Advertisement

ಸ್ವಾತಂತ್ರ್ಯ ಹೋರಾಟಗಾರ್ತಿ, ಸೇವಾದಳದ ಮುಂದಾಳು "ಉಮಾಬಾಯಿ ಕುಂದಾಪುರ''

Advertisement

ತನ್ನ ಹದಿಮೂರನೇ ವಯಸ್ಸಿನಲ್ಲಿ ಮದುವೆ, 25ನೇ ವಯಸ್ಸಿಗೆ ವೈಧವ್ಯ, 29ನೇ ವಯಸ್ಸಿಗೆ ಸ್ವಾತಂತ್ರ್ಯ ಹೋರಾಟ, 30ನೇ ವಯಸ್ಸಿಗೆ ಸೇವಾದಳದ ನಾಯಕಿ ಪಟ್ಟ, ನಲವತ್ತನೇ ವಯಸ್ಸಿಗೆ ಜೈಲು ಶಿಕ್ಷೆ, ಬ್ರಿಟಿಷರಿಂದ ಚಿತ್ರಹಿಂಸೆ, ಭೂಗತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ತನ್ನ ಮನೆಯಲ್ಲೇ ಆಶ್ರಯ, ಭಗಿನಿ ಸಮಾಜ ನಿರ್ಮಾಣ… ಸ್ವಾತಂತ್ರ್ಯಾ ನಂತರ ಸರ್ಕಾರ ನೀಡಲು ಮುಂದೆ ಬಂದ ಎಲ್ಲ ಹುದ್ದೆ, ಗೌರವ ಕೊಡುಗೆಗಳನ್ನು ಧಿಕ್ಕರಿಸಿ ಸರಳ ಜೀವನ….

ನೂರು ವರ್ಷಗಳ ಪರಿಪೂರ್ಣ ಜೀವನವನ್ನು ಅನುಭವಿಸಿದ ಉಮಾಬಾಯಿ ಕುಂದಾಪುರ ಎಂಬ ದಿಟ್ಟ ಮಹಿಳೆ ಬದುಕಿದ ರೀತಿಯಿದು. ಸಹನಾಮಯಿ ಉಮಾಬಾಯಿ ಅವರು ತಾನು ಜನಿಸಿದ ಭರತ ಭೂಮಿಗೆ ಸಲ್ಲಿಸಿದ ನಿಸ್ವಾರ್ಥ ಸೇವೆಯಿದು…

ಉಮಾಬಾಯಿ ಅವರ ಜನ್ಮನಾಮ ಭವಾನಿ ಗೋಳಿಕೇರಿ. ಮೂಲತಃ ಮಂಗಳೂರಿನವರಾದ ಕೃಷ್ಣರಾವ್ ಮತ್ತು ಜುಂಗಾಬಾಯಿ ಅವರ ಮಗಳಾದ ಭವಾನಿ ತಮ್ಮ 13ನೇ ವಯಸ್ಸಿನಲ್ಲಿ ಮದುವೆಯಾಗಿದ್ದು ಕುಂದಾಪುರದ ಸಂಜೀವ್ ರಾವ್ ಅವರನ್ನು. ಅಲ್ಲಿಂದ ಬಳಿಕ ಅವರು ಉಮಾಬಾಯಿಯಾಗಿ ಬದಲಾದರು.

