ತನ್ನ 4 ಅಂತಸ್ತಿನ ಮನೆಯನ್ನು ರಾಹುಲ್ ಗಾಂಧಿ ಹೆಸರಿಗೆ ಬರೆದ ರಾಜಕುಮಾರಿ!

ಇದೀಗ ದೇಶಾದ್ಯಂತ ತೀವ್ರಗೊಂಡಿರುವ "ನಮ್ಮ ಮನೆ- ರಾಹುಲ್ ಮನೆ" ಅಭಿಯಾನದಡಿ ದೆಹಲಿಯ ನಿವಾಸಿ ರಾಜಕುಮಾರಿ ಗುಪ್ತಾ ರವರು ತಮ್ಮ 4 ಅಂತಸ್ತಿನ ಮನೆಯನ್ನು ರಾಹುಲ್ ಗಾಂಧಿಯವರ ಹೆಸರಿಗೆ ವರ್ಗಾಯಿಸಿ ದಾಖಲೆ ಸಿದ್ದಪಡಿಸಿರುವ ಕುರಿತು ವರದಿಯಾಗಿದೆ.

ದೇಶದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಲಲಿತ್ ಮೋದಿ ಮತ್ತು ನಿರವ್ ಮೋದಿಯವರ ಕುರಿತು "ಕಳ್ಳರ ಹೆಸರುಗಳ ಮುಂದೆ ಅದೇಕೆ ಮೋದಿ ಎಂಬ ಸರ್ನೇಮ್ ಇದೆ" ಎಂದು ಕರ್ನಾಟಕದ ಚುನಾವಣಾ ಸಭೆಯೊಂದರಲ್ಲಿ ಮೂರು ವರ್ಷದ ಹಿಂದೆ ಪ್ರಶ್ನಿಸಿದ್ದ ರಾಹುಲ್‌ ಗಾಂಧಿಯವರಿಗೆ ಇತ್ತೀಚೆಗೆ ಗುಜರಾತ್ ನ ಸೂರತ್ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಆದರೆ ರಾಹುಲ್ ಗೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ಇದ್ದಾಗ್ಯೂ ರಾಹುಲ್ ರವರ ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿತ್ತು ಮತ್ತು ಅವರ ಸರಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ನೋಟಿಸು ನೀಡಲಾಗಿತ್ತು.

ಇದಾದ ಬಳಿಕ ಮೊದಲಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು "ನನ್ನ ಮನೆ ರಾಹುಲ್ ಮನೆ" ಎಂದು ಘೋಷಿಸಿದ್ದರು ಮತ್ತು ಆ ಬಳಿಕ ಈ ಹೆಸರಿನಲ್ಲಿ ದೇಶಾದ್ಯಂತ ಅಭಿಯಾನ ನಡೆದಿದ್ದು "ನನ್ನ ಮನೆ ರಾಹುಲ್ ಗಾಂಧಿ ಮನೆ" ಹೆಸರಿನ ಪೋಸ್ಟರ್ ಹಿಡಿದು ಫೋಟೋ ತಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರ ಮುಂದುವರಿಗ ಭಾಗವಾಗಿ ಇದೀಗ ರಾಜಕುಮಾರಿ ಗುಪ್ತಾ ರವರು ತನ್ನ ಮನೆಯನ್ನು ರಾಹುಲ್ ಹೆಸರಿಗೆ ಬರೆದಿದ್ದಾರೆ.

