Advertisement

ಕುಂದಾಪುರದಲ್ಲಿ ಕಾಂಗ್ರೆಸ್ ಗೆಲುವು ಖಚಿತ: ಮೊಳಹಳ್ಳಿ ದಿನೇಶ್ ಹೆಗ್ಡೆ

Advertisement

ಕುಂದಾಪುರ ಪುರಸಬೆಯ ಜನರ ಬಹುಕಾಲದ ಬೇಡಿಕೆಯಾದ ಒಳಚರಂಡಿ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವುದು. ಅವೈಜ್ಞಾನಿಕವಾಗಿ ಜಾರಿಗೊಂಡಿರುವ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ವೈಜ್ಞಾನಿಕವಾಗಿ ಪರಿಹರಿಸುವುದು. ಸಿಆರ್‌ಝಡ್ ಸಮಸ್ಯೆಯನ್ನು ಕೇರಳ, ಗೋವಾ ಮಾದರಿಯಲ್ಲಿ ಸರಳೀಕೃತಗೊಳಿಸುವುದು. 94ಸಿ, 94ಸಿಸಿ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವುದು. ಬಹುಕಾಲದ ಬೇಡಿಕೆಯಾದ ಆರ್ಟಿಓ ಕಚೇರಿಯನ್ನು ಸ್ಥಾಪಿಸುವುದು. ಕೋಡಿ ಭಾಗದ ಹಕ್ಕು ಪತ್ರ ಸಮಸ್ಯೆಯನ್ನು ಪ್ರಥಮ ಆದ್ಯತೆಯ ಮೇರೆಗೆ ಪರಿಹರಿಸುವುದು. ಕುಂದಾಪುರ- ಗಂಗೊಳ್ಳಿ ಸೇತುವೆ ನಿರ್ಮಾಣದ ಕುರಿತು ಕ್ರಮಕೈಗೊಳ್ಳುವುದು. ಕಳೆದ 44 ವರ್ಷಗಳಿಂದ ಬಾಕಿ ಇರುವ ವಾರಾಹಿ ಯೋಜನೆಯನ್ನು ಅದರ ಮೂಲ ಯೋಜನೆಯ ಆಶಯಕ್ಕೆ ಅನುಗುಣವಾಗಿಯೇ ಅನುಷ್ಠಾನಕ್ಕೆ ಪ್ರಯತ್ನ ನಡೆಸುವುದು ಇವುಗಳು ನಾನು ಕುಂದಾಪುರದ ಶಾಸಕನಾಗಿ ಆಯ್ಕೆಯಾದ ಮೊದಲಿಗೆ ಕೈಗೊಳ್ಳುವ ಕೆಲವು ಕಾರ್ಯಕ್ರಮಗಳಾಗಿವೆ ಹಾಗೂ ಕುಂದಾಪುರ ಕನ್ನಡ ಅಕಾಡೆಮಿ ಮತ್ತು ಅಧ್ಯಯನ ಪೀಠ ಆಗಬೇಕಿದೆ ಆ ಕುರಿತು ಶಾಸಕನಾದರೆ ಪ್ರಯತ್ನ ನಡೆಸಲಾಗುತ್ತದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ಡೆಯವರು ಹೇಳಿದ್ದಾರೆ.

ಅವರು ಕುಂದಾಪುರದ ಶೆರೋನ್ ಹೋಟೆಲ್ ನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಖಂಡಿತವಾಗಿಯೂ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧದ ಕುರಿತು ಎಲ್ಲಿಯೂ ಹೇಳಿಲ್ಲ. ಆ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಯ ನಡುವಿನ ಶಾಂತಿ ಸೌಹಾರ್ಧತೆಯನ್ನು ಕೆಡಿಸುವ ಸಂಘಟನೆಗಳನ್ನು ನಿಷೇಧಿಸಲಾಗುತ್ತದೆ ಎಂದು ಹೇಳಿರುವುದು ನಿಜವಾದರೂ ಅದು ನಮ್ಮ ದೇಶದ ಸಂವಿಧಾನದ ಆಶಯ ಕೂಡ ಆಗಿದೆ ಎಂದವರು ಹೇಳಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಪ್ರತಾಪ್ ಚಂದ್ರ ಶೆಟ್ಟಿಯವರು ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ನಡುವೆ ಏಕೆ ಕಾಣಿಸಿಕೊಳ್ಳುತ್ತಿಲ್ಲ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಹೆಗ್ಡೆಯವರು ಪ್ರತಾಪ್ ರವರೇ ನಮ್ಮ ಹಿಂದಿನ ರೂವಾರಿ. ಪ್ರತಿ ದಿನವೂ ಪಕ್ಷದ ಮೀಟಿಂಗ್ ನಡೆಸಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ನಾವು ಅವರ ಮಾರ್ಗದರ್ಶನದಂತೆಯೇ ಚುನಾವಣಾ ಕಾರ್ಯತಂತ್ರವನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತಿದ್ದೇವೆ ಹಾಗೂ ಪ್ರತಿ ಬೂತಿನ ಕಾರ್ಯಕರ್ತರ ಕೆಲಸಕ್ಕೆ ಪ್ರತಾಪ್ ಶೆಟ್ಟಿಯವರೆ ಸ್ಪೂರ್ತಿಯಾಗಿದ್ದಾರೆ ಎಂದು ದಿನೇಶ್ ಹೆಗ್ಡೆ ಹೇಳಿದರು.

