ಹಿಜಾಬ್ ಹೆಸರಲ್ಲಿ ಕೋಮು ಸಂಘರ್ಷದ ಉರಿಹಚ್ಚಿ ರಾಜ್ಯದ, ರಾಷ್ಟ್ರದ ಸೌಹಾರ್ಧತೆ ಕೆಡಲು ಕಾರಣರಾದ ಕುಂದಾಪುರದ ಜೂನಿಯರ್ ಕಾಲೇಜು ಪ್ರಾಂಶುಪಾಲರಿಗೆ ಶಿಕ್ಷಣ ಇಲಾಖೆಯ ಅಚಾತುರ್ಯದಿಂದ ಘೋಷಿಸಲ್ಪಟ್ಟ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯ ಸರಕಾರ ತಡೆಹಿಡಿದಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಇದು ಸ್ವತಂತ್ರ ಭಾರತದ ಶಿಕ್ಷಣ ಕ್ಷೇತ್ರ ಪ್ರತಿಪಾದಿಸುತ್ತ ಬಂದ ಜಾತ್ಯತೀತ, ಧರ್ಮಾತೀತ ನೆಲೆಯ ಜ್ಞಾನ ದಾಸೋಹಕ್ಕೆ ಸಂದ ಜಯವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯ ಕೋಮುವಾದಿ ಸಿದ್ದಾಂತ ಧರ್ಮದ ಹೆಸರಲ್ಲಿ ಜಿಲ್ಲೆಯ ಶಾಂತಿ ಸೌಹಾರ್ಧತೆಯನ್ನು ಕೆಡಿಸುತ್ತಿರುವ ಹೊತ್ತಿನಲ್ಲಿ ಈ ಪ್ರಾಂಶುಪಾಲರು ಹಸಿಗಾಯಕ್ಕೆ ಉಪ್ಪು ಸವರಿದಂತೆ ಹಿಂದಿನಿಂದಲೂ ಹಿಜಾಬ್ ಧರಿಸಿ ಕಾಲೇಜಿಗೆ ಬಂದು ಕ್ಲಾಸಿನ ಒಳಗೆ ಹಿಜಾಬ್ ತಗೆದು ಕುಳಿತುಕೊಳ್ಳುತ್ತಿದ್ದ ವಿದ್ಯಾರ್ಥಿನಿಯರನ್ನು ಕಾಲೇಜಿನ ಗೇಟಿನಿಂದ ಹೊರದಬ್ಬಿದ್ದರು. ಅಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಕೋಮು ಚಿಂತನೆಗೆ ತನ್ನ ಬದ್ಧತೆ ತೋರುವ ನೆಲೆಯಲ್ಲಿ ಆ ಹೆಣ್ಣುಮಕ್ಕಳು ಕಾಡಿ ಬೇಡಿ, ಪ್ರತಿಭಟಿಸಿ, ಸತ್ಯಾಗ್ರಹ ಮಾಡಿದರೂ ಕರುಣೆ ತೋರದೆ ಗೇಟಿಗೆ ಬಾಗಿಲು ಜಡಿದು ಆ ಹೆಣ್ಣು ಮಕ್ಕಳ ಭವಿಷ್ಯವನ್ನು ಹೊಸಕಿ ಹಾಕಿದ್ದರು. ಇಂತವರಿಗೆ ರಾಜ್ಯಪ್ರಶಸ್ತಿ ಶಿಕ್ಷಣ ಕ್ಷೇತ್ರಕ್ಕೆ ಆಗುವ ಮಾಹಾಪಮಾನ ಎಂದು ಮನಗಂಡು ಸರಕಾರ ಇವರ ಪ್ರಶಸ್ತಿಗೆ ಮುಟ್ಟುಗೋಲು ಹಾಕಿರುವುದು ಸರಿಯಾದ ನಡೆಯೇ ಆಗಿದೆ ಎಂದವರು ವಿಶ್ಲೇಷಿಸಿದ್ದಾರೆ.
