Advertisement

ಮೂರನೇಯ ಆಂಗ್ಲೋ - ಮೈಸೂರು ಯುದ್ಧ: ತನ್ನ ಎಳೆಯ ಮಕ್ಕಳನ್ನೇ ಅಡವಿಟ್ಟ ಟಿಪ್ಪು!

Advertisement

(ಹಿಂದಿನ‌ ಸಂಚಿಕೆಯಿಂದ..)

ಬರಹ: ಡಾ. ಉಮೇಶ್ ಪುತ್ರನ್ ಎಂ. ಡಿ.
ಚಿನ್ಮಯಿ ಆಸ್ಪತ್ರೆ, ಕುಂದಾಪುರ.
(“ಸ್ವಾತಂತ್ರ್ಯದ ಆ ಕ್ಷಣಗಳು” ಪುಸ್ತಕದಿಂದ)

ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 13
ಬ್ರಿಟಿಷರನ್ನು ಮಣಿಸಿದ ಟಿಪ್ಪು:
ಮುಂದುವರಿದ ಎರಡನೇ ಆಂಗ್ಲೋ - ಮೈಸೂರು ಯುದ್ಧ

ಎರಡನೇ ಆಂಗ್ಲೋ - ಮೈಸೂರು ಯುದ್ಧದ ಸಂದರ್ಭದಲ್ಲಿಗುಂಟೂರಿನಲ್ಲಿ ನಡೆದ ಬ್ರಿಟೀಷ್ ಸೈನಿಕರ ಮಾರಣ ಹೋಮದಿಂದ ಎಚ್ಚೆತ್ತುಕೊಂಡ ಇಂಗ್ಲಿಷರು, ಸೇನಾಧಿಪತಿ ಸರ್ ಐರ್ ಕೂಟ್ ನೇತೃತ್ವದಲ್ಲಿ ಸೇನೆಯನ್ನು ಮದ್ರಾಸಿಗೆ ಕಳುಹಿಸಿಕೊಟ್ಟರು. ಕೆಲವು ಕಡೆ ಹೈದರಾಲಿ ಸೋತರೂ ಕೂಡ, ಟಿಪ್ಪು ತಂಜಾವೂರನ್ನು ಬ್ರಿಟಿಷರಿಂದ ವಶಪಡಿಸಿಕೊಂಡ.

1782 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಸೇನೆಯನ್ನು ಕೇರಳದ ತಲಶೇರಿಗೆ ಕಳುಹಿಸಿ, ಅಲ್ಲಿಂದ ಹೈದರ್ ಆಲಿ ಮೇಲೆ ಆಕ್ರಮಣ ಮಾಡುವ ಸಿದ್ಧತೆಯನ್ನು ಬ್ರಿಟಿಷರು ಮಾಡಿದರು. ಇದನ್ನು ಅರಿತ ಟಿಪ್ಪುಸುಲ್ತಾನ ತನ್ನ ಸೇನೆಯೊಂದಿಗೆ ತಲಶೇರಿಗೆ ಆಗಮಿಸಿದ. ಆದರೆ ಅಷ್ಟರಲ್ಲೇ ಹೈದರ್ ಆಲಿ ಕ್ಯಾನ್ಸರ್ ನಿಂದ ಮರಣಹೊಂದಿದ ಸುದ್ದಿ ಬಂತು. ಟಿಪ್ಪು ಶ್ರೀರಂಗಪಟ್ಟಣಕ್ಕೆ ವಾಪಸಾದ.

