Advertisement

'ಅಂಬೇಡ್ಕರ್' ಜಾಗಕ್ಕೆ 'ಮನು'ವನ್ನು ತರುವ ಷಢ್ಯಂತ್ರ ನಡೆಯುತ್ತಿದೆಯೇ?

Advertisement

ಆಲಯದಲ್ಲಿ ಮನು- ಆವರಣದಲ್ಲಿ ಅಂಬೇಡ್ಕರ್!: ಶಿವಸುಂದರ್

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ನಂತರ ಭಾರತದ ಸುಪ್ರೀಂ ಕೋರ್ಟಿನ ಆವರಣದಲ್ಲಿ ಈ ವರ್ಷ ಸಂವಿಧಾನ ದಿನದಂದು ಅಂಬೇಡ್ಕರ್ ಅವರ ಒಂಭತ್ತು ಅಡಿ ಎತ್ತರದ ಪ್ರತಿಮೆಯೊಂದು ಸ್ಥಾಪನೆಗೊಂಡಿದೆ. ಮಹಾರಾಷ್ಟ್ರದ ಅಂಬೇಡ್ಕರ್ ವಾದಿ ಸಾಮಾಜಿಕ ನಾಯಕ ದಾದಾಸಾಹೇಬ್ ಗಾಯಕ್‌ವಾಡ್ ಅವರು 1970 ರಿಂದಲೂ ಇದಕ್ಕಾಗಿ ಆಗ್ರಹಿಸುತ್ತಿದ್ದರು. ಅಂಬೇಡ್ಕರ್ ಅವರ ಚಿತ್ರವೊಂದು ಸುಪ್ರೀಂ ನ ಲೈಬ್ರರಿಯಲಿ ಅನಾವರಣಗೊಳ್ಳಲು 67 ವರ್ಷ ಬೇಕಾಯಿತು. ಇತ್ತೀಚಿನ ದಿನಗಳಲ್ಲಿ ಸುಪ್ರೀಂ ನಲ್ಲಿ ಪ್ರಾಕ್ಟಿಸ್ ಮಾಡುತ್ತಿರುವ ಯುವ ಅಂಬೇಡ್ಕರ್ ವಾದಿಗಳ ತಂಡವು ಸುಪ್ರೀಂ ನಲ್ಲಿ ಅಂಬೇಡ್ಕರ್ ಪ್ರತಿಮೆಯೊಂದನ್ನು ಸ್ಥಾಪಿಸಬೇಕೆಂದು ಸತತ ಪ್ರಯತ್ನ ಪ್ರಾರಂಭಿಸಿದ್ದರು. ಮುಖ್ಯ ನ್ಯಾಯಾಧೀಶರಿಗೆ ಹಲವಾರು ಪತ್ರಗಳನ್ನು ಬರೆದಿದ್ದರು. ಕೊನೆಗೆ 2023 ರ ಸೆಪ್ಟೆಂಬರ್ ನಲ್ಲಿ Supreme Court Arguing Counsel Association (SCACA) ವತಿಯಿಂದ ಮುಖ್ಯ ನ್ಯಾಯಾಧೀಶರಿಗೆ ಔಪಚಾರಿಕ ಮನವಿಯೊಂದನ್ನು ಸಲ್ಲಿಸುವ ಮುಖಾಂತರ ಈ ನವಂಬರ್ ಗೆ ಅಂಬೇಡ್ಕರ್ ಪ್ರತಿಮೆಯೊಂದು ಸುಪ್ರೀಂ ಆವರಣದಲ್ಲಿ ಅಂತೂ ಇಂತೂ ಸ್ಥಾಪನೆಯಾಗಿದೆ.

ಆದರೆ ವಿಪರ್ಯಾಸವೆಂದರೆ ನ್ಯಾಯಾಂಗವನ್ನೂ ಒಳಗೊಂಡಂತೆ ಇಡೀ ಪ್ರಭುತ್ವವೇ ಅಂಬೇಡ್ಕರ್ ಅವರ ಆಶಯಗಳಿಗೆ ಮತ್ತು ಸಂವಿಧಾನದ ಮೌಲ್ಯಗಳಿಗೆ ತದ್ವಿರುದ್ಧವಾದ ಮನಸ್ಮೃತಿಯ ಜೀವ ವಿರೋಧಿ, ಪ್ರಜಾತಂತ್ರ ವಿರೋಧಿ ಬ್ರಾಹ್ಮಣೀಯ ವ್ಯಾಖ್ಯಾನ ಮತ್ತು ಮೌಲ್ಯಗಳನ್ನೂ ಅಳವಡಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸುಪ್ರೀಂನಲ್ಲಿ ಸ್ಥಾಪಿಸಲಾಗಿದೆ. ಏಕೆಂದರೆ ಸಂವಿಧಾನಕ್ಕಿಂತ ಮಿಗಿಲಾಗಿ ಮನುಸ್ಮೃತಿಯೇ ಭಾರತದ ನ್ಯಾಯಸಂಹಿತೆಯಾಗಬೇಕೆಂಬ ಆಶಯಗಳು ಸುಪ್ರೀಂನ ಹಲವಾರು ಪೀಠಾಧೀಶರು ಬಹಿರಂಗವಾಗಿಯೇ ಅಪ್ಪಣೆ ಕೊಡಿಸಲು ಪ್ರಾರಂಭಿಸಿದ್ದಾರೆ. ಇಂದಿನ ಆಡಳಿತರೂಢ ಮೋದಿ ಸರ್ಕಾರದ ಗುರುಮಠವಾದ ಆರೆಸ್ಸೆಸ್ 1949 ರ ನವಂಬರ್ ನಲ್ಲೇ ಈ ಸಂವಿಧಾನವನ್ನು ತಿರಸ್ಕರಿಸಿತ್ತು. ಮತ್ತು ಮನುಸ್ಮೃತಿಯೇ ಈ ದೇಶದ ಸಂವಿಧಾನವಾಗಬೇಕೆಂದು ಆಗ್ರಹಿಸಿತ್ತು. ಹಾಗೂ ಬಹಿರಂಗವಾಗಿಯಲ್ಲದಿದ್ದರೂ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಪ್ರಶ್ನೆಗಳ ತಗಾದೆಗಳು ಬಂದಾಗಲೆಲ್ಲಾ ಭಾರತದ ನ್ಯಾಯಾಂಗ ಆಗಾಗ ಅಪರೂಪದ ನ್ಯಾಯ ನಿರ್ಣಯಗಳನ್ನು ನೀಡಿದ್ದರೂ ಸಾಮಾನ್ಯವಾಗಿ ಮನುಸ್ಮೃತಿಯ ಮೌಲ್ಯಗಳನ್ನು ಸಂವಿಧಾನದ ಮೌಲ್ಯಗಳಿಗಿಂತ ಸಹಜ ನ್ಯಾಯಸಂಹಿತೆಯೆಂದು ಪರಿಗಣಿಸುತ್ತಾ ಬಂದಿವೆ.

