Advertisement

'ರಾಮರಾಜ್ಯ'ದ ಹೆಸರಿನಲ್ಲಿ 'ಬ್ರಾಹ್ಮಣ್ಯಶಾಹಿ- ಬಂಡವಾಳಶಾಹಿ ದೇಶ'ವಾಗಿಸುವ ಕುತಂತ್ರ ನಡೆಯುತ್ತಿದೆಯೇ?

Advertisement

ನಿಜ, ಇತ್ತೀಚೆಗಿನ ಈ ದೇಶದ ಮನುವಾದಿ ರಾಜಕಾರಣ, ಕಾನೂನು ತಿರುಚುವಿಕೆ, ಸಂವಿಧಾನ ವಿರೋಧಿ ತೀರ್ಪುಗಳು, ಸರ್ಕಾರಿ ಪ್ರೇರಿತ ಹಿಂಸಾಚಾರ, ಸರ್ಕಾರಿ ಮತ್ತು ಖಾಸಗಿ ಆಸ್ತಿಯ ಕಾನೂನಾತ್ಮಕ ಲೂಟಿ ಮುಂತಾದವುಗಳನ್ನು ನೋಡುವಾಗ ನಿಜಕ್ಕೂ 'ರಾಮರಾಜ್ಯ'ದ ಹೆಸರಿನಲ್ಲಿ 'ಬ್ರಾಹ್ಮಣ್ಯಶಾಹಿ, ಬಂಡವಾಳಶಾಹಿ ದೇಶ'ವಾಗಿಸುವ ಹುನ್ನಾರ ನಡೆಯುತ್ತಿದೆ ಎಂದೆನಿಸದೇ ಇರದು. ನಿಜಕ್ಕೂ ಇದು ಇತಿಹಾಸದುದ್ದಕ್ಕೂ ನಡೆದು ಬಂದಿದ್ದ ಕುತಂತ್ರಿ ರಾಜಕಾರಣದ ಭಾಗವೇ ಆಗಿದ್ದು ಬಹುಶಃ ಮಹಾನ್ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಮತ್ತವರ ಸೈನ್ಯದ ಹೋರಾಟದ ಹಿನ್ನಲೆಯಲ್ಲಿ ಇಂತಹ ಶೋಷಣೆ, ಅನ್ಯಾಯಗಳ ವಿರುದ್ದದ ಪ್ರತಿಕಾರವೇ ಅಡಗಿತ್ತು ಮತ್ತು ಆತನ ಅಂತ್ಯಕ್ಕೂ ಇಂತಹ ಕುತಂತ್ರಿ ಶೋಷಕರ ಪಡೆಯೇ ನಾಯಕತ್ವ ವಹಿಸಿತ್ತು ಎನ್ನುವುದನ್ನು ಅಲ್ಲಗೆಳೆಯಲಾಗದು.

ಈ ಕುರಿತು ಹಿರಿಯ ಅಂಕಣಕಾರರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರಾದ ಶಿವಸುಂದರ್ ಅವರು ಸಂಗೊಳ್ಳಿ ರಾಯಣ್ಣನ ಕುರಿತು ಬರೆದಿರುವ ವಿಶ್ಲೇಷಣಾತ್ಮಕ ಲೇಖನ.. ಅಗತ್ಯವಾಗಿ ಓದಿ:

1831 ಜನವರಿ 26: ದೇಶಪ್ರೇಮಿ ರೈತಸೈನ್ಯದ ದಂಡನಾಯಕ ಸಂಗೊಳ್ಳಿ ರಾಯಣ್ಣ ಹುತಾತ್ಮನಾದ ದಿನವೂ ಹೌದು!

1950, ಜನವರಿ 26 - ವಸಾಹತುಶಾಹಿ ಮತ್ತು ರಾಜಶಾಹಿ ಯನ್ನು ಕೊನೆಗೊಳಿಸಿ ಜನರಾಜ್ಯವನ್ನು ಆಶಿಸಿ ಭಾರತವು ಗಣರಾಜ್ಯವಾದ ದಿವಸವೇನೋ ಹೌದು.. ಆದರೆ ಅಷ್ಟು ಮಾತ್ರವಲ್ಲ.

