ಕನ್ನಡ ಮೀಡಿಯಾ ಡಾಟ್ ಕಾಂ ವರದಿ:
ಇದೀಗ ಉಲ್ಬಣಗೊಂಡಿರುವ ಜಿಲ್ಲೆಯ ಕಟ್ಟಡ ಸಾಮಗ್ರಿಗಳ ಪೂರೈಕೆಯ ಸಮಸ್ಯೆಗೆ ಇಲ್ಲಿಯ ಐದೂ ಬಿಜೆಪಿ ಶಾಸಕರುಗಳ ನಿಷ್ಕ್ರೀಯತೆಯೇ ಕಾರಣವಾಗಿದೆ. ಮರಳು, ಜಲ್ಲಿ, ಕಲ್ಲು, ಮಣ್ಣು, ಚಿಪ್ಪು ಮುಂತಾದ ಅವಶ್ಯಕತೆಗಳ ಸಾಗಣಿಕೆಗೆ ಕಾನೂನು ಮೀರಿ ಅವಕಾಶ ನೀಡಲು ಜಿಲ್ಲಾಡಳಿತ, ಪೊಲೀಸ್ ವ್ಯವಸ್ಥೆ ಅಥವಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರಿಗೂ ಸಾಧ್ಯವಿಲ್ಲ. ಶಾಸಕಾಂಗ ರೂಪಿಸಿದ ಕಾನೂನುಗಳನ್ನು ಪಾಲಿಸುವುದಷ್ಟೇ ಈ ಎಲ್ಲಾ ಇಲಾಖೆಗಳ, ಅಧಿಕಾರಿಗಳ ಕರ್ತವ್ಯವಾಗಿದೆ. ಕಾನೂನು ರೂಪಿಸುವುದು ಇವರ ವ್ಯಾಪ್ತಿಗೆ ಬರುವುದಿಲ್ಲ. ಕರಾವಳಿ ಜಿಲ್ಲೆಯ ಬಹುವರ್ಷಗಳ ಗಣಿ ಮತ್ತು ಖನಿಜ ಕಾಯಿದೆಯಲ್ಲಿನ ಸಡಿಲೀಕರಣದ ಬೇಡಿಕೆಗೆ ಸ್ಪಂದಿಸಬೇಕಾದ ಶಾಸನ ಸಭೆಯ ಸದಸ್ಯರುಗಳ ಬೇಜವಾಬ್ದಾರಿ ವರ್ತನೆಯೇ ಇಂದಿನ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆರೋಪಿಸಿದ್ದಾರೆ.
ಜನರು ಶಾಸಕರುಗಳನ್ನು ಆಯ್ಕೆ ಮಾಡಿದ್ದು ಅವರ ಬೇಡಿಕೆಗಳ, ಆಗ್ರಹಗಳ, ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಶ್ನೆಗಳನ್ನು ಹಾಕಿ, ಶೂನ್ಯ ವೇಳೆ ಅಥವಾ ನಿಯಮ 330 ರ ಅಡಿಯಲ್ಲಿ ಚರ್ಚಿಸಿ ಅದನ್ನು ಸರ್ಕಾರದ ಗಮನಕ್ಕೆ ತಂದು ಅದನ್ನು ಪರಿಹರಿಸಲು ಆಗಿದೆ. ಆದರೆ ಜಿಲ್ಲೆಯ ಬಿಜೆಪಿ ಶಾಸಕರುಗಳು ಅಂತಾ ಪ್ರಾಮಾಣಿಕ ಪ್ರಯತ್ನ ಮಾಡುವುದನ್ನು ಬಿಟ್ಟು ಇದೀಗ ಧರಣಿ ನಿರತರ ಜೊತೆ ಕೂತು ಫೋಟೋ ತೆಗೆಸಿಕೊಳ್ಳುವುದು ಪಲಾಯನ ವಾದಿ ರಾಜಕಾರಣದ ಒಂದು ಭಾಗವಾಗಿದೆ. ನಿಜವಾಗಿಯೂ ಇವರಿಗೆ ಜನರ ಸಮಸ್ಯೆಗಳ ಪರಿಹಾರಕ್ಕೆ ಆಸಕ್ತಿ ಇದ್ದಿದ್ದರೆ ಹಿಂದಿನ ಅವದಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವಾಗ ಗಣಿ ಮತ್ತು ಖನಿಜ ಕಾಯಿದೆಯಲ್ಲಿ ಸುಧಾರಣೆ ತರಬೇಕಿತ್ತು. ಕಳೆದ 9 ವರ್ಷಗಳಿಂದ ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ಸಿ ಆರ್ ಝಡ್ ಮರಳುಗಾರಿಕೆಯ ನೀತಿಯಲ್ಲಿನ ಸಡಲೀಕರಣದ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದೆ. ಅದನ್ನು ಬಿಟ್ಟು ಅಧಿಕಾರಿಗಳ ಬಳಿ ತಪ್ಪು ಮಾಡಿಸುವ ಇವರ ಮನಸ್ಥಿತಿ ಸಂವಿಧಾನ ವಿರೋಧಿ ನಿಲುವು ಆಗುತ್ತದೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ರೈತರು ಕುಡಿಯುವ ನೀರಿಗಾಗಿ ಬಾವಿಯನ್ನು ತೋಡಲು, ಕೃಷಿ ಭೂಮಿ ಸಮತಟ್ಟು ಮಾಡಲು ಸಹಾ ಹಿರಿಯ ಭೂ ವಿಜ್ಞಾನಿಯ ಅನುಮತಿಯ ಅಗತ್ಯತೆ ಇತ್ತು. ಆದರೆ ಅಂದಿನ ಕಾಂಗ್ರೆಸ್ ಶಾಸಕರುಗಳ ಹೋರಾಟದ ಫಲವಾಗಿ ಆ ನಿಯಮಗಳಲ್ಲಿ ಸಡಲೀಕರಣವಾಗಿದೆ. ಹಿಂದೆ ಸರ್ಕಾರ ಶೇಂದಿ ನಿಷೇದ ಮಾಡಿದಾಗ ಈ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಉದಾಹರಣೆಯೂ ನಮ್ಮ ಮುಂದಿದೆ. ಇನ್ನಾದರೂ ಜಿಲ್ಲೆಯ ಶಾಸಕರುಗಳು ಚಿಲ್ಲರೆ ರಾಜಕಾರಣ ಮಾಡುವುದನ್ನು ಬಿಟ್ಟು, ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿ ಎಂದು ವಿಕಾಸ್ ಸಲಹೆ ನೀಡಿದ್ದಾರೆ.