Advertisement

ಉತ್ತರದ ವೈಫಲ್ಯಕ್ಕೆ ದಕ್ಷಿಣಕ್ಕೆ ಶಿಕ್ಷೆ? - ಮಟ್ಟು

Advertisement

ಬರಹ: ದಿನೇಶ್ ಅಮಿನ್ ಮಟ್ಟು‌ (ಲೇಖಕರು ಹಿರಿಯ ಪತ್ರಕರ್ತರು, ಪ್ರಗತಿಪರ ಚಿಂತಕರು ಹಾಗೂ ಜನಪರ ಹೋರಾಟಗಾರರು)

ಸಂಸದ ಡಿ.ಕೆ.ಸುರೇಶ್ ಅವರ ಪ್ರತ್ಯೇಕ ದೇಶದ ಹೇಳಿಕೆಯ ವಿರುದ್ದ ಸಿಡಿದೆದ್ದವರು ಕನ್ನಡಿಗರಾಗಿದ್ದರೆ ಅವರು ಮೊದಲು ಈ ಲೇಖನವನ್ನು ಓದಬೇಕು:

ಇದು ವಾರ್ತಾಭಾರತಿಯ ಈ ವರ್ಷದ ವಾರ್ಷಿಕ ವಿಶೇಷಾಂಕದಲ್ಲಿ ಪ್ರಕಟವಾಗಿರುವ ನನ್ನ ಲೇಖನ:

ಉತ್ತರದ ವೈಫಲ್ಯಕ್ಕೆ ದಕ್ಷಿಣಕ್ಕೆ ಶಿಕ್ಷೆ?

ವಿಂದ್ಯಾಚಲವನ್ನು ದಾಟಿ ಚೈತ್ರಯಾತ್ರೆಯನ್ನು ಮುನ್ನುಗ್ಗಿಸಿಕೊಂಡು ಹೋಗುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ದಕ್ಷಿಣದ ರಾಜ್ಯಗಳು ಇನ್ನೂ ಅಭೇಧ್ಯವಾಗಿಯೇ ಉಳಿದಿವೆ. ಈ ದಕ್ಷಿಣದ ರಾಜ್ಯಗಳನ್ನು ಮಣಿಸಲು ಕ್ಷೇತ್ರ ವಿಂಗಡಣೆಯ ಅಸ್ತ್ರವನ್ನು ಬಳಸಲಿದೆಯೇ ಎಂಬ ಪ್ರಶ್ನೆಯ ಸುತ್ತ ಚರ್ಚೆ ಪ್ರಾರಂಭವಾಗಿದೆ. ಒಂದು ಕಾಲದ ‘ಬ್ರಾಹ್ಮಣ-ಬನಿಯಾ ಪಕ್ಷ’ ಎಂಬ ಮೂಲ ತಲೆಬರಹವನ್ನು ತನ್ನ ಪರಿಣಾಮಕಾರಿ ಸೋಷಿಯಲ್ ಎಂಜನಿಯರಿಂಗ್ ಮೂಲಕ ಕೊಡವಿಕೊಂಡು ಗೆಲುವಿನ ಹಾದಿಯಲ್ಲಿ ಸಾಗುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ತನಗೆ ಅಂಟಿಕೊಂಡಿರುವ ‘’ ಹಿಂದಿ ರಾಜ್ಯಗಳ ಪಕ್ಷ’’ ಎಂಬ ಇನ್ನೊಂದು ತಲೆಬರಹವನ್ನು ಅಳಿಸಿಹಾಕಲು ಸಾಧ್ಯವಾಗಿಲ್ಲ ಎನ್ನುವುದು ಇತ್ತೀಚಿನ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವೂ ದೃಡಪಡಿಸಿದೆ.

ದಕ್ಷಿಣದ ಐದು ರಾಜ್ಯಗಳಲ್ಲಿ ಕರ್ನಾಟಕವೊಂದನ್ನು ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳಾದ ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಇಂದಿಗೂ ಬಿಜೆಪಿ ಪಾಲಿಗೆ ಅಭೇದ್ಯವಾಗಿಯೇ ಉಳಿದಿದೆ. ಆಪರೇಷನ್ ಕಮಲದಂತಹ ಅನೈತಿಕ ರಾಜಕಾರಣದ ಮೂಲಕವಷ್ಟೇ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಈ ರಾಜ್ಯದಲ್ಲಿಯೂ ಇಂದಿಗೂ ಸ್ವಂತ ಬಲದಿಂದ ತನ್ನವನೊಬ್ಬನನ್ನು ಮುಖ್ಯಮಂತ್ರಿಯ ಸಿಂಹಾಸನದ ಮೇಲೆ ಕೂರಿಸಲಾಗಲಿಲ್ಲ ಎನ್ನುವುದು ದಕ್ಷಿಣ ಭಾರತ ಬಿಜೆಪಿಗೆ ಸುಲಭದಲ್ಲಿ ನುಂಗಬಹುದಾದ ತುತ್ತು ಅಲ್ಲ ಎನ್ನುವುದನ್ನು ಇನ್ನಷ್ಟು ದೃಡಪಡಿಸಿದೆ.

ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಯ ಸೋಲು ಇಲ್ಲವೇ ಬಿಜೆಪಿಯೇತರ ಪಕ್ಷಗಳ ಗೆಲುವನ್ನು ಬಗೆಬಗೆಯಲ್ಲಿ ವ್ಯಾಖ್ಯಾನಿಸಬಹುದು. ಬಹಳ ಮುಖ್ಯವಾದ ಕಾರಣ ತಮಿಳುನಾಡು ಮತ್ತು ಕೇರಳ ರಾಜ್ಯಗಳ ವರ್ತಮಾನದ ರಾಜಕೀಯದ ಮೇಲೆ ಅಲ್ಲಿನ ಮೂಲ ಸಾಮಾಜಿಕ ಚಳುವಳಿಯ ದಟ್ಟ ಪ್ರಭಾವ. ತಮಿಳುನಾಡಿನಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅವರ ಪಕ್ಷದ ಕಚೇರಿಯಲ್ಲಿ ಪೆರಿಯಾರ್ ಪೋಟೊಗೆ ಮೊದಲು ತಲೆಬಾಗಲೇಬೇಕು. ಪೆರಿಯಾರ್ ಅವರನ್ನು ಧಿಕ್ಕರಿಸುವವರನ್ನು ತಮಿಳು ಜನ ಪುರಸ್ಕರಿಸುವುದಿಲ್ಲ ಎನ್ನುವುದು ಇಲ್ಲಿಯ ವರೆಗಿನ ವಾಸ್ತವ.

ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನರನ್ನೊಳಗೊಂಡ ಮತದಾರರ ಪ್ರಮಾಣವೇ ಶೇಕಡಾ 45ರಷ್ಟಿರುವುದು ಬಿಜೆಪಿಯ ಗೆಲುವಿಗೆ ಅಡ್ಡಿಯಾಗುತ್ತಿದೆ ಎಂದು ಮೇಲ್ನೋಟಕ್ಕೆ ಅನಿಸಿದರೂ ಈ ಮತಬ್ಯಾಂಕ್ ಗೆ ಇದಿರಾಗಿ ಹಿಂದೂ ಮತಗಳ ಧ್ರುವಿಕರಣ ನಡೆಸುವ ಬಿಜೆಪಿಯ ಸತತ ಪ್ರಯತ್ನ ವಿಫಲವಾಗಿರುವುದರಲ್ಲಿ ಸಾಮಾಜಿಕ ಸುಧಾರಕ ನಾರಾಯಣ ಗುರುಗಳ ಚಿಂತನೆಯ ದೊಡ್ಡ ಪಾತ್ರ ಇರುವುದನ್ನು ಒಪ್ಪಬೇಕಾಗುತ್ತದೆ. ನಾರಾಯಣ ಗುರುಗಳನ್ನೇ ಮುಂದಿಟ್ಟುಕೊಂಡು ಈಳವ ಮತಗಳನ್ನು ಪಡೆಯಲು ಎಸ್ ಎನ್ ಡಿಪಿಯನ್ನೇ ಒಡೆಯುವ ಬಿಜೆಪಿಯ ಪ್ರಯತ್ನವೂ ಅಲ್ಲಿ ವಿಫಲವಾಗಿರುವುದು ಕೂಡಾ ಇದೇ ಅಭಿಪ್ರಾಯವನ್ನು ಬಿಂಬಿಸುತ್ತದೆ.
ಆಂಧ್ರ ಪ್ರದೇಶಕ್ಕೆ ಸಾಮಾಜಿಕ ಚಳುವಳಿಯ ಹಿನ್ನೆಲೆ ಇರದಿದ್ದರೂ ಒಂದು ಕಾಲದಲ್ಲಿ ಪಶ್ಚಿಮ ಬಂಗಾಳದ ನಂತರ ಕಮ್ಯುನಿಸ್ಟರು ಅಧಿಕಾರಕ್ಕೆ ಬರುವ ಕನಸು ಕಂಡಿದ್ದರೆ ಅದು ಆಂಧ್ರಪ್ರದೇಶದಲ್ಲಿ ಎನ್ನುವುದು ಇತಿಹಾಸದ ಸತ್ಯ. ಅಲ್ಲಿ ಮಾವೋವಾದಿ ಚಳುವಳಿಯ ಪ್ರಭಾವವನ್ನು ಕೂಡಾ ನಿರಾಕರಿಸಲಾಗದು. ಈ ರೀತಿ ಬಿಜೆಪಿಯನ್ನು ದೂರ ಇಟ್ಟಿರುವ ಅವಿಭಜಿತ ಆಂಧ್ರಪ್ರದೇಶದ ಇಂದಿನ ಮತದಾರರ ಮೇಲೆ ಎಡಪಂಥೀಯ ಚಳುವಳಿಯ ಪ್ರಭಾವ ಇದೆ ಎನ್ನುವುದನ್ನು ಎಡಪಂಥೀಯರೇ ಒಪ್ಪಲಾರರು. ಆದರೆ ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಯಜಮಾನಿಕೆಯ ವಿರುದ್ದ ತೆಲುಗರ ಸ್ವಾಭಿಮಾನವನ್ನು ಬಡಿದೆಬ್ಬಿಸಿದ ಎನ್. ಟಿ ರಾಮರಾವ್ ಅವರ ರಾಜಕೀಯ ಯಶಸ್ಸಿನ ಪ್ರೇರಣೆ ಅಲ್ಲಿ ಇನ್ನೂ ಮುಂದುವರಿದಿದೆ. ಎನ್ ಟಿ ಆರ್ ರಾಜಕೀಯದ ವಾರಸುದಾರರಾಗಿ ಮುನ್ನೆಲೆಗೆ ಬಂದ ಚಾಣಾಕ್ಷ ರಾಜಕಾರಣಿ ಚಂದ್ರಬಾಬು ನಾಯ್ಡು ಸತತ 9 ವರ್ಷ ಬಿಜೆಪಿ ಜೊತೆ ರಾಜಿಮಾಡಿಕೊಂಡು ಅಧಿಕಾರ ನಡೆಸಿದರೂ ಡಿಎಂಕೆ- ಎಐಡಿಎಂಕೆ ಪಕ್ಷಗಳಂತೆ ತನ್ನ ಪಕ್ಷವನ್ನು ಆಪೋಶನ ತೆಗೆದುಕೊಳ್ಳಲು ಬಿಜೆಪಿಗೆ ಅವಕಾಶ ನೀಡಲಿಲ್ಲ
ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಅಲ್ಲಿನ ರಾಜಕಾರಣಿಗಳು ಜನತಾ ಪರಿವಾರದ ಬಲೆಗೆ ಬೀಳಲಿಲ್ಲ ಮತ್ತು ಅಲ್ಲಿನ ಮತದಾರರು ಕೂಡಾ ತೃತೀಯ ಶಕ್ತಿಯನ್ನು ಜನತಾ ಪರಿವಾರದಲ್ಲಿ ಹುಡುಕುವ ಪ್ರಯತ್ನವನ್ನೂ ಮಾಡದಿರುವುದು ಕೂಡಾ ಬಿಜೆಪಿಯಿಂದ ಈ ರಾಜ್ಯಗಳು ಸುರಕ್ಷಿತವಾಗಿರಲು ಕಾರಣವಾಗಿರಬಹುದು. ಎಲ್ಲೆಲ್ಲಿ ಜನತಾ ಪಕ್ಷ ಎಂಬ ಮೂರನೆಯ ಶಕ್ತಿ ಉಳಿದಿತ್ತೋ ಅಲ್ಲೆಲ್ಲ ಬಿಜೆಪಿ ಸುಲಭದಲ್ಲಿ ಅದನ್ನು ಕೈತುತ್ತು ಮಾಡಿಕೊಂಡು ನುಂಗಿಕೊಂಡು ಬೆಳೆದದ್ದನ್ನು ಕಾಣಬಹುದು.
ಉದಾಹರಣೆಗೆ ಗುಜರಾತ್ ಮತ್ತು ರಾಜಸ್ತಾನದಲ್ಲಿ ಈ ಆಪರೇಷನ್ ಸಂಪೂರ್ಣಗೊಂಡಿದೆ. ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಜಾರಿಯಲ್ಲಿದೆ. ಒಡಿಸ್ಸಾದಲ್ಲಿ ನವೀನ್ ಪಟ್ನಾಯಕ್ ನಂತರ ನಡೆಯಬಹುದು. ಕರ್ನಾಟಕದಲ್ಲಿ ಶುರುವಾಗಿರುವ ಪ್ರಯೋಗದ ಫಲ ಕಾಣಲು ಒಂದೆರಡು ವರ್ಷ ಬೇಕಾಗಬಹುದು.
ದಕ್ಷಿಣದ ರಾಜ್ಯಗಳು ತಮ್ಮ ಪಕ್ಷವನ್ನು ತಿರಸ್ಕರಿಸಿರುವುದು ಮಾತ್ರವಲ್ಲ ತಮ್ಮನ್ನು ಪುರಸ್ಕರಿಸಿದ ರಾಜ್ಯಗಳನ್ನು ಹಿಂದಕ್ಕಟ್ಟಿ ಅಭಿವೃದ್ದಿಯ ಪಥದಲ್ಲಿ ಮುಂದೋಡುತ್ತಿರುವುದು ಬಿಜೆಪಿಯ ಸೋಲನ್ನು ಇನ್ನಷ್ಟು ಕಹಿಯಾಗಿಸಿದೆ. ಈ ಸೇಡನ್ನು ತೀರಿಸಿಕೊಳ್ಳಬೇಕೆಂಬ ಯೋಚನೆಯಲ್ಲಿರುವ ಬಿಜೆಪಿ ಬಾಯಿಗೆ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯ ಲಾಡು ಬಿದ್ದಿದೆ. ಈ ಲಾಡನ್ನು ನುಂಗದೆ ಇನ್ನೂ ಬಾಯಿಯಲ್ಲಿಟ್ಟುಕೊಂಡಿರುವ ಬಿಜೆಪಿ ಕ್ಷೇತ್ರ ಮರುವಿಂಗಡಣೆಯ ಚರ್ಚೆಯನ್ನು ತೆರೆದಿಟ್ಟು ಜನತೆಯ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದೆ.

