Advertisement

ಸಂಗೊಳ್ಳಿ ರಾಯಣ್ಣ, ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ ಮತ್ತು ಟಿಪ್ಪುಸುಲ್ತಾನ್!

Advertisement

ಬರಹ: ಡಾ. ಉಮೇಶ್ ಪುತ್ರನ್ ಎಂ. ಡಿ.
ಚಿನ್ಮಯಿ ಆಸ್ಪತ್ರೆ, ಕುಂದಾಪುರ. ಉಡುಪಿ ಜಿಲ್ಲೆ (“ಸ್ವಾತಂತ್ರ್ಯದ ಆ ಕ್ಷಣಗಳು” ಪುಸ್ತಕದಿಂದ)

ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 16
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ ಕುರುಬರ ಮನೆತನದ ಭರಮಪ್ಪ ಮತ್ತು ಕೆಂಚಮ್ಮಾಜಿಯವರ ಪುತ್ರನಾಗಿ ಆಗಸ್ಟ್ 15, 1796 ರಂದು ಜನಿಸಿದ ಸಂಗೊಳ್ಳಿ ರಾಯಣ್ಣ , ಸೈನಿಕನಾಗಿ ಕಿತ್ತೂರು ಸೇನೆಯನ್ನು ಸೇರಿದ. ರಾಜ ಮಲ್ಲರುದ್ರ ಸರ್ಜನಿಗೆ ಸ್ವಾಮಿ ನಿಷ್ಠನಾಗಿ ಇದ್ದುದರಿಂದ ಸೇನೆಯಲ್ಲಿ ಬಡ್ತಿ ಹೊಂದುತ್ತ ಸಾಗುತ್ತಾನೆ.

ಮಲ್ಲರುದ್ರ ಸರ್ಜಾ ತೀರಿಹೋದ ನಂತರ 1824 ರಲ್ಲಿ ನಡೆದ ಕಿತ್ತೂರು ಕದನದಲ್ಲಿ ಬ್ರಿಟಿಷರ ವಿರುದ್ಧ ಅಪ್ರತಿಮ ಸಾಹಸವನ್ನು ತೋರುತ್ತಾನೆ. ಚೆನ್ನಮ್ಮ ರಾಣಿಗೆ ಹೆಗಲಿಗೆ ಹೆಗಲು ಕೊಟ್ಟು, ದತ್ತು ಪುತ್ರನಾದ ಶಿವಲಿಂಗಪ್ಪನನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸುವ ಸಂಕಲ್ಪ ತೊಡುತ್ತಾನೆ. 1824ರ ಯುದ್ಧದಲ್ಲಿ ರಾಯಣ್ಣನನ್ನು ಜೈಲಿಗೆ ಹಾಕಲಾಗಿತ್ತು, ಮತ್ತು ನಂತರ ಬಿಡುಗಡೆಗೊಳಿಸಲಾಯಿತು.

21 ಫೆಬ್ರವರಿ, 1829 ರಂದು ರಾಣಿ ಚೆನ್ನಮ್ಮ ಸೆರೆಮನೆಯಲ್ಲಿ ಮಡಿದ ನಂತರ ಕೂಡ ಬ್ರಿಟಿಷರ ವಿರುದ್ಧ ತನ್ನ ಯುದ್ಧವನ್ನು ಮುಂದುವರಿಸುತ್ತಾನೆ. ಸ್ಥಳೀಯ ಜನರನ್ನು ಒಟ್ಟುಗೂಡಿಸಿ ಗೆರಿಲ್ಲಾ ಯುದ್ಧವನ್ನು ಪ್ರಾರಂಭಿಸುತ್ತಾನೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ರಹಸ್ಯವಾಗಿ ಸಾಗುವ ಇವನ ಗೆರಿಲ್ಲಾ ಸೈನ್ಯವು ಕಂಡಕಂಡಲ್ಲಿ ಸರಕಾರಿ ಕಚೇರಿಗಳನ್ನು ಸುಟ್ಟು ಹಾಕುತ್ತದೆ. ಬ್ರಿಟಿಷ್ ಸೇನಾ ತುಕಡಿಗಳ ಮೇಲೆ ಹೊಂಚುದಾಳಿ ಪ್ರಾರಂಭಿಸಿ ಅವರನ್ನು ಮುಗಿಸಿಬಿಡುತ್ತದೆ. ಶ್ರೀಮಂತ ಬ್ರಿಟಿಷರ ಮತ್ತು ಜಮೀನುದಾರರ ಸಂಪತ್ತನ್ನು ದೋಚಿ, ಅದನ್ನು ಬಡವರಿಗೆ ಹಂಚುತ್ತದೆ.

