Advertisement

'ಬ್ರಿಟೀಷರು ಗಾಂಧಿಯನ್ನೇಕೆ ಕೊಲ್ಲಲಿಲ್ಲ' ಎಂಬ ಘೋಡ್ಸೆವಾದಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ!

Advertisement

ಲೇಖನ: ಅನಾಮಿಕ

ಭಗತ್ ಸಿಂಗ್, ರಾಜ್ ಗುರು, ಸುಖದೇವ್, ಮಂಗಲ್ ಪಾಂಡೆ, ತಾತ್ಯಾ ಟೋಪೆ, ಅಶ್ಫಾಕ್ ಉಲ್ಲಾ ಖಾನ್ , ಚಾಪೇಕರ್ ಸಹೋದರರು, ಮಾಸ್ಟರ್ ದಾ (ಸೂರ್ಯ ಸೇನ್ ) ಮುಂತಾದವರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಚಂದ್ರಶೇಖರ್ ಆಜಾದ್, ಲಾಲಾ ಲಜಪತ್ ರಾಯ್ ತರದವರನ್ನು ಎನ್ಕೌಂಟರ್ ಮಾಡಿದರು. ಆದರೆ ಗಾಂಧಿಗೇಕೆ ಏನೂ ಮಾಡಲಿಲ್ಲ?

ಇಂತದ್ದೊಂದು ಪ್ರಶ್ನೆಯೊಂದು ಘೋಡ್ಸೆವಾದಿಗಳಿಂದ ಆಗಾಗ ತೂರಿ ಬರುತ್ತದೆ. ವಾಸ್ತವದಲ್ಲಿ ಅದು ಪ್ರಶ್ನೆಯಲ್ಲ, ಅನುಮಾನ ಹುಟ್ಟಿಸುವ ಯಾ ಇತಿಹಾಸ ಓದದ ಜನಸಾಮಾನ್ಯರಲ್ಲಿ ಗೊಂದಲ ಮೂಡಿಸುವ ಪರಿ!

*ಬ್ರಿಟಿಷರು ಗಾಂಧಿಗೆ 'ಏನೂ ಮಾಡಲಿಲ್ಲ' ಎನ್ನುವುದು ಶುದ್ಧ ತಪ್ಪು. ಹಲವಾರು ಬಾರಿ ಜೈಲಿನ ರುಚಿ ತೋರಿಸಿದ್ದಾರೆ. ಗಾಂಧಿ ಸುಮಾರು 6 ವರ್ಷಗಳಷ್ಟು ಕಾಲ ಸೆರೆವಾಸ ಅನುಭವಿಸಿದ್ದಾರೆ. ಇಷ್ಟಾಗಿಯೂ ಬ್ರಿಟಿಷರು ಗಾಂಧಿಯನ್ನು ಕೊಲ್ಲದಿರಲು ಅನೇಕ ಕಾರಣಗಳಿದ್ದವು.

*ಮೊದಲನೆಯದಾಗಿ ಮೇಲೆ ಉದಾಹರಿಸಿದ, ಬ್ರಿಟಿಷರು ಗಲ್ಲಿಗೇರಿಸಿದ ಎಲ್ಲರೂ ತೀವ್ರಗಾಮಿಗಳು. ಬ್ರಿಟಿಷ್ ಅಧಿಕಾರಿಯನ್ನೋ, ಕಚೇರಿಯನ್ನೋ, ಶಸ್ತ್ರಾಗಾರವನ್ನೋ ಉಡಾಯಿಸಿದವರು, ಕುಮ್ಮಕ್ಕು ನೀಡಿದವರು.

