ಇದು ವಿಕಸಿತ ಭಾರತ ಅಲ್ಲ, ವಿನಾಶಕಾರಿ ಭಾರತದ ಬಜೆಟ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ 2024-25ರ ಮಧ್ಯಂತರ ಆಯವ್ಯಯ ಪತ್ರದಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸನ್ಮಾನ್ಯ ನರೇಂದ್ರ ಮೋದಿಯವರು ನಿರ್ಮಿಸಿರುವ ‘’ವಿನಾಶಕಾರಿ ಭಾರತ’’ ದ ವಾಸ್ತವವನ್ನು ಬಚ್ಚಿಟ್ಟು ‘’ವಿಕಸಿತ ಭಾರತ’’ ಎಂಬ ಭ್ರಮಾಲೋಕವನ್ನು ದೇಶದ ಜನತೆಗೆ ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ.
ಬಡವರು, ಮಹಿಳೆಯರು, ಯುವಕರು ಮತ್ತು ರೈತರನ್ನೊಳಗೊಂಡ ನಾಲ್ಕು ‘’ಜಾತಿ’’ಗಳ ಅಭಿವೃದ್ದಿಯ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ನಂಬಿಕೆ ಇಟ್ಟಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಇದನ್ನೆ ‘’ವಿಕಸಿತ ಭಾರತ’’ದ ಕನಸು ಎಂದು ಅವರು ಹೇಳಿಕೊಂಡಿದ್ದಾರೆ.
ನರೇಂದ್ರ ಮೋದಿಯರ ಹತ್ತು ವರ್ಷಗಳ ಆಡಳಿತದಲ್ಲಿ ಕಷ್ಟ,ನಷ್ಟ, ದಮನ, ದೌರ್ಜನ್ಯಕ್ಕೀಡಾಗಿರುವುದು ಇದೇ ಬಡವರು, ಮಹಿಳೆಯರು, ಯುವಕರು ಮತ್ತು ರೈತರು. ಈ ಸಮುದಾಯಗಳ ಪಾಲಿಗೆ ಮೋದಿಯವರ ಹತ್ತು ವರ್ಷಗಳ ಆಡಳಿತ ‘’ವಿಕಸಿತ ಭಾರತ’’ ಅಲ್ಲ ಅದು ‘’ವಿನಾಶಕಾರಿ ಭಾರತ’'. ಮುಖ್ಯಮಂತ್ರಿಯಾಗಿ ಮಂಡಿಸಿರುವ ಏಳು ಆಯವ್ಯಯ ಪತ್ರಗಳಲ್ಲಿ ನಾನು ಬಡವರು, ಮಹಿಳೆಯರು, ಯುವಕರು ಮತ್ತು ರೈತರನ್ನೇ ಕೇಂದ್ರವಾಗಿಟ್ಟುಕೊಂಡು ಅಭಿವೃದ್ದಿ ಯೋಜನೆಗಳನ್ನು ರೂಪಿಸಿದ್ದೆ. ಬಹಳ ಮುಖ್ಯವಾಗಿ ನಮ್ಮ ಹೊಸ ಸರ್ಕಾರ ಅನುಷ್ಠಾನಗೊಳಿಸಿರುವ ಗ್ಯಾರಂಟಿ ಯೋಜನೆಗಳು ಕೂಡಾ ಈ ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಕಲ್ಯಾಣವನ್ನೇ ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಿರುವಂತಹದ್ದು.
ಬಡವರಿಗಾಗಿ "ಅನ್ನಭಾಗ್ಯ" ಮಹಿಳೆಯರಿಗಾಗಿ "ಗೃಹಲಕ್ಷ್ಮಿ" ಯುವಕರಿಗಾಗಿ "ಯುವನಿಧಿ" ಮತ್ತು ರೈತರಿಗಾಗಿ "ಕೃಷಿ ಭಾಗ್ಯ" ಮತ್ತು "ಸಾಲಮನ್ನಾ"ದಂತಹ ಯೋಜನೆಗಳನ್ನು ನಮ್ಮ ಸರ್ಕಾರ ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಗೆ ತಂದಿದೆ.