ರಾಯಣ್ಣ ಬ್ರಿಟಿಷರಿಗೆ ತಲೆನೋವಾಗಿ ಪರಿಣಮಿಸಿದ. ಎಷ್ಟೇ ಪ್ರಯತ್ನ ಪಟ್ಟರೂ ಈತನನ್ನು ಹಿಡಿಯಲು ಸಾಧ್ಯವಾಗಲೇ ಇಲ್ಲ. ಈತನ ಆಸ್ತಿಗಳನ್ನು ಸರಕಾರ ಮುಟ್ಟುಗೋಲು ಹಾಕುತ್ತದೆ. ಆದರೂ ಕೂಡ ರಾಣಿಯ ದತ್ತು ಪುತ್ರ ಶಿವಲಿಂಗಪ್ಪನನ್ನು ಗದ್ದುಗೆಯ ಮೇಲೆ ಕುಳ್ಳಿಸುವ ಈತನ ಛಲ ಮಾತ್ರ ಕಡಿಮೆಯಾಗಲಿಲ್ಲ.

ರಾಯಣ್ಣನನ್ನು ಹಿಡಿಯಲು ಸಾಧ್ಯವಾಗದೇ ಇದ್ದಾಗ ಬ್ರಿಟಿಷರು ಒಂದು ಉಪಾಯ ಹೂಡಿದರು. ಈತನ ಚಿಕ್ಕಪ್ಪ ಲಿಂಗಣ್ಣ ಗೌಡನಿಗೆ ಆಮಿಷ ತೋರಿಸಿ ರಾಯಣ್ಣನನ್ನು ಹಿಡಿದು ಕೊಡುವಂತೆ ಹೇಳಿದರು. ಅಂದು ಏಪ್ರಿಲ್ 8, 1830. ರಾಯಣ್ಣ ಸ್ನಾನಕ್ಕಾಗಿ ಆಯುಧವನ್ನು ತೆಗೆದಿಟ್ಟು ಹೋಗಿದ್ದ. ಆಗ ಲಿಂಗಣ್ಣ ಗೌಡ ಹಾಗೂ ಆತನ ಸಹಚರರು ಬಂದು ರಾಯಣ್ಣನನ್ನು ಹಿಂದಿನಿಂದ ಕೈ ಮತ್ತು ಕಾಲು ಕಟ್ಟಿ ಬ್ರಿಟಿಷರಿಗೆ ಒಪ್ಪಿಸಿದರು. ಈ 'ಘನ' ಕಾರ್ಯ ಮಾಡಿದ್ದಕ್ಕೆ ಲಿಂಗಣ್ಣ ಗೌಡನಿಗೆ ₹300 ಬಹುಮಾನ ನೀಡಿದ್ದಲ್ಲದೇ, ಕೆಲವು ಹಳ್ಳಿಗಳನ್ನು ದಾನ ನೀಡಿದರು.