ಈ ಸಂವಿಧಾನ ವಿರೋಧಿ ಧಾರೆ ಈ ಹಿಂದೆಯೂ ನ್ಯಾಯಾಂಗದೊಳಗೆ ಅಂತರ್ಗಾಮಿನಿಯಾಗಿ ಹರಿದುಬರುತ್ತಿದ್ದು ಈಗ ಬಹಿರಂಗವಾಗಿ ಹಾಗೂ ಮತ್ತಷ್ಟು ಧಾರ್ಷ್ಟ್ಯದಿಂದ ಕಾಣಿಸಿಕೊಳ್ಳುತ್ತಿದೆಯಷ್ಟೆ.
ಉದಾಹರಣೆಗೆ ನೋಡಿ.

ಅಂಬೇಡ್ಕರ್ ಪ್ರತಿಮೆಗೆ ೭೫ ವರ್ಷಗಳು- ಮನುವಿಗೆ ಕೇವಲ ೨೩ ದಿನಗಳು

ಸುಪ್ರೀಂನಲ್ಲಿ ಒಂಭತ್ತು ಅಡಿಯ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಯಾಗಲು ಸತತ 75 ವರ್ಷಗಳ ಆಗ್ರಹಗಳು, ಮನವಿಗಳು ಬೇಡಿಕೆಗಳು ಬೇಕಾದವು. ಆದರೆ ಇದಕ್ಕೆ 25 ವರ್ಷಗಳ ಮುಂಚೆಯೇ ರಾಜಾಸ್ಥಾನದ ಹೈಕೋರ್ಟಿನ ಜೈಪುರ ಪೀಠದ ಆವರಣದಲ್ಲಿ ಹನ್ನೊಂದು ಅಡಿಯ ಮನುವಿನ ಪ್ರತಿಮೆಯನ್ನು 1989 ರಲ್ಲೇ ಸ್ಥಾಪಿಸಲಾಯಿತು. EWS ಮೀಸಲಾತಿಯಂತೆ ಅದಕ್ಕೆ ಹೆಚ್ಚು ಸಮಯವೂ ಬೇಕಾಗಲಿಲ್ಲ.

1989 ರ ಫ಼ೆಬ್ರವರಿ 10 ರಂದು ರಾಜಾಸ್ಥಾನ ಉನ್ನತ ನ್ಯಾಯಾಂಗ ಅಧಿಕಾರಿಗಳ ಸಂಘದ ಅದ್ಯಕ್ಷ ಪದಮ್ ಕುಮಾರ್ ಜೈನ್ ಅವರು ಆಗಿನ ರಾಜಾಸ್ಥಾನದ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ನ್ಯಾ. ಕಸ್ಲಿವಾಲ್ ಅವರಿಗೆ ಕೋರ್ಟಿನ ಆವರಣವನ್ನು "ಸುಂದರೀಕರಿಸುವ ಯೋಜನೆ" ಯ ಭಾಗವಾಗಿ ನ್ಯಾಯಾಲಯದ ಆವರಣದಲ್ಲಿ ಮನುವಿನ ಪ್ರತಿಮೆ ಸ್ಥಾಪಿಸುವ ಪ್ರಸ್ತಾಪವನ್ನು ಮುಂದಿಡುತ್ತಾರೆ. ಸುಂದರೀಕರಣವೇ ಉದ್ದೇಶವಾಗಿದ್ದರೆ, ಅಂಬೇಡ್ಕರ್ ಪ್ರತಿಮೆಯೂ ಆಗಬಹುದು ಎಂದು ಈ ಜೈನ್ ಗೆ ಏಕೆ ಅನಿಸಲಿಲ್ಲ?

ಇರಲಿ, ಈ ಪ್ರಸ್ತಾಪ ಮುಂದಿಟ್ಟ 23 ದಿನಗಳಲ್ಲೇ, ಅಂದರೆ 1989 ರ ಮಾರ್ಚ್ 3ಕ್ಕೆ ಪ್ರಸ್ತಾಪಕ್ಕೆ ಅಂಗೀಕಾರ ದೊರೆಯಿತು. ಇದಕ್ಕೆ ಪ್ರತಿಯಾಗಿ ದಾದಾಸಾಹೇಬ್ ಗಾಯಕ್ ವಾಡ್ 1970 ರಲ್ಲೇ ಅಂಬೇಡ್ಕರ್ ಪ್ರತಿಮೆಯ ಪ್ರಸ್ತಾಪ ಮುಂದಿಟ್ಟಿದ್ದರೆ ಅದು ಸ್ಥಾಪನೆಯಾದದ್ದು 53 ವರ್ಷಗಳ ನಂತರ!

ಇದು ಕೇವಲ ಪ್ರತಿಮೆ ಸ್ಥಾಪನೆಗಳ ಕಾಲಾವಧಿಯ ನಡುವಿನ ಅಂತರವಲ್ಲ. ಇದು ಹಾಲಿ ಭಾರತದಲ್ಲಿ 'ಮನು'ವಿಗೂ ಮತ್ತು 'ಅಂಬೇಡ್ಕರ್‌'ಗೂ ಇರುವ ಅಂತರ.

ಅಂದಹಾಗೆ ಆಗ ರಾಜಾಸ್ಥಾನದ ಮುಖ್ಯಮಂತ್ರಿಯಾಗಿದ್ದದ್ದು ಕಾಂಗ್ರೆಸ್ಸಿನ ಶಿವ ಚರಣ ಮಾಥುರ್, ಪ್ರಧಾನಿಯಾಗಿದ್ದದ್ದು ರಾಜೀವ್ ಗಾಂಧಿ ಮತ್ತು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದದ್ದು ನ್ಯಾ. ಇ.ಎಸ್. ವೆಂಕಟರಾಮಯ್ಯ. ಆರೆಸ್ಸೆಸ್ಸಿನ ಸಂವಿಧಾನ ವಿರೋಧಿ ಅಜೆಂಡಾಗಳ ಭಾಗವಾಗಿದ್ದ ಈ ಕ್ರಮ ಇವರು ಯಾರಿಗೂ ಏಕೆ ಆಕ್ಷೇಪಣಾರ್ಹ ಎನಿಸಲಿಲ್ಲ?