ದೇಶ-ವಿದೇಶದ ಆರ್ಥಿಕ ತಜ್ಞರು ಶ್ಲಾಘಿಸಿರುವ ನಮ್ಮ ಈ ಅಭಿವೃದ್ದಿಯ ‘’ಕರ್ನಾಟಕ ಮಾದರಿ’’ ಯನ್ನು ದೇಶದ ಬೇರೆ ಬೇರೆ ರಾಜ್ಯಗಳು ಕೂಡಾ ಅನುಷ್ಠಾನಕ್ಕೆ ತರುತ್ತಿವೆ. ಉದ್ಯಮಿಗಳು ಮತ್ತು ಶ್ರೀಮಂತರ ಅಭಿವೃದ್ದಿಯ ಉದ್ದೇಶದ ‘’ಗುಜರಾತ್ ಮಾದರಿ’’ಯನ್ನು ನರೇಂದ್ರ ಮೋದಿಯವರು ಕೈಬಿಟ್ಟು ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಅಭಿವೃದ್ದಿಯ ಉದ್ದೇಶದ ‘’ಕರ್ನಾಟಕ ಮಾದರಿ’’ಯನ್ನು ಹತ್ತು ವರ್ಷಗಳ ಆಡಳಿತದ ನಂತರವಾದರೂ ಕೈಗೆತ್ತಿಕೊಂಡಿರುವುದನ್ನು ನಾನು ಶ್ಲಾಘಿಸುತ್ತೇನೆ ಮತ್ತು ಅವರಿಗೆ ಶುಭವನ್ನು ಕೋರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಮ್ಮ ಗ್ಯಾರಂಟಿ ಯೋಜನೆಗಳನ್ನು "ಬಿಟ್ಟಿ ಯೋಜನೆ"ಗಳೆಂದು ಹೀಗಳೆಯುತ್ತಿದ್ದ ನರೇಂದ್ರ ಮೋದಿಯವರು ಈಗ ನಮ್ಮ "ಗ್ಯಾರಂಟಿ ಯೋಜನೆ"ಗಳನ್ನೇ ನಕಲು ಮಾಡಿ ತಮ್ಮದು ಗ್ಯಾರಂಟಿ ಸರ್ಕಾರ ಎಂದು ಹೇಳುತ್ತಿರುವುದನ್ನು ಕೂಡಾ ರಾಜ್ಯದ ಜನತೆ ಗಮನಿಸಿದ್ದಾರೆ.
ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಹತ್ತು ವರ್ಷಗಳನ್ನು ಪೂರೈಸಿ ಚುನಾವಣೆಯನ್ನು ಎದುರಿಸಲು ಹೊರಟಿರುವ ಈ ಕಾಲದಲ್ಲಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸರ್ಕಾರದ ಹತ್ತು ವರ್ಷಗಳ ಸಾಧನೆಯನ್ನು ವಿವರವಾಗಿ ತಿಳಿಸಬಹುದು ಎಂದು ನಾನು ನಿರೀಕ್ಷಿಸಿದ್ದೆ. ಹಿಂದಿನ ವರ್ಷದ ಸಾಧನೆಯ ಜೊತೆಯಲ್ಲಿ ಮುಂದಿನ ವರ್ಷದ ಯೋಜನೆಯ ವಿವರವನ್ನು ನಾನು ಮಂಡಿಸಿದ ಆಯವ್ಯಯ ಪತ್ರಗಳಲ್ಲಿ ಜನತೆಯ ಮುಂದಿಡುತ್ತಿದ್ದೆ. ನಿರ್ಮಲಾ ಸೀತಾರಾಮನ್ ಅವರು ಬಿಚ್ಚಿಟ್ಟದ್ದಕ್ಕಿಂತ ಹೆಚ್ಚು ಬಚ್ಚಿಟ್ಟಿರುವುದೇ ಹೆಚ್ಚು. ತಮ್ಮ ಸಾಧನೆಗಳ ಬಗ್ಗೆ ಭಾಷಣಗಳಲ್ಲಿ ಸುಳ್ಳುಗಳನ್ನು ಹೇಳಿದ ಹಾಗೆ ಅಧಿಕೃತ ದಾಖಲೆಯಾಗಿರುವ ಆಯವ್ಯಯ ಪತ್ರದಲ್ಲಿ ಸುಳ್ಳುಗಳನ್ನು ಹೇಳಲಾಗುವುದಿಲ್ಲ. ಈ ಕಾರಣಕ್ಕಾಗಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಭಾಷಣವನ್ನು ಕೇವಲ ಒಂದು ಗಂಟೆಗೆ ಸೀಮಿತ ಗೊಳಿಸಿ ಕೇವಲ 28 ಪುಟಗಳಲ್ಲಿ ಮುಗಿಸಿಬಿಟ್ಟಿದ್ದಾರೆ.