ಹಿಂದುತ್ವದ ಅಲೆಯ ಕುರಿತಾದ ಪ್ರಶ್ನೆಗೆ ಉತ್ತರ ನೀಡಿದ ದಿನೇಶ್ ರವರು ಹಿಂದೂ ಧರ್ಮ ಬಿಜೆಪಿಗರ ಆಸ್ತಿಯಲ್ಲ. ನಾವು ಕೂಡಾ ಹಿಂದೂಗಳೇ ಹಿಂದು ಧರ್ಮವನ್ನು ಯಾರಿಗೂ ಗುತ್ತಿಗೆ ಕೊಟ್ಟಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಕಳೆದ ಅರವತ್ತು ವರ್ಷಗಳ ತನ್ನ ಆಡಳಿತಾವಧಿಯಲ್ಲಿ ಈ ದೇಶದ ಬಹುಸಂಖ್ಯಾತ ಹಿಂದೂಗಳ ಉದ್ಧಾರಕ್ಕಾಗಿ ಸಾವಿರಾರು ಯೋಜನೆಗಳನ್ನು ನೀಡಿದೆ. ಇದೀಗ ಹಿಂದೂ ಧರ್ಮದ ಉದ್ಧಾರಕರಂತೆ ಫೋಸು ಕೊಡುವವರು ಮತೀಯ ಗಲಬೆಗಳನ್ನು ಆಯೋಜಿಸಿ ಹಿಂದೂ ಮುಸಲ್ಮಾನ ಹುಡುಗರನ್ನು ಹೊಡೆದಾಟ ಬಡಿದಾಟಕ್ಕೆ ಹಚ್ಚಿ ತಾವು ಅಧಿಕಾರ ನಡೆಸಿದ್ದು ಬಿಟ್ಟರೆ ಹಿಂದೂ ಧರ್ಮದ ಜನರ ಉದ್ಧಾರಕ್ಕಾಗಿ ಜಾರಿಗೊಳಿಸಿದ ಒಂದೇ ಒಂದು ಯೋಜನೆಯ ಹೆಸರು ಹೇಳಲಿ ನೋಡೋಣ ಎಂದು ದಿನೇಶ್ ಹೆಗ್ಡೆ ಸವಾಲು ಎಸೆದಿದ್ದಾರೆ.

ಇದೀಗ ಕ್ಷೇತ್ರದಾದ್ಯಂತ ಹಿಂದೂ ಸಂಘಟನೆಯ ಸಾವಿರಾರು ಯುವಕರು ಇದೀಗ ಬೇಷರತ್ತಾಗಿ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಬಿಜೆಪಿಯಲ್ಲಿ ನಮ್ಮನ್ನು ದುರುಪಯೋಗಪಡಿಸಿಕೊಂಡು ಬಿಸಾಡುತ್ತಿದ್ದಾರೆ. ನಮ್ಮ ಮೇಲೆ ಹಲವು ಕೇಸುಗಳಿವೆ ಎಂದು ಹಲವು ಹುಡುಗರು ನಮ್ಮಲ್ಲಿ ದೂರುತ್ತಿದ್ದಾರೆ. ದೇಶದ ಆಸ್ತಿಯಾಗಬಲ್ಲ ಯುವಕರನ್ನು ಪ್ರಚೋದಿಸಿ ಗಲಾಟೆಗಳಿಗೆ ದೂಡುವುದು ಸರಿಯಲ್ಲ. ನಾವು ಯಾವುದೇ ಸಂಘಟನೆಯ ವಿರುದ್ಧ ಇಲ್ಲ. ನಾವು ಸಂವಿಧಾನದ ಪರವಾಗಿದ್ದೇವೆ. ಸಂವಿಧಾನವನ್ನು ಉಲ್ಲಂಘಿಸುವ ಯಾವುದೇ ಸಂಘಟನೆ ಅಥವಾ ವ್ಯಕ್ತಿಗಳನ್ನು ಕಾಂಗ್ರೆಸ್ ಸದಾ ವಿರೋಧಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆಯವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದ್ದಾರೆ.