ಮದುವೆಯ ಬಳಿಕ ಮುಂಬೈಗೆ ತೆರಳಿದ ಅವರಿಗೆ ಒಬ್ಬರು ಗಾಡ್ ಫಾದರ್ ಸಿಕ್ಕಿದರು. ಅವರು ಇನ್ನಾರೂ ಅಲ್ಲ, ಉಮಾ ಅವರ ಮಾವ ಆನಂದ ರಾವ್. ಆ ಹೊತ್ತಿಗೆ ಸಮಾಜ ಸುಧಾರಣೆ, ಮಹಿಳಾ ಸಬಲೀಕರಣದಲ್ಲಿ ಬಲವಾದ ನಂಬಿಕೆಯನ್ನು ಹೊಂದಿದ್ದ ಅವರು ಮುಂಬೈನಲ್ಲಿ 'ಗೌಂಡ್-ದೇವಿ ಮಹಿಳಾ ಸಮಾಜ'ವನ್ನು ಸ್ಥಾಪಿಸಿದ್ದರು. ಆಗ ಆನಂದ ರಾವ್ ಅವರಿಗೆ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಸಿಕ್ಕವರು ಅವರ ಸೊಸೆ ಉಮಾ. ಆಕೆಗೆ ಸಂಪೂರ್ಣ ಬೆಂಗಾವಲಾಗಿ, ಪ್ರೇರಕಶಕ್ತಿಯಾಗಿ ನಿಂತ ಅವರು, ಆಕೆಗೆ ಮುಂದಿನ ಶಿಕ್ಷಣವನ್ನು ಪಡೆಯಲು ಸಾಧ್ಯವಿರುವ ಎಲ್ಲ ಸಹಕಾರವನ್ನು ನೀಡಿದರು. ಮೆಟ್ರಿಕ್ಯುಲೇಷನ್ ಮುಗಿಸಿದ ತಕ್ಷಣ ಉಮಾ ಮಹಿಳೆಯರಿಗೆ ಶಿಕ್ಷಣ ನೀಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

1920 ಅವರ ಜೀವನದ ಬಹುದೊಡ್ಡ ತಿರುವು. ಆ ವರ್ಷದ ಆಗಸ್ಟ್ ತಿಂಗಳ ಮೊದಲ ದಿನವೇ ಮುಂಬೈನಲ್ಲಿ ನಿಧನರಾದ ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರ ಅಂತಿಮ ಯಾತ್ರೆಯ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಅವಕಾಶ. ಅಪ್ರತಿಮ ದೇಶಪ್ರೇಮಿ ತಿಲಕರಿಗೆ ಅಂತಿಮ ವಿದಾಯವನ್ನು ಕೋರಲು ಅಂದು ಮುಂಬೈನಲ್ಲಿ ಸೇರಿದ್ದ ಜನಸಾಗರವನ್ನು ಕಂಡು ಅವರು ನಿಬ್ಬೆರಗಾಗಿ ಹೋಗುತ್ತಾರೆ. ಐದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದ ಮೆರವಣಿಗೆಯದು. ಕೆಲವೇ ಕೆಲವು ಪೊಲೀಸರು. ಆ ಜನಸ್ತೋಮ, ಕಾಂಗ್ರೆಸ್ ಕಾರ್ಯಕರ್ತರು, ಸ್ವಯಂಸೇವಕರು ಎಲ್ಲವನ್ನೂ ಕರಾರುವಕ್ಕಾಗಿ ಸಂಘಟಿಸಿದ ರೀತಿಗೆ ಮಾರುಹೋದ ಉಮಾಬಾಯಿ ಆ ಕ್ಷಣದಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಲು ನಿರ್ಧರಿಸಿ ಬಿಡುತ್ತಾರೆ. ಮರುದಿನದಿಂದಲೇ ಖಾದಿ ಸೀರೆಯನ್ನು ತೊಡಲು ಶುರು ಮಾಡುತ್ತಾರೆ. 'ಸ್ವದೇಶಿ' ಎಂಬ ನಾಟಕವನ್ನು ಬರೆದು ಸ್ವತಃ ಅದರಲ್ಲಿ ಅಭಿನಯಿಸುತ್ತಾರೆ. ಮನೆ ಮನೆಗೆ ತೆರಳಿ ಮಹಿಳಾ ಸ್ವಯಂಸೇವಕರನ್ನು ನೇಮಕ ಮಾಡಿದರು. ಚಳವಳಿಯಲ್ಲಿ ಧುಮುಕುವಂತೆ ಉತ್ತೇಜನ ನೀಡುತ್ತಾರೆ.

