ರಾಷ್ಟ್ರೀಯ

ಹಥ್ರಾಸ್ ಪ್ರಕರಣದಲ್ಲಿ ನಕ್ಸಲ್ ನಂಟಿನ ಕಥೆ ಹೆಣೆದಿರುವುದರ ಹಿಂದಿನ ರಹಸ್ಯವೇನು ಗೊತ್ತೇ?

ಬರಹ: ಗ್ಲಾಡ್ಸನ್ ಅಲ್ಮೇಡಾ (ಲೇಖಕರು ಸಾಮಾಜಿಕ ಚಿಂತಕರು, ಜನಪರ ಬರಹಗಾರರು)ಹಾಥ್ರಾಸ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸಂತೃಸ್ತ ಕುಟುಂಬಕ್ಕೆ ನ್ಯಾಯ ಸಿಗುತ್ತೆ ಎಂದು ನಾವು ಆಶಿಸುವುದು ತಪ್ಪಾದೀತು. ಇವತ್ತಿಗೂ ಉತ್ತರ ಪ್ರದೇಶ ಸರಕಾರ, ಅಲ್ಲಿನ ಪೋಲೀಸ್, ಅಧಿಕಾರಿಗಳು ಹಾಗೂ ಅಜಯ್ ಸಿಂಗ್ ದುಷ್ಟನ ಬೆಂಬಲಿಗರು ಸಂತೃಸ್ತ ಕುಟುಂಬವನ್ನೇ ಆರೋಪಿ ಸ್ಥಾನದಲ್ಲಿರಿಸಿ ಅವರನ್ನು ದಿನನಿತ್ಯವೂ ಮುಕ್ಕಿ ತಿನ್ನುತ್ತಿದ್ದಾರೆ. ಮೊದಲು ಅತ್ಯಾಚಾರ ನಡೆದೇ ಇಲ್ಲವೆಂದರು, ಕುಟುಂಬದ ಅನುಮತಿಯಿಲ್ಲದೆ, ಅವರನ್ನು ಮನೆಯಲ್ಲಿ ಕೂಡಿಹಾಕಿ, ರಾತ್ರೋ ರಾತ್ರಿ ಸಂತ್ರಸ್ತೆಯ ದೇಹವನ್ನು ಪೆಟ್ರೋಲ್ ಹಾಕಿ ಸುಡಲಾಯಿತು ಆ ನಂತರ ಕುಟುಂಬವನ್ನು ಭೇಟಿಯಾಗಲು ಪ್ರಯತ್ನಿಸಿದ ವಿರೋಧ ಪಕ್ಷದ ನಾಯಕರುಗಳನ್ನು ತಡೆದರು. ಕೊನೆಗೆ ದೇಶದೆಲ್ಲೆಡೆ ಭುಗಿಲೆದ್ದ ಆಕ್ರೋಶವನ್ನು ನೋಡಿ ಸಿಬಿಐ ತನಿಖೆಗೇನೋ ಕೊಟ್ಟರು ಆದರೆ ಇನ್ನೊಂದೆಡೆ ಇದರ ಹಿಂದೆ ಅಂತರಾಷ್ಟ್ರೀಯ ಸಂಚಿದೆ, ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆಯನ್ನು (ಅದೇನೆಂದು ಅಲ್ಲಿನ ಸರಕಾರಕ್ಕೆ ತಿಳಿದಿದೆಯೇ) ಕದಡಲು ವಿರೋಧ ಪಕ್ಷದವರು, ಮುಸ್ಲೀಮರು ಮಾಡಿದ ಹುನ್ನಾರ ಎಂದರು. ಹಾಥ್ರಾಸ್‍ನಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನು ವರದಿ ಮಾಡಲು ದೆಹಲಿಯಿಂದ ಹಾಥ್ರಾಸ್ ಕಡೆ ಪ್ರಯಾಣಿಸುತ್ತಿದ್ದ ಕೇರಳ ಮೂಲದ ಮುಸ್ಲೀಮ್ ಪತ್ರಕರ್ತ ಹಾಗೂ ಆತನ ಜೊತೆಗಿದ್ದ ಸಂಗಡಿಗರನ್ನು ಬಂಧಿಸಿ ಇಡೀ ಪ್ರಕರಣದ ಹಿಂದೆ ಪಿಎಫ್‍ಐ ಕೈವಾಡ ಇದೆಯೆಂದು ಬಿಂಬಿಸಿದರು. ಇದೂ ಸಾಕಾಗಲಿಲ್ಲವೆನ್ನುವಂತೆ ಹಾಥ್ರಾಸ್ ಪ್ರಕರಣವನ್ನು ಮುಂದಿಟ್ಟುಕೊಂಡು ಗಲಭೆಯನ್ನು ಸೃಷ್ಟಿಸಲು ಪಿಎಫ್‍ಐನ ವಿವಿಧ ಅಕೌಂಟ್‍ಗಳಿಗೆ ಮಾರಿಷಸ್‍ನಿಂದ ನೂರು ಕೋಟಿ ರುಪಾಯಿ ಹರಿದುಬಂದಿದೆ ಎಂಬ ಇನ್ನೊಂದು ಕಟ್ಟುಕಥೆಯನ್ನು ಹರಿದುಬಿಟ್ಟು, ಜಾರಿ ನಿರ್ದೇಶನಾಲಯ ಇದರ ಬಗ್ಗೆ ತನಿಖೆ ನಡೆಸುತ್ತಿದೆಯೆಂದು ಹೇಳಿ ಇಡೀ ಕಥೆಗೆ ಅಧಿಕೃತ ಮೊಹರನ್ನು ತಗಲಿಸಲು ನೋಡಿದರು. ಆದರೆ ಜಾರಿ ನಿರ್ದೇಶನಾಲಯ ಈ ಸುದ್ದಿಯನ್ನು ಸುಳ್ಸುದ್ದಿಯೆಂದು ಧೃಢೀಕರಿಸಿತು. ಕೊನೆಗೆ ಈ ಸುದ್ದಿಯ ಬುಡಕ್ಕೆ ಹೋದಾಗ ಇಂಥದೊಂದು ಸುಳ್ಳು ಸುದ್ದಿಯನ್ನು ಸೃಷ್ಟಿಸಿದ್ದು ಉತ್ತರ ಪ್ರದೇಶದ ಓರ್ವ ಸರಕಾರಿ ಅಧಿಕಾರಿ ಎಂದು ತಿಳಿದುಬಂತು.

ಈಗ ಹೊಸದೊಂದು ಕ್ರೌರ್ಯ ಹೊರಬಂದಿದೆ. ಹಾಥ್ರಾಸ್ ಪ್ರಕರಣ, ಸಂತೃಸ್ತೆಯ ಕೊಲೆ, ವಿರೋಧ ಪಕ್ಷಗಳ ಪ್ರತಿಭಟನೆ, ರಾಹುಲ್-ಪ್ರಿಯಾಂಕರು ಸಂತೃಸ್ತ ಕುಟುಂಬದ ಭೇಟಿಯ ನಂತರ, ಕುಟುಂಬದ ದೂರದ ಸಂಬಂಧಿ ಮಹಿಳೆಯೋರ್ವರು ಮಧ್ಯಪ್ರದೇಶದ ಜಬಲ್ಪುರದಿಂದ ಹಾಥ್ರಾಸ್‍ಗೆ ಬಂದಿದ್ದಾರೆ, ಅಕ್ಟೋಬರ್‌ 4 ರಂದು. ಸಂತೃಸ್ತೆಯ ಅತ್ತಿಗೆ ಹೇಳಿರುವ ಪ್ರಕಾರ ಈ ಮಹಿಳೆ ಡಾ. ರಾಜಕುಮಾರಿ ಬನ್ಸಾಲ್ ಆಕೆಯ ಅತ್ತಿಗೆಯ ದೂರದ ಸಂಬಂಧಿ. ಈ ಕ್ರೂರ ಘಟನೆಯ ಬಳಿಕ ಅವರ ಕುಟುಂಬದ ಅನೇಕ ಸದಸ್ಯರು ಮಧ್ಯಪ್ರದೇಶ, ದೆಹಲಿ ಮುಂತಾದೆಡೆಯಿಂದ ಹಾಥ್ರಾಸ್‍ಗೆ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಲು ಬಂದಿದ್ದಾರೆ. ಅವರಲ್ಲಿ ಒಬ್ಬರು ಈ ಡಾ. ರಾಜಕುಮಾರಿ ಬನ್ಸಾಲ್. ಈಕೆ ವೃತ್ತಿಯಲ್ಲಿ ಓರ್ವ ಅಧ್ಯಾಪಕಿ, ಅದೂ ಫೊರೆನ್ಸಿಕ್ ವಿಜ್ಞಾನದಲ್ಲಿ. ಆಕೆ ನೌಕರಿ ಮಾಡುತ್ತಿರುವುದು ನೇತಾಜಿ ಸುಭಾಶ್‍ಚಂದ್ರ ಬೋಸ್ ಮೆಡಿಕಲ್ ಕಾಲೇಜು, ಜಬಲ್ಪುರದಲ್ಲಿ. ಆಕೆ ಅಕ್ಟೋಬರ್ 4 ಕ್ಕೆ ಹಾಥ್ರಾಸ್ ತಲುಪಿದ್ದಾರೆ. ಕುಟುಂಬಕ್ಕೆ ಸಣ್ಣ ಪ್ರಮಾಣದ ಹಣಕಾಸು ನೆರವನ್ನೂ ಮಾಡಿದ್ದಾರೆ. ಮರುದಿನ ವಾಪಾಸ್ ಜಬಲ್ಪುರಕ್ಕೆ ಹೊರಟಾಗ, ಸಂತೃಸ್ತ ಕುಟುಂಬ ಆಕೆಯನ್ನು ಇನ್ನೊಂದೆರಡು ದಿನ ಅವರೊಡನೆ ನಿಲ್ಲುವಂತೆ ಕೇಳಿಕೊಂಡಿದ್ದಾರೆ. ಅದರಂತೆ ಆಕೆ ಇನ್ನೊಂದು ದಿನ ಅಲ್ಲಿ ತಂಗಿದ್ದಾರೆ. ಆಕೆ ಅಲ್ಲಿದ್ದ ಸಂಧರ್ಭದಲ್ಲಿ ಕುಟುಂಬಸ್ಥರನ್ನು ಭೇಟಿಯಾಗಲು ಬಂದ ಪೋಲೀಸರೊಡನೆ, ಮಾಧ್ಯಮದವರೊಡನೆ ಹಾಗೂ ಇತರ ಜನರೊಡನೆ ಮಾತಾನಾಡಿದ್ದಾರೆ. ಹೆಚ್ಚಿನ ವಿದ್ಯೆ ಇಲ್ಲದ ಕುಟುಂಬಸ್ಥರ ಮಧ್ಯೆ ಓರ್ವ ಫ್ರೊಫೆಸರ್ ಇದ್ದಾಗ ಸಹಜವಾಗಿ ಮಾಧ್ಯಮದವರು ಆಕೆಯನ್ನು ಮಾತಾನಾಡಿಸಿದ್ದಾರೆ. ಆಕೆ ತನ್ನ ಮಾತಿನಲ್ಲಿ ಯಾವತ್ತೂ ತಾನು ಸಂತೃಸ್ತೆಯ ‘ಅತ್ತಿಗೆ’ ಎಂದು ಹೇಳಲಿಲ್ಲ. ಆದರೆ ಫೊರೆನ್ಸಿಕ್ ತಜ್ಞೆಯಾಗಿರುವ ಕಾರಣ, ಪೋಲೀಸರ ಬಳಿ ಪೋಸ್ಟ್ ಮಾರ್ಟಂ ವರದಿ ಕಾಪಿ ಕೇಳಿದ್ದಾರೆ, ಪರಿಶೀಲಿಸಲು.

