Advertisement

"ಸ್ವಾತಂತ್ರ್ಯದ ಆ ಕ್ಷಣಗಳು" : ಡಾ. ಉಮೇಶ್ ಪುತ್ರನ್ ರ ಲೇಖನ ಸರಣಿ: ಭಾಗ 4 ರಿಂದ 6.

Advertisement

(“ಸ್ವಾತಂತ್ರ್ಯದ ಆ ಕ್ಷಣಗಳು” ಪುಸ್ತಕದಿಂದ)
ಲೇಖಕರು: ಡಾ. ಉಮೇಶ್ ಪುತ್ರನ್ ಎಂ. ಡಿ.
ಚಿನ್ಮಯಿ ಆಸ್ಪತ್ರೆ, ಕುಂದಾಪುರ.

ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 4.
ಈಸ್ಟ್ ಇಂಡಿಯಾ ಕಂಪನಿಯ ವ್ಯವಹಾರ ವಿಸ್ತರಣೆ.

ವಿಲಿಯಂ ಹಾಕಿನ್ಸ್ ಜಹಾಂಗೀರನ ಆಸ್ಥಾನದಲ್ಲಿ ಆತನಿಗೆ ತುಂಬಾ ನಿಕಟವರ್ತಿಯಾಗಿ ಮೂರು ವರ್ಷಗಳ ಕಾಲ ಅಲ್ಲಿದ್ದ. ಮಧ್ಯ ಪ್ರಿಯ ಜಹಾಂಗೀರ ವಿಲಿಯಂ ಹಾಕಿನ್ಸ್ ನನ್ನು ಆಗಾಗ್ಗೆ ತನ್ನ ಔತಣ ಕೂಟಕ್ಕೆ ಕರೆಯುತ್ತಿದ್ದ. ಆದರೂ ಕೂಡ ಸೂರತ್ ಬಂದರಿನಲ್ಲಿ ಒಂದು ಗೋದಾಮನ್ನು ತೆರೆಯಬೇಕೆಂಬ ಹಾಕಿನ್ಸ್ ನ ಬೇಡಿಕೆಗೆ ಜಹಾಂಗೀರ್ ಸ್ಪಂದಿಸಲಿಲ್ಲ.

ನವೆಂಬರ್ 29, 1612 ರಲ್ಲಿ ಸೂರತ್ ಸಮೀಪ ಸುವಾಲಿಯಲ್ಲಿ ಪೋರ್ಚುಗಲ್ಲರ ವಿರುದ್ಧ ನಡೆದ ನೌಕಾ ಕದನ ಈಸ್ಟ್ ಇಂಡಿಯಾ ಕಂಪನಿಯ ಇತಿಹಾಸದಲ್ಲಿ ಒಂದು ಮೈಲುಗಲ್ಲು. ಪೋರ್ಚುಗಲ್ಲರ ಸೋಲಿನಿಂದಾಗಿ ಆ ಭಾಗದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಅಧಿಪತ್ಯ ಹೆಚ್ಚಿತು. ನಂತರ ಕಂಪನಿಯು ಸೂರತ್ ನಲ್ಲಿ ಗೋದಾಮು ತೆರೆಯಿತು.

ವ್ಯಾಪಾರ ಒಂದೇ ಸಮನೆ ವೃದ್ಧಿಸಿತು. ತಿಂಗಳಿಗೆ ಎರಡು ಹಡಗುಗಳು ಇಂಗ್ಲೆಂಡಿಗೆ ಹೊರಡಲು ಆರಂಭಿಸಿದವು. ಪರ್ವತದಷ್ಟು ರಾಶಿ ರಾಶಿ ಸಾಂಬಾರು ಪದಾರ್ಥಗಳು, ಸಕ್ಕರೆ, ಕಚ್ಚಾ ರೇಷ್ಮೆ, ಮಸ್ಲಿನ್, ಹತ್ತಿ ಮತ್ತಿತರ ವಸ್ತುಗಳು ಥೇಮ್ಸ್ ನದಿಯ ತಟದಲ್ಲಿ ಹೋಗಿ ಬೀಳಲಾರಂಭಿಸಿದವು.

