Advertisement

ಒಳಮೀಸಲಾತಿ; ಮೋದಿಯವರ ಸಮಿತಿ ರಚನೆಯ ಮತ್ತೊಂದು ಮಹಾ ನಾಟಕ?

Advertisement

"ಒಳ ಮೀಸಲಾತಿ": ನಿಜಕ್ಕೂ ಆಗಬೇಕಿರುವುದು EWS ಮಸೂದೆ ಜಾರಿಯ ಮಾದರಿಯಲ್ಲೇ ಹೊರತೂ ಸಮಿತಿ ರಚನೆಯ ನಾಟಕವಲ್ಲ!

ಒಳಮೀಸಲಾತಿ; ಮೋದಿಯ ಸಮಿತಿ ಮತ್ತೊಂದು ಮಹಾ ನಾಟಕ?

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)

ಸತತ ಅನ್ಯಾಯ ಹಾಗೂ ಮೋಸಗಳಿಗೆ ಗುರಿಯಾಗಿರುವ ವಂಚಿತ ದಲಿತ ಸಮುದಾಯವು ಇದೇ ನವಂಬರ್ 11 ರಂದು ಹೈದರಾಬಾದಿನಲ್ಲಿ ಒಳಮೀಸಲಾತಿಯನ್ನು ಆಗ್ರಹಿಸಿ ಬೃಹತ್ "ವಿಶ್ವರೊಪ ಸಮಾವೇಶ" ವನ್ನು ಸಂಘಟಿಸಿತ್ತು. ಆದರೆ ಅದರ ಮುಖ್ಯ ಅತಿಥಿಯಾಗಿದ್ದದ್ದು ಈ ದೇಶದ ಅತಿ ದೊಡ್ಡ ಅಭಿನಯ ಚತುರ- ಪ್ರಧಾನಿ ನರೇಂದ್ರ ಮೋದಿಯವರು. ನಿರೀಕ್ಷೆಯಂತೆ, ಆ ಸಮಾವೇಶದಲ್ಲಿ ಮೋದಿ ಅವರು ಮತ್ತೊಂದು ಬೃಹನ್ನಾಟಕವಾಡಿ ದಲಿತ ಸಮುದಾಯವನ್ನು ವಂಚಿಸುವ ಪ್ರಯತ್ನ ಮಾಡಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲೇ ನಡೆದಿರಬಹುದಾದ ವಂಚಿತ ದಲಿತ ಸಮುದಾಯದ ಆ ಬೃಹತ್ ಸಮಾವೇಷದಲ್ಲಿ ಮಾದಿಗ ದಂಡೋರಾದ ಅಧ್ಯಕ್ಷ ಕೃಷ್ಣ ಮಾದಿಗ ಅವರನ್ನು ಅಪ್ಪಿ ಹಿಡಿದು "ಈ ನ್ಯಾಯದ ಹೋರಾಟದಲ್ಲಿ ತಾನು ನಿರಂತರವಾಗಿ ಅವರ ಜೊತೆಗೆ ಇರುತ್ತೇನೆ" ಎಂದು ಘೋಷಿಸಿ ಪ್ರಧಾನಿಯವರು ಒಂದಷ್ಟು ಚಪ್ಪಾಳೆ ಹಾಗೂ ಬರಲಿರುವ ಚುನಾವಣೆಗಳಲ್ಲಿ ಒಂದಷ್ಟು ಮತಗಳನ್ನೇನೋ ಗಿಟ್ಟಿಸಿಕೊಂಡಿರಬಹುದು. ಅದರೆ ಸಮುದಾಯಕ್ಕೆ ಮಾತ್ರ ಅತ್ಯಂತ ಬ್ರಾಹ್ಮಣೀಯ ದ್ರೋಹವನ್ನೇ ಮಾಡಿದರು.

ಹೈದರಾಬಾದಿನಲ್ಲಿ ಹೈಡ್ರಾಮ

ದುಃಖದಿಂದ ಉದ್ವಿಘ್ನರಾಗಿದ್ದ ಕೃಷ್ಣರನ್ನು ಅಪ್ಪಿ ಸಮಾಧಾನ ಮಾಡಿದ ಫೋಟೊಗಳು ಎಲ್ಲಾ ಮಾಧ್ಯಮಗಳಲ್ಲೂ ದೊಡ್ಡದಾಗಿ ಪ್ರಕಟವಾಗುವ ಮೂಲಕ ಕೃಷ್ಣ ಮಾದಿಗ ಅವರ ಅಜೆಂಡಾ ಈಡೇರಿತೋ ಬಿಟ್ಟಿತೋ ಬಿಜೆಪಿ ಮತ್ತು ಆರೆಸ್ಸೆಸ್‌ನ ಅಜೆಂಡಾ ಮಾತ್ರ ಈಡೇರಿದಂತಾಗಿದೆ.

ಏಕೆಂದರೆ ವಂಚಿತ ಮಾದಿಗ ಸಮುದಾಯಕ್ಕೆ ನ್ಯಾಯ ಒದಗದೇ ಇರುವುದಕ್ಕೆ ಹಿಂದಿನ ಸರ್ಕಾರಗಳು ಎಷ್ಟು ಕಾರಣವೋ ಅಷ್ಟೆ ಅಥವಾ ಅದಕ್ಕಿಂತ ಜಾಸ್ತಿ ಬಿಜೆಪಿ ಕಾರಣ. ಆದರೂ ಮೋದಿಯವರು ಆ ಸಮಾವೇಶದಲ್ಲಿ "ಕಳೆದ ಮೂವತ್ತು ವರ್ಷಗಳಿಂದ ಹಳೆಯ ಸರ್ಕಾರಗಳು ಸಮುದಾಯಕ್ಕೆ ನ್ಯಾಯ ಒದಗಿಸದೇ ಇರುವುದಕ್ಕೆ ಕ್ಷಮೆ ಕೋರಲು ಬಂದಿರುವುದಾಗಿ" ಹೇಳಿ ತಮ್ಮ ಸರ್ಕಾರ ಹತ್ತು ವರ್ಷಗಳಿಂದ ಮಾಡಿರುವ ಮಾಡುತ್ತಿರುವ ಮೋಸವನ್ನು ಮುಚ್ಚಿಟ್ಟು ವಿರೋಧ ಪಕ್ಷಗಳನ್ನು ಮಾತ್ರ ಅಪರಾಧಗಳನ್ನಾಗಿಸುವ ಕ್ಷುಲ್ಲಕ ಹುನ್ನಾರ ನಡೆಸಿದರು.