1831 ರ ಜನವರಿ 26 - ಬ್ರಿಟಿಷ ವಸಾಹತುಶಾಹಿ ಮತ್ತು ಭೂಮಾಲೀಕ ವ್ಯವಸ್ಥೆಯ ವಿರುದ್ಧ ರೈತರಾಜ್ಯಕ್ಕಾಗಿ ರೈತ ಸೈನ್ಯವನ್ನು ಕಟ್ಟಿ ಬ್ರಿಟಿಷರ ವಿರುದ್ಧ ಸಂಗ್ರಾಮ ನಡೆಸುತ್ತಾ, ಸ್ವದೇಶಿ ಭೂಮಾಲಿಕರ ಸಂಚಿಗೆ ಬಲಿಯಾಗಿ ವೀರಮರಣ ಅಪ್ಪಿದ ರೈತ ಸೈನ್ಯದ ದಂಡನಾಯಕ ಸಂಗೊಳ್ಳಿ ರಾಯಣ್ಣ ಹುತಾತ್ಮನಾದ ದಿವಸವೂ ಹೌದು.

ಗಣರಾಜ್ಯವನ್ನು ರಾಮರಾಜ್ಯದ ಹೆಸರಿನಲ್ಲಿ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಯ ರಾಜ್ಯವಾಗಿಸುವ ಹುನ್ನಾರ ನಡೆಯುತ್ತಿರುವ ಈ ಹೊತ್ತಿನಲ್ಲಿ ಸಂಗೊಳ್ಳಿ ರಾಯಣ್ಣನ ಜನಸಂಗ್ರಾಮವನ್ನು ಕೂಡ ರಾಜಸತ್ತೆಯ ಪುನರ್ ಸ್ಥಾಪನೆಗಾಗಿ ನಡೆದ ಸಮರವೆಂಬಂತೆ ಚಿತ್ರಿಸುವ ಹುನ್ನಾರಗಳು ನಡೆಯುತ್ತಲೇ ಬಂದಿವೆ.

ಆದರೆ ಸಂಗೊಳ್ಳಿ ರಾಯಣ್ಣ ನಡೆಸಿದ ಸಂಗ್ರಾಮ ರೈತರಾಜ್ಯಕ್ಕಾಗಿತ್ತೇ ಹೊರತು ಊಳಿಗಮಾನ್ಯ ರಾಜಸತ್ತೆಯ ಪುನರ್ ಸ್ಥಾಪನೆಗಾಗಿ ಆಗಿರಲಿಲ್ಲ. ಸಂಗೊಳ್ಳಿ ರಾಯಣ್ಣನನ್ನು ಕೇವಲ ಒಂದು ಜಾತಿಯ ಐಕಾನ್ ಆಗಿ ಮಾಡಿಬಿಡುತ್ತಿರುವುದರಿಂದಲೂ ರಾಯಣ್ಣನ ಈ ಜನಸಂಗ್ರಾಮದ ಈ ಭವ್ಯ ಇತಿಹಾಸ ಮರೆಯಾಗುತ್ತಿದೆ.

