“ಸ್ವಾತಂತ್ರ್ಯದ ಆ ಕ್ಷಣಗಳು” ಪುಸ್ತಕದಿಂದ:
ಲೇಖಕರು: ಡಾ. ಉಮೇಶ್ ಪುತ್ರನ್ ಎಂ. ಡಿ. (ಚಿನ್ಮಯಿ ಆಸ್ಪತ್ರೆ, ಕುಂದಾಪುರ. )
ಸತಿಸಹಗಮನ ಪದ್ಧತಿ: ಅನಿಷ್ಟ, ಅಮಾನವೀಯ ಹಾಗೂ ಕ್ರೌರ್ಯದ ಪರಮಾವಧಿ! (ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 10.)
ಮದುವೆಯಾದ ಗಂಡಸು ಕಾಯಿಲೆಯಿಂದಲೋ, ಯುದ್ಧದಿಂದಲೋ ಅಥವಾ ಇನ್ನಿತರ ಅವಗಡಗಳು ಸಂಭವಿಸಿ ತೀರಿಕೊಂಡಾಗ ಆತನ ಪತ್ನಿ ಉರಿಯುತ್ತಿರುವ ಹೆಣದ ಚಿತೆಗೆ ಹಾರಿ ಪ್ರಾಣ ಬಿಡುವಂತಹ ಅನಿಷ್ಟ ಪದ್ಧತಿ ಭಾರತದಲ್ಲಿ ಅನಾದಿಕಾಲದಿಂದಲೂ ಇದ್ದಿತ್ತು.
ಪುರಾಣದಲ್ಲಿ ದಕ್ಷನು ತನ್ನ ಅಳಿಯ ಶಿವನಿಗೆ ಯಜ್ಞಕ್ಕೆ ಆಮಂತ್ರಿಸದೇ ಅವಮಾನಿಸಿದನೆಂದು ಶಿವನ ಸತಿ ಪಾರ್ವತಿಯು ಯಜ್ಞಕುಂಡಕ್ಕೆ ಹಾರಿ ಪ್ರಾಣ ಬಿಟ್ಟಿದ್ದಳು. ಆದುದರಿಂದ ಈ ಪದ್ಧತಿಗೆ ಸತಿ ಪದ್ಧತಿ ಎಂದು ಹೆಸರು ಬಂತು.
ನಂತರ ಬಂದ ಮೊಘಲ್ ದೊರೆಗಳಾದ ಬಾಬರ್ ಮತ್ತು ಹುಮಾಯೂನರು ಸತಿ ಪದ್ಧತಿಯನ್ನು ವಿರೋಧಿಸಿದರು. ಇವರ ಕಾಲದಲ್ಲಿ ಸತಿ ಪ್ರಕರಣಗಳು ಹೆಚ್ಚು ಹೆಚ್ಚು ಬೆಳಕಿಗೆ ಬಂದವು. ಮೊಘಲರ ಆಕ್ರಮಣದಿಂದ ರಾಜನು ಸತ್ತಾಗ ಮೊಘಲರ ಸೇನೆ ರಾಜವಂಶದ ಹೆಣ್ಣುಮಕ್ಕಳನ್ನು ಅತ್ಯಾಚಾರಗೈಯುವ ಪ್ರಕರಣ ಹೆಚ್ಚಾಯಿತು. ಇದನ್ನರಿತ ಹೆಣ್ಣುಮಕ್ಕಳು ಸತಿಗೆ ಮೊರೆಹೋಗುತ್ತಿದ್ದರು.
ಅಲ್ಲಾವುದ್ದೀನ್ ಖಿಲ್ಜಿಯು ಚಿತ್ತೂರ್ ರಾಣಿ ಪದ್ಮಾವತಿಯನ್ನು ಸೆರೆಹಿಡಿಯಲು ಬಂದಾಗ ಅವಳು ಮತ್ತು ಅವಳ ಸಂಗಾತಿಗಳು ಸಾಮೂಹಿಕವಾಗಿ ಸತಿಗೆ ಮೊರೆ ಹೋಗುತ್ತಾರೆ. ಸತಿ ಪದ್ಧತಿಗೆ ರಾಜಸ್ಥಾನದಲ್ಲಿ ಜೌಹಾರ್ ಎನ್ನುತ್ತಾರೆ.
ನಂತರ ಬಂದ ಡಚ್ಚರು, ಪೋರ್ಚುಗೀಸರು ಕೂಡ ಈ ಪದ್ಧತಿಯನ್ನು ವಿರೋಧಿಸಿದರು. ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ಪ್ರಾರಂಭದಲ್ಲಿ, ಬ್ರಿಟಿಷ್ ಸರಕಾರವು ಹೆಚ್ಚು ವಿರೋಧ ವ್ಯಕ್ತಪಡಿಸಲಿಲ್ಲ. ಸತಿಸಹಗಮನ ನಡೆಯುತ್ತಿರುವಾಗ ಬ್ರಿಟಿಷ್ ಸರಕಾರದ ಅಧಿಕಾರಿಗಳೇ ಕೆಲವೊಮ್ಮೆ ಹಾಜರಿರುತ್ತಿದ್ದರು ಎಂದು ಕೆಲವು ದಾಖಲೆಗಳು ಹೇಳುತ್ತವೆ.
1591 ರಲ್ಲಿ ಭಾರತಕ್ಕೆ ಬಂದ ಯುರೋಪ್ ಪ್ರವಾಸಿಗ ರಾಲ್ಫ್ ಫಿಚ್ ಹೇಳುತ್ತಾನೆ: "ಲಾಹೋರಿನಲ್ಲಿ ನಾನು ಸತಿಸಹಗಮನ ನಡೆಯುವುದನ್ನು ನೋಡಿದೆ. ಅತೀ ಸಣ್ಣ ವಯಸ್ಸಿನ, ಸುಮಾರು ಹನ್ನೆರಡು ವರ್ಷ ಪ್ರಾಯದ ವಿಧವೆಯನ್ನು ತಲೆಬೋಳಿಸಿ, ಅಗ್ನಿಕುಂಡಕ್ಕೆ ಕರೆದು ತರಲಾಯಿತು. ಆಕೆ ಜೋರಾಗಿ ನಡುಗುತ್ತಿದ್ದಳು ಮತ್ತು ಅಳುತ್ತಿದ್ದಳು. ಬೆಂಕಿಗೆ ಹಾರಲು ಒಲ್ಲೆ ಎಂದಾಗ, ಮೂರ್ನಾಲ್ಕು ಜನ ಬ್ರಾಹ್ಮಣರು ಹಾಗೂ ಒಬ್ಬಳು ವಯಸ್ಸಾದ ಹೆಂಗಸು ಬಂದು, ಆಕೆಯ ಕೈ ಮತ್ತು ಕಾಲುಗಳನ್ನು ಕಟ್ಟಿ ಉರಿಯುತ್ತಿರುವ ಅಗ್ನಿಗೆ ದೂಡಿದರು. ಕ್ಷಣಾರ್ಧದಲ್ಲಿ ಮುಗ್ಧ ಪ್ರಾಣಿ ಸುಟ್ಟು ಕರಕಲಾಯಿತು".
ಇನ್ನು ಕೆಲವೊಂದು ಕಡೆ ಗಂಡ ತೀರಿಕೊಂಡ ವಿಧವೆಯನ್ನು ಶೃಂಗಾರ ಮಾಡಿ, ಆಭರಣಗಳನ್ನು ತೊಡಿಸುತ್ತಿದ್ದರು. ಹತ್ತಿರದ ನಾಲ್ಕಾರು ಮನೆಗೆ ಕಳುಹಿಸಿ, ಕಟ್ಟಿಗೆಯನ್ನು ಅವಳೇ ಬೇಡಿ ತರಬೇಕಿತ್ತು. ಕಟ್ಟಿಗೆಯನ್ನು ದಾನ ಮಾಡುವುದು ಪುಣ್ಯದ ಕೆಲಸ ಎಂದು ಅವರು ಭಾವಿಸುತ್ತಿದ್ದರು. ಅದೇ ಕಟ್ಟಿಗೆಯನ್ನು ಉಪಯೋಗಿಸಿ ಅಗ್ನಿಕುಂಡ ನಿರ್ಮಿಸಿ ಅದಕ್ಕೆ ಅವಳು ಹಾರುತ್ತಿದ್ದಳು. ಸತಿಯನ್ನು ಜನರು ಗೌರವದಿಂದ ಕಾಣುತ್ತಿದ್ದರು ಮತ್ತು ಸಂಭ್ರಮಿಸುತ್ತಿದ್ದರು. ಕುಲದ ಮರ್ಯಾದೆಯನ್ನು ಉಳಿಸಿದಳು ಎಂದು ಭಾವಿಸುತ್ತಿದ್ದರು.
