Advertisement

ಅಯೋದ್ಯೆ- ಬೀಗ ತೆಗೆಸಿದ್ದು ರಾಜೀವ್ ಅಲ್ಲ, ಅರುಣ್ ನೆಹರೂ: ಮಣಿಶಂಕರ್ ಅಯ್ಯರ್

Advertisement

ಅಯೋದ್ಯೆಯ ವಿವಾದಿತ ಕಟ್ಟಡದ ದ್ವಾರಗಳ ಬೀಗ ತೆರವಿಗೆ ಅರುಣ್ ನೆಹರೂ ಕಾರಣವೇ ಹೊರತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ಆ ಘಟನೆಯ ಹಿಂದೆ ಇದ್ದದ್ದು ‘‘ಬಿಜೆಪಿಯ ಪ್ರತಿನಿಧಿ" ಯಾಗಿ ಕಾಂಗ್ರೆಸ್ ನೊಳಗಿದ್ದ ಅರುಣ್ ನೆಹರೂ ಎಂದು ಅವರು ವಿವರಿಸಿದ್ದಾರೆ.

‘‘ರಾಜೀವ್ ಗಾಂಧಿ ಅಂದು ಎಲ್ಟಿಟಿಈ ಉಗ್ರರ ಬಾಂಬ್ ದಾಳಿಗೆ ಸಿಲುಕಿ ಸಾಯದೇ ಬದುಕಿರುತ್ತಿದ್ದರೆ ಮತ್ತು ಆ ನಂತರದಲ್ಲಿ ಪಿ.ವಿ. ನರಸಿಂಹ ರಾವ್ ಬದಲಿಗೆ ರಾಜೀವ್ ಪ್ರಧಾನಿಯಾಗಿದ್ದರೆ, 1992ರ ದುರ್ಘಟನೆ ನಡೆಯುತ್ತಿರಲಿಲ್ಲ. ಬಿಜೆಪಿಯ ಕೋಮುವಾದಿ ರಾಜಕೀಯಕ್ಕೆ ಸೂಕ್ತ ಪ್ರತ್ಯುತ್ತರ ನೀಡಲಾಗುತ್ತಿತ್ತು ಮತ್ತು ಕೆಲವು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ನೀಡಿರುವಂಥದೇ ಪರಿಹಾರವೊಂದನ್ನು ಅವರು ಕಂಡುಹಿಡಿಯುತ್ತಿದ್ದರು’’ ಎಂದು ಅಯ್ಯರ್ ಪ್ರತಿಪಾದಿಸಿದ್ದಾರೆ.

2024 ಜನವರಿ 19ರಂದು ನಡೆದ ತನ್ನ ಪುಸ್ತಕ ‘THE RAJIV I KNEW And Why He Was India's Most Misunderstood Prime minister' (ದಿ ರಾಜೀವ್ ಐ ನಿವ್ ಆ್ಯಂಡ್ ವೈ ಹೀ ವಾಸ್ ಇಂಡಿಯಾಸ್ ಮೋಸ್ಟ್ ಮಿಸ್ ಅಂಡರ್ಸ್ಟುಡ್ ಪ್ರೈಮ್ ಮಿನಿಸ್ಟರ್) ನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಪ್ರಖ್ಯಾತ Juggernaut ಸಂಸ್ಥೆಯು ಪುಸ್ತಕವನ್ನು ಪ್ರಕಟಿಸಿದೆ.

