Advertisement

ಸೌಜನ್ಯ ಪ್ರಕರಣ: ನಾವೆಂತಹ ಅಪಾಯಕಾರಿ ಪ್ರಪಂಚದಲ್ಲಿದ್ದೇವೆ?

Advertisement

ಸೌಜನ್ಯಾ ಅತ್ಯಾಚಾರ, ಕೊಲೆ ಮರುತನಿಖೆಯ ಕುರಿತಾಗಿ ನಡೆಯುತ್ತಿರುವ ಹೋರಾಟದ ವಿರುದ್ಧವಾಗಿರುವ ಫೇಸ್‌ಬುಕ್‌ ಖಾತೆಯೊಂದರಲ್ಲಿ ಲೇಖನವೊಂದು ಪ್ರಕಟಗೊಂಡಿದೆ. ಆ ಲೇಖನದ ಪ್ರಕಾರ ಸೌಜನ್ಯ ಕೊಲೆ ಆರೋಪಿಗಳ ಬಂಧನ ಆಗಬೇಕು ಎಂದು ನಡೆಯುತ್ತಿರುವ ಹೋರಾಟವು "ಎಡಚರು ಮತ್ತು ಕ್ರೈಸ್ತ ಮಿಷನರಿಗಳು ಕ್ಷೇತ್ರದ ಅಧಿಕಾರವನ್ನು ಕಿತ್ತುಕೊಳ್ಳಲು ಮಾಡುತ್ತಿರುವ ಷಢ್ಯಂತ್ರ"ವಂತೆ ಮತ್ತು "ಆ ಹೋರಾಟಕ್ಕೆ ವಿದೇಶದಿಂದ ಹಣ ಬರುತ್ತದೆ" ಅಂತೆ! ಹಾಗೆಯೇ ಈ ಕುರಿತು ಸಾರ್ವಜನಿಕವಾಗಿ ಕೂಡ ಮೇಲಿನ ರೀತಿಯಲ್ಲೇ ಹಲವರು ಆಡಿಕೊಳ್ಳುತ್ತಿರುವುದನ್ನು ಕೂಡ ಕೇಳಿದ್ದೇವೆ.

ಹಾಗಾದರೆ, ಸೌಜನ್ಯ ಪರ ಹೋರಾಟ ನಡೆಯುತ್ತಿರುವುದು ದೇಶ ದ್ರೋಹವೇ? ಸೌಜನ್ಯಳಂತಹ ಅಮಾಯಕ ಸಹೋದರಿಯರ ಮೇಲೆ ನಡೆದ ಮತ್ತು ಈಗಲೂ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ದ ಪ್ರಜ್ಞಾವಂತರು ಧ್ವನಿ ಎತ್ತಲೇಬಾರದೇ? ಇದು ಅಂತಹ ದುಷ್ಕರ್ಮಿಗಳನ್ನು ನಿರಂತರವಾಗಿ ರಕ್ಷಣೆ ಮಾಡುವುದಿಲ್ಲವೇ? ಮತ್ತಷ್ಟು ದುಷ್ಕೃತ್ಯಗಳಿಗೆ ಪ್ರೇರಣೆಯಾಗುವುದಿಲ್ಲವೇ?

ಅದಿರಲಿ, ಆ ಹೋರಾಟದಲ್ಲಿರುವ ಎಡಪಂಥೀಯರು ಮತ್ತು ಕ್ರೈಸ್ತ ಮಿಷನರಿಗಳಾದರೂ ಯಾರು? ಅಥವಾ ಹೋರಾಟದಲ್ಲಿ ಕೆಲವು ಎಡಪಂಥಿಯರು ಮತ್ತು ಕ್ರೈಸ್ತ ಧರ್ಮಿಯರು ಇದ್ದಾರೆ ಎಂಬ ಏಕೈಕ ಕಾರಣಕ್ಕಾಗಿ ಸೌಜನ್ಯಾ ಪರ ಹೋರಾಟ ಮಾಡಲೇ ಬಾರದೇ? ಹೋರಾಟಗಳಲ್ಲಿ ನಿರ್ದಿಷ್ಟ ಧರ್ಮದವರೇ ಇರಬೇಕು, ನಿರ್ದಿಷ್ಟ ಸಿದ್ಧಾಂತದ ವ್ಯಕ್ತಿಗಳೇ ಭಾಗವಹಿಸಬೇಕು ಎಂಬ ನಿಯಮ, ಕಾನೂನೇನಾದರೂ ಇದೆಯೇ? ಅದಲ್ಲವಾದರೆ ಅದೇಕೆ ಹೋರಾಟಗಾರರ ಸಿದ್ದಾಂತ ಮತ್ತು ಧರ್ಮ ಇಲ್ಲಿ ಮುಖ್ಯವಾಗುತ್ತದೆ? ಅದೇಕೆ ಆ ಹೋರಾಟಗಾರರ ವಿರುದ್ಧವಾಗಿರುವ ಈ ಧ್ವನಿಗಳು ಸೌಜನ್ಯ ಹಂತಕರ ವಿರುದ್ಧವಾಗಿಲ್ಲ? ಅವರಿಗೂ ಕ್ಷೇತ್ರಕ್ಕೂ ಇರುವ ಸಂಬಂಧವೇನು? ಅದು ಹೇಗೆ ಈ ಹೋರಾಟದ ಮೂಲಕ ಕ್ಷೇತ್ರದ ಅಧಿಕಾರವನ್ನು ಬೇರೆ ಯಾರೋ ಸಂಬಂಧವೇ ಇಲ್ಲದವರು ಕಿತ್ತುಕೊಳ್ಳಲು ಸಾಧ್ಯವಾಗುತ್ತದೆ? ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂದರೆ ಈ ಮಧ್ಯೆ ಕ್ಷೇತ್ರದ ಹೆಸರನ್ನು ಏಕೆ ಎಳೆದು ತರಲಾಗುತ್ತಿದೆ? ಹೋರಾಟಗಾರರಿಗೆ ವಿದೇಶಿ ದೇಣಿಗೆ ಬಂದಿರುವ ಕುರಿತು ದಾಖಲೆಗಳಿವೆಯೇ? ದಾಖಲೆ ಇದ್ದರೆ ಅದೇಕೆ ತನಿಖೆಗೆ ಒಳಪಡಿಸಿಲ್ಲ? ಅಥವಾ ಒಂದು ವೇಳೆ ಯಾವುದಾದರೊಂದು ಎನ್‌ಜಿಓ ಸಂಸ್ಥೆ ವಿದೇಶಿ ದೇಣಿಗೆ ತಗೆದುಕೊಳ್ಳುತ್ತಿದೆ ಎಂಬ ಏಕೈಕ ಕಾರಣಕ್ಕಾಗಿ ಆ ಸಂಸ್ಥೆಯ ಮುಖ್ಯಸ್ಥರು ಇಂತಹ ಅಪಸವ್ಯಗಳನ್ನು ನೋಡುತ್ತಾ ಕುಳಿತುಕೊಳ್ಳಬೇಕೇ?