ಇದನ್ನು ತಿಳಿದ ಜನರಲ್ ರಿಚರ್ಡ್ ಮ್ಯಾಥ್ಯು ತನ್ನ ಸೇನೆಯೊಂದಿಗೆ ಶ್ರೀರಂಗಪಟ್ಟಣದ ಮೇಲೆ ಆಕ್ರಮಣ ಮಾಡಲು ಬಂದ. ಬಿದನೂರಿನ ಸಮೀಪ ಆತನ ಸೇನೆಯನ್ನು ಸೋಲಿಸಿ, ಅವನ ಸಮೇತ ಸುಮಾರು ಇಪ್ಪತ್ತು ಸೇನಾಧಿಕಾರಿಗಳನ್ನು ಸೆರೆಹಿಡಿದು, ಜೈಲಿಗೆ ತಳ್ಳಿ, ಅಲ್ಲಿ ಅವರಿಗೆ ವಿಷವುಣಿಸಿ ಸಾಯಿಸಲಾಯಿತು.

1783ರ ಮಾರ್ಚ್ ನಲ್ಲಿ ಇಂಗ್ಲೀಷ್ ಸೇನೆ ಮಂಗಳೂರನ್ನು ವಶಪಡಿಸಿಕೊಂಡಿತು. ಕೂಡಲೇ ಟಿಪ್ಪು ತನ್ನ ಸೇನೆಯನ್ನು ತೆಗೆದುಕೊಂಡು ಹೋಗಿ ಪುನಃ ಮಂಗಳೂರನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡ. ಸುಮಾರು ಎಂಟು ತಿಂಗಳ ಕಾಲ ಇಂಗ್ಲಿಷ್ ಸೇನೆಯನ್ನು ಸೆರೆಹಿಡಿದ. ಪ್ರಾರಂಭದಲ್ಲಿ ಇದ್ದ 3000 ಸೈನಿಕರಲ್ಲಿ ಕಡೆಗೆ ಉಳಿದವರು 850 ಮಂದಿ ಮಾತ್ರ. ಉಳಿದವರು ಹಸಿವೆಯಿಂದ ಮತ್ತು ಸ್ಕರ್ವಿ ರೋಗದಿಂದ ಸತ್ತರು.

ಇಂಗ್ಲೆಂಡಿನ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳಿಂದ ಯುದ್ಧವನ್ನು ನಿಲ್ಲಿಸಿ ಟಿಪ್ಪುವಿನೊಂದಿಗೆ ರಾಜಿ ಮಾಡಿಕೊಳ್ಳುವಂತೆ ಆದೇಶ ಬಂತು. ಇದರಂತೆ ಮಾರ್ಚ್ 11, 1784 ರಲ್ಲಿ ಮಂಗಳೂರು ಒಪ್ಪಂದ ಏರ್ಪಟ್ಟಿತು.

ಭಾರತದ ಇತಿಹಾಸದಲ್ಲಿ ಈ ಒಪ್ಪಂದ ಬಹಳ ಪ್ರಮುಖವಾಗಿದೆ. ಏಕೆಂದರೆ ಮೊದಲೆಲ್ಲ ಒಪ್ಪಂದ ಏರ್ಪಡುವಾಗ ಷರತ್ತುಗಳನ್ನು ಬ್ರಿಟಿಷರೇ ಹಾಕುತ್ತಿದ್ದರು. ಆದರೆ ಈ ಬಾರಿ ಕೆಲವೊಂದು ಷರತ್ತುಗಳನ್ನು ಟಿಪ್ಪುವೇ ವಿಧಿಸಿ ತನ್ನ ಕೈ ಮೇಲಾಗುವಂತೆ ನೋಡಿಕೊಂಡ. ಹೀಗೆ ಎರಡನೇ ಆಂಗ್ಲೋ-ಮೈಸೂರು ಯುದ್ಧವು 1780 ರಿಂದ 1784 ರ ತನಕ ನಡೆಯಿತು.

ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 14
ಟಿಪ್ಪು ಮಕ್ಕಳು ಕಾರ್ನವಾಲಿಸ್ ಮಡಿಲಿಗೆ:
ಮೂರನೇಯ ಆಂಗ್ಲೋ - ಮೈಸೂರು ಯುದ್ಧ.

