Advertisement

ಆಂಗ್ಲೋ ಮರಾಠ ಯುದ್ಧ: ಡಾ. ಉಮೇಶ್ ಪುತ್ರನ್ ರವರ ಲೇಖನ ಮಾಲಿಕೆ!

Advertisement

ಬರಹ: ಡಾ. ಉಮೇಶ್ ಪುತ್ರನ್ ಎಂ. ಡಿ.
ಚಿನ್ಮಯಿ ಆಸ್ಪತ್ರೆ, ಕುಂದಾಪುರ.
(“ಸ್ವಾತಂತ್ರ್ಯದ ಆ ಕ್ಷಣಗಳು” ಪುಸ್ತಕದಿಂದ)

ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 19
ಟಿಪ್ಪುವನ್ನು ನೀವೇ ಅಳೆಯಿರಿ

ಟಿಪ್ಪು ಕೆಲವು ಒಳ್ಳೆಯ ಕೆಲಸವನ್ನು ಮಾಡಿದ್ದರೂ ಕೂಡ, ಟಿಪ್ಪುವಿನ ಕ್ರೌರ್ಯವನ್ನು ಇತಿಹಾಸ ಪುಟಗಳು ಸಾರಿ ಸಾರಿ ಹೇಳುತ್ತಿವೆ.

ಇತಿಹಾಸದ ದಾಖಲೆಗಳ ಪ್ರಕಾರ ಕೊಟ್ಟಾಯಂ ನಿಂದ ಪಾಲ್ಗಾಟ್ ತನಕ ಇರುವ ಎಲ್ಲಾ ನಾಯರ್ ಜನಾಂಗವನ್ನು ಮುಗಿಸುವ ಸಂಚನ್ನು ಟಿಪ್ಪು ಮಾಡಿದ ಎನ್ನುವ ಆಪಾದನೆ ಇದೆ. ಟಿಪ್ಪು ಸುಮಾರು 30000 ನಾಯರ್ ಜನಾಂಗದವರನ್ನು ಶ್ರೀರಂಗಪಟ್ಟಣದಲ್ಲಿ ಬಂದಿಯಾಗಿರಿಸಿದ್ದ. ನಾಲ್ಕನೇಯ ಆಂಗ್ಲೋ-ಮೈಸೂರು ಯುದ್ಧದಲ್ಲಿ. ಟಿಪ್ಪು ಸೋತ ಮೇಲೆ, ಉಳಿದಕೆಲವೇ ಕೆಲವು ನೂರಾರು ನಾಯರ್ ಸೆರೆಯಾಳುಗಳು ಬಿಡುಗಡೆಗೊಂಡರು. ಉಳಿದವರು ಹಿಂಸೆಯಿಂದ ಸತ್ತರು.

1785 ರಲ್ಲಿ ಟಿಪ್ಪುವು ಬೇಕಲ್ ನ ಗವರ್ನರ್ ಗೆ ಪತ್ರ ಬರೆಯುತ್ತಾ "ನೀವು ನೂರಾರು ನಾಯರ್ ಗಳನ್ನು ಸೆರೆಯಲ್ಲಿ ಇಟ್ಟಿದ್ದು ಕೇಳಿ ಸಂತೋಷವಾಯಿತು. ಹಾಗೆಯೇ ಅವರಲ್ಲಿ ಅನೇಕರಿಗೆ ಮುಂಜಿ ಮಾಡಿಸಿ ಅಲ್ಲಾನ ಕೃಪೆಗೆ ಪಾತ್ರರಾಗಿದ್ದೀರಿ" ಎನ್ನುತ್ತಾನೆ.

1785 ರಲ್ಲಿ ಟಿಪ್ಪುವು ಕೂರ್ಗ್ ಮೇಲೆ ಆಕ್ರಮಣ ಮಾಡಿ, ಅಲ್ಲಿಯ ಕೊಡವರನ್ನು ಕೊಚ್ಚಿ ಕೊಚ್ಚಿ ಕೊಂದ. ಅಲ್ಲಿಯ ರಾಜಧಾನಿ ಮರ್ಕೆರ ವನ್ನು ಝಫರಾಬಾದ್ ಎಂದು ಮರುನಾಮಕರಣ ಮಾಡಿದ. ಸುಮಾರು 85 ಸಾವಿರ ಕೊಡವರನ್ನು ಶ್ರೀರಂಗಪಟ್ಟಣಕ್ಕೆ ಸಾಗಿಸಿ ಬಂಧಿಯಾಗಿಸಿದ. ಬಂದಿಯಾಗಿಸಿದ ಎಲ್ಲಾ ಯುವಕರಿಗೆ ಬಲವಂತದ ಮುಂಜಿ ಮಾಡಿಸಿದ, ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ ಎನ್ನುವ ಅಂಶ ದಾಖಲಾಗಿದೆ.