1822ರಲ್ಲಿ "ದಿ ಕಲ್ಕತ್ತಾ ರಿವ್ಯೂ" ಎನ್ನುವ ಪತ್ರಿಕೆಯ ಸಂಪಾದಕ, ಕಲ್ಕತ್ತಾದಿಂದ 16 ಮೈಲಿಗಳ ದೂರದಲ್ಲಿರುವ ಬಾರಿಪುರ ಎನ್ನುವ ಹಳ್ಳಿಯಲ್ಲಿ ನಡೆದ ಸತಿ ಘಟನೆಯನ್ನು ಹೀಗೆ ವಿವರಿಸುತ್ತಾನೆ. "ವಿಧವೆಯನ್ನು ಧಗಧಗ ಹೊತ್ತಿ ಉರಿಯುವ ಅಗ್ನಿ ಕುಂಡಕ್ಕೆ ಹಾಕಲಾಯಿತು. ಆಕೆ ಬಿದ್ದು, ಬೆಂಕಿಯ ಉರಿಯಿಂದ ಅರಚುತ್ತಾ, ಒಂದು ಕೈ ಊರಿಕೊಂಡು ಅಲ್ಲಿಂದ ಹೊರಬರಲು ಪ್ರಯತ್ನಿಸುತ್ತಾಳೆ. ಅಲ್ಲೇ ಇದ್ದ ಇಬ್ಬರು ಮಡಿವಾಳರು (ಸಾಮಾನ್ಯವಾಗಿ ಇವರು ಸತಿ ಪದ್ಧತಿಯ ಉಸ್ತುವಾರಿ ವಹಿಸುತ್ತಾರೆ) ಒಂದು ಉದ್ದನೆಯ ಹಾಗೂ ದಪ್ಪದಾದ ಬಿದಿರಿನ ಕೋಲಿನಿಂದ ಆಕೆಯನ್ನು ಪುನಹ ಬೆಂಕಿಗೆ ನೂಕುತ್ತಾರೆ". ಈ ಘಟನೆಯನ್ನು ಪತ್ರಿಕೆಯು ಪ್ರಕಟಿಸಿದಾಗ ಮಡಿವಾಳನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕಾಯಿತು. ಆದರೆ ಶಿಕ್ಷೆ ಮಾತ್ರ ಆಗಲಿಲ್ಲ.
ವಿಲಿಯಂ ಬೆಂಟಿಂಗ್ ತನ್ನ ವರದಿಯಲ್ಲಿ ಈ ರೀತಿ ಹೇಳುತ್ತಾನೆ: "1815-1824ರ ಅವಧಿಯಲ್ಲಿ ಬಂಗಾಳ ಪ್ರಾಂತ್ಯ ಒಂದರಲ್ಲೇ ಸುಮಾರು 5997 ಸತಿ ಪ್ರಕರಣಗಳು ದಾಖಲಾಗಿವೆ. ಅಂದರೆ ಸುಮಾರು ವರ್ಷಕ್ಕೆ ಸರಾಸರಿ 600 ಪ್ರಕರಣಗಳು ನಡೆದಿವೆ. ಅರ್ಧಕ್ಕರ್ಧ ಪ್ರಕರಣಗಳು ಬ್ರಾಹ್ಮಣ ಸಮುದಾಯದಲ್ಲಿ ನಡೆದಿತ್ತು. ಹೆಚ್ಚಿನವರು 40 ವರ್ಷ ಮೀರಿದವರು. ಅದರಲ್ಲಿ ಒಂದು ಮಗು ನಾಲ್ಕು ವರ್ಷ ಪ್ರಾಯ ಇದ್ದಿತ್ತು! ಬಹುಶಃ ಬಾಲ್ಯ ವಿವಾಹ - ಬಾಲ್ಯ ವಿಧವೆ - ಬಾಲ್ಯ ಸತಿ?".