ತಾವು ಮಹಾನ್ ಹಿಂದೂ ಧರ್ಮೋದ್ಧಾರಕರು ಎಂದು ಬಿಂಬುಸಿಕೊಳ್ಳುವ ಬಿಜೆಪಿಗರು ತಾವು ಪ್ರಾಮಾಣಿಕರಾದರೆ ಅದೇಕೆ ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ರವರಿಗೆ, ಪುತ್ತೂರಿನಲ್ಲಿ ಪುತ್ತಿಲರಿಗೆ ಮತ್ತು ತಿಮರೋಡಿ ಯವರಿಗೆ ಅದೇಕೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದೆಗೆ ಅವಕಾಶವನ್ನು ನೀಡಲಿಲ್ಲ. ಹಾಗೆ ಅವಕಾಶ ಕೊಡದಿರುವ ಮೂಲಕ ಬಿಜೆಪಿ ಹಿಂದೂ ವಿರೋಧಿ ಮನಸ್ಥಿತಿ ಹೊಂದಿದೆ ಎಂದು ವಿಕಾಸ್ ಹೇಳಿದ್ದಾರೆ.

ಕಾಂಗ್ರೆಸ್ ತನ್ನ ಅಧಿಕಾರಾವಧಿಯ ಸಾಧನೆಗಳನ್ನು ಮತ್ತು ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ನಿರುದ್ಯೋಗ ಭತ್ಯೆ, ಉಚಿತ ಬಸ್ ಪ್ರಯಾಣ ಮುಂತಾದ ಆರು ಗ್ಯಾರಂಟಿ ಗಳನ್ನು ಇಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದರೆ, ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಯಾವುದೇ ಕೊಡುಗೆ ನೀಡದೇ ಕೇವಲ ಭಾವನಾತ್ಮಕ ವಿಚಾರಗಳನ್ನು ಇಟ್ಟಕೊಂಡು ಚುನಾವಣೆಯಲ್ಲಿ ಸ್ಪರ್ದಿಸುತ್ತಿದೆ ಎಂದು ದಿನೇಶ್ ಹೆಗ್ಡೆಯವರು ಅಪಾದಿಸಿದ್ದಾರೆ.

ಬಿಜೆಪಿಗರು ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಎದುರಿಗಿಟ್ಟುಕೊಂಡು ಮತಯಾಚನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ದಿನೇಶ್ ಹೆಗ್ಡೆಯವರ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದೆ. ದಿನೇಶ್ ಹೆಗ್ಡೆಯವರು ಓರ್ವ ಅನುಭವಿ ರಾಜಕಾರಣಿ. ಸತತ ಇಪ್ಪತ್ತು ವರ್ಷಗಳಿಂದ ಮೊಳಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಅಧಿಕಾರ ನಡೆಸುತ್ತಿರುವ ದಿನೇಶ್ ಹೆಗ್ಡೆಯವರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರೂಪಿಸಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿಯವರ ಗ್ರಾಮವಾದ ಅಮಾಸೆಬೈಲು ಮೂಲಭೂತ ಸೌಕರ್ಯಗಳಿಲ್ಲದೆ ಬಾರೀ ಹಿಂದುಳಿದಿದೆ. ಕಳೆದ 25ವರ್ಷಗಳಿಂದ ಶಾಸಕರ ನಿಕಟ ಸಂಪರ್ಕ ಹೊಂದಿರುವ ಕಿರಣ್ ಕೊಡ್ಗಿ ತನ್ನ ಸ್ವಂತ ಗ್ರಾಮವನ್ನೆ ಅಭಿವೃದ್ಧಿ ಮಾಡಿಲ್ಲ. ಮೋದಿ ಹೆಸರಿನಲ್ಲಿ ಹಾಲಾಡಿ ಹೆಸರಿನಲ್ಲಿ ಮತಯಾಚನೆ ಸರಿಯಲ್ಲ. ಸಾಧನೆಯ ಹೆಸರಲ್ಲಿ, ಅಭ್ಯರ್ಥಿಯ ಹೆಸರಲ್ಲಿ ಮತಕೇಳಲಿ ಎಂದು ವಿಕಾಸ್ ಹೆಗ್ಡೆ ಸವಾಲು ಎಸೆದಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ದಿನೇಶ್ ಹೆಗ್ಡೆಯವರು ತಾಲೂಕು ಕಚೇರಿಯ ಪುರಸಭೆಯ ಭ್ರಷ್ಟಾಚಾರ ಬಗೆಗೆ ಅತಿಹೆಚ್ಚು ಹೋರಾಟ ನೀಡಿದವರು ಪ್ರತಾಪ್‌ಚಂದ್ರ ಶೆಟ್ಟಿಯವರು ಆಗಿದ್ದಾರೆ. ವಾರಾಹಿ ಕುರಿತಾದ ಅವರ ಹೋರಾಟ ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ ಎಂದು ಹೇಳಿದರು.