ದೇಶದ ಸಾಮರಸ್ಯ, ಸೌಹಾರ್ಧತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ "ಮಸೀದಿಯನ್ನು ಉಳಿಸಿಕೊಂಡು ದೇವಸ್ಥಾನವನ್ನು ಕಟ್ಟಿ ಎಂದು ರಾಜೀವ್ ಗಾಂಧಿ ಪ್ರಧಾನಿಯಾಗಿ ಪ್ರತಿಪಾದಿಸಿದ್ದರು. ಆದರೆ ಆ ನಂತರ ಸುಪ್ರೀಂ ಕೋರ್ಟ್ ಕೂಡ ದೇವಸ್ಥಾನ ಕಟ್ಟಿ ಹಾಗೂ ಮಸೀದಿಯನ್ನು ಬೇರೆ ಜಾಗದಲ್ಲಿ ಕಟ್ಟಿ ಎಂದು ಹೇಳಿದೆ. ಒಂದು ರೀತಿಯಲ್ಲಿ, ಸುಪ್ರೀಂ ಕೋರ್ಟ್ ನೀಡಿದ ಪರಿಹಾರವನ್ನೇ ಹೋಲುವ ಪರಿಹಾರವೊಂದಕ್ಕೆ ರಾಜೀವ್ ಗಾಂಧಿ ಅಂದೇ ಬಂದಿದ್ದರು’’ ಎಂದು ಹಿರಿಯ ಪತ್ರಕರ್ತ ವೀರ್ ಸಾಂಘ್ವಿಯೊಂದಿಗೆ ನಡೆಸಿದ ಮುಕ್ತ ಮಾತುಕತೆಯ ವೇಳೆ ರಾಜೀವ್ ನಿಕಟವರ್ತಿ ಅಯ್ಯರ್ ವಿವರಿಸಿದ್ದಾರೆ.

‘ರಾಜೀವ್‌ ಅರಿವಿಗೆ ಬಾರದಂತೆ ಅರುಣ್ ನೆಹ್ರೂ ಕಾರ್ಯಾಚರಣೆ!’

1986ರಲ್ಲಿ ಅಯೋದ್ಯೆಯ ವಿವಾದಿತ ಕಟ್ಟಡದ ದ್ವಾರಕ್ಕೆ ಹಾಕಲಾಗಿದ್ದ ಬೀಗವನ್ನು ಯಾರು ತೆರೆದರು ಎಂಬ ಸಾಂಘ್ವಿಯವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಯ್ಯರ್, ಬೀಗವನ್ನು ತೆಗೆದ ಘಟನೆಯ ಹಿಂದೆ ಇದ್ದವರು ಅರುಣ್ ನೆಹ್ರೂ ಎಂದು ಹೇಳಿದ್ದಾರೆ. ‘‘ಅರುಣ್ ನೆಹ್ರೂ ಲಕ್ನೋ ಶಾಲೆಯಲ್ಲಿ ಕಲಿತವರು. ಹಾಗಾಗಿ, ಆಗ ಸ್ಥಳೀಯ ವಿಷಯವಾಗಿದ್ದ ರಾಮ ಜನ್ಮಭೂಮಿಯು ಅವರ ಮನಸ್ಸಿನಲ್ಲಿ ಇತ್ತು. ಹಾಗಾಗಿ, ಅವರು ಪಕ್ಷದಲ್ಲಿರುವ ತನ್ನ ಅಧಿಕಾರವನ್ನು ಬಳಸಿಕೊಂಡು ಅಪರಿಚಿತರಾಗಿದ್ದ ವೀರ್ ಬಹಾದುರ್ ಸಿಂಗ್ ಎಂಬುವರನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಮಾಡಿದ್ದರು. ಮುಖ್ಯಮಂತ್ರಿಯಾಗಿ ಸಿಂಗ್ ಅವರು ಮಾಡಿದ್ದ ಮೊದಲ ಕೆಲಸವೆಂದರೆ, ಅಯೋಧ್ಯೆಗೆ ಹೋಗಿ ವಿಶ್ವ ಹಿಂದೂ ಪರಿಷತ್ ನ ದೇವಕಿ ನಂದನ ಅಗರ್ವಾಲ್ ಮತ್ತು ಇತರರನ್ನು ಭೇಟಿ ಮಾಡಿದ್ದು ಮತ್ತು ಬಾಬರಿ ಮಸೀದಿಯ ದ್ವಾರಕ್ಕೆ ನ್ಯಾಯಾಲಯದ ಆದೇಶದಂತೆ ಬೀಗ ಹಾಕಲಾಗಿಲ್ಲ, ಸರಕಾರದ ಆದೇಶದಂತೆ ಬೀಗ ಹಾಕಲಾಗಿದೆ ಎಂಬ ಮನವಿಯೊಂದನ್ನು ಅವರಿಂದ ಮುಖ್ಯಮಂತ್ರಿ ಪಡೆದುಕೊಂಡರು.

