Advertisement

ಮಂಗಳೂರು: ಸೈಂಟ್ ಜೆರೋಜಾ ಶಾಲೆಯಲ್ಲಿ ನಿಜಕ್ಕೂ ನಡೆದದ್ದು ಏನು?

Advertisement

ಬರಹ: ದಿನೇಶ್ ಹೆಗ್ಡೆ ಉಳೆಪಾಡಿ
(ಲೇಖಕರು ಜನಪ್ರಿಯ ವಕೀಲರು, ಮಂಗಳೂರು)

ನಮ್ಮ ನೆಚ್ಚಿನ ನೊಬೆಲ್ ಪ್ರಶಸ್ತಿ ವಿಜೇತ ಕವಿಯಾದ ರಬೀಂದ್ರನಾಥ ಟಾಗೋರ್ ಅವರ “Work is worship“ ಎಂಬ ಕವಿತೆಯನ್ನು ಇಂಗ್ಲಿಷ್ ಪಠ್ಯಪುಸ್ತಕದಲ್ಲಿ ಸರಕಾರದ ಶಿಕ್ಷಣ ಇಲಾಖೆ ಸೇರಿಸಿತ್ತು.
ಈ ಪಠ್ಯವನ್ನು ಸೈಂಟ್ ಜೆರೋಜಾ ಶಾಲೆಯ ಶುದ್ಧ ಇಂಗ್ಲೀಷ್ ಭಾಷಾ ಶಿಕ್ಷಕಿ ಶಾಲೆಯಲ್ಲಿ ಸಂಪೂರ್ಣ ಇಂಗ್ಲಿಷ್ ನಲ್ಲಿ ಬೋಧಿಸುತ್ತಿದ್ದರು.

ಈ ಕವಿತೆಯಲ್ಲಿ ಕವಿ ರಬೀಂದ್ರನಾಥ್ ಟಾಗೋರ್ ರವರು ದೇವರನ್ನು ಕಾಣುವ ಬಗೆ ಹೇಗೆ ಮತ್ತು ದೇವರನ್ನು ಪೂಜಿಸುವವ ಹೇಗೆ ಇರಬೇಕು ಎಂಬುದನ್ನು ವಿವರಿಸುತ್ತಾರೆ.

ತೊರೆದು ಬಿಡು ಆ ನಿನ್ನ ಮಂತ್ರ ಪಠಣಗಳನ್ನು
ಸುಮ್ಮನೆ ಕುಳಿತುಕೊಳ್ಳ ಬೇಡ
ದೇವರು ಗುಡಿ ಚರ್ಚು ಮಸೀದಿಗಳಲ್ಲಿ ಇಲ್ಲ
ಕಣ್ಣನ್ನು ತೆರೆದು ನೋಡು. ಇಲ್ಲಿ ಇದ್ದಾನೆ
ನೇಗಿಲ ಯೋಗಿಯೊಳಗೆ ಇದ್ದಾನೆ
ಕಠಿಣ ಪರಿಶ್ರಮಿಯಲ್ಲಿ ಇದ್ದಾನೆ
ಶುದ್ಧತೆಯ ಹೆಸರಲ್ಲಿ ಮೈಗೆ ಸ್ನಾನ ಮಾಡುವವನಲ್ಲಿ ಇಲ್ಲ
ಮೂಢ ಮಡಿವಂತಿಕೆಯಲ್ಲಿ ಇಲ್ಲ
ಮೂಢ ಸಂಪ್ರದಾಯದಲ್ಲಿ ಇಲ್ಲ
ಇಳಿದು ಬಾ ಈ ದೂಳಿನ ಮಣ್ಣಿಗೆ
ಪರಿಶ್ರಮ ಪಟ್ಟು ದುಡಿದು ಕೆಲಸ ಮಾಡಿದರೆ ನೀನು ದೇವರ ಕೃಪೆಗೆ ಪಾತ್ರನಾಗುತ್ತಿ

ಈ ಭಾವಾರ್ಥ ಉಳ್ಳ ಕವಿತೆಯನ್ನು ಭೋದಿಸುವಾಗ ಶಿಕ್ಷಕಿಯೊಬ್ಬಳಿಗೆ ಅದನ್ನು ಮಕ್ಕಳಿಗೆ ಅರ್ಥಮಾಡಿಸಲು ಅವರ ಪ್ರಾಯಕ್ಕೆ ಅನುಗುಣವಾಗಿ ಉದಾಹರಣೆ ಸಹಿತ ವಿವರಿಸುವ ಸ್ವಾತಂತ್ರ್ಯ ಇದೆ.