ಕ್ಷೇತ್ರ ಮರುವಿಂಗಡಣೆಯ ಪರಿಣಾಮವನ್ನು ಚರ್ಚಿಸುವ ಮೊದಲು ಇದರ ಇತಿಹಾಸದ ಕಡೆ ಒಂದು ನೋಟ ಹರಿಸೋಣ. ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ 1951ರ ಜನಗಣತಿಯನ್ನು ಆಧರಿಸಿ 1952ರಲ್ಲಿ ಕ್ಷೇತ್ರ ವಿಂಗಡಣೆ ನಡೆಸಿ ಲೋಕಸಭಾ ಕ್ಷೇತ್ರಗಳ ಸಂ‍ಖ್ಯೆಯನ್ನು 494ಕ್ಕೆ ನಿಗದಿಗೊಳಿಸಲಾಗಿತ್ತು. 1963ರಲ್ಲಿ ನಡೆದ ಕ್ಷೇತ್ರ ವಿಂಗಡಣೆಯಲ್ಲಿ ಲೋಕಸಭಾ ಸ್ಥಾನಗಳನ್ನು 522ಕ್ಕೆ ಹೆಚ್ಚಿಸಲಾಯಿತು. 1973ರಲ್ಲಿ ನಡೆದ ಮೂರನೇ ಕ್ಷೇತ್ರ ಮರು ವಿಂಗಡಣೆಯೇ ಕೊನೆಯದ್ದು. 1972ರ ಜನಗಣತಿಯನ್ನು ಆಧರಿಸಿದ್ದ ಕ್ಷೇತ್ರ ಮರು ವಿಂಗಡಣೆಯಲ್ಲಿ ಲೋಕಸಭಾ ಸ್ಥಾನಗಳನ್ನು 543ಕ್ಕೆ ನಿಗದಿಪಡಿಸಲಾಗಿತ್ತು. ಅದರ ನಂತರ ಎರಡು ಬಾರಿ ಮೊದಲು 1976ರಲ್ಲಿ ನಂತರ ಅದನ್ನು 2026ರ ವರೆಗೆ ಸ್ಥಗಿತಗೊಳಿಸಲಾಯಿತು . 2001ರ ಜನಗಣತಿಯನ್ನು ಆಧರಿಸಿ 2008ರಲ್ಲಿ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ನಡೆದರೂ ಸದಸ್ಯರ ಸಂಖ್ಯೆಯ ಬದಲಾವಣೆ ನಡೆದಿರಲಿಲ್ಲ.
ಸ್ಥಗಿತಗೊಳಿಸಿರುವ ಕ್ಷೇತ್ರ ಮರುವಿಂಗಡಣೆಯ ಅವಧಿ 2026ಕ್ಕೆ ಕೊನೆಗೊಳ್ಳಲಿರುವುದರಿಂದ ಈ ಕುರಿತ ಚರ್ಚೆ ಪ್ರಾರಂಭವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಅವರ ಹಣಕಾಸು ಸಚಿವ ಪಳನಿವೇಲು ತ್ಯಾಗರಾಜನ್ ಅವರು ಕ್ಷೇತ್ರ ಮರುವಿಂಗಡಣೆಯನ್ನು ವಿರೋಧಿಸಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಕೂಡಾ ಇದಕ್ಕೆ ದನಿಗೂಡಿಸಿದ್ದರು. ಬಿಜೆಪಿ ಜೊತೆ ಹೊಂದಾಣಿಕೆಯಲ್ಲಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತನ್ನ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ ಹಾಗಿಲ್ಲ. ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್, ರಾಷ್ಟ್ರೀಯ ಪಕ್ಷವಾಗಿರುವ ಕಾರಣ ಇತರ ಪ್ರಾದೇಶಿಕ ಪಕ್ಷಗಳ ರೀತಿಯಲ್ಲಿ ತನ್ನ ನಿಲುವನ್ನು ನೇರವಾಗಿ, ದಿಟ್ಟವಾಗಿ ವ್ಯಕ್ತಪಡಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಿದ್ದರೂ ಕೇರಳದ ಕಾಂಗ್ರೆಸ್ ಲೋಕಸಭಾ ಸದಸ್ಯ ಶಶಿ ತರೂರ್ ಅವರು ಇತ್ತೀಚಿನ ಜನಗಣತಿ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡುವ ಪ್ರಸ್ತಾವವನ್ನು ವಿರೋಧಿಸಿದ್ದಾರೆ. ಒಂದೊಮ್ಮೆ ಕ್ಷೇತ್ರ ಮರುವಿಂಗಡಣೇ ನಡೆದರೂ ಅದಕ್ಕೆ 1971ರ ಜನಗಣತಿಯನ್ನೇ ಆಧಾರವಾಗಿಟ್ಟುಕೊಳ್ಳಬೇಕೆಂಬುದು ಇವರೆಲ್ಲರ ವಾದವಾಗಿದೆ.