1784ರಲ್ಲಿ ಟಿಪ್ಪುವು ಮಂಗಳೂರನ್ನು ಸ್ವಾಧೀನಪಡಿಸಿಕೊಂಡ ನಂತರ ಅಲ್ಲಿಯ ಸುಮಾರು 80000 ಕ್ರಿಶ್ಚಿಯನ್ನರನ್ನು ಸೆರೆಹಿಡಿದ. ಮಂಗಳೂರಿನ ಅನೇಕ ಚರ್ಚುಗಳನ್ನು ಧ್ವಂಸಗೊಳಿಸಿದ. ಅವರನ್ನೆಲ್ಲ ಮಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಬಲವಂತವಾಗಿ ಸಾಗಿಸಿದ. ಸುಮಾರು 20 ಸಾವಿರ ಜನರು ದಾರಿಯಲ್ಲೇ ಸತ್ತು ಹೋದರೆ, ಉಳಿದವರು ಟಿಪ್ಪುವಿನ ಸೆರೆಯಾಳಾಗಿ ಹದಿನೈದು ವರ್ಷಗಳ ಕಾಲವನ್ನು ಶ್ರೀರಂಗಪಟ್ಟಣದಲ್ಲಿ ಕಳೆದರು. ಟಿಪ್ಪುವು ತೀರಿ ಹೋದ ಮೇಲೆ ಅವರು ಬಿಡುಗಡೆಗೊಂಡರು. ಅವರಲ್ಲಿ ಅನೇಕರು ಬಲವಂತವಾಗಿ ಮತಾಂತರಗೊಂಡರು.

ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಕೆಲವರು ಬಣ್ಣಿಸುತ್ತಾರೆ. ಆ ಕಾಲದಲ್ಲಿ ಭಾರತ ಎನ್ನುವುದು ಒಂದು ಅಖಂಡ ರಾಷ್ಟ್ರವಾಗಿರಲಿಲ್ಲ. ರಾಷ್ಟ್ರಕ್ಕೆ ಸ್ವಾತಂತ್ರ್ಯ ತರುವ ಮಾತೆಲ್ಲಿಂದ ಬರುತ್ತದೆ ಎನ್ನುವುದು ಕೆಲವರ ವಾದ. ಆತನು ಅಫ್ಘಾನಿಸ್ಥಾನದ ರಾಜ ಝಾಮಾನ್ ಶಾ ಗೆ ಪತ್ರ ಬರೆದು, ಇಲ್ಲಿಯವರೆಗೆ ದಂಡೆತ್ತಿ ಬರುವಂತೆ ಕೇಳಿಕೊಳ್ಳುತ್ತಾನೆ. ಇಸ್ಲಾಂ ರಾಷ್ಟ್ರವನ್ನು ಸ್ಥಾಪನೆ ಮಾಡಬೇಕು ಎನ್ನುವುದು ಆತನ ಬಯಕೆಯಾಗಿತ್ತು. ಫ್ರೆಂಚ್ ಚಕ್ರಾಧಿಪತಿ ನೆಪೋಲಿಯನ್ ಬೋನಾಪಾರ್ಟೆ ಯನ್ನು ಕೂಡ ಇಲ್ಲಿಗೆ ಬರುವಂತೆ ಆಹ್ವಾನಿಸಿ, ಇಡೀ ಭರತ ಖಂಡದ ಆಮಿಷವನ್ನು ಅವನಿಗೆ ಒಡ್ಡಿದ. ಆತನು ಕೇವಲ ತನ್ನ ಮೈಸೂರು ಸಂಸ್ಥಾನವನ್ನು ಉಳಿಸಿಕೊಳ್ಳಲು ಬ್ರಿಟಿಷರ, ಮರಾಠರ, ನಿಜಾಮರ ಹಾಗೂ ಕಲ್ಲಿಕೋಟೆಯ ಜಾಮೊರಿನ್ ವಿರುದ್ಧ ಹೋರಾಡಿದ ಎಂದು ಇತಿಹಾಸಕಾರರು ಹೇಳುತ್ತಾರೆ.