ಇಂತಹ ಹೊತ್ತಿನಲ್ಲೇ ಅವರ ಪತಿ ಸಂಜೀವ ರಾವ್ ಕ್ಷಯರೋಗಕ್ಕೆ ಬಲಿಯಾಗುತ್ತಾರೆ. ಮಗನನ್ನು ಕಳೆದುಕೊಂಡ ಆನಂದ ರಾವ್ ಕುಗ್ಗಿಹೋಗುತ್ತಾರೆ. ಆದರೆ ದೃತಿಗೆಡುವ ಸಂದರ್ಭ ಅದಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸೊಸೆಯನ್ನು ಸಂತೈಸುವ ಹೊಣೆಯನ್ನು ಅವರು ನಿಭಾಯಿಸುತ್ತಾರೆ. ಉಮಾಬಾಯಿ ಕುಗ್ಗದಂತೆ ಆಕೆಯ ಬೆಂಬಲಕ್ಕೆ ನಿಲ್ಲುತ್ತಾರೆ. ಇಂತಹ ಸ್ಥಿತಿಯಲ್ಲಿ ಮುಂಬೈನಲ್ಲಿ ಬಹಳ ಕಾಲ ಕಳೆಯುವುದು ಅವರಿಗೆ ಸಾಧ್ಯವಾಗುವುದಿಲ್ಲ. ಮುಂಬೈನಿಂದ ಹುಬ್ಬಳ್ಳಿಗೆ ಬಂದ ಆನಂದ ರಾವ್ ಅಲ್ಲಿ ಕರ್ನಾಟಕ ಪ್ರೆಸ್ ಆರಂಭಿಸಿದರು. ಅದರ ಆವರಣದಲ್ಲಿಯೇ ಹೆಣ್ಣುಮಕ್ಕಳಿಗಾಗಿಯೇ 'ತಿಲಕ್ ಕನ್ಯಾ ಶಾಲೆ'ಯನ್ನು ಆರಂಭಿಸಿ ಅದರ ಸಂಪೂರ್ಣ ಹೊಣೆಯನ್ನು ಸೊಸೆ ಉಮಾಬಾಯಿ ಅವರಿಗೆ ವಹಿಸುತ್ತಾರೆ.

ಆ ಹೊತ್ತಿಗೆ (1921) ಅಮೆರಿಕದಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿದ್ದ ಡಾ.ಎನ್.ಎಸ್.ಹರ್ಡಿಕರ್ ಅವರು ಭಾರತಕ್ಕೆ ಮರಳಿ ಬರುತ್ತಾರೆ. ಯುವಕರನ್ನು ಸಂಘಟಿಸುವ ಏಕೈಕ ಉದ್ದೇಶದಿಂದ ಹಿಂದೂ ಸೇವಾದಳವನ್ನು ಆರಂಭಿಸುತ್ತಾರೆ. ಹುಬ್ಬಳ್ಳಿ-ಧಾರವಾಡ ಸೇವಾದಳದ ಮುಖ್ಯ ಕೇಂದ್ರವಾಗುತ್ತದೆ. ದೇಶದ ನಾನಾ ಭಾಗಗಳ ಯುವಕರು ಹುಬ್ಬಳಿಗೆ ಬಂದು ತರಬೇತಿ ಪಡೆಯಲು ಆರಂಭಿಸುತ್ತಾರೆ. ಉಮಾಬಾಯಿ ಈ ಸೇವಾದಳದ ಮಹಿಳಾ ಘಟಕದ ನಾಯಕಿಯಾಗಿ ನೇಮಕ ಹೊಂದುತ್ತಾರೆ. ಅಲ್ಲಿಂದ ಮುಂದೆ ಅವರಿಗೆ ಬಿಡುವಿಲ್ಲದ ಕೆಲಸ. ಸಾರ್ವಜನಿಕ ಬದುಕಿನಲ್ಲಿ ಅವರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ.