ಮೂರನೇಯ ಆಂಗ್ಲೋ-ಮೈಸೂರು ಯುದ್ಧವು 1789 ರಿಂದ 1792ರ ಮಧ್ಯೆ ನಡೆಯಿತು. ಎರಡನೆಯ ಆಂಗ್ಲೋ ಮೈಸೂರು ಯುದ್ಧ ದಲ್ಲಿ ಸೆರೆಹಿಡಿದ ಇಂಗ್ಲೀಷ್ ಸೈನಿಕರನ್ನು ಒಪ್ಪಂದದ ಪ್ರಕಾರ ಟಿಪ್ಪು ಬಿಡಬೇಕಾಗಿತ್ತು. ಆದರೆ ಅವನು ಬಿಡಲಿಲ್ಲ. ಆದ್ದರಿಂದ ಈಸ್ಟ್ ಇಂಡಿಯಾ ಕಂಪನಿಯು ತನ್ನ "ಮಿತ್ರ"ರ ಪಟ್ಟಿಯಿಂದ ಟಿಪ್ಪುಸುಲ್ತಾನನ ಹೆಸರನ್ನು ಕೈಬಿಟ್ಟಿತು.

ಲಾರ್ಡ್ ಕಾರ್ನ್ವಾಲಿಸ್ ಆಗ ಭಾರತದ ಎರಡನೇ ಗವರ್ನರ್ ಜನರಲ್ ಹಾಗೂ ಈಸ್ಟ್ ಇಂಡಿಯಾ ಕಂಪನಿಯ ಕಮಾಂಡರ್ ಇನ್ ಚೀಫ್ ಆಗಿದ್ದ. ಈತನು ಅಮೆರಿಕಾದ ಸ್ವಾತಂತ್ರ್ಯ ಸಮರದಲ್ಲಿ ಭಾಗವಹಿಸಿದ ಅತ್ಯಂತ ಯಶಸ್ವಿ ನಾಯಕ. ಇದಲ್ಲದೇ ಟಿಪ್ಪು ಸುಲ್ತಾನನಿಗೆ ಫ್ರೆಂಚರು ನಿರೀಕ್ಷಿಸಿದಷ್ಟು ಬೆಂಬಲವನ್ನು ನೀಡಲಿಲ್ಲ

ಮೂರು ವರ್ಷಗಳವರೆಗೆ ಅನೇಕ ಸರಣಿ ಯುದ್ಧಗಳು ನಡೆದವು. ಮರಾಠರು, ತಿರುವಾಂಕೂರು ರಾಜ ಮತ್ತು ಹೈದರಾಬಾದಿನ ನಿಜಾಮ ಬ್ರಿಟಿಷರಿಗೆ ಸಹಾಯ ಮಾಡಿದರು.

ಟಿಪ್ಪು ಸುಲ್ತಾನ್ ಫ್ರೆಂಚರನ್ನು ಕೂಡಿಕೊಂಡು ಬ್ರಿಟಿಷರ ಅಧೀನದಲ್ಲಿರುವ ತಿರುವಾಂಕೂರು ಸಂಸ್ಥಾನದ ಮೇಲೆ ದಾಳಿ ಮಾಡಿದ. ಪ್ರಾರಂಭದಲ್ಲಿ ವಿಜಯೀ ಆದರೂ ಕೂಡ ನಂತರ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.

1790 ರಲ್ಲಿ 30 ಸಾವಿರ ಸೈನಿಕರು ಇರುವ ಮರಾಠರು ಮೈಸೂರು ಪ್ರಾಂತ್ಯದ ಮೇಲೆ ದಂಡೆತ್ತಿ ಬಂದು ತುಂಗಭದ್ರಾ ನದಿಯ ತೀರದವರೆಗೆ ಬಂದರು. 25 ಸಾವಿರ ಸೈನಿಕರು ಇರುವ ಈಸ್ಟ್ ಇಂಡಿಯಾ ಕಂಪನಿಯ ಸೈನಿಕರು ಪೂನಾದಿಂದ ಹೊರಟು ಕರ್ನೂಲಿಗೆ ಬಂದರು. ಇನ್ನೊಂದು ಕಡೆಯಿಂದ ಹೈದರಾಬಾದಿನ ನಿಜಾಮನ ಸೈನ್ಯ ಕೂಡ ಮೈಸೂರು ಪ್ರಾಂತ್ಯದ ಕಡೆ ದಂಡೆತ್ತಿ ಬಂತು.