ಟಿಪ್ಪು ಕನ್ನಡ ಪ್ರೇಮಿಯಾಗಿದ್ದ ಎನ್ನುವುದನ್ನು ಕೂಡ ಕೆಲವರು ಒಪ್ಪುವುದಿಲ್ಲ. ಕನ್ನಡ ಭಾಷೆಯ ಬದಲಿಗೆ ಆಡಳಿತ ಭಾಷೆಯಾಗಿ ಪಾರ್ಸಿಯನ್ನು ತಂದನು. ನಾವು ಇವತ್ತು ಕೇಳುತ್ತಿರುವ ಕಂದಾಯ ಇಲಾಖೆಯ ಶಬ್ದಗಳಾದ ಖಾತಾ, ಬಗರ್‌ಹುಕುಂ ಮುಂತಾದವುಗಳು ಟಿಪ್ಪುವಿನ ಕೊಡುಗೆಗಳು. ಟಿಪ್ಪು ಮೈಸೂರನ್ನು ನಜರ್ಬಾದ್ ಆಗಿ, ಕಲ್ಲಿಕೋಟೆ ಯನ್ನು ಇಸ್ಲಾಮಬಾದ್ ಆಗಿ, ಸಕಲೇಶಪುರ ವನ್ನು ಮಂಜರಾಬಾದ್ ಆಗಿ ಪರಿವರ್ತಿಸಿದ.

ಟಿಪ್ಪು ಊರುಗಳ ಹೆಸರುಗಳನ್ನು ಬದಲಿಸಿದ್ದು ಮಾತ್ರವಲ್ಲ. ದೂರವನ್ನು ಅಳೆಯುವ ಅಳತೆ ಮತ್ತು ಮಾನದಲ್ಲಿಯೂ ಇಸ್ಲಾಂ ಮತವನ್ನು ತುರುಕಿದ. ಖುರಾನಿನ ಒಂದು ಸಾಲು (ಕಲ್ಮಾ) ಇಪ್ಪತ್ತನಾಲ್ಕು ಅಕ್ಷರಗಳನ್ನು ಹೊಂದಿದೆಯೆಂಬ ಕಾರಣಕ್ಕೆ 24 ಅಂಗುಲಗಳ ಉದ್ದವನ್ನು ಮೂಲಮಾನವಾಗಿ ಇಟ್ಟುಕೊಂಡ. ಉಳಿದೆಲ್ಲ ಅಳತೆಗಳೂ ಇದಕ್ಕೆ ತಕ್ಕಂತೆ ಬದಲಾದವು.

ಪ್ರವಾದಿ ಮುಹಮ್ಮದರು ಹುಟ್ಟಿದ ವರ್ಷದಿಂದ ಆರಂಭಿಸಿ ಹೊಸ ಶಕೆಯೊಂದನ್ನು ಆರಂಭಿಸಿ, ಹೊಸ ಬಗೆಯ ಪಂಚಾಂಗವನ್ನು ಟಿಪ್ಪು ಜಾರಿಗೆ ತಂದ. ಸೌರಮಾನ ಪದ್ಧತಿಯನ್ನು ಕೈಬಿಟ್ಟು ಚಾಂದ್ರಮಾನ ಪದ್ಧತಿ ಅನುಸರಿಸಲು ಆದೇಶ ಹೊರಡಿಸಲಾಯಿತು. ಟಿಪ್ಪು ಪ್ರಾರಂಭಿಸಿದ ವರ್ಷದಲ್ಲಿ 354 ದಿನಗಳಿದ್ದವು. ವರ್ಷಗಳಿಗೆ ಅಹಂದ್, ಅಬ್, ಝಾ, ಬಾಬ್ ಮುಂತಾದ ಇಸ್ಲಾಮಿಕ್ ಹೆಸರುಗಳನ್ನು ಕೊಡಲಾಯಿತು.