ಭಾರತದ ಸಂವಿಧಾನಕ್ಕೆ ಮಾತ್ರವಲ್ಲ, ಈ ದೇಶದ ದಲಿತ- ಮಹಿಳಾ- ಶೂದ್ರ ಹಾಗೂ ದುಡಿಯುವ ಜನರ ಅಸ್ಮಿತೆ ಮತ್ತು ಮೌಲ್ಯಗಳಿಗೆ ಕಳಂಕದಂತಿದ್ದ ಈ ಪ್ರತಿಮೆ ಸ್ಥಾಪನೆಯ ವಿರುದ್ಧ ಎಚ್ಚೆತ್ತ ದಲಿತ ಸಮುದಾಯ ಇದರ ವಿರುದ್ಧ ನಿಧಾನವಾಗಿ ಪ್ರತಿರೋಧ ವ್ಯಕ್ತಪಡಿಸಲು ಪ್ರಾರಂಭಿಸಿತು. 1989 ರ ಜುಲೈ 28 ರಂದು ರಾಜಾಸ್ಥಾನ ಹೈಕೋರ್ಟಿನ ಪೂರ್ಣಪೀಠದ ಸಭೆ ಸರ್ವಾನುಮತದಿಂದ ಮನುವಿನ ಪ್ರತಿಮೆಯನ್ನು ತೆಗೆಯಬೇಕೆಂದು ತೀರ್ಮಾನಿಸಿತು.

ಆದರೆ ಕೂಡಲೇ ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಆಚಾರ್ಯ ಧರ್ಮೇಂದ್ರ ಹೈಕೋರ್ಟಿನ ಪೂರ್ಣ ಪೀಠದ ಈ ನಿರ್ಣಯದ ವಿರುದ್ಧವೇ ಒಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದರು. ಕೂಡಲೇ ಆ ಪಿಐಎಲ್ ಅನ್ನು ವಿಚಾರಣೆಗೆ ಅಂಗೀಕರಿಸಿದ ರಾಜಾಸ್ಥಾನ ಹೈಕೋರ್ಟು ಪೂರ್ಣ ಪೀಠದ ತೀರ್ಮಾನಕ್ಕೆ 1989 ರ ಆಗಸ್ಟಿನಲ್ಲೇ ತಡೆಯಾಜ್ನೆ ನೀಡಿದ್ದಲ್ಲದೇ ಇನ್ನುಮುಂದೆ ಈ ಪ್ರಕರಣದ ವಿಚಾರಣೆಯನ್ನು ರಾಜಾಸ್ಥಾನದ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ವಿಭಾಗೀಯ ಪೀಠ ಮಾತ್ರ ವಿಚಾರಣೆ ಮಾಡಬೇಕೆಂದು ಆದೇಶಿಸಿತು.

ಅಂದಿನಿಂದ ಆ ತಡೆಯಾಜ್ಞೆ ಮತ್ತು ಹೈಕೋರ್ಟಿನ ಆವರಣದಲ್ಲಿ ಮನುವಿನ ಪ್ರತಿಮೆ ಹಾಗೇ ಉಳಿದಿದೆ.

ಈ ಪ್ರಕರಣದ ಬಗ್ಗೆ ಇತ್ತೀಚೆಗೆ ರಾಜಾಸ್ಥಾನದ ಹೈಕೋರ್ಟಿನಲ್ಲಿ ವಿಚಾರಣೆ ನಡೆದದ್ದು 2015 ರಲ್ಲಿ. ಆಗ ರಾಜಾಸ್ಥಾನ ನ್ಯಾಯಾಲಯದ ಆವರಣದೊಳಗೆ 300ಕ್ಕೂ ಹೆಚ್ಚು ಬ್ರಾಹ್ಮಣ ಹಾಗೂ ಮೇಲ್ಜಾತಿ ವಕೀಲರು ಬೇರೆಬೇರೆ ಕೋರ್ಟುಗಳಿಂದ ಧಾವಿಸಿ ಬಂದಿದ್ದರು. ಮತ್ತು ಮನುಸ್ಮೃತಿಯಲ್ಲಿ ಇರುವ ದಲಿತ- ಶೂದ್ರ- ಮಹಿಳಾ ವಿರೋಧಿ ಶ್ಲೋಕಗಳನ್ನು ನ್ಯಾಯಾಧೀಶರ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದಂತೆ ಈ ಮೇಲ್ಜಾತಿ ವಕೀಲರು ನ್ಯಾಯಾಲಯದ ಆವರಣದೊಳಗೆ ಗಲಾಟೆ ಪ್ರಾರಂಭಿಸಿದರು ಮತ್ತು ಅಂದು ಮುಂದೂಡಲ್ಪಟ್ಟ ವಿಚಾರಣೆ ಈವರೆಗೆ ನಡೆದಿಲ್ಲ ಎಂದು ಆಗ ದಲಿತ ಸಂಘಟನೆಗಳ ಪರವಾಗಿ ವಾದಿಸಿದ ವಕೀಲ ಎ.ಕೆ. ಜೈನ್ ಹೇಳುತ್ತಾರೆ.

ಹೀಗಾಗಿ ಈ ಪ್ರಕರಣ ರಾಜಾಸ್ಥಾನದ ಇತಿಹಾಸದಲ್ಲೇ ಅತ್ಯಂತ ಹಳೆಯ ಪೆಂಡಿಂಗ್ ಪಿಐಎಲ್ ಆಗಿದೆ.

ಈ ನಡುವೆ ಹಲವು ದಲಿತ ಪರ ಸಂಘಟನೆಗಳು, ಬಿಎಸ್‌ಪಿ ನಾಯಕರು ಮನುವಿನ ಪ್ರತಿಮೆಯನ್ನು ತೆಗೆಯಬೇಕೆಂದು ಆಗ್ರಹಿಸುತ್ತ ಬಂದಿದ್ದಾರೆ. 2018 ರ ಅಕ್ಟೋಬರ್ 8 ರಂದು ಮಹಾರಾಷ್ಟ್ರದ ಔರಂಗಾಬಾದಿನ ಇಬ್ಬರು ಅಂಬೇಡ್ಕರ್ ವಾದಿ ಮಹಿಳಾ ಕಾರ್ಯಕರ್ತರು -ಶೀಲಾಬಾಯ್ ಪವಾರ್ ಮತ್ತು ಕಾಂತಾ ರಮೇಶ್ ಆಹಿರೆ - ಮನುವಿನ ಪ್ರತಿಮೆ ಗೆ ಕಪ್ಪು ಬಣ್ಣವನ್ನು ಸುರಿದು ಬಂಧನಕ್ಕೊಳಗಾಗಿದ್ದರು.