*ಗಾಂಧಿ, ಕಾನೂನಾತ್ಮಕವಾಗಿ ಗಲ್ಲಿಗೇರಿಸುವಂತಹ ಅವಕಾಶಗಳನ್ನೇ ಬ್ರಿಟಿಷರಿಗೆ ಕೊಡಲಿಲ್ಲ. ಮುಂದುವರೆದ ಸುಸಂಸ್ಕೃತ ಸಮಾಜಗಳು / ಸರ್ಕಾರಗಳು ಸುಸಂಸ್ಕೃತತೆಯನ್ನು ತೋರಿಕೆಗಾದರೂ ಮುಂದುವರೆಸಲು ಬಯಸುತ್ತವೆ. ನ್ಯಾಯಯುತ ವಿಚಾರಣೆಯಿಲ್ಲದೆ ಜನರನ್ನು ಕೊಲ್ಲುವುದನ್ನು ಬಯಸುವುದಿಲ್ಲ.

*“ಭಾರತವೆಂಬ ಒಂದು ಅಶಿಕ್ಷಿತ, ಅನಾಗರೀಕ, ಅರಾಜಕತೆಯ ದೇಶವನ್ನು ಆಧುನಿಕ ನಾಗರೀಕತೆಯತ್ತ ನಡೆಸುತ್ತಿದ್ದೇವೆ” ಎಂದು ಬ್ರಿಟಿಷರು ವಿಶ್ವಕ್ಕೆ ತೋರಿಸಿಕೊಂಡಿದ್ದರು. ನ್ಯಾಯಯುತವಾಗಿ, ನಿಷ್ಪಕ್ಷಪಾತವಾಗಿ ತಾವಿಲ್ಲಿ ಆಡಳಿತ ನಡೆಸುತ್ತಿದ್ದೇವೆ ಎಂದು ವಿಶ್ವಕ್ಕೆ ಬಿಂಬಿಸಿಕೊಂಡಿದ್ದರು. ಅದಕ್ಕಾಗೇ ಕೋರ್ಟುಗಳನ್ನು ಸ್ಥಾಪಿಸಿದ್ದರು.

*ಗಾಂಧಿ ಹೋರಾಟದ ವಿಧಾನ, 'ಅಹಿಂಸಾತ್ಮಕ ಧರಣಿ', ಆಮೂಲಾಗ್ರವಾಗಿ ವಿಭಿನ್ನವಾಗಿತ್ತು. ಅಲ್ಲಿಯರೆಗೂ ಪ್ರಪಂಚ ಕಂಡಿದ್ದ ಹೋರಾಟವೆಂದರೆ ಕ್ರಾಂತಿ, ದಂಗೆ, ಗೆರಿಲ್ಲಾ ಯುದ್ಹ, ಬಾಂಬು, ಬಂದೂಕು. ಆಗೆಲ್ಲ ಹೋರಾಟವೆಂದರೆ ಸರ್ಕಾರಿ ಆಸ್ತಿಗಳಿಗೆ ಬೆಂಕಿ ಹಚ್ಚುವುದು, ರೈಲ್ವೆ ಹಳಿಗಳನ್ನು ಉಡಾಯಿಸುವುದು , ರಸ್ತೆ, ಸೇತುವೆಗಳನ್ನು ಹಾಳು ಮಾಡುವುದು. ಅವೇನೂ ಇಲ್ಲದೆ ಹೊಡೆದರೂ ಹೊಡೆಸಿಕೊಂಡು ಸುಮ್ಮನೆ ಕುಳಿತುಕೊಳ್ಳುವವರನ್ನು ಏನು ಮಾಡುವುದು !? ಬ್ರಿಟಿಷರಿಗೂ ತಿಳಿಯಲಿಲ್ಲ‼️

ಬ್ರಿಟಿಷರು ವಿಚಾರಣೆಯಿಲ್ಲದೆ ಕೂಡ ಹಲವರನ್ನು ಕೊಂದಿದ್ದಾರೆ. ಗಾಂಧಿಯನ್ನೇಕೆ ಬಿಟ್ಟರು?