ಸಂವಿಧಾನದ ಪರಿಚ್ಚೇದ 81 ರ ಪ್ರಕಾರ ಪ್ರತಿಯೊಂದು ರಾಜ್ಯವೂ ತನ್ನ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆಯಲ್ಲಿ ಸದಸ್ಯರನ್ನು ಹೊಂದಿರಬೇಕಾಗುತ್ತದೆ. ಸದ್ಯ ದೇಶದಲ್ಲಿ ದಶಕಗಳಷ್ಟು 1971ರ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಇದರಿಂದಾಗಿ ಕ್ಷೇತ್ರವಾರು ಮತದಾರರ ಸಂಖ್ಯೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವನ್ನು ಕಾಣಬಹುದಾಗಿದೆ.
2011ರ ಜನಗಣತಿ ಪ್ರಕಾರ 20.3 ಕೋಟಿ ಜನಸಂಖ್ಯೆ ಇರುವ ಉತ್ತರಪ್ರದೇಶದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 80, ಅಲ್ಲಿನ ಸರಾಸರಿ 25 ಲಕ್ಷ ಮತದಾರರಿಗೆ ಒಬ್ಬ ಲೋಕಸಭಾ ಸದಸ್ಯ ಇದ್ದಾರೆ. 6.4 ಕೋಟಿ ಜನಸಂಖ್ಯೆ ಇರುವ ಕರ್ನಾಟಕ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28, ಇಲ್ಲಿ ಸರಾಸರಿ ಹದಿನಾರು ಲಕ್ಷ ಮತದಾರರಿಗೆ ಒಬ್ಬ ಲೋಕಸಭಾ ಸದಸ್ಯರಿದ್ದಾರೆ. ಈ ಲೆಕ್ಕದ ಪ್ರಕಾರ ಉತ್ತರಪ್ರದೇಶದ ಜನತೆಗಿಂತ ಸುಮಾರು ಶೇಕಡಾ 25ರಷ್ಟು ಹೆಚ್ಚು ಪ್ರಾತಿನಿಧ್ಯವನ್ನು ಕರ್ನಾಟಕದ ಜನತೆ ಪಡೆದಿರುತ್ತಾರೆ. ಈ ರೀತಿ ನಿಧಾನವಾಗಿ ಉತ್ತರಭಾರತದ ಜನತೆಯ ಪ್ರಾತಿನಿಧ್ಯ ಲೋಕಸಭೆಯಲ್ಲಿ ಕಡಿಮೆಯಾಗುತ್ತಿದ್ದು ದಕ್ಷಿಣದ ರಾಜ್ಯಗಳಿಗೆ ಲೋಕಸಭಾ ಪ್ರಾತಿನಿಧ್ಯ ಹೆಚ್ಚಾಗುತ್ತಿದೆ ಎಂಬ ಅಭಿಪ್ರಾಯ ಇದೆ.

ಈ ಒಂದು ಅಂಶವನ್ನು ಮುಂದಿಟ್ಟುಕೊಂಡು ಉತ್ತರದ ರಾಜ್ಯಗಳು ಇತ್ತೀಚಿನ ಜನಗಣತಿಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ನಡೆಸಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿವೆ. ಅಭೇದ್ಯವಾಗಿರುವ ದಕ್ಷಿಣದ ರಾಜ್ಯಗಳನ್ನು ಹಣಿಯಲು ಅವಕಾಶದ ಹುಡುಕಾಟದಲ್ಲಿರುವ ಆಢಳಿತಾರೂಢ ಬಿಜೆಪಿ ಪಕ್ಷ ಈ ಅಭಿಪ್ರಾಯದಲ್ಲಿ ರಾಜಕೀಯ ಲಾಭದ ಅವಕಾಶವನ್ನು ಕಂಡಿದೆ .
ಅಮೆರಿಕದ ಥಿಂಕ್ ಟ್ಯಾಂಕ್ ‘’ಕಾರ್ನೆಗಿ ಎಂಡೋಮೆಂಟ್ ಫಾರ ಇಂಟರ್ ನ್ಯಾಷನಲ್ ಪೀಸ್’’ 2019ರಲ್ಲಿ ನಡೆಸಿರುವ ಸಮೀಕ್ಷೆ ಪ್ರಕಾರ 2026ರ ಜನಸಂಖ್ಯೆ ಆಧಾರದಲ್ಲಿ ಭಾರತದ ಕ್ಷೇತ್ರ ಮರುವಿಂಗಡಣೆ ನಡೆದರೆ ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆ ಈಗಿನ 545ರಿಂದ 846ಕ್ಕೆ ಹೆಚ್ಚಾಗಲಿದೆ. ಆಗ ಉತ್ತರ ಪ್ರದೇಶ ಮತ್ತು ಬಿಹಾರದ ಲೋಕಸಭಾ ಕ್ಷೆೇತ್ರಗಳು 120 ರಿಂದ 222ಕ್ಕೆ ಏರಿದರೆ, ದಕ್ಷಿಣದ ಐದು ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಲ ಲೋಕಸಭಾ ಕ್ಷೇತ್ರಗಳ ಸಂಖ್ಯೆ 120ರಿಂದ 165ಕ್ಕೆ ಮಾತ್ರ ಏರಲಿದೆ. ಈ ಐದು ರಾಜ್ಯಗಳ ಪೈಕಿ ಕೇರಳದ ಲೋಕಸಭಾ ಸ್ಥಾನಗಳು ಒಂದು ಹೆಚ್ಚಾಗಬಹುದು ಇಲ್ಲವೇ ಕಡಿಮೆಯಾಗಬಹುದು. ದಕ್ಷಿಣದ ರಾಜ್ಯಗಳ ಲೋಕಸಭಾ ಸ್ಥಾನಗಳ ಪ್ರಮಾಣ ಶೇಕಡಾ 23ರಿಂದ ಶೇಕಡಾ 19ಕ್ಕೆ ಕುಸಿದರೆ ಮತ್ತು ಹಿಂದಿ ರಾಜ್ಯಗಳ ಲೋಕಸಭಾ ಸ್ಥಾನಗಳ ಪ್ರಮಾಣ ಶೇಕಡಾ 42ರಿಂದ ಶೇಕಡಾ 48ಕ್ಕೆ ಹೆಚ್ಚಾಗಲಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಹತ್ತ್ತು ಹಿಂದಿ ರಾಜ್ಯಗಳ 225 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 178ರಲ್ಲಿ ಗೆದ್ದಿದೆ. ದಕ್ಷಿಣದ ರಾಜ್ಯಗಳ 129 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 29 ಮಾತ್ರ ಗೆದ್ದಿದೆ. ಆಂಧ್ರಪ್ರದೇಶ (25) ಕೇರಳ (20) ಮತ್ತು ತಮಿಳುನಾಡು(39)ವಿನಲ್ಲಿ ಒಂದೇ ಒಂದು ಸ್ಥಾನವನ್ನು ಗೆದ್ದಿಲ್ಲ. ಕರ್ನಾಟಕದಲ್ಲಿ 25 ಮತ್ತು ತೆಲಂಗಾಣದಲ್ಲಿ ನಾಲ್ಕು ಸ್ಥಾನಗಳನ್ನು ಮಾತ್ರ ಗೆದ್ದಿತ್ತು.