ರಾಜಾಸ್ಥಾನದಲ್ಲಿ ಪ್ರತಿ ಚುನಾವಣೆಗೊಮ್ಮೆ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಸರ್ಕಾರಗಳು ಬದಲಾಗುತ್ತವೆ. ಬಿಜೆಪಿ ಮತ್ತು ಆರೆಸ್ಸೆಸ್ ನಿಲುವು ಸಂವಿಧಾನ ವಿರೋಧಿ ಮತ್ತು ಮನುಸ್ಮೃತಿ ಪರ ಎಂಬುದು ಘೋಷಿತ ಸತ್ಯ.

ಆದರೆ 'ತಾನು ಸಂವಿಧಾನ ಪರ' ಎನ್ನುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಮನು ಪ್ರತಿಮೆಯನ್ನು ಏಕೆ ತೆಗೆಯಲಿಲ್ಲ?

ಇದಕೆ ಉತ್ತರ ಕಾಂಗ್ರೆಸ್ ನಾಯಕ ಮತ್ತು ಅದರ ಪ್ರಣಾಳಿಕೆ ರಚನೆ ಸಮಿತಿಯ ಮುಖ್ಯಸ್ಥ ಹಾಗೂ ರಾಜಸ್ಥಾನ ಹೈಕೋರ್ಟ್ ಬಾರ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ವಿಭೂತಿಶರಣ್ ಶರ್ಮಾ ಅವರ ಹೇಳಿಕೆಯಲ್ಲಿದೆ. ಅವರ ಪ್ರಕಾರ :

"ಮನುವಿನ ಪ್ರತಿಮೆ ಯಾವುದೇ ಜಾತಿಯ ಪರವಾಗಿರುವುದಲ್ಲ. ಜಗತ್ತಿನಲ್ಲಿ ಪ್ರಪ್ರಥಮವಾಗಿ ಲಿಖಿತ ಕಾನೂನು ರಚಿಸಿದ್ದು ಮನು. ಅದರಲ್ಲಿ ಏನಾದರೂ ಲೋಪದೋಷಗಳಿದ್ದರೆ ನಮ್ಮ ಸಂವಿಧಾನಕ್ಕೆ ತಿದ್ದುಪಡಿಗಳನ್ನು ತಂದಂತೆ ಅದಕ್ಕೂ ತಿದ್ದುಪಡಿಗಳನ್ನು ಮಾಡಬಹುದು. ಹೀಗಾಗಿ ಈ ಪ್ರತಿಮೆಯನ್ನು ಯಾವುದೇ ಜಾತಿಯ ಪ್ರತಿನಿಧಿ ಎಂದು ನೋಡಬಾರದು"

ಇದಕ್ಕೂ ಮನುಸ್ಮೃತಿ ಜಗತ್ತಿನ ಶ್ರೇಷ್ಠ ಸಂವಿಧಾನ ಎನ್ನುವ ಆರೆಸ್ಸೆಸ್ಸಿಗೂ ಏನು ವ್ಯತ್ಯಾಸ? ವ್ಯತ್ಯಾಸವಿದ್ದರೆ ಎಷ್ಟು? ಅದು ಅಂಬೇಡ್ಕರ್ ಅವರ ಆಶಯಗಳನ್ನು ಮತ್ತು ಸಂವಿಧಾನವನ್ನು ಉಳಿಸುವಷ್ಟೆ?

ಇನ್ನು ಈ ದೇಶದ ಸಂವಿಧಾನವನ್ನು ಉಳಿಸಬೇಕಾದ ಹೊಣೆ ಹೊತ್ತಿರುವ ಸುಪ್ರೀಂ ಕೋರ್ಟು ಈ ವಿಷಯದಲ್ಲಿ ಮಾಡಿದ್ದೇನು?

ಕಳೆದ ೨೫ ವರ್ಷಗಳಿಂದಲೂ ಮನು ಪ್ರತಿಮೆಯನ್ನು ತೆಗೆಯಬೇಕೆಂಬ ಮೊಕದ್ದಮೆ ರಾಜಾಸ್ಥಾನ ಹೈಕೋರ್ಟಿನಲ್ಲಿ ದುರುದ್ದೇಶಪೂರ್ವಕವಾಗಿ ನೆನೆಗುದಿಗೆ ಬಿದ್ದಿರುವುದರಿಂದ ಕೆಲವು ದಲಿತ ಕಾರ್ಯಕರ್ತರು ಮತ್ತು ಸಂಘಟನೆಗಳು ಸುಪ್ರೀಂ ಕೋರ್ಟಿನಲ್ಲಿ ಒಂದು ಪಿಐಎಲ್ ಅನ್ನು ದಾಖಲಿಸಿದವು.

ಆದರೆ 2023 ರ ಫ಼ೆಬ್ರವರಿ 24 ರಂದು ಸುಪ್ರೀಂನ ನ್ಯಾ. ಸಂಜೀವ್ ಖನ್ನಾ ಹಾಗೂ ನ್ಯಾ. ಸುಂದರೇಶ್ ಅವರ ವಿಭಾಗೀಯ ಪೀಠ:

"ಈ ರಿಟ್ ಪೆಟಿಷನ್ ಅನ್ನು ಸಂವಿಧಾನದ ಆರ್ಟಿಕಲ್ 32 ರಡಿ ಒಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿ ಪರಿಗಣಿಸುವುದಕ್ಕೆ ಯಾವುದೇ ಕಾರಣ ಅಥವಾ ಬುನಾದಿ ಕಂಡು ಬರುತ್ತಿಲ್ಲವಾದ್ದರಿಂದ, ಅಹವಾಲನ್ನು ವಜಾ ಮಾಡುತ್ತಿದ್ದೇವೆ"

ಎಂದು ತೀರ್ಪಿತ್ತು ಮನುವಿನ ಪ್ರತಿಮೆ ಮುಂದುವರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.

ಮನು ಮತ್ತು ಮನುಸ್ಮೃತಿ ಅನ್ಯಾಯ, ಸಾಮಾಜಿಕ ಅಸಮಾನತೆ, ಜಾತಿ ಕ್ರೌರ್ಯ ಮತ್ತು ಪುರುಷ ಕ್ರೌರ್ಯದ ಪ್ರತಿಪಾದಕರು. ಅಂಬೇಡ್ಕರ್ ಮತು ಸಂವಿಧಾನ ಸಮತೆ, ಮಮತೆ, ಸಾಮಾಜಿಕ-ಆರ್ಥಿಕ ನ್ಯಾಯ ಮತ್ತು ಭ್ರಾತೃತ್ವದ ಪ್ರತಿಪಾದಕರು.

