Advertisement

ಜೆ.ಪಿ ಹೆಗ್ಡೆ ಸಂಸದರಾಗಲಿ. ಕೋಟ ಪರಿಷತ್ ವಿಪಕ್ಷ ನಾಯಕರಾಗಿ ಮುಂದುವರಿಯಲಿ!

Advertisement

•ಜಯಪ್ರಕಾಶ ಹೆಗ್ಡೆ ಸಂಸದರಾಗಲಿ. ಕೋಟ ಶ್ರೀನಿವಾಸ ಪೂಜಾರಿ ಈಗಿರುವ ವಿಧಾನಪರಿಷತ್ತಿನ ವಿಪಕ್ಷ ನಾಯಕನಾಗಿ ಮುಂದುವರಯಲಿ! ಏಕೆಂದರೆ ಕೋಟ ಸಂಸತ್ ಚುನಾವಣೆಯಲ್ಲಿ ಗೆದ್ದರೆ ಈಗಿರುವ ವಿಧಾನ ಪರಿಷತ್ ಸದಸ್ಯತ್ವಕ್ಕೆ ಮತ್ತು ವಿಪಕ್ಷ ನಾಯಕತ್ವಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.

• ಜಯಪ್ರಕಾಶ ಹೆಗ್ಡೆ ಸೋತರೆ ಕ್ಷೇತ್ರದ ಜನರಿಗೆ ನಷ್ಟ. ಏಕೆಂದರೆ ಅವರು ನಡುರಾತ್ರಿಯೂ ಫೋನೆತ್ತಿ ಸಮಸ್ಯೆಗೆ ಸ್ಪಂದಿಸಿವವರು. ಅವರು ಅಧಿಕಾರ ಕಳೆದುಕೊಳ್ಳಬಾರದು. ಆದರೆ ಕೋಟ ಶ್ರೀನಿವಾಸ ಪೂಜಾರಿ ಸೋತರೆ ಕ್ಷೇತ್ರದ ಜನರಿಗೆ ಯಾವುದೇ ನಷ್ಟವಾಗದು ಏಕೆಂದರೆ ಆಗಲೂ ಅವರು ವಿಧಾನಪರಿಷತ್ ಸದಸ್ಯರಾಗಿ ಮತ್ತು ವಿಪಕ್ಷ ನಾಯಕರಾಗಿಯೇ ಮುಂದುವರಿಯುತ್ತಾರೆ. ಆ ಲೆಕ್ಕದಲ್ಲಿ ನೋಡಿದರೆ ಹಾಗೆ ಆದರೆ ಕ್ಷೇತ್ರಕ್ಕೆ ಎರಡೆರಡು ಜನಪ್ರತಿನಿಧಿಗಳು ಕೂಡಾ ಸಿಗಲಿದ್ದಾರೆ.

ಇದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಾದ್ಯಂತ ಜನಸಾಮಾನ್ಯರ ನಡುವೆ ಇದೀಗ ಕೇಳಿಬರುತ್ತಿರುವ ಸಾಮಾನ್ಯ ಮಾತುಗಳಾಗಿವೆ.

ಲೋಕಸಭಾ ಚುನಾವಣೆ ಸನಿಹದಲ್ಲಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ಅತ್ಯಂತ ದಕ್ಷ, ಸಮರ್ಥ, ಜನಪರ, ಅಭಿವೃದ್ಧಿಪರ, ಜನನಾಯಕ tried, tested and trusted ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರನ್ನು ಈ ಬಾರಿ ನಾವು ಗೆಲ್ಲಿಸಲೇಬೇಕಿದೆ. ಈ ಬಾರಿ ಈ ಕ್ಷೇತ್ರದಲ್ಲಿ ಜಯಪ್ರಕಾಶ ಹೆಗ್ಡೆ ಗೆದ್ದರೆ ನಾವೆಲ್ಲರೂ ಗೆದ್ದಂತೆ, ಕ್ಷೇತ್ರ ಅಭಿವೃದ್ಧಿಯ ಪಥದತ್ತ ಸಾಗುತ್ತದೆ. ಕ್ಷೇತ್ರದ ಜನರ ಬದುಕು ಏಳಿಗೆ ಕಾಣಲಿದೆ.

ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ ಮತ್ತು ಈ ಹಿಂದೆ ಸದಾನಂದ ಗೌಡರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾಗ ಈ ಕ್ಷೇತ್ರವನ್ನು ಎಷ್ಟು ಕಡೆಗಣಿಸಿದ್ದರು ಎಂದು ಕ್ಷೇತ್ರದ ಜನರು ಸ್ಪಷ್ಟವಾಗಿ ಬಲ್ಲರು. ಗೆದ್ದು ಇಲ್ಲಿಂದ ನಿರ್ಗಮಿಸಿದ ಬಳಿಕ ಶೋಭಾ ಕರಂದ್ಲಾಜೆ ಜನರತ್ತ ಮತ್ತೆ ಸುಳಿಯಲಿಲ್ಲ. ಜನರ ಬವಣೆಗಳನ್ನು, ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವುದು ಬಿಡಿ, ಕನಿಷ್ಟ ಆಲಿಸಲೂ ಸಮಯ ಕೊಡಲಿಲ್ಲ.

ಚುನಾವಣಾ ಪ್ರಚಾರದ ಹತ್ತಿಪ್ಪತ್ತು ದಿನಗಳಲ್ಲಿ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಲಿಗೆ ಚಕ್ರ ಸುತ್ತಿಕೊಂಡಂತೆ ಗರಗರನೆ ತಿರುಗಾಡಿ ಮತಯಾಚನೆ ಮಾಡುವ ಶೋಭಾ ಕರಂದ್ಲಾಜೆ ಆ ಬಳಿಕ ಐದು ವರ್ಷ ಅದಾದ ಮೇಲೆ ಇನ್ನೈದು ವರ್ಷಗಳಲ್ಲಿ ಕ್ಷೇತ್ರದಾದ್ಯಂತ ಬಿಡಿ, ಕನಿಷ್ಟ ಪಕ್ಷ ಪ್ರಮುಖ ಪಟ್ಟಣಗಳಿಗೂ ಭೇಟಿ ನೀಡುವ ಸೌಜನ್ಯ, ಕಾಳಜಿ ತೋರಿಸಿದ್ದಿಲ್ಲ.

ಕಳೆದ ಹತ್ತು ವರ್ಷಗಳಲ್ಲಿ ಉಡುಪಿ-ಚಿಕ್ಕಮಗಳೂರಿಗೆ ಅಭಿವೃದ್ಧಿಯ ದೃಷ್ಟಿಯಲ್ಲಿ ಆದ ಅನ್ಯಾಯ ಅಷ್ಟಿಷ್ಟಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಯಾವುದೇ ಮಾನದಂಡದಲ್ಲೂ ಸಂಸತ್ ಸದಸ್ಯೆಯಾಗುವ ಅರ್ಹತೆಗಳಿಲ್ಲದ ಶೋಭಾ ಕರಂದ್ಲಾಜೆ ಕೇವಲ ಮೋದಿ ಹೆಸರು ಹೇಳಿಯೇ ಎರಡೆರಡು ಬಾರಿ ಗೆದ್ದರು. ಶೋಭಾ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಕರ್ನಾಟಕದ ಪರಮೋಚ್ಛ ನಾಯಕ ಯಡಿಯೂರಪ್ಪ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡವರು. ಜೊತೆಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜನ ಪದೇಪದೆ ಬಿಜೆಪಿ ಶಾಸಕರನ್ನೇ ಆಯ್ಕೆ ಮಾಡಿದರು. ಎರಡನೆಯ ಅವಧಿಗೆ ಶೋಭಾ ಕೇಂದ್ರದಲ್ಲಿ ಸಚಿವೆಯೂ ಆದರು. ಆದರೂ ಕೂಡ ಉಡುಪಿ-ಚಿಕ್ಕಮಗಳೂರು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಶೋಭಾ ಕರಂದ್ಲಾಜೆ ಅವರು ಸಚಿವೆಯಾದರೂ ಅದರ ಪ್ರಭಾವವೂ ಕ್ಷೇತ್ರದ ಪ್ರಗತಿಯಲ್ಲಿ ಕಂಡು ಬರಲೇ ಇಲ್ಲ. ಒಟ್ಟಿನಲ್ಲಿ ಇಲ್ಲಿನ ಸಂಸದೆ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಕ್ಷೇತ್ರಕ್ಕೆ ಕೊಟ್ಟಿದ್ದು ಏನೂ ಇಲ್ಲ.

