Advertisement

ಕುಮಾರಸ್ವಾಮಿಯವರದ್ದು ಏನೂ ತಪ್ಪಿಲ್ಲ- ತಪ್ಪೆಲ್ಲಾ ಅವರನ್ನು ನಂಬಿದವರದ್ದು: ಮಟ್ಟು

Advertisement

ನನ್ನ ಪ್ರಕಾರ ಹೆಚ್.ಡಿ.ಕುಮಾರಸ್ವಾಮಿ ಯವರದ್ದು ಏನೂ ತಪ್ಪಿಲ್ಲ, ತಮ್ಮನ್ನು ಅರ್ಥಮಾಡಿಸಲು ಅವರು ಎಷ್ಟೆಲ್ಲ ಪ್ರಯತ್ನ ಪಟ್ಟಿದ್ದರು ಎಷ್ಟೆಲ್ಲ ಅವಕಾಶ ನೀಡಿದ್ದರು. ಹೌದು, ಅವರದ್ದು ನೇರ, ದಿಟ್ಟ ,ನಿರಂತರ ನಡವಳಿಕೆ.

ಬಿಜೆಪಿ ಜೊತೆಗೂಡಿ ಸರ್ಕಾರ ರಚನೆಗೆ ನ್ಯಾಷನಲ್ ಬಸ್ ನಲ್ಲಿ ರಾಜಭವನಕ್ಕೆ ಹೊರಟಾಗಲೇ ಅವರನ್ನು ಅರ್ಥಮಾಡಿಕೊಳ್ಳಬೇಕಾಗಿತ್ತು. ‘’ಏನ್ರಿ ಜಾತ್ಯತಿತತೆ, ಅದರ ಅರ್ಥ ಏನ್ರಿ?’ ಯಾರ್ರೀ ಅನಂತಮೂರ್ತಿ? ಎಂದೆಲ್ಲ ಕೇಳಿದಾಗಲಾದರೂ ಅರ್ಥಮಾಡಿಕೊಳ್ಳಬೇಕಾಗಿತ್ತು. 'ಅಳುವ ಗಂಡಸರನ್ನು ನಂಬಬಾರದು' ಎಂದು ಜನರಿಗೆ ಗೊತ್ತಿದ್ದರೂ ಅವರು ಮತ್ತೆ ಮತ್ತೆ ಕಣ್ಣೀರು ಹಾಕಿದರೆ ಏನು ಅರ್ಥ? ನನ್ನನ್ನು ನಂಬಬೇಡಿ ಎಂದಲ್ಲವೇ? ಅದನ್ನಾದರೂ ಅರ್ಥಮಾಡಿಕೊಳ್ಳಬೇಕಾಗಿತ್ತಲ್ಲವೇ? ಇಷ್ಟೆಲ್ಲ ಅರ್ಥಮಾಡಿಸಿದ ನಂತರವೂ ಅವರಲ್ಲಿ ರಾಜ್ಯದ ಮೂರನೇ ಶಕ್ತಿಯ ಆಶಾ ಕಿರಣವನ್ನು ಕಂಡವರಿಗೆ ಏನೆನ್ನಬೇಕು?

ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ನಮ್ಮ ಅನೇಕ ಪ್ರಗತಿಪರ ಚಿಂತಕರು, ಸಾಹಿತಿಗಳು ಸಾಲುಸಾಲಲ್ಲಿ ಹೋಗಿ ಕುಮಾರಣ್ಣನವರ ಜೊತೆ ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದೇನು? ಕಾರ್ಯಕರ್ತರಿಗೆ ತರಬೇತಿ ಕೊಟ್ಟಿದ್ದೇನು? ಜೂಮ್ ಮೀಟಿಂಗ್ ಗಳನ್ನು ನಡೆಸಿದ್ದೇನು? 'ಬಿಜೆಪಿಯ ದ್ವೇಷ ಮತ್ತು ಕಾಂಗ್ರೆಸ್ ಪಕ್ಷದ ಓಲೈಕೆಗೆ ಮುಸ್ಲಿಮರು ಬಲಿಯಾಗುತ್ತಿದ್ದಾರೆ, ನಮಗಿರುವ ಏಕೈಕ ಆಶಾಕಿರಣ ಕುಮಾರಣ್ಣ' ಎಂದು ಕೆಲವು ತಥಾಕಥಿತ ಮುಸ್ಲಿಮ್ ಚಿಂತಕರು ಕ್ಯಾಂಪೇನ್ ಮಾಡಿದ್ದೇನು? ಕಾಂಗ್ರೆಸ್ ಗೆ ಹೋಗುವ ಮುಸ್ಲಿಮ್ ಮತಗಳನ್ನು ಸೆಳೆಯಲಿಕ್ಕಾಗಿಯೇ ಕುಮಾರಣ್ಣನಿಂದ ಆರ್ ಎಸ್ ಎಸ್ ಗೆ ಬೈಸಿದ್ದೇನು? ಆರ್ ಎಸ್ ಎಸ್ ಟೀಕಿಸಿ ಲೇಖನ ಬರೆದು ಅವರ ಹೆಸರಿನಲ್ಲಿ ಪ್ರಕಟಿಸಿದ್ದೇನು? ಈಗ ಇವರೆಲ್ಲ ಎಲ್ಲಿ ಅಡಗಿ ಕೂತಿದ್ದಾರೆ?

ಈಗ ಕುಮಾರಣ್ಣನನ್ನು ದೂಷಿಸಿ ಏನು ಪ್ರಯೋಜನ? ಅವರು ಇದ್ದದ್ದೇ ಹಾಗೆ. ನಾಲ್ಕೈದು ವರ್ಷಗಳ ಹಿಂದೆಯೇ ಅವರು ತಮ್ಮ ಒಬ್ಬ ಆಪ್ತರ ಜೊತೆಯಲ್ಲಿ 'ನನಗೆ ಕರ್ನಾಟಕದ ನಿತೀಶ್ ಕುಮಾರ್ ಆಗಬೇಕಣ್ಣಾ' ಎಂದು ಹೇಳಿದ್ದರಂತೆ. ಅವರಿಗೆ ತಮ್ಮ 'ಗುರಿ ಮತ್ತು ಗುರು' ಬಗ್ಗೆ ಸ್ಪಷ್ಟತೆ ಇತ್ತು.

'ನಾನು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಕಾರಣಕ್ಕಾಗಿ ತಂದೆಯವರ ಆರೋಗ್ಯ ಹಾಳಾಯಿತು' ಎಂದು ಯಾವುದೋ ಒಂದು ಟಿವಿ ಶೋನಲ್ಲಿ ಕುಮಾರಣ್ಣ ಬಿಕ್ಕಿಬಿಕ್ಕಿ ಅತ್ತಿದ್ದರು. ಈಗ ಅವರು ಅದೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆಂದರೆ ಏನು ಅರ್ಥ?

ಅವರು ತಮ್ಮ ದಾರಿ ಬಗ್ಗೆ ಸ್ಪಷ್ಟವಾಗಿದ್ದರು ,
ದಾರಿ ತಪ್ಪಿದ್ದು ಅವರ ಪರವಾಗಿ ಬ್ಯಾಟಿಂಗ್, ಬೌಲಿಂಗ್ ಮಾಡಿದವರು.

ಫೇಸ್‌ಬುಕ್ ಬರಹ: ದಿನೇಶ್ ಅಮಿನ್ ಮಟ್ಟು (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)

Advertisement
Advertisement
Recent Posts
Advertisement