ಇದನ್ನು ಕೇಳುತ್ತಿದ್ದಂತೆ ಪೋಲೀಸರು, ಅಧಿಕಾರಿಗಳು ರೊಚ್ಚಿಗೆದ್ದಿದ್ದಾರೆ. ಬಲಪಂಥೀಯರ ಮುಖವಾಣಿಗಳಾದ ಒಪಿ ಇಂಡಿಯಾ, ಓರ್ಗಾನೈಜರ್ ಹಾಗೂ ಕೆಲ ಮುಖ್ಯವಾಹಿನಿಯ ಮಾಧ್ಯಮಗಳನ್ನು ಉಪಯೋಗಿಸಿ ಆಕೆಯ ಚಾರಿತ್ರ್ಯಹರಣಕ್ಕೆ ಇಳಿದಿದ್ದಾರೆ. ಆಕೆಯನ್ನು ಒಪಿ ಇಂಡಿಯಾವಂತೂ ಆಕೆಯನ್ನು ನಕ್ಸಲೀಯರೊಂದಿಗೆ ಥಳಕು ಹಾಕಿ ಆಕೆಯನ್ನು ‘ನಕ್ಸಲ್‍ ಭಾಭಿ’ ಎಂದು ಕರೆಯತೊಡಗಿದೆ. ಆಕೆಯ ಟ್ವಿಟ್ಟರ್, ಫೇಸ್‍ಬುಕ್ ಖಾತೆಗಳನ್ನು ಜಾಲಾಡಿದ್ದಾರೆ. ಆದರೆ ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೆನೂ ಕ್ರಿಯಾಶೀಲರಾಗಿಲ್ಲ ಎಂದು ತಿಳಿಯುತ್ತಲ್ಲೇ ಅಲ್ಲಿ ಏನೇನು ಸಿಕ್ಕಿದೆಯೋ ಅದನ್ನು ಹೆಕ್ಕಿ ತಂದು ಆಕೆಯ ಚಾರಿತ್ರ್ಯವಧೆ ಮಾಡಲಾರಂಭಿಸಿದ್ದಾರೆ. ಆಕೆ ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ, ಭಾರತೀಯ ಮೂಲನಿವಾಸಿ ಸಂಘಟನೆಯ ಇ ಪಿ ಗೌತಮ್ ಅವರನ್ನು ಫಾಲೋ ಮಾಡುತ್ತಿರುವುದನ್ನು ನೋಡಿ ಆಕೆ ಓರ್ವ ನಕ್ಸಲೈಟ್ ಎಂದು ಸುದ್ದಿ ಹಬ್ಬಿಸಿದೆ. ಜೊತೆಗೆ ಆಕೆಯ ಫೇಸ್‍ಬುಕ್‍ನಲ್ಲಿ ಆಕೆ ಅತ್ಯಾಚಾರ ಹಾಗೂ ಕೊಲೆಗಾದ ಯುವತಿಯನ್ನು ಸುಡುವುದರ ಬದಲು, ಹೂತಿದ್ದರೆ ಕೊನೆಪಕ್ಷ ಮತ್ತೊಮ್ಮೆ ಪೋಸ್ಟ್ ಮಾರ್ಟಂ ಮಾಡಲಾಗುತಿತ್ತು ಎಂದು ಬರೆದ ಪೋಸ್ಟ್, ರಾಮನ ಮಂದಿರ ಕಟ್ಟುತ್ತಿರುವ ನಾಡಿನಲ್ಲಿ ಸೀತೆ ಸುರಕ್ಷಿತವಲ್ಲ ಎಂದು ಹಾಕಿರುವ ಇನ್ನೊಂದು ಪೋಸ್ಟನ್ನು ತೆಗೆದುಕೊಂಡು ಆಕೆ ಇಡೀ ಪ್ರಕರಣದಲ್ಲಿ ಸಂತೃಸ್ತ ಕುಟುಂಬಕ್ಕೆ ಮಾಧ್ಯಮದವರೊಡನೆ, ಪೋಲೀಸರೊಡನೆ ಹೇಗೆ, ಏನು ಮಾತನಾಡಬೇಕೆಂದು ಹೇಳಿಕೊಡುತ್ತಿದ್ದರು ಎಂದು ಕಥೆ ಕಟ್ಟಿದೆ. ಇನ್ನು ಆಡಳಿತ ವರ್ಗದ ತೊಡೆಗುನ್ನಿಗಳಾಗಿರುವ Times Now ಹಾಗೂ ಒಂದೆರಡು ಇತರೇ ಮುಖ್ಯವಾಹಿನಿಯ ಮಾಧ್ಯಮದವರು ಆಕೆ ಸಪ್ಟೆಂಬರ್ 16-22 ಮಧ್ಯೆ ಹಾಥ್ರಾಸ್‍ನಲ್ಲಿದ್ದು ಕುಟುಂಬಸ್ಥರನ್ನು manipulate