ಜಹಾಂಗೀರನ ಪೂರ್ಣ ಪ್ರಮಾಣದ ಸಹಕಾರ ಸಿಗದೇ ಇರುವುದರಿಂದ, ಈಸ್ಟ್ ಇಂಡಿಯಾ ಕಂಪನಿಯು ಇಂಗ್ಲೆಂಡಿನ ರಾಜ ಒಂದನೇ ಜೇಮ್ಸ್ ನಲ್ಲಿ ಸರ್ ಥಾಮಸ್ ರೋ ಅವರನ್ನು ರಾಯಭಾರಿಯಾಗಿ ಆಗ್ರಾಕ್ಕೆ ಕಳುಹಿಸಲು ಮನವಿ ಮಾಡಿತು. ಸಂಸತ್ ಸದಸ್ಯ ಥಾಮಸ್ ರೋ 1615 ರಲ್ಲಿ ಆಗ್ರಾಕ್ಕೆ ಬಂದು ಅಲ್ಲಿ ಮೂರು ವರ್ಷಗಳ ಕಾಲ ಉಳಿದುಕೊಳ್ಳುತ್ತಾನೆ.

ವ್ಯಾಪಾರಕ್ಕೆ ಸಂಬಂಧಪಟ್ಟ ರಾಜತಾಂತ್ರಿಕ ಒಪ್ಪಂದವನ್ನು ತಮ್ಮೊಂದಿಗೆ ಮಾಡಿಕೊಳ್ಳುವಂತೆ ಜೇಮ್ಸ್ ಬರೆದ ಪತ್ರವನ್ನು ಥಾಮಸ್ ರೋ ಜಹಾಂಗಿರನ ಆಸ್ಥಾನದಲ್ಲಿ ಓದಿ ಹೇಳುತ್ತಾನೆ. ಭಾರತದಿಂದ ಸಾಂಬಾರು ಪದಾರ್ಥ, ಬಟ್ಟೆ, ಬೆಲೆಬಾಳುವ ಹರಳು ಮುಂತಾದವುಗಳ ರಫ್ತಿಗಾಗಿ ತಮಗೆ ವಿಶೇಷ ಅನುಮತಿಯನ್ನು ನೀಡಬೇಕೆಂದೂ, ಹಾಗೂ ಇದಕ್ಕೆ ಪ್ರತಿಯಾಗಿ ಯುರೋಪಿಯನ್ ಮಾರುಕಟ್ಟೆಯಿಂದ ಸಿಗುವ ಅಪರೂಪದ ವಸ್ತುಗಳನ್ನು ತಾವು ಭಾರತಕ್ಕೆ ರಫ್ತು ಮಾಡುವುದಾಗಿಯೂ ಪತ್ರದಲ್ಲಿ ಬರೆದಿದ್ದನು.

ಥಾಮಸ್ ರೋ ಜಹಾಂಗೀರನ ಉತ್ತಮ ಸ್ನೇಹಿತನಾಗುತ್ತಾನೆ. ತನ್ನೊಂದಿಗೆ ತಂದ ಬಿಯರ್ ಮತ್ತಿತರ ಮದ್ಯಗಳನ್ನು ಜಹಾಂಗೀರನಿಗೆ ಪರಿಚಯ ಮಾಡಿಸುತ್ತಾನೆ. ಇಷ್ಟರವರೆಗೆ ಕಂಡರಿಯದ ಅನೇಕ ಯುರೋಪಿಯನ್ ಅಲಂಕಾರಿಕ ವಸ್ತುಗಳನ್ನು ಜಹಾಂಗೀರನಿಗೆ ಕೊಡುತ್ತಾನೆ.

ಮೂರು ವರ್ಷಗಳ ತರುವಾಯ ಥಾಮಸ್ ರೋ ಹೊರಡುವಾಗ ಇಂಗ್ಲೆಂಡಿನ ಒಂದನೇ ಜೇಮ್ಸ್ ಗೆ ಜಹಾಂಗೀರ್ ಈ ರೀತಿಯ ಪತ್ರ ಬರೆಯುತ್ತಾನೆ.