ಏಕೆಂದರೆ ಮಾದಿಗ ಸಮುದಾಯ ದೇಶಾದ್ಯಂತ ಅದರಲ್ಲೂ ನಿರ್ದಿಷ್ಟವಾಗಿ ತೆಲಂಗಾಣ-ಆಂಧ್ರದ ವಂಚಿತ ದಲಿತ ಸಮುದಾಯ ಒಳಮೀಸಲಾತಿಗಾಗಿ ಕಳೆದ 30 ವರ್ಷಗಳಿಂದ ನಡೆಸುತ್ತಿರುವ ಅತ್ಯಂತ ನ್ಯಾಯಯುತ ಚಳವಳಿಯ ಅವಧಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಮೋದಿ ಸರ್ಕಾರವೇ!

ಮೂವತ್ತು ವರ್ಷಗಳ ದ್ರೋಹದಲ್ಲಿ ಹತ್ತು ವರ್ಷ ಮೋದಿಯವರದ್ದೇ!

ಹೈದರಾಬಾದಿನಲ್ಲಿ ಮೋದಿಯವರು ಏನೇ ಬಣ್ಣದ ಮಾತುಗಳಾನ್ನು ಆಡಿದ್ದರೂ ಈ ಅವಧಿಯಲ್ಲಿ ಮೋದಿ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲು ಇದ್ದ ನ್ಯಾಯಾಂಗ ಮತ್ತು ಶಾಸಕಾಂಗ ಮಾರ್ಗಗಳೆರಡರಲ್ಲೂ ಉದಾಸೀನ ಮತ್ತು ನಿರ್ಲಕ್ಷ್ಯ ಹಾಗೂ ನಿರಾಕರಣಾ ಧೋರಣೆಯನ್ನು ಅನುಸರಿಸಿರುವುದು ಎದ್ದು ಕಾಣುತ್ತದೆ.

ಏಕೆಂದರೆ ಪರಿಶಿಷ್ಟ ವರ್ಗಗಳ ಮೀಸಲಾತಿಯನ್ನು ಮತ್ತೊಮ್ಮೆ ಮರುವರ್ಗೀಕರಿಸುವ ವಿಷಯದ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಏನೂ ಹೇಳಿಲ್ಲ.

2004ರಲ್ಲಿ ಚಿನ್ನಯ್ಯ ಪ್ರಕರಣದಲ್ಲಿ ನ್ಯಾ. ಸಂತೋಷ್ ಹೆಗ್ಡೆ ನೇತೃತ್ವದ ಐದು ನ್ಯಾಯಾಧೀಶರ ಪೀಠ ಪರಿಶಿಷ್ಟ ವರ್ಗಗಳ ಮರು ವರ್ಗೀಕರಣ ಕಾನೂನು ಬಾಹಿರ ಮತ್ತು ರಾಜ್ಯ ಸರ್ಕಾರಗಳಿಗೆ ಆ ಶಾಸನಾತ್ಮಕ ಅಧಿಕಾರವನ್ನು ಸಂವಿಧಾನ ನೀಡಿಲ್ಲವೆಂದು ಆದೇಶಿಸಿತು. 2020 ರಲ್ಲಿ ದವಿಂದರ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನಲ್ಲಿ ನ್ಯಾ. ಅರುಣ್ ಮಿಶ್ರಾ ನೇತ್ರುತ್ವದ ಐವರು ನ್ಯಾಯಾಧೀಶರ ಪೀಠ ಒಳಾಮೀಸಲಾತಿಯ ವರ್ಗೀಕರಣದ ಪರವಾಗಿಯೂ ಮತ್ತು ರಾಜ್ಯಗಳಿಗೆ ಅದನ್ನು ಮಾಡಲು ಬೇಕಾದ ಶಾಸನಾತ್ಮಕ ಅಧಿಕಾರಯಿದೆಯೆಂದು ತೀರ್ಪು ನೀಡಿತು.

ಆದರೆ ಒಳಮೀಸಲಾತಿ ಸಲ್ಲದು ಎಂದ ಪೀಠವೂ ಐವರು ನ್ಯಾಯಧೀಶರ ಪೀಠ. ಸಿಂಧು ಎಂದು ಹೇಳಿದ ಪೀಠವೂ ಐವರ ನ್ಯಾಯಾಧೀಶರ ಪೀಠವಾದ್ದರಿಂದ ಯಥಾಸ್ಥಿತಿ ಉಳಿದು ಪ್ರಕರಣದ ವಿಚಾರಣೆಗೆ ಏಳ್ವರು ನ್ಯಾಯಾಧೀಶರ ಪೀಠವನ್ನು ರಚಿಸಬೇಕೆಂದು ಮುಖ್ಯ ನ್ಯಾಯಾಧೀಶರಿಗೆ ಪೀಠವು ಮನವಿ ಮಾಡಿತು.

ಈ ತೀರ್ಪು ಬಂದದ್ದು 2020 ರಲ್ಲಿ. ಈಗ 2023 . ಇಡೀ ಅವಧಿಯಲ್ಲಿ ಮೋದಿಯವರೇ ಪ್ರಧಾನಿ.

ಆದರೂ ಈ ಅವಧಿಯಲ್ಲಿ ಮೋದಿ ಸರ್ಕಾರ ತ್ವರಿತಗತಿಯಲ್ಲಿ ಏಳು ನ್ಯಾಯಾಧೀಶರ ಪೀಠ ರಚನೆ ಮಾಡುವ ಯಾವ ಕೋರಿಕೆಯನ್ನು ಸುಪ್ರೀಂ ನ ಮುಂದೆ ಸಲ್ಲಿಸಲಿಲ್ಲ. ಹೀಗೆ ಅದು ನೆನಗುದಿಗೆ ಬಿದ್ದದ್ದು, ಈಗ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ 2023 ರ ಅಕ್ಟೊಬರ್ ನಲ್ಲಿ ಏಳು ನ್ಯಾಯಾಧೀಶರ ಪೀಠ ರಚನೆಯಾಗಿದ್ದು, ಎಲ್ಲಾ ಅಹವಾಲುದಾರರಿಗೂ 2024 ರ ಜನವರಿ 12 ರೊಳಗೆ ತಮ್ಮ ವಾದಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಲು ಹೇಳಲಾಗಿದೆ.

ಇದು ಇನ್ನೆಷ್ಟು ಕಾಲ ನಡೆದು ಯಾವ ತೀರ್ಪು ಬರುವುದು ಅನ್ನುವುದು ಕೂಡ ಸುಪ್ರೀಂ ನಲ್ಲಿ ಕೇಂದ್ರ ಸರ್ಕಾರದ ಮಂಡನೆ ಮತ್ತು ವರ್ತನೆಗಳನ್ನು ಮತ್ತು ಪೀಠದಲ್ಲಿರುವ ನ್ಯಾಯಾಧೀಶರನ್ನು ಆಧರಿಸಿರುತ್ತದೆ.

