ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಅಪಪ್ರಚಾರ ನಡೆಸಿದ್ದಲ್ಲದೇ ನನ್ನ ಪೋಟೊವನ್ನು ವಿರೂಪಗೊಳಿಸಿ ಎಡಿಟ್ ಮಾಡುವ ಮೂಲಕ ಸಾರ್ವಜನಿಕವಾಗಿ ನನ್ನ ತೇಜೋವಧೆ ಮಾಡಿದ ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೆ ಹೋರಾಟ ಮುಂದುವರೆಸುವುದಾಗಿ ಕಾಂಗ್ರೆಸ್ ಮುಖಂಡ, 2023ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಎಚ್ಚರಿಕೆ ನೀಡಿದ್ದಾರೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಾಗೂ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಅವರು ಸ್ಪಷ್ಟನೆಯನ್ನು ಕೂಡ ನೀಡಿರುತ್ತಾರೆ.
ಉಡುಪಿ- ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ವತಿಯಿಂದ ನಡೆದ ದಸರಾಕ್ಕೆ ಸೌಹಾರ್ಧತೆಯ ಸಂಕೇತವಾಗಿ ಮುಸ್ಲಿಂ ಮಾಲಕತ್ವದ ಎಕೆಎಂಎಸ್ ಎಂಬ ಸಂಸ್ಥೆಯವರು ಉಚಿತ ಬಸ್ ಸೇವೆಯನ್ನು ಕಲ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೃತಜ್ಞತೆ ಅರ್ಪಿಸುವ ಸಲುವಾಗಿ ಆ ಬಸ್ ಸಂಸ್ಥೆಯ ಉದ್ಯೋಗಿಗಳನ್ನು ದಸರಾ ಕಮಿಟಿಯವರು ಸನ್ಮಾನಿಸಿದ್ದರು. ಹಾಗೆ ಸನ್ಮಾನಿಸುವುದು ಸಂಪೂರ್ಣವಾಗಿ ದಸರಾ ಕಮಿಟಿಯ ನಿರ್ಣಯವಾಗಿತ್ತು. ಆದರೆ, ಇದೆಲ್ಲವನ್ನೂ ಮರೆಮಾಚಿ ರಾಜಕೀಯ ದುರುದ್ದೇಶದಿಂದ ಈ ಮದ್ಯೆ ಆ ದಸರಾ ಕಮಿಟಿಗೆ ಸಂಬಂಧವೇ ಇಲ್ಲದ ನನ್ನ ಹೆಸರನ್ನು ಅನಗತ್ಯವಾಗಿ ಎಳೆದುತಂದು ಸುಳ್ಳು ಪ್ರಚಾರ ಮಾಡುವ ಮೂಲಕ ನನ್ನ ರಾಜಕೀಯ ಭವಿಷ್ಯವನ್ನು ಹಾಳುಗೆಡಹುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ನನ್ನ ಪೋಟೊವನ್ನು ವಿರೂಪಗೊಳಿಸಿ ಎಡಿಟ್ ಮಾಡಿ, ನನ್ನನ್ನು ಮೊಗವೀರ ಸಮುದಾಯದಿಂದ ದೂರ ಇಡಬೇಕೆಂಬ ಪೋಸ್ಟ್ ವೊಂದನ್ನು ಹರಿಯಬಿಟ್ಟು ನನ್ನ ತೇಜೋವಧೆಯನ್ನು ಕೂಡಾ ಮಾಡಿರುತ್ತಾರೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದಕಾರಣ ನಾನು ಈ ದುಷ್ಕೃತ್ಯದ ಕುರಿತು ಈಗಾಗಲೇ ಮೊಗವೀರ ಮಹಾಜನ ಸಂಘದ ಅಧ್ಯಕ್ಷರ ಗಮನಕ್ಕೆ ತಂದಿರುತ್ತೇನೆ. ಈ ಕುರಿತು ವಿವರವಾಗಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರನ್ನು ಕೂಡ ದಾಖಲಿಸಿರುತ್ತೇನೆ. ಯಾರು ನನ್ನ ತೇಜೋವಧೆ ಮಾಡುವ ದುರುದ್ದೇಶದಿಂದ ಈ ದುಷ್ಕೃತ್ಯ ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗುವವರೆಗೆ ನಾನು ಹೋರಾಟ ಮುಂದುವರಿಸಲಿದ್ದೇನೆ ಎಂದವರು ಎಚ್ಚರಿಕೆ ನೀಡಿದ್ದಾರೆ.
ಈ ದುಷ್ಕೃತ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಸಾದ್ ಕಾಂಚನ್ ಪರ ದೊಡ್ಡ ಸಂಖ್ಯೆಯಲ್ಲಿ ಒಲವು ವ್ಯಕ್ತವಾಗಿದ್ದು ಪ್ರಸಾದ್ ರಂತಹ ನಿರ್ಮಲ ಮನಸ್ಸಿನ ನಾಯಕರ ತೇಜೋವಧೆ ಮಾಡಿರುವುದನ್ನು ಖಂಡಿಸಿದ್ದಾರೆ. ಈ ಕುರಿತು ಅವರ ತೇಜೋವಧೆ ಮಾಡಿರುವ ವ್ಯಕ್ತಿಗಳನ್ನು ಬಂಧಿಸಿ, ಆ ದುಷ್ಕರ್ಮಿಗಳ ಬೆನ್ನೆಲುಬಾಗಿ ಇಂತಹ ಸಮಾಜಬಾಹಿರ ಕೃತ್ಯಕ್ಕೆ ಪ್ರಚೋದಿಸುತ್ತಿರುವ ಸಂಘಟನೆಯ ನಿಜಮುಖವನ್ನು ಸಮಾಜದ ಮುಂದೆ ಬೆತ್ತಲೆಗೊಳಿಸಬೇಕು ಎಂದು ಕೂಡ ಆಗ್ರಹಿಸಿದ್ದಾರೆ.