ಜಾತಿ ನಾಯಕನಲ್ಲ- ರೈತ-ಕೂಲಿಗಳ ಜನನಾಯಕ

ಈ ಆಧುನಿಕ ಯುಗದ ಜಾತಿಪ್ರೇರಿತ ರಾಜಕಾರಣವು ಆಕಾಶದೆತ್ತರದ ನಾಯಕರನ್ನೂ ಜಾತಿ-ಮತಗಳ ಸೀಮಿತ ಪರಿಧಿಗೆ ಕುಗ್ಗಿಸಿಬಿಡುತ್ತಿದೆ. ಆ ಮೂಲಕ ತಮ್ಮ ಸಮಕಾಲೀನ ಅಗತ್ಯಗಳಿಗಾಗಿ ಇತಿಹಾಸ ಮತ್ತು ವರ್ತಮಾನ ಎರಡಕ್ಕೂ ದ್ರೋಹ ಬಗೆಯುತ್ತದೆ. ಅಪ್ರತಿಮ ಸ್ವಾತಂತ್ರ್ಯ ಸಮರವೀರರಾದ ಟಿಪ್ಪೂ ಸುಲ್ತಾನ್ ಕೇವಲ ಮುಸ್ಲಿಂ ನಾಯಕನಾಗು ವುದು, ಸಂಗೊಳ್ಳಿ ರಾಯಣ್ಣನನ್ನು ಕೇವಲ ಕುರುಬರು ಮಾತ್ರ ನಾಯಕನೆಂದು ಗುರುತಿಸುವುದೂ, ಅಂಬೇಡ್ಕರ್ ಕೇವಲ ದಲಿತರ ನಾಯಕ ಎಂದು ಬಿಂಬಿಸಲ್ಪಡುವುದು- ಎಲ್ಲವೂ ಈ ಹೀನಾಯ ಅವಕಾಶವಾದಿ ರಾಜಕಾರಣದ ಪರಿಣಾಮಗಳು. ಹೀಗಾಗಿಯೇ ಸಮುದಾಯಗಳ ಶೋಷಣೆಯನ್ನು ಮಾಡುವ ಆಧುನಿಕ ಪ್ರಭುಗಳೇ ಆಯಾ ಸಮುದಾಯದವರು ತಮ್ಮ ನಾಯಕರೆಂದು ಒಪ್ಪಿಕೊಳ್ಳುವ ಐತಿಹಾಸಿಕ ಪುರುಷರ ಪ್ರತಿಮೆಗಳನ್ನು ಸ್ಥಾಪಿಸಿ ತಾವು ಆ ಸಮುದಾಯದ ಪರವೆಂಬ ಭ್ರಾಂತಿ ಬಿತ್ತುವ ಕಪಟ ತಂತ್ರವನ್ನು ನಡೆಸುತ್ತವೆ. ಈ ಸಂಚಿನ ಭಾಗವಾಗಿಯೇ ಸಂಗೊಳ್ಳಿ ರಾಯಣ್ಣನನ್ನು ಕೇವಲ ಕುರುಬರ ನಾಯಕನನ್ನಾಗಿ ಈ ಆಧುನಿಕ ದೊರೆಗಳು ಬಿಂಬಿಸುತ್ತಿದ್ದಾರೆ.

ಸಂಗೊಳ್ಳಿ ರಾಯಣ್ಣ ಕೇವಲ ಕುರುಬರ ನಾಯಕನಲ್ಲ. 1857ರ ಭಾರತದ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಗುವ ಮೂರು ದಶಕಗಳ ಮುಂಚೆಯೇ ಕರ್ನಾಟಕದ ಕಿತ್ತೂರು ಪ್ರಾಂತ್ಯದಲ್ಲಿ ಕುರುಬ, ಬೇಡ, ಜೈನ, ಲಿಂಗಾಯತ, ಸಿದ್ಧಿ, ಮುಸ್ಲಿಂ, ಪಂಚಮಸಾಲಿ ಮುಸ್ಲಿಂ ಸೇರಿದಂತೆ ಆಗಿನ ಊಳಿಗಮಾನ್ಯ ಭೂಮಾಲೀಕ ದೊರೆಗಳ ಶೋಷಣೆಗೆ ಬಲಿಯಾಗಿದ್ದ ಎಲ್ಲರನ್ನೂ ಒಂದು ಮಾಡಿ ಬ್ರಿಟಿಷರೇ ಬೆಚ್ಚುವಂಥಾ ಹೋರಾಟ ಮಾಡಿದ್ದ ಮಹಾನ್ ಜನನಾಯಕ. ರಾಷ್ಟ್ರವೀರ. ಆತನಿಗೆ ಮುಂಚೆ ಇದೇ ಹೋರಾಟದಲ್ಲಿ ಪ್ರಾಣತೆತ್ತ ಟಿಪ್ಪೂ, ಹೈದರಾಲಿ, ಧೋಂಡಿಯಾವಾಘ್‌ರೂ ಸಹ ಆಯಾ ಜಾತಿ ಮತ್ತು ಧರ್ಮದ ನಾಯಕರಲ್ಲ. ಇಡೀ ಶೋಷಿತ ಸಮಾಜದ ನಾಯಕರು.

ಕರ್ನಾಟಕದ ಇತಿಹಾಸವನ್ನು ಜನಪರ ದೃಷ್ಟಿಯಿಂದ ಅತ್ಯಂತ ಶ್ರಮವಹಿಸಿ ಅಧ್ಯಯನ ಮಾಡಿ ಇವರಂತೆಯೇ ಜನರಿಗಾಗಿ ಹೋರಾಡುತ್ತಾ ರಣರಂಗದಲ್ಲೇ ಪ್ರಾಣತೆತ್ತ ಮಹಾನ್ ಮೇಧಾವಿ ಸಾಕೇತ್ ರಾಜನ್‌ ರು ತಮ್ಮ “Making History” ಎಂಬ ಉದ್ಗ್ರಂಥದ ಎರಡನೇ ಭಾಗದಲ್ಲಿ ಸಂಗೊಳ್ಳಿ ರಾಯಣ್ಣನ ಹೋರಾಟ ಮತ್ತು ಜೀವನದ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ.

