ಶೋಷಣೆಗಳ ವಿರುದ್ಧ ನಡೆಯುತ್ತಿಲ್ಲ? ಅದೇಕೆ ಆ ಶೋಷಕರ ಸರಣಿ ದೌರ್ಜನ್ಯಗಳ ವಿರುದ್ಧ ನಡೆಯುತ್ತಿಲ್ಲ? ಅದೇಕೆ ಅವರುಗಳ ಒಳಹುನ್ನಾರಗಳ ವಿರುದ್ಧ ನಡೆಯುತ್ತಿಲ್ಲ? ಅದೇಕೆ ಜಾತಿ ವ್ಯವಸ್ಥೆಯ ಕೊನೆಗಾಣಿಸುವಿಕೆಯ ಪರ ನಡೆಯುತ್ತಿಲ್ಲ? ಅದೇಕೆ ಇಡೀ ಪ್ರಪಂಚದಲ್ಲಿ ಇಲ್ಲದ ಜಾತಿವ್ಯವಸ್ಥೆ ಇದೀಗಲೂ ಈ ದೇಶದಲ್ಲಿದೆ ಎಂದು ಪ್ರಶ್ನಿಸಲಾಗುತ್ತಿಲ್ಲ? ಹಾಗಾದರೆ ಆ ಕುರಿತು ಹೋರಾಟ ಬೇಡವೇ? ವಿಚಾರವಲ್ಲದ ವಿಚಾರಗಳಿಗೆ ನಮ್ಮ ಶ್ರಮವನ್ನು ದುರುಪಯೋಗಪಡಿಸುವ ನಾವು ನೈಜ ಸಮಸ್ಯೆಗಳತ್ತ ಕುರಿತು ಗಮನಹರಿಸುವುದು ಮತ್ತು ಹೋರಾಡುವುದು ಯಾವಾಗ?

ನಿಜ ಹೇಳಬೇಕೆಂದರೆ ಈ ಜಾತಿ ವ್ಯವಸ್ಥೆ ಜೀವಂತವಾಗಿರುವ ತನಕವೂ ಆ ಶೋಷಕರ ಈ ಶೋಷಣೆ ಹಾಗೂ ಹೀಯಾಳಿಸುವ ಗಾದೆಯ ಮಾತುಗಳು ಮುಂದುವರಿಯಲಿದೆ.

ಹೀಗೆಯೇ ಮುಂದುವರಿದರೆ ಖಂಡಿತವಾಗಿಯೂ ಶೋಷಿತರ ಕೈ ಮೇಲಾಗಿ ನಮ್ಮ ಅಂಬೇಡ್ಕರ್ ಸಂವಿಧಾನ ಮತ್ತು ಮೀಸಲಾತಿ ಇನ್ನಿಲ್ಲವಾಗಿ ನಮ್ಮ ಮುಂದಿನ ಜನಾಂಗ ಅದೇ ಶೋಷಿತರ ಗುಲಾಮರಾಗಿ ಬದುಕಬೇಕಾಗಿ ಬರುವ ಕಾಲ ದೂರದಲ್ಲಿಲ್ಲ. ಇದು ನಮ್ಮಂತಹವರು ನೆನಪಿಡಬೇಕಾದ ಮಾತು.

ಕಟ್ಟಕಡೆಯಲ್ಲಿ ನೆನಪಾದ ಗಾದೆಯ ಮಾತು: ಬೆಕ್ಕಿಗೆ ಗಂಟೆ ಕಟ್ಟುವವರ‌್ಯಾರು?

Advertisement
Advertisement
Recent Posts
Advertisement