ಟಿಪ್ಪು ತನ್ನ 17 ವರ್ಷಗಳ ಆಡಳಿತಾವಧಿಯಲ್ಲಿ ಸುಮಾರು 8000 ಹಿಂದೂ ದೇವಸ್ಥಾನಗಳನ್ನು ನಾಶಮಾಡಿದ. ಆದರೆ ತನ್ನ ಜ್ಯೋತಿಷ್ಯರನ್ನು ಸಂತುಷ್ಟಗೊಳಿಸಲು ಶ್ರೀರಂಗಪಟ್ಟಣದ ದೇವಸ್ಥಾನಗಳಲ್ಲಿ ಸದಾ ಪೂಜೆ ನಡೆಯುವಂತೆ ನೋಡಿಕೊಂಡ ಎಂದು ಮೈಸೂರು ಗಜೇಟಿಯರ್ ನಲ್ಲಿ ಲೂಯಿಸ್ ರೈಸ್ ಹೇಳುತ್ತಾನೆ.

ಮಾರಾಠ ಸೇನೆಯಿಂದ ದ್ವಂಸಗೊಂಡ ಶೃಂಗೇರಿ ಮಠವನ್ನು ಟಿಪ್ಪು ಜೀರ್ಣೋದ್ದಾರ ಗೊಳಿಸಿದ್ದು ನಿಜ. ಆದರೆ ಶಂಕರಾಚಾರ್ಯ ಮಠದ ಮೇಲೆ ದಾಳಿ ಮಾಡಿದ್ದು ಮರಾಠ ಸೇನೆಯಲ್ಲ. ಸೇನೆಯ ಯಾವುದೇ ನಿಯಮಕ್ಕೆ ಒಳಗಾಗದೆ ಇರುವ ಮರಾಠಿ “ಪಿಂಡಾರಿ”ಗಳ ಸೇನೆ. ಇದಕ್ಕಾಗಿ ನಾನು ಕ್ಷಮೆಯನ್ನು ಕೇಳುತ್ತೇನೆ ಎಂದು ಮರಾಠ ಸೇನಾನಾಯಕ ರಘುನಾಥರಾವ್ ಬರೆದ ಪತ್ರದಲ್ಲಿ ಹೇಳಲಾಗಿದೆ.

ಟಿಪ್ಪು ನೂರ್ ಮುಹಮ್ಮದನಿಗೆ ಬರೆದ ಪತ್ರದಲ್ಲಿ ತಾನು 50,000 ಹಿಂದುಗಳನ್ನು, ಮಹಿಳೆಯರು ಮಕ್ಕಳನ್ನು ಒಳಗೊಂಡಂತೆ ಇಸ್ಲಾಮ್ ಗೆ ಮತಾಂತರಿಸಿದ್ದೇನೆ. ಹಿಂದಿನ ಯಾವುದೇ ಪಡಿಶಾಹ್ ಅಥವಾ ವಜೀರ್ ಮಾಡಲಾಗದ್ದನ್ನು ನಾನು ಅಲ್ಲಾಹ್ ನ ಕೃಪೆಯಿಂದ ಮಾಡಿದ್ದೇನೆ . ಹಳ್ಳಿಗೆ ಹಳ್ಳಿಯನ್ನೇ ಮತಾಂತರಿಸಿದ್ದೇನೆ ಎನ್ನುತ್ತಾನೆ.

ಸ್ವಾತಂತ್ರ್ಯದ ಆ ಕ್ಷಣಗಳು:ಭಾಗ 20
ಬ್ರಿಟಿಷರ ಪಾಲಾದ ಬಾಂಬೆ ನಗರ.
ಮೊದಲ ಆಂಗ್ಲೋ ಮರಾಠ ಯುದ್ಧ.

ಮನುಕುಲದ ಇತಿಹಾಸದಲ್ಲಿ ಯುದ್ಧಗಳೇ ಚರಿತ್ರೆಯ ಪುಸ್ತಕದಲ್ಲಿ ಹೆಚ್ಚು ಪುಟಗಳನ್ನು ಆವರಿಸಿಕೊಂಡಿವೆ. ರಾಜಮಹಾರಾಜರ ಪ್ರತಿಷ್ಠೆ, ಭೂಮಿ ಹಾಗೂ ಸಂಪತ್ತಿನ ಆಸೆಗಾಗಿ ಕೊನೆಗೆ ಬಲಿಯಾಗುವವರು ಬಡಪಾಯಿ ಸೈನಿಕರು ಹಾಗೂ ನಾಗರೀಕರು. ಇಂತಹ ಮತ್ತೊಂದು ಯುದ್ಧವೇ ಮೊದಲ ಆಂಗ್ಲೋ ಮರಾಠ ಯುದ್ಧ.

ಪೇಶ್ವೆ ಆಗಿದ್ದ ಮಾಧವರಾವ್ 1772ರಲ್ಲಿ ತೀರಿಕೊಂಡ. ಆತನ 13 ವರ್ಷದ ತಮ್ಮ ನಾರಾಯಣರಾವ್ ಮರಾಠ ಚಕ್ರಾಧಿಪತ್ಯದ ಪೇಶ್ವೆಯಾದ. ಆದರೆ ಒಂದೇ ವರ್ಷದಲ್ಲಿ ಅರಮನೆಯ ಕಾವಲು ಭಟರಿಂದ ಗಣೇಶೋತ್ಸವದ ದಿನವಾದ ಆಗಸ್ಟ್ 30, 1773ರಂದು ಶನಿವಾರ ವಾಡದಲ್ಲಿ ಈತನನ್ನು ಕೊಲೆಗೈಯಲಾಯಿತು. ಇದರ ಹಿಂದಿನ ಕೈ ಆತನ ಚಿಕ್ಕಪ್ಪ ರಘುನಾಥ ರಾವ್ ನದ್ದು ಎಂದು ಹೇಳಲಾಗಿದೆ.

ನಂತರ ರಘುನಾಥ ರಾವ್ ಅಧಿಕಾರ ವಹಿಸಿಕೊಂಡ. ನಾರಾಯಣರಾವ್ ತೀರಿಹೋದ ಕೆಲವೇ ತಿಂಗಳಲ್ಲಿ ಆತನ ಪತ್ನಿ ಗಂಗಾಬಾಯಿ ಒಂದು ಗಂಡು ಮಗುವಿಗೆ ಜನ್ಮ ನೀಡಿದಳು. ಆ ಮಗುವಿಗೆ ಸವಾಯಿ ಮಾಧವರಾವ್ ಎಂದು ಹೆಸರಿಡಲಾಯಿತು.

ಮರಾಠರ ಚಾಣಕ್ಯನೆಂದೇ ಪ್ರಸಿದ್ಧವಾದ ಇನ್ನೊಬ್ಬ ಮರಾಠ ನಾಯಕ ನಾನಾ ಫಡ್ನವಿಸ್ ಈ ಮಗುವನ್ನು ಸಿಂಹಾಸನಕ್ಕೆ ಏರಿಸುವ ಪ್ರಯತ್ನಮಾಡಿದ. ಆದರೆ ರಘುನಾಥರಾವ್ ಇದಕ್ಕೆ ಸಮ್ಮತಿಸಲಿಲ್ಲ. ನಾನಾ ಫಡ್ನವಿಸ್ ವಿರುದ್ಧ ಹೋರಾಡಲು ಸಹಾಯಕ್ಕಾಗಿ ರಘುನಾಥರಾವ್ ಬಾಂಬೆ ಬ್ರಿಟಿಷ್ ಕೌನ್ಸಿಲ್ ನ್ನು ಕೋರಿಕೊಂಡ ಮತ್ತು ಸೂರತ್ ಒಪ್ಪಂದಕ್ಕೆ 1775ರಲ್ಲಿ ಸಹಿ ಮಾಡಿದ.

ಈ ಒಪ್ಪಂದದ ಪ್ರಕಾರ ಮುಂಬೈಯನ್ನು ಒಳಗೊಂಡ ಸಲ್ಸೆಟ್ಟೆ ದ್ವೀಪ ಮತ್ತು ವಸಾಯಿ ಪ್ರದೇಶಗಳನ್ನು ರಘುನಾಥ್ ರಾವ್ ಬ್ರಿಟಿಷರಿಗೆ ಬಿಟ್ಟು ಕೊಟ್ಟ. ಹಾಗೆಯೇ ಬ್ರಿಟಿಷರು ಈತನಿಗೆ ಸೈನ್ಯದ ನೆರವನ್ನು ನೀಡಿದರು.