ಪೀಠದ ಸಂಖ್ಯೆ ದೊಡ್ಡದಾದ ಮಾತ್ರಕ್ಕೆ ನ್ಯಾಯ ಖಾತರಿ ಎಂಬ ಯಾವ ಗ್ಯಾರಂಟಿಯೂ ಇಲ್ಲ ಎಂಬುದಕ್ಕೆ EWS ಮೀಸಲಾತಿ ಬಗ್ಗೆ ಐವರು ನ್ಯಾಯಾಧೀಶರ ಪೀಠ ಕೊಟ್ಟ ಬಹುಮತದ ತೀರ್ಪೇ ಸಾಕ್ಷಿ

ಆದ್ದರಿಂದ ಇರುವ ರಾಜಮಾರ್ಗ: ಸಂವಿಧಾನ ಮರುವರ್ಗೀಕರಣಕ್ಕೆ ಪೂರಕವಾದ ಸಂವಿಧಾನ ತಿದ್ದುಪಡಿಗಳನ್ನು ತಂದು ಒಳ ಮೀಸಲಾತಿ ಕಲ್ಪಿಸುವುದು.

ಮೇಲ್ಜಾತಿಗಳಿಗೆ ಮೀಸಲಾತಿ- ಒಳಮೀಸಲಾತಿಗೆ ಸಮಿತಿ!

ವಾಸ್ತವವಾಗಿ 2009 ಮತ್ತು 2014 ರ ಚುನಾವಣೆಗಳಲ್ಲಿ ಬಿಜೆಪಿ ಪಕ್ಷ ತಾನು ಅಧಿಕಾರಕ್ಕೆ ಬಂದರೇ 100 ದಿನಗಳೊಳಗಾಗಿ ದಲಿತ ಮೀಸಲಾತಿಯೊಳಗಿನ ವರ್ಗೀಕರಣವನ್ನು ಮಾಡುವುದಾಗಿ ಭರವಸೆ ಇತ್ತಿದ್ದರು. ಅಷ್ಟು ಮಾತ್ರವಲ್ಲ. 2016 ರಲ್ಲಿ ಇದೇ ಸಂಘಟನೆ ನಡೆಸಿದ ಮತ್ತೊಂದು ಬೃಹತ್ ರ‌್ಯಾಲಿಯಲ್ಲಿ ಬಿಜೆಪಿಯ ಮುಖಂಡ ವೆಂಕಯ್ಯ ನಾಯ್ಡು ಕೂಡ ಇದೇ ಭರವಸೆ ಕೊಟ್ಟಿದ್ದರು. ಆದರೆ ಈ ನಿಟ್ಟಿನಲ್ಲಿ ಬಿಜೆಪಿ ಯಾವ ಕ್ರಮಗಳನ್ನು ಕೈಗೊಳ್ಳಲಿಲ್ಲ.

ಹೀಗಾಗಿ ಈ ವಿಷಯದಲ್ಲಿ ಇತರ ಪಕ್ಷಗಳಷ್ಟೇ ಬಿಜೆಪಿ ದ್ರೋಹಿ. ಹಾಗೆ ನೋಡಿದರೆ ಇತರ ಪಕ್ಷಗಳಿಗಿಂತ ಬಿಜೆಪಿ ಮಾಡಿರುವ ಮಹಾದ್ರೋಹ ಸ್ವಲ್ಪ ಹೆಚ್ಚು.

ಏಕೆಂದರೆ 1989 ರಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಯಾವ ಸರ್ಕಾರಗಳಿಗೂ ಬಹುಮತವಿರಲಿಲ್ಲ. ಹೀಗಾಗಿ ಒಳಮೀಸಲಾತಿಯಂತ ತೀರ್ಮಾನ ತೆಗೆದುಕೊಳ್ಳುವುದು ಸುಲಭ ಸಾಧ್ಯವಿರಲಿಲ್ಲ. ಆದರೇ ಯಾವ ಪಕ್ಷಗಳಿಗೂ ಒಳಮೀಸಲಾತಿಯ ಬಗ್ಗೆ ಬದ್ಧತೆಯೇನೂ ಇರಲಿಲ್ಲ. ಆದರೆ ಅವುಗಳಿಗೆ ಒಳಮೀಸಲಾತಿ ಪರ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಈ ವಿಷಯದ ಬಗ್ಗೆ ಪರಸ್ಪರ ವಿರುದ್ಧ ನಿಲುವುಗಳುಳ್ಳ ಪಕ್ಷಗಳ ಖಿಚಡಿ ಸರ್ಕಾರವನ್ನು ನಡೆಸುತ್ತಿರುವ ನೆಪವಾದರೂ ಇತ್ತು.

ಆದರೆ 2014 ರಲ್ಲಿ ಮತ್ತು 2019 ರಲ್ಲಿ ಬೃಹತ್ ಜನಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿಗೆ ಅಂತ ಅಡ್ಡಿ ಅತಂಕಗಳೇನೂ ಇರಲಿಲ್ಲ. ಹೀಗಾಗಿಯೇ ಈ ದೇಶದ ಆಳುವವರ್ಗಗಳು ಶಾಸನ ಬಲವಿಲ್ಲವೆಂಬ ಏಕೈಕ ಕಾರಣಕ್ಕೆ ಕಳೆದ 30 ವರ್ಷಗಳಿಂದ ಜಾರಿ ಮಾಡದಿದ್ದ ಅತ್ಯಂತ ಜನವಿರೋಧಿ ಮಸೂದೆಗಳನ್ನೆಲ್ಲಾ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಜಾರಿಗೆ ತಂದಿದೆ. ಅದರಲ್ಲಿ ಅತ್ಯಂತ ಮುಖ್ಯವಾದುದು ಮೇಲ್ಜಾತಿ ಮಧ್ಯಮವರ್ಗಕ್ಕೆ ಮೀಸಲಾತಿ (EWS) ಒದಗಿಸಿ ಸಾಮಾಜಿಕ ನ್ಯಾಯದ ತತ್ವವನ್ನೇ ಬುಡಮೇಲುಗೊಳಿಸಿದ ಸಾಂವಿಧಾನಿಕ ತಿದ್ದುಪಡಿ. ಕಾರ್ಮಿಕ ಹಾಗೂ ರೈತ ವಿರೋಧಿ ಶಾಸನಗಳು, ಕಾಶ್ಮೀರದಲ್ಲಿ ಅರ್ಟಿಕಲ್ 370 ರದ್ದು. ಸಾಮಾನ್ಯ ಜನರ ಮೇಲೂ ಬೇಹುಗಾರಿಕೆ ಮಾಡಿ ಭಯೋತ್ಪಾದಕರೆಂದು ಜೈಲಿಗೆ ದೂಡುದ ತಿದ್ದುಪಡಿಗಳು. ಒಂದೇ ಎರಡೇ?