ರಾಹುಲ್ ಗಾಂಧಿಯವರನ್ನು ದೇಶದ ಸಂಸತ್ತಿನಿಂದ ಹೊರಹಾಕಿರಬಹುದು, ಆದರೆ ಅವರು ಜನರ ಹೃದಯದಲ್ಲಿ ಸದಾ ವಾಸವಾಗಿದ್ದಾರೆ. ಪಿತೂರಿ ನಡೆಸಿ ರಾಹುಲ್ ಗಾಂಧಿಯವರನ್ನು ಹೊರಹಾಕಿದ ಸಂಸತ್ತು ಕೂಡ ಸಾರ್ವಜನಿಕರ ಪ್ರತಿನಿಧಿ ಮತ್ತು ಅದರ ನಿಜವಾದ ಮಾಲೀಕರು ಸಾರ್ವಜನಿಕರು. ರಾಹುಲ್ ರನ್ನು ಹೊರಹಾಕಿದ ಜನ ಕೂತಿರುವ ಸಂಸತ್ತಿಗಿಂತಲೂ ಜನರ ಹೃದಯವೇ ಅತಿ ದೊಡ್ಡ ಸಂಸತ್ತಾಗಿದೆ. ಆ ಸಂಸತ್ತು ತನ್ನ ಬಲವನ್ನು 140 ಕೋಟಿ ಜನರಿಂದ ಪಡೆಯುತ್ತದೆ. ರಾಹುಲ್ ಗಾಂಧಿಯನ್ನು ಅಲ್ಲಿಂದ ಹೊರಹಾಕಿದ ಸರ್ಕಾರದ ಈ ಸರ್ವಾಧಿಕಾರಿ ನಿರ್ಧಾರ ತಾತ್ಕಾಲಿಕವಾಗಿದೆ. ಖಾಯಂ ನಿರ್ಧಾರವನ್ನು ಸಾರ್ವಜನಿಕರು ಪ್ರಕಟಿಸಲಿದ್ದಾರೆ.

ಮಹಾತ್ಮ ಗಾಂಧೀಜಿ ಎಂದೂ ಸಂಸತ್ ಸದಸ್ಯರಾಗಿ ಸಂಸತ್ತಿಗೆ ಹೋಗಿಲ್ಲ, ಸಚಿವ ಸಂಪುಟಕ್ಕೂ ಸೇರ್ಪಡೆಯಾಗಿಲ್ಲ. ಆದರೆ ಅವರು ಆಧುನಿಕ ಭಾರತದ ಪಿತಾಮಹ ಆಗಿದ್ದಾರೆ. ಜೊತೆಗೆ ಪ್ರಜಾಪ್ರಭುತ್ವದ ಪಿತಾಮಹ ಕೂಡ ಹೌದು. ನಾವು ರಾಹುಲ್ ಗಾಂಧಿಯನ್ನು ಮಹಾತ್ಮ ಗಾಂಧಿ ಎಂದು ಕರೆಯುತ್ತಿಲ್ಲ. ಎರಡರ ಸಂದರ್ಭಗಳೂ ಬೇರೆ ಬೇರೆ. ಅದು ಬ್ರಿಟಿಷ್ ಸಾಮ್ರಾಜ್ಯವಾಗಿತ್ತು ಆದರೆ ಇದು ಪ್ರಜಾಪ್ರಭುತ್ವದ ಸರ್ವಾಧಿಕಾರಿ ಸಾಮ್ರಾಜ್ಯವಾಗಿದೆ ಮತ್ತು ಆ ಮೂಲಕ ರಾಹುಲ್ ಗಾಂಧಿ- ಮಹಾತ್ಮ ಗಾಂಧಿಯವರ ಸೈದ್ಧಾಂತಿಕ ಮತ್ತು ರಾಜಕೀಯ ವಾರಸುದಾರ ಎಂಬುದು ಖಚಿತವಾಗಿದೆ.

ತರಾತುರಿಯಲ್ಲಿ ದಾಖಲಾಗಿ ಆ ನಂತರ ಮುಚ್ಚಿ ಹೋಗಿದ್ದ ಮಾನನಷ್ಟ ಪ್ರಕರಣವು ದಿಢೀರ್ ಓಪನ್ ಆಗಿ, ಒಂದು ತಿಂಗಳಲ್ಲಿ ಶಿಕ್ಷೆ ಮುಗಿಸಿ, ಮರುದಿನವೇ ರಾಹುಲ್ ಗಾಂಧಿಯನ್ನು ಸಂಸತ್ತಿನಿಂದ ಹೊರ ಹಾಕಿರುವ ರಹಸ್ಯ ದೇಶದ ಜನತೆಗೆ ಅರ್ಥವಾಗುತ್ತಿದೆ ಎಂಬುದು ಈ ಮೇಲಿನ "ನಮ್ಮ ಮನೆ ರಾಹುಲ್ ಗಾಂಧಿಯವರ ಮನೆ" ಅಭಿಯಾನದಿಂದ ಸಾಭೀತಾದಂತಾಗಿದೆ.