ಮಾಡುತ್ತಿದ್ದರೆಂದು ಇನ್ನೊಂದು ಸುಳ್ಸುದ್ದಿ ಹರಡಿದೆ. ಈ ಮಧ್ಯೆ ಇನ್ನೊಂದು ಬಲಪಂಥೀಯ ತುತ್ತೂರಿ ಪ್ರಿಯಾಂಕ ಗಾಂಧಿ ಸಂತ್ರಸ್ತ ಕುಟುಂಬದ ಭೇಟಿ ಮಾಡಿದಾಗ ತಬ್ಬಿಕೊಂಡ ಮಹಿಳೆ ಈ ಡಾ. ರಾಜಕುಮಾರಿ ಬನ್ಸಾಲ್, ಆಕೆಯನ್ನು ಗಾಂಧಿಗಳು ಮೊದಲೇ ಅಲ್ಲಿ ಕಳುಹಿಸಿ ಈ ಡ್ರಾಮಾ ಮಾಡಿದ್ದಾರೆಂದು ಕಥೆ ಹೆಣೆದಿದೆ. ಇವೆಲ್ಲಾ ಕಥೆಗಳನ್ನು ಯಥಾವತ್ತಾಗಿ ಭಟ್ಟಿ ಇಳಿಸಿರುವ ನಮ್ಮ ನಿಲುಮೆ, ಜಿಜ್ಞಾಸು ಮುಂತಾದ ಗ್ರೂಪ್‍‍ಗಳಲ್ಲಿ ಇದಕ್ಕೆ ಒಗ್ಗರಣೆ ಬೇರೆ ಹಾಕಿ, ಆಕೆಯ ಖಾಸಗಿ ಫೊಟೋಗಳನ್ನು ಮಾರ್ಫ್ ಮಾಡಿ ಇನ್ಯಾವುದೋ ಕಥೆ ಹೆಣೆದಿದ್ದಾರೆ ನಮ್ಮದೇ ನೆಲದ ಕೀಚಕರು.

ಆದರೆ ಇದೀಗ ಈ ಡಾ. ರಾಜಕುಮಾರಿ ಬನ್ಸಾಲ್ ತನ್ನ ಚಾರಿತ್ರ್ಯವಧೆ ಮಾಡುತ್ತಿದ್ದ ಎಲ್ಲಾ ಮುಖ್ಯವಾಹಿನಿಯ ಮಾಧ್ಯಮಗಳು, ಬಲಪಂಥೀಯ ಕ್ರೂರವಾಣಿಗಳು ಹಾಗೂ ಟ್ವಿಟ್ಟರ್, ಫೇಸ್‍ಬುಕ್ ಖಾತೆಗಳ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಉತ್ತರ ಪ್ರದೇಶದ ಪೋಲೀಸರು ಆಕೆಯ ಫೋನ್ ಟ್ಯಾಪ್ ಮಾಡಿರುವುದನ್ನು ಆಕೆ ಸೈಬರ್ ಸೆಲ್‍ ಮೂಲಕ ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ರಾಜಕೀಯ ಒತ್ತಡಕ್ಕೆ ಮಣಿದು ಆಕೆ ಕೆಲಸ ಮಾಡುತ್ತಿರುವ ಮೆಡಿಕಲ್ ಕಾಲೇಜು ಆಕೆಗೆ ಸರಕಾರಿ ಉದ್ಯೋಗಿಯಾಗಿ ತಾವು ಸರ್ಕಾರವೊಂದರ ವಿರುದ್ಧ ಪ್ರತಿಭಟನೆಗೆ ಇಳಿದದ್ದು ಸರಿಯಲ್ಲ ಎಂದು ನೋಟೀಸ್ ಕೊಟ್ಟಿದೆ. ಆದರೆ ಈ ನೋಟೀಸ್ ಮುಖಾಂತರ ಆಕೆ ಟೈಮ್ಸ್ ನೌ ನ ನವಿಕಾ ಹೇಳಿರುವಂತೆ ಸಪ್ಟೆಂಬರ್ 16-22 ರ ಮಧ್ಯೆ ಹಾಥ್ರಾಸ್‍ನಲ್ಲಿದ್ದಿಲ್ಲ ಬದಲಾಗಿ ಜಬಲ್ಪುರದ ಕಾಲೇಜಿನಲ್ಲೇ ಇದ್ದರು ಹಾಗೂ ಅಕ್ಟೋಬರ್ 4-6 ರ ಮಧ್ಯೆ ಕಾಲೇಜಿಗೆ ರಜೆ ತೆಗೆದುಕೊಂಡು ಹಾಥ್ರಾಸ್‍ಗೆ ಹೋಗಿದ್ದರೆಂದು ರುಜುವಾಗಿದೆ. ಆಕೆ ತನ್ನ ಕಾಲೇಜಿನ ಪ್ರೊಫೆಸರ್ ಎಂದು ಒಪ್ಪಿಕೊಂಡಿರುವುದರಿಂದ ಆಕೆ ನಕ್ಸಲೈಟ್ ಎನ್ನುವ ವಾದಕ್ಕೂ ತೆರೆಬಿದ್ದಿದೆ. ಆದರೆ ತನಗೆ ಕೊಟ್ಟಿರುವ ನೋಟೀಸಿಗೆ ತಾನು ಉತ್ತರ ಕೊಡುವುದಾಗಿಯೂ, ತಾನು ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಿಲ್ಲ ಆದರೆ ಸಂತ್ರಸ್ತ ಕುಟುಂಬಕ್ಕೆ ಸಾಂತ್ವಾನ ಹೇಳಲು ಅಲ್ಲಿಗೆ ಹೋಗಿದ್ದೆ ಎಂದು ಆಕೆ ಹೇಳಿದ್ದಾರೆ. ಆದರೆ ಒಪಿ ಇಂಡಿಯಾ ಆಕೆಯ ಬಗ್ಗೆ ದಿನಕ್ಕೆ ಐದಾರು ಹೊಸ ಹೊಸ ಕಥೆಗಳನ್ನು ಕಟ್ಟಿ ‘ಭಂಡ ಭಕ್ತ’ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಇವೆಲ್ಲಾವನ್ನು ನೋಡುವಾಗ ಒಂದು ಸಿದ್ದಾಂತ, ಅಜಯ್ ಸಿಂಗ್ ಬೀಷ್ಟ್ ನ ಬೆಂಬಲಿಗರು, ಬಲಪಂಥೀಯರು ಹೇಗೆ ಇಡೀ ಹಾಥ್ರಾಸ್ ಪ್ರಕರಣದ ತನಿಖೆ ಹಳ್ಳ ಹಿಡಿಯುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆನ್ನುವುದು ತಿಳಿಯುತ್ತಿದೆ. ತಮ್ಮ ಕ್ರೂರಿ, ಸರ್ವಾಧಿಕಾರಿ ನಾಯಕರನ್ನು ಸಮರ್ಥಿಸಲು ಈ ಝೋಂಬಿಗಳು ಯಾವುದೇ ಹೀನಾಯ ಕೃತ್ಯಕ್ಕೂ ಕೈಹಾಕಬಲ್ಲರು. ಹಾಗಾಗಿ ಈ ಪ್ರಕರಣದ ತನಿಖೆಯಿಂದ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬಲ್ಲದೆನ್ನುವುದು ಊಹೆಯಷ್ಟೇ. ನಾನು ಮೊದಲೇ ಹೇಳಿರುವಂತೆ ಇದೊಂದು ಮರ್ಯಾದಾ ಹತ್ಯೆ, ಆರೋಪಿ ಹಾಗೂ ಸಂತೃಸ್ತೆಯ ಮಧ್ಯೆ ಪ್ರೇಮ ಸಂಬಂಧವಿತ್ತು, ಅವರ ನಡುವೆ ದೈಹಿಕ ಸಂಬಂಧವಿತ್ತು, ಇದನ್ನು ಎನ್‍ಕ್ಯಾಶ್ ಮಾಡಲು ನೋಡಿದ ಕುಟುಂಬ ಈ ಮಗಳನ್ನು ಕೊಂದು, ಮೇಲ್ಜಾತಿಯವರನ್ನು ಅವಮಾನಿಸಲು ಈ ಘಟನೆಯನ್ನು ಹುಟ್ಟುಹಾಕಿದ್ದೆಂದು ತೀರ್ಪು ಬಂದರೆ ಆಶ್ಚರ್ಯಪಡಬೇಕಾಗಿಲ್ಲ. ಮಾನವೀಯತೆ, ನಾಚಿಕೆ ಆತ್ಮಹತ್ಯೆ ಮಾಡಿಕೊಂಡಿರುವ ನೆಲದಲ್ಲಿ ಎಲ್ಲವೂ ಸಾಧ್ಯ.

⚫ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ.

⚫ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ.

⚫ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares