Advertisement

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿಯಾಗಿ ಸುದೀರ್ ಮುರೊಳ್ಳಿ?

Advertisement

ಇದೀಗ 2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಕಾಂಗ್ರೆಸ್- ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಪಕ್ಷಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರೀಯೆಯಲ್ಲಿ ಅತ್ಯಂತ ಬ್ಯುಸಿಯಾಗಿವೆ. ಈ ನಡುವೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಆಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದಿಂದ ಜನಪರ ಚಿಂತಕ, ಕೆಪಿಸಿಸಿ ವಕ್ತಾರ, ಖ್ಯಾತ ನ್ಯಾಯವಾದಿ ಸುದೀರ್ ಕುಮಾರ್ ಮುರೊಳ್ಳಿಯವರ ಹೆಸರು ಅಂತಿಮಗೊಂಡಿರುವ ಕುರಿತು ವರದಿಯಾಗಿದೆ.

(ಸುದೀರ್ ಕುಮಾರ್ ಮುರೊಳ್ಳಿರವರು ಪತ್ನಿ, ಸಾಹಿತಿ, ಉಪನ್ಯಾಸಕಿ ದೀಪಾ ಹಿರೆಗುತ್ತಿಯವರ ಜೊತೆಗೆ)

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಎಂದೊಡನೆ ಒಂದೆಡೆ ಮಲೆನಾಡು ಮತ್ತೊಂದೆಡೆ ಕರಾವಳಿಯ ಚಿತ್ರಣಗಳು ಕಣ್ಣಮುಂದೆ ಬಂದು ನಿಲ್ಲುತ್ತದೆ. 'ದೇಶದಲ್ಲೆ ಮೊತ್ತ ಮೊದಲಿಗೆ ಕಾಫಿ ಬೆಳೆದ ಸ್ಥಳ' ಎಂಬ ಕೀರ್ತಿಯನ್ನು ಕಾಫಿನಾಡು ಚಿಕ್ಕಮಗಳೂರು ಪಡೆದಿದೆ. ದೇಶದಪ್ರಧಾನಿಯಾಗಿದ್ದ ಇಂದಿರಾಗಾಂಧಿ ಯವರ ಕಷ್ಟದ ಕಾಲದಲ್ಲಿ ರಾಜಕೀಯ ಮರುಹುಟ್ಟು ನೀಡಿದ ಕ್ಷೇತ್ರ ಎಂದು ಕೂಡ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ದೇಶದಾದ್ಯಂತ ಗುರುತಿಸಲ್ಪಟ್ಟಿದೆ. ಅಂತಹ ಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಜನಿಸಿದ ಖ್ಯಾತ ಯುವ ನ್ಯಾಯವಾದಿ ಸುದೀರ್ ಕುಮಾರ್ ಮುರೊಳ್ಳಿ ರಾಜ್ಯದಾದ್ಯಂತ ಇದೀಗ ಪ್ರಗತಿಪರರ ವಲಯದಲ್ಲಿ ಅತ್ಯಂತ ದೊಡ್ಡದಾದ ಹೆಸರನ್ನು ಮಾಡಿದವರು. ರಾಜ್ಯದಾದ್ಯಂತ ಯಾವುದೇ ಹೋರಾಟ ಇರಲಿ ಅಲ್ಲಿ ಸುದೀರ್ ಮುರೊಳ್ಳಿ ಇದ್ದೇ ಇರುತ್ತಾರೆ ಎಂದು ಅವರ ಅಭಿಮಾನಿಗಳು ಬಹುಸಂಭ್ರಮದಿಂದ ಹೇಳಿಕೊಳ್ಳುತ್ತಾರೆ.

ನಿಜ, ತವರು ಜಿಲ್ಲೆ ಚಿಕ್ಕಮಗಳೂರು ಮತ್ತು ಪಕ್ಕದ ಜಿಲ್ಲೆ ಉಡುಪಿಯೂ ಸೇರಿದಂತೆ ರಾಜ್ಯದ ಅದ್ಯಾವ ಭಾಗದಲ್ಲೆ ಅನ್ಯಾಯ- ಅಕ್ರಮ ನಡೆಯಲಿ ರಾತ್ರಿ ಬೆಳಗಾಗುವುದರೊಳಗೆ ಅಲ್ಲಿಗೆ ತೆರಳಿ ಅನ್ಯಾಯಕ್ಕೊಳಗಾದವರ ಕಣ್ಣೀರು ಒರೆಸುವ, ಅವರುಗಳಿಗೆ ತತ್ ಕ್ಷಣದ ಪರಿಹಾರ ಒದಗಿಸುವ ಮತ್ತು ಅವರಿಗೆ ದೀರ್ಘಕಾಲದ ನ್ಯಾಯ ಕೊಡಿಸಲು ಹೋರಾಡುವ ಸುದೀರ್ ಮುರೊಳ್ಳಿ ಎರಡೂ ಜಿಲ್ಲೆಗಳ ಪ್ರಗತಿಪರ ಸಂಘಟನೆಗಳ ಹಾಗೂ ಕಾಂಗ್ರೆಸ್ ಪಕ್ಷದ ತಳಮಟ್ಟದ ಪ್ರತಿ ಕಾರ್ಯಕರ್ತರ ಹೆಸರು ಹಿಡಿದು ಕರೆಯುವಷ್ಟು ಸ್ನೇಹದ ಸಂಬಂಧವನ್ನು ಹೊಂದಿದ್ದಾರೆ.

