Advertisement

ಮೊದಲ ಆಂಗ್ಲೋ - ಮೈಸೂರು ಯುದ್ಧ| ಸ್ವಾತಂತ್ರ್ಯದ ಆ ಕ್ಷಣಗಳು- ಭಾಗ 7ರಿಂದ 9

Advertisement

“ಸ್ವಾತಂತ್ರ್ಯದ ಆ ಕ್ಷಣಗಳು” ಪುಸ್ತಕದಿಂದ:
ಲೇಖಕರು: ಡಾ. ಉಮೇಶ್ ಪುತ್ರನ್
ಎಂ. ಡಿ. ಚಿನ್ಮಯಿ ಆಸ್ಪತ್ರೆ, ಕುಂದಾಪುರ. ಉಡುಪಿ ಜಿಲ್ಲೆ.

ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 7
"ಆಂಗ್ಲೊ-ಇಂಡಿಯನ್ ತಲೆಮಾರಿನ ಉದಯ"

ಈಸ್ಟ್ ಇಂಡಿಯಾ ಕಂಪೆನಿಯ 250 ವರ್ಷಗಳ ಆಳ್ವಿಕೆಯನ್ನು ಇಂಗ್ಲೀಷ್ ಸರಕಾರ 1857 ರಲ್ಲಿ ಕೊನೆಗೊಳಿಸಿತು. ಇಂಗ್ಲೀಷ್ ಚಕ್ರಾಧಿಪತ್ಯದ 39 ವರ್ಷ ಪ್ರಾಯದ ವಿಕ್ಟೋರಿಯಾ ರಾಣಿ ಭಾರತದ ಅಧಿಕಾರವನ್ನು ವಹಿಸಿಕೊಂಡರು. ರಾಣಿಯ ಪರವಾಗಿ ಭಾರತದಲ್ಲಿ ವೈಸ್ ರಾಯ್ ಆಡಳಿತ ನಿರ್ವಹಣೆ ಮಾಡುವಂತಾಯಿತು. ಸುಮಾರು 2000 ಇಂಡಿಯನ್ ಸಿವಿಲ್ ಸರ್ವಿಸ್ (ಐ. ಸಿ. ಎಸ್.) ಅಧಿಕಾರಿಗಳು, 10000 ಬ್ರಿಟಿಷ್ ಸೇನಾಧಿಕಾರಿಗಳು ಹಾಗೂ 2ಲಕ್ಷ ಭಾರತದ ಸಿಪಾಯಿಗಳು ದೇಶದ 30 ಕೋಟಿ ಜನರನ್ನು ಅಳತೊಡಗಿದರು.

ಭಾರತದ ಹವಾಮಾನ ವೈಪರೀತ್ಯ, ರೋಗ-ರುಜಿನಗಳಿಂದ ಬ್ರಿಟಿಷರಿಗೆ ಭಾರತದಲ್ಲಿ ಜೀವನ ಬಹಳ ಕಷ್ಟಕರವಾಗಿತ್ತು. ಸಹಸ್ರಾರು ಬ್ರಿಟಿಷ್ ಕುಟುಂಬಗಳು ಮಲೇರಿಯಾ, ಪ್ಲೇಗ್ ರೋಗಗಳಿಗೆ ತುತ್ತಾದವು. ಹಾವು, ಚೇಳುಗಳ ಕಡಿತದಿಂದ ಮಡಿದರು. ಬಿಸಿಲ ಬೇಗೆಯಿಂದ ಬೆಂದರು. ಚಿರತೆಗೆ ಆಹುತಿಯಾದ ಲೆಫ್ಟಿನೆಂಟ್ ಜಾನ್ ಶಾ, ಕಾಡುಕೋಣ ತಿವಿತಕ್ಕೊಳಗಾದ ಮೇಜರ್ ಅರ್ಚಿಬಲ್ಡ್ ಹಿಬ್ಬರ್ಟ್, ಆನೆಯ ಕಾಲ್ತುಳಿತಕ್ಕೆ ಬಲಿಯಾದ ಹ್ಯಾರಿಸ್ ಮೆಕ್ವೆಡ್, 1871ರ ಹೊಸ ವರ್ಷದ ಪ್ರಥಮ ದಿನದಂದು ಆನೆಯ ಮೇಲಿಂದ ಬಿದ್ದು ಮರಣವನ್ನಪ್ಪಿದ ಮೇಜರ್ ಜನರಲ್ ಹೆನ್ರಿ ಮೇರಿಯಾನ್ ಹೀಗೆ ಸಾವಿರಾರು ಜನ ಇಂಗ್ಲೀಷರು ಮರಣದಲ್ಲೂ ತಮ್ಮ ಚಕ್ರಾಧಿಪತ್ಯಕ್ಕೆ ನಿಷ್ಠರಾಗಿದ್ದರು.