ದೇಶವನ್ನು ಸಾಲದ ಕೂಪಕ್ಕೆ ತಳ್ಳುತ್ತಿರುವ ನರೇಂದ್ರ ಮೋದಿ ಸರ್ಕಾರದಲ್ಲಿ ಹಣಕಾಸು ಕೊರತೆ ಈಗಾಗಲೇ ಶೇಕಡಾ 5.1 ತಲುಪಿದೆ. ಇದನ್ನು ಶೇಕಡಾ 4.5ಕ್ಕೆ ಇಳಿಸುವುದು ಪ್ರಯಾಸದ ಕೆಲಸ. ಮೋದಿಯವರು ಬಡಜನರ ಹೆಸರಲ್ಲಿ ಸಾಲ ಮಾಡಿ ಅದನ್ನು ಶ್ರೀಮಂತರ ಜೇಬಿಗೆ ತುಂಬಿಸುತ್ತಿದ್ದಾರೆ ಎಂದವರು ಆರೋಪಿಸಿದರು.
ನಿರ್ಮಲಾ ಸೀತಾರಾಮನ್ ಅವರ 28 ಪುಟಗಳ ಭಾಷಣ ಸುಳ್ಳುಗಳ ಸರಮಾಲೆಯಿಂದ ಕೂಡಿದೆ. ಪ್ರತ್ಯಕ್ಷ ತೆರಿಗೆ ಸಂಗ್ರಹ ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. ವಾಸ್ತವದ ಸಂಗತಿ ಎಂದರೆ ಸಾಮಾನ್ಯ ಜನರು ಕೊಡುವ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆ ಹಲವಾರು ಪಟ್ಟು ಹೆಚ್ಚಾಗಿದೆ. ಸಾಮಾನ್ಯ ಜನರ ಆದಾಯ ಶೇಕಡಾ 50ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವೆ ಹೇಳಿದ್ದಾರೆ. ವಾಸ್ತವದ ಸಂಗತಿ ಎಂದರೆ ನಿರುದ್ಯೋಗದ ಪ್ರಮಾಣ 45 ವರ್ಷಗಳ ದಾಖಲೆಯನ್ನು ಮುರಿದು ಮುಂದೆ ಸಾಗುತ್ತಿದೆ.. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಪ್ರಕಾರ ರೈತರು ಮತ್ತು ಕಾರ್ಮಿಕರ ಆದಾಯ ಕಡಿಮೆಯಾಗುತ್ತಲೇ ಇದೆ.ಈ ಆಯವ್ಯಯ ಪತ್ರದಲ್ಲಿ ಯಾವ ಹೊಸ ಯೋಜನೆಗಳನ್ನು ಘೋಷಿಸದೆ ಇರುವ ಕಾರಣದಿಂದಾಗಿ ಕರ್ನಾಟಕದ ಪಾಲಿಗೂ ಏನೂ ಸಿಕ್ಕಿಲ್ಲ. ಕನಿಷ್ಠ ಕಳೆದ ಆಯವ್ಯಯ ಪತ್ರದಲ್ಲಿ ನೀಡಿರುವ ಆಶ್ವಾಸನೆಗಳಲ್ಲಿ ಯಾವುದಾದರೂ ಈಡೇರಿಸಲಾಗಿದೆಯೇ ಎನ್ನುವ ವಿವರ ಕೂಡಾ ಆಯವ್ಯಯ ಪತ್ರದಲ್ಲಿ ಇಲ್ಲ. ಇದು ಕೇವಲ ಕಣ್ಕಟ್ಟಿನ ಆಯವ್ಯಯ ಪತ್ರವಾಗಿದ್ದು ಅಂಕಿ ಸಂಖ್ಯೆಗಳನ್ನು