ಇತ್ತೀಚೆಗೆ ನಡೆದ ಐಟಿ ದಾಳಿಯಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಮತ್ತು ರಿಯಲ್ ಎಸ್ಟೇಟ್ ಉಧ್ಯಮಿಯೊಬ್ಬರ ಮನೆ ಕಛೇರಿಗಳಲ್ಲಿ ದೊರೆತಿರುವ ಸುಮಾರು ರೂ. 82 ಕೋಟಿ, ಕಾಂಗ್ರೆಸ್ ಸಂಗ್ರಹಿಸಿದ ಕಮಿಷನ್ ದಂದೆಯ ಹಣವೆಂದು ಆರೋಪಿಸಿ ಬಿಜೆಪಿ ಅಪಪ್ರಚಾರದಲ್ಲಿ ತೊಡಗಿ ಪ್ರತಿಭಟನೆ ಮಾಡುತ್ತಿರುವುದು ಅದು ಓಲೈಸಿಕೊಂಡು ಬಂದ ಭ್ರಷ್ಟ ರಾಜಕೀಯ ಸಂಸ್ಕೃತಿಗೆ ಸಾಕ್ಷಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ತಾನು ನಡೆಸಿದ್ದ ಲೂಟಿ ಕಮಿಷನ್ ದಂಧೆಯ ದುರಂತ ಆಡಳಿತಕ್ಕಾಗಿ ಜನರಿಂದ ಛೀಮಾರಿ ಹಾಕಿಸಿಕೊಂಡು ಕಳೆದ ಚುನಾವಣೆಯಲ್ಲಿ ದಯನೀಯ ಸೋಲನ್ನು ಕಂಡ ಬಿಜೆಪಿಯು ಕಾಂಗ್ರೆಸ್ ಪಕ್ಷದ ಮೇಲೆ ಕಮಿಷನ್ ದಂಧೆಯ ಆರೋಪ ಹೊರಿಸುವ ಮೊದಲು ತನ್ನ ಆಡಳಿತಾವದಿಯಲ್ಲಿ ನಡೆದ ಭ್ರಷ್ಟಾಚಾರದ ಬೆಟ್ಟವನ್ನೊಮ್ಮೆ ಅಗೆದು ನೋಡಲಿ. ಪಿಎಸ್ಐ ನೇಮಕಾತಿ ಲಂಚ ಪ್ರಕರಣ, ಟೆಂಡರ್ ಹಗರಣ, 40 ಪರ್ಸೆಂಟ್ ಕಮಿಷನ್ ದಂಧೆ, ಕೋವಿಡ್ ಕಾಲದ ಬೆಡ್ ಬುಕ್ಕಿಂಗ್, ಔಷದಿ ಖರೀದಿ, ವೆಂಟಿಲೇಟರ್ ಹಗರಣ, ಕೋವಿಡ್ ಪರಿಹಾರ ನಿಧಿ, ಪಿಎಮ್ ಕೇರ್ಸನಲ್ಲಿ ಸುಳ್ಳು ಲೆಕ್ಕ, ವಿಶೇಷ ಅನುಧಾನಗಳ ದುರ್ಬಳಕೆಯೇ ಮೊದಲಾದ ಸಾವಿರಾರು ಕೋಟಿ ಸುಲಿಗೆಯ ಬಗ್ಗೆ ಅವರದ್ದೇ ಜನರು ಬಹಿರಂಗವಾಗಿ ಪ್ರತಿರೋಧಿಸಿರುವುದನ್ನು ಈ ನಾಡಿನ ಜನ ಮರೆತಿಲ್ಲ.
ಸಚಿವರೊಬ್ಬರ ರಾಜೀನಾಮೆಗೆ ಕಾರಣವಾದ 'ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ' ಆಳುವ ಸರಕಾರದ 40ಪರ್ಸೆಂಟ್ ಕಮಿಷನ್ ದಂಧೆಗೆ ಸಾಕ್ಷಿಯಾದರೆ, ಚುನಾವಣಾ ಪೂರ್ವ ಟೆಂಡರ್ ಪ್ರಕ್ರಿಯೆಯಡಿ 18,000 ಕೋಟಿ ರೂ. ಬಿಲ್ ಮಾಡಿ ಇಲೆಕ್ಷನ್ ಫಂಡ್ ರೈಸ್ ಮಾಡಿರುವ ಬಗ್ಗೆ ಅವರದ್ದೇ ಪಕ್ಷದ ಶಾಸಕರ ಬಹಿರಂಗ ಹೇಳಿಕೆ ಟೆಂಡರ್ ಹಗರಣದ ಸತ್ಯವನ್ನು ಜನರ ಮುಂದಿಟ್ಟ ನತ್ತು. ಪಿಎಸ್ಐ ಲಂಚ ಪ್ರಕರಣದಲ್ಲಿ ಪರೀಕ್ಷಾರ್ಥಿಗಳಿಂದ 40 ರಿಂದ 80ಲಕ್ಷ ರೂ. ಲಂಚ ನೀಡಿಕೆಯ ಬಗ್ಗೆ ಆಪಾದಿತನೇ ಬಾಯಿ ಬಿಟ್ಟಿರುವ ಮೂಲಕ ಈ ಹಗರಣದ ವಿರಾಟ್ ಸ್ವರೂಪ ಬಟಾಬಯಲಾಗಿತ್ತು. ಇವಷ್ಟೇ ಅಲ್ಲದೆ ಇನ್ನೂ ಬಹಳಷ್ಟು ಹಗರಣಗಳಲ್ಲಿ ಪಕ್ಷದ ಸಚಿವರು ಶಾಸಕರು ಭಾಗಿಯಾಗಿರುವುದು ಗುಟ್ಟಾಗಿ ಉಳಿದಿಲ್ಲ. ಈ ನೆಲೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ನಾಯಕರನ್ನಾಗಲಿ ಕಾಂಗ್ರೆಸ್ ಪಕ್ಷವನ್ನಾಗಲಿ ಟೀಕಿಸುವ ನೈತಿಕತೆಯಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಕಳೆದ ವಿಧಾನ ಸಭಾ ಚುನಾವಣಾ ಪೂರ್ವ ಮತ ಧ್ರುವೀಕರಣದ ಗುರಿಯೊಂದಿಗೆ ಜಾತಿ- ಮತ- ಧರ್ಮದ ರಂಗ ತಾಲೀಮು ನಡೆಸಿಯೂ ಸೋತು ಧೃತಿಗೆಟ್ಟ ಬಿಜೆಪಿ ಇದೀಗ ಮತ್ತೆ ಮುಂಬರುವ ಲೋಕಾಸಭಾ ಚುನಾವಣೆಯನ್ನು ಗುರಿಯಾಗಿಸಿ ಕಾಂಗ್ರೆಸ್ ಆಡಳಿತದ ಮೇಲೆ ಮಿಥ್ಯಾರೋಪದ ರಾಜಕೀಯ ತಾಲೀಮು ನಡೆಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.