ಸಂಪಾದಕೀಯ ಬರಹ (ಕೆ. ಚಂದ್ರಶೇಖರ ಶೆಟ್ಟಿ )
[ಆಕ್ಸ್‌ಫ್ಯಾಮ್ ವರದಿಯ ಪ್ರಕಾರ 2020 ರಲ್ಲಿ ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆ ಕೇವಲ 102 ಮಾತ್ರ. 2022 ರಲ್ಲಿ ಈ ಸಂಖ್ಯೆ 166 ಕ್ಕೆ ತಲುಪಿತ್ತು. 2020 ರಲ್ಲಿ ದೇಶದ ಅಗ್ರ 100 ಶ್ರೀಮಂತರ ಸಂಪತ್ತು $ 313 ಬಿಲಿಯನ್ ಆಗಿತ್ತು. 2021 ರಲ್ಲಿ, ಇದು $ 775 ಬಿಲಿಯನ್ ತಲುಪಿತು ಮತ್ತು ಇಂದು ಈ ಅಂಕಿ ಅಂಶವು ಮತ್ತಷ್ಟು ಹೆಚ್ಚಾಗಿದೆ. ಮತ್ತೊಂದೆಡೆ, ಇಂದು ಭಾರತದಲ್ಲಿ 50 ಶೇಕಡಾ ದಷ್ಟು ಸಾಮಾನ್ಯ ಜನರು ಕೇವಲ 3 ಶೇಕಡಾ ಸಂಪತ್ತನ್ನು ಹೊಂದಿದ್ದಾರೆ. ಭಾರತದ 1% ಶ್ರೀಮಂತರು ದೇಶದ ಸಂಪತ್ತಿನ 40% ಸಂಪತ್ತು ಹೊಂದಿದ್ದಾರೆ. ಶ್ರೀಮಂತರು ದಿನದಿಂದ ದಿನಕ್ಕೆ ಶ್ರೀಮಂತರಾಗುತ್ತಿದ್ದಾರೆ ಮತ್ತು ಬಡವರು ಬಡವರಾಗುತ್ತಿದ್ದಾರೆ!]
ಈ ಮೇಲಿನ ಮಾಹಿತಿಯ ಆಧಾರದಲ್ಲಿ ಒಂದಷ್ಟು ಚರ್ಚೆ ನಡೆಯಬೇಕು ಎನ್ನುವ ಕಾರಣಕ್ಕಾಗಿ ಈ ಕೆಳಗಿನ ಬರಹ.
ಕಾಂಗ್ರೆಸ್ ಆಡಳಿತದ ಸುದೀರ್ಘವಾದ 57ವರ್ಷಗಳ ಅವಧಿಯಲ್ಲಿ ಈ ದೇಶದ ಅಭ್ಯುದಯಕ್ಕಾಗಿ ಕಟ್ಟಿದ ಈಗಿನ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದಷ್ಟು ಬೆಲೆಯನ್ನು ಬಾಳುವ ಸರಕಾರಿ ಸಂಸ್ಥೆಗಳನ್ನು ಮೋದಿ ಸರ್ಕಾರ ಗುಜರಾತಿ ಮತ್ತಿತರ ಮಾರ್ವಾಡಿಗಳಿಗೆ ಮೂರುಕಾಸಿಗೆ ಮಾರುವುದಾದರೆ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ "ಮಹಾಲಕ್ಷ್ಮಿ ಮುಂತಾದ ಯೋಜನೆ"ಗಳನ್ನು ಸ್ಥಾಪಿಸಿ ಬಡ ಮಹಿಳೆಯರಿಗೆ ವರ್ಷಕ್ಕೊಂದು ಲಕ್ಷ, ದೇಶದ ರೈತರ ಸಾಲ ಮನ್ನಾ ಮಾಡಲಾಗುವುದು ಎನ್ನುವುದು ಏಕೆ ತಪ್ಪು?