"ಇಂಗ್ಲೆಂಡಿನಿಂದ ಆಗಮಿಸುವ ಎಲ್ಲಾ ಪ್ರಜೆಗಳು ನನ್ನ ಮಿತ್ರರು. ನನ್ನ ಅಧಿಪತ್ಯದಲ್ಲಿ ಬರುವ ಎಲ್ಲಾ ಬಂದರುಗಳ ಜನರಲ್ ಕಮಾಂಡರ್ ಗಳಿಗೆ ನಾನು ಅವರನ್ನು ಹಾರ್ದಿಕವಾಗಿ ಸ್ವಾಗತಿಸುವಂತೆ ಆದೇಶಿಸಿದ್ದೇನೆ. ಅವರು ನನ್ನ ದೇಶದಲ್ಲಿ ಎಲ್ಲಿ ಮತ್ತು ಹೇಗೆ ಬೇಕಾದರೂ ಜೀವನ ನಡೆಸಬಹುದು. ಇಲ್ಲಿಯ ಯಾವ ವಸ್ತುಗಳನ್ನು ಕೂಡ ಅವರು ತಮ್ಮ ದೇಶಕ್ಕೆ ಸಾಗಿಸಬಹುದು. ಇದಕ್ಕೆ ಪ್ರತಿಯಾಗಿ ಯುರೋಪಿನ ಅತ್ಯಂತ ಬೆಲೆಬಾಳುವ ಹಾಗೂ ಅಪರೂಪದ ವಸ್ತುಗಳನ್ನು ನನ್ನ ಆಸ್ಥಾನಕ್ಕೆ ಕಳುಹಿಸಿಕೊಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಮ್ಮ ನಿಮ್ಮ ಸ್ನೇಹ ಹೀಗೆ ಮುಂದುವರಿಯಲಿ ಎಂದು ನಾನು ಆಶಿಸುತ್ತೇನೆ.

... ಇತೀ ತಮ್ಮ ನೂರುದ್ದೀನ್ ಸಲೀಂ ಜಹಾಂಗೀರ್"

ಇದರೊಂದಿಗೆ ಈಸ್ಟ್ ಇಂಡಿಯಾ ಕಂಪನಿಯು ಮಚಲೀಪಟ್ಟಣ, ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ಅರ್ಮಾಗಾಂವ್, ಗೋವಾ, ಈಗಿನ ಬಾಂಗ್ಲಾದೇಶದ ಚಿತ್ತಗಾಂಗ್ ಮುಂತಾದೆಡೆ ವ್ಯಾಪಾರ ಕೇಂದ್ರವನ್ನು ವಿಸ್ತರಿಸಿತು. ಪೋರ್ಚುಗಲ್ ರಾಣಿ ಕ್ಯಾಥರಿನ್ ಆಫ್ ಬ್ರಗಾಂಜಾ ಇಂಗ್ಲೆಂಡಿನ ಎರಡನೇ ಚಾರ್ಲ್ಸ್ ನನ್ನು ಮದುವೆಯಾಗುವಾಗ, ಪೋರ್ಚುಗೀಸರು ಏಳು ದ್ವೀಪಗಳ ಸಮೂಹವಾದ ಬಾಂಬೆಯನ್ನು ವರದಕ್ಷಿಣೆ ರೂಪದಲ್ಲಿ ಇಂಗ್ಲಿಷರಿಗೆ ನೀಡಿದರು. ಬಾಂಬೆಯು ಇಂಗ್ಲಿಷರ ಪಾಲಾದ ಮೇಲೆ ಇದು ಅತ್ಯಂತ ದೊಡ್ಡ ವ್ಯಾಪಾರ ಕೇಂದ್ರವಾಗಿ ಬೆಳೆಯಿತು.