ಬ್ರಿಟಿಷರು ರಾಯಣ್ಣನನ್ನು ಜನವರಿ 26, 1831ರಂದು ಬೆಳಗಾವಿಯ ಹತ್ತಿರದ ನಂದಗಡದ ಸಮೀಪ ಸಾರ್ವಜನಿಕವಾಗಿ ಆಲದ ಮರಕ್ಕೆ ನೇಣು ಹಾಕಿದರು. ಕೆಳದಿ ಸಿಂಹಾಸನವನ್ನು ಏರಬೇಕಾಗಿದ್ದ ಶಿವಲಿಂಗಪ್ಪನನ್ನು ಸೆರೆಮನೆಗೆ ತಳ್ಳಲಾಯಿತು. ರಾಯಣ್ಣನ ಸಂಗಾತಿಗಳಾದ ರುದ್ರನಾಯಕ, ಎಲ್ಲಾ ನಾಯಕ, ಅಪ್ಪಾಜಿ ಮುಂತಾದ ಆರು ಜನರನ್ನು ಜೀವಾವಧಿ ಶಿಕ್ಷೆ ನೀಡಿ ಸಮುದ್ರದಾಚೆಗೆ ಕಳಿಸಿದರು.

ಸಂಗೊಳ್ಳಿ ರಾಯಣ್ಣನ ಸಮಾಧಿಯ ಮೇಲೆ ಅದೇ ಗ್ರಾಮದ ಚನ್ನಬಸವಣ್ಣ ಅಂದು ನೆಟ್ಟ ಆಲದ ಸಸಿ, ಇಂದಿಗೂ ಕೂಡ ಇದೆ. ಇವತ್ತು ಇದು ಹೆಮ್ಮರವಾಗಿ ಬೆಳೆದು ರಾಷ್ಟ್ರಾಭಿಮಾನದ ಸಂಕೇತವಾಗಿದೆ.

ರಾಯಣ್ಣನ ಜೀವನ ಆಧಾರಿತ ಚಲನಚಿತ್ರ 1967 ರಲ್ಲಿ ಹಾಗೂ ಮತ್ತೆ ಪುನಃ 2002ರಲ್ಲಿ ಹೊರಬಂದಿತ್ತು. ಉತ್ತರ ಕರ್ನಾಟಕದಲ್ಲಿ ಗೀಯ ಗೀಯ ಗಾಗಿಯ ಗೀಯ ಹಾಡಿನ ಮೂಲಕ ರಾಯಣ್ಣನ ಶೌರ್ಯವನ್ನು ಇವತ್ತಿಗೂ ಜನ ಹಾಡಿ ಹೊಗಳುತ್ತಿದ್ದಾರೆ. ಈತನ ಕಂಚಿನ ಆಳೆತ್ತರದ ವಿಗ್ರಹ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಕಾಣಸಿಗುತ್ತದೆ. ಅಷ್ಟೇ ಅಲ್ಲ, ಈ ರೈಲ್ವೆ ನಿಲ್ದಾಣಕ್ಕೆ" ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ " ಎಂದು ಕೂಡ ಹೆಸರಿಡಲಾಗಿದೆ.

ಸ್ವಾತಂತ್ರ್ಯೋತ್ಸವದಂದು ಹುಟ್ಟಿ (ಆಗಸ್ಟ್ 15), ಪ್ರಜಾಪ್ರಭುತ್ವ ದಿನದಂದು (ಜನವರಿ 26) ವೀರಮರಣವನ್ನಪ್ಪಿದ ರಾಯಣ್ಣ, ನಾವೆಲ್ಲ ನೆನಪಿಡಬೇಕಾದ ಭಾರತ ಸ್ವಾತಂತ್ರ್ಯ ಸಂಗ್ರಾಮದ ಒಬ್ಬ ಧೀರ ನಾಯಕ.

ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 17
ಟಿಪ್ಪುವಿನ ಅಂತಿಮ ಹೋರಾಟ:
ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ.