ಕರಾವಳಿ ಮತ್ತು ಮಲೆನಾಡು ಭಾಗಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಮೀನುಗಾರಿಕೆ, ಕೃಷಿ, ನೀರಾವರಿ, ರಸ್ತೆಗಳು, ಕಾಡುತ್ತಿರುವ ನಿರುದ್ಯೋಗ ಸಮಸ್ಯೆ, ಯಾವುದೇ ಕೈಗಾರಿಕೋದ್ಯಮಗಳು ಇಲ್ಲಿಗೆ ಬಾರದಿರುವುದು, ಜನರ ನಿತ್ಯದ ನೂರು ಬವಣೆಗಳು ಹೀಗೆ ಈ ಕ್ಷೆತ್ರದಲ್ಲಿ ಆಗಬೇಕಾಗಿರುವುದು, ಆದ್ಯತೆಗಳು, ಅಗತ್ಯತೆಗಳು ನೂರಾರು. ಆದರೆ ಆಗಿದ್ದೇನು? ಶೂನ್ಯ.

ಒಮ್ಮೆ ಕಲ್ಪಿಸಿಕೊಳ್ಳಿ. ಕಳೆದ ಹತ್ತು ವರ್ಷಗಳಲ್ಲಿ ಇಲ್ಲಿ ಜಯಪ್ರಕಾಶ ಹೆಗ್ಡೆ ಅವರಂತಹ ಸಮರ್ಥರೊಬ್ಬರು ಸಂಸದರಾಗಿದ್ದಿದ್ದರೆ ಏನಾಗುತ್ತಿತು ಎಂದು. ಖಂಡಿತವಾಗಿಯೂ ಉಡುಪಿ- ಚಿಕ್ಕಮಗಳೂರು ಅಭಿವೃದ್ಧಿಯ ವಿಚಾರದಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿಯೇ ಮಂಚೂಣಿಯಲ್ಲಿರುತ್ತಿತ್ತು. ತಮ್ಮ ಪಕ್ಷದ ಸರ್ಕಾರ ಇರಲಿ, ಇಲ್ಲದಿರಲಿ, ಕೆಲಸ ಮಾಡಿಸಿಕೊಂಡು ಬರುವ ಚಾಕಚಕ್ಯತೆ, ಸಾಮರ್ಥ್ಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಂತಹ ಪರಿಣತಿ ಜಯಪ್ರಕಾಶ ಹೆಗ್ಡೆ ಯವರಲ್ಲಿ ಇದೆ.

ಜಯಪ್ರಕಾಶ ಹೆಗ್ಡೆ ಮೂರು ಬಾರಿ ಬ್ರಹ್ಮಾವರ ಕ್ಷೇತ್ರದ ಶಾಸಕರಾಗಿದ್ದವರು. ಜನತಾದಳ ಹೋಳಾದಾಗ ಜಯಪ್ರಕಾಶ ಹೆಗ್ಡೆ ಎರಡು ಬಾರಿ ಬಲಾಢ್ಯ ಪಕ್ಷಗಳಿಗೆ ಸೆಡ್ಡು ಹೊಡೆದು ಪಕ್ಷೇತರರಾಗಿಯೇ ಗೆದ್ದು ಬಂದವರು. ಅದು ಅವರ ತಾಕತ್ತು. ಒಂದು ಅವಧಿಗೆ ಕರ್ನಾಟಕ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಜಯಪ್ರಕಾಶ ಹೆಗ್ಡೆ ಅತ್ಯಂತ ಸಮರ್ಥವಾಗಿ ತಮ್ಮ ಸಚಿವ ಪದವಿಯನ್ನು ಜನರ ಬದುಕನ್ನು ಹಸನು ಮಾಡಲು ಬಳಸಿಕೊಂಡವರು. ಕರಾವಳಿಗೆ ಅಂದು ಸಚಿವರಾಗಿ ಜಯಪ್ರಕಾಶ ಹೆಗ್ಡೆ ಮಾಡಿದ ಜನಪರ ಅಭಿವೃದ್ಧಿ ಕಾರ್ಯಗಳನ್ನು ಜನರು ಇಂದಿಗೂ ಮರೆತಿಲ್ಲ.