ಜಾತಿಯ ಮೀರಿದ ಜನಸೈನ್ಯ

ಅವರ ಅಧ್ಯಯನ ಸ್ಪಷ್ಟಪಡಿಸುವಂತೆ ರಾಯಣ್ಣನೊಂದಿಗೆ ಎಲ್ಲ ಜಾತಿಯ ಜನರೂ ಇದ್ದರು. ಅವನ ಹೋರಾಟದ ಅಂತಿಮ ಗಳಿಗೆಯಲ್ಲಿ ಆತನೊಂದಿಗೆ ಬಂಧಿತರಾಗಿದ್ದ ಹನ್ನೆರಡು ಮಂದಿಯಲ್ಲಿ; ಐವರು ಬೇಡ ಜನಾಂಗದವರು, ಇಬ್ಬರು ಲಿಂಗಾಯತರು, ಓರ್ವ ಪಂಚಮಸಾಲಿ, ಓರ್ವ ಮುಸ್ಲಿಂ, ಒಬ್ಬ ಮರಾಠ, ಒಬ್ಬ ನಾರ್ವೇಕರ, ಓರ್ವ ಜೈನ ಸಮುದಾಯಕ್ಕೆ ಸೇರಿದವರಾಗಿದ್ದರು. ಹಾಗೆಯೇ ಜನಪದ ಹಾಡುಗಳಲ್ಲಿ ವ್ಯಕ್ತವಾಗಿರುವಂತೆ ಅವನೊಂದಿಗೆ ಬೋವಿ ಜಾತಿಯವರಲ್ಲದೆ, ಪೋರ್ಚುಗೀಸರು ಮೊಜಾಂಬಿಕ್‌ನಿಂದ ಗೋವಾಗೆ ಅಡಿಯಾಳುಗಳಾಗಿ ತಂದಿದ್ದ ಸಿದ್ಧಿ ಜನಾಂಗದವರೂ ಇದ್ದರು. ಕಿತ್ತೂರಿನ ಪಶ್ಚಿಮ ಭಾಗದಲ್ಲಿ ವಾಸಿಸುತ್ತಿದ್ದ ಈ ಸಿದ್ಧಿಗಳು ರಾಯಣ್ಣನ ಅಂಗರಕ್ಷಕರಾಗಿದ್ದರು. ಗಜಾವೀರಾ ಎಂಬ ಸಿದ್ಧಿಯಂತೂ ರಾಯಣ್ಣನ ಸಾವಿನ ಸುದ್ದಿ ಕೇಳಿ ಆತ್ಮಹತ್ಯೆ ಮಾಡಿಕೊಂಡನಂತೆ!

ಸಾಕೇತ್ ರಾಜನ್‌ರವರು ಸ್ಪಷ್ಟಪಡಿಸುವಂತೆ:

“ಸಮುದಾಯದ ಎಲ್ಲಾ ವರ್ಗಗಳ ಜನರನ್ನು ರಾಯಣ್ಣ ಸೇರಿಸಿದ್ದರೂ, ಅವರ‌್ಯಾರೂ ಜಮೀನ್ದಾರರಾಗಿರಲಿಲ್ಲ ಎಂಬ ಅಂಶ ಆತನ ಹೋರಾಟವು ಯಾರ ಪರವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಆದರೆ ರಾಯಣ್ಣನ ಹೋರಾಟ ಕೇವಲ ಭೂರಹಿತರ ಪರವಾಗಿ ಇರಲಿಲ್ಲ. ಆತ ವರ್ಗ, ಜಾತಿ ಭೇದವನ್ನು ಅಳಿಸಲು ಅನ್ನ ದಾಸೋಹ ಪದ್ಧತಿಯನ್ನೂ ಜಾರಿಗೆ ತಂದಿದ್ದ. ಹೀಗೆ ಮಾಡುವ ಮೂಲಕ ಭೂರಹಿತರ ಹೋರಾಟಕ್ಕೆ ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧದ ತಿರುವನ್ನು ನೀಡಿದ ರಾಯಣ್ಣ. ಈ ಸಂಗ್ರಾಮ ಜಮೀನ್ದಾರಿ ಅಧಿಪತ್ಯದಲ್ಲಿದ್ದಿದ್ದರೆ ಅದರಲ್ಲಿ ಈ ಸಾಧ್ಯತೆಗಳಾಗಲೀ, ಅಂಶಗಳಾಗಲೀ ಅರಳಲು ಅಸಾಧ್ಯವಾಗುತ್ತಿತ್ತು."