ಭವಿಷ್ಯದಲ್ಲಿಯೂ ಉತ್ತರದ ರಾಜ್ಯಗಳ ಜನಸಂಖ್ಯೆ ರಾಷ್ಟ್ರೀಯ ಸರಾಸರಿಯನ್ನು ಮೀರಿ ಬೆಳೆಯಲಿದೆ ಮತ್ತು ದಕ್ಷಿಣದ ರಾಜ್ಯಗಳ ಜನಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಇತ್ತೀಚಿನ ಜನಗಣತಿಯಲ್ಲಿನ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಕ್ಷೇತ್ರ ಮರುವಿಂಗಡಣೆ ನಡೆದರೆ ಲೋಕಸಭೆಯಲ್ಲಿ ಉತ್ತರದ ರಾಜ್ಯಗಳ ಲೋಕಸಭಾ ಸದಸ್ಯರ ಗುಂಪಿನ ನಡುವೆ ದಕ್ಷಿಣದ ಲೋಕಸಭಾ ಸದಸ್ಯರನ್ನು ಹುಡುಕಬೇಕಾಗಬಹುದು.
ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಕ್ಷೇತ್ರ ಮರುವಿಂಗಡಣೆ ಮಾಡಿದರೆ ಜನನ ನಿಯಂತ್ರಣದಂತಹ ಸರ್ಕಾರದ ಯೋಜನೆಯನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿದ ರಾಜ್ಯಗಳನ್ನು ಶಿಕ್ಷಿಸಿದಂತಾಗುತ್ತದೆ, ಈ ಯೋಜನೆಯನ್ನು ಜಾರಿಗೆ ತರಲು ವಿಫಲವಾಗಿರುವ ‘’ಬಿಮಾರು’’ರಾಜ್ಯಗಳನ್ನು ಪುರಸ್ಕರಿಸಿದಂತಾಗುತ್ತದೆ ಎನ್ನುವುದು ದಕ್ಷಿಣದ ರಾಜ್ಯಗಳ ವಾದ. ಇದು ಅನ್ಯಾಯವಲ್ಲವೇ ಎಂದು ಈ ರಾಜ್ಯಗಳು ಪ್ರಶ್ನಿಸುತ್ತಿವೆ.

ಕೇಂದ್ರದ ತೆರಿಗೆ ಹಂಚಿಕೆಯಲ್ಲಿಯೂ ಅನ್ಯಾಯ:

ಜನಸಂಖ್ಯೆಯ ಮಾನದಂಡ ರಾಜಕೀಯ ಪ್ರಾತಿನಿಧ್ಯದ ಮೇಲೆ ಮಾತ್ರವಲ್ಲ ದಕ್ಷಿಣದ ರಾಜ್ಯಗಳ ಹಣಕಾಸು ಪರಿಸ್ಥಿತಿಯ ಮೇಲೆಯೂ ಪರಿಣಾಮ ಬೀರುತ್ತಿದೆ. ರಾಜ್ಯಗಳಿಂದ ಸಂಗ್ರಹಿಸಲಾಗುವ ತೆರಿಗೆಯಲ್ಲಿ ಎಷ್ಟು ಪಾಲನ್ನು ರಾಜ್ಯಗಳಿಗೆ ವಾಪಸು ನೀಡಬೇಕೆಂಬುದನ್ನು ನಿರ್ಧರಿಸುವುದು ಕೇಂದ್ರ ಹಣಕಾಸು ಆಯೋಗ. ಈ ತೆರಿಗೆ ಹಂಚಿಕೆ ಮಾಡಲು ಹಣಕಾಸು ಆಯೋಗ ಪ್ರತಿಯೊಂದು ರಾಜ್ಯದ ಜನಸಂಖ್ಯೆ, ವಿಸ್ತೀರ್ಣ, ವರಮಾನ ಅಂತರ, ಅರಣ್ಯಪ್ರದೇಶ, ತೆರಿಗೆ ಮತ್ತು ಹಣಕಾಸು ಪರಿಸ್ಥಿತಿ, ಲಿಂಗ ವಯಸ್ಸು ಹಾಗೂ ವರಮಾನದ ಆಧಾರದಲ್ಲಿನ ಸಮುದಾಯದ ಅಭಿವೃದ್ದಿಯ ಆರು ಮಾನದಂಡಗಳನ್ನು ನಿಗದಿ ಪಡಿಸಿದೆ. ಬಡರಾಜ್ಯಗಳಿಗೆ ಹೆಚ್ಚಿನ ಸಂಪನ್ಮೂಲವನ್ನು ಹಂಚಿಕೆ ಮಾಡುವ ಉದ್ದೇಶದ ಈ ಮಾನದಂಡಗಳು ಅಂತಿಮವಾಗಿ ಅಭಿವೃದ್ದಿ ಹೊಂದಿರುವ ರಾಜ್ಯಗಳಿಗೆ ಮಾರಕವಾದುದು ಎನ್ನುವುದು ದಕ್ಷಿಣದ ರಾಜ್ಯಗಳ ಆಕ್ಷೇಪ.
ತೆರಿಗೆ ಹಂಚಿಕೆಯೂ ಸೇರಿದಂತೆ ಕೇಂದ್ರ ಸರ್ಕಾರ ಒಟ್ಟು ಸಂಪನ್ಮೂಲ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎನ್ನುವುದು ಹಳೆಯ ಆರೋಪ. ಕರ್ನಾಟಕದಲ್ಲಿ 1983ರಲ್ಲಿ ಮೊದಲಬಾರಿಗೆ ಕಾಂಗ್ರೆಸೇತರ ಸರ್ಕಾರ ಅಧಿಕಾರಕ್ಕೆ ಬಂದಿದ್ದಾಗ ಆಗಿನ ಜನತಾದಳದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಕೇಂದ್ರ ಯೋಜನಾ ಆಯೋಗ ಮತ್ತು ಕೇಂದ್ರದ ಹಣಕಾಸು ಆಯೋಗಗಳು ತೆರಿಗೆ ಪಾಲು ಸೇರಿದಂತೆ ಸಂಪನ್ಮೂಲ ಹಂಚಿಕೆಯಲ್ಲಿ ರಾಜ್ಯಗಳಿಗೆ ಮಾಡುತ್ತಿರುವ ಅನ್ಯಾಯ ಮತ್ತು ಮತ್ತು ರಾಜ್ಯದ ಯೋಜನೆಗಳ ಬಗ್ಗೆ ತೋರುತ್ತಿರುವ ಮಲತಾಯಿ ಧೋರಣೆ ಬಗ್ಗೆ ದನಿ ಎತ್ತಿದ್ದರು. ಆ ಕಾಲದಲ್ಲಿ ಪಕ್ಕದ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಟಿ. ರಾಮರಾವ್ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಕೂಡಾ ದನಿಗೂಡಿಸಿದ್ದರು. ಆದರೆ ಈ ಸಂಘರ್ಷವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸವನ್ನು ಯಾರೂ ಮಾಡಲಿಲ್ಲ.