ಉಪಚುನಾವಣೆಯ ಬಳಿಕ ಸಣ್ಣ ಅವಧಿಗೆ ಇದೇ ಉಡುಪಿ-ಚಿಕ್ಕಮಗಳೂರು ಸಂಸದರಾಗಿದ್ದ ಜಯಪ್ರಕಾಶ ಹೆಗ್ಡೆ ಆ ಸಣ್ಣ ಅವಧಿಯಲ್ಲಿ ಮಾಡಿದ ಜನಪರ ಕೆಲಸಗಳನ್ನು ಇಂದಿಗೂ ಜನರು ಸ್ಮರಿಸುತ್ತಿದ್ದಾರೆ. ಕ್ಷೇತ್ರ ವಿಂಗಡಣೆ ಆದ ಬಳಿಕ ಬ್ರಹ್ಮಾವರ ಕ್ಷೇತ್ರ ಕುಂದಾಪುರ ಮತ್ತು ಉಡುಪಿ ಕ್ಷೇತ್ರಗಳಲ್ಲಿ ಲೀನವಾಯಿತು. ಜೊತೆಗೆ ಈ ಕ್ಷೇತ್ರದ ಅಭಿವೃದ್ಧಿಯೂ ರಾಜಕಾರಣಿಗಳ ಮಾತುಗಳಲ್ಲೇ ಲೀನವಾಯಿತು. ಇಂದು ಬ್ರಹ್ಮಾವರ ಕ್ಷೇತ್ರ ಇರುತ್ತಿದ್ದರೆ ಜಯಪ್ರಕಾಶ ಹೆಗ್ಡೆ ಅಲ್ಲಿ ಶಾಸಕರಾಗಿ ಮಾಡುತ್ತಿದ್ದ ಅಭಿವೃದ್ಧಿ ಕಾರ್ಯಗಳು ಇಡೀ ಕರ್ನಾಟಕಕ್ಕೆ ಮಾದರಿಯಾಗುತ್ತಿತ್ತು.

ಕೆಲವೊಮ್ಮೆ ಕೆಲವು ವ್ಯಕ್ತಿಗಳ ಬಗ್ಗೆ ಮಾತಿಗೆ ಹೇಳುವುದುಂಟು, ಅವರೊಬ್ಬ ವ್ಯಕ್ತಿ ಅಲ್ಲ, ಶಕ್ತಿ ಎಂದು. ಜಯಪ್ರಕಾಶ ಹೆಗ್ಡೆ ಯವರ ಮಟ್ಟಿಗೆ ಈ ಮಾತು ಅಕ್ಷರಶಃ ಸತ್ಯ. ಅವರು ಒಂದು ಶಕ್ತಿ. ಈ ಶಕ್ತಿ ಈ ಕ್ಷೇತ್ರದ ಉದ್ಧಾರಕ್ಕೆ ಬಳಕೆಯಾಗಬೇಕಾದರೆ ಈ ಬಾರಿ ಅವರು ಸಂಸದರಾಗಿ ಆಯ್ಕೆಯಾಗಬೇಕು. ಜಯಪ್ರಕಾಶ ಹೆಗ್ಡೆ ಕೇಂದ್ರದಲ್ಲಿ ನಮ್ಮನ್ನು ಸಮರ್ಥವಾಗಿ ಪ್ರತಿನಿಧಿಸಬಲ್ಲ ಅತ್ಯಂತ ಸಮರ್ಥ ಸಂಸದರಾಗುತ್ತಾರೆ ಎಂಬುದಂತೂ ಖಚಿತ. ನಮ್ಮ ಸಮಸ್ಯೆಗಳ ಕುರಿತು, ನಮ್ಮ ಬೇಡಿಕೆಗಳ ಕುರಿತು ಅವರು ಅತ್ಯಂತ ಸಮರ್ಥವಾಗಿ ಸಂಸತ್ತಿನಲ್ಲಿ ಮಾತನಾಡಬಲ್ಲರು.