ರಾಜಾರಾಮ್ ಮೋಹನ್ ರಾಯ್ ಸತಿ ಪದ್ಧತಿಯ ವಿರುದ್ಧ ಹೋರಾಡಿದರು. ತನ್ನ ಸ್ವತಹ ಅತ್ತಿಗೆಯೇ ಈ ಅನಿಷ್ಟ ಪದ್ಧತಿಗೆ ಬಲಿಯಾಗಿರುವುದನ್ನು ನೋಡಿದ ಅವರ ಮನಸ್ಸು ಕಲುಕಿತು. 1829 ರ ಡಿಸೆಂಬರ್ 4 ರಂದು ಲಾರ್ಡ್ ವಿಲಿಯಂ ಬೆಂಟಿಂಕ್ ಸತಿ ಪದ್ಧತಿಯನ್ನು ನಿಷೇಧಿಸುವ ಕಾನೂನಿಗೆ ಸಹಿ ಹಾಕಿದ.
ವಿಚಿತ್ರವೆಂದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಕೂಡ ಸುಮಾರು 30 ಸತಿ ಪ್ರಕರಣಗಳು ಬೆಳಕಿಗೆ ಬಂದಿವೆ. ಕೊನೆಯ ಪ್ರಕರಣ ನಡೆದದ್ದು ರಾಜಸ್ಥಾನದ ಸಿಕಾರ್ ಜಿಲ್ಲೆಯ ದಿಯೋರಾಲ ಎಂಬ ಹಳ್ಳಿಯಲ್ಲಿ. ಗಂಡ ಯಾವುದೋ ಕಾಯಿಲೆಯಿಂದ ಸತ್ತ ಎಂದು ರೂಪ ಕನ್ವರ್ ಎನ್ನುವ 18 ವರ್ಷದ ಯುವತಿಯನ್ನು ಚಿತೆಗೆ ದೂಡಿದ್ದರು.1987 ರಲ್ಲಿ ಜಾರಿಗೆ ಬಂದ ಹೊಸ ಸತಿಸಹಗಮನ ಕಾನೂನಿನ ಪ್ರಕಾರ, ಸತಿಗೆ ಪ್ರಚೋದಿಸುವವರನ್ನು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
ಕಿತ್ತೂರು ರಾಣಿ ಚೆನ್ನಮ್ಮ: ರಾಷ್ಟ್ರ ಕಂಡ ಧೀರ ಮಹಿಳೆ. (ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 11)
ತನ್ನ ರಾಜ ಸಿಂಹಾಸನದಲ್ಲಿ ಇದ್ದ ಪತಿಯನ್ನು ಕಳೆದುಕೊಳ್ಳುತ್ತಾಳೆ. ಅದೇ ವರ್ಷ ಪ್ರೀತಿಪಾತ್ರನಾದ ಮಗನನ್ನು ಕಳೆದುಕೊಳ್ಳುತ್ತಾಳೆ. ಪುನಃ ಅದೇ ವರ್ಷ ರಾಜ್ಯವನ್ನು ಕೂಡ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಒಬ್ಬಳು ಹೆಣ್ಣಿಗೆ ಹೀಗಾದಾಗ ಆಕೆ ಅನ್ಯಾಯದ ವಿರುದ್ಧ ಸೆಟೆದು ನಿಂತು, ಸನ್ನಿವೇಶವನ್ನು ಪೂರ್ತಿ ತನ್ನ ಹತೋಟಿಗೆ ತೆಗೆದುಕೊಂಡ ಉದಾಹರಣೆ ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇದ್ದರೆ, ಅದು ಕೇವಲ ಕಿತ್ತೂರು ರಾಣಿ ಚೆನ್ನಮ್ಮನ ಅಧ್ಯಾಯದಲ್ಲಿ ಮಾತ್ರ ಬರುತ್ತದೆ. ಜಾನ್ಸಿ ರಾಣಿ ಲಕ್ಷ್ಮೀಬಾಯಿ ಪ್ರಕರಣ ಇದಕ್ಕೆ ಹೋಲುತ್ತದೆಯಾದರೂ ಕೂಡ, ಆ ಸಂದರ್ಭದಲ್ಲಿ ಆಕೆ ಮೊದಲು ಮಗನನ್ನು ಕಳೆದುಕೊಳ್ಳುತ್ತಾಳೆ, ನಂತರ ಪತಿ ಗಂಗಾಧರರಾವ್ ತೀರಿ ಹೋಗುತ್ತಾರೆ.