ಭೂಮಾಲೀಕರ ಸೈನಿಕನಲ್ಲ- ರೈತಸೈನ್ಯದ ದಂಡನಾಯಕ

ಇದೂ ಸಂಗೊಳ್ಳಿ ರಾಯಣ್ಣನ ಜಾತಿ-ಮತ ಮೀರಿದ ಜನಪರತೆಗೆ ಸಾಕ್ಷಿ. ಆದರೆ ನಮ್ಮ ಆಧುನಿಕ ಪ್ರಭುಗಳು ಅವರನ್ನು ಕೇವಲ ಕುರುಬರ ನಾಯಕನನ್ನಾಗಿ ಮಾಡಲು ಹೊರಟಿದ್ದಾರೆ.

ಆದರೆ ಇದಕ್ಕಿಂತ ಘೋರವಾದದ್ದು ಈ ಅವಕಾಶವಾದಿ ರಾಜಕಾರಣಿಗಳು ರಾಯಣ್ಣನಿಗೆ ನೀಡುವ ಗುಣವಿಶೇಷಣಗಳು! ಈ ಅಪ್ರತಿಮ ಜನನಾಯಕನನ್ನು ನೆನೆಸಿಕೊಳ್ಳಲು ಈ ದೊರೆಗಳು ಆಯ್ಕೆ ಮಾಡಿಕೊಂಡ ಮಾರ್ಗಗಳು.

ಉದಾಹರಣೆಗೆ 2010 ರಲ್ಲಿ ಬೆಂಗಳೂರಿನಲ್ಲಿ ಅಂದಿನ ಬಿಜೆಪಿ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಯಣ್ಣನವರ ಪ್ರತಿಮೆ ಅನಾವರಣ ಮಾಡುತ್ತಾ “ಪೊಲೀಸ್ ಇಲಾಖೆಯಲ್ಲಿ ಅಪ್ರತಿಮ ಸೇವೆ ಮಾಡಿದ ಅಧಿಕಾರಿಗಳಿಗೆ ರಾಯಣ್ಣನ ಹೆಸರಲ್ಲಿ ಪ್ರಶಸ್ತಿ ನೀಡುವ ಮೂಲಕ ರಾಣಿ ಕಿತ್ತೂರು ಚೆನ್ನಮ್ಮಳ ಬಂಟನಾದ ರಾಯಣ್ಣನ ತ್ಯಾಗ, ಬಲಿದಾನ, ರಾಜನಿಷ್ಟೆಗಳನ್ನು ಅಳವಡಿಸಿಕೊಳ್ಳುವಂತೆ ಮಾಡಲಾಗುವುದು" ಎಂದು ಘೋಷಿಸಿದ್ದರು. ಇದು ‘ಸೈನಿಕ’ ಸಂಗೊಳ್ಳಿ ರಾಯಣ್ಣನಲ್ಲಿ ‘ದೊರೆ’ ಯಡಿಯೂರಪ್ಪನವರು ಮೆಚ್ಚಿಕೊಂಡ ಗುಣ.

ಇದಕ್ಕಿಂತ ಕೀಳಾಗಿ ಒಬ್ಬ 'ಜನನಾಯಕ ಹಾಗೂ ಸ್ವಾತಂತ್ರ ವೀರ'ನನ್ನು ಅವಮಾನ ಮಾಡಲು ಸಾಧ್ಯವೇ?