ಮುಂದಿನ ಮೂರೇ ವರ್ಷಗಳಲ್ಲಿ, ಅಂದರೆ 1924ರಲ್ಲಿ ಬೆಳಗಾವಿಯಲ್ಲಿ ಗಾಂಧಿ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಮಹಾ ಅಧಿವೇಶನ. ಅದೊಂದು ಐತಿಹಾಸಿಕ ಕಾರ್ಯಕ್ರಮ. ಆ ಅಧಿವೇಶನದ ಸಂಘಟನೆಯ ಹೊಣೆ ಹರ್ಡಿಕರ್ ಮತ್ತು ಉಮಾಬಾಯಿ ಹೆಗಲಿಗೆ. ಇದನ್ನು ದೊಡ್ಡ ಸವಾಲಾಗಿ ಸ್ವೀಕರಿಸಿದ ಉಮಾ ಅವರು, ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ 150ಕ್ಕೂ ಅಧಿಕ ಮಹಿಳಾ ಸ್ವಯಂಸೇವಕರನ್ನು ನೇಮಕ ಮಾಡುತ್ತಾರೆ. ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದವರು ವಿಧವೆಯರು ಎನ್ನುವುದು ವಿಶೇಷ. ಇಡೀ ದೇಶದಲ್ಲಿ ಈ ಪ್ರಮಾಣದಲ್ಲಿ ಮಹಿಳಾ ಸ್ವಯಂಸೇವಕರನ್ನು ನೇಮಕ ಮಾಡಿದ್ದು ಅದೇ ಮೊದಲು. ಮಿದು ಮಾತಿನ, ಆದರೆ ಕಠಿಣ ನಿಲುವಿನ ಉಮಾಬಾಯಿ ಅವರು ಈ ಮೂಲಕ ತಮ್ಮ ಸಂಘಟನಾ ಚಾತುರ್ಯವನ್ನು ಸಾಬೀತು ಮಾಡಿಬಿಡುತ್ತಾರೆ.

ಬೆಳಗಾವಿ ಅಧಿವೇಶನದ ಬಳಿಕ ಅವರ ಸ್ವಾತಂತ್ರ್ಯ ಹೋರಾಟ ಇನ್ನಷ್ಟು ತೀವ್ರಗೊಳ್ಳುತ್ತದೆ. ಉಮಾಬಾಯಿ ಅವರ ಹಿಂದೆ ಬಹುದೊಡ್ಡ ಮಹಿಳಾ ಸೈನ್ಯವೇ ಬಂದು ನಿಲ್ಲುತ್ತದೆ. ಪ್ರತಿಭಟನೆ, ಸತ್ಯಾಗ್ರಹ ನಿರಂತರವಾದಾಗ 1932ರಲ್ಲಿ ಉಮಾಬಾಯಿ ಅವರನ್ನು ಬಂಧಿಸಿ ಯರವಾಡ ಜೈಲಿಗೆ ತಳ್ಳುತ್ತಾರೆ ಪೊಲೀಸರು. ಇಂತಹ ಸಂದಿಗ್ದ ಸ್ಥಿತಿಯಲ್ಲಿದ್ದಾಗಲೇ ಅವರ ಮಾವ ಆನಂದ ರಾವ್ ನಿಧನರಾಗುತ್ತಾರೆ. ಆದರೆ, ಜೀವನದ ಎಲ್ಲ ಔನತ್ಯಕ್ಕೆ ಕಾರಣರಾದ ಮಾವ ನಿಧನರಾದ ಸುದ್ದಿ ಅವರನ್ನು ತಲುಪಿದಾಗ ವಾರವೇ ಕಳೆದು ಹೋಗಿತ್ತು. ಹಾಗಿದ್ದೂ ಪೊಲೀಸರು ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಸುತಾರಾಂ ಒಪ್ಪಲಿಲ್ಲ. ಬದಲಾಗಿ, ಆನಂದ ರಾವ್ ನಡೆಸಿಕೊಂಡು ಬರುತ್ತಿದ್ದ ಕರ್ನಾಟಕ ಪ್ರೆಸ್ ಮತ್ತು ಹೆಣ್ಣುಮಕ್ಕಳ ಶಾಲೆಗೆ ಬೀಗ ಜಡಿಯುತ್ತಾರೆ. ಉಮಾಬಾಯಿ ಅವರೇ ನಡೆಸುತ್ತಿದ್ದ ಮಹಿಳಾ ಸಂಘಟನೆ 'ಭಗಿನಿ ಮಂಡಲ'ವನ್ನು ಕಾನೂನು ಬಾಹಿರ ಎಂದು ಘೋಷಿಸಲಾಗುತ್ತದೆ. ಅಂತಿಮವಾಗಿ ಜೈಲು ಶಿಕ್ಷೆಯನ್ನು ಮುಗಿಸಿ ಹೊರಬಂದ ಉಮಾಬಾಯಿ ಅವರಿಗೆ ಇದ್ದುದು ಹುಬ್ಬಳ್ಳಿಯಲ್ಲಿ ಚಿಕ್ಕದೊಂದು ಮನೆ ಮಾತ್ರ. ಆದರೆ ಅವರು ಕಿಂಚಿತ್ತೂ ಎದೆಗುಂದುವುದಿಲ್ಲ. ಎಲ್ಲವನ್ನೂ ನಿರ್ಲಿಪ್ತವಾದ ಮನಸ್ಸಿನಿಂದ ಎದುರಿಸುತ್ತಾರೆ.