ಕಾರ್ನವಾಲಿಸ್ ಮೊದಲು ಬೆಂಗಳೂರನ್ನು ವಶಪಡಿಸಿಕೊಂಡ. ನಂತರ ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದ. ಆದರೆ ಕ್ಲಪ್ತ ಸಮಯದಲ್ಲಿ ಆತನಿಗೆ ಮರಾಠರ ಹಾಗೂ ನಿಜಾಮನ ಬೆಂಬಲ ಸಿಗಲಿಲ್ಲ. ಅವರು ಆಗಮಿಸುವುದು ತಡವಾಯಿತು. ಟಿಪ್ಪು ಸೈನ್ಯವು ಕಾರ್ನವಾಲಿಸ್ ಸೈನ್ಯವನ್ನು ಹಿಮ್ಮೆಟ್ಟಿಸಿತು. ಇದು ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಲು ಇಂಗ್ಲಿಷ್ ಸೈನ್ಯದ ವಿಫಲ ಪ್ರಯತ್ನ ಆಯಿತು.

1792ರ ಫೆಬ್ರವರಿ 23ರಂದು ಪುನಃ ಇಂಗ್ಲಿಷ್ ಸೈನ್ಯ ಹಾಗೂ ಮರಾಠರು ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿದರು. ಸೋಲು ಖಚಿತ ಎಂದು ಭಾವಿಸಿ ಟಿಪ್ಪು ಶಾಂತಿ ಒಪ್ಪಂದಕ್ಕೆ ತಯಾರಾದ. ಶ್ರೀರಂಗಪಟ್ಟಣ ಒಪ್ಪಂದವು ಮಾರ್ಚ್ 17, 1792ರಲ್ಲಿ ನಡೆಯಿತು.

ಒಪ್ಪಂದವನ್ನು ಖಚಿತವಾಗಿ ಟಿಪ್ಪು ಪಾಲಿಸುವ ಸಲುವಾಗಿ ತನ್ನ ಇಬ್ಬರು ಮಕ್ಕಳನ್ನು ನಮಗೆ ಹಸ್ತಾಂತರಿಸಬೇಕೆಂದು ಇಂಗ್ಲೀಷರು ಬೇಡಿಕೆ ಇಟ್ಟರು. ಎರಡೂ ಸೇನೆಯ ಕಡೆಯಿಂದ ನಡೆದ ದೊಡ್ಡ ಸಮಾರಂಭದಲ್ಲಿ ಟಿಪ್ಪು ತನ್ನ ಮಕ್ಕಳಾದ 13 ವರ್ಷ ಪ್ರಾಯದ ಫತೆ ಅಲಿ ಹಾಗೂ 11 ವರ್ಷ ಪ್ರಾಯದ ಅಬ್ದುಲ್ ಖಾಲಿಕ್ ನನ್ನು ಲಾರ್ಡ್ ಕಾರ್ನವಾಲಿಸ್ ಗೆ ಹಸ್ತಾಂತರಿಸಿದ.