1620 ರ ಹೊತ್ತಿಗೆ ಡಚ್ ಈಸ್ಟ್ ಇಂಡಿಯಾ ಕಂಪನಿಯು ಪ್ರಪಂಚದ ಅತ್ಯಂತ ಶ್ರೀಮಂತ ಕಂಪನಿ ಆಗಿತ್ತು. ಅದು ಪ್ರಪಂಚದಾದ್ಯಂತ 50000 ನೌಕರರನ್ನು ಹಾಗೂ 200 ಬೃಹತ್ ನೌಕೆಗಳನ್ನು ಹೊಂದಿತ್ತು. ಇಂಗ್ಲೀಷರಿಗೆ ಡಚ್ಚರಿಂದ ತೀವ್ರ ಪೈಪೋಟಿ ಇದ್ದಿತ್ತು. ನಾಲ್ಕು ಪಟ್ಟು ಆದಾಯ ಬರುವ ಸಾಂಬಾರು ಪದಾರ್ಥಗಳ ರಫ್ತಿಗಾಗಿ ಇಂಗ್ಲೀಷರು ಮತ್ತು ಡಚ್ಚರ ನಡುವೆ ನಾಲ್ಕು ಬಾರಿ ಕದನ ಏರ್ಪಟ್ಟಿತ್ತು.

1642 ರಲ್ಲಿಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ 23 ಗೋದಾಮುಗಳನ್ನು ತೆರೆಯಿತು. ಪ್ರತಿ ಗೋದಾಮಿಗೆ ಒಬ್ಬ ಮುಖ್ಯಸ್ಥ ಹಾಗೂ 90 ಜನ ನೌಕರರು ಇದ್ದಿದ್ದರು. ಮುಂದಿನ ದಿನಗಳಲ್ಲಿ ಈಸ್ಟ್ ಇಂಡಿಯಾ ಕಂಪನಿಯು ರಫ್ತು ತೆರಿಗೆಯಿಂದ ವಿನಾಯಿತಿ ಪಡೆಯಿತು.

ಎರಡನೇ ಚಾರ್ಲ್ಸ್ 1670 ರಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ ವಿಶೇಷ ಅಧಿಕಾರವನ್ನು ನೀಡಿದ. ಈ ವಿಶೇಷ ಅಧಿಕಾರವು ಈಸ್ಟ್ ಇಂಡಿಯಾ ಕಂಪನಿಗೆ ಭಾರತದ ಭೂ ಪ್ರದೇಶವನ್ನು ವಶಪಡಿಸಿಕೊಳ್ಳುವ, ತನ್ನದೇ ಆದ ಹಣವನ್ನು ಮುದ್ರಿಸುವ, ಬಂದರು ನಗರಗಳನ್ನು ನಿಯಂತ್ರಿಸುವ, ಸ್ಥಳೀಯ ರಾಜರೊಂದಿಗೆ ಮೈತ್ರಿ ಮಾಡಿಕೊಳ್ಳುವ, ತಮ್ಮದೇ ಆದ ಸೇನೆಯನ್ನು ಕಟ್ಟುವ, ಅಗತ್ಯ ಬಿದ್ದರೆ ಯುದ್ಧ ಅಥವಾ ಶಾಂತಿಯನ್ನು ಸ್ಥಾಪಿಸುವ ಹಾಗೂ ನ್ಯಾಯಾಲಯಗಳನ್ನು ನಿರ್ಮಿಸಿ ನ್ಯಾಯದಾನ ಮಾಡುವ ವಿಶೇಷ ಅಧಿಕಾರ ನೀಡಿತು.

ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 5
ಬ್ರಿಟಿಷ್ ಸರಕಾರ ಕೃಪಾಪೋಷಿತ ಕಡಲುಗಳ್ಳರು:

ಬ್ರಿಟನ್ ರಾಣಿ ತಾನು ಸಾಕಿದ ಕಡಲ್ಗಳ್ಳರನ್ನು ಬಿಟ್ಟು ಸಾಗರದಲ್ಲಿ ಸಾಗಿಬರುವ ಸಂಪತ್ತು ತುಂಬಿದ ಇತರ ದೇಶಗಳ ಹಡಗುಗಳ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದಾಳೆ ಎಂದರೆ ನೀವು ನಂಬುತ್ತೀರಾ? ಇಂತಹ ಅನೇಕ ಪ್ರಕರಣಗಳಲ್ಲಿ ಒಂದು ಪ್ರಕರಣವನ್ನು ನೀವೇ ನೋಡಿ.