ಕೇಂದ್ರ ಸರ್ಕಾರವು ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರವು 25 ಕೋಟಿ ಮಂದಿಯನ್ನು ಬಡತನದ ತೆಕ್ಕೆಯಿಂದ ಹೊರತಂದಿರುವುದಾಗಿ ಹೇಳುತ್ತಿದೆ. ವಾಸ್ತವದಲ್ಲಿ ಜನತೆಯನ್ನು ಬಡತನದಿಂದ ಹೊರತರುವ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ಕೇಂದ್ರ ಹೊಂದಿಲ್ಲ. ಬದಲಿಗೆ ವಿವಿಧ ರಾಜ್ಯಗಳು ತಮ್ಮ ಬೊಕ್ಕಸದಿಂದ ರೂಪಿಸಿರುವ ಯೋಜನೆಗಳು ವಿಶೇಷವಾಗಿ ದಕ್ಷಿಣದ ರಾಜ್ಯಗಳು ಜನಕಲ್ಯಾಣ ಕಾರ್ಯಕ್ರಮಗಳ ಮೂಲಕ ವಿವಿಧ ಹಂತಗಳಲ್ಲಿ ಜನತೆಯನ್ನು ಬಡತನದಿಂದ ಮೇಲೆತ್ತುವ ಪ್ರಯತ್ನದಲ್ಲಿ ಯಶಸ್ಸು ಕಂಡಿವೆ. ಅದರೆ, ರಾಜ್ಯ ಸರ್ಕಾರಗಳ ಈ ಶ್ರಮವನ್ನು ಕೇಂದ್ರವು ತನ್ನ ಖಾತೆಗೆ ಅನಾಯಾಸವಾಗಿ ವರ್ಗಾಯಿಸಿಕೊಳ್ಳುತ್ತಿದೆ ಎಂದವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಹೇಳುತ್ತಿರುವ ‘ನೇರ ನಗದು ಹಣ ವರ್ಗಾವಣೆ’ಯಂತಹ ಕ್ರಮಗಳ ಲಾಭವನ್ನು ಪಡೆದಿರುವವರ ಸಂಖ್ಯೆ ಅತ್ಯಂತ ವಿರಳವಾಗಿದೆ. ಉದಾಹರಣೆಗೆ ಈ ಹಿಂದೆ ಎಲ್ಲರಿಗೂ ದೊರೆಯುತ್ತಿದ್ದ, ವಿಶೇಷವಾಗಿ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ದೊರೆಯುತ್ತಿದ್ದ ಎಲ್‌ಪಿಜಿ ಸಬ್ಸಿಡಿ ಇಂದು ಬಹುತೇಕರಿಗೆ ದೊರೆಯುತ್ತಿಲ್ಲ. ಉಜ್ವಲಾ ಯೋಜನೆಯಡಿ ಗ್ಯಾಸ್ ಕನೆಕ್ಷನ್ ಪಡೆದವರು ಸಿಲಿಂಡರ್ ಪಡೆಯಲು ಹಣ ಹೊಂದಿಸಲಾಗದೆ ಅನಿಲ ಸ್ಟವ್‌ಗಳ ಬಳಕೆಯನ್ನು ನಿಲ್ಲಿಸಿರುವ ಉದಾಹರಣೆ ಸಾವಿರಾರು ಸಂಖ್ಯೆಯಲ್ಲಿ ನಮ್ಮ ಮುಂದಿದೆ. ಹಳ್ಳಿ, ಹಳ್ಳಿಗಳಲ್ಲಿ ಈ ಯೋಜನೆಯ ವೈಫಲ್ಯ ಕಣ್ಣಿಗೆ ರಾಚುತ್ತಿದೆ. ಆದರೂ ಕೇಂದ್ರ ಸರ್ಕಾರವು ‘ನೇರ ನಗದು ವರ್ಗಾವಣೆ’ಯ ಬಗ್ಗೆ ಕೊಚ್ಚಿಕೊಳ್ಳುತ್ತಿದೆ. ದೇಶದ ಮಹಿಳೆಯರು, ರೈತರು ಹಾಗೂ ಯುವಜನತೆಯ ಭವಿಷ್ಯದ ಮೇಲೆ ನೇರವಾಗಿ ಸಕಾರಾತ್ಮಕ ಪರಿಣಾಮ ಬೀರುವ ಯಾವುದೇ ಗುಣಾತ್ಮಕ ಸಂಗತಿಗಳನ್ನು ಈ ಬಜೆಟ್ ಹೊಂದಿಲ್ಲ. ಇಡೀ ದೇಶದಲ್ಲಿಯೇ ಮಧ್ಯಮ, ಸಣ್ಣ, ಅತೀ ಸಣ್ಣ ಕೈಗಾರಿಕೆಗಳು ಕೇಂದ್ರ ಸರ್ಕಾರದಿಂದ ಯಾವುದೇ ಗುಣಾತ್ಮಕ ನೆರವಿಲ್ಲದೆ ಸಾಲುಸಾಲಾಗಿ ಮುಚ್ಚಿಕೊಂಡಿವೆ. ಕೋವಿಡ್‌ನಲ್ಲಿ ನಿಂತ ಇವುಗಳ ಪ್ರಗತಿಯ ಚಕ್ರ ಇಂದಿಗೂ ಪೂರ್ಣವಾಗಿ ಆರಂಭವಾಗಿಲ್ಲ. ಸರ್ಕಾರದ ಯಾವುದೇ ನಡೆ ಈ ಉದ್ಯಮಗಳಲ್ಲಿ ಪ್ರತ್ಯಕ್ಷ, ಪರೋಕ್ಷ ಚೈತನ್ಯ ತುಂಬಿಲ್ಲ. ಇವುಗಳ ಬಲವರ್ಧನೆಯ ಬಗ್ಗೆ ಕೇಂದ್ರ ಸರ್ಕಾರವು ಯಾವುದೇ ನಿರ್ದಿಷ್ಟ ನೀತಿ, ಯೋಜನೆಗಳನ್ನು ಈ ಬಜೆಟ್‌ನಲ್ಲಿಯೂ ಹೊಂದಿಲ್ಲದಿರುವುದು ಆಘಾತಕಾರಿ. ಇದರಿಂದ ಮುಂದಿನ ದಿನಗಳಲ್ಲಿ ಈ ಉದ್ಯಮಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದು ನಿರುದ್ಯೋಗದ ಸಂಖ್ಯೆ ಮತ್ತೂ ಹೆಚ್ಚಲಿದೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ.
ರೈತರಿಗೆ ತಮ್ಮ ಬೆಳೆಗೆಳಿಗೆ ದೊರೆಯಬೇಕಾದ ಕನಿಷ್ಠ ಬೆಂಬಲ ಬೆಲೆಯನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವುದೇ ಪ್ರಯತ್ನ ಮಾಡಿಲ್ಲ. ಈ ನಿಟ್ಟಿನಲ್ಲಿ ಸೂಕ್ತ ತಿದ್ದುಪಡಿ ತರಬೇಕು ಎನ್ನುವ ಕೋರಿಕೆಗೆ ಕಾನೂನಿನ ಬಲ ದೊರೆತಿಲ್ಲ. ಬಜೆಟ್‌ನಲ್ಲಿ ರೈತರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ಇಲ್ಲ. ಹೀಗಿರುವಾಗ ರೈತರ ಆದಾಯ ಹೆಚ್ಚುವುದಾದರೂ ಹೇಗೆ?