ಅದೆಲ್ಲವನ್ನು ಹೊರತುಪಡಿಸಿಯೂ, ಸೌಜನ್ಯ ಅತ್ಯಾಚಾರ, ಕೊಲೆಯ ನೈಜ ಆರೋಪಿಗಳು ಯಾರು? ಅದು ಏಕೆ ಅವರನ್ನು ರಕ್ಷಿಸಲಾಗುತ್ತಿದೆ? ಅದೇಕೆ ನೈಜ ಆರೋಪಿಗಳನ್ನು ಬಂದಿಸದೇ ಸಂತೋಷ್ ರಾವ್ ನನ್ನು ಬಂಧಿಸಿ, ಹಿಂಸಿಸಲಾಯಿತು? ಅಂದು ಸಂತೋಷ್ ರಾವ್‌ನನ್ನು ಬಂಧಿಸಿದ ತನಿಖಾಧಿಕಾರಿಗೆ ಇದ್ದ ಒತ್ತಡಗಳೇನು? ಒತ್ತಡ ಹೇರಿದವರು ಯಾರು? ಅದೇಕೆ ಒತ್ತಡ ಹೇರಿದರು? ಈ ಕುರಿತು ಆ ತನಿಖಾಧಿಕಾರಿಯ ತನಿಖೆ ಬೇಡವೇ? ಆ ಕುರಿತು ತನಿಖೆಗೇಕೆ ಯಾರಿಂದಲೂ ಒತ್ತಡ ಬರುತ್ತಿಲ್ಲ? ಹಾಗೆ ತನಿಖೆ ನಡೆದರೆ ನಿಜಬಣ್ಣ ಬಯಲಾಗುವ ಭಯವಿದೆಯೇ? ಭಯವಿರುವುದು ನಿಜವಾದರೆ ಸೌಜನ್ಯ ಪರ ಹೋರಾಟಗಾರರು ಮಾಡುತ್ತಿರುವ ಹೋರಾಟದ ಹಾದಿ ಸರಿ ಇದೆ ಎಂದಾಯಿತಲ್ಲವೇ?

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಇಷ್ಟಾಗಿಯೂ ಸಂತೋಷ್ ರಾವ್ ನಿರಪರಾಧಿ ಎಂದು ಉಲ್ಲೇಖಿಸಿರುವ ಸಿಬಿಐ ಅಧಿಕಾರಿಗಳು ಅದೇಕೆ ನೈಜ ಆರೋಪಿಗಳು ಯಾರೆಂದು ಉಲ್ಲೇಖಿಸಿಲ್ಲ? ಉಲ್ಲೇಖಿಸಿದ್ದಾರಾದರೆ ಆ ತನಿಖಾ ವರದಿ ಎಲ್ಲಿದೆ? ಅದೇಕೆ ಅದು ಸಾರ್ವಜನಿಕವಾಗಿ ಬಿಡುಗಡೆಗೊಂಡಿಲ್ಲ? ಆ ಕುರಿತು ಆ ತನಿಖಾಧಿಕಾರಿಗಳಿಗಿದ್ದ ಸಮಸ್ಯೆಗಳೇನು? ಒಂದು ವೇಳೆ ಆ ಅಧಿಕಾರಿಗಳಿಗೂ ಸಮಸ್ಯೆ ಇತ್ತು ಎಂದಾದರೆ ಸೌಜನ್ಯಾಳಿಗೆ ನ್ಯಾಯ ಸಿಗುತ್ತದೆ ಎಂಬ ಖಾತ್ರಿಯಿದೆಯೇ? ಹಾಗಿದ್ದರೆ ನ್ಯಾಯ ಕೊಡಿಸುವವರು ಯಾರು? ಇದೆಲ್ಲವನ್ನೂ ಯೋಚಿಸುವಾಗ ನಾವೆಂತಹ ಅಪಾಯಕಾರಿ ಪ್ರಪಂಚದಲ್ಲಿದ್ದೇವೆ ಎಂದು ಅನ್ನಿಸುವುದಿಲ್ಲವೇ? ಇವುಗಳು ಕೇವಲ ಪ್ರಶ್ನೆಗಳಾಗಿಯೇ ಉಳಿಯದೇ ಉತ್ತರ ದೊರಕಬಹುದೇ?

Advertisement
Advertisement
Recent Posts
Advertisement