Advertisement

ಮಾರ್ಚ್ 12: ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ!

Advertisement

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆಯವರು ಮಾರ್ಚ್ 12 ಮಂಗಳವಾರ ಸಂಜೆ 4 ಗಂಟೆಗೆ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳಲಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊರ್ಗಿ ಮೂಲದ ಜಯಪ್ರಕಾಶ್ ಹೆಗ್ಡೆಯವರು ಕಾಂಗ್ರೆಸ್ ಪಕ್ಷದಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ 2012ರ ಉಪಚುನಾವಣೆಯಲ್ಲಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿ ತಮ್ಮ ಜನಪರ ಕಾರ್ಯಗಳಿಂದ ಜನಪ್ರಿಯರಾಗಿದ್ದರು. ಶ್ರೀಯುತರು ವೃತ್ತಿಯಲ್ಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಚಂದ್ರಶೇಖರ ಹೆಗ್ಡೆಯವರ ಪುತ್ರರು.

ನಿರಂತರ 14 ವರ್ಷಗಳ ಕಾಲ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸತತವಾಗಿ ಜಯಗಳಿಸಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದ ಹೆಗ್ಡೆಯವರು ಕ್ಷೇತ್ರ ಪುನರ್ವಿಂಗಡನೆಯ ಕಾರಣಕ್ಕೆ ಬ್ರಹ್ಮಾವರ ಕ್ಷೇತ್ರ ಮಾಯವಾದಾಗ 2008ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ಕುಂದಾಪುರ ಕ್ಷೇತ್ರದಿಂದ ಸ್ಪರ್ದಿಸಿ ಪರಾಭವಗೊಂಡಿದ್ದರು. ಆ ನಂತರ 2009ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ದಿಸಿ ಬಿಜೆಪಿಯ ಸದಾನಂದ ಗೌಡರ ವಿರುದ್ಧವಾಗಿ ಸ್ಪರ್ದಿಸಿ ಪರಾಜಿತರಾಗಿದ್ದರು. ಆ ನಂತರದಲ್ಲಿ 2012 ಲೋಕಸಭಾ ಉಪಚುನಾವಣೆಯಲ್ಲಿ ಬಹುಮತ ಗಳಿಸಿ ಜಯಗಳಿಸಿದ್ದರು. ಆ ನಂತರ ನಡೆದ ಪರಿಷತ್ ಚುನಾವಣೆಯ ಸಮಯದಲ್ಲಿ ಉಂಟಾದ ಭಿನ್ನಾಭಿಪ್ರಾಯದ ಕಾರಣಕ್ಕಾಗಿ ಕಾಂಗ್ರೆಸ್ ತೊರೆದು 2017ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು.

ಬಹುಶಃ ಸಂಪೂರ್ಣವಾಗಿ ಜನಪರ ಸಿದ್ದಾಂತದ ಅಡಿಪಾಯದಲ್ಲಿ ರಾಜಕಾರಣ ಮಾಡುತ್ತಲೇ ಬಂದಿದ್ದ ಹೆಗ್ಡೆಯವರಿಗೆ ಬಿಜೆಪಿ ಆ ನಂತರದಲ್ಲಿ ಯಾವುದೇ ಚುನಾವಣೆಯಲ್ಲಿ ಸ್ಪರ್ದಿಸಲು ಅವಕಾಶ ನೀಡದಿದ್ದುದು ಅವರ ಅಭಿಮಾನಿಗಳ ವಲಯದಲ್ಲಿ ಬಿಜೆಪಿಯ ವಿರುದ್ಧವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಗ್ಡೆಯವರನ್ನು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಸರಕಾರಕ್ಕೆ ಜಾತಿಗಣತಿ ವರದಿ ಸಲ್ಲಿಕೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಹೆಗ್ಡೆಯವರನ್ನು ಮುಂದುವರಿಕೆ ಮಾಡಿದ್ದರು‌. ಪೆಬ್ರವರಿ ಅಂತ್ಯದಲ್ಲಿ ಹೆಗ್ಡೆಯವರು ತಮ್ಮ ತಂಡದ ಜೊತೆ ವರದಿಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಿದ್ದರು.

ಇದೀಗ ಜಯಪ್ರಕಾಶ್ ಹೆಗ್ಡೆಯವರ ಕಾಂಗ್ರೆಸ್ ಸೇರ್ಪಡೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಸಂಪೂರ್ಣವಾಗಿ ಬದಲಾಯಿಸಲಿದೆ, ಈ ಚುನಾವಣೆಯಲ್ಲಿ ಖಂಡಿತವಾಗಿಯೂ ಹೆಗ್ಡೆಯವರು ಜಯಗಳಿಸಲಿದ್ದಾರೆ ಎಂಬ ಅಭಿಪ್ರಾಯ ಕ್ಷೇತ್ರದಾದ್ಯಂತ ಮತದಾರರ ವಲಯದಲ್ಲಿ ಇರುವುದನ್ನು ಕನ್ನಡ ಮೀಡಿಯಾ ಡಾಟ್ ಕಾಂ ವರದಿಗಾರರು ಗಮನಿಸಿದ್ದಾರೆ.

Advertisement
Advertisement
Recent Posts
Advertisement