ಎರಡೂ ಹೇಗೆ ಸಹಬಾಳ್ವೆ ಮಾಡಲು ಸಾಧ್ಯ? ಎರಡೂ ಹೇಗೆ ಸಂವಿಧಾನದ ಅದರಲ್ಲೂ ಅದನ್ನು ರಕ್ಷಿಸಬೇಕಾದ ಭಾರತದ ನ್ಯಾಯಾಂಗದ ಸಂಕೇತವಾಗಲು ಸಾಧ್ಯ?

ಸಾಧ್ಯವಿಲ್ಲ. ಆದರೆ ಹಿಂದೂತ್ವ ಫ಼್ಯಾಸಿಸ್ಟರು ಪ್ರಜಾತಂತ್ರ ಮತ್ತು ಸಂವಿಧಾನವನ್ನೇ ಮನುಸ್ಮೃತಿಗೆ ತಕ್ಕಂತೆ ಪುನರ್ ವ್ಯಾಖ್ಯಾನ ಮಾಡಿ ಮನುಸ್ಮೃತಿಯನ್ನು ಹಿಂಬಾಗಿಲಿಂದ ತರುತ್ತಿದ್ದಾರೆ. ಹಾಗೂ ಅಂಬೇಡ್ಕರ್ ಆಶಯಗಳನ್ನು ಕೊಂದು ಅವರ ಪ್ರತಿಮೆಯನ್ನು ಮಾತ್ರ ಎಲ್ಲೆಡೆ ಸ್ಥಾಪಿಸುತ್ತಿದ್ದಾರೆ.

ಸಂವಿಧಾನದ ಮೌಲ್ಯಗಳನ್ನು ಅತ್ಮವನ್ನು ಕೊಂದು ಅದರ ಕಳೇಬರವನ್ನು ಮಾತ್ರ ಉಳಿಸಿಕೊಂಡು ಅದರ ಜಾಗದಲ್ಲಿ ಮನುಸ್ಮೃತಿಯನ್ನು ಸ್ಥಾಪಿಸಲು ಹಲವಾರು ತಂತ್ರ ಕುತಂತ್ರಗಳನ್ನು ಮಾಡುತ್ತಿದ್ದಾರೆ.

ಸಂವಿಧಾನ ದಿನವೋ? ವೇದಗಳ ದಿನವೋ?

ಅದರಲ್ಲಿ ಅವರ ಇತ್ತೀಚಿನ ಕುತಂತ್ರ ಹೋದವರ್ಷ ನ. 26 ರ ಸಂವಿಧಾನ ಸಮರ್ಪಣಾ ದಿನವನ್ನು ಭಾರತ- ಲೋಕತಂತ್ರದ ಜನನಿ ಎಂಬ ವಿಷಯದ ಸುತ್ತಾ ಆಚರಿಸಬೇಕೆಂದು ಮೋದಿ ಸರ್ಕಾರ ಹೊರಡಿಸಿದ್ದ ಸುತ್ತೋಲೆ. ಹೋದ ವರ್ಷ ಈ ಆದೇಶದ ಜೊತೆಗೆ ಐಸಿಎಚ್‌ಆರ್ (ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತು) ನ ಒಂದು ಪರಿಕಲ್ಪನಾತ್ಮಕ ಟಿಪ್ಪಣಿಯನ್ನು ನೀಡಲಾಗಿತ್ತು.
ಅದರ ಪ್ರಕಾರ:

ಅ)ವೇದಗಳ ಕಾಲದಿಂದಲೂ ಭಾರತದಲ್ಲಿ ಪ್ರಜಾತಂತ್ರ- ಜನತಂತ್ರ- ಲೋಕತಂತ್ರ ಜಾರಿಯಲ್ಲಿತ್ತು ಎಂದು ಹೇಳುತ್ತಾ ವೇದಕಾಲೀನ ಶೋಷಕ ವರ್ಣಾಶ್ರಮ ಪದ್ಧತಿ ಹಾಗೂ ಜಾತಿ ವ್ಯವಸ್ಥೆಗಳನ್ನು ಭಾರತದ ಪ್ರಜಾತಂತ್ರದ ರೂಪದ ಎಂದು ಬಣ್ಣಿಸುವುದು.

ಆ) ಲೋಕತಂತ್ರ ದ ಪರಿಕಲ್ಪನೆಯನ್ನು ಜಗತ್ತಿಗೆ ಕೊಟ್ಟಿದ್ದೇ ಭಾರತ ಎಂದು ಸುಳ್ಳು ಹಿರಿಮೆಯನ್ನು ಬೋಧಿಸುವುದು

ಇ) ಮತ್ತು ಭಾರತದ ಖಾಪ್ ಪಂಚಾಯತಿ ಅರ್ಥಾತ್ ಜಾತಿ ಪಂಚಾಯತಿಗಳು ಎಂದು ಅದರ ಪ್ರಸ್ತುತತೆಯನ್ನು ಎತ್ತಿ ಹಿಡಿಯುವುದು

ಈ) ಹಾಗೂ, ಈ ಜಾತಿ ಪ್ರಜಾತಂತ್ರಾ ಮೂಲಕವೇ ಹಿಂದೂ ಭಾರತ 2000 ವರ್ಷಗಳ ಪರಕೀಯರ ದಾಳಿಯನ್ನು ಹಿಮ್ಮೆಟ್ಟಿಸಿತು ಎಂದು ಪ್ರತಿಪಾದಿಸುತ್ತಾ ಭಾರತವೆಂದರೆ ಹಿಂದೂ ಹಾಗೂ 2000 ವರ್ಷಗಳ ಹಿಂದೆ ಬಂದ ಅರ್ಯರು ಪರಕೀಯರಲ್ಲ ಈ ದೇಶದ ಮೂಲನಿವಾಸಿಗಳು ಎಂದು ಪರೋಕ್ಷವಾಗಿ ಬಿತ್ತುವುದು.

ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಇವೆಲ್ಲವೂ ಸಂಘಪರಿವಾರ ಮತ್ತದರ ಅಂಗಸಂಸ್ಥೆಗಳು ಮಾಡಿಕೊಂಡು ಬರುತ್ತಿರುವ ಅಪಪ್ರಚಾರ. ಸಂವಿಧಾನ ಸಮರ್ಪಣಾ ದಿನವನ್ನು ಕೂಡ ಹಿಂದೂತ್ವ ಪ್ರಚಾರಕ್ಕೆ ಅಧಿಕೃತವಾಗಿ ಬಳಸಿಕೊಳ್ಳುತ್ತಾ ಆರೆಸ್ಸೆಸ್ ಅಪಪ್ರಚಾರಕ್ಕೆ ಅಧಿಕೃತ ಮಾನ್ಯತೆ ಗಳಿಸಿಕೊಡುವುದು ಇದರ ಅಸಲಿ ಉದ್ದೇಶವಾಗಿತ್ತು.

ಹಾಗೆ ನೋಡಿದರೆ ಪ್ರಾಚೀನ ಭಾರತದಲ್ಲಿ ಪ್ರಜಾಪ್ರಭುತ್ವ ಇರಲಿಲ್ಲ ಎಂದೇನಲ್ಲ. ಆದರೆ ಅದು ಇದ್ದದ್ದು ವೇದಕಾಲದಲ್ಲ. ಬೌದ್ಧ ಭಾರತದಲ್ಲಿ. 1949 ರ ನವಂಬರ್ 25 ರಂದು ಸಂವಿಧಾನವನ್ನು ಸಮರ್ಪಿಸುತ್ತಾ ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ಮಾಡಿದ ಕೊನೆ ಭಾಷಣದಲ್ಲಿ ಕೂಡ ಹೇಗೆ ಪ್ರಾಚೀನ ಭಾರತದಲ್ಲಿ ಅದರಲ್ಲೂ ಬೌದ್ಧ ಸಂಘಗಳಲ್ಲಿ ಸಂಸದೀಯ ಪ್ರಜಾತಂತ್ರದ ಹಲವಾರು ರೀತಿ ರಿವಾಜುಗಳನ್ನು ಅನುಸರಿಸುತ್ತಿದ್ದರು ಎಂದು ವಿವರಿಸುತ್ತಾರೆ. ಇದರ ಬಗ್ಗೆ ಎಲ್ಲಾ ಭಾರತೀಯರಿಗೂ ಸಹಜವಾಗಿ ಹೆಮ್ಮೆ ಇರಬೇಕು.

ಆದರೆ ಮೋದಿ ಸರ್ಕಾರ ಹೊರಡಿಸಿರುವ "ಪ್ರಜಾತಂತ್ರದ ಜನನಿ" ಟಿಪ್ಪಣಿಯಲ್ಲಿ ಬೌದ್ಧ ಭಾರತದ ಬಗ್ಗೆ ಉಲ್ಲೇಖವೇ ಇರಲಿಲ್ಲ.

ಅದೇ ಭಾಷಣದಲ್ಲಿ ಅಂಬೇಡ್ಕರ್ ಅವರು ಭಾರತದ ಆ ಪ್ರಾಚೀನ ಪ್ರಜಾತಂತ್ರವನ್ನು ಕಳೆದುಕೊಂಡ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ. ಮತ್ತು ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ ಎಂಬ ಕೃತಿಯಲ್ಲಿ ಹೇಗೆ ಬ್ರಾಹ್ಮಣ್ಯದ ದಿಗ್ವಿಜಯದ ಮೂಲಕ ಬೌದ್ಧ ಪ್ರಜಾತಂತ್ರ ಅವಸಾನವಾಯಿತು ಎಂಬುದನ್ನು ವಿವರಿಸುತ್ತಾರೆ. ಸಮತೆ , ಮಮತೆ ಯ ಆಧಾರದಲ್ಲಿ ಬೌದ್ಧ ಭಾರತ ಕಟ್ಟಬಯಸಿದ ಭಾರತೀಯ ಸಮಾಜ ರಚನೆಯನ್ನು ನಾಶ ಮಾಡಿ, ಅದರ ಜಾಗದಲ್ಲಿ ವೇದ, ಪುರಾಣ, ಮನುಸ್ಮೃತಿಗಳನ್ನು ಆಧರಿಸಿದ ಜಾತಿ ವ್ಯವಸ್ಥೆಯನ್ನು ಜಾರಿ ಮಾಡಿ ಈ ದೇಶದ ದಲಿತರು, ಶೂದ್ರರು ಮತ್ತು ಮಹಿಳೆಯರು ಸಾವಿರಾರು ವರ್ಷಗಳ ಗುಲಾಮಗಿರಿಗೆ ಈಡಾಗುವಂತೆ ಮಾಡಿದರು ಎಂದು ಅಂಬೇಡ್ಕರ್ ವಿವರಿಸುತ್ತಾರೆ. ವೈಚಾರಿಕತೆ ಮತ್ತಿ ನೈತಿಕತೆಯನ್ನು ನಾಶಮಾಡುವ ವೇದ-ಶಾಸ್ತ್ರ-ಪುರಾಣಗಳ ದಾಳಿಯಿಂದಾಗಿಯೇ ಬೌದ್ಧ ಪ್ರಜಾತಂತ್ರ ಅವನತಿಗೊಂಡಿತು ಎಂದು ಅಂಬೇಡ್ಕರ್ ಪ್ರತಿಪಾದಿಸುತ್ತಾರೆ. ಮತ್ತು ಈ ದೇಶ ಒಂದು ದೇಶವಾಗಬೇಕೆಂದರೆ, ಹಿಂದೂ ಧರ್ಮ ನಿಜವಾದ ಅರ್ಥದಲ್ಲಿ ಒಂದು ಧರ್ಮವಾಗಬೇಕಾದರೆ, ಒಬ್ಬ ಹಿಂದೂ ಜಾತಿ ಕಲ್ಮಷವಿರದ ಸಹಜ ಮನುಷ್ಯನಾಗಬೇಕೆಂದರೆ ವೇದ-ಪುರಾಣಗಳನ್ನು ಮತ್ತು ಮನುಸ್ಮೃತಿಯನ್ನು ಡೈನಮೈಟ್ ಇಟ್ಟು ಉಡಾಯಿಸಬೇಕೆಂದು ಅವರ ಜಾತಿ ವಿನಾಶ ಕೃತಿಯಲ್ಲಿ ಕರೆ ನೀಡುತ್ತಾರೆ.

