ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿರಾಡಿ ಘಾಟ್ ಗುಡ್ಡ ಕುಸಿತದ ಸ್ಥಳಕ್ಕೆ ಇಂದು ಭೇಟಿನೀಡಿ, ಸ್ಥಳ ಪರಿಶೀಲನೆ ನಡೆಸುವ ವೇಳೆ ಅವೈಜ್ಞಾನಿಕ ಕಾಮಗಾರಿ ಕಂಡುಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗೆ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದರು.
ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು 90 ಡಿಗ್ರಿಯಲ್ಲಿ ನೇರವಾಗಿ ಸೀಳಿರುವುದೇ ಗುಡ್ಡ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಒಟ್ಟು 45 ಕಿಮೀ ನಲ್ಲಿ 35 ಕಿಮೀ ಹೆದ್ದಾರಿ ಕಾಮಗಾರಿ ಮುಗಿದಿದೆ. ಆದರೆ ಇಲ್ಲಿಯವರೆಗೂ ಎಲ್ಲೂ ತಡೆಗೋಡೆಗಳನ್ಜು ನಿರ್ಮಿಸಿಲ್ಲ, ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಿ ಅದರ ಆಧಾರದಲ್ಲಿ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿಯವರು ಅಸಮಾಧಾನ ವ್ಯಕ್ತಪಡಿಸಿದರು.
ಹಣ ಉಳಿಸುವ ಉದ್ದೇಶದಿಂದ ಕಡಿಮೆ ಭೂಮಿ ಸ್ವಾಧೀನಪಡಿಸಿಕೊಂಡು, ಬಳಿಕ ಖರ್ಚು ಉಳಿಸಲು 90 ಡಿಗ್ರಿಯಲ್ಲಿ ಗುಡ್ಡಗಳನ್ನು ಕತ್ತರಿಸಲಾಗಿದೆ. ಇದು ಅವೈಜ್ಞಾನಿಕ ಕಾಮಗಾರಿ ಅಲ್ಲವೇ?
ಗುಡ್ಡಗಳನ್ನು 30 ರಿಂದ 45 ಡಿಗ್ರಿಯಲ್ಲಿ ಕತ್ತರಿಸಿ ತಡೆಗೋಡೆ ನಿರ್ಮಿಸಿದ್ದರೆ ಮಣ್ಣು ಕುಸಿತವನ್ನು ತಡೆಯಬಹುದಿತ್ತು.ಕಾಮಗಾರಿ ಆರಂಭಿಸುವ ಮೊದಲು ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಿದ್ದೀರಾ? ಅದಕ್ಕೆ ತಕ್ಕಂತೆ ಮುಂಜಾಗ್ರತಾ ಕ್ರಮ ವಹಿಸಬೇಕಿತ್ತು. ಇಲ್ಲಿನ ಒಟ್ಟಾರೆ ಸ್ಥಿತಿ ಗತಿ ಕುರಿತು ಕೇಂದ್ರ ಸಚಿವರಾದ ಗಡ್ಕರಿ ಅವರಿಗೆ ಸರ್ಕಾರದಿಂದ ಪತ್ರ ಬರೆಯುತ್ತೇವೆ. ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ನಾವು ಇಂತಹ ವರ್ತನೆಯನ್ನು ಸಹಿಸುವುದಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರಿನ ಖ್ಯಾತ ವೈದ್ಯ, ಜನಪರ ಚಿಂತಕ ಡಾ. ಶ್ರೀನಿವಾಸ ಕಕ್ಕಿಲ್ಲಾಯ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳೇ,