ಮೈಸೂರು ಮಹಾರಾಜರ ಸಾಮಂತರಾಗಿರುವ ಕಿತ್ತೂರಿನ ನಾಯಕ ವಂಶದ ರಾಜ ಮಲ್ಲರುದ್ರ ಸರ್ಜಾ ಅವನ ದ್ವಿತೀಯ ಪತ್ನಿಯೇ ರಾಣಿ ಚೆನ್ನಮ್ಮ. ಮೊದಲನೆಯ ಪತ್ನಿ ವೀರಮ್ಮ. ಬ್ರಿಟಿಷರ ವಿರುದ್ಧ ಎಲ್ಲಾ ದೇಸಾಯಿ ನಾಯಕರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ ಮಲ್ಲರುದ್ರ ಸರ್ಜಾ ಒಮ್ಮೆ ಬೆಳಗಾವಿ ಸಮೀಪದ ಕಾಕಟಿಗೆ ಬಂದಾಗ, ಅಲ್ಲಿ ಲಿಂಗಾಯತ ಮನೆತನದ ಧೂಳಪ್ಪ ಗೌಡ ದೇಸಾಯಿ ಅವರ ಮಗಳಾದ ಚನ್ನಮ್ಮನನ್ನು ನೋಡಿ ಮದುವೆಯಾದ. ಚೆನ್ನಮ್ಮ ಹುಟ್ಟಿದ್ದು 1778ರ ಅಕ್ಟೋಬರ್ 23 ರಂದು. ಬಾಲ್ಯದಲ್ಲೇ ಕುದುರೆ ಸವಾರಿ, ಕತ್ತಿವರಸೆ ಮತ್ತು ಬಿಲ್ಲುವಿದ್ಯೆಗಳಲ್ಲಿ ಪರಿಣತಿಯನ್ನು ಹೊಂದಿದ ಬಾಲಕಿ ಈಕೆ.
ರಾಜ ಮಲ್ಲರುದ್ರ ಸರ್ಜಾ 1824ರಲ್ಲಿ ತೀರಿಹೋದ. ಅದೇ ವರ್ಷವೇ ಚೆನ್ನಮ್ಮನ ಮಗ ಕೂಡ ತೀರಿಹೋದ. ಧೃತಿಗೆಡದ ಚೆನ್ನಮ್ಮ ತನ್ನ ರಾಜ್ಯವನ್ನು ಉಳಿಸಿಕೊಳ್ಳಲಿಕ್ಕೋಸ್ಕರ ಶಿವಲಿಂಗಪ್ಪ ಎನ್ನುವ ಬಾಲಕನನ್ನು ಸಿಂಹಾಸನದ ಮೇಲೆ ಕುಳ್ಳಿಸಿದಳು. ಲಾರ್ಡ್ ಡಾಲ್ ಹೌಸಿ ಜಾರಿಗೆ ತಂದ 'ದತ್ತು ಮಕ್ಕಳಿಗೆ ಹಕ್ಕಿಲ್ಲ' ಎನ್ನುವ ಆದೇಶ ಪತ್ರವು ದಾರವಾಡದ ಕಲೆಕ್ಟರ್ ಸೈಂಟ್ ಜಾನ್ ಥ್ಯಾಕರೆ ಮೂಲಕ ಚನ್ನಮ್ಮನ ಕೈಸೇರಿತು. ಚನ್ನಮ್ಮ ಬಾಂಬೆ ಪ್ರೆಸಿಡೆನ್ಸಿಯ ಲೆಫ್ಟಿನೆಂಟ್ ಜನರಲ್ ಮೌಂಟ್ ಸ್ಟುವರ್ಟ್ ಎಲ್ಫಿನ್ ಸ್ಟನ್ ಗೆ ಪತ್ರ ಬರೆದರೂ ಪ್ರಯೋಜನವಾಗಲಿಲ್ಲ.