(ರಾಹುಲ್ ಗಾಂಧಿ, ಸಿದ್ದರಾಮಯ್ಯ, ಕೆ.ಸಿ ವೇಣುಗೋಪಾಲ್ ಜೊತೆ ಸುದೀರ್ ಮುರೊಳ್ಳಿ)

ಹಾಗೆಯೇ ಕ್ಷೇತ್ರದಾದ್ಯಂತ ಕೋಮು ಸಾಮರಸ್ಯ ಸಂಪೂರ್ಣವಾಗಿ ಹದಗೆಟ್ಟುಹೋಗಿರುವ ಈ ಕಾಲಘಟ್ಟದಲ್ಲಿ ಸುದೀರ್ ಮುರೊಳ್ಳಿಯವರಂತಹ ಕಾನೂನು ಜ್ಞಾನದ ಜೊತೆಗೆ ಹೋರಾಟದ ಕಿಚ್ಚು ಹೊಂದಿರುವ ನಾಯಕರ ಅಗತ್ಯತೆ ಇದೆ. ಪಕ್ಷ ಅವರಿಗೆ ಟಿಕೇಟು ಕೊಟ್ಟಲ್ಲಿ ಖಂಡಿತವಾಗಿಯೂ ಅವರನ್ನು ಗೆಲ್ಲಿಸುವ ಹೊಣೆಗಾರಿಕೆ ತಮ್ಮದು ಎನ್ನುತ್ತಾರೆ ಕಾಂಗ್ರೆಸ್ ಪಕ್ಷದ ಎರಡೂ ಜಿಲ್ಲೆಗಳ ತಳಮಟ್ಟದ ಕಾರ್ಯಕರ್ತರು ಮತ್ತು ಜನಪರ ಸಂಘಟನೆಗಳ ಕಾರ್ಯಕರ್ತರು.

ಈ ನಡುವೆ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೊದಲ ಹೆಸರಾಗಿ ಸಂಸದೆ ಶೋಭಾ ಕರೆಂದ್ಲಾಜೆ ಇದ್ದರಾದರೂ ಕೂಡ ಈ ಬಾರಿ ಅವರಿಗೆ ಟಿಕೇಟ್ ದೊರೆಯಲಾರದು ಎಂಬ ಅಭಿಪ್ರಾಯ ಕ್ಷೇತ್ರದಾದ್ಯಂತ ಬಿಜೆಪಿ ಕಾರ್ಯಕರ್ತರ ವಲಯದಲ್ಲೆ ಇದೆ. ಹಾಗೆಯೇ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತು ಆ ನಂತರ ಬಿಜೆಪಿ ಸೇರ್ಪಡೆಗೊಂಡಿದ್ದ ಪ್ರಮೋದ್ ಮಧ್ವರಾಜ್, ಸಿ.ಟಿ ರವಿ ಮುಂತಾದವರ ಹೆಸರು ಕೂಡ ಇದೆ. ಆದರೆ ಹಲವಾರು ಕಾರಣಗಳಿಂದ ಈ ಬಾರಿ ಬಿಜೆಪಿಯ ಸೋಲು ಖಚಿತ ಎಂಬ ವಾತಾವರಣ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬೂತ್‌ಗಳ ಮಟ್ಟದಲ್ಲಿದೆ.

