Advertisement

ನೇರ ಬೆಳೆದು ನಿಂತದ್ದನ್ನು ಮೊದಲು ಕತ್ತರಿಸುವ ತವಕ! (ರಾಜಾರಾಂ ತಲ್ಲೂರು ಅವರ ಲೇಖನ)

Advertisement

ಸಣ್ಣ ಉಬ್ಬಾಳ್ತನದ ಹೊರತಾಗಿಯೂ ಈ 17ನೇ ಲೋಕಸಭೆಯಲ್ಲಿ ದೇಶದ ಗಮನ ಸೆಳೆದ ಒಂದು ಧ್ವನಿ ಇದ್ದರೆ ಅದು ಮೊಹುವಾ ಮೊಯಿತ್ರಾ ಅವರದು. ಡಿಜಿಟಲ್ ಯುಗದ ಮೊದಲ “ನೈಜ” ಜನಪ್ರತಿನಿಧಿ ಅವರು. ಅವರನ್ನೀಗ ಹಠತೊಟ್ಟು ಒಂದು ವಿವಾದದಲ್ಲಿ ಸಿಲುಕಿಸಿ, ಚುನಾವಣೆಗೆ ಮುನ್ನ ಸಾಧ್ಯವಾದಷ್ಟೂ ಅವರ ಹೊಳಪನ್ನು ತಗ್ಗಿಸುವುದಕ್ಕೆ ಅಗತ್ಯಕ್ಕಿಂತ ಹೆಚ್ಚು ಶ್ರಮ ಹಾಕಲು “ವ್ಯವಸ್ಥೆ” ಹೊರಟಂತಿದೆ.

ನಾನು “ವ್ಯವಸ್ಥೆ” ಎಂದು ಯಾಕೆ ಹೇಳಿದೆ ಎಂದರೆ, ಮೊಹುವಾ ಪ್ರತಿನಿಧಿಸುವ ತೃಣಮೂಲ ಕಾಂಗ್ರೆಸ್‌ನ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರಿಗಾಗಲೀ, ಮತ್ತವರ ಉತ್ತರಾಧಿಕಾರಿ ಎಂದೇ ಗುರುತಾಗಿರುವ ಸಂಬಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಗಾಗಲೀ ಈ ಪ್ರಕರಣದಲ್ಲಿ ಕೃಷ್ಣಾನಗರ ಕ್ಷೇತ್ರವನ್ನು ಪ್ರತಿನಿಧಿಸುವ ತಮ್ಮ ಸಂಸದೆ ಮೊಹುವಾ ಅವರ ಪರವಾಗಿ ನಿಲ್ಲುವ ಆಸಕ್ತಿ ಇದ್ದಂತಿಲ್ಲ. ಅವರು ಈ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ “ನೊ ಕಮೆಂಟ್ಸ್” ಎಂದಿದ್ದಾರೆ. ಮೊಹುವಾ ಸಂಸತ್ತಿನ ಒಳಗೆ ಮತ್ತು ಹೊರಗೆ ತನ್ನ ಸ್ವಂತ ಚರಿಷ್ಮಾ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವುದು ಅವರಿಗೆ ಜೀರ್ಣ ಆದಂತಿಲ್ಲ.