ಬ್ರಿಟಿಷ್ ಸರಕಾರ ಸಾಕಿ ಪೋಷಿಸಿದ ಅನೇಕ ಕಡಲುಗಳ್ಳರಲ್ಲಿ ಒಬ್ಬ ಪ್ರಸಿದ್ಧ ಕಡಲುಗಳ್ಳ ಹೆನ್ರಿ ಎವರಿ. ಈತ ಸುಮಾರು 1680 ಹಾಗೂ 1695ರ ಮಧ್ಯ ಅಟ್ಲಾಂಟಿಕ್ ಮತ್ತು ಹಿಂದೂ ಸಾಗರವನ್ನು ತನ್ನ ಅಟ್ಟಹಾಸದಿಂದ ಆಳಿದ ಬ್ರಿಟಿಷ್ ಸರಕಾರ ಕೃಪಾಪೋಷಿತ ಕಡಲುಗಳ್ಳ. ಕೆರಿಬಿಯನ್ ಸಮುದ್ರದಲ್ಲಿ ದಕ್ಷಿಣ ಅಮೇರಿಕಾದ ಇಂಕಾ ಮತ್ತು ಅಜಟೆಕ್ ಸಾಮ್ರಾಜ್ಯದ ಸಂಪತ್ತುಗಳನ್ನು ಲೂಟಿ ಮಾಡಿ ತನ್ನ ದೇಶಕ್ಕೆ ಹಿಂತಿರುಗುವ ಸ್ಪೇನ್ ದೇಶದ ಹಡಗುಗಳನ್ನು ಕೊಳ್ಳೆ ಹೊಡೆಯುವುದರಲ್ಲಿ ಈತ ನಿಪುಣ.

ಅಂದು 1695 ಸೆಪ್ಟಂಬರ್ 7. ಮೊಗಲ್ ಚಕ್ರವರ್ತಿ ಔಂಗಜೇಬನಿಗೆ ಸೇರಿದ ಗಂಜ್- ಇ- ಸವಾಯಿ ಹಡಗು ಯೆಮೆನ್ ನಿಂದ ಭಾರತದ ಸೂರತ್ ಕಡೆಗೆ ಬರುತ್ತಿತ್ತು. ಮೆಕ್ಕಾ ಯಾತ್ರೆ ಮುಗಿಸಿ ಬರುತ್ತಿರುವ ಇನ್ನೂ 25 ಹಡಗುಗಳು ಜೊತೆಗಿದ್ದವು.

ಹೆನ್ರಿ ಎವರಿ ಅವನ ಕಣ್ಣಿಗೆ ಬಿದ್ದದ್ದು ಗಂಜ್- ಇ- ಸವಾಯಿ ಹಡಗು. ಉಳಿದ ಹಡಗುಗಳು ಹೇಗೋ ತಪ್ಪಿಸಿಕೊಂಡವು. ಚಿನ್ನ, ಬೆಳ್ಳಿ, ವಜ್ರಾಭರಣಗಳ ಸಹಿತ ಕೊಲ್ಲಿ ದೇಶದಿಂದ ಹೊರಟ ಈ ಹಡಗನ್ನು ಸೆರೆಹಿಡಿಯಲಾಯಿತು.

ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಇದ್ದ ಈ ಹಡಗಿನಲ್ಲಿ ಇರುವ ಹೆಚ್ಚಿನ ಹೆಂಗಸರನ್ನು ವಾರಗಟ್ಟಲೆ ಅತ್ಯಾಚಾರಗೈಯ್ಯಲಾಯಿತು. ಅನೇಕರನ್ನು ಕೊಲ್ಲಲಾಯಿತು. ಸುಮಾರು 6 ಲಕ್ಷ ಪೌಂಡ್ ಬೆಲೆಬಾಳುವ ಚಿನ್ನಾಭರಣಗಳನ್ನು ಹಾಗೂ ವಜ್ರಗಳನ್ನು ದೋಚಲಾಯಿತು. ಇದರ ಬೆಲೆ ಇವತ್ತು ಸುಮಾರು 980 ಕೋಟಿ ರೂಪಾಯಿಗಳು. ಆಗ ಇಂಗ್ಲೆಂಡಿನಲ್ಲಿ ಒಬ್ಬ ಸಾಮಾನ್ಯ ಕೆಲಸದವನಿಗೆ ಇರುವ ಸಂಬಳ ವರ್ಷಕ್ಕೆ 32 ಪೌಂಡ್.