ಬಂಧನದ ಅವಧಿ ಮುಗಿದು ಹೊರಬಂದವರಿಗೆ ವಿಶ್ರಮಿಸಲು ಸಮಯವೇ ಇರಲಿಲ್ಲ. ಆ ಹೊತ್ತಿನಲ್ಲಿ ಕರನಿರಾಕರಣೆ ಮತ್ತು ಉಪ್ಪಿನ ಸತ್ಯಾಗ್ರಹ ಉಗ್ರ ಸ್ವರೂಪವನ್ನು ಪಡೆದುಕೊಂಡಿತ್ತು. ದೇಶದ ಮೂಲೆ ಮೂಲೆಯಲ್ಲಿ ಪ್ರತಿಭಟನೆಗಳು ನಿತ್ಯದ ಮಾತಾಗಿತ್ತು. ಪೊಲೀಸರು ಸತ್ಯಾಗ್ರಹಿಗಳನ್ನು ಮನಬಂದಂತೆ ಥಳಿಸುತ್ತಿದ್ದರು, ಹಿಡಿದು ಜೈಲಿಗೆ ಅಟ್ಟುತ್ತಿದ್ದರು. ಇವರಲ್ಲಿ ಬಹುತೇಕರು ಮಹಿಳಾ ಸೇವಾದಳದ ಕಾರ್ಯಕರ್ತರು. ಜೈಲಿನಿಂದ ಬಿಡುಗಡೆಯಾಗಿ ಹೊರಬರುತ್ತಿದ್ದ ಅಷ್ಟೂ ಮಂದಿಗೆ ಆಶ್ರಯ ಒದಗಿಸಿ, ಊಟ, ತಿಂಡಿ ನೀಡಿ ಅಮ್ಮನಂತೆ ಆರೈಕೆ ಮಾಡಿದ್ದು ಇದೇ ಸಹನಾಮಯಿ ಉಮಾಬಾಯಿ ಅವರು. ಇಷ್ಟು ಮಾತ್ರವಲ್ಲದೆ ಅನೇಕ ಮಂದಿಗೆ ಮರಳಿ ಊರಿಗೆ ತೆರಳಲು ಹಣದ ಸಹಾಯ ಮಾಡಿದವರು ಉಮಾ. ಇವರಲ್ಲಿ ಬಹಳ ಮಂದಿ ಟಾಂಗವಾಲಾಗಳೂ ಇದ್ದರು. ಇಂತಹ ನೂರಾರು ಕಾರ್ಯಕರ್ತರ ಪಾಲಿಗೆ ಉಮಾ ಮಮತಾಮಯಿಯಾಗಿದ್ದರು.