ಮೊಹುವಾ ಮೇಲಿರುವ ಆಪಾದನೆ, ಆಕೆ ದುಡ್ಡಿಗಾಗಿ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದು. ಆಕೆ ದುಡ್ಡಿಗಾಗಿ ಯಾವ ಪ್ರಶ್ನೆಗಳನ್ನು ಕೇಳಿದರು, ಅದರ ಪರಿಣಾಮ ಏನಾಯಿತು ಎಂಬುದು ಆಪಾದನೆ ಮಾಡಿದವರಿಗೆ ಅಗತ್ಯ ಇದ್ದಂತಿಲ್ಲ. ಅವರ ನೆರೇಟಿವ್ ಬಹಳ ಸ್ಪಷ್ಟ. ಅದಾನಿ ಬಳಗ ಮತ್ತು ಪ್ರಧಾನಿಯವರ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತಲು ಮೊಹುವಾ ದುಡ್ಡು ಪಡೆದಿದ್ದಾರೆ ಎಂಬುದು. ಈ ಆಪಾದನೆ ಹೇಗೆ ಒಂದು ಕಥನವಾಗಿ ಚುನಾವಣೆಯ ವೇಳೆ ಹೊರಹೊಮ್ಮಬೇಕು ಎಂಬ ಬಗ್ಗೆ ಈಗಾಗಲೇ ಒಂದು “ಸ್ಕ್ರಿಪ್ಟ್” ಸಿದ್ಧವಾದಂತಿದೆ. ಅದರನ್ವಯ, ದೂರು ಬಂದ ತಕ್ಷಣ ಆ ದೂರನ್ನು ಸ್ಪೀಕರ್ ಸಾಹೇಬರು ಸದನದ ನೈತಿಕತೆ ಸಮಿತಿಗೆ ಒಪ್ಪಿಸಿದ್ದಾರೆ.

ತಮಾಷೆ ಎಂದರೆ, ಈ ಸ್ಕ್ರಿಪ್ಟಿನ ಪೊಳ್ಳುತನ ಹೊರಬೀಳತೊಡಗಿದ್ದು ಇಲ್ಲಿಂದ. ಸಂಸದ ನಿಷಿಕಾಂತ್ ದುಬೆ (ಸಂಸತ್ತಿಗೆ ಸಲ್ಲಿಸಿದ ದೂರು) ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ (ಸಿಬಿಐಗೆ ಸಲ್ಲಿಸಿದ ದೂರು) ಅವರ ದೂರಿನಲ್ಲಿ ಇದ್ದುದು, ಮೊಹುವಾ ಪ್ರಶ್ನೆಗಳನ್ನು ಕೇಳುವುದಕ್ಕಾಗಿ ಹೀರಾನಂದಾನಿ ಬಳಗದಿಂದ ದುಡ್ಡು ಪಡೆದಿದ್ದಾರೆ ಮತ್ತು ತಮ್ಮ ಲೋಕಸಭೆಯ ಸೈಟಿನ ಲಾಗಿನ್ ವಿವರಗಳನ್ನು ಅವರ ಜೊತೆ ಹಂಚಿಕೊಂಡಿದ್ದಾರೆ ಎಂಬ ಆಪಾದನೆ. ನೈತಿಕತೆ ಸಮಿತಿಗೆ ಏಕಾಏಕಿ “ಮಾಫಿಸಾಕ್ಷಿ” ಆಗಿ ಸ್ವತಃ ಹೀರಾನಂದಾನಿ ಬಳಗದ ಮುಖ್ಯಸ್ಥ ದರ್ಶನ್ ಹೀರಾನಂದಾನಿ ಒಂದು ಅಫಿದಾವಿತ್ ಸಲ್ಲಿಸಿ, ಮೊಹುವಾ ವಿರುದ್ಧ ದೂರನ್ನು ಸಮರ್ಥಿಸುತ್ತಾರೆ. ಲಾಜಿಕಲಿ, ಇಲ್ಲಿಗೆ ಮೊಹುವಾ ಅವರ ತಪ್ಪು ಸಾಬೀತಾಗಿ, ಎಲ್ಲ ದಾರಿಗಳೂ ಮುಚ್ಚಿಕೊಳ್ಳಬೇಕಿತ್ತು. ತಮಾಷೆ ಎಂದರೆ, ಇಲ್ಲಿಂದ ಅವರ ಎಲ್ಲ ಹಾದಿಗಳು ತೆರೆದುಕೊಳ್ಳತೊಡಗಿವೆ!