ಡಬಲ್ ಎಂಜಿನ್ ಆಡಳಿತದ ಅಹಂಕಾರ, ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರಗಳಿಗೆ ಮಂಗಳೂರಿನಿಂದ ಬೆಂಗಳೂರಿಗೆ ಇರುವ ಹೆದ್ದಾರಿಗಳ ಕಾಮಗಾರಿಗಳಿಗಿಂತ ಒಳ್ಳೆಯ ನಿದರ್ಶನ ಬೇರೆ ಬೇಕಾಗಿಲ್ಲ. ನೀವು ವೀಕ್ಷಿಸಿರುವ ಈ ಶಿರಾಡಿ ಹೆದ್ದಾರಿ ಕಾಮಗಾರಿಯು ನೀವೇ ನೋಡಿರುವಂತೆ ತೀರಾ ಅವೈಜ್ಞಾನಿಕವಾದ, ಅಪಾಯಕಾರಿಯಾದ, ಪರಿಸರಕ್ಕೆ ಹಾನಿಕರವಾದ ಕಾಮಗಾರಿಯಾಗಿದೆ. ಪಾಣೆಮಂಗಳೂರಿನಿಂದ ಗುಂಡ್ಯ ಗೇಟಿನವರೆಗೂ, ಆ ಮೇಲೆ ಮಾರನಹಳ್ಳಿಯಿಂದ ಸಕಲೇಶಪುರದವರೆಗೂ ತೀರಾ ಕಳಪೆಯಾಗಿ, ನಿಧಾನವಾಗಿ ಕೆಲಸ ನಡೆಯುತ್ತಿದೆ. ಇಷ್ಟುದ್ದಕ್ಕೂ ಕಡ್ಡಾಯವಾಗಿ ಇರಲೇಬೇಕಿದ್ದ ಸರ್ವಿಸ್ ರಸ್ತೆಯನ್ನು ಎಲ್ಲಿಯೂ ಮಾಡಿಯೇ ಇಲ್ಲ. ಎತ್ತಿನಹೊಳೆ ಯೋಜನೆಯ ಭಾಗದಲ್ಲಂತೂ ತೀರಾ ಅಪಾಯಕಾರಿಯಾದ ಕಾಮಗಾರಿಯಾಗುತ್ತಿದ್ದು, ಅದೇ ಕಾರಣಕ್ಕೆ ಮೊನ್ನೆ ಎಲ್ಲೆಡೆ ಭೂಕುಸಿತವಾಗಿರುವುದನ್ನು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಕಾಮಗಾರಿಯಲ್ಲಿ ಸರ್ವಿಸ್ ರಸ್ತೆ ಇಲ್ಲದಾಗಲು, ಕಾಮಗಾರಿ ಹೀಗೆ ಕಳಪೆಯಾಗಲು, ತಡವಾಗಲು ಡಬಲ್ ಎಂಜಿನ್ನಿನ ಯಾವ ಎಂಜಿನ್, ಯಾವ ಚಾಲಕ ಯಾ ನಿರ್ವಾಹಕ ಕಾರಣ ಎನ್ನುವುದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಹಾಗೆಯೇ, ಈ ಹೆದ್ದಾರಿ ಇಂಥ ದುರವಸ್ಥೆಯಲ್ಲಿರುವಾಗಲೇ ಚಾರ್ಮಾಡಿ ಹೆದ್ದಾರಿಯನ್ನೂ ಪುಂಜಾಲಕಟ್ಟೆಯಿಂದ ಚಾರ್ಮಾಡಿ ಗೇಟಿನವರೆಗೆ ಸಂಪೂರ್ಣವಾಗಿ ಅಗೆದು ಹಾಕಿ, ಅಲ್ಲೂ ಸರ್ವಿಸ್ ರಸ್ತೆಯನ್ನು ಮಾಡದೆ ಡಬಲ್ ಎಂಜಿನ್ ಅವೈಜ್ಞಾನಿಕ ಕಾಮಗಾರಿ ಆರಂಭಿಸಿರುವುದೇಕೆ ಎನ್ನುವುದನ್ನೂ ತನಿಖೆಗೆ ಒಳಪಡಿಸಬೇಕು. ಮೂರು ದಶಕಗಳಿಂದಲೂ ಮತ ನೀಡುತ್ತಿರುವ ಜಿಲ್ಲೆಯ ಜನರನ್ನು ಎಷ್ಟು ಪೀಡಿಸಿದರೂ ಸುಮ್ಮನಿರುತ್ತಾರೆ, ಬೇಕಾದದ್ದನ್ನು ಮಾಡಬಹುದು ಎಂಬ ದಾರ್ಷ್ಟ್ಯತನ ಇಲ್ಲಿನ ಪ್ರತಿನಿಧಿಗಳಲ್ಲಿದೆಯೇ ಎನ್ನುವುದನ್ನೂ ಪರಾಮರ್ಷಿಸಬೇಕು.
-ಡಾ. ಶ್ರೀನಿವಾಸ ಕಕ್ಕಿಲ್ಲಾಯ.