ಅಂದು ಅಕ್ಟೋಬರ್ 23, 1824. ಸೈಂಟ್ ಜಾನ್ ಥ್ಯಾಕರೆಯು ಸೈನ್ಯದೊಂದಿಗೆ ಕಿತ್ತೂರಿನ ಖಜಾನೆಗೆ ಬೀಗಮುದ್ರೆ ಒತ್ತಲು ಬಂದ. ಆಗ ಖಜಾನೆಯಲ್ಲಿ 15 ಲಕ್ಷ ರೂಪಾಯಿಗಳು ಇದ್ದಿದ್ದವು. ಕಿತ್ತೂರಿನ ಕೋಟೆಯ ಬಾಗಿಲನ್ನು ಚೆನ್ನಮ್ಮ ಮುಚ್ಚಲು ಆದೇಶಿಸಿದಳು. ಥ್ಯಾಕರೆಯ ಸೇನೆಯು ಕೋಟೆಯನ್ನು ಧ್ವಂಸಗೊಳಿಸಿತು. ಆಗ ಚೆನ್ನಮ್ಮನ ವೀರ ಸೇನಾನಿ ಅಮತೂರು ಬಾಳಪ್ಪ ಥ್ಯಾಕರೆಯನ್ನು ಇರಿದುಕೊಂದ. ಮತ್ತಿಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಸೆರೆಹಿಡಿಯಲಾಯಿತು.
ಚೆನ್ನಮ್ಮ ಬ್ರಿಟಿಷ್ ಅಧಿಕಾರಿಗಳನ್ನು ಒಪ್ಪಂದದ ಪ್ರಕಾರ ಬಿಡುಗಡೆಗೊಳಿಸಿದಳು. ಆದರೆ ಬ್ರಿಟಿಷರು ಒಪ್ಪಂದಕ್ಕೆ ಬೆಲೆಯೇ ಕೊಡಲಿಲ್ಲ. ಇದಾದ ಸ್ವಲ್ಪವೇ ದಿನಗಳಲ್ಲಿ ಎರಡನೇ ಬಾರಿ ಬ್ರಿಟಿಷ್ ಸೇನೆ ದಂಡೆತ್ತಿ ಬಂದಿತು. ಆಗ ನಡೆದ ಹೋರಾಟದಲ್ಲಿ ಆಗಿನ ಮದ್ರಾಸ್ ಪ್ರೆಸಿಡೆನ್ಸಿಯ ಗವರ್ನರ್ ಆಗಿರುವ ಥಾಮಸ್ ಮನ್ರೋ ಅವನ ಅಳಿಯನನ್ನು ಕೊಲ್ಲಲಾಯಿತು.
ರಾಣಿ ಚೆನ್ನಮ್ಮ ತನ್ನ ಸಮರ್ಥ ಸೇನಾಧಿಪತಿ ಸಂಗೊಳ್ಳಿ ರಾಯಣ್ಣ ಮತ್ತು ಗುರುಸಿದ್ದಪ್ಪ ಜೊತೆಗೂಡಿ ಹೋರಾಡಿದಳು. ಆದರೆ ಬ್ರಿಟೀಷರ ಕೈ ಮೇಲಾಯಿತು. ರಾಣಿ ಚೆನ್ನಮ್ಮ ಮತ್ತು ವೀರಮ್ಮ ಇಬ್ಬರನ್ನು ಹಿಡಿದು ಬೈಲಹೊಂಗಲ ಕೋಟೆಯೊಳಗೆ ನೂಕಲಾಯಿತು. 21 ಫೆಬ್ರವರಿ 1829 ರಂದು ರಾಣಿ ಚೆನ್ನಮ್ಮ ಸೆರೆಮನೆಯಲ್ಲಿ ಮಡಿದಳು.