ಜಯಪ್ರಕಾಶ ಹೆಗ್ಡೆ ಯವರಂತಹ ದಕ್ಷ ಮತ್ತು ಜನಪರ ರಾಜಕಾರಣಿ ಇರಬೇಕಾದದ್ದು ವಿಧಾನಸಭೆಯಲ್ಲಿ ಅಥವಾ ಲೋಕಸಭೆಯಲ್ಲಿ. ಅವರು ಎಲ್ಲಿರಬೇಕಾಗಿತ್ತೋ ಅಲ್ಲಿರದ ಕಾರಣ ನಾವು ಕಳೆದುಕೊಂಡಿದ್ದು ಅಪಾರ. ಮತ್ತೆ ಹೀಗಾಗಬಾರದು. ಇದು ಬಹುತೇಕ ಕೊನೆಯ ಅವಕಾಶ. ನಾವು ಅವರನ್ನು ಆಯ್ಕೆ ಮಾಡದೆ ಈ ಹಿಂದೆ ಮಾಡಿದ ತಪ್ಪನ್ನೇ ಮತ್ತೆ ಮಾಡಬಾರದು.

ಜಯಪ್ರಕಾಶ ಹೆಗ್ಡೆ ಯವರ ಅತ್ಯಂತ ದೊಡ್ಡ ಶಕ್ತಿ ಎಂದರೆ ಅವರು ಹಿಡಿದ ಕೆಲಸ ಮಾಡಿಸಿಕೊಂಡೇ ಬರುವವರು. ಅಧಿಕಾರದಲ್ಲಿದ್ದಾಗ ಸಚಿವರಾಗಿ, ಶಾಸಕರಾಗಿ, ಸಂಸದರಾಗಿ ಎಷ್ಟು ಅಧಿಕಾರಯುತವಾಗಿ ಕೆಲಸ ಮಾಡಿಸಿಕೊಂಡು ಬರಬಲ್ಲರೋ ಅಧಿಕಾರದಲ್ಲಿ ಇಲ್ಲದಾಗಲೂ ಅವರು ತಮ್ಮ ಸಂಪರ್ಕ, ವರ್ಚಸ್ಸು, ತಿಳುವಳಿಕೆ ಮತ್ತು ಸಂಸದೀಯ ಪರಿಣತಿಯನ್ನು ಬಳಸಿಕೊಂಡು ಜನಪರ ಕೆಲಸಗಳನ್ನು ಮಾಡಿಸಿಕೊಂಡು ಬರಬಲ್ಲ ತಾಕತ್ತು ಇರುವ ಕರ್ನಾಟಕದ ಕೆಲವೇ ಪ್ರಭಾವಿ ರಾಜಕಾರಣಗಳಲ್ಲಿ ಜಯಪ್ರಕಾಶ ಹೆಗ್ಡೆ ಒಬ್ಬರು.

ಜಯಪ್ರಕಾಶ ಹೆಗ್ಡೆ ಅತ್ಯುತ್ತಮ ಸಂಸದೀಯ ಪಟು. ಒಬ್ಬ statesman. ಯಾವ ಹೊತ್ತಿನಲ್ಲೂ ನಿಮ್ಮ ಫೋನ್ ಕರೆಗಳಿಗೆ ಅವರು ಸ್ಪಂದಿಸಬಲ್ಲವರು. ಬೆಂಗಳೂರು. ದೆಹಲಿಯಿಂದ ಆಗಬೇಕಾದ ಜನಪರ ಕೆಲಸಗಳು ಮಾತ್ರವಲ್ಲ ಅಗತ್ಯ ಬಿದ್ದರೆ ನಮ್ಮ ಜನರು ಎಲ್ಲೋ ಯಾವುದೋ ದೇಶದ ಯಾವುದೋ ಊರಿನಲ್ಲಿ ಸಂಕಷ್ಟಕ್ಕೆ ಸಿಲುಕಿದರೂ ಅವರಿಗೂ ಅವರು ಅತ್ಯಂತ ಸಮರ್ಥವಾಗಿ ನೆರವಾಗಿ ಸಂಕಷ್ಟದಿಂದ ಪಾರುಮಾಡಿ ತರಬಲ್ಲವರು. ಇದು ಕೇವಲ ಮಾತುಗಳಲ್ಲ, ಜಯಪ್ರಕಾಶ ಹೆಗ್ಡೆ ಯವರನ್ನು ಬಲ್ಲವರಿಗೆ ಇದೆಲ್ಲವೂ ಗೊತ್ತು.