*ಮೊದಲನೇ ಮಹಾಯುದ್ಧ ಮುಗಿಸಿ ಧರಣಿಯ ಆಳ-ಅಂತರಾಳ ತಿಳಿಯುವಷ್ಟರಲ್ಲಿ, ಗಾಂಧಿ ಮಹಾತ್ಮರಾಗಿದ್ದರು. 1920 ರಷ್ಟರಲ್ಲಿ, ಭಾರತದಲ್ಲಷ್ಟೇ ಅಲ್ಲ, ಬ್ರಿಟನ್ನಿನಲ್ಲೂ ಗಾಂಧಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದಿದ್ದರು. ಗಾಂಧೀ ಹತ್ಯೆ ಅಲ್ಲಿನ ಆಳುವ ಪಕ್ಷಕ್ಕೇ ಮುಳ್ಳಾಗಿಬಿಡುತ್ತಿತ್ತು.

*ಗಾಂಧಿಯವರ ಬಗ್ಗೆ ಅಮೆರಿಕಾ ಕೂಡ ಸಹಾನುಭೂತಿ ಹೊಂದಿತ್ತು ಮತ್ತು ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ , ಭಾರತ ಮತ್ತು ಗಾಂಧಿಯ ಬಗ್ಗೆ ಬ್ರಿಟನ್‌ ಇನ್ನೂ ಹೆಚ್ಚಿನ ಮೃದುತ್ವವನ್ನು ತೋರಿಸಬೇಕೆಂದು ಬಲವಾಗಿ ಒತ್ತಾಯಿಸುತ್ತಿದ್ದರು.

*1857 ರ ಸಿಪಾಯಿ ದಂಗೆ ಮತ್ತು 1922 ರ ಚೌರಿಚೌರ ಘಟನೆಗಳಿಂದ (ಕೋಪೋದ್ರಿಕ್ತ ಗುಂಪೊಂದು ಬ್ರಿಟಿಷ್ ಪೊಲೀಸರನ್ನು ಠಾಣೆಯಲ್ಲಿ ಬಂಧಿಸಿ ಸುಟ್ಟುಹಾಕಿತ್ತು). ಬ್ರಿಟಿಷರಿಗೆ ಒಂದಂತೂ ಮನವರಿಕೆಯಾಗಿತ್ತು; ಭಾರತದಲ್ಲಿರುವ ಅಗಾಧ ಜನಸಂಖ್ಯೆಯು ದಂಗೆಯೆದ್ದರೆ, ನಿಯಂತ್ರಿಸುವುದು ಅಸಾಧ್ಯ !!!. ಭಾರತದ ಜನ ಗಾಂಧಿಯವರ ಮೇಲೆ ಅದಮ್ಯ ಪ್ರೀತಿ ಮತ್ತು ಗೌರವ ಇಟ್ಟಿದ್ದರು. ಕಾನೂನಿನ ಆಚೆ ಗಾಂಧಿಗೆ ಏನಾದರೂ ಮಾಡಿದರೆ ಇಡೀ ದೇಶ ದಂಗೆ ಏಳುತ್ತದೆ ಎಂಬ ಅತೀವ ಭಯವಿತ್ತು.