ಇತಿಹಾಸದಲ್ಲಿ ಅತ್ಯಂತ ಶ್ರೀಮಂತ ಕಡಲುಗಳ್ಳ ಎಂದು ಇವನ ಹೆಸರು ದಾಖಲಾಗಿದೆ. ಬ್ರಿಟಿಷ್ ಸರಕಾರದ ಬೆಂಬಲದಿಂದ ಈ ಘಟನೆ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಔರಂಗಜೇಬ್, ಬ್ರಿಟಿಷ್ ವ್ಯವಹಾರ ಕೇಂದ್ರವಾದ ಬಾಂಬೆ, ಸೂರತ್, ಆಗ್ರಾ ಮತ್ತು ಅಹಮದಾಬಾದಿಗೆ ತನ್ನ ಸೇನೆಯನ್ನು ಕಳುಹಿಸಿ, ಹೆನ್ರಿ ಎವರಿಯನ್ನು ಹಿಡಿದು ಶಿಕ್ಷಿಸಿದೇ ಇದ್ದರೆ ಬ್ರಿಟಿಷರೊಂದಿಗೆ ತನ್ನ ಎಲ್ಲ ವ್ಯಾಪಾರಗಳನ್ನು ಸ್ಥಗಿತಗೊಳಿಸುವುದಾಗಿ ಗದರಿಸಿದ. ನಂತರ ಈಸ್ಟ್ ಇಂಡಿಯಾ ಕಂಪೆನಿ ವಿಮಾ ಪರಿಹಾರ ಮೊತ್ತವಾಗಿ ಮೂರುವರೆ ಲಕ್ಷ ಪೌಂಡ್ ಗಳನ್ನು ಪಾವತಿಸಿತ್ತು.

ತನ್ನ ಮರ್ಯಾದೆ ಉಳಿಸಿಕೊಳ್ಳಲು ಬ್ರಿಟಿಷ್ ಸರಕಾರ ಇವನನ್ನು ಹಿಡಿಯುವ ನಾಟಕ ಆಡಿದೆ. ಆದರೆ ಕೊನೆಗೂ ಕೂಡ ಇವನನ್ನು ಹಿಡಿಯಲಾಗಲಿಲ್ಲ.

ಬ್ರಿಟಿಷ್ ಸರಕಾರ ಆಳಿದ ಅಷ್ಟೂ ವರ್ಷಗಳಲ್ಲಿ ಪ್ರತಿದಿನ ಭಾರತದ ಕರಾವಳಿಯಿಂದ ಎಷ್ಟೋ ಹಡಗುಗಳು ಈ ತರಹದ ಸಂಪತ್ತನ್ನು ತುಂಬಿಕೊಂಡು ಇಂಗ್ಲೆಂಡಿಗೆ ತೆರಳಿದ್ದವು. ನೀವೇ ಊಹಿಸಿ, ಎಷ್ಟೊಂದು ಅಗಾಧ ಪ್ರಮಾಣದಲ್ಲಿ ಭಾರತದ ಸಂಪತ್ತನ್ನು ಇವರು ದೋಚಿದ್ದರು ಎಂದು.

ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 6
ವ್ಯಾಪಾರಿಗಳು ಆಡಳಿತಗಾರರಾದರು

ವ್ಯಾಪಾರಕ್ಕೆಂದು ಬಂದ ಇಂಗ್ಲೀಷರನ್ನು ಭಾರತದ ದೊರೆಗಳು ಹಾಗೂ ಜನರು ಆದರದಿಂದ ಬರಮಾಡಿಕೊಂಡರು. ನಮ್ಮದು ಬರೇ ವ್ಯಾಪಾರ, ನೆಲದ ಆಸೆ ಇಲ್ಲ ಎನ್ನುವ ಮಂತ್ರವನ್ನು ಇಂಗ್ಲಿಷರು ಹೋದಲ್ಲೆಲ್ಲ ಹೇಳುತ್ತಿದ್ದರು. ವ್ಯಾಪಾರ ವೃದ್ಧಿಸುತ್ತಾ ಹೋದಂತೆ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳು ಸ್ಥಳೀಯ ಸಣ್ಣಪುಟ್ಟ ಜಗಳಗಳನ್ನು ರಾಜಿ ಮೂಲಕ ಬಗೆಹರಿಸಲು ಪ್ರಾರಂಭಿಸಿದರು. ಕ್ರಮೇಣ ಸಣ್ಣಪುಟ್ಟ ದೊರೆಗಳ ಮಧ್ಯೆ ಉಂಟಾಗುತ್ತಿದ್ದ ಗಡಿ ವಿವಾದದಲ್ಲೂ ಮಧ್ಯ ಪ್ರವೇಶಿಸಲು ಪ್ರಾರಂಭಿಸಿದರು. ಹೀಗೆ ಇಂಗ್ಲೀಷರ ಪ್ರಭಾವ ಹೆಚ್ಚುತ್ತಾ ಹೆಚ್ಚುತ್ತಾ ಹೋದಂತೆ ಅವರು ಕ್ರಮೇಣ ರಾಜಕೀಯದಲ್ಲೂ ತಲೆಹಾಕಲು ಪ್ರಾರಂಭಿಸಿದರು.

ಇಂಗ್ಲಿಷರು ಭಾರತಕ್ಕೆ ಬಂದು ಒಂದೂವರೆ ಶತಮಾನಗಳಷ್ಟು ದೀರ್ಘ ಅವಧಿಯವರೆಗೆ ಸರಿಪಡಿಸಲಾಗದಷ್ಟು ರಾಜಕೀಯ ದುರಂತಗಳು ನಡೆಯುತ್ತಾ ಸಾಗಿದವು. ಸಣ್ಣಪುಟ್ಟ ಮಾಂಡಲೀಕರು ಹಾಗೂ ಅರಸರಿಗೆ ಇಂಗ್ಲೀಷರ ಬೆಂಬಲ ಬೇಕಾಯಿತು. ಇದು ಎಲ್ಲಿಯವರೆಗೆ ಹೋಯಿತೆಂದರೆ 1757 ರ ಜೂನ್ 23ರಂದು ನವಾಬನೊಬ್ಬನ ವಿರುದ್ಧ ಹೋರಾಡಲು ಇಂಗ್ಲೀಷ್ ಸೈನ್ಯ ಪ್ರಪ್ರಥಮ ಬಾರಿಗೆ ಭಾರತಕ್ಕೆ ಬಂತು. ಬಂಗಾಳದ ಪ್ಲಾಸೀ ಎನ್ನುವ ಹಳ್ಳಿಯೊಂದರ ಭತ್ತದ ಗದ್ದೆಯಲ್ಲಿ ಭಾರತದ 2000 ಸಿಪಾಯಿಗಳ ನೆರವಿನೊಂದಿಗೆ 900 ಇಂಗ್ಲೀಷ್ ಸೈನಿಕರು ಜನರಲ್ ರಾಬರ್ಟ್ ಕ್ಲೈವ್ ನ ನೇತೃತ್ವದಲ್ಲಿ ಹೋರಾಡಿ ನವಾಬನನ್ನು ಹಿಮ್ಮೆಟ್ಟಿಸಿದರು.