ಹೀಗೆ ವಿವರಿಸುವಾಗ ಶಿಕ್ಷಕಿ “ದೇವರು ನಮ್ಮ ಹೃದಯದಲ್ಲಿ ಇದ್ದಾನೆ. ನಾವು ಇನ್ನೊಬ್ಬರನ್ನು. ಗೌರವಿಸಬೇಕು. ಇನ್ನೊಬ್ನರ ಬಗ್ಗೆ ಅಸೂಯೆ ಪಡಬಾರದು. ಇನ್ನೊಬ್ಬರನ್ನು ಕೊಲ್ಲುವುದರಿಂದ ನಮಗೆ ದೇವರ ಕೃಪೆ ದೊರೆಯುವುದಿಲ್ಲ”
ಎಂದು ಹೇಳಿದರು.
ಮಕ್ಕಳು ಅವರವರ ಮನೆಗೆ ಹೋದರು.
ಮರುದಿವಸ ನಾಲ್ಕು ಮಂದಿ ತಾಯಂದಿರು ಶಾಲೆಗೆ ಬಂದರು.

ಆಗ ಶಿಕ್ಷಕಿ ಬೇರೊಂದು ಕೆಲಸದಲ್ಲಿ ಹೊರಗೆ ಹೋಗಿದ್ದರು.
ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕಿಯನ್ನು ಕರೆದು ವಿಚಾರಿಸುತ್ತೇನೆ ಎಂದರು.
ಶಿಕ್ಷಕಿ ಬಂದಾಗ, ಶಾಲಾ ಮುಖ್ಯೋಪಾದ್ಯಾಯಿನಿ ಮಕ್ಕಳ ತಾಯಿಯಂದಿರ ಆಕ್ಷೇಪಣೆಗಳನ್ನು ಅವರ ಗಮನಕ್ಕೆ ತಂದರು.
ತಾನು ತರಗತಿಯಲ್ಲಿ ಹೇಳದ ವಿಚಾರಗಳನ್ನು ತಾಯಂದಿರು ಹೇಳಿದ್ದಾರೆ ಎಂದು ತಿಳಿದಾಗ ಶಿಕ್ಷಕಿಗೆ ಆಘಾತವಾಯಿತು.
ಕೂಡಲೇ ಬಂದಿದ್ದು ತಾಯಿಯಂದಿರ ಮೊಬೈಲ್ಗೆ ಶಿಕ್ಷಕಿ ಫೋನ್ ಮಾಡುತ್ತಾರೆ. ಆತಾಯಿ ನಾನು ಸ್ವಲ್ಪ ಬ್ಯುಸಿ ಇದ್ದೇನೆ ಎಂದು ಹೇಳುತ್ತಾರೆ.

ಶಿಕ್ಷಕಿ ಮತ್ತೂ ಒತ್ತಾಯ ಮಾಡುತ್ತಾರೆ.”ನೀವು ಹತ್ತು ನಿಮಿಷ ಪುರುಸೊತ್ತು ಮಾಡಿಕೊಂಡು ಬನ್ನಿ. ನಾನು ತರಗತಿಯಲ್ಲಿ ಯಾವ ಅರ್ಥದಲ್ಲಿ ಪಾಠ ಮಾಡಿದ್ದೇನೆ ಎಂದು ತಿಳಿಸುತ್ತೇನೆ. ದಯವಿಟ್ಟು ಬನ್ನಿ ಎಂದು ಹೇಳುತ್ತಾರೆ”. ಆತಾಯಿ ನಾಳೆ ಬರುತ್ತೇನೆ ಎಂದು ಫೋನ್ ಕಟ್ ಮಾಡುತ್ತಾರೆ.
ಶಿಕ್ಷಕಿ ಬೇರೆ ಕೆಲಸಕ್ಕೆ ಹೋಗುತ್ತಾರೆ.

ಅದಾಗಲೇ ಸಂಘಟನೆಯೊಂದರ ವ್ಯಕ್ತಿಯೊಂದಿಗೆ ಮಹಿಳೆಯೊಬ್ಬಳು ಸೇಂಟ್ ಜೆರೋಜಾ ಶಾಲೆಯ ಶಿಕ್ಷಕಿಯ ಬಗ್ಗೆ ಹೇಳಿದ್ದಾರೆ ಎನ್ನಲಾದ ಸಂಭಾಷಣೆಯ ತುಣುಕು ವೈರಲ್ ಆಗುತ್ತದೆ.
ಕೂಡಲೇ, ಕೆಲವು ಸಂಘಟನೆಯವರೊಂದಿಗೆ ಆ ನಾಲ್ಕು ತಾಯಂದಿರು ಬರುತ್ತಾರೆ.
ನಮ್ಮ ಶಾಸಕ ವೇದವ್ಯಾಸ್ ಕಾಮತ್ ಶಾಲೆಯೊಳಗೆ ನುಗ್ಗುತ್ತಾರೆ.
ಅಲ್ಲಿಯ ಶಿಕ್ಷಕಿಗೆ ಮೇಲಾಗಿ ಅಲ್ಲಿಯ ಆಡಳಿತ ನಡೆಸುವ ರೆವರೆಂಡ್ ಫಾದರ್ ಗೆ ಸೊಂಟಕ್ಕಿಂತ ಕೆಳಗಿನ ಭಾಷೆಯಲ್ಲಿ ಬೈಯುತ್ತಾರೆ.