*ಎರಡನೇ ಮಹಾಯುದ್ಧಕ್ಕೆ ಬ್ರಿಟಿಷರು ಭಾರತೀಯರ ನೆರವು ಕೋರಿದರು. ಆಗ "ನೆರವಿಗೆ ಬದಲಾಗಿ ಸ್ವಾತಂತ್ರ್ಯ" ಘೋಷಿಸುವಂತೆ ಬ್ರಿಟಿಷರ ಮೇಲೆ ಒತ್ತಡ ಹೇರಲು ನೆಹರು ಬಯಸಿದ್ದರು; ಗಾಂಧಿ ಒಪ್ಪಲಿಲ್ಲ ‼️ ಬ್ಲಾಕ್ಮೇಲ್ ಮಾಡಿ ಸ್ವಾತಂತ್ರ್ಯ ಗಳಿಸಿಕೊಳ್ಳುವುದು ಗಾಂಧಿಗೆ ಸರಿ ಎನಿಸಲಿಲ್ಲ. ಬರಿ ಉದ್ದೇಶವಲ್ಲ, ದಾರಿಯೂ ಶುದ್ಧವಾಗಿರಬೇಕು ಎಂಬುದು ಅವರ ನಂಬಿಕೆ. ಸ್ವಾತಂತ್ರ್ಯ ನಂತರವೂ, ಬ್ರಿಟಿಷ್ ಮತ್ತು ಭಾರತ ಪರಸ್ಪರ ಗೌರವಿಸುವ, ಸ್ಪಂದಿಸುವ ಮಿತ್ರ ರಾಷ್ಟ್ರಗಳಾಗಿರಬೇಕೆಂದು ಗಾಂಧಿ ಬಯಸಿದ್ದರು. This is Gandhi, his purity and his foresight ‼️ ಗಾಂಧಿಯ ಇಂತಹ ಶುದ್ಧತೆ ಮತ್ತು ಯೋಚನೆಗಳು ಬ್ರಿಟಿಷರನ್ನು ದಂಗು ಬಡಿಸಿದ್ದವು. ಗಾಂಧಿ ದಕ್ಷಿಣ ಏಷ್ಯಾದಲ್ಲಿದ್ದ ಒಂದು ರೀತಿಯ ಅರಾಜಕತೆ ಮತ್ತು ಬ್ರಿಟಿಷ್ ಸಾಮ್ರಾಜ್ಯದ ನಡುವೆ ಸೇತುವೆಯಾಗಿದ್ದರು.

*ಅತ್ತ ಬ್ರಿಟನ್ನಿನಲ್ಲಿ, ವಿನ್ಸ್ಟನ್ ಚರ್ಚಿಲ್ ಗಾಂಧಿಯನ್ನು ವಿರೋಧಿಸಿದರೂ , ಲೇಬರ್ ಪಕ್ಷ ಮತ್ತು ಅದರ ನಾಯಕ ಕ್ಲೆಮೆಂಟ್ ಅಟ್ಲೀ ಗಾಂಧಿಗೆ ಬೆಂಬಲವಾಗಿದ್ದರು! ಲೇಬರ್ ಪಕ್ಷ ತನ್ನ ಪ್ರಣಾಳಿಕೆಯಲ್ಲೇ, ತಾನು ಅಧಿಕಾರಕ್ಕೆ ಬಂದರೆ ಭಾರತವನ್ನು ಸ್ವತಂತ್ರಗೊಳಿಸುವುದಾಗಿ ಹೇಳಿ ಅಧಿಕಾರ ಹಿಡಿದಿತ್ತು!

*ವಿಶ್ವ ವಿಖ್ಯಾತ ವಿಜ್ಞಾನಿ ಐನ್ಸ್ಟೀನ್ ಗಾಂಧಿಯವರಿಗೆ, 1931 ರಲ್ಲಿ ಅವರ ಹೋರಾಟವನ್ನು ಮೆಚ್ಚಿ ಪತ್ರ ಬರೆದಿರುತ್ತಾರೆ. ಗಾಂಧಿಯವರ ಬಗ್ಗೆ ಅವರು ಹೀಗೆನ್ನುತ್ತಾರೆ, " ಮಾಂಸ ರಕ್ತಗಳಿಂದಾದ ಮಾನವನೊಬ್ಬ ಈ ರೀತಿ ಬದುಕಿ, ಈ ಭೂಮಿಯ ಮೇಲೆ ಓಡಾಡಿದ್ದ ಎಂದರೆ, ಮುಂದಿನ ತಲೆಮಾರುಗಳು ನಂಬುವುದು ಕಷ್ಟ" !

*ಸಂಕ್ಷಿಪ್ತವಾಗಿ ಹೇಳುವುದಾದರೆ, ಮಹಾತ್ಮನಿಗೆ ಗುಂಡಿಕ್ಕುವುದು ಬ್ರಿಟಿಷರ ಅತ್ಯಂತ ಮೂರ್ಖತನದ ಮತ್ತು ಅಲ್ಪ-ದೃಷ್ಟಿಯ ಕೆಲಸವಾಗುತ್ತಿತ್ತು!