ದೇಶದ ಒಟ್ಟು ಜನಸಂಖ್ಯೆಯಲ್ಲಿ ದಕ್ಷಿಣದ ರಾಜ್ಯಗಳ ಪಾಲು ಶೇಕಡಾ 18% ಆಗಿದ್ದರೂ ದೇಶದ ಜಿಡಿಪಿಗೆ ಈ ರಾಜ್ಯಗಳ ಪಾಲು ಶೇಕಡಾ 35. 1981ರಲ್ಲಿ ದೇಶದ ಆರ್ಥಿಕ ಚಟುವಟಿಕೆಗಳಲ್ಲಿ ಪಂಚರಾಜ್ಯಗಳ ಪಾಲು ಶೇಕಡಾ 20 ಆಗಿತ್ತು ಈಗ ಅದು ಶೇಕಡಾ 30 ಆಗಿದೆ. ದೇಶದ ಒಟ್ಟು ಜಿಎಸ್ ಟಿ ಸಂಗ್ರಹದಲ್ಲಿ ದಕ್ಷಿಣದ ಐದು ರಾಜ್ಯಗಳ ಪಾಲು ಶೇಕಡಾ 25 ಆದರೆ ಆ ರಾಜ್ಯಗಳಿಗೆ ವಾಪಸು ಸಿಗುವ ಪಾಲು ಶೇಕಡಾ 18.5 ಮಾತ್ರ, ಮಹಾರಾಷ್ಟ್ರ, ಗುಜರಾತ್, ಹರ್ಯಾಣ ಮತ್ತು ತಮಿಳುನಾಡು ರಾಜ್ಯಗಳಿಂದ ಸಂಗ್ರಹವಾಗುವ ನೂರು ರೂಪಾಯಿ ತೆರಿಗೆಯಲ್ಲಿ ಆ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ತೆರಿಗೆ ಪಾಲಿನ ರೂಪದಲ್ಲಿ ವಾಪಸು ಸಿಗುವುದು ಕೇವಲ 30 ರೂಪಾಯಿಗಳು. ಇದೇ ಅವಧಿಯಲ್ಲಿ ಬಿಹಾರ ಮತ್ತು ಯುಪಿ ಪಡೆಯುತ್ತಿರುವುದು ಕ್ರಮವಾಗಿ ನೂರಕ್ಕೆ 200 ಮತ್ತು 150 ರೂಪಾಯಿ

ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣದ ರಾಜ್ಯಗಳು ಪರಿಣಾಮಕಾರಿಯಾಗಿ ಕುಟುಂಬ ನಿಯಂತ್ರಣವನ್ನು ಮಾಡಿಕೊಂಡು ಬಂದಿದೆ. ಇದರಿಂದಾಗಿ ದಕ್ಷಿಣದ ರಾಜ್ಯಗಳ ಒಟ್ಟು ಜನಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದೆ. ಅದೇ ರೀತಿ ರಾಷ್ಟ್ರೀಯ ತಲಾ ಆಧಾಯಕ್ಕಿಂತ ದಕ್ಷಿಣದ ರಾಜ್ಯಗಳ ತಲಾವಾರು ಆದಾಯ ಹೆಚ್ಚಾಗಿದೆ. ಈ ತಪ್ಪು ಮಾನದಂಡಗಳನ್ನು ಕೇಂದ್ರ ಹಣಕಾಸು ಆಯೋಗ ಅನುಸರಿಸುತ್ತಿರುವ ಕಾರಣದಿಂದಾಗಿ ದಕ್ಷಿಣದ ರಾಜ್ಯಗಳು ನಿರಂತರವಾಗಿ ಅನ್ಯಾಯಕ್ಕೀಡಾಗಿವೆ.
ಕರ್ನಾಟಕ ರಾಜ್ಯವೊಂದೇ ಪ್ರತಿ ವರ್ಷ 50ರಿಂದ 60 ಸಾವಿರ ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳುತ್ತಲೇ ಇದ್ದಾರೆ. ಹದಿನಾಲ್ಕನೇ ಹಣಕಾಸು ಆಯೋಗ ಕರ್ನಾಟಕದ ತೆರಿಗೆ ಪಾಲು 4.72% ಎಂದು ನಿಗದಿಪಡಿಸಿತ್ತು, ಈಗಿನ 15ನೇ ಹಣಕಾಸು ಆಯೋಗ ಈ ಪಾಲನ್ನು ಕಡಿಮೆಗೊಳಿಸಿ 3.64%ಗೆ ಇಳಿಸಿತ್ತು. ಇದರಿಂದ ಕಳೆದ ನಾಲ್ಕು ವರ್ಷಗಳಲ್ಲಿ ತೆರಿಗೆಪಾಲಿನಲ್ಲಿ ಅಂದಾಜು ರೂ.45,000 ಕೋಟಿಯನ್ನು ಕರ್ನಾಟಕ ಕಳೆದುಕೊಂಡಿದೆ.

