Advertisement

ಸಿದ್ದರಾಮಯ್ಯ ಸರ್ಕಾರದ ಪತನಕ್ಕೆ ಬಿಜೆಪಿ ಪಿತೂರಿ- 1000ಕೋ. ರೂ ಸಂಗ್ರಹ: ಪೋಲೀಸ್ ದೂರು

Advertisement

ಸಿದ್ದರಾಮಯ್ಯ ಸರ್ಕಾರವನ್ನು ಪತನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ 1000ಕೋಟಿ ರೂಪಾಯಿ ಸಂಗ್ರಹಿಸಿದ್ದು ಡಿಸೆಂಬರ್ ವೇಳೆಗೆ ಪತನಗೊಳಿಸುವ ಸಂಚು ರೂಪಿಸಲಾಗಿದೆ ಎಂದು ಬಿಜೆಪಿಯ ಭಿನ್ನಮತೀಯ ನಾಯಕರುಗಳು ಪತ್ರಿಕಾಗೋಷ್ಠಿ ನಡೆಸಿ ನೀಡಿದ ಹೇಳಿಕೆಯನ್ನು ಆಧರಿಸಿ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ವಿ.ಎಸ್ ಉಗ್ರಪ್ಪ ಅವರು ಈ ಕುರಿತು ಪೋಲಿಸ್ ದೂರು ನೀಡಿದ್ದಾರೆ.

ದೂರಿನ ವಿವರಗಳನ್ನು ಓದಿ:

ತಾರೀಖು: 30-09-2024

ರಿಂದ,
ವಿ.ಎಸ್. ಉಗ್ರಪ್ಪ, EX-MLC
ಉಪಾಧ್ಯಕ್ಷರು
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ
"ಕಾಂಗ್ರೆಸ್ ಭವನ" ನಂ. 14, ಕ್ಲೀನ್ಸ್ ರಸ್ತೆ, ಬೆಂಗಳೂರು - 560 052