ಇಡೀ ಮೈಸೂರು ಪ್ರಾಂತ್ಯವನ್ನು ಎರಡು ಭಾಗ ಮಾಡಲಾಯಿತು. ಒಂದು ಭಾಗವನ್ನು ಮರಾಠರು ಮತ್ತು ನಿಜಾಮರು ಹಂಚಿಕೊಂಡರು. ಬೆಂಗಳೂರಿನಿಂದ ತುಂಗಭದ್ರಾ ನದಿಯವರೆಗೆ ಮರಾಠರು, ಕೃಷ್ಣಾನದಿಯಿಂದ ಪೆನ್ನಾರ್ ನದಿಯವರೆಗೆ ನಿಜಾಮರು ಪಡೆದರು. ತಿರುವಾಂಕೂರಿನಿಂದ ಕಾಳಿ ನದಿಯವರೆಗಿನ ಪಶ್ಚಿಮ ಕರಾವಳಿ ಬ್ರಿಟಿಷರ ಪಾಲಿಗೆ ಬಂತು.

ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 15
ವಿಶ್ವವಿಖ್ಯಾತ ಮೈಸೂರಿನ ರಾಕೆಟ್

1780ರ ನಂತರ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಮಾಡಿದ ಎಲ್ಲಾ ಯುದ್ಧಗಳಲ್ಲಿ ಮೈಸೂರಿನ ರಾಕೆಟ್ ಪ್ರಮುಖ ಪಾತ್ರ ವಹಿಸಿದೆ. ಏನಿದು ಮೈಸೂರು ರಾಕೆಟ್, ಆಶ್ಚರ್ಯವಾಯಿತೇ?

ರಾಕೆಟ್ ಗಳು ಯುರೋಪ್ ಮತ್ತು ಅಮೆರಿಕಾ ದೇಶಗಳಲ್ಲಿ ಆಗಲೇ ಪ್ರಚಲಿತವಾಗಿದ್ದರೂ ಕೂಡ ಮೈಸೂರು ರಾಕೆಟ್ ನಷ್ಟು ಶಕ್ತಿಶಾಲಿ ಆಗಿರಲಿಲ್ಲ. ಇದಕ್ಕೆ ಕಾರಣ ಏನೆಂದರೆ ಇದರ ನಳಿಕೆಯನ್ನು ಮೆದು ಕಬ್ಬಿಣದಿಂದ ಮಾಡಲಾಗಿತ್ತು. ಅಲ್ಲಿಯ ವರೆಗೆ ಬಿದಿರಿನ ನಳಿಕೆ ಇದ್ದಿತ್ತು. ಕಬ್ಬಿಣ ತಂತ್ರಜ್ಞಾನ ಇಲ್ಲಿ ಆಗ ಅತ್ಯುತ್ತಮವಾಗಿತ್ತು.

ಇದರ ನಳಿಕೆಯು ಸುಮಾರು 8 ಇಂಚು ಉದ್ದ ಹಾಗೂ 3 ಇಂಚು ವ್ಯಾಸವನ್ನು ಹೊಂದಿದೆ. ಇದರ ಒಳಗೆ ಒಂದು ಪೌಂಡ್ ಸ್ಪೋಟಕ ತುಂಬಿಸಿದರೆ ಅದು ಸುಮಾರು ಒಂದು ಕಿಲೋಮೀಟರ್ ಉದ್ದದವರೆಗೆ ಸಿಡಿಯಬಲ್ಲದು. ಇದಕ್ಕೆ ಹರಿತವಾದ ಖಡ್ಗವನ್ನು ಕೂಡ ಜೋಡಿಸಿರುತ್ತಾರೆ. ಅದು ಕೂಡ ದೂರದವರೆಗೆ ಹಾರಿ ವೈರಿಗಳಿಗೆ ಘಾಸಿ ಮಾಡಬಲ್ಲದು.

ಎರಡನೆಯ ಆಂಗ್ಲೋ-ಮೈಸೂರು ಯುದ್ಧದಲ್ಲಿ ಹೈದರಾಲಿ ಪೊಳಿಲೂರಿನಲ್ಲಿ ಹೋರಾಡುವಾಗ ಈತನ ಒಂದು ರಾಕೆಟ್ ಕರ್ನಲ್ ವಿಲಿಯಂ ಬೈಲಿಯ ಸ್ಫೋಟಕ ತುಂಬಿದ ಕೋಣೆಗೆ ಹೊಡೆದು ಆತನಲ್ಲಿದ್ದ ಎಲ್ಲಾ ಸ್ಪೋಟಕಗಳನ್ನು ನಾಶ ಪಡಿಸಲಾಯಿತು. ಇದು ಬ್ರಿಟಿಷರ ಹೀನಾಯ ಸೋಲಿಗೆ ಕೂಡ ಕಾರಣವಾಯಿತು.

ಮೂರನೆಯ ಆಂಗ್ಲೋ-ಮೈಸೂರು ಯುದ್ಧದಲ್ಲಿ ರಾಕೆಟ್ ಗಳನ್ನು ಸಿಡಿಸಲು ಟಿಪ್ಪು ಸೈನ್ಯದಲ್ಲಿ ಸುಮಾರು ಐದು ಸಾವಿರ ಸೈನಿಕರು ಇದ್ದಿದ್ದರು. ಆಗ ಶ್ರೀರಂಗಪಟ್ಟಣದಲ್ಲಿ ಇದನ್ನು ಯಥೇಚ್ಛವಾಗಿ ಉಪಯೋಗಿಸಲಾಯಿತು.

1801 ರಲ್ಲಿ ರಾಯಲ್ ವೂಲ್ ವಿಚ್ ಆರ್ಸೆನಲ್ ಎನ್ನುವವನು ಮೈಸೂರು ರಾಕೆಟ್ ಬಗ್ಗೆ ಅಧ್ಯಯನ ಮಾಡಿ, ಅದನ್ನು ಇನ್ನೂ ಹೆಚ್ಚು ಅಭಿವೃದ್ಧಿಪಡಿಸಲು ಪ್ರಯತ್ನಿಸಿದ. ವಿಲಿಯಂ ಕಾಂಗ್ರೀವ್ ಎನ್ನುವವನು 1802 ರಲ್ಲಿ ರಾಕೆಟ್ ಬಗ್ಗೆ ಕ್ರಮಬದ್ಧವಾದ ಅಧ್ಯಯನವನ್ನು ಮಾಡಿ ಮತ್ತೂ ಹೆಚ್ಚು ಸಂಶೋಧನೆ ಮಾಡಿದ. ಇದನ್ನು 1812ರ ವಾಟರ್ಲೂ ನಲ್ಲಿ ನಪೋಲಿಯನ್ ವಿರುದ್ಧ ಯುದ್ಧದಲ್ಲಿ ಬ್ರಿಟಿಷರು ಉಪಯೋಗಿಸಿ ವಿಜಯಿಯಾದರು.

2017ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಟಿಪ್ಪು ಸುಲ್ತಾನ್ ಕಾಲದ ಉಪಯೋಗಿಸದೇ ಇರುವ 102 ರಾಕೆಟ್ ಗಳು ಪತ್ತೆಯಾಗಿವೆ.

ಲೇಖನ ಮಾಲಿಕೆ ಮುಂದುವರಿಯಲಿದೆ..

(ಡಾ. ಉಮೇಶ್ ಪುತ್ರನ್)

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕುಕೇಂದ್ರದ ಹೃದಯಭಾಗದಲ್ಲಿರುವ ಚಿನ್ಮಯಿ ಆಸ್ಪತ್ರೆಯ ವೈಧ್ಯಕೀಯ ನಿರ್ದೇಶಕರಾದ ಲೇಖಕರು (ಡಾ. ಉಮೇಶ್ ಪುತ್ರನ್) ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ವಿಧ್ಯಾಭ್ಯಾಸವನ್ನು ಗಂಗೊಳ್ಳಿಯಲ್ಲಿ ಪೂರೈಸಿ ವೈದ್ಯಕೀಯ ಶಿಕ್ಷಣವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಪೂರೈಸಿರುತ್ತಾರೆ. ಸಾಹಿತ್ಯಾಸಕ್ತರಾದ ಇವರು ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

Advertisement
Advertisement
Recent Posts
Advertisement