2021-22ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವೊಂದರಿಂದಲೆ ಸುಮಾರು 4.75 ಲಕ್ಷ ಕೋಟಿ ರೂಪಾಯಿಗಳನ್ನು ತೆರಿಗೆ ಮೂಲಕ ಸಂಗ್ರಹಿಸಿದೆ. ಇದರಲ್ಲಿ ನೇರ ತೆರಿಗೆ ರೂ.2.40 ಲಕ್ಷ ಕೋಟಿ, ಜಿಎಸ್ ಟಿ ರೂ.1.30 ಲಕ್ಷ ಕೋಟಿ, ಮತ್ತು ಸೆಸ್ ರೂ.30,000 ಕೋಟಿ ಸೇರಿದೆ. ಕೇಂದ್ರ ಸರ್ಕಾರ ರಾಜ್ಯದಿಂದ ಸಂಗ್ರಹಿಸಿದ ರೂ.4.75 ಲಕ್ಷ ಕೋಟಿಯಲ್ಲಿ ಕರ್ನಾಟಕಕ್ಕೆ ತನ್ನ ಪಾಲಿನ ರೂಪದಲ್ಲಿ ಸಿಕ್ಕಿರುವುದು ಅಂದಾಜು ರೂ.50,000 ಕೋಟಿ ಮಾತ್ರ. ಇದರಲ್ಲಿ ತೆರಿಗೆ ಪಾಲು-ರೂ.37,000 ಕೋಟಿ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ನೀಡಿದ ಪಾಲಿನ ಹಣ ರೂ.13,005 ಕೋಟಿ ಸೇರಿದೆ. ಇದರ ಜೊತೆಗೆ ರಾಜ್ಯದಲ್ಲಿ ಜಾರಿಯಲ್ಲಿರುವ ಕೇಂದ್ರ ಅನುದಾನಿತ ಯೋಜನೆಗಳಿಗೆ ನೀಡುವ ತನ್ನ ಪಾಲನ್ನು ಕೂಡಾ ನರೇಂದ್ರ ಮೋದಿ ಸರ್ಕಾರ ಕಡಿತಗೊಳಿಸಿದೆ. 2021-22ರಲ್ಲಿ ರೂ. 20,986 ಕೋಟಿ ರೂಪಾಯಿಗಳ ತನ್ನ ಪಾಲನ್ನು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ನೀಡಿದ್ದ ಎನ್ ಡಿಎ ಸರ್ಕಾರ 2022-23ರ ಅವಧಿಯಲ್ಲಿ ಅದನ್ನು ರೂ.13,005 ಕೋಟಿಗೆ ಇಳಿಸಿದೆ.
ಅಂದ ಹಾಗೆ ಮಹಾರಾಷ್ಟ್ರದ ನಂತರ ಕೇಂದ್ರ ಸರ್ಕಾರಕ್ಕೆ ಅತ್ಯಧಿಕ ಪ್ರಮಾಣದ ತೆರಿಗೆ ನೀಡುವ ಎರಡನೆಯ ರಾಜ್ಯ ನಮ್ಮದು. ಒಂದು ಅಂದಾಜಿನ ಪ್ರಕಾರ ಕರ್ನಾಟಕದಿಂದ ಸಂಗ್ರಹವಾಗುವ ಒಂದು ರೂಪಾಯಿ ತೆರಿಗೆಯಲ್ಲಿ ಕೇವಲ 15 ಪೈಸೆ ಮಾತ್ರ ವಾಪಸು ಬರುತ್ತಿದೆ. ಕೇರಳಕ್ಕೆ 35 ಪೈಸೆ ವಾಪಸು ಬಂದರೆ ಉತ್ತರ ಪ್ರದೇಶಕ್ಕೆ ಒಂದು ರೂಪಾಯಿಗೆ ರೂ.1.6ರಷ್ಟು ಹಣ ವಾಪಸು ಬರುತ್ತಿದೆ. ಇದು ಹಣಕಾಸು ಆಯೋಗದ ತಪ್ಪು ಮಾನದಂಡಗಳಿಂದಾಗಿ ದಕ್ಷಿಣದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ.
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಪರಸ್ಪರ ನೆರವಾಗುತ್ತಾ ಕೂಡಿ ಬಾಳಬೇಕಾಗುತ್ತದೆ. ಶ್ರೀಮಂತ ರಾಜ್ಯಗಳು ಬಡ ರಾಜ್ಯಗಳಿಗೆ ನೆರವು ನೀಡಿ ತಮ್ಮ ಜೊತೆ ಕರೆದೊಯ್ಯಬೇಕಾಗಿರುವುದು ಸಂಸದೀಯ ಪ್ರಜಾಪ್ರಭುತ್ವದ ಧರ್ಮ. ತೆರಿಗೆ ಸಂಗ್ರಹವಾದ ಸ್ಥಳದಲ್ಲಿಯೇ ಅದನ್ನು ಖರ್ಚು ಮಾಡಬೇಕೆಂಬ ವಾದವನ್ನೇ ಮುಂದಿಟ್ಟುಕೊಂಡು ಹೋದರೆ ಕರ್ನಾಟಕದಲ್ಲಿ ಅತ್ಯಧಿಕ ತೆರಿಗೆ ಸಂಗ್ರಹವಾಗುವ ಬೆಂಗಳೂರು ನಗರದಲ್ಲಿಯೇ ಆ ಹಣವನ್ನು ಖರ್ಚು ಮಾಡಬೇಕಲ್ಲವೇ?. ಹಿಂದುಳಿದಿರುವ ಉತ್ತರ ಕರ್ನಾಟಕದ ಅಭಿವೃದ್ದಿಗಾಗಿ ಬೆಂಗಳೂರು ತೆರಿಗೆ ಹಣವನ್ನು ಯಾಕೆ ಖರ್ಚು ಮಾಡಬೇಕು ಎಂಬ ಪ್ರಶ್ನೆಯೂ ಇದೆ.
ಆದರೆ ಈ ರೀತಿ ಅಭಿವೃದ್ದಿ ಶೀಲ ರಾಜ್ಯಗಳ ತೆರಿಗೆ ಹಣದ ಪಾಲನ್ನು ಪಡೆಯುವ ಹಿಂದುಳಿದ ರಾಜ್ಯಗಳಲ್ಲಿ ಒಂದು ಕಾಲ ಮಿತಿಯೊಳಗಾದರೂ ಅಭಿವೃದ್ದಿ ಚಟುವಟಿಕೆಗಳು ನಡೆಯುವಂತಾಗಬೇಕು. ಆದರೆ ಉತ್ತರದ ‘’ಬಿಮಾರು’’ ರಾಜ್ಯಗಳಾದ ಬಿಹಾರ, ಮಧ್ಯಪ್ರದೇಶ ರಾಜಸ್ತಾನ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಇಷ್ಟು ವರ್ಷಗಳ ನಂತರವೂ ಅಭಿವೃದ್ದಿಯ ಪಥದಲ್ಲಿ ಕುಂಟುತ್ತಲೇ ಸಾಗುತ್ತಿರುವುದನ್ನು ಕಾಣಬಹುದಾಗಿದೆ. ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲದ ವಿಷಯದಲ್ಲಿ ದಕ್ಷಿಣದ ರಾಜ್ಯಗಳಿಗಿಂತಲೂ ಸಂಪನ್ನವಾಗಿರುವ ಹಿಂದಿಪ್ರದೇಶದ ಬಹುತೇಕ ರಾಜ್ಯಗಳು ಈಗಲೂ ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಆ ರಾಜ್ಯಗಳು ದಕ್ಷಿಣದ ರಾಜ್ಯಗಳಿಂದ ಹಿಂದೆ ಉಳಿದಿವೆ. ಈ ಹಿಂದುಳಿಯುವಿಕೆಗೆ ಕೇವಲ ಹಣದ ಕೊರತೆ ಒಂದೇ ಕಾರಣ ಅಲ್ಲ ಎನ್ನುವುದು ಇಲ್ಲಿಯ ವರೆಗಿನ ಅನುಭವ ಹೇಳುತ್ತದೆ. ಬುಲ್ ಡೋಜರ್ ಮಾದರಿ ಆಡಳಿತವನ್ನು ದೇಶಾದ್ಯಂತ ಪಸರಿಸಲು ಉತ್ಸುಕವಾಗಿರುವ ನರೇಂದ್ರ ಮೋದಿ ಸರ್ಕಾರ ‘’ಬಿಮಾರು’’ ರಾಜ್ಯಗಳ ಸುಧಾರಣೆಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ವಿಫಲವಾಗಿದೆ.

