Advertisement

'ಕಾಂಗ್ರೆಸ್ ಇಲ್ಲದಿರುತ್ತಿದ್ದರೆ...' ಎಂಬ ಪ್ರಧಾನಿ ಮೋದಿಯವರ ರಾಜ್ಯಸಭೆ ಭಾಷಣಕ್ಕೆ ಪ್ರತಿಯಾಗಿ ಹೀಗೊಂದು ಬಹಿರಂಗ ಪತ್ರ!

Advertisement

ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ಸಮರ್ಪಿಸುವ ಗೊತ್ತುವಳಿಗೆ ಉತ್ತರವಾಗಿ ಮಂಗಳವಾರ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ಮುಂದುವರಿಸಿದರು... 'ಕಾಂಗ್ರೆಸ್ ಇಲ್ಲದಿರುತ್ತಿದ್ದರೆ ದೇಶದಲ್ಲಿ ತುರ್ತುಪರಿಸ್ಥಿತಿ, ಜಾತಿ ರಾಜಕೀಯ, ಸಿಖ್ಖ್ ಹತ್ಯಾಕಾಂಡ ನಡೆಯುತ್ತಲೇ ಇರುತ್ತಿರಲಿಲ್ಲ. ಈಗಂತೂ ನಗರ ನಕ್ಸಲರು ಕಾಂಗ್ರೆಸ್ ಮೇಲೆ ನಿಯಂತ್ರಣ ಸಾಧಿಸಿದ್ದಾರೆ' ಎಂದವರು ಹೇಳಿದ್ದರು. ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ್ದ ಅವರು 'ತುಕ್ಡೆ ತುಕ್ಡೆ ಗ್ಯಾಂಗ್ ನ ನಾಯಕನೇ ಕಾಂಗ್ರೆಸ್' ಎಂದು ಆಧಾರರಹಿತವಾಗಿ ನಾಲಿಗೆ ಹರಿಯ ಬಿಟ್ಟಿದ್ದರು. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ಆ ಕುರಿತು 'ಕನ್ನಡ ಮೀಡಿಯಾ ಡಾಟ್ ಕಾಂ' ಸುದ್ದಿ ಜಾಲತಾಣದ ವತಿಯಿಂದ ಪ್ರಧಾನಿ ಮೋದಿಯವರಿಗೊಂದು ಬಹಿರಂಗ ಪತ್ರ... ಮಾನ್ಯ ಪ್ರಧಾನಿ ಮೋದಿಜೀಯವರೆ, ನಿಜ, ಕಾಂಗ್ರೆಸ್ ಇಲ್ಲವಾಗಿದ್ದರೆ... ಬ್ರಿಟೀಷರು ಈ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟು ಉಟ್ಟಬಟ್ಟೆಯಲ್ಲೇ ರಾತ್ರೋರಾತ್ರಿ ಓಡಿಹೋಗುವ ಪ್ರಮೇಯವೇ ಎದುರಾಗುತ್ತಿರಲಿಲ್ಲ. ಕಾಂಗ್ರೆಸ್ ಇಲ್ಲವಾಗಿದ್ದರೆ ಸುಮಾರು 800ವರ್ಷಗಳ ಕಾಲ ಮೊಘಲರ ಬೂಟು ನೆಕ್ಕಿ, ಆನಂತರ ಸುಮಾರು 300ವರ್ಷಗಳ ಕಾಲ ಬ್ರಿಟೀಷರ ಬೂಟು ನೆಕ್ಕಿಕೊಂಡು ಐಷಾರಾಮಿ ಬದುಕು ಬದುಕಿದ್ದ ನಿಮ್ಮ ಪಕ್ಷವನ್ನು ನಿಯಂತ್ರಿಸುತ್ತಿರುವ ವೈದಿಕಶಾಹಿ ನಾಯಕರುಗಳ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಮರಿಮೊಮ್ಮಕ್ಕಳು ಸ್ವಾತಂತ್ರ್ಯಾ ನಂತರ ನಿರುದ್ಯೋಗಿಗಳಾಗಿ ಸಾಮಾನ್ಯ ಜನರಂತೆ ಬದುಕುವ ಸಂಧರ್ಭ ಎದುರಾಗುತ್ತಿರಲಿಲ್ಲ. ಕಾಂಗ್ರೆಸ್ ಇಲ್ಲವಾಗಿದ್ದರೆ ಅದೇ ಬ್ರಿಟಿಷ್ ಸರ್ವಾಧಿಕಾರ ಇಂದಿಗೂ ಮುಂದುವರಿಕೆ ಆಗುತ್ತಿತ್ತು. ಕಾಂಗ್ರೆಸ್ ಇಲ್ಲವಾಗಿದ್ದರೆ ಕನ್ಯಾಕುಮಾರಿ ಯಿಂದ ಕಾಶ್ಮೀರದ ತನಕದ 565ಕ್ಕೂ ಹೆಚ್ಚು ರಾಜಸಂಸ್ಥಾನಗಳ ಅರಸರುಗಳ ಮನ ಒಲಿಸಿ ಈಗಿನ ನವಭಾರತ ನಿರ್ಮಾಣವಾಗುತ್ತಿರಲಿಲ್ಲ. ಅದೇ ತುಂಡುತುಂಡು ರಾಜ್ಯಗಳು ಇಂದಿಗೂ ಅಸ್ತಿತ್ವದಲ್ಲಿ ಇರುತ್ತಿದ್ದವು. ಕಾಂಗ್ರೆಸ್ ಇಲ್ಲವಾಗಿದ್ದರೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಸಿದ್ಧಾಂತದ ಅಂಬೇಡ್ಕರ್ ಸಂವಿಧಾನ ರಚನೆಯೇ ಆಗುತ್ತಿರಲಿಲ್ಲ. ಕಾಂಗ್ರೆಸ್ ಇಲ್ಲವಾಗಿದ್ದರೆ ಶತಶತಮಾನಗಳ ಕಾಲ ಈ ದೇಶದ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತ) ವರ್ಗವನ್ನು ಶೋಷಣೆ ಮಾಡಿ ವಿದ್ಯೆಯ ಹಕ್ಕು, ಭೂಮಿಯ ಹಕ್ಕು, ಅಧಿಕಾರದ ಹಕ್ಕು ನಿರಾಕರಿಸಿದ್ದ ಮನುಸ್ಮೃತಿ ಸಂವಿಧಾನವೇ ಮತ್ತೆ ಜಾರಿಯಾಗುತ್ತಿತ್ತು. ಆ ಮೂಲಕ ಈ ದೇಶದಲ್ಲಿ ಬಹು ಹಿಂದಿನಿಂದಲೂ ನಡೆದುಕೊಂಡು ಬಂದ ಗುಲಾಮಗಿರಿ ವ್ಯವಸ್ಥೆ ಪಾರಂಪರಿಕವಾಗಿ ಮುಂದುವರಿಕೆಯಾಗುತ್ತಿತ್ತು, ವೈದಿಕಶಾಹಿಗಳ ಅಧಿಪತ್ಯದ ರಾಷ್ಟ್ರವಾಗಿಯೇ ಇದ್ದಿರುತಿತ್ತು. ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ಕಾಂಗ್ರೆಸ್ ಇಲ್ಲವಾಗಿದ್ದರೆ ದೇಶದಾದ್ಯಂತ ಹಳ್ಳಿಹಳ್ಳಿಗಳ, ಮೂಲೆಮೂಲೆಗಳಲ್ಲಿ ಸರ್ಕಾರಿ ಶಾಲೆಗಳು ನಿರ್ಮಾಣವಾಗುತ್ತಿರಲಿಲ್ಲ. ಆ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನೂ ವಿಧ್ಯಾವಂತನಾಗಿ ಉನ್ನತ ಪದವಿಗಳಿಗೆ ಏರಲು ಸಾಧ್ಯವಾಗುತ್ತಿರಲಿಲ್ಲ. ಕಾಂಗ್ರೆಸ್ ಇಲ್ಲವಾಗಿದ್ದರೆ ಇಂದಿಗೂ ಬ್ರಾಹ್ಮಣ ವಟುಗಳಿಗೆ ಮಾತ್ರವೇ ವಿದ್ಯೆ ನೀಡುವ ಗುರುಕುಲಗಳು ಮಾತ್ರವೇ ಈ ದೇಶದ ಮಠಗಳಲ್ಲಿ ಇದ್ದಿರುತ್ತಿದ್ದವು. ಕಾಂಗ್ರೆಸ್ ಇಲ್ಲವಾಗಿದ್ದರೆ ದೇಶದ ಮೂಲೆಮೂಲೆಗಳ, ಗ್ರಾಮ ಗ್ರಾಮಗಳಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸಿ ಉಚಿತ ಚಿಕಿತ್ಸೆ ಕೊಡಲಾಗುತ್ತಿರಲಿಲ್ಲ. ಕಾಂಗ್ರೆಸ್ ಇಲ್ಲವಾಗಿದ್ದರೆ ಸಾಮಾನ್ಯವಾದ ಖಾಯಿಲೆಯಿಂದ ಪೀಡಿತರಾದ ಬಡವರು ಆಯುರ್ವೇದ ಪಂಡಿತರಿಗೆ ದವಸ, ಧಾನ್ಯ, ಬೇಳೆ ಕಾಳು, ಚಿನ್ನದ ನಾಣ್ಯ ಮುಂತಾದವುಗಳನ್ನು ಕೊಡಲಾಗದೆ, ಚಿಕಿತ್ಸೆ ಇಲ್ಲದೆ ಸಾಯುವಂತಾಗುತ್ತಿತ್ತು. ಕಾಂಗ್ರೆಸ್ ಇಲ್ಲವಾಗಿದ್ದರೆ ಹಳ್ಳಿಹಳ್ಳಿಗಳಿಗೆ ಸೇತುವೆಗಳು, ರಸ್ತೆಗಳು ನಿರ್ಮಾಣವಾಗುತ್ತಿರಲಿಲ್ಲ. ಕಾಂಗ್ರೆಸ್ ಇಲ್ಲವಾಗಿದ್ದರೆ ಈ ದೇಶ 2012ರ ಹೊತ್ತಿಗೆ ಜಗತ್ತಿನ ಮೂರನೆಯ ಅತಿದೊಡ್ಡ ಆರ್ಥಿಕಶಕ್ತಿಯಾಗಿ ಹೊರಹೊಮ್ಮುತ್ತಲೇ ಇದ್ದಿರಲಿಲ್ಲ. ಕಾಂಗ್ರೆಸ್ ಇಲ್ಲವಾಗಿದ್ದರೆ 1974ರ ಹೊತ್ತಿಗೆ ಈ ದೇಶದ ಸೈನ್ಯ ಜಗತ್ತಿನ ಅತ್ಯಂತ ಬಲಿಷ್ಠ ನಾಲ್ಕು ಸೇನೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿರಲಿಲ್ಲ. ಕಾಂಗ್ರೆಸ್ ಇಲ್ಲವಾಗಿದ್ದರೆ ಸ್ವತಂತ್ರ ಭಾರತದ ಸರ್ಕಾರದ ವಿರುದ್ಧ, ಸಂವಿಧಾನದ ವಿರುದ್ಧ ಸ್ವಯಂಘೋಷಿತ ದೇಶಪ್ರೇಮಿ ನಾಯಕರುಗಳು ದಂಗೆ ಏಳಲು ಹೂಡಿದ್ದ ಸಂಚನ್ನು 'ತುರ್ತುಪರಿಸ್ಥಿತಿ' ಜಾರಿಗೊಳಿಸುವ ಮೂಲಕ ವಿಫಲಗೊಳಿಸಲು ಯಾರೂ ಇದ್ದಿರುತ್ತಿರಲಿಲ್ಲ. ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ಕಾಂಗ್ರೆಸ್ ಇಲ್ಲವಾಗಿದ್ದರೆ ಖಲಿಸ್ಥಾನ್ ಪ್ರತ್ಯೇಕ ರಾಷ್ಟ್ರ ಚಳವಳಿಯನ್ನು ಹತ್ತಿಕ್ಕಲು ಯಾರೂ ಇದ್ದಿರುತ್ತಿರಲಿಲ್ಲ. ಕಾಂಗ್ರೆಸ್ ಇಲ್ಲವಾಗಿದ್ದರೆ ಖಲಿಸ್ಥಾನ್ ಭಯೋತ್ಪಾದಕರ ಪ್ರತ್ಯೇಕ ರಾಷ್ಟ್ರ ಇಷ್ಟೊತ್ತಿಗೆ ನಿರ್ಮಾಣವಾಗಿರುತ್ತಿತ್ತು. ಕಾಂಗ್ರೆಸ್ ಇಲ್ಲವಾಗಿದ್ದರೆ ಎಲ್ಟಿಟಿಈ ಉಗ್ರರನ್ನು ಸೆದೆಬಡಿಯಲಾಗುತ್ತಿರಲಿಲ್ಲ. ಕಾಂಗ್ರೆಸ್ ಇಲ್ಲವಾಗಿದ್ದರೆ ತಾವು ಪ್ರಧಾನಿಯಾಗಿ ಅಂಬಾನಿ, ಅದಾನಿ ಮುಂತಾದ ಉಧ್ಯಮಿಗಳಿಗೆ ಮೂರುಕಾಸಿಗೆ ಮಾರಾಟ ಮಾಡುತ್ತಿರುವ ಲಕ್ಷಾಂತರ ಕೋಟಿ ರೂಪಾಯಿ ಬೆಲೆ ಬಾಳುವ ಸಾರ್ವಜನಿಕ ಆಸ್ತಿಗಳ ಸೃಷ್ಟಿಯೇ ಆಗುತ್ತಿರಲಿಲ್ಲ. ಕಾಂಗ್ರೆಸ್ ಇಲ್ಲವಾಗಿದ್ದರೆ ನೀವು ಅಧಿಕಾರಕ್ಕೆ ಬರುತ್ತಿದ್ದಂತೆಯೇ ನಿಮ್ಮ ಸರ್ಕಾರದ ಯೋಜನೆಗಳು ಎಂಬಂತೆ ಹೆಸರನ್ನು ಬದಲಾಯಿಸಿ, ಪ್ರಚಾರ ಮಾಡಿ, ಸರ್ಕಾರದ ಖಜಾನೆಯಿಂದ ಹಣ ಖರ್ಚು ಮಾಡಿ ಬಿಂಬಿಸಿಕೊಂಡಿದ್ದ ಸುಮಾರು 23ಕ್ಕೂ ಹೆಚ್ಚು ಜನಪ್ರಿಯ ಯೋಜನೆಗಳೇ ಈ ನೆಲದಲ್ಲಿ ಇದ್ದಿರುತ್ತಿರಲಿಲ್ಲ. ಕಾಂಗ್ರೆಸ್ ಇಲ್ಲವಾಗಿದ್ದರೆ ಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿದ್ದ ಸಿಡುಬು, ಕುಷ್ಠರೋಗ, ಏಡ್ಸ್, ಎಚ್1ಎನ್1, ಪೋಲಿಯೋ, ಸಾರ್ಸ್ ಮುಂತಾದ ಭೀಕರ ಕಾಯಿಲೆಗಳನ್ನು ದೇಶದ ಜನರಿಗೆ ಒಂದಿನಿತೂ ಭಾದಕವಾಗದಂತೆ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಕಾಂಗ್ರೆಸ್ ಇಲ್ಲವಾಗಿದ್ದರೆ, ಅದು ನಿಮ್ಮ ಆಡಳಿತಾವಧಿಯಲ್ಲಿ ಕೊರೊನಾ ವೈರಸ್ ನಿಭಾಯಿಸಿದಷ್ಟೇ ಘನಘೋರವಾಗಿರುತ್ತಿದ್ದವು. ದೇಶದಲ್ಲಿ ವರ್ಷವಿಡೀ ಲಾಕ್‌ಡೌನ್ ಜಾರಿಯಲ್ಲಿರುತ್ತಿತ್ತು. ಲಕ್ಷಾಂತರ ಜನರು ಅನ್ನ ನೀರಿಲ್ಲದೇ ಸಾಯುವಂತಾಗುತ್ತಿತ್ತು. ಕಾಂಗ್ರೆಸ್ ಇಲ್ಲವಾಗಿದ್ದರೆ, ನಿಮ್ಮ ಸರ್ಕಾರದ ಅನರ್ಥಕಾರಿ ಆರ್ಥಿಕ ನೀತಿಯಿಂದ ನಿಮ್ಮ ಆಡಳಿತಾವದಿಯಲ್ಲಿ ಆದಂತೆ ದೇಶದ ಜಿಡಿಪಿ ದಾಖಲೆಯ ಮೈನಸ್ 23.9% ಮಟ್ಟಕ್ಕೆ ಕುಸಿಯುತ್ತಿತ್ತು. ನಿಮ್ಮ ಆಡಳಿತಾವಧಿಯಲ್ಲಿ ಆದಂತೆ ಮೂರು ಲಕ್ಷಕ್ಕೂ ಹೆಚ್ಚು ಸಣ್ಣ ಮಧ್ಯಮ ಗಾತ್ರದ ಉದ್ಯಮಗಳು ಮುಚ್ಚಲ್ಪಡುತ್ತಿದ್ದವು. ನಿಮ್ಮ ಆಡಳಿತಾವಧಿಯಲ್ಲಿ ನಿರುದ್ಯೋಗದ ಮಟ್ಟ ಕಳೆದ 45ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಂತೆ, ನೀವು ಅಧಿಕಾರಕ್ಕೆ ಬರುವ ಪೂರ್ವದಲ್ಲೆ ಆಗಿರುತ್ತಿತ್ತು. ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ಅದೆಲ್ಲಾ ಬದಿಗಿರಲಿ ಪ್ರಧಾನಿ ಮೋದಿಯವರೆ, ಕಾಂಗ್ರೆಸ್ ಇಲ್ಲವಾಗಿರುತ್ತಿದ್ದರೆ ಈ ದೇಶದ ಸಂಪನ್ಮೂಲಗಳನ್ನು ಇಲ್ಲಿನ ಪ್ರತಿಯೊಬ್ಬ ನಾಗರಿಕನಿಗೂ ಸರಿಸಮವಾಗಿ ಹಂಚಿಕೆಯಾಗಬೇಕು ಎನ್ನುವ ಪರಿಕಲ್ಪನೆಯಡಿ ಜಾರಿಗೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯೇ ಜಾರಿಯಾಗುತ್ತಿರಲಿಲ್ಲ. ಕಾಂಗ್ರೆಸ್ ಇಲ್ಲವಾಗಿದ್ದರೆ ಹಿಂದುಳಿದ ವರ್ಗದಲ್ಲಿ ಜನಿಸಿದ ಸ್ವತಃ ತಾವು ಪ್ರಧಾನಿಯಾಗಲು ಹಾಗೂ ದಲಿತ ವರ್ಗದಲ್ಲಿ ಜನಿಸಿದ ರಾಮನಾಥ್ ಕೋವಿಂದ್ ರಾಷ್ಟ್ರಪತಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಕಾಂಗ್ರೆಸ್ ಇಲ್ಲವಾಗಿದ್ದರೆ ನಾವು ನೀವೆಲ್ಲರೂ ವಿದ್ಯೆ ಪಡೆಯದೇ, ಕುಲಕಸುಬನ್ನಷ್ಟೇ ಮಾಡಿಕೊಂಡು, ಗುಲಾಮಗಿರಿಯ ಬದುಕು ಬದುಕಿರ ಬೇಕಾಗಿರುತಿತ್ತು. ಮಾನ್ಯ ಮೋದಿಜೀಯವರೆ, ಕಾಂಗ್ರೆಸ್ ಜಾರಿಗೊಳಿಸಿದ ಪ್ರಜಾಪ್ರಭುತ್ವ ವ್ಯವಸ್ಥೆಯಡಿ, ಕಾಂಗ್ರೆಸ್ ಜಾರಿಗೊಳಿಸಿದ ಸಂವಿಧಾನದ ಆಶಯದಡಿ, ಕಾಂಗ್ರೆಸ್ ಜಾರಿಗೊಳಿಸಿದ ಚುನಾವಣಾ ವ್ಯವಸ್ಥೆಯಡಿ ತಮ್ಮ ಸರ್ಕಾರ ಇಂದು ಅಧಿಕಾರದಲ್ಲಿದೆ. ಹಾಗೆಯೇ, ಅಚ್ಚೇದಿನ್ ಎಂಬ ಕಪೋಲಕಲ್ಪಿತ ಘೋಷಣೆಯ ಮೂಲಕ, ಪ್ರತಿಯೊಬ್ಬರ ಖಾತೆಗೆ 15ಲಕ್ಷ ಜಮಾಗೊಳಿಸುವ ಜನಮರಳು ಆಶ್ವಾಸನೆಯ ಮೂಲಕ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಹುಸಿ ಘೋಷಣೆಯ ಮೂಲಕ ಅಧಿಕಾರಕ್ಕೆ ಬಂದ ತಾವು ಇಂದು ಪ್ರಧಾನಿಯಾಗಿದ್ದೀರಿ. ಆದಕಾರಣ ದಯವಿಟ್ಟು ಲೋಕಸಭೆಯ ಮತ್ತು ರಾಜ್ಯಸಭೆಯ ಸಮಯವನ್ನು ತಾವು ನಿನ್ನೆ ಹಾಗೂ ಮೊನ್ನೆ ಹೇಳಿದಂತಹ ಕಟ್ಟುಕಥೆಗಳನ್ನು ಹೇಳಲು ವ್ಯರ್ಥಗೊಳಿಸದೆ ತಾವು ನೀಡಿದ ಆಶ್ವಾಸನೆ ಗಳ ಈಡೇರಿಕೆಯ ನಿಟ್ಟಿನಲ್ಲಿ ಕನಿಷ್ಠ ಒಂದಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸಲು ಬಳಸಿಕೊಳ್ಳಿ. ಅದೇ ಸಮಯವನ್ನು ದೇಶವನ್ನು ಬಲಿಷ್ಠವಾಗಿ ಕಟ್ಟುವ ನಿಟ್ಟಿನಲ್ಲಿ ಬಳಸಿಕೊಳ್ಳಿ. ಕನಿಷ್ಠ ಪಕ್ಷ ಲೋಕಸಭೆ, ರಾಜ್ಯಸಭೆಯ ಅಧಿವೇಶನದ ಅವದಿಯಲ್ಲಾದರೂ ರಾಜಕಾರಣವನ್ನು ಬದಿಗಿಟ್ಟು ದೇಶದ ಇತಿಹಾಸವನ್ನು ಅರಿತು 'ಹೃದಯದಿಂದ ಮಾತನಾಡಿ' ಎಂದು ಈ ಮೂಲಕ ವಿನಂತಿಸುತ್ತೇನೆ. ಇಂತಿ, ಕಾಂಗ್ರೆಸ್ ಇಲ್ಲದಿರುತ್ತಿದ್ದರೆ ದೇಶದ ಪ್ರಧಾನಿಗೆ ಇಂತಹ ಪತ್ರ ಬರೆಯುವುದು ಕೂಡಾ ಶಿಕ್ಷಾರ್ಹ ಅಪರಾಧವಾಗುತ್ತಿದ್ದ ಆದರೆ ಅದೃಷ್ಟವಶಾತ್ ಪ್ರಧಾನಿಗೆ ಪ್ರಶ್ನಿಸುವ ಹಕ್ಕನ್ನು ಕಾಂಗ್ರೆಸ್ ಜಾರಿಗೊಳಿಸಿದ ಸಂವಿಧಾನದಡಿ ಪಡೆದಿರುವ ಈ ದೇಶದ ಓರ್ವ ಹೆಮ್ಮೆಯ ನಾಗರಿಕ. ನಮಸ್ಕಾರ. ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ:

Advertisement
Advertisement
Recent Posts
Advertisement