ಆದರೂ ಅವರು ಭಾರತದಲ್ಲಿ ತಮ್ಮ ಜೀವನವನ್ನು ಆನಂದಿಸಿದರು. ಅವರಿಗೆ ಕ್ರೀಡೆಯೇ ಒಂದು ದೊಡ್ಡ ಮನರಂಜನೆಯಾಗಿತ್ತು. ಶ್ರೀಮಂತ ಬ್ರಿಟಿಷರ ಕ್ರಿಕೆಟ್, ಟೆನಿಸ್, ಗೋಲ್ಫ್ ಆಟಗಳನ್ನು ಸಾಮಾನ್ಯ ಭಾರತೀಯ ಹತ್ತಿರದಿಂದ ನಿಂತು ಕೂಡ ನೋಡುತ್ತಿರಲಿಲ್ಲ. ಅವರ ಬಂಗಲೆಯ ಎದುರಿನ ಹುಲ್ಲು ಹಾಸಿಗೆ ತಾಣದ ವೈಭವೋಪೇತ ಪಾರ್ಟಿಗೆ ಯಾವ ಭಾರತೀಯನನ್ನು ಆಹ್ವಾನಿಸುತ್ತಿರಲಿಲ್ಲ.

ಮೇಮ್ ಸಾಹಿಬ್ ಎಂದು ಕರೆಯಲ್ಪಡುತ್ತಿದ್ದ ಬ್ರಿಟಿಷ್ ಸ್ತ್ರೀಯರು ತಮ್ಮ ಗಂಡಂದಿರನ್ನು ಭಾರತೀಯರ ಜೊತೆ ಹೆಚ್ಚಾಗಿ ಬೆರೆಯಲು ಬಿಡುತ್ತಿರಲಿಲ್ಲ. ಎಲ್ಲಿ ತಮ್ಮ ಪತಿಯರು ಭಾರತೀಯ ಸ್ತ್ರೀಯರಿಂದ ಆಕರ್ಷಿಸಲ್ಪಡುವರೋ ಎನ್ನುವ ಆತಂಕ. ಭಾರತಕ್ಕೆ ಬಂದ ಪ್ರಥಮ ತಲೆಮಾರಿನ ಇಂಗ್ಗ್ಲೀಷರಿಂದ 'ಆಂಗ್ಲೋ ಇಂಡಿಯನ್' ಎನ್ನುವ ಒಂದು ಮಿಶ್ರ ಸಮಾಜ ಆಗಲೇ ಸೃಷ್ಟಿಯಾಗಿತ್ತು.

ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 8
ಬ್ರಿಟಿಷರ ಎದುರು ಸೆಟೆದೆದ್ದ ಹೈದರಾಲಿ: ಮೊದಲ ಆಂಗ್ಲೋ - ಮೈಸೂರು ಯುದ್ಧ:

ತಮ್ಮ ತಮ್ಮ ಚಕ್ರಾಧಿಪತ್ಯವನ್ನು ವಿಸ್ತರಿಸಲು ಹಾಗೂ ರಕ್ಷಿಸಿಕೊಳ್ಳಲು ರಾಜಮಹಾರಾಜರುಗಳ ಮಧ್ಯ ಯುದ್ಧ ಆ ಕಾಲದಲ್ಲಿ ಸಾಮಾನ್ಯವಾಗಿತ್ತು. ವೈರಿಯನ್ನು ಮಣಿಸಲು ಇತರ ರಾಜರುಗಳೊಂದಿಗೆ ಅಥವಾ ಇಂಗ್ಗ್ಲೀಷರೊಂದಿಗೆ ಸ್ನೇಹ ಬೆಳೆಸುವ ಅಗತ್ಯ ಇದ್ದಿತ್ತು. ಆಂತರಿಕ ಕಲಹವು ಇಂಗ್ಲಿಷರಿಗೆ ವರದಾನವಾಯಿತು. ಇಂತಹ ಒಂದು ನಿದರ್ಶನವನ್ನು ಮೊದಲ ಆಂಗ್ಲೋ ಮೈಸೂರು ಯುದ್ಧದಲ್ಲಿ ನಾವು ಕಾಣಬಹುದು.

ಮರಾಠರು, ಹೈದರಾಬಾದಿನ ನಿಜಾಮ ಹಾಗೂ ಇಂಗ್ಲೀಷ್ ಸೇನೆ ಮೈಸೂರಿನ ಹೈದರ್ ಆಲಿ ಸೇನೆಯ ಮೇಲೆ 1767 ರಲ್ಲಿ ಆಕ್ರಮಣ ಮಾಡಿತು. ಮೊದಲು ಮರಾಠರು ದಕ್ಷಿಣದತ್ತ ದಂಡೆತ್ತಿ ತುಂಗಭದ್ರ ನದಿ ತೀರದವರೆಗೆ ಬಂದರು. ಇದು ಹೈದರ್ ಆಲಿಗೆ ತಿಳಿಯುತ್ತಿದ್ದಂತೆ, ಆತ ಒಪ್ಪಂದವನ್ನು ಮಾಡಿಕೊಂಡು ಮೂವತ್ತು ಲಕ್ಷ ರೂಪಾಯಿಗಳನ್ನು ಪಾವತಿಸಿದ. ಇದರಿಂದ ಮರಾಠರು ಸೇನೆಯನ್ನು ಹಿಂತೆಗೆದುಕೊಂಡು, ಕೃಷ್ಣಾನದಿಯ ತೀರದವರೆಗೆ ಹಿಂದೆ ಬಂದರು.

ಇದೇ ಸಮಯದಲ್ಲಿ ಹೈದರಾಬಾದಿನ ನಿಜಾಮ ಕೂಡ ಮೈಸೂರಿನತ್ತ ಆಕ್ರಮಣ ಮಾಡಿದ. ಅವನು ಬೆಂಗಳೂರಿನ ತನಕ ಬಂದ. ಆಗ ಹೈದರಲಿ ಮತ್ತು ನಿಜಾಮನ ಮಧ್ಯ ರಾಜಿ ಒಪ್ಪಂದವಾಗಿ ಹೈದರ್ ಅಲಿಯು 18 ಲಕ್ಷ ರೂಪಾಯಿಗಳನ್ನು ಪಾವತಿಸಿದ. ಹೈದರಾಲಿಯ ಮಗ ಟಿಪ್ಪು ಸುಲ್ತಾನನನ್ನು ನವಾಬನನ್ನಾಗಿ ಮಾಡಲಾಯಿತು.

ಹೈದರಾಲಿಯು ನಿಜಾಮನ ಸೇನೆಯ ಸಹಾಯದಿಂದ ಬ್ರಿಟಿಷರ ಮೇಲೆ ದಂಡೆತ್ತಿ ಹೋಗಿ ತಮಿಳುನಾಡಿನ ಕಾವೇರಿ ಪಟ್ಟಣವನ್ನು ವಶಪಡಿಸಿಕೊಂಡ. ಇದಾದ ಸ್ವಲ್ಪ ದಿನಗಳಲ್ಲೇ ಈಸ್ಟ್ ಇಂಡಿಯಾ ಕಂಪನಿಯ ಸೇನೆಯು ನಿಜಾಮನೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡ ಪರಿಣಾಮವಾಗಿ ಹೈದರ್ ಅಲಿಯು ಹಿಮ್ಮೆಟ್ಟಬೇಕಾಯಿತು.