ಒಂದು ಮಗು ಕೇರಳದಲ್ಲಿ ಹುಟ್ಟಿದರೆ ಅತ್ಯಂತ ಅದೃಷ್ಟಶಾಲಿ ಮತ್ತು ಉತ್ತರಪ್ರದೇಶದಲ್ಲಿ ಹುಟ್ಟಿದರೆ ಅತ್ಯಂತ ದುರದೃಷ್ಟಶಾಲಿ ಎನ್ನುವಷ್ಟರ ಮಟ್ಟಿಗೆ ಉತ್ತರ ಮತ್ತು ದಕ್ಷಿಣದ ರಾಜ್ಯಗಳ ನಡುವಿನ ಸಾಮಾಜಿಕ ಮತ್ತು ಆರ್ಥಿಕ ಅಸಮತೋಲನ ಇದೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹುಟ್ಟುವ ಸಾವಿರ ಮಕ್ಕಳಲ್ಲಿ ಹುಟ್ಟಿದ ಗಳಿಗೆಯಲ್ಲಿಯೇ ಏಳು ಮತ್ತು 15 ಮಕ್ಕಳು ಮಾತ್ರ ಜೀವ ಕಳೆದುಕೊಂಡರೆ ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಹುಟ್ಟುವ ಸಾವಿರ ಮಕ್ಕಳಲ್ಲಿ ಕ್ರಮವಾಗಿ 48 ಮತ್ತು 43 ಮಕ್ಕಳು ಸಾಯುತ್ತವೆ. ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಪ್ರತಿ ಸಾವಿರ ಗರ್ಭಿಣಿಯರಲ್ಲಿ ಕ್ರಮವಾಗಿ 216 ಮತ್ತು 188 ಗರ್ಭಿಣಿಯರು ಪ್ರಾಣ ಕಳೆದುಕೊಂಡರೆ ಕೇರಳ ಮತ್ತು ತಮಿಳುನಾಡುಗಳಲ್ಲಿ ಈ ಸಂಖ್ಯೆ ಕ್ರಮವಾಗಿ 42 ಮತ್ತು 63. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ತೆಲಂಗಾಣಗಳ ನೂರಕ್ಕೆ ನೂರು ಅಂಗನವಾಡಿಗಳಲ್ಲಿ ಅಡುಗೆಮನೆಗಳಿದ್ದರೆ ಉತ್ತರಪ್ರದೇಶ ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಕ್ರಮವಾಗಿ 23% 10% 35% ಅಂಗನವಾಡಿಗಳಲ್ಲಿ ಮಾತ್ರ ಅಡುಗೆ ಮನೆಗಳಿವೆ.
ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಆಸ್ಪತ್ರೆಗಳಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ ಕ್ರಮವಾಗಿ 1054, 1014 ಮತ್ತು 1076 ಹಾಸಿಗೆಗಳಿವೆ. ಉತ್ತರಪ್ರದೇಶ , ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳ ಆಸ್ಪತ್ರೆಗಳಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ ಕ್ರಮವಾಗಿ 333, 98 ಮತ್ತು 378 ಹಾಸಿಗೆಗಳಿವೆ. 2017-18ರ ಅವಧಿಯಲ್ಲಿ ಈ ಏಳು ರಾಜ್ಯಗಳಲ್ಲಿರುವ ಒಟ್ಟು ಕಾರ್ಖಾನೆಗಳ ಸಂಖ್ಯೆ 39,254. ಏಳು ಕೋಟಿ ಜನಸಂಖ್ಯೆಯ ತಮಿಳುನಾಡಿನಲ್ಲಿ 37,787 ಕಾರ್ಖಾನೆಗಳಿವೆ. ಆಂಧ್ರಪ್ರದೇಶ ಮತ್ತು ಕರ್ನಾಟಕಗಳಲ್ಲಿ ಕ್ರಮವಾಗಿ 16,396 ಮತ್ತು 13,518 ಕಾರ್ಖಾನೆಗಳಿವೆ. ಇದು ಉತ್ತರದ ‘’ಬಿಮಾರು’’ ರಾಜ್ಯಗಳ ದುಸ್ಥಿತಿ.

ಇಷ್ಟು ವರ್ಷಗಳ ಕಾಲ ದಕ್ಷಿಣದ ರಾಜ್ಯಗಳ ತೆರಿಗೆಯ ಬಹುಪಾಲನ್ನು ಉತ್ತರದ ರಾಜ್ಯಗಳ ಅಭಿವೃದ್ದಿಗಾಗಿ ಬಳಸಿಕೊಂಡರೂ ಆ ರಾಜ್ಯಗಳನ್ನು ಬಿಮಾರು ಸ್ಥಿತಿಯಿಂದ ಹೊರತರಲು ಸಾಧ್ಯವಾಗಿಲ್ಲ. ಹೀಗಿದ್ದಾಗ ನಮ್ಮ ತೆರಿಗೆಯ ಹಣವನ್ನು ಆ ರಾಜ್ಯಗಳಲ್ಲಿ ಯಾಕೆ ಪೋಲು ಮಾಡುತ್ತೀರಿ ಎನ್ನುವುದು ದಕ್ಷಿಣ ರಾಜ್ಯಗಳ ಪ್ರಶ್ನೆ. ಈ ಬಿಕ್ಕಟ್ಟಿನಲ್ಲಿ ರಾಜಕೀಯ ಲಾಭದ ಅವಕಾಶವನ್ನು ಕಾಣುತ್ತಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕ್ಷೇತ್ರ ಮರುವಿಂಗಡಣೆಯ ಅಸ್ತ್ರವನ್ನು ಬಳಸಿಕೊಂಡು ರಾಜಕೀಯವಾಗಿ ತನಗೆ ಅಭೇದ್ಯವಾಗಿರುವ ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯಕ್ಕೂ ಕತ್ತರಿ ಹಾಕಿ ಈ ರಾಜ್ಯಗಳ ದನಿಯನ್ನು ಕುಗ್ಗಿಸುವ ದುರಾಲೋಚನೆಯಲ್ಲಿದ್ದ ಹಾಗಿದೆ. ದಕ್ಷಿಣದ ರಾಜ್ಯಗಳು ಸಂಘಟಿತ ಪ್ರಯತ್ನದ ಮೂಲಕ ಮಾತ್ರ ಈ ಅನಾಹುತವನ್ನು ತಪ್ಪಿಸಲು ಸಾಧ್ಯ. ಅಂತಹದ್ದೊಂದು ಪ್ರಯತ್ನಕ್ಕೆ ಕಾಲ ಸನ್ನಿಹಿತವಾಗಿದೆ.

Advertisement
Advertisement
Recent Posts
Advertisement