ಮೊದಲನೆಯದಾಗಿ, ಸಂಸತ್ತಿನ ನೈತಿಕತೆ ಸಮಿತಿಯ ನಿಯಮಗಳ ಪ್ರಕಾರ (ನಿಯಮ 275) ಅಲ್ಲಿನ ಯಾವುದೇ ಕಲಾಪ ಹೊರಗೆ ಸೋರಿಕೆ ಆಗುವಂತಿಲ್ಲ. ಆದರೆ, ಹೀರಾನಂದಾನಿ ಅವರ ಅಫಿದಾವಿತ್ ಸಮಿತಿಗೆ ತಲುಪುವ ಮೊದಲೇ ನೇರವಾಗಿ ಮಾಧ್ಯಮಗಳಿಗೆ ಸೋರಿಕೆ ಆಗುತ್ತದೆ! ಸಮಿತಿಯ ಅಧ್ಯಕ್ಷ ಸಂಸದ ವಿನೋದ್ ಕುಮಾರ್ ಸೋನ್‌ಕರ್ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಾರೆ!!

ಎರಡನೆಯದಾಗಿ ಸಂಸತ್ತಿನ ವೆಬ್‌ಸೈಟಿಗೆ ಲಾಗಿನ್ ಆಗಿ ಪ್ರಶ್ನೆ ಕೇಳುವ ಹಕ್ಕು ಸಂಸದರಿಗೆ ಇರುವುದು ಹೌದಾದರೂ ಅಲ್ಲಿ ಲಾಗಿನ್ ಮಾಡಬೇಕಾದ್ದು ಅವರು ಮಾತ್ರ ಅಥವಾ ಆ ಲಾಗಿನ್-ಪಾಸ್‌ವರ್ಡ್ ಇನ್ನೊಬ್ಬರಿಗೆ ಹಸ್ತಾಂತರಿಸುವಂತಿಲ್ಲ ಎಂಬ ಖಡಕ್ ನಿಯಮವೇನೂ ಇದ್ದಂತಿಲ್ಲ. ಯಾಕೆಂದರೆ ಸಂಸತ್ತಿನಲ್ಲಾಗಲೀ ವಿಧಾನಮಂಡಲದಲ್ಲಾಗಲೀ ಆ ಕೆಲಸ ಮಾಡುವುದು ಸಾಮಾನ್ಯವಾಗಿ ಸಂಸದರ/ಶಾಸಕರ ಸಿಬ್ಬಂದಿಗಳೇ. ಇದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ.

ಮೂರನೆಯದಾಗಿ, ಸಂಸದರ ಪ್ರಶ್ನೆಗಳೇನೂ ಮ್ಯಾಜಿಕ್ ಆಗಿ ಮೂಡುವಂತಹವಲ್ಲ. ಅವರು ಜನಪ್ರತಿನಿಧಿಗಳು. ಜನರ (ಅದರಲ್ಲಿ ವ್ಯವಹಾರಸ್ಥರೂ ಸೇರಿರುತ್ತಾರೆ!) ಪ್ರಶ್ನೆಗಳನ್ನೇ, ಜನರಿಂದ ಮಾಹಿತಿ ಪಡೆದು, ಜನರಿಗಾಗಿ ಕೇಳಬೇಕಾದುದು ಸಂಸದರ ಧರ್ಮ. ಮೊಹುವಾ ಪಾಲಿಸಿದ್ದು ಅದನ್ನೇ. ಒಂದು ವೇಳೆ ಆಕೆ ಏನಾದರೂ ಲಾಭವನ್ನು ಆ ಪ್ರಶ್ನೆಗಾಗಿ ಪಡೆದಿದ್ದರೆ, ಅದನ್ನು ಇಂತಹ ಪ್ರಶ್ನೆಗೆಂದೇ ಇಂತಹ ಲಾಭ ಮಾಡಿಕೊಡಲಾಗಿದೆ ಎಂದು ಸಾಬೀತುಪಡಿಸುವುದು ಕೂಡ (ಸ್ವತಃ ಕೊಟ್ಟವರಿಗೂ) ಕಷ್ಟವಿದೆ. ಹಾಗಾಗಿ ಇಡಿಯ ಗೊಂದಲದ ಏಕೈಕ ಉದ್ದೇಶ - ಮೊಹುವಾ ಅವರ ನೇರ ವ್ಯಕ್ತಿತ್ವದ ಮೇಲೆ ಕೆಸರೆರಚುವ ಮೂಲಕ ಮುಂದಿನ ಚುನಾವಣೆಗಳ ವೇಳೆ ಆಕೆಯ ಮೊನಚು ಮಾತುಗಳನ್ನು ಮೊಂಡುಗೊಳಿಸುವುದು.

