Advertisement

ಅಹಿತಕರ ಘಟನೆ ನಡೆದರೆ ಕಠಿಣ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ

Advertisement

"ಅಯೋಧ್ಯೆಯ ರಾಮಮಂದಿರದ ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.

"ಈಗಾಗಲೇ ಕೆಲವು ಸ್ಥಾಪಿತ ಹಿತಾಸಕ್ತ ಕಿಡಿಗೇಡಿಗಳು ಸುಳ್ಳು ಸುದ್ದಿಗಳನ್ನು ಹರಿಯಬಿಟ್ಟು ಅಮಾಯಕ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಸುದ್ದಿಗಳು ಕಿವಿಗೆ ಬಿದ್ದ ತಕ್ಷಣ ಆತುರಕ್ಕೆ ಬಿದ್ದು ಆವೇಶಕ್ಕೆ ಒಳಗಾಗದೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು. ಯಾವುದೇ ಕಾರಣಕ್ಕೂ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳುವ ತಪ್ಪನ್ನು ಮಾಡಬಾರದು" ಎಂದವರು ಎಚ್ಚರಿಸಿದ್ದಾರೆ.

"ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಕಾಂಗ್ರೆಸ್ ಸರ್ಕಾರ ಹೊಣೆಯಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜೇಂದ್ರ ಯಡಿಯೂರಪ್ಪ ಹೇಳಿದ್ದಾರೆ. ಈ ಹೇಳಿಕೆಯಲ್ಲಿ ಶಾಂತಿ ಕಾಪಾಡಿಕೊಂಡು ಬರಬೇಕೆಂಬ ಸದಾಶಯಕ್ಕಿಂತ ಹೆಚ್ಚಾಗಿ ಬೆದರಿಕೆ ಮತ್ತು ಪ್ರಚೋದನೆಯ ಧ್ವನಿ ಇದೆ. ಸರ್ಕಾರಕ್ಕೆ ಅದರ ಕರ್ತವ್ಯದ ಅರಿವಿದೆ. ತಪ್ಪು ನಡೆದರೆ ಕಾನೂನು ಅದರ ಕೆಲಸ ಮಾಡುತ್ತದೆ" ಎಂದು ಹೇಳುವ ಮೂಲಕ ಶಾಂತಿ ಸುವ್ಯವಸ್ಥೆ ಹದಗೆಡಿಸುವ ಹುನ್ನಾರವನ್ನು ಹೊಂದಿರುವ ಕಿಡಿಗೇಡಿಗಳಿಗೆ ಮುಖ್ಯಮಂತ್ರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ

"ಬಿಜೆಪಿಯ ಕೆಲವು ಶಾಸಕರು, ಸಂಸದರು ಈಗಾಗಲೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ರಾಜ್ಯ ಸರ್ಕಾರ ಗಮನಿಸಿದೆ. ಇಂತಹವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರು ಕಠಿಣ ಕ್ರಮಗಳನ್ನು ಕೈಗೊಂಡರೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸರ್ಕಾರದ ಕೆಲಸ ಸುಲಭವಾಗುತ್ತದೆ" ಎಂದು ಹೇಳುವ ಮೂಲಕ ಪ್ರಚೋದನೆಯ ಮೂಲ ಯಾವುದು ಎಂದವರು ವಿವರಿಸಿದ್ದಾರೆ.

"ದೇವರು - ಧರ್ಮ - ಪೂಜೆ - ಆರಾಧನೆಗಳೆಲ್ಲ ವೈಯಕ್ತಿಕವಾದುದು. ಇದನ್ನು ವೈಯಕ್ತಿಕ ಮಟ್ಟದಲ್ಲಿಯೇ ಉಳಿಸಿಕೊಂಡರೆ ದೇವರು - ಧರ್ಮ ಎಲ್ಲರಿಗೂ ಗೌರವ ಮತ್ತು ಸಮಾಜಕ್ಕೂ ಕ್ಷೇಮ. ಇದು ಎಲ್ಲ ಧರ್ಮಾನುಯಾಯಿಗಳಿಗೂ ಅನ್ವಯಿಸುತ್ತದೆ" ಎಂದು ಸಿದ್ದರಾಮಯ್ಯನವರು ಹೇಳಿದರು.

Advertisement
Advertisement
Recent Posts
Advertisement