1768ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಬಾಂಬೆ ಘಟಕವು ಕರ್ನಾಟಕದ ಕರಾವಳಿಯ ಕಡೆ ನೌಕಾದಳದೊಂದಿಗೆ ದಂಡೆತ್ತಿ ಬರುವ ಸುದ್ದಿ ಹೈದರ್ ಆಲಿಗೆ ತಿಳಿಯಿತು. ಮಂಗಳೂರಿನಲ್ಲಿರುವ ಹೈದರಾಲಿಯ ನೌಕಾಸೇನೆ ಓಣೋರು (ಈಗಿನ ಹೊನ್ನಾವರ) ಕಡೆಗೆ ತೆರಳಿತು. ಬ್ರಿಟಿಷ್ ನೌಕಾ ಸೇನೆ ಮಂಗಳೂರು ಬಿಟ್ಟು ಓಣೋರಿನ ಮೇಲೆ ಆಕ್ರಮಣ ಮಾಡಬಹುದು ಎನ್ನುವ ಗುಪ್ತಚರ ಮಾಹಿತಿಯಂತೆ ಈ ನಿರ್ಧಾರ ಕೈಗೊಳ್ಳಲಾಯಿತು. ಆದರೆ ಬ್ರಿಟಿಷ್ ಸೇನೆ ಮಂಗಳೂರಿಗೆ ಬಂದು ಮಂಗಳೂರನ್ನು ವಶಪಡಿಸಿಕೊಂಡಿತು. ಆದರೆ ಟಿಪ್ಪು ಸುಲ್ತಾನ್ ತನ್ನ ಹೆಚ್ಚಿನ ಸೇನೆಯೊಂದಿಗೆ ಮೈಸೂರಿನಿಂದ ಮಂಗಳೂರಿಗೆ ಬಂದು ಮಂಗಳೂರನ್ನು ಪುನಹ ತನ್ನ ಸ್ವಾಧೀನಕ್ಕೆ ತೆಗೆದುಕೊಂಡ.

ಹೈದರಾಲಿ ದುರ್ಬಲಗೊಂಡ ಕಾರಣದಿಂದಾಗಿ ಬ್ರಿಟಿಷ್ ಸೇನೆ 1768ರ ಆಗಸ್ಟ್ ನಲ್ಲಿ ದಿಂಡಿಗಲ್ ತನಕ ದಂಡೆತ್ತಿ ಬಂದಿತು. ಬ್ರಿಟಿಷರು ಮರಾಠಾ ಸೇನೆಯ ಸೇನಾದಿಪತಿ ಮುರಾರಿ ರಾವ್ ಅವನಿಗೂ ಕೂಡ ಪ್ರೇರಣೆ ಕೊಟ್ಟು ದಂಡೆತ್ತಿ ಬರುವಂತೆ ಸೂಚಿಸಿದರು. ಎರಡೂ ಸೇನೆಗಳು ಬೆಂಗಳೂರಿನ ಹತ್ತಿರದ ಹೊಸಕೋಟೆಯಲ್ಲಿ ಒಂದಾದವು. ಬೆಂಗಳೂರನ್ನು ಉಳಿಸಿಕೊಳ್ಳುವ ಸಲುವಾಗಿ 10 ಲಕ್ಷ ರೂಪಾಯಿಗಳ ದಂಡವನ್ನು ತೆರಲು ಹೈದರಾಲಿ ಸಿದ್ಧನಾದ. ಆದರೆ ಬ್ರಿಟಿಷರ ಇತರ ಬೇಡಿಕೆಗಳನ್ನು ಮನ್ನಿಸಲು ನಿರಾಕರಿಸಿದ.

ಹೈದರ್ ಆಲಿ ತನ್ನ ಸೇನೆಯನ್ನು ಪುನಹ ಬಲಪಡಿಸಿಕೊಂಡು ಮದ್ರಾಸ್ ಕಡೆಗೆ ತೆರಳಿದ. ಇನ್ನೇನು ಮದ್ರಾಸ್ ವಶಕ್ಕೆ ಬಂತು ಎನ್ನುವಾಗ ಬ್ರಿಟಿಷರು ಒಪ್ಪಂದಕ್ಕೆ ಸಿದ್ದವಾದರು. 1769ರ ಎಪ್ರಿಲ್ 4 ರಂದು ಮದ್ರಾಸ್ ಒಪ್ಪಂದದೊಂದಿಗೆ ಒಂದನೇ ಆಂಗ್ಲೋ ಮೈಸೂರು ಯುದ್ಧವು ಮುಗಿಯಿತು.

ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 9
ಸಮಾಜ ಸುಧಾರಕ ರಾಜಾ ರಾಮ ಮೋಹನ್ ರಾಯ್.

ಸಮಾಜಕ್ಕೆ ಹಿಡಿದ ಅನಿಷ್ಟದ ಕೊಳೆಯನ್ನು ತೊಳೆಯಲು ಅನೇಕ ಸಮಾಜ ಸುಧಾರಕರು ಹುಟ್ಟಿಬಂದರು. ಅವರಲ್ಲಿ ಮೇರು ವ್ಯಕ್ತಿಯಾಗಿ ಕಾಣಿಸಿಕೊಳ್ಳುವವರೇ ರಾಜಾರಾಮ್ ಮೋಹನ್ ರಾಯ್.

ಬ್ರಹ್ಮಸಮಾಜದ ಹಿಂದಿನ ಸಂಸ್ಥೆಯಾಗಿರುವ ಬ್ರಹ್ಮ ಸಭಾ ಇದರ ಸ್ಥಾಪಕ ರಾಜಾರಾಮ್ ಮೋಹನ್ ರಾಯ್ ಇವರು ಮೇ 22, 1772ರಲ್ಲಿ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ರಾಧಾ ನಗರದಲ್ಲಿ ಜನಿಸಿದರು.

ಇವರು ಕುಲೀನ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದರೂ ಕೂಡ, ಆ ಕಾಲದಲ್ಲಿ ಬಹುಪತ್ನಿತ್ವ ಹಾಗೂ ವರದಕ್ಷಿಣೆ ಪದ್ಧತಿಗಳು ಆಳವಾಗಿ ಅವರಲ್ಲೂ ಬೇರು ಬಿಟ್ಟಿದ್ದವು. ಇವರು ಕೂಡ ಮೂರು ಮದುವೆ ಆಗಿದ್ದರು. ಆದರೆ ಮೊದಲ ಮತ್ತು ಎರಡನೇ ಹೆಂಡತಿ ತೀರಿಹೋದ ಮೇಲೆ ಮೂರನೇ ಮದುವೆ ಆದದ್ದು.

ಮೋಹನರಾಯರು ಪರ್ಷಿಯಾ, ಸಂಸ್ಕೃತ, ವೇದ, ಉಪನಿಷತ್ ಇವುಗಳನ್ನು ಅಧ್ಯಯನ ಮಾಡಿದ್ದಲ್ಲದೇ, ಪಾಟ್ನಾದ ಒಂದು ಮದರಸದಲ್ಲಿ ಅರೇಬಿಕ್ ಭಾಷೆಯನ್ನು ಕೂಡ ಕಲಿತರು. 1793 ರಲ್ಲಿ ಭಾರತಕ್ಕೆ ಬಂದ ಪ್ರಥಮ ಇಂಗ್ಲೀಷ್ ಮಿಷನರಿ ವಿಲಿಯಂ ಕ್ಯಾರಿ ಇವರ ಪರಿಚಯದಿಂದಾಗಿ ರಾಮಮೋಹನ ರಾಯರು ಇಂಗ್ಲಿಷನ್ನು ಕಲಿತರು.

ಇವರು ಈಸ್ಟ್ ಇಂಡಿಯಾ ಕಂಪನಿಯಲ್ಲಿ ಗುಮಾಸ್ತರಾಗಿಯೂ ಹಾಗೂ ಮೊಘಲರ ಆಸ್ಥಾನದಲ್ಲಿ ಇಂಗ್ಲೀಷ್ ಭಾಷಾಂತರಕಾರಿಯಾಗಿಯೂ ಕೆಲಸ ಮಾಡಿದರು. ಈಸ್ಟ್ ಇಂಡಿಯಾ ಕಂಪೆನಿಯು ಪ್ರತಿವರ್ಷ 3 ಮಿಲಿಯನ್ ಪೌಂಡ್ಸ್ ಗಳನ್ನು ಇಂಗ್ಲೆಂಡಿಗೆ ಹೇಗೆ ಸಾಗಿಸುತ್ತಿತ್ತು ಎಂದು ತಮ್ಮ ಲೆಕ್ಕಾಚಾರದಲ್ಲಿ ರಾಮಮೋಹನ ರಾಯ್ ತೋರಿಸಿಕೊಟ್ಟರು.