1934ರ ಜನವರಿ 15ರಂದು ಬಿಹಾರದಲ್ಲಿ ಬರಸಿಡಿಲಿನಂತೆ ಎರಗಿದ್ದು ಭೂಕಂಪ. ಮೊದಲೇ ಹಿಂದುಳಿದ ರಾಜ್ಯ ಎಂಬ ಪಟ್ಟ ಪಡೆದಿದ್ದ ಬಿಹಾರ ಈ ಪ್ರಾಕೃತಿಕ ವಿಕೋಪದಿಂದ ತತ್ತರಿಸಿ ಹೋಗುತ್ತದೆ. ಸುಮಾರು ಹನ್ನೆರಡು ಸಾವಿರ ಮಂದಿ ಸಾವನ್ನಪ್ಪುತ್ತಾರೆ. ಲಕ್ಷಾಂತರ ಜನ ನಿರಾಶ್ರಿತರಾಗುತ್ತಾರೆ. ಅನೇಕ ನಗರಗಳೇ ನಿರ್ನಾಮವಾಗುತ್ತವೆ. ಇಂತಹ ಕೆಟ್ಟ ಸನ್ನಿವೇಶದಲ್ಲಿ ತಮ್ಮ ಮಹಿಳಾ ಸ್ವಯಂಸೇವಕರ ದಂಡಿನೊಂದಿಗೆ ಸ್ವಯಂಪ್ರೇರಣೆಯಿಂದ ಬಿಹಾರಕ್ಕೆ ಧಾವಿಸಿದ ಉಮಾಬಾಯಿ ಆ ಜನರ ಕಣ್ಣೀರು ಒರೆಸುವ ಕಾರ್ಯದಲ್ಲಿ ತೊಡಗುತ್ತಾರೆ. ಹಗಲಿರುಳೂ ದಣಿವರಿಯದೇ ಸೇವೆ ಸಲ್ಲಿಸುತ್ತಾರೆ. ಇವರ ನಿಸ್ವಾರ್ಥ ಸೇವೆಯನ್ನು ಕಂಡು ರಾಷ್ಟ್ರೀಯ ನಾಯಕರಾದ ರಾಜೇಂದ್ರ ಪ್ರಸಾದ್ ಮತ್ತು ಆಚಾರ್ಯ ಕೃಪಲಾನಿ ಅವರು ನಿಜಕ್ಕೂ ಬೆರಗಾಗುತ್ತಾರೆ.

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬ್ರಿಟಿಷ್ ಅಧಿಕಾರಿಗಳು, ಪೊಲೀಸರು ಸತ್ಯಾಗ್ರಹಿಗಳನ್ನು ಕಂಡರೆ ಉರಿದುಬೀಳುತ್ತಿದ್ದರು. ನಿರ್ದಯವಾಗಿ ದಂಡಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ತಲೆತಪ್ಪಿಸಿಕೊಂಡು ತಿರುಗುತ್ತಿದ್ದ ಅನೇಕ ಮಂದಿ ಕಾರ್ಯಕರ್ತರಿಗೆ ಅಮ್ಮನಂತೆ ತುತ್ತು ತಿನ್ನಿಸಿದವರು ಉಮಾಬಾಯಿ. ಸ್ವಾತಂತ್ರ್ಯ ಬರುವುದಕ್ಕೆ ಒಂದು ವರ್ಷ ಮೊದಲು ಗಾಂಧೀಜಿ ಅವರು ಸ್ಥಾಪಿಸಿದ ಕಸ್ತೂರ್ಬಾ ಟ್ರಸ್ಟಿನ ಕರ್ನಾಟಕ ಶಾಖೆಗೆ ಉಮಾ ಅವರನ್ನು ಪ್ರತಿನಿಧಿಯಾಗಿ ನೇಮಕ ಮಾಡಲಾಗುತ್ತದೆ. ಆರೋಗ್ಯ ಕಾರ್ಯಕ್ರಮಗಳು, ಮಕ್ಕಳ ಕಲ್ಯಾಣ, ವಯಸ್ಕ ಶಿಕ್ಷಣದಂತಹ ಕಾರ್ಯಕ್ರಮಗಳಲ್ಲಿ ಗ್ರಾಮ ಸೇವಕರಿಗೆ ತರಬೇತಿ ನೀಡಿ ಗ್ರಾಮೀಣ ಅಭಿವೃದ್ಧಿಗೆ ಸಹಕರಿಸುವುದು ಈ ಟ್ರಸ್ಟಿನ ಮುಖ್ಯ ಉದ್ದೇಶವಾಗಿತ್ತು. ಆದರೆ ಇಂತಹ ಸಂಘಟನೆಗೆ ಸರ್ಕಾರದಿಂದ ಯಾವುದೇ ಬಿಡಿಗಾಸೂ ಸಿಗುತ್ತಿರಲಿಲ್ಲ. ಇದನ್ನೊಂದು ಸವಾಲಾಗಿ ಸ್ವೀಕರಿಸಿದ ಉಮಾಬಾಯಿ ಅವರು ಅಕ್ಷರಶಃ ಭಿಕ್ಷೆ ಬೇಡಿ ನಿಧಿ ಸಂಗ್ರಹ ಮಾಡುತ್ತಾರೆ. ಮೊದಲು ನಿರ್ಗತಿಕರು, ಅನಾಥರು, ಯುವವಿಧವೆಯರು, ಅವಿವಾಹಿತ ಅನಾಥರು ಮತ್ತು ಇತರ ನತದೃಷ್ಟ ಮಹಿಳೆಯರನ್ನು ನೇಮಕ ಮಾಡಿಕೊಳ್ಳುತ್ತಾರೆ. ಅವರಿಗೆ ಬದುಕನ್ನು ನೀಡುವ ಕಲೆ, ಕರಕುಶಲ ಕಲೆಗಳ ತರಬೇತಿ ನೀಡುತ್ತಾರೆ. ಅವರ ಜೀವನೋದ್ಧಾರಕ್ಕೆ ಕಾರಣರಾಗುತ್ತಾರೆ. ಆ ಕಾಲದಲ್ಲಿ ಉಮಾಬಾಯಿ ಅವರು ಮಹಿಳೆಯರ ಪಾಲಿಗೆ ನಿಜವಾದ ಕಣ್ಮಣಿಯಾಗಿದ್ದರು ಎಂದರೆ ಅತಿಶಯೋಕ್ತಿಯಲ್ಲ.