ಪ್ರಶ್ನೆ ಕೇಳುವವರಿಗೊಂದು ಪ್ರಶ್ನೆ:

ಸರಿ ಹಾಗಾದರೆ, ಯಾಸರ್ ಅರಾಫತ್ ಅವರನ್ನು ಇಸ್ರೇಲಿಗಳು, ನೆಲ್ಸನ್ ಮಂಡೇಲಾ ಅವರನ್ನು ದಕ್ಷಿಣ ಆಫ್ರಿಕಾದ ಬಿಳಿಯರು, ಆಂಗ್ ಸಾನ್ ಸೂಕಿ ಅವರನ್ನು ಬರ್ಮಾದ ಮಿಲಿಟರಿ ನಾಯಕತ್ವ ಏಕೆ ಹತ್ಯೆ ಮಾಡಲಿಲ್ಲ?

'ಅಹಿಂಸಾತ್ಮಕ ಚಳವಳಿ'ಯನ್ನು ಟೀಕಿಸುವ ಬಹುಪಾಲು ಘೋಡ್ಸೆವಾದಿಗಳಿಗೆ ಇದನ್ನು ಗ್ರಹಿಸಲಾಗುತ್ತಿಲ್ಲ. ಗ್ರಹಿಸಿದರೂ ಹೇಗಾದರೂ ಮಾಡಿ ಗಾಂಧಿಯ ಹೆಸರಿಗೆ ಮಸಿ ಬಳಿಯಲೇಬೇಕೆಂಬ ಕೆಟ್ಟ ಹಠ!

ನಮ್ಮ ರಾಷ್ಟ್ರಪಿತನ ಕೆಲವು ವಿಶೇಷಗಳು.

*ಜಗತ್ತಿನ ೧೦೦ ಕ್ಕೂ ಹೆಚ್ಚು ದೇಶಗಳು ಗಾಂಧೀಜಿ ಭಾವಚಿತ್ರ ಇರುವ ಪೋಸ್ಟಲ್ ಸ್ಟಾಂಪ್ ಗಳನ್ನು ಬಿಡುಗಡೆ ಮಾಡಿವೆ. ಮೊಟ್ಟ ಮೊದಲು ಬಿಡುಗಡೆಗೊಳಿಸಿದ ದೇಶ ಪೋಲಂಡ್.

*ಭಾರತ ಅಂಚೆ ಇಲಾಖೆಯು ಇಲ್ಲಿಯವರೆಗೂ ಗಾಂಧೀಜಿಯ ಭಾವಚಿತ್ರ ಇರುವ ಸುಮಾರು ೪೦ ಕ್ಕೂ ಹೆಚ್ಚು ಸ್ಟಾಂಪ್ ಮತ್ತು ೨೦೦ ಕ್ಕೂ ಹೆಚ್ಚು ಪೋಸ್ಟಲ್ ಎನ್ವಲಪ್‌ಗಳನ್ನು ಬಿಡುಗಡೆಗೊಳಿಸಿದೆ.

*ಸುಮಾರು ೪೦ ಕ್ಕೂ ಹೆಚ್ಚು ದೇಶಗಳು ಗಾಂಧೀಜಿ ಭಾವಚಿತ್ರ ಇರುವ ನಾಣ್ಯಗಳನ್ನು ಬಿಡುಗಡೆಗೊಳಿಸಿವೆ.

*ಸುಮಾರು ೮೦ ಕ್ಕೂ ಹೆಚ್ಚು ದೇಶಗಳಲ್ಲಿ ಗಾಂಧೀಜಿಯವರ ವಿವಿಧ ರೀತಿಯ ಪ್ರತಿಮೆಗಳಿವೆ.