ಬಹುಶಃ ಅದಕ್ಕೆ 2014 ರಿಂದಲೂ ಈ ಕ್ಷೇತ್ರದ ಸಂಸದೆಯಾಗಿರುವ ಸಂಸದೆ ಶೋಭಾ ಕರೆಂದ್ಲಾಜೆಯವರು ಕ್ಷೇತ್ರದ ಯಾವುದೇ ಸಮಸ್ಯೆಯ ಪರಿಹಾರದ ಕುರಿತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸದಿದ್ದುದು, ಕ್ಷೇತ್ರಕ್ಕೆ ಯಾವುದೇ ಹೊಸ ಯೋಜನೆಯನ್ನು ತರಲು ಪ್ರಯತ್ನಿಸದಿದ್ದುದು ಮತ್ತು ಕ್ಷೇತ್ರಕ್ಕೆ ಬಂದಾಗಲೆಲ್ಲಾ 'ಕ್ಷೇತ್ರದ ಸಮಸ್ಯೆಗಳ ಕುರಿತಾದ ಪತ್ರಕರ್ತರ ಪ್ರಶ್ನೆ'ಗಳಿಗೆ ಉತ್ತರಿಸದೇ ಸದಾ ಲವ್ ಜಿಹಾದ್, ಕೊರೊನಾ ಜಿಹಾದ್, ವ್ಯಾಕ್ಸಿನ್ ಜಿಹಾದ್, ಹಿಜಾಬ್, ಅಝಾನ್, ಹಲಾಲ್, ಉರಿಗೌಡ, ನಂಜೇಗೌಡ ಮುಂತಾದ ಕಪೋಲಕಲ್ಪಿತ ವಿಚಾರಗಳ ಕುರಿತು ಮಾತನಾಡಿದ್ದು ಮತ್ತು ಆ ಕುರಿತು ಜನರು ರೋಸಿ ಹೋಗಿರುವುದು ಕೂಡ ಬಿಜೆಪಿಯ ಸೋಲಿಗೆ ಕಾರಣವಾಗಲಿದೆ.

ಜೊತೆಗೆ ಕೇಂದ್ರದ ಮೋದಿ ಸರಕಾರ ದೇಶದ ಲಕ್ಷಾಂತರ ಕೋಟಿ ರೂಪಾಯಿ ಬೆಲೆಬಾಳುವ ಸರಕಾರಿ ಆಸ್ತಿಗಳನ್ನು ಗುಜರಾತಿ ಮಾರ್ವಾಡಿಗಳಿಗೆ ಮೂರುಕಾಸಿನ‌ ಬೆಲೆಗೆ ಮಾರಾಟ ಮಾಡುತ್ತಿರುವುದು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕೇವಲ 390ರೂ ಇದ್ದ ಅಡುಗೆ ಅನಿಲದ ಬೆಲೆಯನ್ನು ಮೋದಿ ಸರಕಾರ ಅದೇ ಗುಜರಾತಿ ಉಧ್ಯಮಿಗಳಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ 1200ರೂಪಾಯಿಗೆ ಏರಿಸಿರುವುದು. ಪೆಟ್ರೋಲ್ ಡಿಸೇಲ್ ಬೆಲೆಯ ಮೇಲೆ ವಿಪರೀತ ಟ್ಯಾಕ್ಸ್ ಹೇರುವ ಮೂಲಕ ಕಟ್ಟಡ ಸಾಮಗ್ರಿಗಳ ಮತ್ತು ದಿನಬಳಕೆಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾದದ್ದು ಮತದಾರರು ಈ ಬಾರಿ ಬಿಜೆಪಿಯನ್ನು ಸೋಲಿಸುವ ಪಣ ತೊಡಲು ಕಾರಣವಾಗಿದೆ. ಹಾಗೆಯೇ ಅದರ ಪರಿಣಾಮವಾಗಿಯೇ ರಾಜ್ಯದಲ್ಲಿ ಈ ಬಾರಿ ಸಿದ್ದರಾಮಯ್ಯ ಸರಕಾರ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿದೆ ಎಂಬುದು ಮೇಲುನೋಟಕ್ಕೆ ಕಂಡುಬರುವ ಅಂಶವಾಗಿದೆ. ಮತ್ತು ಅದೆಲ್ಲದಕ್ಕೂ ಮುಖ್ಯವಾಗಿ ಸಿದ್ದರಾಮಯ್ಯ ಸರಕಾರ ಜಾರಿಗೊಳಿಸಿರುವ 'ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, ಮಹಿಳೆಯರ ಬ್ಯಾಂಕ್ ಖಾತೆಗೆ ಎರಡು ಸಾವಿರ ರೂಪಾಯಿ, ಅನ್ನಭಾಗ್ಯ ಯೋಜನೆಡಿ 10 ಕೆಜಿ ಅಕ್ಕಿ' ಯೋಜನೆಗಳು ಮತದಾರರು ಲೋಕಸಭಾ ಚುನಾವಣೆಯಲ್ಲಿಯೂ ಕೂಡ ಬದಲಾವಣೆ ಬಯಸಲು ಬಹುಮುಖ್ಯ ಕಾರಣವಾಗಬಹುದು ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ.

Advertisement
Advertisement
Recent Posts
Advertisement