Advertisement

ಗೃಹಲಕ್ಷ್ಮಿ ಯೋಜನೆ ಲೋಕಾರ್ಪಣೆ- ಶಾಸಕರ ಗೈರು: ಜನವಿರೋಧಿ ನಿಲುವಾಗಿದೆ- ವಿಕಾಸ್ ಹೆಗ್ಡೆ ಆರೋಪ.

Advertisement

ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರದ ಬಗ್ಗೆ ಮಾತನಾಡುವ ಜಿಲ್ಲೆಯ ಬಿಜೆಪಿ ಶಾಸಕರುಗಳು ಇವತ್ತು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಪೂರ್ವನಿಗದಿತ ಕಾರ್ಯಕ್ರಮವಾದ ಗೃಹಲಕ್ಷ್ಮಿ ಯೋಜನೆಯ ಲೋಕಾರ್ಪಣೆಯನ್ನು ಬಹಿಷ್ಕರಿಸಿದ್ದು ಅವರ ಜನವಿರೋಧಿ ನಿಲುವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ.

ಅದರಲ್ಲೂ ಗೃಹಲಕ್ಷ್ಮಿ ಯೋಜನೆಯು ವಿಶೇಷವಾಗಿ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಸರ್ಕಾರಿ ಕಾರ್ಯಕ್ರಮವಾಗಿದ್ದು ಇಂತಹ ಕಾರ್ಯಕ್ರಮದಿಂದ ಜಿಲ್ಲೆಯ ಶಾಸಕರುಗಳು ದೂರ ಉಳಿದದ್ದು ಶಾಸಕರ ಮಹಿಳಾ ವಿರೋಧಿ ನಿಲುವಾಗಿದೆ ಎಂದವರು ಖೇದ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಪ್ರಚಾರದ ಸಭೆಯುದ್ಧಕ್ಕೂ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳನ್ನು ಟೀಕಿಸಿದ ಬಿಜೆಪಿ ಶಾಸಕರುಗಳಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿರುವುದು ಅರಗಿಸಿಕೊಳ್ಳಲು ಸಾಧ್ಯವಾಗದೆ ಇರಬಹುದು ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರುಗಳು ಸರ್ಕಾರದ ಕಾರ್ಯಕ್ರಮಗಳನ್ನು ಬಹಿಷ್ಕರಿಸಿದಂತೆ ಸರ್ಕಾರದಿಂದ ಸಿಗುವ ವೇತನ, ಭತ್ಯೆ, ಅನುದಾನ ಇತ್ಯಾದಿ ಸೌಲಭ್ಯಗಳನ್ನು ತಿರಸ್ಕರಿಸುತ್ತಾರೆಯೇ ಎಂದವರು ಪ್ರಶ್ನಿಸಿದ್ದಾರೆ.

ಸರ್ಕಾರಿ ಕಾರ್ಯಕ್ರಮ ಹಾಗೂ ಇವರಿಗೆ ಸಿಗುವ ಸೌಲಭ್ಯ ಎಲ್ಲವೂ ಕೂಡ ಜನರ ತೆರಿಗೆ ಹಣದಿಂದಲೇ ಸಿಗುವಂತಹುದು. ಏನೇ ಆದರೂ ಕೂಡ ಸರ್ಕಾರಿ ಕಾರ್ಯಕ್ರಮವನ್ನು ಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯಕ್ರಮಗಳಿಂದ ದೂರ ಉಳಿಯುವುದು ಅವರ ಕ್ಷೇತ್ರದ ಜನತೆಗೆ ಮಾಡಿದ ದ್ರೋಹವಾಗುತ್ತದೆ. ಬಿಜೆಪಿ ಶಾಸಕರು ಬರಲಿ ಬಾರದೆ ಇರಲಿ ಗೃಹಲಕ್ಷ್ಮಿ ಯೋಜಯಡಿ ಜಿಲ್ಲೆಯ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮನೆಯ ಯಜಮಾನಿಯರಿಗೆ ಮಾಸಿಕ ಎರಡು ಸಾವಿರ ರೂಪಾಯಿ ಅವರ ಖಾತೆಗೆ ಜಮಾ ಆಗುತ್ತದೆ. ಕೇವಲ ಭಾವನಾತ್ಮಕ ವಿಚಾರಗಳ ಮೂಲಕ ಅಧಿಕಾರ ಹಿಡಿಯುವ ಬಿಜೆಪಿಯವರು ಯಾವತ್ತೂ ಅಭಿವೃದ್ಧಿ ಹಾಗೂ ಜನಹಿತ ಕಾರ್ಯಕ್ರಮಗಳ ವಿರೋಧಿಗಳು ಎನ್ನುವುದು ಸಾಬೀತಾಗುತ್ತಿದೆ ಎಂದವರು ಪತ್ರಿಕಾ ಹೇಳಿಕೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement
Advertisement
Recent Posts
Advertisement