*ಗಾಂಧೀಜಿಯವರ ಹೆಸರಿನ ರಸ್ತೆಗಳು ಸುಮಾರು ೪೦ ಕ್ಕೂ ಹೆಚ್ಚು ದೇಶಗಳಲ್ಲಿವೆ‌.

*ಗಾಂಧೀಜಿ ಮರಣ ಹೊಂದಿದ ದಿನ ಶ್ರೀಲಂಕಾ ಸರಕಾರವು ಶೋಕಾಚರಣೆ ಮಾಡಿ ತನ್ನ ರೇಡಿಯೋ ಪ್ರಸಾರವನ್ನು ೨೪ ಗಂಟೆಗಳ ಕಾಲ ಬಂದ್ ಮಾಡಿತ್ತು.

*ಗಾಂಧೀಜಿಯವರು ಬದುಕಿದ್ದಾಗಲೇ ಅವರ ಜೀವನ ಚರಿತ್ರೆ ನೊಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ರೋಮನ್ ರೋಲ್ಯಾಂಡ್ ಅವರಿಂದ ಬರೆಯಲ್ಪಟ್ಟಿತ್ತು.

*ಗಾಂಧೀಜಿಯವರು ತಮ್ಮ ಎರಡೂ ಕೈಗಳಿಂದ ಬರೆಯುತ್ತಿದ್ದರು. ಹಿಂದ್ ಸ್ವರಾಜ್ ಪುಸ್ತಕದ ಕೆಲವು ಪುಟಗಳನ್ನು ಎಡಗೈಯಿಂದ ಬರೆದಿದ್ದರು.

*ಗಾಂಧೀಜಿಯುವರು ತಮ್ಮ ಜೀವಮಾನದಲ್ಲೇ ವಿಮಾನದಲ್ಲಿ ಒಂದು ಸಾರಿಯೂ ಪ್ರಯಾಣಿಸಲಿಲ್ಲ.

*ತಮ್ಮ ಸಮಕಾಲೀನ‌ ಜಗತ್ತುನ ನಾಯಕರಲ್ಲೇ ಅತ್ಯಂತ ಹೆಚ್ಚು ಫೋಟೋಗ್ರಾಫ್‌ಗಳನ್ನು ಹೊಂದಿದ ವ್ಯಕ್ತಿ ಗಾಂಧೀಜಿ.

*ತಮ್ಮ ಜೀವಮಾನದಲ್ಲೇ ಒಮ್ಮೆಯೂ ಗಾಂಧೀಜಿ ಅಮೇರಿಕಾಕ್ಕೆ ಭೇಟಿ ನೀಡಲಿಲ್ಲ. ಆದರೆ ಅಮೇರಿಕಾ ಒಂದರಲ್ಲೇ ಗಾಂಧೀಜಿಯವರ ೩೦ ಕ್ಕೂ ಹೆಚ್ಚು ಪ್ರತಿಮೆಗಳಿವೆ.

*೧೯೯೯ ರಲ್ಲಿ ಟೈಮ್ಸ್ ಮ್ಯಾಗ್ಜೀನ್ ನಡೆಸಿದ 'ಶತಮಾನದ ವ್ಯಕ್ತಿ' ಸ್ಪರ್ಧೆಯಲ್ಲಿ ಗಾಂಧೀಜಿಗೆ ಎರಡನೇ ಸ್ಥಾನ. ಮೊದಲ ಸ್ಥಾನ ಗಾಂಧೀಜಿಯವರನ್ನು ಬಹುವಾಗಿ ಮೆಚ್ಚಿದ ಅಲ್ಬರ್ಟ್ ಐನಸ್ಟೀನ್.

*ಗಾಂಧೀಜಿಯವರಿಗೆ ಮುಂದಿನ ಎರಡು ಹಲ್ಲುಗಳು ಹರೆಯದಲ್ಲೇ ಬಿದ್ದು ಹೋಗಿದ್ದವು. ತಿನ್ನುವುದಕ್ಕಾಗಿ ಎರಡು ಹಲ್ಲುಗಳ ಸೆಟ್ ಒಂದನ್ನು ಮಾಡಿಸಿಕೊಂಡಿದ್ದರು. (ದ.ಆಫ್ರಿಕಾದಲ್ಲಿ ಬಿಳಿಯರಿಂದ ದಾಳಿಗೊಳಗಾದಾಗ ಎರಡು ಹಲ್ಲುಗಳು ಉದುರಿದ್ದವು).