ಹೀಗೆ ಬಿಜೆಪಿ ಕಳೆದ ಹತ್ತು ವರ್ಷಗಳಲ್ಲಿ ತನಗೆ ಒದಗಿರುವ ಬೃಹತ್ ಜನಮತವನ್ನು ಬಳಸಿಕೊಂಡಿದ್ದೆಲ್ಲಾ ತನಗೆ ಓಟು ಹಾಕಿದ ಜನರ ಬದುಕನ್ನು ಬೀದಿಪಾಲು ಮಾಡುವ ಕಾಯಿದೆಗಳನ್ನು ಜಾರಿ ಮಾಡಲೆಂದೇ!

ಆದರೆ ಅದೇ ಬಹುಮತವನ್ನು ದಲಿತ ಒಳಮೀಸಲಾತಿ ಜಾರಿಗೆ ತರಲು ಏಕೆ ಬಳಸಿಕೊಳ್ಳಲಿಲ್ಲ?

ಆದ್ದರಿಂದಲೆ, ಹೈದರಾಬಾದಿನ ಸಮಾವೇಶದಲ್ಲಿ ಪ್ರಧಾನಿಯವರು "ಕಳೆದ ಮೂವತ್ತು ವರ್ಷಗಳಿಂದ ಸರ್ಕಾರಗಳು ವಂಚಿತ ದಲಿತ ಸಮುದಾಯಕ್ಕೆ ಮಾಡಿರುವ ಅನ್ಯಾಯಕ್ಕಾಗಿ ಕ್ಶಮಾಪಣೆ ಕೇಳುತ್ತೇನೆ" ಎಂದು ಹೇಳಿದಾಗ ಅವರು ಜನರನ್ನು ತಪ್ಪುದಾರಿಗೆಳೆಯುತ್ತಿದ್ದರು.

ಈ ಮೂವತ್ತು ವರ್ಷಗಳ ಅವಧಿಯಲ್ಲಿ ಹತ್ತು ವರ್ಷ ಅಧಿಕಾರದಲ್ಲಿ ಇದ್ದದ್ದು ತಮ್ಮ ಪಕ್ಷವೇ ಎಂಬುದನ್ನೂ ಹಾಗೂ ಈ ಅವಧಿಯಲ್ಲಿ ತಮ್ಮ ಸರ್ಕಾರಕ್ಕೆ ಒಳಮೀಸಲಾತಿಯನ್ನು ಒದಗಿಸುವ ಎಲ್ಲಾ ಸಾಧ್ಯತೆಗಳೂ ಇತ್ತೆಂಬ ಸತ್ಯವನ್ನು ಮರೆಮಾಚಿ ಮತ್ತೊಮ್ಮೆ ದಲಿತ ಸಮುದಾಯವನ್ನು ಮೋಸಗೊಳಿಸಲು ಯತ್ನಿಸಿದ್ದಾರೆ.

ಇಷ್ಟೆಲ್ಲ ಆದಮೇಲೂ ಹೈದರಬಾದ್ ಸಮಾವೇಶದಲ್ಲೂ ಪ್ರಧಾನಿ ಮೋದಿ ವಂಚಿತ ದಲಿತ ಸಮುದಾಯಕ್ಕೆ ಭರವಸೆ ಕೊಟ್ಟಿದ್ದು ಏನು?

ಮಾದಿಗ ಸಬಲೀಕರಣಕ್ಕಾಗಿ ಒಂದು ಸಮಿತಿ!

ಆದರೆ 2007 ರಲ್ಲೇ ಒಳಮೀಸಲಾತಿ ಬಗ್ಗೆ ಆಗಿನ ಯುಪಿಎ ಸರ್ಕಾರ ಸಮಿತಿಯನ್ನಲ್ಲ, ನ್ಯಾ. ಉಷಾ ಮೆಹ್ರ ನೇತೃತ್ವದ ಅಯೋಗವನ್ನೇ ರಚಿಸಿತ್ತು. ಅದು 2008ರಲ್ಲೇ ತನ್ನ ವರದಿಯನ್ನು ನೀಡಿ ಸಂವಿಧಾನದ 341 ನೇ ಕಲಮ್ಮಿಗೆ 341 (3) ಎಂಬ ತಿದ್ದುಪಡಿ ಮಾಡಿ ರಾಜ್ಯ ಶಾಸನ ಸಭೆಗಳಿಗೆ ಒಳಮೀಸಲಾತಿಯನ್ನು ಜಾರಿಗೆ ತರುವ ಅಧಿಕಾರವನ್ನು ನೀಡಲು ಶಿಫ಼ಾರಸ್ಸು ಮಾಡಿತ್ತು.

ಆದರೆ ಯುಪಿಎ ಸರ್ಕಾರ ಮತ್ತು ಅದರ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಪಕ್ಷ ಉಷಾ ಮೆಹ್ರಾ ಅಯೋಗದ ಶಿಫ಼ಾರಸ್ಸಿಗೆ ಪೂರಕವಾಗಿ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಪಕ್ಷಾತೀತ ಸಹಮತ ರೂಪಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಅಷ್ಟರ ಮಟ್ಟಿಗೆ ಅದು ಸಮುದಾಯಕ್ಕೆ ಮಾಡಿದ ವಂಚನೆಯೇ ..

ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಅಂಥಾ ನೆಪಗಳ ಅಡ್ಡಿಯೂ ಇರಲಿಲ್ಲವಲ್ಲ!

ಸಂವಿಧಾನ ತಿದ್ದುಪಡಿ ತರಲು ಬೇಕಾದ ಶಾಸಕ ಬಲ ಲೋಕಸಭೆಯಲ್ಲಿ ಮತ್ತು ಅದನ್ನು ರಾಜ್ಯಸಭೆಯಲ್ಲಿ ರೂಢಿಸಿಕೊಳ್ಳಲು ಬೇಕಾದ ಬಲಗಳು ಬಿಜೆಪಿಗೆ 2014 ರಲ್ಲೂ ಇತ್ತು. 2019ರಲ್ಲೂ ಇತ್ತು. ಆದರೂ ಬಿಜೆಪಿ ತನ್ನ ಮೇಲ್ಜಾತಿ ಪರ ಹಾಗೂ ಕಾರ್ಪೊರೇಟ್ ಪರ ಹಾಗೂ ಹಿಂದೂತ್ವದ ಪರ ಮಾತ್ರ ಈ ಬಲವನ್ನು ಬಳಸಿಕೊಂಡೀತೇ ವಿನಾ ದಲಿತ ಸಮುದಾಯದ ಹಿತಾಸಕ್ತಿ ಕಾಪಾಡಲು ಅಲ್ಲ.