ಭಾರತ ಕಂಡ ವೀರವನಿತೆಯೊಬ್ಬಳು ಇತಿಹಾಸ ಸೇರಿದಳು. 2007 ರಲ್ಲಿ ರಾಣಿ ಚೆನ್ನಮ್ಮನ ಪ್ರತಿಮೆಯನ್ನು ದೆಹಲಿಯ ಲೋಕಸಭಾ ಸಂಕೀರ್ಣದಲ್ಲಿ ಆಗಿನ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಾಟೀಲ್ ಅನಾವರಣಗೊಳಿಸಿದರು. ಇದಲ್ಲದೆ ಆಕೆಯ ಪ್ರತಿಮೆಯನ್ನು ಇವತ್ತು ಕೂಡ ನಾವು ಕಿತ್ತೂರು, ಬೆಳಗಾವಿ, ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ನೋಡಬಹುದು.
ಬ್ರಿಟಿಷರ ಮೋಸ - ಫ್ರೆಂಚರ ಸಹವಾಸ: ಎರಡನೇ ಆಂಗ್ಲೋ - ಮೈಸೂರು ಯುದ್ಧ.
(ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 12)
1780 ರ ಘಟನೆ. ಆಗಷ್ಟೇ ಅಮೆರಿಕಾದ ಸ್ವಾತಂತ್ರ್ಯ ಸಮರ ಮುಕ್ತಾಯಗೊಂಡಿತ್ತು. ಅಲ್ಲಿ ಕೂಡ ಇಂಗ್ಲೆಂಡಿನ ಬದ್ದ ವೈರಿಗಳಾಗಿ ಫ್ರೆಂಚರು ಮತ್ತು ಡಚ್ಚರು ಹೋರಾಟ ನಡೆಸಿದ್ದರು. ಹಾಗೆಯೇ ಇಲ್ಲಿ ಕೂಡ ಹೈದರ್ ಆಲಿ ಪರವಾಗಿ ಫ್ರೆಂಚರು ಮತ್ತು ಡಚ್ಚರು ಇಂಗ್ಲೆಂಡ್ ವಿರುದ್ಧ ಹೋರಾಟ ಮಾಡಿದರು.
ಯುದ್ಧದಲ್ಲಿ ಭಾಗವಹಿಸಿದ ಹೆಚ್ಚಿನ ಬ್ರಿಟಿಷ್ ಸೈನಿಕರು ಈಸ್ಟ್ ಇಂಡಿಯಾ ಕಂಪನಿಯ ಸೈನಿಕರಾಗಿದ್ದರು. ಇಂಗ್ಲೆಂಡಿನ ಬ್ರಿಟಿಷ್ ಸರಕಾರದ ಸೇನೆ ಹಾಗೂ ಇಂಗ್ಲೆಂಡ್ ಆಡಳಿತವಿರುವ ಜರ್ಮನಿಯ ಹನೋವರ್ ಸೇನೆ ಕೂಡ ಭಾರತಕ್ಕೆ ಆಗ ಬಂದಿತ್ತು.
ಒಂದನೇ ಆಂಗ್ಲೋ ಮೈಸೂರು ಯುದ್ಧದ ಕೊನೆಗೆ ನಡೆದ ಮದ್ರಾಸ್ ಒಪ್ಪಂದದ ಪ್ರಕಾರ ಹೈದರ್ ಆಲಿಯ ಮೇಲೆ ಹೊರಗಿನವರು ಆಕ್ರಮಣ ಮಾಡಿದಾಗ ಬ್ರಿಟಿಷರು ರಕ್ಷಿಸ ಬೇಕಿತ್ತು. ಆದರೆ ಮರಾಠರು ದಾಳಿ ಮಾಡಿದಾಗ ಬ್ರಿಟಿಷರು ಸಹಾಯಕ್ಕೆ ಬರಲಿಲ್ಲ.