ಜಯಪ್ರಕಾಶ ಹೆಗ್ಡೆ ಯವರ ಎದುರಾಳಿ ಕೋಟ ಶ್ರೀನಿವಾಸ ಪೂಜಾರಿ ಅವರ ಬಗ್ಗೆ ನಾನು ಹೆಚ್ಚೇನೂ ಹೇಳುವುದಿಲ್ಲ. ಅವರು ಫೋಟೊಗ್ರಾಫರ್ ಆಗಿ ಇದ್ದವರು. ಜನಸಾಮಾನ್ಯ. ಈಗ ಆಸ್ತಿ. ಅಂತಸ್ಥು, ಪ್ರಸಿದ್ಧಿ ಎಲ್ಲವನ್ನೂ ಗಳಿಸಿದ್ದಾರೆ. ರಾಜಕಾರಣಿಯಾಗಿ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ. ಸಚಿವರಾಗಿದ್ದರು. ಈಗ ವಿಧಾನಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕ. ಬಹಳ ಪ್ರಮುಖ ಹುದ್ದೆಗಳನ್ನು ಬಿಜೆಪಿ ಅವರಿಗೆ ಕೊಟ್ಟಿದೆ. ಇಷ್ಟೆಲ್ಲ ಇದ್ದರೂ, ಒಳ್ಳೆಯ ಅಧಿಕಾರದ ಸ್ಥಾನಗಳಲ್ಲಿದ್ದರೂ, ಸರ್ಕಾರವೇ ಅವರದ್ದೇ ಪಕ್ಷದ್ದು ಕೇಂದ್ರ, ರಾಜ್ಯದಲ್ಲಿ ಇದ್ದರೂ ಕೋಟ ಶ್ರೀನಿವಾಸ ಪೂಜಾರಿ ಕರಾವಳಿಯ ಏಳಿಗೆಗೆ, ಕರಾವಳಿಗರ ಬದುಕಿಗೆ ಅವರು ಮಾಡಿರುವಂತಹ ದೊಡ್ಡ ಸಾಧನೆಗಳು ಯಾವುದೂ ಇಲ್ಲ. ಆಗಾಗ ಕರಾವಳಿ ಹೊತ್ತಿ ಉರಿವಾಗ ಮತ್ತಿಷ್ಟು ಕೆರಳಿಸುವ ಬಾಷಣ ಮಾಡುವುದು, ಸಾರ್ವಜನಿಕ ಸಭೆಗಳಲ್ಲಿ ನಾಲ್ಕು ನಾಟಕದ ಪಡಪೋಷಿ ಮಾತನಾಡುವುದು ಬಿಟ್ಟರೆ ಅವರ ಸಾಧನೆ ಬೇರೆ ಏನೂ ಇಲ್ಲ.

ಕರಾವಳಿಯ ಪ್ರಗತಿಗೆ ಮಾಡಬಹುದಾದ ಕೆಲಸಗಳು ನೂರಿದ್ದರೂ, ಮಾಡಬಹುದಾದ ಹುದ್ದೆಗಳು, ಪದವಿ, ಅಧಿಕಾರ, ಅವಕಾಶ ಎಲ್ಲ ಇದ್ದರೂ ಕೋಟ ಶ್ರೀನಿವಾಸ ಪೂಜಾರಿ ಏನೂ ಮಾಡಲಿಲ್ಲ. ಕರಾವಳಿಯಲ್ಲಿ ಕೋಮುವಾದ, ಹಿಂಸೆ ತಾಂಡವವಾಡಿದಾಗಲೂ ಕೂಡ ಬೆಂಕಿ ಆರಿಸುವ ಬದಲು ಕೋಟ ಅದಕ್ಕೆ ತುಪ್ಪ ಸುರಿದಿದ್ದೇ ಜಾಸ್ತಿ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕೋಟ ಶ್ರೀನಿವಾಸ ಪೂಜಾರಿಯವರ ಅಭಿಮಾನಿಗಳು, ಬಿಜೆಪಿಯ ಮತದಾರರು ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಲೋಕಸಭಾ ಚುನಾವಣೆಯಲ್ಲಿ ಸೋತರೂ ಪೂಜಾರಿಯವರ ಈಗಿನ ಹುದ್ದೆಗಳಿಗೆ ಏನೂ ಬಾಧಕವಿಲ್ಲ. ಅವರು ವಿಧಾನಪರಿಷತ್ ಸದಸ್ಯರು. ವಿರೋಧ ಪಕ್ಷದ ನಾಯಕರು. ಇಲ್ಲಿಯೇ ಇದ್ದು ಅವರು ಮಾಡಬಹುದಾದಷ್ಟು ತುಂಬಾ ಇದೆ. ಹೀಗಾಗಿ ಅವರನ್ನು ಇಲ್ಲಿಯೇ ಸದ್ಯಕ್ಕೆ ಇರಿಸುವುದರಲ್ಲಿ ಯಾವುದೇ ತಪ್ಪಿಲ್ಲ.