ಹೈದರಾಬಾದಿನಲ್ಲೂ ವಂಚಿತ ದಲಿತ ಸಮುದಾಯದ ಬಗ್ಗೆ ಚುನಾವಣೆಗೆ ಮುನ್ನ ಮೊಸಳೆ ಕಣ್ಣೀರು ಸುರಿಸುತ್ತಿರುವ ಪ್ರಧಾನಿ ಭರವಸೆ ಕೊಟ್ಟಿದ್ದು ಸಂವಿಧಾನ ತಿದ್ದುಪಡಿಯಲ್ಲ. ಸಮಿತಿ ರಚನೆ!

2023 ರ ಜುಲೈ 26 ರ ಉತ್ತರವೇ ಬಿಜೆಪಿಯ ಅಸಲಿ ಧೋರಣೆ

ಈಗ ಮಾತ್ರವಲ್ಲ. ಕಳೆದ ಐದು ವರ್ಷಗಳಿಂದಲೂ ಮೋದಿ ಸರ್ಕಾರ ಈ ವಿಷಯದ ಬಗ್ಗೆ ಮಾಡಿಕೊಂಡು ಬಂದಿರುವುದು ಇದೇ ನಾಟಕವನ್ನೇ . ಕಳೆದ ಐದು ವರ್ಷಗಳಲ್ಲಿ ಸದನದಲ್ಲಿ ಹಲವಾರು ಬಾರಿ ಅವರದೇ ಪಕ್ಷದ ಸದಸ್ಯರು ಮತ್ತು ವಿರೋಧ ಪಕ್ಷಗಳ ಸದಸ್ಯರು ಒಳಮೀಸಲಾತಿಯನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನಗಳನ್ನು ಪ್ರಶ್ನಿಸಿದ್ದಾರೆ. ಅಂಥ ಪ್ರತಿಯೊಂದು ಪ್ರಶ್ನೆಗೂ ಸರ್ಕಾರದ ಮುಂದೆ ಅಂಥಾ ಯಾವ ಪ್ರಸ್ತಾಪಗಳೂ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಅದರಲ್ಲಿ ತೀರಾ ಇತ್ತಿಚೆಗೆ 26-7-2023 ರಂದು ಮೋದಿ ಸರ್ಕಾರ ಕೊಟ್ಟಿರುವ ಉತ್ತರ ಅದು ಸಮುದಾಯಕ್ಕೆ ಮಾಡುತ್ತಿರುವ ಮಹಾದ್ರೋಹವನ್ನು ಸ್ಪಷ್ಟವಾಗಿ ಬಿಚ್ಚಿಡುತ್ತದೆ:

ದಿನಾಂಕ 26-7-2023 ರಂದು ರಾಜ್ಯಸಭೆಯಲ್ಲಿ ಬಿಜೆಪಿಯ ಸದಸ್ಯರಾದ ಜಿ.ವಿ.ಎಲ್ ನರಸಿಂಹರಾವ್ ಅವರು:

1.ಒಳಮೀಸಲಾತಿಯ ಬಗ್ಗೆ ಈವರೆಗೆ ಬೇರೆಬೇರೆ ರಾಜ್ಯಗಳು ನೀಡಿರುವ ಅಭಿಪ್ರಾಯಗಳ ಕುರಿತು..

2. ಕೇಂದ್ರ ಸರ್ಕಾರದ ಮುಂದೆ ಸಂವಿಧಾನಕ್ಕೆ ತಿದ್ದುಪಡಿ ತಂದು ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಅಧಿಕಾರ ನೀಡುವ ಯೋಜನೆ ಇದೆಯೇ ಎಂಬುದರ ಕುರಿತು..

3 . ಹಾಗೂ ಅಂಥ ಯೋಜನೆಯಿದ್ದಲ್ಲಿ ಎಷ್ಟು ಕಾಲಾವಧಿಯೊಳಗೆ ಅದು ಜಾರಿಯಾಗಲಿದೆ ಎಂಬುದರ ಕುರಿತು
ಪ್ರಶ್ನೆಗಳನ್ನು ಕೇಳಿದ್ದರು.

ಅದಕ್ಕೆ ಮೋದಿ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ಮಂತ್ರಿ ಕರ್ನಾಟಕದ ನಾರಾಯಣಸ್ವಾಮಿಯವರು ನೀಡಿದ್ದ ಉತ್ತರ ಇದು:

- ಸಂವಿಧಾನದಲ್ಲಿ ಈಗಿರುವ ಅವಕಾಶಗಳಂತೆ ಒಳಮೀಸಲಾತಿಯನ್ನು ಕಲ್ಪಿಸಲು ಸಾಧ್ಯವಾಗದು.

-ಇದರ ಬಗ್ಗೆ ರಚಿಸಲಾಗಿದ್ದ ರಾಷ್ಟ್ರೀಯ ಆಯೋಗವು ಒಳಮೀಸಲಾತಿಯನ್ನು ಕಲ್ಪಿಸಿಕೊಡುವಂತೆ ಸಂವಿಧಾನದ ಆರ್ಟಿಕಲ್ 341 ಕ್ಕೆ ತಿದ್ದುಪಡಿ ತರಲು ಶಿಫಾರಸ್ಸು ಮಾಡಿತ್ತು.

-ಈ ಶಿಫಾರಸ್ಸಿನ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅಭಿಪ್ರಾಯಗಳನ್ನು ನೀಡುವಂತೆ ಕೋರಲಾಗಿತ್ತು.

- ಈವರೆಗೆ 20 ರಾಜ್ಯ ಸರ್ಕಾರಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅಭಿಪ್ರಾಯಗಳನ್ನು ನೀಡಿವೆ.

ಅದರಲ್ಲಿ

- 7 ರಾಜ್ಯಗಳು ಒಳಮೀಸಲಾತಿಯ ಪರವಾಗಿಯೂ..

- 13 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶವು ಒಳಮೀಸಲಾತಿಯ ವಿರುದ್ಧವಾಗಿಯೂ ಅಭಿಪ್ರಾಯಗಳನ್ನು ನೀಡಿವೆ.

ಎಲ್ಲಕ್ಕಿಂತ ಮುಖ್ಯವಾಗಿ ...

- ಹಾಲಿ ಈ ವಿಷಯವು ಸಬ್ -ಜುಡೀಸ್ - ನ್ಯಾಯಾಲಯಾಧೀನವಾಗಿದೆ.