ದೇಶದ ಪ್ರಧಾನಿಯಾಗಿ ಹತ್ತು ವರ್ಷ ಕೆಲಸ ಮಾಡಿದ ಮೋದಿಯವರು ತನ್ನ ಸಾಧನೆಯನ್ನು ಹೇಳಿಕೊಳ್ಳುವ ಬದಲು (ಹೇಳಲು ಯಾವುದೇ ಜನಪರ ಯೋಜನೆಗಳು ಇಲ್ಲ. ಅದು ಬೇರೆಮಾತು.) ರಾಹುಲ್ ಗಾಂಧಿಯವರು ಮಹಿಳಾ ನ್ಯಾಯ, ಯಾವ ನ್ಯಾಯ, ರೈತನ್ಯಾಯ, ಶ್ರಮಿಕನ್ಯಾಯ, ಪಾಲುದಾರಿಕೆ ನ್ಯಾಯ ಮುಂತಾದ ಯೋಜನೆಗಳ ಕುರಿತು ಹೇಳಿದ ದೇಶದ ಸಂಪತ್ತನ್ನು ಸಮಾನವಾಗಿ ಹಂಚುವ ಕುರಿತಾದ ಹೇಳಿಕೆಗೆ "ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಕರಿಮಣಿ ಕಿತ್ತು ಮುಸ್ಲಿಮರಿಗೆ ಹಂಚುತ್ತಾರೆ" ಎಂದು ಮೋದಿಯವರು ರಾಜಸ್ಥಾನದ ಚುನಾವಣಾ ರ‌್ಯಾಲಿಯಲ್ಲಿ ಹೇಳಿರುವುದು ಹತಾಶೆಯಿಂದಲ್ಲವೇ? ಹಾಗೆ ಹೇಳಿರುವುದು ಸೋಲಿನ ಭಯದಿಂದಲ್ಲವೇ? ಅದು ಚುನಾವಣಾ ನೀತಿಸಂಹಿತೆಯ ಉಲ್ಲಂಘನೆ ಅಲ್ಲವೇ?
ನೆರೆ, ಬರ, ಭೂಕಂಪ (ಅಥವಾ ಕೊರೋನಾ)ದಂತಹ ಭೀಕರ ದುರ್ಘಟನೆಗಳು ದೇಶವನ್ನು ಅಪ್ಪಳಿಸಿದಾಗ ಬಳಕೆಯಾಗಬೇಕು ಎಂಬ ಸದ್ವಿಚಾರವನ್ನಿಟ್ಟುಕೊಂಡು ಸ್ಥಾಪಿಸಲ್ಪಟ್ಟಿದ್ದ 1ಲಕ್ಷದ 76ಸಾವಿರ ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತದ "ಆರ್ಬಿಐ ರಿಸರ್ವ್ ಫಂಡ್" ಅನ್ನು ದೇಶದ ವಿವಿಧ ಆರ್ಥಿಕ ತಜ್ಞರುಗಳ ವಿರೋಧದ ನಡುವೆಯೂ ತನ್ನ ವಶಕ್ಕೆ ಪಡೆದು ನರೇಂದ್ರ ಮೋದಿ ಸರ್ಕಾರ ದೇಶದ 22 ಮಂದಿ ಶ್ರೀಮಂತ ಉದ್ಯಮಿಗಳ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಬಹುದಾದರೆ ಕಾಂಗ್ರೆಸ್ ಆ ಯೋಜನೆಗಳನ್ನು ಜಾರಿಗೊಳಿಸುವುದು ಹೇಗೆ ತಪ್ಪಾಗುತ್ತದೆ?
ಅದೇ ಸರಕಾರಿ ಆಸ್ತಿ ಖರೀದಿಸಿದ ಹಾಗೂ ಸಾಲಮನ್ನಾ ಫಲಾನುಭವಿ ಮತ್ತಿತರ ಉಧ್ಯಮಿಗಳಿಂದ ಬಿಜೆಪಿ ಪಕ್ಷ ಚುನಾವಣಾ ಬಾಂಡ್ ಗಳ ಮೂಲಕ 6 ಸಾವಿರ ಕೋಟಿ ರೂಪಾಯಿ ಪಡೆಯುವುದು ಲಂಚ ಅಲ್ಲ ಎನ್ನುವುದಾದರೆ ಅದೇಕೆ ಬಡವರಿಗೆ ಈ ದೇಶದ ಸಂಪತ್ತನ್ನು ಸಮಾನವಾಗಿ ಹಂಚಿಕೆ ಮಾಡುವ "ಪ್ರಜಾಪ್ರಭುತ್ವದ ಮೂಲ ಆಶಯ"ವನ್ನು 2024ರಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಏಕೆ ಜಾರಿಗೊಳಿಸಬಾರದು? ಹಾಗೆ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿರುವುದು ಏಕೆ ತಪ್ಪಾಗುತ್ತದೆ?