ಯುವಜನತೆಗೆ ಕೌಶಲ್ಯ ತರಬೇತಿ ನೀಡುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಹೇಳುತ್ತಿದೆಯಾದರೂ ಉದ್ಯೋಗ ಸೃಷ್ಟಿಯಲ್ಲಿ ಗಣನೀಯ ವೈಫಲ್ಯ ಕಂಡಿದೆ. ಇಂದು ಕೌಶಲ್ಯ ಹೊಂದಿರುವ ಯುವ ಪೀಳಿಗೆ ಸಹ ತಮ್ಮ ಕೌಶಲ್ಯ, ವಿದ್ಯೆಗೆ ಪೂರಕವಲ್ಲದ ಗಿಗ್ ಜಾಬ್‌ಗಳಲ್ಲಿ ತೊಡಗಿಕೊಂಡಿದ್ದಾರೆ. ಇದು ಉತ್ಪಾದನಾ ವಲಯದಲ್ಲಿ ಸೂಕ್ತ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎನ್ನುವುದಕ್ಕೆ ಹಿಡಿದ ಕನ್ನಡಿಯಾಗಿದೆ. ಜನರ ಮುಂದೆ ಮುಚ್ಚಿಟ್ಟಿರುವುದೇ ಹೆಚ್ಚು. ದೇಶದ ಆರ್ಥಿಕ ಪರಿಸ್ಥಿತಿಯನ್ನು ಬಿಚ್ಚಿಟ್ಟಿಲ್ಲ. ನಿರುದ್ಯೋಗ, ಬೆಲೆಯೇರಿಕೆ, ಬರಗಾಲ , ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪವೇ ಇಲ್ಲ. ಬಜೆಟ್ ನ 47 ಲಕ್ಷ ಕೋಟಿ ರೂ.ಗಳಲ್ಲಿ 16,85494 ಕೋಟಿ ರೂ ಸಾಲ ಮಾಡಿದ್ದಾರೆ. ಬೆಳೆ ಪರಿಹಾರವನ್ನು ಬಜೆಟ್ ನಲ್ಲಿ ಹೇಳಿಲ್ಲ. ಎಂ.ಎಸ್.ಪಿ ಗೆ ಕೆಲವು ಬೆಳೆಗಳನ್ನು ಮಾತ್ರ ಸೇರಿಸಿದ್ದಾರೆ. ರೈತರ ಎಲ್ಲಾ ಬೆಳೆಗಳು ಎಂ.ಎಸ್.ಪಿ ಅಡಿ ಬರಬೇಕು. ಇದರ ಬಗ್ಗೆ ಏನನ್ನೂ ಬಜೆಟ್ ನಲ್ಲಿ ಹೇಳಿಲ್ಲ.ತೆರಿಗೆಯನ್ನು ಕಾರ್ಪೊರೇಟ್ ಗಳ ಮೇಲಿನ ಪ್ರಮಾಣ ಶೇ 30 ಕ್ಕೆ ಇಳಿಸಿ ಉಳಿದ ಭಾರವನ್ನು ಬಡವರು, ಮಧ್ಯಮ ವರ್ಗದವರ ಮೇಲೆ ಹೇರಿದ್ದಾರೆ ಮತ್ಯು ಹೆಚ್ಚಿಸಿದ್ದಾರೆ ಎಂದವರು ಆರೋಪಿಸಿದ್ದಾರೆ.