ಆದರೆ ವಾರೆನ್ ಹೇಸ್ಟಿಂಗ್ಸ್ ನೇತ್ರತ್ವದ ಬ್ರಿಟಿಷ್ ಕಲ್ಕತ್ತ ಕೌನ್ಸಿಲ್ ಈ ಒಂದು ಒಪ್ಪಂದವನ್ನು ಮಾನ್ಯ ಮಾಡಲಿಲ್ಲ ಹಾಗೂ ಇದನ್ನು ರದ್ದುಗೊಳಿಸಿತು. ವಾರನ್ ಹೇಸ್ಟಿಂಗ್ಸ್ ಹಾಗೂ ನಾನಾ ಫಡ್ನವೀಸ್ ಮಧ್ಯ 1776ರಲ್ಲಿ ಪುರಂದರ ಒಪ್ಪಂದ ಏರ್ಪಟ್ಟಿತು. ರಘುನಾಥರಾವ್ ಗೆ ವರ್ಷಕ್ಕೆ ಮೂರು ಲಕ್ಷ ರೂಪಾಯಿ ನಿವೃತ್ತಿ ವೇತನವನ್ನು ನೀಡಲಾಯಿತು.

ಕೆಲವು ತಿಂಗಳುಗಳಲ್ಲಿ, ಅಧಿಕಾರದಲ್ಲಿದ್ದ ನಾನಾ ಫಡ್ನವಿಸ್ ಪುರಂದರ ಒಪ್ಪಂದವನ್ನು ಏಕಪಕ್ಷೀಯವಾಗಿ ಮುರಿದ ಮತ್ತು 1777ರಲ್ಲಿ ಬೊಂಬೆಯ ಒಂದು ಬಂದರನ್ನು ಫ್ರೆಂಚರಿಗೆ ನೀಡಿದ. ಇದು ಮೊದಲ ಆಂಗ್ಲೋ ಮರಾಠ ಯುದ್ಧಕ್ಕೆ ಕಾರಣವಾಯಿತು

ರಘುನಾಥರಾವ್ ನನ್ನು ಸಿಂಹಾಸನದಲ್ಲಿ ಕೂರಿಸಲು ಬಾಂಬೆ ಬ್ರಿಟಿಷ್ ಕೌನ್ಸಿಲ್ ಸೈನ್ಯವು ಮರಾಠರ ಮೇಲೆ ದಂಡೆತ್ತಿ ಹೋಗಿ ವಡಗಾಂವ್ ನಲ್ಲಿ ಹೀನಾಯವಾಗಿ ಸೋತಿತು. ಆಗ 1779 ರಲ್ಲಿ ವಡಗಾಂವ್ ಒಪ್ಪಂದ ಏರ್ಪಟ್ಟಿತು.

ಇದಾದ ನಂತರ ಇಂಗ್ಲಿಷರು ಮತ್ತು ಮರಾಠರ ಮಧ್ಯ ಬೇರೆ ಬೇರೆ ಕಡೆಗಳಲ್ಲಿ ಯುದ್ಧ ಸಂಭವಿಸಿ ಅಂತಿಮವಾಗಿ 1782 ರಲ್ಲಿ ಸಾಲ್ಬಾಯಿ ಒಪ್ಪಂದದೊಂದಿಗೆ ಪ್ರಥಮ ಆಂಗ್ಲೋ ಮರಾಠ ಯುದ್ಧ ಕೊನೆಗೊಂಡಿತು. ಕೊನೆಗೂ ಬೃಹತ್ ಮುಂಬೈ ಬ್ರಿಟಿಷರ ಪಾಲಾಯಿತು.

2013ರಲ್ಲಿ ಇಂಗ್ಲೆಂಡಿನಲ್ಲಿ ಬಿಡುಗಡೆಯಾದ "ದಿ ಲವರ್ಸ್ " ಎನ್ನುವ ಚಲನಚಿತ್ರವು, ಒಬ್ಬ ಬ್ರಿಟಿಷ್ ಅಧಿಕಾರಿ ಹಾಗೂ ಭಾರತೀಯ ಯುವತಿಯ ಮಧ್ಯದ ಪ್ರೇಮಕಥನವಾಗಿದ್ದು, ಇದು ಮೊದಲನೇ ಆಂಗ್ಲೋ ಮರಾಠ ಯುದ್ಧದ ಕಥಾವಸ್ತು ವಾಗಿದೆ.

ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 21
ಮರಾಠಾಧಿಪತಿಗಳ ಮಧ್ಯ ಒಡಕು.
ಎರಡನೇ ಆಂಗ್ಲೋ - ಮರಾಠ ಯುದ್ಧ.

ಎರಡನೇ ಆಂಗ್ಲೋ ಮರಾಠ ಯುದ್ಧವು 1802 ರಿಂದ 1805 ರ ತನಕ ನಡೆಯಿತು. ಆ ಸಮಯದಲ್ಲಿ ವಿಸ್ತಾರವಾಗಿ ಹರಡಿರುವ ಮರಾಠ ಪ್ರಾಂತ್ಯದಲ್ಲಿ 5 ಮುಖ್ಯ ರಾಜವಂಶಸ್ಥರಿದ್ದರು - ಪೂನಾದಲ್ಲಿ ಪೇಶ್ವೆ, ಬರೋಡದಲ್ಲಿ ಗಾಯಕವಾಡರು, ಗ್ವಾಲಿಯರ್ ನಲ್ಲಿ ಸಿಂಧಿಯಾ, ಇಂದೋರಿನಲ್ಲಿ ಹೋಳ್ಕರ್ ಹಾಗೂ ನಾಗಪುರದ ಭೋಂಸ್ಲೆ. ಪೇಶ್ವೆ ಇವರೆಲ್ಲರಿಗೂ ಪ್ರಧಾನ ಮಂತ್ರಿ ಸ್ಥಾನದಲ್ಲಿ ಇದ್ದರು. ಉಳಿದವರೆಲ್ಲ ಸಾಮ್ರಾಜ್ಯದ ಮುಖ್ಯಮಂತ್ರಿಗಳಂತೆ. ಇವರೊಳಗೆ ಸಾಮರಸ್ಯ ಇಲ್ಲದುದರಿಂದ ಯಾವಾಗಲೂ ಸಣ್ಣಪುಟ್ಟ ಕದನ ಆಗುತ್ತಿತ್ತು.

ಬ್ರಿಟಿಷರೊಂದಿಗೆ ಒಂದನೇ ಆಂಗ್ಲೋ ಮರಾಠ ಯುದ್ಧದಲ್ಲಿ ಕೈಜೋಡಿಸಿದ್ದರ ಪರಿಣಾಮವಾಗಿ ಪೇಶ್ವೆ ರಘುನಾಥರಾವ್ ಹಾಗೂ ಆತನ ಪತ್ನಿ ಆನಂದಿಬಾಯಿ ಇವರನ್ನು ಅವರ ಸಂಪುಟವೇ ತಿರಸ್ಕರಿಸಿತು ಹಾಗೂ ಜೈಲಿಗೆ ಹಾಕಿತು. ಆಗ ಈ ದಂಪತಿಗೆ ಜೈಲಲ್ಲಿ ಹುಟ್ಟಿದ ಮಗನೇ ದ್ವಿತೀಯ ಬಾಜಿರಾವ್. ಇವನು ಹಾಗೂ ನಂತರ ಹುಟ್ಟಿದ ಇವನ ತಮ್ಮನನ್ನು ಒಟ್ಟು 19 ವರ್ಷಗಳ ಕಾಲ ಜೈಲಲ್ಲಿ ಇಡಲಾಯಿತು. ಅಲ್ಲದೆ ಅವರಿಗೆ ವಿದ್ಯೆಯನ್ನು ಕೂಡ ತಿರಸ್ಕರಿಸಲಾಯಿತು.

ಕೊಲೆಗಡುಕ ತಂದೆಯ ಮಗ (ನಾರಾಯಣರಾವ್ ಕೊಲೆ ಪ್ರಕರಣ) ಎನ್ನುವ ಕಾರಣಕ್ಕಾಗಿ ಬಾಜಿರಾವ್ ಗೆ ಸಿಂಹಾಸನ ಪಟ್ಟವನ್ನು ನೀಡಲು ಯಾರಿಗೂ ಮನಸ್ಸಿರಲಿಲ್ಲ. 1802 ರಲ್ಲಿ ಪೇಶ್ವೆ ಬಾಜಿರಾವ್ ಹಾಗೂ ಸಿಂಧಿಯಾ ಒಟ್ಟಾಗಿ ಹೋಳ್ಕರ್ ಮೇಲೆ ಯುದ್ಧ ಸಾರಿದರು. ಯುದ್ಧದಲ್ಲಿ ಸೋತ ಪೇಶ್ವೆ ಬಾಜಿರಾವ್ ಬ್ರಿಟಿಷರ ಮೊರೆ ಹೋಗಿ ಅವರೊಂದಿಗೆ ಬಾಸೀನ್ ಒಪ್ಪಂದವನ್ನು ಮಾಡಿಕೊಂಡ.