ಅಂಥ ಮನುಸ್ಮೃತಿಯನ್ನು ಡೈನಮೈಟ್ ಇಟ್ಟು ಊಡಾಯಿಸುವುದಿರಲಿ, ಅದರ ಪ್ರತಿಮೆ ನ್ಯಾಯಾಲಯದ ಆವರಣದಲ್ಲಿ ಸ್ಥಾಪನೆಯಾಗುತ್ತದೆ. ಪಕ್ಷಗಳಿಗಾಗಲೀ, ಉನ್ನತ ನ್ಯಾಯಾಲಯಗಳಿಗಾಗಲೀ ಅದರಲ್ಲಿ ಯಾವುದೇ ವಿರೋಧಾಭಾಸ ಕಾಣುವುದಿಲ್ಲ!

ಹೀಗೆ ಯಾವ ವೇದ- ಪುರಾಣ- ಮನುಸ್ಮೃತಿಗಳು ಈ ದೇಶದಲ್ಲಿದ್ದ ಪ್ರಜಾತಂತ್ರದ ನಾಶಕ್ಕೆ ಕಾರಣವಾಗಿ ಅತ್ಯಂತ ಅಪ್ರಜಾತಾಂತ್ರಿಕ, ಅಮಾನವೀಯ, ಕ್ರೂರ ಜಾತಿ ವ್ಯವಸ್ಥೆಗೆ ಕಾರಣವಾಯಿತೋ ಅದನ್ನೇ ಈ ದೇಶದ ಪ್ರಜಾತಂತ್ರವೆಂದು ಮೋದಿ ಸರ್ಕಾರ ಅಚರಿಸುತ್ತಿದೆ.

ಹಾಗೆ ನೋಡಿದರೆ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಆಧರಿಸಿದ ಭಾರತದ ಸಂವಿಧಾನವನ್ನು ಆರೆಸ್ಸೆಸ್ ಮತ್ತದರ ಅಂಗಸಂಸ್ಥೆಗಳು ಮೊದಲಿಂದಲೂ ತಿರಸ್ಕರಿಸುತ್ತಲೇ ಬಂದಿವೆ. ಸಂವಿಧಾನ ಸಮರ್ಪಣೆಯಾದ ಮರುವಾರವೇ 1949 ನವಂಬರ್ 30 ರಂದು ಆರೆಸ್ಸೆಸ್ ತನ್ನ ಮುಖವಾಣಿ ಆರ್ಗನೈಸರ್ ಪತ್ರಿಕೆಯಲ್ಲಿ ಬರೆದುಕೊಂಡ ಸಂಪಾದಕೀಯದಲ್ಲಿ ಭಾರತದ ಸಂವಿಧಾನದಲ್ಲಿ ಭಾರತೀಯವಾದದ್ದು ಏನೂ ಇಲ್ಲವೆಂದೂ, ಇಡೀ ಜಗತ್ತೇ ಮಾನ್ಯ ಮಾಡುವ ಮನುಸ್ಮೃತಿ ಮಾತ್ರ ಈ ದೇಶದ ನಿಜವಾದ ಸಂವಿಧಾನವೆಂದು ಘೋಷಿಸಿತ್ತು. ಆರೆಸ್ಸೆಸ್ಸಿನ ಪಿತಾಮಹರಾದ ಸಾವರ್ಕರ್ ಅವರಂತೂ ಮನುಸ್ಮೃತಿಯು ವಿಶ್ವಮಾನ್ಯ ಸಾಮಾಜಿಕ ಕಟ್ಟಳೆಯೆಂದು , ಭಾರತೀಯರು ತಮ್ಮ ಜೀವನದಲ್ಲಿ ಯಾವತ್ತಿಗೂ ಅದನ್ನೇ ಅನುಸರಿಸುತ್ತಾರೆಂದು ಘೋಷಿಸಿದ್ದರು.

ಸಾವರ್ಕರ್‌ವಾದಿ ಭಾರತದ ಕಲ್ಪನೆಯನ್ನು ಭಾರತ ಸ್ವಾತಂತ್ರ್ಯ ಹೋರಾಟ ಸೋಲಿಸಿ ಸಮತೆ ಮತ್ತು ಮಮತೆಯ ಭಾರತವನ್ನು ಕಟ್ಟಲು ಮುಂದಾಗಿತ್ತು. ಆದರೆ ಸಾವರ್ಕರ್ ವಾದಿಗಳು ಸೋತರೂ ಸುಮ್ಮನಾಗಲಿಲ್ಲ. ಸತತವಾಗಿ ನೂರು ವರ್ಷಗಳಿಂದಲೂ ತಮ್ಮ ಅಜೆಂಡಾವನ್ನು ದೇಶದ ಜನತೆಯಲ್ಲಿ ತುಂಬುತ್ತಾ ಬಂದರು. ಮತ್ತು ಅದರಲ್ಲಿ ನಿಧಾನವಾಗಿ ಯಶಸ್ವಿಯಾಗುತ್ತಾ ಹೋದರು. ಅವರ ಯಶಸ್ಸಿಗೆ ಸಂವಿಧಾನವಾದಿ, ಸಮತಾವಾದಿಗಳ ವೈಫ಼ಲ್ಯವೂ ಒಂದು ಕಾರಣ ಎಂಬುದನ್ನು ನೆನಪಿಡಲೇ ಬೇಕು.
ಅದರಲ್ಲೊ ಬಹುಮತದೊಂದಿಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತದ ಎಲ್ಲಾ ಸಂಸ್ಥೆಗಳ ಅದರಲ್ಲೂ ನ್ಯಾಯಾಂಗದ ಕೆಸರೀಕರಣ ವೇಗವಾಗಿ ಸಾಗುತ್ತಿದೆ.

ಸಂವಿಧಾನಕ್ಕಿಂತ ಸುಪ್ರೀಂ ಸನಾತನ!

ಈ ದೇಶದ ಪ್ರಖ್ಯಾತ ಸಂವಿಧಾನಿಕ ಪರಿಣಿತರು ಮತ್ತು ಹಲವಾರು ಪ್ರತಿಷ್ಟಿತ ಲಾ ಸ್ಕೂಲುಗಳ ಉಪಕುಲಪತಿಗಳು ಮತ್ತು ಸುಪ್ರೀಂ ಕೋರ್ಟಿನ ಹಿರಿಯ ಸಮಾಲೋಚಕರೂ ಆಗಿರುವ ಡಾ. ಮೋಹನ್ ಗೋಪಾಲ್ ಅವರು ಮೋದಿ ಕಾಲದ ನ್ಯಾಯಾಂಗ ಅದರಲ್ಲೊ ಸುಪ್ರೀಂ ಕೋರ್ಟಿನ ಪರಿವರ್ತನೆಗಳ ಬಗ್ಗೆ ಮಾಡಿರುವ ಅಧ್ಯಯನಗಳು ಈ ದೇಶದ ಭವಿಷ್ಯದ ಬಗ್ಗೆ ಆತಂಕ ಹುಟ್ಟಿಸುತ್ತವೆ.