ವಾಸ್ತವದಲ್ಲಿ ಪ್ರಾಂಶುಪಾಲರ ಅಂದಿನ ನಡೆ ಅಮಾನವೀಯ ಮತ್ತು ಸಂವಿಧಾನ ಬಾಹಿರವಾಗಿತ್ತು. ಆದರೆ ಕೋಮು ಸಂಘರ್ಷವನ್ನೇ ಉಸಿರಾಗಿಸಿಕೊಂಡಿದ್ದ ಅಂದಿನ ಬಿಜೆಪಿ ಶಾಸಕರುಗಳು ಮತ್ತು ಅಂದಿನ ಬಿಜೆಪಿ ಸರಕಾರಕ್ಕೆ ಅಂದಿನ ಘಟನೆ ಅಪ್ಯಾಯಮಾನಕರವಾಗಿತ್ತು. ಬಹುಶಃ ಮುಖ್ಯಮಂತ್ರಿ ಬೊಮ್ಮಾಯಿ ಸರಕಾರ ಅಂದೇ ಈ ಶಿಕ್ಷಕನಿಗೆ ಪ್ರಶಸ್ತಿ ಘೋಷಿಸುತ್ತಿದ್ದಲ್ಲಿ ಇಂದು ಬೊಬ್ಬಿರಿಯುತ್ತಿರುವ ಬಿಜೆಪಿಯ ಈ ಕೆಲವು ಕೋಮುವಾದಿ ನಾಯಕರು ಪಶ್ಚಾತ್ತಾಪ ಪಡುವ ಪ್ರಮೇಯವೇ ಬರುತ್ತಿರಲಿಲ್ಲ ಎಂದವರು ವ್ಯಂಗ್ಯವಾಡಿದ್ದಾರೆ.
ಈ ದೇಶವು ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷ ಜಾರಿಗೊಳಿಸಿದ್ದ ಅಂಬೇಡ್ಕರ್ ಸಂವಿಧಾನದಲ್ಲಿನ ಏಕತೆಯ ಸಿದ್ಧಾಂತದಡಿಯಲ್ಲಿ ನಡೆಯುತ್ತಿದೆ. ಬಹುತ್ವ ಈ ದೇಶದ ಶಕ್ತಿ. ಸರ್ವಧರ್ಮ ಸಮನ್ವಯತೆಯೇ ಈ ದೇಶದ ಜೀವಾಳ. ಅಂತಹ ಸಿದ್ಧಾಂತದಡಿಯಲ್ಲಿ ವಿಶ್ವಕ್ಕೆ ಈ ನಾಡಿನ ಹೆಸರನ್ನು ಪಸರಿಸಿದ ಕವಿ ಮುದ್ದಣ ಶಿಕ್ಷಕರಾಗಿ ಕೆಲಸ ಮಾಡಿದ್ದ, ಸಾಹಿತಿ ಶಿವರಾಮ ಕಾರಂತ ರಂತಹವರು ಓದಿ ಮರೆದ, ಮೆರಸಿದ ಆ ಭವ್ಯ ಶಾಲೆ ಇಂದು ವಿದ್ಯಾಧಾನದ ಮಾಹಾಕಾಲೇಜಾಗಿ ಮೆರೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಆದರೆ ಅಂತಹ ಮಹಾನ್ ಶಿಕ್ಷಣ ಸಂಸ್ಥೆಯಲ್ಲಿ ಮಾನವೀಯ ಮೌಲ್ಯಗಳಡಿಯಲ್ಲಿ ಕಾರ್ಯನಿರ್ವಹಿಸುವ ಸಜ್ಜನರಿಗೆ ಸನ್ಮಾನ ಸಲ್ಲಬೇಕೇ ಹೊರತೂ ಇಂತಹ ಸಮಾಜ ವಿರೋಧಿಗಳಿಗಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.