ಫ್ರೆಂಚ್ ಚಕ್ರಾಧಿಪತಿ ನೆಪೋಲಿಯನ್ ಬೋನಾಪಾರ್ಟೆ ಟಿಪ್ಪು ಸುಲ್ತಾನನಿಗೆ ಸಹಾಯ ಮಾಡಲು ಭಾರತಕ್ಕೆ ಬರುವವನಿದ್ದ. ಆತ ಟಿಪ್ಪುವಿಗೆ ಹೀಗೆ ಪತ್ರ ಬರೆಯುತ್ತಾನೆ " ಈಗಾಗಲೇ ನಾನು ಕೆಂಪು ಸಮುದ್ರ ತೀರದವರೆಗೆ ನನ್ನ ಅಸಂಖ್ಯಾತ ಸೈನಿಕರೊಂದಿಗೆ ಬಂದಿದ್ದೇನೆ. ನಿಮ್ಮನ್ನು ಬ್ರಿಟಿಷರ ಕೋಳದಿಂದ ಬಿಡಿಸಲು ಶೀಘ್ರವೇ ಬರಲಿದ್ದೇನೆ".

ಆದರೆ 1798ರ ಅಗಸ್ಟ್ ಮೊದಲ ವಾರದಲ್ಲಿ ನಡೆದ ನೈಲ್ ನದಿತೀರದ ಯುದ್ಧದಲ್ಲಿ ಬ್ರಿಟಿಷ್ ನೌಕಾ ಸೇನೆ ನೆಪೋಲಿಯನ್ ನ ಫ್ರೆಂಚ್ ಸೇನೆಯನ್ನು ಸೋಲಿಸಿತು.

ಟಿಪ್ಪು ಸುಲ್ತಾನನಿಗೆ ಫ್ರೆಂಚರ ಸಹಾಯ ಸಿಗಲಿಲ್ಲ. 1799ರ ಮಾರ್ಚ್ 6ರಂದು ಒಂದು ತುಕಡಿ ಇಂಗ್ಲೀಷ್ ಸೈನ್ಯವು ಟಿಪ್ಪುವಿನ ಸೈನ್ಯವನ್ನು ಈಗಿನ ಪಿರಿಯಾಪಟ್ಟಣದ ಹತ್ತಿರ ಎದುರಿಸಿತು. 2000 ಸೈನಿಕರ ಬ್ರಿಟಿಷ್ ಸೇನೆಯನ್ನು 12000 ಸೈನಿಕರ ಟಿಪ್ಪುಸುಲ್ತಾನನ ಪಡೆಯು ಸುತ್ತುವರಿಯಿತು. ಆದರೆ ಹೆಚ್ಚುವರಿ ಬ್ರಿಟಿಷ್ ಸೇನೆ ಪಶ್ಚಿಮದ ಕಣ್ಣಾನೂರಿನಿಂದ ಬಂತು.

ಮದ್ರಾಸ್ ನಲ್ಲಿ ಜನರಲ್ ಹ್ಯಾರಿಸ್ ಹಾಗೂ ಕರ್ನಲ್ ಆರ್ಥರ್ ವೆಲ್ಲೆಸ್ಲಿ ನೇತೃತ್ವದಲ್ಲಿ ಟಿಪ್ಪುವಿನ ಮೇಲೆ ಆಕ್ರಮಣ ಮಾಡಲು ಸೇನೆ ಜಮಾವಣೆ ಆಯಿತು. ಹೈದರಾಬಾದ್ ನಿಜಾಮನ ಸೇನೆಯು ಕೂಡ ಇದರಲ್ಲಿ ಸೇರಿತ್ತು. 1799ರ ಫೆಬ್ರವರಿಯಲ್ಲಿ ಅಲ್ಲಿಂದ ಈ ಬೃಹತ್ ಗಾತ್ರದ ಸೇನೆಯು ಮೈಸೂರಿನತ್ತ ಸಾಗಿಬಂತು.

ಸೇನೆಯೊಂದಿಗೆ ಅಸಂಖ್ಯಾತ ಆನೆಗಳು, ಒಂಟೆಗಳು, ಸಾಮಾನು ಸಾಗಿಸಲು ಎತ್ತಿನ ಗಾಡಿಗಳು, ಅಧಿಕಾರಿಗಳ ಮಾಂಸಹಾರಿ ಭೋಜನಕ್ಕಾಗಿ ಕುರಿ- ಮೇಕೆಗಳು, ಅಡುಗೆ ಮತ್ತಿತರ ಕೆಲಸಗಾರರು, ಆಹಾರ ಮತ್ತು ಪಾನೀಯಗಳ ಮಾರಾಟಕ್ಕಾಗಿ ಸಂಚಾರಿ ಮಾರುಕಟ್ಟೆಗಳ ದಂಡೇ ಮೈಸೂರಿನತ್ತ ಪಯಣಿಸಿತು. ಸೇನಾದಿಪತಿ ವೆಲ್ಲೆಸ್ಲಿಗಾಗಿ ಆತನ ನೆಚ್ಚಿನ ಊಟದ ಟೇಬಲ್ ಮತ್ತು ಬೆಳ್ಳಿ ತಟ್ಟೆಗಳು ಕೂಡ ಅದರೊಂದಿಗೆ ಬಂದವು. ಸುಮಾರು 18 ಚದರ ಮೈಲಿ ವಿಸ್ತೀರ್ಣದಲ್ಲಿ ಹರಡಿ ಹೋದ ಈ ಬೃಹತ್ ಸೈನ್ಯಕ್ಕೆ ಒಂದು ದಿನದಲ್ಲಿ ಕೇವಲ ಹತ್ತು ಮೈಲುಗಳನ್ನು ಮಾತ್ರ ಕ್ರಮಿಸಲು ಸಾಧ್ಯವಾಗುತ್ತಿತ್ತು. ದಗದಗ ಉರಿಯುವ ಸೆಕೆ ಬೇರೆ.

ಪ್ರಾರಂಭದಲ್ಲಿ ಟಿಪ್ಪುವಿನ ಸೇನೆ ಅಸಂಖ್ಯಾತ ಇಂಗ್ಲಿಷ್ ಸೈನಿಕರನ್ನು ಸೆರೆಹಿಡಿಯಿತು. ಅವರನ್ನು ಜೈಲಿನಲ್ಲಿ ಕೂಡಿಹಾಕಿ ಅವರ ತಲೆಗೆ ಮೊಳೆಯನ್ನು ಹೊಡೆಯಲಾಯಿತು. ಕೆಲವರನ್ನು ನೇಣಿಗೇರಿಸಲಾಯಿತು.

ಅಂದು ಮೇ 4, 1799. ಯಾವುದೋ ಅಪಶಕುನದ ಮುನ್ಸೂಚನೆಯನ್ನು ಅರಿತ ಟಿಪ್ಪು, ಹಿಂದೂ ಬ್ರಾಹ್ಮಣರಿಗೆ ಚಿನ್ನ, ಆನೆ, ಗೋವುಗಳ ದಾನಮಾಡಿದ. ಬ್ರಾಹ್ಮಣರಲ್ಲಿ ತನಗೆ ಶ್ರೇಯಸ್ಸು ಆಗಲಿ ಎಂದು ಪೂಜೆ ಮಾಡುವಂತೆ ಹೇಳಿದ.

ಟಿಪ್ಪು ತನ್ನ ಅರಮನೆಯಲ್ಲಿ ಮಧ್ಯಾಹ್ನದ ಭೋಜನ ಸೇವಿಸುತ್ತಿದ್ದ. ಬ್ರಿಟಿಷ್ ಸೇನೆ ಶ್ರೀರಂಗಪಟ್ಟಣದ ಕೋಟೆಗೆ ಮುತ್ತಿಗೆ ಹಾಕಿದ ಸುದ್ದಿ ಬಂತು. ತನಗಿಷ್ಟವಾದ ಸೇನಾ ಸಮವಸ್ತ್ರ ಹಾಗೂ ಯುದ್ಧ ಪರಿಕರಗಳೊಂದಿಗೆ ಹೋರಾಟಕ್ಕೆ ಸಿದ್ಧನಾದ. ಕಾಣ ಕಾಣುತ್ತಿದ್ದಂತೆ ಬ್ರಿಟಿಷ್ ಸೈನಿಕರು ಶ್ರೀರಂಗಪಟ್ಟಣದ ಕೋಟೆಯನ್ನು ಏರಿ ಅಲ್ಲಿ ಬ್ರಿಟಿಷ್ ಧ್ವಜವನ್ನು ನೆಟ್ಟರು.