*ಅಮೇರಿಕಾದ ಟೈಮ್ ಮ್ಯಾಗ್ಝೀನ್ ೧೯೩೦ ರಲ್ಲಿ 'ವರ್ಷದ ವ್ಯಕ್ತಿ' ಎಂದು ಗಾಂಧೀಜಿಯರನ್ನು ಘೋಷಿಸಿ ಮುಖಪುಟದಲ್ಲಿ ಅವರ ಭಾವಚಿತ್ರ ಪ್ರಕಟಿಸಿತ್ತು. ಇಲ್ಲಿಯವರೆಗೂ ಭಾರತದ ಯಾವ ವ್ಯಕ್ತಿಗೂ ಈ ಗೌರವ ಸಂದಿಲ್ಲ.

*ಯಾವುದೇ ಅಧಿಕಾರದಲ್ಲಿಲ್ಲದ ಗಾಂಧೀಜಿ ತೀರಿಕೊಂಡಾಗ ವಿಶ್ವಸಂಸ್ಥೆಯು ತನ್ನ ಎಲ್ಲ ೫೫ ಸದಸ್ಯ ರಾಷ್ಟ್ರಗಳ ಧ್ವಜವನ್ನು ಅರ್ಧಕ್ಕೆ ಇಳಿಸಿ ಶೋಕಾಚರಣೆ ಮಾಡಿತ್ತು. ಇದು ಇತಿಹಾಸದಲ್ಲೇ ಮೊದಲ ಬಾರಿ ಮತ್ತು ಕೊನೆಯ ಬಾರಿ ನಡೆದ ಘಟನೆ. ಮತ್ತೊಬ್ಬರಿಗೆ ಈ ರೀತಿ ಗೌರವ ಸಿಕ್ಕಿಲ್ಲ.

*ಗಾಂಧೀಜಿಯವರು ಯಾವ ದೇಶದ ವಿರುದ್ಧ ಜೀವಮಾನವೀಡಿ ಹೋರಾಡಿದರೋ ಅದೇ ದೇಶದ (ಇಂಗ್ಲೆಂಡಿನ ಲಂಡನ್ ಸ್ಕ್ವೈರ್) ಪಾರ್ಲಿಮೆಂಟ್ ಮುಂದೆ ಗಾಂಧೀಜಿಯ ಪ್ರತಿಮೆ ಸ್ಥಾಪಿಸಲ್ಪಟ್ಟಿದೆ.

*ಜಗತ್ತಿನಲ್ಲೇ ವಿಶ್ವಸಂಸ್ಥೆಯಿಂದ ಆಚರಿಸಲ್ಪಡುವ ಜನ್ಮದಿನ ಕೇವಲ 'ಗಾಂಧಿ ಜನ್ಮದಿನ' ಮಾತ್ರ. ವಿಶ್ವಸಂಸ್ಥೆಯು ಗಾಂಧೀ ಜನ್ಮದಿನವನ್ನು 'ವಿಶ್ವ ಅಹಿಂಸಾ ದಿನ' ಎಂದು ಘೋಷಿಸಿದೆ.

*ಗಾಂಧೀಜಿಯವರು ಕುಷ್ಠರೋಗಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು‌. ತಮ್ಮ ಆಶ್ರಮದಲ್ಲಿ ಪರಚುರೆ ಶಾಸ್ತ್ರಿ ಎಂಬ ವ್ಯಕ್ತಿಯ ಕುಷ್ಠರೋಗವನ್ನು ಶುಶ್ರೂತೆ ಮಾಡಿದ್ದರು. ಈ ನೆನಪಿಗಾಗಿ ಭಾರತ ಸರ್ಕಾರ 'ಕುಷ್ಠರೋಗ ದಿನ' ಎಂದು ಆಚರಿಸುತ್ತದೆ‌.