ಸ್ವತಃ ಆಕೆಯ ಪಕ್ಷದವರಿಗೂ, ಮೊಹುವಾ ಸ್ವಲ್ಪ ಮಂದವಾದರೆ ತಮಗೆ ಅನುಕೂಲ ಅನ್ನಿಸಿರುವುದರಿಂದ ಅವರು ಕಾದು ನೋಡುವ ಆಟ ಆಡುತ್ತಿದ್ದಾರೆ.

ಒಂದಂತೂ ಸ್ಪಷ್ಟ. ಇಲ್ಲಿಯ ತನಕದ ಮೊಹುವಾ ಹೋರಾಟವನ್ನು ಗಮನಿಸಿದರೆ, ಆಕೆ ಏಕಾಂಗಿಯಾಗಿ ಈ ಸವಾಲನ್ನು ಎದುರಿಸಿ ಗೆಲ್ಲುವುದಕ್ಕೆ ಸಮರ್ಥೆ. ಇಂದು ಆಕೆ ತನ್ನ X ಹ್ಯಾಂಡಲ್ ಮೂಲಕ ಸಂಬಂಧಪಟ್ಟವರೆಲ್ಲರ ವಿರುದ್ಧ ಸಮರ್ಥವಾಗಿ ಡಿಜಿಟಲ್ ಪ್ರತಿದಾಳಿ ಆರಂಭಿಸಿದ್ದಾರೆ. ಈ ಪ್ರಕರಣದಿಂದ ಆಕೆ ಕ್ಷೇಮವಾಗಿ ಹೊರಬಂದರೆ, ದೇಶಕ್ಕೆ ಅದರಿಂದ ಒಳಿತಿದೆ.


(ಲೇಖಕ ರಾಜಾರಾಂ ತಲ್ಲೂರು)

ಜನಪರ ಲೇಖಕರು, ಹಿರಿಯ ಪತ್ರಕರ್ತರು ಹಾಗೂ ಪ್ರಗತಿಪರ ಚಿಂತಕರಾಗಿರುವ 'ರಾಜಾರಾಂ ತಲ್ಲೂರು' ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ
ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ರಾಜಾರಾಂ ಅವರು ಸುರತ್ಕಲ್ಲಿನಲ್ಲಿ ಮಾಧ್ಯಮಿಕ ಮತ್ತು ಪದವಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ 'ಮೊತ್ತ ಮೊದಲಿಗೆ ಮುಂಗಾರು ಪತ್ರಿಕೆಯಲ್ಲಿ ತದನಂತರದಲ್ಲಿ ಕರಾವಳಿ ಅಲೆ, ಕೆನರಾಟೈಮ್ಸ್, ಜನಾಂತರಂಗ ಬಳಗ ಹಾಗೂ ಉದಯವಾಣಿ ಬಳಗ' ದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ನುಣ್ಣನ್ನ ಬೆಟ್ಟ,ಕರಿಡಬ್ಬಿ ಅವರ ಕೆಲವು ಜನಪ್ರಿಯ ಕೃತಿಗಳಾಗಿವೆ. ಅಲ್ಲದೇ ಅವರು ದೇಶದ ಖ್ಯಾತ ಆರ್ಥಿಕ ಚಿಂತಕ ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ಅವರ 'Back stage' ಪುಸ್ತಕವನ್ನು ಕನ್ನಡಕ್ಕೆ ('M ಡಾಕ್ಯುಮೆಂಟ್') ಅನುವಾದಿಸಿದ್ದಾರೆ.

Advertisement
Advertisement
Recent Posts
Advertisement