- ಐವರು ನ್ಯಾಯಾಧೀಶರ ಪೀಠವು ಈ ವಿಷಯವನ್ನು ಏಳು ನ್ಯಾಯಾಧೀಶರ ಅಥವಾ ಹೆಚ್ಚಿನ ಪೀಠಕ್ಕೆ ವರ್ಗಾಯಿಸಬೇಕೆಂದು ಕೋರಿದೆ
ಎಂದು ಉತ್ತರವನ್ನು ಮುಗಿಸಿದ್ದಾರೆ.

ಆಸಕ್ತರು ಆ ಉತ್ತರವನ್ನು ಈ ವೆಬ್ ವಿಳಾಸದಲ್ಲಿ ಗಮನಿಸಬಹುದು :

(chrome-extension://efaidnbmnnnibpcajpcglclefindmkaj/https://sansad.in/getFile/annex/260/AU774.pdf?source=pqars)

ಆದರೆ ಕರ್ನಾಟಕದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಘಟಾನುಘಟಿಗಳೆಲ್ಲಾ ಒಳಮೀಸಲಾತಿ ಒದಗಿಸಲು ಮೋದಿ ಸರ್ಕಾರ ಕಟಿಬದ್ಧವಾಗಿದೆ ಎಂದೆಲ್ಲಾ ಬೊಗಳೆ ಬಿಟ್ಟಿದ್ದರು. ಮತ್ತು ಈಗ ಮತ್ತೆ ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೆ ಮುಂಚೆ ನಡೆದ ಹೈದರಾಬಾದ್ ರ‌್ಯಾಲಿಯಲ್ಲಿ ಅದೇ ಬಣ್ಣದ ಮಾತುಗಳನ್ನಾಡಿದ್ದಾರೆ.

ಆದರೆ ಮೇಲಿನ ಅಧಿಕೃತ ಉತ್ತರದಲ್ಲಿ ಸ್ಪಷ್ಟವಾಗಿರುವಂತೆ

- ಒಳಮೀಸಲಾತಿಯನ್ನು ಸಂವಿಧಾನ ತಿದ್ದುಪಡಿಯ ಮೂಲಕ ತರುವ ಉದ್ದೇಶವಿದೆಯೇ ಎಂಬ ಪ್ರಶ್ನೆಗೆ ಸರ್ಕಾರ ಉತ್ತರವನ್ನೇ ಕೊಡದೆ ಜಾರಿ ಕೊಂಡಿದೆ.

-ಅಷ್ಟು ಮಾತ್ರವಲ್ಲ..
ಈ ವಿಷಯವು ಸಬ್ ಜುಡೀಸ್- ಅರ್ಥಾತ್ ನ್ಯಾಯಾಲಯದ ಅಧೀನದಲ್ಲಿರುವುದರಿಂದ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗದು ಎಂದು ಸ್ಪಷ್ಟವಾಗಿ ಹೇಳಿದೆ.

- ಆದರೆ ಸುಪ್ರೀಂ ಕೋರ್ಟಿನ ಅಧೀನದಲ್ಲಿರುವ ಅಥವಾ ಸುಪ್ರೀಂ ಕೋರ್ಟು ಆದೇಶ ನೀಡಿದ್ದರು ಅದಕ್ಕೆ ತದ್ವಿರುದ್ಧವಾದ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿಲ್ಲವೇ?

ಇತಿಹಾಸದಲ್ಲಿ ಸಂಸತ್ತು ತನ್ನ ಸಾರ್ವಭೌಮತೆಯನ್ನು ಚಲಾಯಿಸಿ ಸಂವಿಧಾನ ತಿದ್ದುಪಡಿಯ ಮೂಲಕ ಸುಪ್ರೀಂ ಕೋರ್ಟು ಆದೇಶಗಳನ್ನು ಅಮಾನ್ಯಗೊಳಿಸಿಲ್ಲವೇ?

ಅಷ್ಟೆಲ್ಲ ಏಕೆ?

ಮೇಲ್ಜಾತಿ ಮಧ್ಯಮ ವರ್ಗಕ್ಕೆ (EWS) ಮೀಸಲಾತಿ ಒದಗಿಸುವ ವಿಷಯದಲ್ಲಿ ಯಾವ ಸಮಿತಿ, ಯಾವ ಅಧ್ಯಯನವನ್ನೂ ಮಾಡದೆ ಸದನದಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ಸಂವಿಧನವನ್ನೇ ವಿಕೃತಗೊಳಿಸಿ EWS ಮೀಸಲಾತಿಯನ್ನು ಕಾಯಿದೆಯಾಗಿಸಿಕೊಳ್ಳಲಿಲ್ಲವೇ?

ದೆಹಲಿ ಸರ್ಕಾರಕ್ಕೆ ಅಧಿಕಾರಿಶಾಹಿಯ ಮೇಲಿನ ಅಧಿಕಾರದ ವ್ಯಾಪ್ತಿಯನ್ನು ಸುಪ್ರೀಂ ಕೋರ್ಟು ಎತ್ತಿ ಹಿಡಿದರೂ ಮೋದಿ ಸರ್ಕಾರ ಅದನ್ನು ಅಮಾನ್ಯಗೊಳಿಸಲು ಸುಗ್ರೀವಾಜ್ಞೆ ತರಲಿಲ್ಲವೇ? ಅದನ್ನು ಸಂಸತ್ತಿನಲ್ಲಿ ಕಾಯಿದೆಯಾಗಿ ಮಾಡಿ ಸುಪ್ರೀಂ ಆದೇಶವನ್ನು ಅಮಾನ್ಯಗೊಳಿಸಿಲ್ಲವೇ?

ಹಾಗಿದ್ದಲ್ಲಿ ಪ್ರಧಾನಿಯವರು ಹೈದರಾಬಾದಿನ ರ್‍ಯಾಲಿಯಲ್ಲಿ ಲಕ್ಷ ಲಕ್ಷ ವಂಚಿತ ದಲಿತ ಸಮುದಾಯ ಅಸಾಹಯಕತೆಯಿಂದ ಆಶಾಭಾವನೆಯಿಂದ ಮೋದಿಯವರತ್ತ ನೋಡುತ್ತಿದ್ದಾಗ ಏಕೆ ಪ್ರಧಾನಿ "ಸುಪ್ರೀಂ ನಲ್ಲಿ ಕೇಂದ್ರ ಸರ್ಕಾರ ಒಳಮೀಸಲಾತಿಯ ಪರವಾಗಿ ಗಟ್ಟಿಯಾಗಿ ವಾದ ಮಾಡುವುದಾಗಿ ಭರವಸೆ ನೀಡಲಿಲ್ಲ?"