ಇದರಿಂದ ಕ್ರೋಧಗೊಂಡ ಹೈದರ್ ಆಲಿ ಬ್ರಿಟಿಷರ ವಿರುದ್ಧ ಕಾದಾಡಲು ಫ್ರೆಂಚರ ಜೊತೆ ಸ್ನೇಹ ಸಂಪಾದಿಸಿದ. 1778ರಲ್ಲಿ ಯುರೋಪ್ ನಲ್ಲಿ ಫ್ರೆಂಚರು ಇಂಗ್ಲೀಷರ ಮೇಲೆ ಯುದ್ಧ ಸಾರಿದರು. ಭಾರತದಿಂದ ಕೂಡ ಫ್ರೆಂಚರನ್ನು ಓಡಿಸಬೇಕೆಂದು ಇಂಗ್ಲಿಷರು ಪಣ ತೊಟ್ಟರು.
ಅದರಂತೇ ಬ್ರಿಟಿಷರು ಫ್ರೆಂಚರ ವಸಾಹತುಗಳಾದ ಪಾಂಡಿಚೇರಿ ಹಾಗೂ ಮಾಹೆ ಯನ್ನು ವಶಪಡಿಸಿಕೊಂಡರು. ಫ್ರೆಂಚರಿಂದ ಮಾಹೆ ಬಂದರಿನ ಮೂಲಕ ಹೈದರಾಲಿಗೆ ಸರಬರಾಜು ಆಗುತ್ತಿದ್ದ ಮದ್ದುಗುಂಡುಗಳ ಪೂರೈಕೆ ನಿಂತಾಗ ಹೈದರಾಲಿ ಸಿಡಿದೆದ್ದನು.
ಮರಾಠರು ಹಾಗೂ ನಿಜಾಮರ ಬೆಂಬಲದೊಂದಿಗೆ ಹೈದರಾಲಿ ಪೂರ್ವ ಕರಾವಳಿಯ ಆರ್ಕಾಟ್ ಪ್ರದೇಶವನ್ನು 80000 ಸೈನಿಕರೊಂದಿಗೆ ಮುತ್ತಿಗೆ ಹಾಕಿದ. ತನ್ನ ಮಗ ಟಿಪ್ಪುಸುಲ್ತಾನನ ನೇತೃತ್ವ ದೊಂದಿಗೆ ಒಂದು ತುಕಡಿ ಸೈನ್ಯವನ್ನು ಗುಂಟೂರಿಗೆ ಕಳುಹಿಸಿದ. ಅಲ್ಲಿ ಇಂಗ್ಲಿಷ್ ಸೇನಾಧಿಪತಿ ವಿಲಿಯಂ ಬೈಲಿಯ ಸೈನ್ಯದೊಂದಿಗೆ ಟಿಪ್ಪುಸುಲ್ತಾನನ ಸೇನೆ ಮುಖಾಮುಖಿಯಾಯಿತು. ಒಂದೇ ದಿನದಲ್ಲಿ ಸುಮಾರು 350 ಇಂಗ್ಲೀಷ ಸೈನಿಕರ ಮಾರಣ ಹೋಮ ನಡೆಯಿತು. ಅಗಾಧ ಪ್ರಮಾಣದ ಸೈನಿಕರು ಗಾಯಗೊಂಡು ರಕ್ತದ ಕೋಡಿಯೇ ಹರಿಯಿತು.
ಲೇಖನ ಮಾಲಿಕೆ ಮುಂದುವರಿಯಲಿದೆ..
ಡಾ. ಉಮೇಶ್ ಪುತ್ರನ್
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕುಕೇಂದ್ರದ ಹೃದಯಭಾಗದಲ್ಲಿರುವ ಚಿನ್ಮಯಿ ಆಸ್ಪತ್ರೆಯ ವೈಧ್ಯಕೀಯ ನಿರ್ದೇಶಕರಾದ ಲೇಖಕರು (ಡಾ. ಉಮೇಶ್ ಪುತ್ರನ್) ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ವಿಧ್ಯಾಭ್ಯಾಸವನ್ನು ಗಂಗೊಳ್ಳಿಯಲ್ಲಿ ಪೂರೈಸಿ ವೈದ್ಯಕೀಯ ಶಿಕ್ಷಣವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಪೂರೈಸಿರುತ್ತಾರೆ. ಸಾಹಿತ್ಯಾಸಕ್ತರಾದ ಇವರು ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.