ಜಯಪ್ರಕಾಶ ಹೆಗ್ಡೆ ಗೆದ್ದು ಸಂಸದರಾದರೆ ಉಡುಪಿ-ಚಿಕ್ಕಮಗಳೂರಿಗೆ ಸಮಗ್ರವಾಗಿ ಅನುಕೂಲವಾಗಲಿದೆ ಮತ್ತು ಅವರ ಕಾರ್ಯವೈಖರಿ ನೋಡಿ ಕೋಟ ಶ್ರೀನಿವಾಸ ಪೂಜಾರಿ ಕೂಡ ಈಗಿನ ತಮ್ಮ ಹುದ್ದೆಯಲ್ಲೇ ಕನಿಷ್ಟ ಜಿದ್ದಿಗೆ ಬಿದ್ದಾದರೂ ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು, ಒಟ್ಟಾರೆ ಕರಾವಳಿಯ ಮಟ್ಟಿಗಂತೂ ಆಗ ಡಬಲ್ ಧಮಾಕಾ. ಹೀಗಾಗಿ ಜಯಪ್ರಕಾಶ ಹೆಗ್ಡೆ ಸಂಸದರಾಗಲಿ, ಕೋಟ ಈಗಿನ ವಿಧಾನಪರಿಷತ್ತಿನ ಅಧಿಕಾರದಲ್ಲೇ ಮುಂದುವರಿಯಲಿ.

ಜಯಪ್ರಕಾಶ ಹೆಗ್ಡೆ ಅವರಿಗೆ ಅಭಿವೃದ್ಧಿ ಮಾಡಿಸುವ ಎಲ್ಲ ರಾಜತಾಂತ್ರಿಕ ಮಾರ್ಗಗಳು ಗೊತ್ತು. ಅವರು ಯಾವತ್ತೂ ನಾನ್ಸೆನ್ಸ್ ಮಾತಾಡುವವರಲ್ಲ. ಯಾವುದೇ ತರಹದ ಉದ್ರೇಕಕ್ಕೆ ಅವರು ಒಳಗಾಗುವುದೂ ಇಲ್ಲ, ಜನರನ್ನು ಅವರು ಜಾತಿ, ಧರ್ಮದ ಹೆಸರಿನಲ್ಲಿ ಉದ್ರೇಕಿಸುವುದೂ ಇಲ್ಲ. ಒಬ್ಬ ಜನಪ್ರತಿನಿಧಿಯಾಗಿ ತನ್ನ ಕೆಲಸವೇನು ಎಂಬುದನ್ನು ಅವರು ಪಕ್ಕಾ ಅರಿತುಕೊಂಡು ಕೆಲಸ ಮಾಡುವವರು. ಮತಹಾಕಿ ಗೆಲ್ಲಿಸಿದ ಬಳಿಕವೂ ಜನರಿಗೆ ಸುಲಭವಾಗಿ ಸಿಗುವವರು. ತನ್ನ ಕೆಲಸದ ಹೊಣೆ ತನ್ನದು ಎನ್ನುವವರೇ ವಿನಃ ಕೆಲಸ ಮಾಡಿಕೊಡಿ ಎಂದರೆ ಮೋದಿಯತ್ತಲೋ, ಮತ್ಯಾವ ನಾಯಕನತ್ತಲೋ ಬೊಟ್ಟು ಮಾಡಿ ತೋರಿಸುವ ಜಾಯಮಾನ ಅವರದಲ್ಲ. ಅಧಿಕಾರವನ್ನು ಅತ್ಯಂತ ಸಮರ್ಥವಾಗಿ ಸದ್ಬಳಕೆ ಮಾಡಬಲ್ಲವರು ಜಯಪ್ರಕಾಶ ಹೆಗ್ಡೆ.