ಪೊಲೀಸ್ ಕಮಿಷನರ್ ಮತ್ತು ಡಿಸಿ ಬರುತ್ತಾರೆ.
ಡಿಡಿಪಿಐ ಅವರನ್ನು ಬರ ಮಾಡಿಸುತ್ತಾರೆ.
ಶಿಕ್ಷಕಿಯನ್ನು ಕೂಡಲೇ ಅಮಾನತು ಮಾಡಬೇಕು ಎಂದು ಡಿಸಿ ಮತ್ತು ಕಮಿಷನರ್ ಶಾಲಾ ಆಡಳಿತ ಮಂಡಳಿಗೆ ಆದೇಶಿಸುತ್ತಾರೆ.

ಯಾವುದೇ ವಿಚಾರಣೆ ನಡೆಸದೆ ಉದ್ಯೋಗಿಯೊಬ್ಬರ ಅಮಾನತು ಮಾಡಲು ಆಗುವುದಿಲ್ಲ ಎಂದು ಆಡಳಿತ ಮಂಡಳಿ ಡಿಸಿ ಮತ್ತು ಕಮಿಷನರ್ ರವರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಾರೆ.

ಆಗ ಕಮಿಷನರ್ ಮತ್ತು ಡಿಸಿ ಯವರು ಹೊರಗಡೆ ಜನ ಆಕ್ರೋಶಿತರಾಗಿದ್ದಾರೆ. ನೀವು ಶಿಕ್ಷಕಿಯನ್ನು ಅಮಾನತು ಪಡಿಸಿ ಆ ಆದೇಶವನ್ನು ಹೊರಗಡೆ ಇರುವ ಜನರಿಗೆ ಓದಿ ಹೇಳಬೇಕು. ನಮಗೆ ಇಲ್ಲಿ ಲಾ ಅಂಡ್ ಆರ್ಡರ್ ಸಮಸ್ಯೆ ಉಂಟಾಗಿದೆ. ಹಿಂಸೆ ಉಂಟಾದರೆ ನೀವೇ ಜವಾಬ್ದಾರಿ ಅನ್ನುತ್ತಾರೆ.

ಬೇರೆ ವಿಧಿ ಇಲ್ಲದೆ ಶಾಲಾ ಆಡಳಿತ ಮಂಡಳಿ ಶಿಕ್ಷಕಿಯನ್ನು ಅಮಾನತು ಮಾಡಿ ಆ ಆದೇಶವನ್ನು ಹೊರಗಡೆ ಸೇರಿದ್ದ ಜನರ ಎದುರು ಓದುತ್ತಾರೆ.

ಅದಾಗ್ಯೂ ಈವರೆಗೂ ಯಾವುದೇ ಮಕ್ಕಳಾಗಲಿ, ಪೋಷಕರಾಗಲಿ ತರಗತಿಯಲ್ಲಿ ಶಿಕ್ಷಕಿಯ ಯಾವ ಶಬ್ದಗಳನ್ನು ಹೇಳಿ ಧರ್ಮದ ಅವಹೇಳನ ಮಾಡಿದ್ದಾರೆ ಎಂದು ಹೇಳಿ ಶಾಲಾ ಆಡಳಿತ ಮಂಡಳಿಗೆ ದೂರು ಸಲ್ಲಿಸಿಲ್ಲ.

ದೂರು ಇಲ್ಲದೇ, ವಿಚಾರಣೆ ಇಲ್ಲದೇ ಅಮಾಯಕ ಶಿಕ್ಷಕಿಯೊಬ್ಬರ ಅಮಾನತು ನಡೆದಿರುವುದು, ಯಾವುದೇ ತಪ್ಪು ಮಾಡದ ಶಿಕ್ಷಕಿಗೆ ಶಿಕ್ಷೆ ನೀಡಿರುವುದು ನಮ್ಮನಾಗರಿಕ ಸಮಾಜ ತಲೆತಾಗಿಸುವಂತಾಗಿದೆ.

Advertisement
Advertisement
Recent Posts
Advertisement