ಕಾಂಗ್ರೆಸ್ ಗ್ಯಾರಂಟಿಗೆ ವಾರಂಟಿ ಇಲ್ಲ ಎನ್ನುವ ಬಿಜೆಪಿಗರ ಅಪಪ್ರಚಾರದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಹೆಗ್ಡೆಯವರು ಕಾಂಗ್ರೆಸ್ ಗ್ಯಾರಂಟಿ ಗೆ ನಾನೇ ಗ್ಯಾರಂಟಿ. ನಾವು ಮನೆಮನೆಗೆ ಭೇಟಿ ನೀಡಿದಾಗ ಕಟ್ಟಾ ಬಿಜೆಪಿಗರು ಕೂಡ ಗ್ಯಾರಂಟಿ ಕಾರ್ಡ್ ಬೇಡ ಎಂದಿಲ್ಲ. ತಿಂಗಳಿಗೆ 200 ಯುನಿಟ್ ಉಚಿತ ವಿದ್ಯುತ್ ಬೇಡ ಎಂದಿಲ್ಲ. ಮಹಿಳೆಯರಿಗೆ ಉಚಿತ ಬಸ್ ಪಾಸ್ ಬೇಡ ಎಂದಿಲ್ಲ. ಹಿರಿಯ ಮಹಿಳೆಗೆ ತಿಂಗಳಿಗೆ ಎರಡು ಸಾವಿರ ಬೇಡ ಅಂದಿಲ್ಲ‌. ಇದು ಕಾಂಗ್ರೆಸ್ ಗ್ಯಾರಂಟಿ ಕುರಿತಾಗಿ ಜನರು ನಿರೀಕ್ಷೆ ಹೊಂದಿದ್ದಾರೆ ಎಂಬುವುದಕ್ಕೆ ಮತ್ತು ಅವರುಗಳೆಲ್ಲರೂ ಕಾಂಗ್ರೆಸ್ ಪರ ಮತ ಚಲಾಯಿಸಲಿದ್ದಾರೆ ಎಂಬುವುದಕ್ಕೆ ಸಾಕ್ಷಿಯಾಗಿದೆ ಎಂದವರು ಹೇಳಿದ್ದಾರೆ.

ಆ ಕುರಿತು ಮುಂದುವರೆಸಿ ಮಾತನಾಡಿದ ವಿಕಾಸ್ ಹೆಗ್ಡೆಯವರು ಕಾಂಗ್ರೆಸ್ ಗ್ಯಾರಂಟಿಗಳನ್ನು ಈಡೇರಿಸದಿದ್ದರೆ ನಾವ್ಯಾರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಓಟು ಕೇಳುವುದಿಲ್ಲ ಎಂದು ಶಪಥ ಮಾಡುತ್ತೇವೆ ಹಾಗೆಯೇ ಬಿಜೆಪಿಗರು ಕಾಂಗ್ರೆಸ್ ಭರವಸೆಗಳನ್ನು ಈಡೇರಿಸಿದರೆ ತಾವು ಮುಂದಿನ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಲಿ ನೋಡೋಣ ಸವಾಲು ಎಸೆದಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿಗೆ ಹಣವನ್ನು ಹೇಗೆ ಹೊಂದಿಕೆ ಮಾಡುತ್ತೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿಯವರು ಅದು ಕೇವಲ 46ಸಾವಿರ ಕೋಟಿಯ ಯೋಜನೆಯಾಗಿದೆ ಅದನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಈಡೇರಿಸಲಿದೆ ಎಂದು ಹೇಳಿದರು.

ಅಂತಹ ಯೋಜನೆಗಳಿಂದ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂಬ ಪ್ರಶ್ನೆಗೆ ಕಾಂಗ್ರೆಸ್ ಜಾರಿಗೊಳಿಸಿದ ಸಂದ್ಯಾ ಸುರಕ್ಷಾ, ವಿಧವಾ ವೇತನ ಮುಂತಾದ ಯೋಜನೆಗಳು ಇಂದಿಗೂ ಚಾಲ್ತಿಯಲ್ಲಿವೆ. ಅದರಿಂದ ದೇಶದ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಗ್ಯಾರಂಟಿ ಕಾರ್ಡ್ ಕುರಿತು ಅಪಪ್ರಚಾರ ಸರಿಯಲ್ಲ ಎಂದು ವಿಕಾಸ್ ಹೆಗ್ಡೆ ಹೇಳಿದರು.

ಈ ಸಂಧರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಬೀಜಾಡಿ ಅಶೋಕ್ ಪೂಜಾರಿ, ಕೋಣಿ ಕೃಷ್ಣದೇವ ಕಾರಂತ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement
Recent Posts
Advertisement