*ಗಾಂಧೀಜಿಯಿಂದ ಪ್ರೇರಣೆಗೊಂಡು ನಾಲ್ಕು ಖಂಡಗಳ ಸುಮಾರು ೨೦ ಕ್ಕೂ ಹೆಚ್ಚು ದೇಶಗಳಲ್ಲಿ ಮಾನವ ಹಕ್ಕುಗಳ ಹೋರಾಟಗಳು ನಡೆದಿವೆ‌.

*ಸುಮಾರು ೬ ಬಾರಿ ನೊಬೆಲ್ ನಾಮಿನೇಟ್ ಗೊಂಡಿರುವ ಗಾಂಧೀಜಿಗೆ ನೊಬೆಲ್ ಸಿಗಲಿಲ್ಲ. ಕೊನೆಗೆ ನೊಬೆಲ್ ಸಂಸ್ಥೆ ಈ ವಿಷಯವಾಗಿ ಕ್ಷಮೆ ಕೇಳಿ 'ಅವರು ನೊಬೆಲ್ ಗಿಂತ ದೊಡ್ಡವರು' ಎಂದು ಹೇಳಿತು.

*ಗಾಂಧೀಜಿಯವರನ್ನು ಒಮ್ಮೆಯೂ ಭೇಟಿಯಾಗದ ನೆಲ್ಸನ್ ಮಂಡೇಲಾ (ದ.ಆಫ್ರಿಕಾದ ಗಾಂಧಿ) ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ (ಅಮೇರಿಕಾದ ಗಾಂಧಿ) ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿದೆ‌.

*ದ.ಆಫ್ರಿಕಾದ ಜೈಲಿನಲ್ಲಿ ನೇಕಾರ ಕೆಲಸ ಆರಿಸಿಕೊಂಡ ಗಾಂಧೀಜಿಯವರು ಎರಡು ತುದಿ ಚೂಪಾಗಿರುವ ಟೋಪಿ ಒಂದನ್ನು ಹೊಲಿದರು. ಅದೇ ಮುಂದೆ ಗಾಂಧಿ ಟೋಪಿ ಎಂದು ಪ್ರಸಿದ್ಧವಾಗಿ ಈಗಲೂ ಚಾಲ್ತಿಯಲ್ಲಿದೆ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಮತ್ತು ಅವರ ಸಾವಿರಾರು ಸಹಚರರು ತಮ್ಮ ಪ್ರಸಿದ್ಧ ವಾಷಿಂಗ್ಟನ್ ಯಾತ್ರೆಯಲ್ಲಿ ಗಾಂಧಿ ಟೋಪಿ ಧರಿಸಿ ಹೋರಾಟಕ್ಕೆ ಇಳಿದಿದ್ದರು. ಆದರೆ ಗಾಂಧೀಜಿಯವರಿಗೆ ನಾವು ನಿಮ್ಮ ವಿರುದ್ಧ ಸಿದ್ಧಾಂತಿಗಳು ಎಂದು ತಿಳಿಸಲು ಕೆಲವು ಘೋಡ್ಸೆವಾದಿಗಳು ಗಾಂಧಿ ಟೋಪಿಗೆ ವಿರುದ್ಧವಾದ ಬಣ್ಣದ (ಕಪ್ಪು ಬಣ್ಣದ) ಟೋಪಿ ಧರಿಸಿ ಹಾರಾಟ, ಚೀರಾಟ ನಡೆಸಿದರು ಮತ್ತು ಈಗಲೂ ನಡೆಸುತ್ತಿದ್ದಾರೆ.

ಕೃಪೆ: ಸೋಶಿಯಲ್ ಮೀಡಿಯಾ

Advertisement
Advertisement
Recent Posts
Advertisement