ಜಯಪ್ರಕಾಶ ಹೆಗ್ಡೆ ಮೂರು ಬಾರಿ ಶಾಸಕರಾಗಿದ್ದವರು. ಸಚಿವರಾಗಿದ್ದವರು. ಸಂಸದರಾಗಿದ್ದವರು. ಈ ಎಲ್ಲ ಅವಧಿಗಳಲ್ಲೂ ಜನರು ಬಹುಕಾಲ ನೆನೆಯಬಲ್ಲ ಜನಪರ, ಅಭಿವೃದ್ಧಿಪರ ಕೆಲಸಗಳನ್ನು ಮಾಡಿದವರು. ಅತ್ಯಂತ ಅನುಭವಿ. ನಿಗರ್ವಿ. ಜನಪ್ರತಿನಿಧಿಯೊಬ್ಬ ಹೇಗಿರಬೇಕು ಎಂಬುದಕ್ಕೆ ಮಾದರಿ. ಈ ಬಾರಿ ಉಡುಪಿ-ಚಿಕ್ಕಮಗಳೂರಿನ ಸಂಸದರನ್ನಾಗಿ ಜಯಪ್ರಕಾಶ ಹೆಗ್ಡೆ ಯವರನ್ನು ಆಯ್ಕೆ ಮಾಡುವ ಮೂಲಕ ಓರ್ವ ಸಮರ್ಥ ಪ್ರತಿನಿಧಿಯನ್ನು ಆಯ್ಕೆ ಮಾಡೋಣ. ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಯಾವ ಅಭಿವೃದ್ಧಿಯ, ಜನಪರ ಕೆಲಸಗಳಿಂದ ವಂಚಿತವಾಗಿದೆಯೋ ಆ ಕೊರತೆಯನ್ನು ನೀಗಿಸೋಣ.

ದೊಡ್ಡ ನಾಯಕನ ಹೆಸರು ಹೇಳಿ ಮತ ಕೇಳಿದ್ದೂ ಸಾಕು, ಜನ ಮತ ಹಾಕಿದ್ದೂ ಸಾಕು. ಈ ಬಾರಿ ಅಭ್ಯರ್ಥಿ ನೋಡಿ ಮತ ಹಾಕಿ. ನಿಮ್ಮ ಕ್ಷೇತ್ರದ ಏಳಿಗೆಗೆ, ನಿಮ್ಮ ಏಳಿಗೆಗೆ, ನಿಮ್ಮ ನಾಳಿಕ ನೆಮ್ಮದಿಯ ಜೀವನಕ್ಕಾಗಿ, ನಿಮ್ಮ ಮುಂದಿನ ಪೀಳಿಗೆಯ ಒಳಿತಿಗಾಗಿ ಜಯಪ್ರಕಾಶ ಹೆಗ್ಡೆಯವರಿಗೆ ಮತಹಾಕಿ. ಜಯಪ್ರಕಾಶ ಹೆಗ್ಡೆಯವರನ್ನು ಈ ಬಾರಿ ಗೆದ್ದೇ ಗೆಲ್ಲಿಸೋಣ. ಕರಾವಳಿಯಿಂದ ಹಿಡಿದು ಘಟ್ಟದ ಮೇಲಿನ ಜನಸಾಮಾನ್ಯರ ಬದುಕನ್ನು ಕರಾವಳಿಯ ಕಡಲಿನಂತೆ ಸಮೃದ್ಧಗೊಳಿಸೋಣ, ಮಲೆನಾಡಿನ ಹಸಿರಿನಂತೆ ಸುಂದರವಾಗಿಸೋಣ.

ಈ ಬಾರಿ ನಮ್ಮ ಜೆ.ಪಿ, ನಮ್ಮ ಎಂ.ಪಿ. ಜಯಪ್ರಕಾಶ ಹೆಗ್ಡೆಗೆ ಜಯವಾಗಲಿ.

- ಓರ್ವ ಪ್ರಜ್ಞಾವಂತ ಮತದಾರ

Advertisement
Advertisement
Recent Posts
Advertisement