ದೇಶದ ಹಲವಾರು ರಾಜ ಹಾಗೂ ಪಾಳೆಗಾರಿ ಮನೆತನದವರು ಬ್ರಿಟಿಷರ ವಿರುದ್ಧ ಹೋರಾಡಿದ್ದರಲ್ಲಿ ಪ್ರಧಾನ ವಾಗಿ ಇದ್ದದ್ದು ತಮ್ಮ ರಾಜಸತ್ತೆಯನ್ನು ಉಳಿಸಿಕೊಳ್ಳುವ ಉದ್ದೇಶವೇ. ಹೀಗಾಗಿ ಅವರ ದೇಶಪ್ರೇಮ ಪರೋಕ್ಷವಾದದ್ದು.

1857 ಕ್ಕೆ ಮುಂಚೆ ಹೋರಾಟದ ಕಣದಲ್ಲಿದ್ದ ಕಿತ್ತೂರು ಚೆನ್ನಮ್ಮ, ಲಕ್ಷ್ಮಿಬಾಯಿಯಂಥ ಹಲವರು ರಾಜಮನೆತನದವರಾಗಿದ್ದರೂ ಬಂದರೂ ಬ್ರಿಟಿಷರು ಮುಂದಿಟ್ಟ ಅವಮಾನಕಾರಿ ರಾಜಿ ಒಪ್ಪಂದಗಳಿಗೆ ಬಲಿ ಯಾಗದೆ ವೀರೋಚಿತವಾಗಿ ಹೋರಾಡಿ ಪ್ರಾಣಬಿಟ್ಟರು. ಆದರೆ 1857 ರ ಸ್ವಾತಂತ್ರ ಸಂಗ್ರಾಮದಿಂದ ಪಾಠ ಕಲಿತ ಬ್ರಿಟಿಷರು ತಂದ ಮಾರ್ಪಾಡುಗಳಿಂದ ರಾಜರು ಗಳ ಸುಖ ಸೌಕರ್ಯಗಳನ್ನು ಖಾತರಿಗೊಳಿಸಲಾಯಿತು. ಇದರ ನಂತರ ಬಹುಪಾಲು ರಾಜರುಗಳು ಹೋರಾಟದ ಕಣಕ್ಕೆ ಬರಲಿಲ್ಲ. ಮಾತ್ರವಲ್ಲ. ಈ ಸೌಕರ್ಯಗಳನ್ನು ಕಾಪಾಡಿಕೊಳ್ಳಲು ಬಹುಪಾಲು ರಾಜರು ತಮ್ಮ ಜನಕ್ಕೇ ದ್ರೋಹ ಬಗೆದು ಬ್ರಿಟಿಷ್ ಸಾರೋಟಿನ ಕುದುರೆಗಳಾಗಿ ಬಿಟ್ಟರು.

ಅವರ ಜೊತೆಗೆ ಬ್ರಿಟಿಷ್ ಸಂಸ್ಥಾನ ಇಲ್ಲಿ ನೆಲೆ ನಿಂತುಕೊಳ್ಳಲು ನೆಲೆ ಮತ್ತು ನೆರವು ಕೊಟ್ಟಿದ್ದು ಗ್ರಾಮ ಮಟ್ಟದಲ್ಲಿದ್ದ ಭೂಮಾಲೀಕ, ಬಡ್ಡಿ ವ್ಯಾಪಾರಿ ದೊರೆಗಳು.

ಸಂಗೊಳ್ಳಿ ರಾಯಣ್ಣ ಕಿತ್ತೂರು ಸಂಸ್ಥಾನದಲ್ಲಿ ಸೇನಾನಾಯಕನಾಗಿದ್ದರೂ ಆತ ಚೆನ್ನಮ್ಮಳ ಬಂಧನದ ನಂತರವೂ ಹೋರಾಟವನ್ನು ಮುಂದುವರೆಸಿದ್ದು ಕೇವಲ ಅರಸೊತ್ತಿಗೆಯ ಪುನರ್ ಸ್ಥಾಪನೆಗೆ ಮಾತ್ರವಲ್ಲ. ಬದಲಿಗೆ ಜನರನ್ನು ಲೂಟಿ ಮಾಡುತ್ತಿದ್ದ ವಸಾಹತುಶಾಹಿ ಮತ್ತು ಭೂಮಾಲೀಕ ವ್ಯವಸ್ಥೆ ಎರಡರ ವಿರುದ್ಧವೂ ಆತನ ಹೋರಾಟ ಮುಂದುವರೆಯಿತು.

ಇದಕ್ಕಾಗಿ ಆತ ಆಯ್ದುಕೊಂಡಿದ್ದು ಗೆರಿಲ್ಲಾ ಮಾದರಿ ಹೋರಾಟ.