2004 -14 ರವರೆಗೆ ಮನ್ ಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಆಗ ಬೆಳವಣಿಗೆ ದರ 13.79 % ಇತ್ತು. ಈಗ ಬಜೆಟ್ ಬೆಳವಣಿಗೆ 9.6 % ಕ್ಕೆ ಕುಸಿತ ಕಂಡಿದೆ. ವಿಕಸಿತ ಎಂದು ಹೇಳಿಕೊಂಡು 9.6% ಗೆ ತಂದಿದ್ದಾರೆ. 4.19 % ಕಡಿಮೆಯಾಗಿದೆ. ಜಿ.ಡಿ.ಪಿ ಬೆಳವಣಿಗೆ ಯುಪಿಎ ಸರ್ಕಾರದಲ್ಲಿ ಶೇ 11.14 % ಇತ್ತು ಎನ್.ಡಿ.ಎ ಕಾಲದಲ್ಲಿ 6.4% ಕ್ಕೆ ಕುಸಿತವಾಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ ಅನುದಾನ ಬಂದಿಲ್ಲ. 15ನೇ ಹಣಕಾಸು, ಫೆರಿಫೆರಲ್ ರಿಂಗ್ ರೋಡಿಗೆ ಹಣ ಬಂದಿಲ್ಲ. ₹5,300 ಕೋಟಿ ಭದ್ರ ಮೇಲ್ದಂಡೆ ಯೋಜನೆಗೆ ಬಂದಿಲ್ಲ. ಬರಗಾಲದ ಪರಿಹಾರಕ್ಕೂ ಒಂದು ಪೈಸೆ ಬಂದಿಲ್ಲ. ದೇಶದ ಸಾರ್ವ ಭೌಮತೆ ಇರಬೇಕು. ಆದರೆ ರಾಜ್ಯಗಳಿಗೆ ಅವರ ಪಾಲು ಕೊಡಬೇಕು. ಕೇಂದ್ರ ರಾಜ್ಯಗಳ ಪಾಲನ್ನು ಕೊಡುತ್ತಿಲ್ಲ. ರಾಯಚೂರು ಜಿಲ್ಲೆಗೆ ಎಮ್ಸ್ ಸ್ಥಾಪನೆಗೆ ಒತ್ತಾಯಿಸಿದ್ದೆವು. ಪ್ರಯೋಜನ ಆಗಿಲ್ಲ .ನಮ್ಮಿಂದ 4 ಲಕ್ಷ ಕೋಟಿ ತೆರಿಗೆ ವಸೂಲಿ ಮಾಡುವ ಕೇಂದ್ರ ಸರ್ಕಾರ ನಮಗೆ, ನಮ್ಮ ನಾಡಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ ಅಖಂಡ ಭಾರತ, ಅಖಂಡ ಕರ್ನಾಟಕ ಉಳಿಯಬೇಕು. ಇದಕ್ಕಾಗಿ ರಾಜ್ಯಗಳ ಪಾಲನ್ನು ಚಾಚೂ ತಪ್ಪದೆ ಕೊಡಬೇಕು. ಬಿಜೆಪಿ ಆಳ್ವಿಕೆಯ ಈ ‘‘ವಿನಾಶಕಾರಿ ಭಾರತ’’ದಲ್ಲಿ ದೇಶದ ಎಲ್ಲ ಜಾತಿ-ಧರ್ಮಗಳ ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ವಿಶೇಷವಾಗಿ ದಲಿತ ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳು ದಮನಕ್ಕೀಡಾಗಿದ್ದಾರೆ, ಅವರ ಸಾಮಾಜಿಕ ಮತ್ತು ಆರ್ಥಿಕ ಬದುಕು ಅಧ:ಪತನಗೊಂಡಿದೆ. ಈ ದೃಷ್ಟಿಯಲ್ಲಿ ನಾವಿಂದು ಪ್ರಜಾಪ್ರಭುತ್ವದ ‘‘ಅಮೃತ ಕಾಲ’’ದಲ್ಲಿ ಇಲ್ಲ, ‘‘ಮೃತ ಕಾಲ’’ದಲ್ಲಿದ್ದೇವೆ ಎಂದು ಸಿದ್ದರಾಮಯ್ಯ ನವರು ವಿಷಾದವ್ಯಕ್ತಪಡಿಸಿದ್ದಾರೆ.