ಇದರಿಂದ ಉತ್ತೇಜನಗೊಂಡ ಬ್ರಿಟಿಷರು ಉತ್ತರ ಭಾರತದಲ್ಲೆಡೆ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಂಡರು. ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ 1608 ರಿಂದ 1757ರ ತನಕ ಇದ್ದರೂ ಕೂಡ ಅಧಿಕೃತವಾಗಿ ಕಂದಾಯವನ್ನು ಸಂಗ್ರಹ ಮಾಡುವ ಪ್ರಕ್ರಿಯೆ ಪ್ರಾರಂಭ ಮಾಡಿಲ್ಲ. ಇದನ್ನು ಪ್ರಾರಂಭ ಮಾಡಿದ್ದು 1757 ರಿಂದ. ಇಂಗ್ಲಿಷರಿಗೆ ಕ್ರಮೇಣ ವ್ಯಾಪಾರಕ್ಕಿಂತ ಭಾರತದ ನೆಲದ ಆಸೆಯೇ ಹೆಚ್ಚಾಯಿತು. ಬಹುತೇಕ ಉತ್ತರ ಭಾರತ ಹಾಗೂ ಮುಂಬಯಿ ಪ್ರಾಂತ್ಯ ಗಳನ್ನು ಒಳಗೊಂಡಂತೆ ವಿಸ್ತಾರವಾದ ಈಸ್ಟ್ ಇಂಡಿಯಾ ಸಾಮ್ರಾಜ್ಯಕ್ಕೆ ಕಲ್ಕತ್ತಾ ರಾಜಧಾನಿಯಾಯಿತು. ವಾರನ್ ಹೇಸ್ಟಿಂಗ್ ಈ ಸಾಮ್ರಾಜ್ಯದ ಪ್ರಥಮ ಗವರ್ನರ್ ಜನರಲ್ ಆದ. ಆದರೆ ಪದೇ ಪದೇ ಇಂಗ್ಲೆಂಡಿನ ಬ್ರಿಟಿಷ್ ಸರಕಾರ ರಾಜ್ಯವಿಸ್ತಾರ ಯೋಜನೆಯನ್ನು ನಮಗೆ ಬಿಡಿ, ವ್ಯಾಪಾರವೇ ನಿಮ್ಮ ಉದ್ದೇಶ ಎಂದು ಹೇಳುತ್ತಲೇ ಬಂತು.

ಆದರೆ, ಮುಂದೆ ಬಂದಂತಹ ಎಲ್ಲ ಗವರ್ನರ್ ಜನರಲ್ ಗಳು ಈ ಸಲಹೆಯನ್ನು ತಿರಸ್ಕರಿಸಿ, ತಮ್ಮ ಚಕ್ರಾಧಿಪತ್ಯವನ್ನು ವಿಸ್ತರಿಸಿದರು. ಶತಮಾನವೊಂದು ಕಳೆಯುವುದರೊಳಗೆ ವ್ಯಾಪಾರಿಗಳು ಆಡಳಿತಗಾರರಾದರು. ಬ್ರಿಟಿಷರು ಮೊಘಲರಿಗೆ ಉತ್ತರಾಧಿಕಾರಿಗಳಾದರು, ಹಾಗೆಯೇ ಭಾರತದ ಬಡ ಪ್ರಜೆ ತನಗರಿವಿಲ್ಲದೆ ಇಂಗ್ಲಿಷರ ಗುಲಾಮನಾದ.

ಲೇಖನ ಸರಣಿ ಮುಂದುವರಿಯುವುದು...


ಡಾ. ಉಮೇಶ್ ಪುತ್ರನ್

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕುಕೇಂದ್ರದ ಹೃದಯಭಾಗದಲ್ಲಿರುವ ಚಿನ್ಮಯಿ ಆಸ್ಪತ್ರೆಯ ವೈಧ್ಯಕೀಯ ನಿರ್ದೇಶಕರಾದ ಲೇಖಕರು (ಡಾ. ಉಮೇಶ್ ಪುತ್ರನ್) ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ವಿಧ್ಯಾಭ್ಯಾಸವನ್ನು ಗಂಗೊಳ್ಳಿಯಲ್ಲಿ ಪೂರೈಸಿ ವೈದ್ಯಕೀಯ ಶಿಕ್ಷಣವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಪೂರೈಸಿರುತ್ತಾರೆ. ಸಾಹಿತ್ಯಾಸಕ್ತರಾದ ಇವರು ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

Advertisement
Advertisement
Recent Posts
Advertisement