1830 ರ ಪ್ರಾರಂಭದಲ್ಲಿ ಕೇವಲ ನೂರು ಜನರಿದ್ದ ಆತನ ಸೈನ್ಯ ಕೆಲವೇ ತಿಂಗಳಲ್ಲಿ 5 ಸಾವಿರಕ್ಕೇ ಮುಟ್ಟಿತು. ಆತನ ಸೈನ್ಯ ನಿತ್ಯ ಶೊಷಕರನ್ನು ದಂಡಿಸುತ್ತಿದ್ದರಿಂದ ಅದು ಬಹಳ ಬೇಗನೇ ಜನಸೈನ್ಯದ ಸ್ವರೂಪವನ್ನು ಮತ್ತು ಜನಸಂಗ್ರಾಮದ ಚಹರೆಯನ್ನು ಪಡೆದುಕೊಂಡಿತು.

ಹೀಗೆ ಸಂಗೊಳ್ಳಿ ರಾಯಣ್ಣ ನಿಜಕ್ಕೂ ತುಳಿತಕ್ಕೊಳಗಾದ ಜನರ ನಾಯಕ. ಜನಸೈನ್ಯದ ಮಹಾನ್ ದಂಡ ನಾಯಕ. ಆತನಲ್ಲಿ ಇದ್ದದ್ದು ರಾಜನಿಷ್ಟೆಯಲ್ಲ. ಜನನಿಷ್ಟೆ. ಆತ ಹೋರಾಟದಲ್ಲಿ ತ್ಯಾಗ-ಬಲಿದಾನ ಮಾಡಿದ್ದು ನಿಜ. ಅದು ಯಾವುದೋ ರಾಜನ ಸೇನೆಯ ಸೈನಿಕ ನಾಗಿಯೋ, ದಂಡನಾಯಕನಾಗಿಯೋ ಅಲ್ಲ. ಆ ಬಲಿದಾನದ ಹಿಂದೆ ಇದ್ದದ್ದು ರಾಜನಿಷ್ಟೆಯಲ್ಲ. ರಾಯಣ್ಣನದ್ದು ಜನಸೈನ್ಯವನ್ನು ಕಟ್ಟಲು ಜನರಿಗಾಗಿ ಮಾಡಿದ ಪ್ರಜ್ಞಾಪೂರ್ವಕವಾದ ತ್ಯಾಗ ಬಲಿದಾನ.

ಆದ್ದರಿಂದಲೇ ನೇರ ಯುದ್ದದಿಂದ ಸಂಗೊಳ್ಳಿ ರಾಯಣ್ಣ ನನ್ನು ಹಿಡಿಯಲು ಸಾಧ್ಯವೇ ಇಲ್ಲ ಎಂದು ಅರ್ಥ ಮಾಡಿಕೊಂಡ ಬ್ರಿಟಿಷರು ತಮ್ಮ ಫಲಾನುಭವಿಗಳಾದ ಭೂಮಾಲಿಕ ವರ್ಗದೊಂದಿಗೆ ಕುತಂತ್ರ ನಡೆಸಿದರು. ಕೃಷ್ಣರಾವ್ ಎಂಬ ಒಬ್ಬ ಭೂಮಾಲೀಕನನ್ನು ಆತನ ಸೇನೆಗೆ ಸೇರಿಸಿದರು. ಪರಿಣಾಮ ದ್ರೋಹ. ರಾಯಣ್ಣನ ಬಂಧನ. ಮರಣದಂಡನೆ.

ದೇಶದ್ರೋಹಿಗಳಿಗೆ ಇನಾಮು- ರಾಯಣ್ಣನ ನೆನಪಿಗೆ ಲಗಾಮು

ರಾಯಣ್ಣನನ್ನು ಬಂಧಿಸಲು ಸಹಾಯ ಮಾಡಿದ್ದಕ್ಕೆ ಕೃಷ್ಣ ರಾವ್‌ಗೆ ನಗದು ಬಹುಮಾನ ನೀಡಲಾಯಿತು. ರೈತರ ಸಂಗ್ರಾಮಕ್ಕೆ ದ್ರೋಹ ಬಗೆದ ಭೂಮಾಲಿಕರಿಗೂ ಪ್ರಶಸ್ತಿಗಳನ್ನು ನೀಡಲಾಯಿತು. ಅವರೆಲ್ಲರಿಗೆ ಮುನ್ನೂರು ರೂಪಾಯಿಗಳ ನಗದು ಸೇರಿದಂತೆ ಇಡೀ ಹಳ್ಳಿಗಳನ್ನೇ ಇನಾಮಾಗಿ ನೀಡಿತು ಬ್ರಿಟಿಷ್ ಸರ್ಕಾರ.