ಇವರು ಪರ್ಷಿಯಾ, ಅರೇಬಿಕ್, ಇಂಗ್ಲೀಷ್, ಸಂಸ್ಕೃತ ಹಾಗೂ ಬಂಗಾಳಿ ಭಾಷೆಗಳಲ್ಲಿ ಅನೇಕ ಪುಸ್ತಕಗಳನ್ನು ಪ್ರಕಟಿಸಿದರು. ಬ್ರಹ್ಮ ಸಭಾ ಮತ್ತು ಬ್ರಹ್ಮ ಸಮಾಜ ಇವುಗಳ ಮೂಲಕ ಸಮಾಜದಲ್ಲಿರುವ ವರದಕ್ಷಿಣೆ, ಸತಿಸಹಗಮನ, ಬಾಲ್ಯ ವಿವಾಹ, ಜಾತಿಪದ್ಧತಿ ಹಾಗೂ ಬಹುಪತ್ನಿತ್ವ ಮುಂತಾದ ಅನಿಷ್ಟಗಳ ವಿರುದ್ಧ ಹೋರಾಡಿದರು. ಬಂಗಾಳದಲ್ಲಿ ಅನೇಕ ಶಾಲೆ-ಕಾಲೇಜುಗಳನ್ನು ನಿರ್ಮಿಸಿದರು.

ಇವರು 1830 ರಲ್ಲಿ ಮೊಘಲ್ ಚಕ್ರವರ್ತಿ ದ್ವಿತೀಯ ಅಕ್ಬರ್ ಶಾ ಇವನ ರಾಯಭಾರಿಯಾಗಿ ಇಂಗ್ಲೆಂಡಿಗೆ ಹೋದರು. ಹೋಗುವಾಗ ಇವರಿಗೆ "ರಾಜ" ಎನ್ನುವ ಬಿರುದನ್ನು ನೀಡಿದರು. ಅಲ್ಲಿ ಮೊಘಲ್ ಚಕ್ರವರ್ತಿಗಳ ಮಾಶಾಸನವನ್ನು 30,000 ಪೌಂಡ್ ಹೆಚ್ಚು ಮಾಡುವಂತೆ ಬೇಡಿಕೆ ಇಟ್ಟು ಅದರಲ್ಲಿ ಯಶಸ್ವಿಯಾದರು.

ರಾಜಾ ರಾಮಮೋಹನ ರಾಯರು ಇಂಗ್ಲೆಂಡಿನ ಬ್ರಿಸ್ಟಲ್ ಹತ್ತಿರದ ಸ್ಟೇಪಲ್ಟನ್ ನಲ್ಲಿ 1833 ರ ಸೆಪ್ಟೆಂಬರ್ 27ರಂದು ಮೆದುಳು ಜ್ವರಕ್ಕೆ ಬಲಿಯಾಗಿ ತೀರಿಕೊಂಡರು. ಇಲ್ಲಿ ಹತ್ತಿರದ ಅರ್ನೋಸ್ ವೇಲ್ ರುದ್ರಭೂಮಿಯಲ್ಲಿ ವರ್ಷಕೊಮ್ಮೆ ಇವರ ಹೆಸರಲ್ಲಿ ವಿಶೇಷವಾದ ಪೂಜೆಯನ್ನು ಅಲ್ಲಿಯ ಸ್ಥಳೀಯ ಆಡಳಿತ ಸಲ್ಲಿಸುತ್ತಿದೆ. ಬ್ರಿಸ್ಟಲ್ ನಲ್ಲಿರುವ ಮ್ಯೂಸಿಯಂ ನಲ್ಲಿ ಇವರ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸ್ಟೇಪಲ್ಟನ್ ನ ಒಂದು ರಸ್ತೆಗೆ ರಾಜಾರಾಮ್ ಮೋಹನ್ ರಾವ್ ರಸ್ತೆ ಎಂದು ಹೆಸರಿಡಲಾಗಿದೆ.

ಲೇಖನ ಮಾಲಿಕೆ ಮುಂದುವರಿಯುವುದು...

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕುಕೇಂದ್ರದ ಹೃದಯಭಾಗದಲ್ಲಿರುವ ಚಿನ್ಮಯಿ ಆಸ್ಪತ್ರೆಯ ವೈಧ್ಯಕೀಯ ನಿರ್ದೇಶಕರಾದ ಲೇಖಕರು (ಡಾ. ಉಮೇಶ್ ಪುತ್ರನ್) ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ವಿಧ್ಯಾಭ್ಯಾಸವನ್ನು ಗಂಗೊಳ್ಳಿಯಲ್ಲಿ ಪೂರೈಸಿ ವೈದ್ಯಕೀಯ ಶಿಕ್ಷಣವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಪೂರೈಸಿರುತ್ತಾರೆ. ಸಾಹಿತ್ಯಾಸಕ್ತರಾದ ಇವರು ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

Advertisement
Advertisement
Recent Posts
Advertisement