ದೇಶ ಸ್ವಾತಂತ್ರ್ಯ ಗಳಿಸಿದ ಬಳಿಕ ಅನೇಕ ಪ್ರಶಸ್ತಿ-ಪುರಸ್ಕಾರ, ಹುದ್ದೆ, ಸೌಲಭ್ಯ ಎಲ್ಲವೂ ಅವರನ್ನು ಹುಡುಕಿಕೊಂಡು ಬಂದವು. ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವ ತಾಮ್ರಪತ್ರಗಳನ್ನು ಕೂಡ ಉಮಾ ತಿರಸ್ಕರಿಸಿದರು. ಪಿಂಚಣಿಯೂ ಬೇಡವೆಂದರು. ಹುಬ್ಬಳ್ಳಿಯಲ್ಲಿ ತಮ್ಮ ಮಾವನ ಸ್ಮರಣಾರ್ಥ ನಿರ್ಮಿಸಿದ 'ಆನಂದ ಸ್ಮೃತಿ' ಎನ್ನುವ ಸಣ್ಣ ಕುಟೀರದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದ ಉಮಾಬಾಯಿ ಅವರು ಬದುಕಿದ್ದು ಭರ್ತಿ ನೂರು ವರ್ಷ (1892-1992). ಉಮಾಬಾಯಿ ಮೂಲತಃ ಮಂಗಳೂರಿನವರಾಗಿ ಹುಬ್ಬಳ್ಳಿಯಲ್ಲಿ ತಮ್ಮ ಜೀವನದ ಸಾರ್ಥಕ್ಯವನ್ನು ಕಂಡರೂ ಕೂಡ ಅವರು ಕುಂದಾಪುರದ ಸೊಸೆ ಎಂಬ ಹೆಮ್ಮೆ ನಮ್ಮದು.

(ಮೂಲ: ಕರ್ನಾಟಕ ಸಾಹಿತ್ಯ ಅಕಾಡೆಮಿಯವರು "ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ" ಮಾಲಿಕೆಯಲ್ಲಿ ಪ್ರಕಟಿಸಿದ ಬಸರೂರು- ಕುಂದಾಪುರ ಕೃತಿಯಲ್ಲಿ ಪ್ರಕಟವಾದ ಬರಹ)

-ಮಂಜುನಾಥ್ ಚಾಂದ್.

ಹುಬ್ಬಳ್ಳಿಯ 'ಸಂಯುಕ್ತ ಕರ್ನಾಟಕ' ಕಚೇರಿಯ ಜಾಗ ಉಮಾಬಾಯಿ ಕುಂದಾಪುರ ಅವರದ್ದು. ಅದನ್ನು ಉಚಿತವಾಗಿ ಕೊಟ್ಟಿದ್ದಾರೆ: ಸನತ್ ಕುಮಾರ್ ಬೆಳಗಲಿ (ಹಿರಿಯ ಪತ್ರಕರ್ತರು)

Advertisement
Advertisement
Recent Posts
Advertisement