"ಒಂದು ವೇಳೆ ಸುಪ್ರೀಂ ವ್ಯತಿರಿಕ್ತ ತೀರ್ಮಾನ ಮಾಡಿದರೂ ಇತರ ಹಲವಾರು ವಿಷಯಗಳಲ್ಲಿ ಕೇಂದ್ರ ಸರ್ಕಾರ ನಡೆದುಕೊಂಡಿರುವಂತೆ, ಸಂವಿಧಾನಕ್ಕೆ ತಿದ್ದುಪಡಿ ತಂದಾದರೂ ಒಳಮೀಸಲಾತಿ ತರುವ ಪರೋಕ್ಷ ಭರವಸೆ"ಯನ್ನಾದರೂ ಏಕೆ ಪ್ರಧಾನಿ ನೀಡಲಿಲ್ಲ?

ಹೀಗೆ ಪರಿಣಾಮಕಾರಿಯಾದುದನ್ನು ಮತ್ತು ಸರಿಯಾದ ಪರಿಹಾರಗಳನ್ನು ನೀಡುವ ಬದಲಿಗೆ ಮತ್ತೆ ಸಮಿತಿ ರಚನೆಯ ಮಾತು ಮಹಾದ್ರೋಹವಲ್ಲದೇ ಮತ್ತೇನು?

ವಿಷಯವೇನೆಂದರೆ ಸುಪ್ರೀಂ ನಲ್ಲಿ ವ್ಯತಿರಿಕ್ತ ತೀರ್ಪು ನೀಡಿದರೆ ಅದನ್ನು ಸಂವಿಧಾನ ತಿದ್ದುಪಡಿಯ ಮೂಲಕ ಅಮಾನ್ಯಗೊಳಿಸಿಯಾದರೂ ವಂಚಿತ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸುವ ಬದ್ಧತೆಯಾಗಲೀ, ಇರಾದೆಯಾಗಲೀ, ಮೋದಿ ಸರ್ಕಾರಕ್ಕಾಗಲೀ, ಬಿಜೆಪಿಗಾಗಲೀ ಇಲ್ಲ.

ಈ ವಿಷಯದ ಬಗ್ಗೆ ರಾಜ್ಯಸಭೆಯಲ್ಲಿ ಕೊಟ್ಟಿರುವ ಉತ್ತರಗಳಲ್ಲೇ ಸೂಚನೆಗಳಿವೆ. ಆ ಉತರದಲ್ಲಿ ಮೋದಿ ಸರ್ಕಾರ ಸ್ಪಷ್ಟವಾಗಿ ಹೇಳಿರುವಂತೆ

- ದೇಶದ 20 ರಾಜ್ಯಗಳಲ್ಲಿ ಒಳಮೀಸಲಾತಿಯನ್ನು ಒಪ್ಪಿರುವುದು ಕೇವಲ 7 ರಾಜ್ಯಗಳು- ಉಳಿದ 13 ರಾಜ್ಯಗಳು ವಿರೋಧಿಸಿವೆ. ಹಾಗೂ ಒಳಮೀಸಲಾತಿ ಒಪ್ಪಿರುವ ರಾಜ್ಯಗಳಲ್ಲೂ ದಲಿತ ಸಮುದಾಯಗಳಲ್ಲಿ ಈ ಬಗ್ಗೆ ಒಡಕುಗಳಿವೆ. ಹೀಗಾಗಿ ಬಹುಸಂಖ್ಯಾತ ರಾಜ್ಯಗಳಲ್ಲಿ ಒಳಮೀಸಲಾತಿ ವಿರೋಧಿಯಾದ ದಲಿತರೊಳಗಿನ ಪ್ರಭಾವಿ ಸಮುದಾಯದ ಅಭಿಪ್ರಾಯಗಳೇ ಗಟ್ಟಿಯಾಗಿವೆ.

ಆದ್ದರಿಂದಲೇ ಬಿಜೆಪಿಯಾಗಲೀ, ಇತರ ವಿರೋಧ ಪಕ್ಷಗಳಾಗಲೀ ಮಾದಿಗ ಹಾಗೂ ಮಾದಿಗ ಸಂಬಂಧಿ ಸಮುದಾಯಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ಮೋಸಗೊಳಿಸುವುದನ್ನು ಬಿಟ್ಟರೆ ಬೇರೇನೂ ಮಾಡುತ್ತಿಲ್ಲ.

ಇದು ಕರ್ನಾಟಕದ ಸದಾಶಿವ ಅಯೋಗದ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ಮಾಡುತ್ತಿರುವ ರಾಜಕೀಯದಲ್ಲಿ ಸ್ಪಷ್ಟವಾಗುತ್ತದೆ.

ಸದಾಶಿವ ಅಯೋಗವನ್ನು ರಾಜ್ಯ ಸರ್ಕಾರ ಜಾರಿ ಮಾಡುವ ಅಧಿಕಾರವಿದೆಯೇ?

:ಇಲ್ಲ.

ರಾಜ್ಯ ಸರ್ಕಾರಕ್ಕೆ ಈಗಿರುವ ಕಾನೂನಿನ ಪ್ರಕಾರ ಸದಾಶಿವ ಅಯೋಗದ ಶಿಪಾರಸ್ಸಿನಂತೆ ರಾಜ್ಯದ ಪರಿಶಿಷ್ಟ ವರ್ಗದ ಪಟ್ಟಿಯನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ, ಅದರ ಆಧಾರದಂತೆ ಒಳ ಮೀಸಲಾತಿಯನ್ನು ಕೊಡುವ ಅಧಿಕಾರವಿಲ್ಲ.

ಏಕೆಂದರೆ ಈಗಾಗಲೇ ಚಿನ್ನಯ ಪ್ರಕರಣದಲ್ಲಿ 2004 ರಲ್ಲೇ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಅಂಥಾ ಅಧಿಕಾರ ಕೇವಲ ಸಂಸತ್ತಿಗಿದೆಯೇ ವಿನಾ ರಾಜ್ಯ ಸರ್ಕಾರಗಳಿಗಿಲ್ಲ ಎಂದು ಸ್ಪಷ್ಟಪಡಿಸಿದೆ. 2020 ರಲ್ಲಿ ಮತ್ತೊಂದು ಸುಪ್ರಿಂ ಪೀಠ ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ತೀರ್ಪಿತ್ತರೂ ಅದೂ ಕೂಡ ಐವರು ನ್ಯಾಯಧೀಶರ ಪೀಠವೇ ಆದ್ದರಿಂದ ಆ ತೀರ್ಪು ಜಾರಿಗೆ ಬರಲ್ಲ.