ಟಿಪ್ಪು ಬಹಳ ಶೂರತನದಿಂದ ಹೋರಾಡಿದ, ಆದರೆ ತೀವ್ರವಾಗಿ ಗಾಯಗೊಂಡ. ಆತನನ್ನು ಸೈನಿಕರು ಪಲ್ಲಕ್ಕಿಯಲ್ಲಿ ಹೊತ್ತು ರಕ್ಷಿಸಲು ತೆಗೆದುಕೊಂಡು ಹೋಗುತ್ತಿದ್ದರು. ಆಗ ಆತ ಧರಿಸಿದ ವಜ್ರಾಭರಣಗಳಿಗೆ ಮಾರುಹೋಗಿ, ಒಬ್ಬ ಬ್ರಿಟಿಷ್ ಸೈನಿಕ ಬಂದು ಆತನಿಗೆ ಇರಿದು ಸಾಯಿಸಿದ. ಟಿಪ್ಪು ವೀರಮರಣವನ್ನಪ್ಪಿದ.

ಕತ್ತಲೆ ಆದುದರಿಂದ ಹೆಣಗಳ ರಾಶಿಯ ಮಧ್ಯದಲ್ಲಿ ಟಿಪ್ಪುವಿನ ಹೆಣ ಕೂಡ ಸೇರಿಹೋಯಿತು. ಬ್ರಿಟಿಷ್ ಸೈನಿಕರು ಅದನ್ನು ಹುಡುಕಿ ಹೊರತೆಗೆದು, ಸರಕಾರಿ ಮರ್ಯಾದೆಗಳೊಂದಿಗೆ ದಫನ ಮಾಡಿದರು. ಮೈಸೂರಿನ ಹುಲಿ ಎಂದೇ ನಾಮಧೇಯವನ್ನು ಪಡೆದ ಟಿಪ್ಪುಸುಲ್ತಾನ ಇತಿಹಾಸ ಸೇರಿದ.

ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 18
ವಿವಾದಾತ್ಮಕ ವ್ಯಕ್ತಿ ಟಿಪ್ಪುಸುಲ್ತಾನ್:

ಮೂರನೇ ಮೈಸೂರು ಆಂಗ್ಲೋ ಯುದ್ಧದಲ್ಲಿ ಟಿಪ್ಪು ತನ್ನ ಇಬ್ಬರು ಮಕ್ಕಳಾದ 13 ವರ್ಷ ಪ್ರಾಯದ ಫತೆ ಅಲಿ ಹಾಗೂ 11 ವರ್ಷ ಪ್ರಾಯದ ಅಬ್ದುಲ್ ಖಾಲಿಕ್ ನನ್ನು ಬ್ರಿಟಿಷರಿಗೆ ಒತ್ತೆಯಾಗಿ ಒಪ್ಪಿಸುತ್ತಾನೆ. ಈ ಮಕ್ಕಳು ಬ್ರಿಟಿಷರ ಅಧೀನದಲ್ಲಿ ಎರಡು ವರ್ಷ ಇರುತ್ತಾರೆ. ಶ್ರೀರಂಗಪಟ್ಟಣದ ಒಪ್ಪಂದದ ಎಲ್ಲಾ ಶರತ್ತುಗಳನ್ನು ಟಿಪ್ಪು ಪಾಲಿಸಿದ ನಂತರ ಇವರನ್ನು ಬಿಡುಗಡೆಗೊಳಿಸುತ್ತಾರೆ. ಬಹಳ ತುಂಟತನದಿಂದ ಇರುವ ಈ ಮಕ್ಕಳನ್ನು ಸಾಕುವುದು ಬಹಳ ಕಷ್ಟವಾಯಿತು ಎಂದು ಲಾರ್ಡ್ ವೆಲ್ಲೆಸ್ಲಿ ಒಂದು ಕಡೆ ಹೇಳುತ್ತಾನೆ. ಇವರ ರಾಜ ಭೋಗಕ್ಕಾಗಿ ಪ್ರತಿ ಮಕ್ಕಳಿಗೆ ವರ್ಷಕ್ಕೆ ಐವತ್ತು ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿತ್ತು.

ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಮಡಿದ ನಂತರ ಆತನ ಎಲ್ಲಾ 13 ಗಂಡುಮಕ್ಕಳನ್ನು, ಅನೇಕ ಹೆಣ್ಣುಮಕ್ಕಳನ್ನು, ಇಡೀ ಪರಿವಾರವನ್ನು, ಅಧಿಕಾರಿಗಳನ್ನು ಹಾಗೂ ಆಳುಗಳನ್ನು ಸೇರಿ ಸುಮಾರು 3000 ಜನರನ್ನು ಬ್ರಿಟಿಷರು ವೆಲ್ಲೂರಿಗೆ ಸಾಗಿಸುತ್ತಾರೆ. ಅಲ್ಲಿ ವೆಲ್ಲೂರಿನ ಕೋಟೆಯಲ್ಲಿ ಅವರನ್ನು ಇಟ್ಟು ಅವರಿಗೆ ಉತ್ತಮ ವೇತನವನ್ನು ಹಾಗೂ ಭತ್ತೆಯನ್ನು ನೀಡುತ್ತಾರೆ.

1806 ರಲ್ಲಿ ನಡೆದ ವೆಲ್ಲೂರಿನ ದಂಗೆಯಲ್ಲಿ ಟಿಪ್ಪುವಿನ ಮಕ್ಕಳ ಪಾತ್ರವನ್ನು ಅರಿತ ಬ್ರಿಟಿಷರು ಅಲ್ಲಿಂದ ಪುನಃ ಅವರನ್ನು ಕಲ್ಕತ್ತಕ್ಕೆ ಗಡಿಪಾರು ಮಾಡುತ್ತಾರೆ. ಈಗಲೂ ಕಲ್ಕತ್ತಾದಲ್ಲಿ ಟಿಪ್ಪುವಿನ ತಲೆಮಾರಿನವರು ಇದ್ದಾರೆ.

ಟಿಪ್ಪು ಒಬ್ಬ ಉತ್ತಮ ಆಡಳಿತಗಾರನಾಗಿದ್ದ ಎಂದು ಕೆಲವು ಇತಿಹಾಸಕಾರರು ಆತನ ಬಗ್ಗೆ ಬರೆಯುತ್ತಾರೆ.

ಟಿಪ್ಪುವಿನ ಆಡಳಿತ ಅವಧಿಯಲ್ಲಿ ಮೈಸೂರು ಪ್ರಾಂತ್ಯವು ಆರ್ಥಿಕ ಉನ್ನತಿಯನ್ನು ಕಂಡಿತು. ಕೃಷಿ, ರೇಷ್ಮೆ, ಸಕ್ಕರೆ, ಗಂಧ ಮತ್ತಿತರ ಉದ್ಯಮಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದವು. ಜನರ ತಲಾ ಆದಾಯವು ಆ ಕಾಲದಲ್ಲಿ ಅಲ್ಲಿಯವರೆಗೆ ಮೊದಲ ಸ್ಥಾನದಲ್ಲಿದ್ದ ಬಂಗಾಳ ಸಭಾದ ಜನರ ತಲಾ ಆದಾಯವನ್ನು ಮೀರಿಸಿತು.