ಲಿಂಗಣ್ಣ ಗೌಡನಿಗೆ ಕಿತ್ತೂರು ಸಮೀಪದ ಕಲೊಲಿ ಗ್ರಾಮದ ಸಿಕ್ಕಿದರೆ, ಯೆಂಕನ ಗೌಡನಿಗೆ ಧಾರವಾಡದ ಹತ್ತಿರದ ಧೋಂ ಗ್ರಾಮ ದಕ್ಕಿತು. ಆದರೆ ಕುರುಬ, ಬೇಡ, ಜೈನ, ಲಿಂಗಾಯತ, ಸಿದ್ಧಿ, ಮುಸ್ಲಿಂ, ಪಂಚಮಸಾಲಿ ಸೇರಿದಂತೆ ವಿವಿಧ ಜಾತಿಗಳಿಂದ ಬಂದಿದ್ದ ರಾಯಣ್ಣ ಮತ್ತು ಸಂಗಡಿಗರಿಗೆ ಸಿಕ್ಕಿದ್ದು ಮರಣದಂಡನೆ!

ಇಂದು ಅದೇ ಬ್ರಹ್ಮಣಶಾಹಿ-ಭೂಮಾಲೀಕ- ಬಂಡವಾಳಶಾಹಿ ವ್ಯವಸ್ಥೆಯು ಗಣರಾಜ್ಯದ ಹೆಸರಲ್ಲಿ ಮುಂದುವರೆಯುತ್ತಿದೆ. ಆದರೆ ತಮ್ಮ ಅತ್ಯಂತ ಜನವಿರೋಧಿ ಆಡಳಿತದಲ್ಲಿ ಜನರನ್ನು ಹತ್ತಿಕ್ಕುವಲ್ಲಿ ಅತಿಕ್ರೂರ ಪಾತ್ರ ವಹಿಸುತ್ತಿರುವ ರಾಜನಿಷ್ಠ, ರಾಜಭಂಟ ಪೊಲೀಸ್ ಅಧಿಕಾರಿಗಳಿಗೆ ಜನನಿಷ್ಠ ಜನನಾಯಕ ಸಂಗೊಳ್ಳಿ ರಾಯಣ್ಣನ ಹೆಸರಲ್ಲಿ ಪ್ರಶಸ್ತಿ ನೀಡುವ ಮೂಲಕ ರಾಯಣ್ಣನ ಪರಂಪರೆಗೇ ಅತ್ಯಂತ ಅವಮಾನ ಮಾಡುತ್ತಿ ದ್ದಾರೆ. ಸಂಗೊಳ್ಳಿ ರಾಯಣ್ಣನನ್ನು ಆತನ ನೆನಪನ್ನು ಮತ್ತೊಮ್ಮೆ ಗಲ್ಲಿಗೆ ಏರಿಸುತ್ತಿದ್ದಾರೆ.

ಹೀಗಾಗಿ ಜನವರಿ 26 ನ್ನು ಮತ್ತು ಸಂಗೊಳ್ಳಿ ರಾಯಣ್ಣನನ್ನು ನೆನೆಯುವುದೆಂದರೆ ಭಾರತವನ್ನು ಮತ್ತೊಮ್ಮೆ ಬ್ರಾಹ್ಮಣಶಾಹಿ ರಾಮರಾಜ್ಯವಾಗದಂತೆ , ನಿಜವಾದ ಜನರ ರಾಜ್ಯ, ರೈತ ರಾಜ್ಯ, ಗಣರಾಜ್ಯವಾಗಿಸುವುದಕ್ಕೆ ರಾಯಣ್ಣನಂತೆ ಜನಸಂಗ್ರಾಮ ಹೂಡುವುದೇ ಆಗಿದೆ.. ಅಲ್ಲವೇ?

ಕೃಪೆ: ವಾರ್ತಾಭಾರತಿ

Advertisement
Advertisement
Recent Posts
Advertisement