ಹೀಗಾಗಿ ಹಾಲಿ ಇರುವ ಪರಿಸ್ಥಿತಿಯ ಪ್ರಕಾರ ಸದಾಶಿವ ವರದಿಯನ್ನು ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತರಲಾಗದು.

ಆದ್ದರಿಂದ ಸದಾಶಿವ ವರದಿಯನ್ನು ಜಾರಿಗೆ ತನ್ನಿ ಎಂದು ರಾಜ್ಯ ಸರ್ಕಾರವನ್ನು ಉದ್ದೇಶಿಸಿ ಆಗ್ರಹಿಸುವುದು ಅರ್ಥಹೀನ.

ಹಾಗೆಯೇ ಕಾಂಗ್ರೆಸ್ ಆಗಲೀ ಇತರ ಪಕ್ಷಗಳಾಗಲೀ ಸದಾಶಿವ ಅಯೋಗದ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಹೇಳುವುದು ಜನರನ್ನು ಮರುಳು ಮಾಡುವ ಮಹಾ ವಂಚನೆ.

ಆದರೆ ಖಂಡಿತವಾಗಿ ಸದಾಶಿವ ಅಯೋಗದ ವರದಿಯನ್ನು ಸದನದಲ್ಲಿ ಮಂಡಿಸಬೇಕೆಂದೊ ಹಾಗೂ ಅದರ ಬಗ್ಗೆ ಬಹಿರಂಗ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದೂ, ಮತ್ತು ಕರ್ನಾಟಕ ವಿಧಾನ ಸಭೆಯು ಒಕ್ಕೊರಲಿಂದ ಒಳಮೀಸಲಾತಿಗೆ ಆಗ್ರಹಿಸಿ ಗೊತ್ತುವಳಿ ಸ್ವೀಕರಿಸಬೇಕೆಂದು ಆಗ್ರಹಿಸಬೇಕು .

ಹಾಗಿದ್ದಲ್ಲಿ ಒಳಮೀಸಲಾತಿ ಜಾರಿಗೆ ದಾರಿ ಏನು?

ಈ ಹಿನ್ನೆಲೆಯಲ್ಲಿ ಒಳಮೀಸಲಾತಿ ಜಾರಿಗೆ ಇರುವುದು ಎರಡೇ ಮಾರ್ಗ.

ಒಂದು ಜನವರಿ 12 ರಿಂದ ಸುಪ್ರೀಂನ ಏಳು ನ್ಯಾಯಾಧೀಶರ ಪೀಠದಲ್ಲಿ ಪ್ರಾರಂಭವಾಗಲಿರುವ ವಿಚಾರಣೆಯಲ್ಲಿ ಕೇಂದ್ರ ಸರ್ಕಾರ ಬಲವಾಗಿ ಒಳಮೀಸಲಾತಿಯ ಪರವಾಗಿ ವಾದ ಮಾಡುವುದು. ಯಾವ ಕಾರಣಕ್ಕೂ ಕೇಂದ್ರ ಸರ್ಕಾರ ಚುನಾವಣೆಯ ದೃಷ್ಟಿಯಿಂದ ಪ್ರಕರಣದ ವಿಚಾರಣೆ ಮುಂದೂಡುತ್ತಾ ಕಾಲಹರಣ ಮಾಡಬಾರದು. ಹಾಗೂ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬಲವಾಗಿ ಮಧ್ಯಪ್ರವೇಶಿಸಬೇಕು.

ಎರಡನೆಯದು ರಾಜಮಾರ್ಗ. ಪ್ರಜಾತಾಂತ್ರಿಕ ಮಾರ್ಗ.

ಸಂಸತ್ತಿನಲ್ಲಿ ಒಳಮೀಸಲಾತಿಯ ಪರವಾಗಿ ಒಂದು ಸಂವಿಧಾನ ತಿದ್ದುಪಡಿಯನ್ನು ಜಾರಿ ಮಾಡಿ ಸಂವಿಧಾನದ ಆರ್ಟಿಕಲ್ 341 (3) ಕಲಮನ್ನು ಸೇರಿಸಿ ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿಯ ಅಧಿಕಾರವನ್ನು ಶಾಸನ ಮಾಡುವುದು.

ಆದರೆ ಇದನ್ನು ಬಿಜೆಪಿ ಮಾಡುವುದಿಲ್ಲ ಎಂದೇ ಜುಲೈ 26 ರಂದು ಪರೋಕ್ಷವಾಗಿ ಉತ್ತರ ನೀಡಿದೆ.

ಆದ್ದರಿಂದ ದಲಿತ ಸಮುದಾಯ ಮತ್ತು ಈ ನಾಡಿನ ನ್ಯಾಯವಂತ ಸಮಾಜ ಸದಾಶಿವ ವರದಿ ಜಾರಿ ಮಾಡುತ್ತೇವೆ ಎಂದೋ, ಸದಾಶಿವ ವರದಿಯನ್ನು ಕೇಂದ್ರದ ಗಮನಕ್ಕೆ ತರುತ್ತೇವೆ ಎಂದೋ ಮರುಳು ಮಾಡುವ ಕಾಂಗ್ರೆಸ್-ಬಿಜೆಪಿ-ದಳಿಗರ ಹುಸಿ ಆಸ್ವಾಸನೆಗಳನ್ನು ಧಿಕ್ಕರಿಸಬೇಕು.

ಮತ್ತು

EWS ಮಸೂದೆಯ ರೀತಿಯಲ್ಲೇ ಬರಲಿರುವ ಸಂಸತ್ ನ ಚಳಿಗಾಲದ ಅಧಿವೇಶನದಲ್ಲೇ ಒಳಮೀಸಲಾತಿಯ ಪರವಾಗಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸುವಂತೆ ಆಗ್ರಹಿಸಬೇಕು. ಹಾಗೂ ಉಳಿದೆಲ್ಲಾ ಪಕ್ಷಗಳು ಅ ಮಸೂದೆಯ ಪರವಾಗಿ ಮತ ಚಲಾಯಿಸಬೇಕೆಂದು ಆಗ್ರಹಿಸಬೇಕು.

ಅದನ್ನು ಬಿಟ್ಟು ಮೋದಿ ಹೈದರಾಬಾದಿನಲ್ಲಿ ಕೊಟ್ಟಿರುವ ಸಮಿತಿ ರಚನೆಯ ಆಶ್ವಾಸನೆ ಈ ದೇಶದ ದಲಿತ-ದಮನಿತ ಸಮುದಾಯಕ್ಕೆ ಮಾಡಿರುವ ಮಹಾ ಅವಮಾನವೇ ಆಗಿದೆ.

Advertisement
Advertisement
Recent Posts
Advertisement