ಈ ಒಪ್ಪಂದವು ಮರಾಠ ಸಾಮ್ರಾಜ್ಯಕ್ಕೆ ಮರಣಶಯ್ಯೆ ಆಯಿತು. ಇದರ ಪ್ರಕಾರ ಮರಾಠಾ ಸಾಮ್ರಾಜ್ಯದ ಒಂದು ಭಾಗ ಬ್ರಿಟಿಷರ ಪಾಲಾಯಿತು. ಇದಕ್ಕೆ ಪ್ರತಿಯಾಗಿ ರಕ್ಷಣೆಗಾಗಿ ಬ್ರಿಟಿಷ್ ಸೈನ್ಯದ ಒಂದು ಭಾಗವನ್ನು ಪಡೆಯಲಾಯಿತು.

ಬಾಸೀನ್ ಒಪ್ಪಂದವನ್ನು ವಿರೋಧಿಸಿದ ಸಿಂಧಿಯಾ, ಭೋಂಸ್ಲೆ ಮತ್ತಿತರರು ಬ್ರಿಟಿಷರೊಂದಿಗೆ ಬೇರೆ ಬೇರೆ ಕಡೆ ಹೋರಾಟ ನಡೆಸಬೇಕಾಯಿತು. ಇದರ ಪರಿಣಾಮವಾಗಿ ಬ್ರಿಟಿಷರ ವಿರುದ್ಧ ಇವರೆಲ್ಲರೂ ಸೋತರು. 1803 ರ ಡಿಸೆಂಬರ್ ತಿಂಗಳಲ್ಲಿ ಭೋಂಸ್ಲೆಯವರು ದೇವಗಾಂವ್ ಒಪ್ಪಂದ, ಸಿಂಧ್ಯಾರವರು ಸುರ್ಜಿ - ಅಂಜನಗಾಂವ್ ಒಪ್ಪಂದ ಹಾಗೂ ಹೋಳ್ಕರ್ ರವರು ರಾಜಘಾಟ್ ಒಪ್ಪಂದಕ್ಕೆ ಸಹಿ ಹಾಕಬೇಕಾಯಿತು.

ದ್ವಿತೀಯ ಬಾಜಿರಾವ್ ನನ್ನು ಬ್ರಿಟಿಷರು ಪೇಶ್ವೆ ಆಗಿ ಮಾಡಿದರು. ಆದರೆ ಇವನು ಬ್ರಿಟಿಷರ ಉತ್ಸವ ಮೂರ್ತಿಯಾಗಿ ಮಾತ್ರ ಇದ್ದಿದ್ದ.

ಲೇಖನ ಮಾಲಿಕೆ ಮುಂದುವರಿಯಲಿದೆ..

(ಡಾ. ಉಮೇಶ್ ಪುತ್ರನ್)

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕುಕೇಂದ್ರದ ಹೃದಯಭಾಗದಲ್ಲಿರುವ ಚಿನ್ಮಯಿ ಆಸ್ಪತ್ರೆಯ ವೈಧ್ಯಕೀಯ ನಿರ್ದೇಶಕರಾದ ಲೇಖಕರು ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ವಿಧ್ಯಾಭ್ಯಾಸವನ್ನು ಗಂಗೊಳ್ಳಿಯಲ್ಲಿ ಪೂರೈಸಿ ವೈದ್ಯಕೀಯ ಶಿಕ್ಷಣವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಪೂರೈಸಿರುತ್ತಾರೆ. ಸಾಹಿತ್ಯಾಸಕ್ತರಾದ ಇವರು ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಚರಾಗಿಯೂ ಸೇವೆ ಸಲ್ಲಿಸಿದ್ದಾರೆ.

Advertisement
Advertisement
Recent Posts
Advertisement