ಆ ನಂತರದಲ್ಲಿ, ಈ ಕುರಿತಾದ ವಿಚಾರವು 1986 ಫೆಬ್ರವರಿ 1ರಂದು ಫೈಝಾಬಾದ್ ಜಿಲ್ಲಾ ಸೆಶನ್ಸ್ ನ್ಯಾಯಾಧೀಶರ ಮುಂದೆ ತನಿಖೆಗೆ ಬಂದಾಗ "ಸಾರ್ವಜನಿಕ ಶಾಂತಿ ಹಾಗೂ ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡಲು ದ್ವಾರಕ್ಕೆ ಬೀಗ ಹಾಕುವುದು ಅಗತ್ಯವಲ್ಲ" ಎಂಬ ಅಭಿಪ್ರಾಯವನ್ನು ಅಂದಿನ ಜಿಲ್ಲಾಧಿಕಾರಿ ಮತ್ತು ಅಂದಿನ ಜಿಲ್ಲಾ ಪೊಲೀಸ್ ಅಧಿಕಾರಿ ಇಬ್ಬರೂ ವ್ಯಕ್ತಪಡಿಸಿದ್ದರು. ಆ ಪ್ರಕಾರವಾಗಿ ಬೀಗಗಳನ್ನು ತೆರೆಯಲಾಯಿತು. ಇದಕ್ಕಾಗಿಯೇ ಅಲ್ಲಿ ಜಮಾಯಿಸಿದ್ದ ಭಾರೀ ಸಂಖ್ಯೆಯ ಯಾತ್ರಿಕರು ಒಳ ನುಗ್ಗಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ ಬಾಬರಿ ಮಸೀದಿಯ ದ್ವಾರಗಳ ಬೀಗ ತೆಗೆದ ಘಟನೆಯ ಹಿಂದೆ ಕಾಂಗ್ರೆಸ್ ಪಕ್ಷ ಇದ್ದದ್ದು ಹೌದು, ಆದರೆ, ರಾಜೀವ್ ಗಾಂಧಿಯವರಿಗೆ ಈ ಯಾವ ವಿಚಾರಗಳೂ ಗೊತ್ತಿರಲಿಲ್ಲ. ಈ ವಿಚಾರಗಳನ್ನು ಬೇಕೆಂದೆ ರಾಜೀವ್ ಅವರ ಗಮನಕ್ಕೆ ತರಲಾಗಿರಲಿಲ್ಲ. ಏಕೆಂದರೆ "ಸರಕಾರದ ಆದೇಶವನ್ನು ರದ್ದುಪಡಿಸಿ ಬೀಗ ತೆರೆಯಲು ರಾಜೀವ್ ಗಾಂಧಿ ಯಾವತ್ತೂ ಅವಕಾಶ ನೀಡುವುದಿಲ್ಲ ಎನ್ನುವುದು ಆ ಕಾಂಗ್ರೆಸ್ ವ್ಯಕ್ತಿಗೆ ಗೊತ್ತಿತ್ತು. ಅದಕ್ಕಾಗಿಯೇ ಅವರು ಆ ವಿಷಯವನ್ನು ರಾಜೀವ್ ಗಾಂಧಿಯಿಂದ ಮುಚ್ಚಿಟ್ಟಿದ್ದರು. ಆಗಿನ ಆ ಕಾಂಗ್ರೆಸ್ ವ್ಯಕ್ತಿಯೇ ಅರುಣ್ ನೆಹರೂ’’ ಎಂದು ಅಯ್ಯರ್ ಆರೋಪಿಸಿದ್ದಾರೆ.

ಹಾಗೆಯೇ ಅವರು "ಜನವರಿ 22ರಂದು ನಡೆಯಲಿರುವ ರಾಮ ಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನವನ್ನು ತಿರಸ್ಕರಿಸುವ ಹಿಂದಿರುವ ದೇಶದ ಸೌಹಾರ್ಧತೆ ಮತ್ತು ಸಾಮರಸ್ಯಗಳ ಕಾರಣಗಳ ಕುರಿತಾದ ಕಾಂಗ್ರೆಸ್ ಪಕ್ಷದ ಉನ್ನತ ನಾಯಕತ್ವದ ನಿರ್ಧಾರ"ಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Advertisement
Advertisement
Recent Posts
Advertisement