ಡಾ. ಮೋಹನ್ ಗೋಪಾಲ್ ಅವರು 2004-14 ರ ಅವಧಿಯಲ್ಲಿ ಯುಪಿಎ ಸರ್ಕಾರ ನೇಮಿಸಿದ 56 ಉನ್ನತ ನ್ಯಾಯಾಧೀಶರುಗಳು ಮತ್ತು 2014-22ರ ಅವಧಿಯಲ್ಲಿ ಮೋದಿ ಸರ್ಕಾರ ನೇಮಿಸಿದ 55 ಉನ್ನತ ನ್ಯಾಯಾಧೀಶರುಗಳು ಮತ್ತು ಅವರುಗಳು ಸಾಂವಿಧಾನಿಕ ವಿಷಯದಲ್ಲಿ ಕೊಟ್ಟಿರುವ ತೀರ್ಪುಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಕೆಳಗಿನ ತೀರ್ಮಾನಗಳನ್ನು ಮಾಡುತ್ತಾರೆ.

- ಮೋದಿ ಸರ್ಕಾರದಲ್ಲಿ ನೇಮಿಸಲಾದ ಒಂಭತ್ತಕ್ಕೂ ಹೆಚ್ಚು ನ್ಯಾಯಾಧೀಶರು ಸಂವಿಧಾನಕ್ಕಿಂತ ಸನಾತನ ಧರ್ಮವನ್ನು ಈ ದೇಶದ ಕಾನೂನಿನ ಜನನಿಯೆಂದು ಭಾವಿಸುತ್ತಾರೆ.

- ಹಾಗೂ ತಮ್ಮ ನ್ಯಾಯಾದೇಶಗಳಲ್ಲಿ ಸನಾತನ ಧರ್ಮವನ್ನು ಸಂವಿಧಾನಕ್ಕಿಂತ ಮೇಲೆಂದು ಉಲ್ಲೇಖಿಸುತ್ತಲೇ ತಮ್ಮ ಆದೇಶಗಳನ್ನು ನೀಡುತ್ತಿದ್ದಾರೆ.

- ಆ ನ್ಯಾಯಾಧೀಶರು ಸಂವಿಧಾನದಲ್ಲಿ ಉಲ್ಲೇಖಿತವಾಗಿರುವ ಸೆಕ್ಯುಲಾರಿಸಂ ನ ಅರ್ಥ ಧರ್ಮ ನಿರಪೇಕ್ಷ ಅಲ್ಲ. ಮತ/ಪಂಥ ನಿರಪೇಕ್ಷ ಎಂದು ಅದರ ಅರ್ಥ. ಹಿಂದೂ ಧರ್ಮ ಮತ್ತು ಸನಾತನ ಧರ್ಮ ಮತವೂ ಅಲ್ಲ. ಪಂಥವೂ ಅಲ್ಲ. ಅದು ಧರ್ಮ. ಹೀಗಾಗಿ ಅದನ್ನು ಸಾರ್ವಜನಿಕ ಬದುಕಿನಲ್ಲಿ ಮತ್ತು ಸರ್ಕಾರಗಳು ಅನುಸರಿಸುವುದು ಸೆಕ್ಯುಲಾರಿಸಂ ಗೆ ವಿರುದ್ಧವಲ್ಲ. ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಉದಾಹರಣೆಗೆ ಇತ್ತೀಚೆಗೆ ಹಿಜಾಬ್ ವಿಚಾರದಲ್ಲಿ ಸುಪ್ರೀಂ ನ ನ್ಯಾಯಾಧೀಶರೊಬ್ಬರು ಹಿಜಾಬ್ ಎಂಬುದು ಮತಾಚರಣೆ ಆದರೆ ಶಾಲೆಗಳಲ್ಲೂ ಹೋಮ ಹವನಗಳು ಧರ್ಮಾಚರಣೆ ಅದರಲ್ಲಿ ತಪ್ಪಿಲ್ಲ ಎಂದು ಅಭಿಪ್ರಾಯಿಸಿದ್ದನ್ನು ಉದಾಹರಣೆಯಾಗಿ ನೀಡುತ್ತಾರೆ.

- ಹಾಗೆಯೇ ಕೊಲೆಜಿಯಂ ಪದ್ಧತಿಯ ಮೇಲೆ ಮತ್ತು ಸಂವಿಧಾನದ ಮೂಲ ರಚನೆಯ ಸಿದ್ಧಾಂತದ ಮೇಲೆ ಬಹಿರಂಗವಾಗಿಯೇ ದಾಳಿ ಮಾಡುತ್ತಾ, ಮತ್ತೊಂದು ಕಡೆ ಇಡೀ ಉನ್ನತ ನ್ಯಾಯಾಲಯಗಳಲ್ಲಿ ಹಿಂದೂತ್ವವಾದಿ ನ್ಯಾಯಾಧೀಶರುಗಳನ್ನು ನೇಮಕ ಮಾಡುತ್ತಾ ಮುಂದಿನ ಒಂದು ದಶಕದಲ್ಲಿ ಅಧಿಕೃತವಾಗಿಯೇ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೊಷಿಸುವ ಯೋಜನೆಯನ್ನು ಮಾಡುತ್ತಿದ್ದಾರೆಂದು ಎಚ್ಚರಿಸುತ್ತಾರೆ.

ಹೀಗಾಗಿ ಆಲಯದಲ್ಲೂ, ನ್ಯಾಯಾಲಯದಲ್ಲೂ, ಸಂಸತ್ತಿನಲ್ಲೂ, ಜನಮಾನಸದಲ್ಲೂ ಮನುವನ್ನು ಸ್ಥಾಪಿಸುತ್ತಾ, ಸುಪ್ರೀಂನ ಅವರಣದಲ್ಲಿ ಮಾತ್ರ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸುವುದು ಅಂಬೇಡ್ಕರ್ ಕೊಟ್ಟ ಮನ್ನಣೆಯೆಂದು ಭಾವಿಸಬಹುದೇ?

ಬರಹ: ಶಿವಸುಂದರ್ (ಲೇಖಕರು ಹಿರಿಯ ಅಂಕಣಕಾರರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)

ಕೃಪೆ: ವಾರ್ತಾಭಾರತಿ

Advertisement
Advertisement
Recent Posts
Advertisement