ರಿಗೆ,
ಠಾಣಾಧಿಕಾರಿಗಳು, ಹೈಗೌಂಡ್ಸ್ ಪೊಲೀಸ್ ಠಾಣೆ, ವಸಂತನಗರ, ಬೆಂಗಳೂರು

ಮಾನ್ಯರೆ,

ದಿನಾಂಕ 29-09-2024 ರಂದು ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರುಗಳಾದ ಶ್ರೀ ಬಸವರಾಜ ಪಾಟೀಲ್ ಯತ್ನಾಳ್, ಶಾಸಕರು, ಶ್ರೀ ಜಿ.ಎಂ. ಸಿದ್ದೇಶ್ವ‌ರ್, ಮಾಜಿ ಸಂಸದರು, ಶ್ರೀ ಸಿ.ಕೆ. ಪ್ರತಾಪ್ ಸಿಂಹ, ಮಾಜಿ ಸಂಸದರು, ಶ್ರೀ ಬಿ.ಪಿ. ಹರೀಶ್, ಶಾಸಕರು ಹಾಗೂ ಇನ್ನಿತರ ಹಿರಿಯ ಮುಖಂಡರುಗಳು ದಾವಣಗೆರೆಯ ಜಿ.ಎಂ.ಐ.ಟಿ. ವಸತಿಗೃಹದಲ್ಲಿ ಸಭೆ ಸೇರಿ, ರಾಜ್ಯದ ಅನೇಕ ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ಮಾಡಿರುತ್ತಾರೆ. ಸಭೆಯ ನಂತರ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಶ್ರೀ ಬಸವರಾಜ ಪಾಟೀಲ್ ಯತ್ನಾಳ ಹಾಗೂ ಇತರರು ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಅನೇಕ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿರುತ್ತಾರೆ. ಶ್ರೀ ಬಸವರಾಜ್ ಪಾಟೀಲ್ ಯತ್ನಾಳ್ ಅವರು ಮಾತನಾಡಿರುವ ಪ್ರಮುಖ ವಿಚಾರವೆಂದರೆ; ರಾಜ್ಯದ ನಮ್ಮ ಪಕ್ಷದ ಕೆಲವು ನಾಯಕರು 1000 ಕೋಟಿ ಹಣವನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ, ಆ ಹಣವನ್ನು ಬಳಸಿ ಹಾಲಿ ಇರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ಪತನಗೊಳಿಸಿ ತಾವು ಮುಖ್ಯಮಂತ್ರಿಯಾಗಲು ಸಂಚು ರೂಪಿಸಿದ್ದಾರೆ. ಸದರಿ ಹಣವನ್ನು ಬಳಸಿ ಕಾಂಗ್ರೆಸ್ ಪಕ್ಷದ ಶಾಸಕರುಗಳನ್ನು ಖರೀದಿಸಿ ಸರ್ಕಾರವನ್ನು ಪತನಗೊಳಿಸಿ ಸಂಚು ರೂಪಿಸುತ್ತಿದ್ದಾರೆ ಎಂದು ಸಹ ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ 2024ರ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯದಲ್ಲಿ ರಾಜಕೀಯ ಕ್ರಾಂತಿ ಉಂಟಾಗಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಹೇಳಿರುತ್ತಾರೆ. ಸಾವಿರ ಕೋಟಿ ರೂಪಾಯಿ ಹಣ ಸಂಗ್ರಹಿಸಿ ಇಟ್ಟುಕೊಂಡಿರುವವರು ಯಾರು ಎಂದು ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಅವರು ನೀವೇ ಊಹೆ ಮಾಡಿ ಎಂದು ಉತ್ತರ ನೀಡಿರುತ್ತಾರೆ. ಅಷ್ಟೇ ಅಲ್ಲದೆ ಹಣ ಸಂಗ್ರಹಿಸಿರುವ ನಾಯಕರ ಮನೆಯಲ್ಲಿ ನೋಟು ಎಣಿಸುವ ಮೆಷಿನ್ ಪತ್ತೆಯಾಗಿತ್ತು ಎಂದು ಸಹ ಹೇಳಿರುತ್ತಾರೆ. ಅವರ ಸಭೆಯ ನಂತರ ಇಂತಹ ಹೇಳಿಕೆಯನ್ನು ಬಸವರಾಜಪಾಟೀಲ್ ಯತ್ನಾಳ್‌ ನೀಡಿರುವುದನ್ನು ನೋಡಿದರೆ ಈ ವಿಚಾರವಾಗಿ ಸಭೆಯಲ್ಲಿ ಇದ್ದಂತಹ ಎಲ್ಲ ನಾಯಕರುಗಳಿಗೂ ಗೊತ್ತಿದ್ದು, ಚರ್ಚೆ ಮಾಡಿ ಮಾಧ್ಯಮಗಳಿಗೆ ತಿಳಿಸಲು ಸಹಮತ ವ್ಯಕ್ತಪಡಿಸಿರುವುದು ಕಾಣುತ್ತಿದೆ. ಸದರಿ ವಿಷಯವನ್ನು ದಿನಾಂಕ 26-09-2024 ರಂದು ಹಾಗೂ 30-09-2024 ರಂದು ದೃಶ್ಯ ಮಾಧ್ಯಮ, ದಿನಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಪ್ರಚಾರ ಮಾಡಿರುತ್ತವೆ. ಸದರಿ ವಿಚಾರವನ್ನು ಪ್ರಕಟಿಸಿರುವ ದಿನಪತ್ರಿಕೆಗಳ ತುಣುಕುಗಳನ್ನು ಹಾಗೂ ನ್ಯೂಸ್೧೮ ರಲ್ಲಿ ಪ್ರಚಾರಪಡಿಸಿರುವ ವೀಡಿಯೋ ಇರುವ ಪೆನ್ ಡ್ರೈವ್'ನ್ನು ತಮ್ಮ ಮಾಹಿತಿಗಾಗಿ ಈ ದೂರಿನೊಂದಿಗೆ ಲಗತ್ತಿಸಲಾಗಿದೆ.

ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳನ್ನು ನೀಡಿ 5 ವರ್ಷಗಳ ಕಾಲ ಸರ್ಕಾರ ನಡೆಸಲು ಜನಾದೇಶವಾಗಿರುತ್ತದೆ. ಅದರಂತೆ ರಾಜ್ಯದಲ್ಲಿ ಜನಪರವಾದಂತಹ ಸರ್ಕಾರವನ್ನು ಕಾಂಗ್ರೆಸ್ ಪಕ್ಷ ನಡೆಸುತ್ತಿದ್ದರೂ, ಅಧಿಕಾರವಿಲ್ಲದೆ ಹತಾಶರಾಗಿರುವ ಕೆಲವು ಬಿಜೆಪಿ ನಾಯಕರುಗಳು ಸಾವಿರ ಕೋಟಿ ಭ್ರಷ್ಟ ಹಣವನ್ನು ಅಕ್ರಮವಾಗಿ ಸಂಗ್ರಹಿಸಿ ಕಾಂಗ್ರೆಸ್ ನೇತೃತ್ಯದ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಸಂಚು ರೂಪಿಸಿರುವುದು ಯತ್ನಾಳ್ ಅವರ ಹೇಳಿಕೆಯಿಂದ ಸ್ಪಷ್ಟವಾಗಿರುತ್ತದೆ. ಇದರಿಂದ ಒಂದು ಕಡೆ ಜನಾದೇಶಕ್ಕೆ ಅಪಚಾರ ಮತ್ತೊಂದು ಕಡೆ ಭ್ರಷ್ಟ ಹಾಗೂ ಅಕ್ರಮ ಹಣ ವರ್ಗಾವಣೆ ನೆಡೆಯುತ್ತಿದೆ. ಈ ರೀತಿ ಅಕ್ರಮವಾಗಿ ಹಣ ಸಂಗ್ರಹಿಸಿರುವವರು ಭಾರತೀಯ ನ್ಯಾಯ ಸಂಹಿತೆಯ (B.N.S.) ಆದಾಯ ತೆರಿಗೆ ಅಧಿನಿಯಮ, ಅಕ್ರಮ ಹಣ ವರ್ಗಾವಣೆ ಅಧಿನಿಯಮ ಮುಂತಾದ ವಿಧಿಗಳ ಅಡಿಯಲ್ಲಿ ಅಕ್ರಮ ಎಸಗಿರುವುದು ಸ್ಪಷ್ಟವಾಗಿರುತ್ತದೆ.

ಆದ್ದರಿಂದ ಕೂಡಲೇ ಮೊಕದ್ದಮೆಯನ್ನು ದಾಖಲಿಸಿಕೊಂಡು ಶ್ರೀ ಬಸವರಾಜ ಪಾಟೀಲ್ ಯತ್ನಾಳ್ ಮತ್ತು ಆ ಸಭೆಯಲ್ಲಿ ಪಾಲ್ಗೊಂಡ ಬಿಜೆಪಿ ಮುಖಂಡರುಗಳಿಂದ ಮಾಹಿತಿ ಸಂಗ್ರಹಿಸಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪತನಗೊಳಿಸಲು ಅಕ್ರಮವಾಗಿ ಸಂಗ್ರಹಿಸಿರುವ 1000 ಕೋಟಿ ಕಪ್ಪುಹಣವನ್ನು ಪತ್ತೆಹಚ್ಚಿ ಅದನ್ನು ವಶಪಡಿಸಿಕೊಂಡು ಹಾಗೂ ಈ ಕಪ್ಪು ಹಣವನ್ನು ಸಂಗ್ರಹಿಸಿರುವವರನ್ನು ಮೇಲೆ ಕೂಡಲೇ ಕಾನೂನು ರೀತಿಯ ಕ್ರಮ ಜರುಗಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಬೇಕೆಂದು ಕೋರುತ್ತೇನೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,
ಸಹಿ
(ವಿ.ಎಸ್. ಉಗ್ರಪ್ಪ)

Advertisement
Advertisement
Recent Posts
Advertisement