ಟಿಪ್ಪು ಸುಮಾರು 150ಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಿಗೆ ದೇಣಿಗೆಯನ್ನು ನೀಡಿದ್ದ. ಅನೇಕ ಹಿಂದೂ ಅಧಿಕಾರಿಗಳನ್ನು ತನ್ನ ಆಡಳಿತದಲ್ಲಿ ಸೇರಿಸಿಕೊಂಡಿದ್ದ.

ಟಿಪ್ಪುವು ಶೃಂಗೇರಿಯ ಶಂಕರಾಚಾರ್ಯ ಮಠದ ಬಗ್ಗೆ ಒಲವು ಹೊಂದಿದ್ದ. 1791 ರಲ್ಲಿ ಮರಾಠ - ಮೈಸೂರು ಯುದ್ಧ ಸಂಭವಿಸಿದಾಗ, ಮರಾಠರು ಶೃಂಗೇರಿ ಶಂಕರಾಚಾರ್ಯ ಮಠದ ಮೇಲೆ ಆಕ್ರಮಣ ಮಾಡಿದರು. ಟಿಪ್ಪು ಈ ಮಠಕ್ಕೆ ಸಾಕಷ್ಟು ಹಣ ಸಹಾಯ ಹಾಗೂ ಜಮೀನನ್ನು ದಾನ ಮಾಡಿ ಮಠವನ್ನು ಪುನರ್ಜೀರ್ಣಗೊಳಿಸಿದ. ಆ ಸಮಯದಲ್ಲಿ ಮಠಾಧಿಪತಿ ಹಾಗೂ ಟಿಪ್ಪುವಿನ ಆಸ್ಥಾನದ ನಡುವೆ ನಡೆದ ಅನೇಕ ಪತ್ರವ್ಯವಹಾರಗಳು ಇವತ್ತು ಕೂಡ ವಸ್ತುಸಂಗ್ರಹಾಲಯದಲ್ಲಿ ಲಭ್ಯವಿವೆ.

ಆದರೆ ಟಿಪ್ಪುವಿಗೆ ಇನ್ನೊಂದು ಕ್ರೌರ್ಯದ ಮುಖ ಕೂಡ ಇದೆ ಎಂದು ಅನೇಕ ಬ್ರಿಟಿಷ್ ಹಾಗೂ ಭಾರತದ ಇತಿಹಾಸಕಾರರು ವ್ಯಾಪಕವಾಗಿ ಉಲ್ಲೇಖಿಸಿದ್ದಾರೆ. ಇಷ್ಟೇ ಅಲ್ಲ, ಸ್ವತಃ ಆತನೇ ಇತರರಿಗೆ ಬರೆದ ಪತ್ರವೇ ಇದನ್ನು ಸಾರಿ ಹೇಳುತ್ತಿದೆ.

ಲೇಖನ ಮಾಲಿಕೆ ಮುಂದುವರಿಯಲಿದೆ..

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕುಕೇಂದ್ರದ ಹೃದಯಭಾಗದಲ್ಲಿರುವ ಚಿನ್ಮಯಿ ಆಸ್ಪತ್ರೆಯ ವೈಧ್ಯಕೀಯ ನಿರ್ದೇಶಕರಾದ ಲೇಖಕರು (ಡಾ. ಉಮೇಶ್ ಪುತ್ರನ್) ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ವಿಧ್ಯಾಭ್ಯಾಸವನ್ನು ಗಂಗೊಳ್ಳಿಯಲ್ಲಿ ಪೂರೈಸಿ ವೈದ್ಯಕೀಯ ಶಿಕ್ಷಣವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಪೂರೈಸಿರುತ್ತಾರೆ. ಸಾಹಿತ್ಯಾಸಕ್ತರಾದ ಇವರು ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

Advertisement
Advertisement
Recent Posts
Advertisement