Advertisement

ಡಾ. ಜಯಪ್ರಕಾಶ್ ಶೆಟ್ಟಿ ಕೃತಿ 'ನೆಲದ ನೆನಪು'ಗೆ 2014ನೇ ಸಾಲಿನ ಜಾನಪದ ಅಕಾಡೆಮಿಯ ಸಂಕೀರ್ಣ ವಿಭಾಗದ ಪುಸ್ತಕ ಪ್ರಶಸ್ತಿ

Advertisement

ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥ, ಕುಂದಾಪುರದ ಡಾ. ಜಯಪ್ರಕಾಶ್ ಶೆಟ್ಟಿ ಎಚ್. ಇವರ 'ನೆಲದ ನೆನಪು' ಕೃತಿಯು '2014ನೇ ಸಾಲಿನ ಜಾನಪದ ಅಕಾಡೆಮಿಯ ಸಂಕೀರ್ಣ ವಿಭಾಗದ ಪುಸ್ತಕ ಪ್ರಶಸ್ತಿ'ಗೆ ಆಯ್ಕೆಗೊಂಡಿದೆ. ನವೆಂಬರ್ 21 ರಂದು ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ. ಶೆಟ್ಟಿಯವರು ಬಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಡಾ. ಜಯಪ್ರಕಾಶ್ ಶೆಟ್ಟಿ ಹೆಚ್. ಇವರು ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಹಡಾಳಿ ಎಂಬಲ್ಲಿ ಹುಟ್ಟಿ ಅಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ, ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಬಸ್ರೂರಿನಲ್ಲಿ ಪೂರೈಸಿದರು. ತದನಂತರ ಮಂಗಳೂರು ವಿಶ್ವವಿದ್ಯಾಲಯದಿಂದ ೧೯೯೩ ರಲ್ಲಿ ಕನ್ನಡ ಎಂ.ಎ ಮುಗಿಸಿ, ಪ್ರೊ. ರಹಮತ್ ತರಿಕೆರೆಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ”ಪಂಪನಕಾವ್ಯಗಳ ವಿಭಿನ್ನಓದುಗಳು : ತಾತ್ವಿಕವಿಶ್ಲೇಷಣೆ“ ಎಂಬ ಮಹಾಪ್ರಬಂಧಕ್ಕೆ ೨೦೧೪ ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಹೆಚ್ಡಿ ಪದವಿ ಪಡೆದರು. ೧೯೯೬ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಗೊಂಡು ಚಿಕ್ಕಮಗಳೂರಿನ ಐಡಿಎಸ್ಜಿ ಸರ್ಕಾರಿ ಕಾಲೇಜಿನಲ್ಲಿ ವೃತ್ತಿಜೀವನ ಆರಂಭಿಸಿ ಕರ್ನಾಟಕದ ಬೇರೆ ಬೇರೆ ಕಡೆ ಕೆಲಸಮಾಡಿ, ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕ ನಿಡಿಯೂರು ಉಡುಪಿ ಇಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೆಸರಾಂತ ಕನ್ನಡಪತ್ರಿಕೆ ಹಾಗೂ ಸಂಶೋಧನಾ ಸಂಪುಟಗಳಲ್ಲಿ ನೂರಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿರುವ ಜೊತೆಗೆ ಬೀಜಮುಹೂರ್ತ(ಸಂ), ಹೊಳೆ ಯೆಂಬ ಹೊನ್ನ ಹರಿವು, ಶಬ್ದದ ಲಜ್ಜೆಯ ನೋಡಾ, ಬೆಳಗಿನೊಳಗಣ ಬೆಳಗು, ಕನಕ ಮತ್ತು ಕನ್ನಡ ಕಾಲು ದಾರಿ ಮನಸ್ಸು, ನೆಲದ ನೆನಪು, ರೂಪಮಂಧರಿಯಿಸಿನಿಂದುದಲ್ತು, ಅನೇಕರ ಅನೇಕಾಂತ, ಬಯಲ ಬೆರಗು, ತಣ್ಣನೆಯ ದೀಪಗಳು, ನುಡಿಯ ನಡೆಯಾಟ ಎಂಬ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ೨೦೧೬ನೇ ಸಾಲಿನ ಪಂಪ ಪ್ರಶಸ್ತಿ ಹಾಗೂ ಕನಕಶ್ರೀ, ಕುಂದಣಗಾರ, ಅತ್ತಿಮಬ್ಬೆ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗಳ ಆಯ್ಕೆ ಸಮಿತಿಯ ಸದಸ್ಯರಾಗಿಯೂ, ಜಿಲ್ಲಾ ಕನ್ನಡ ಕಾವಲು ಸಮಿತಿಯ ಆಹ್ವಾನಿತ ಸದಸ್ಯರಾಗಿಯೂ ಸೇವೆಸಲ್ಲಿಸಿದ್ದಾರೆ.೨೦೧೮ನೇ ಸಾಲಿಗೆ ರಾಷ್ಟ್ರೀಯ ಸಂತ ಕವಿ ಕನಕದಾಸ ಸಂಶೋಧನೆ ಮತ್ತು ಅಧ್ಯಯನ ಕೇಂದ್ರದ ʼಕನಕ ಯುವ ಪುರಸ್ಕಾರʼ ಪ್ರಶಸ್ತಿಯನ್ನೂ ಪಡೆದಿರುತ್ತಾರೆ. ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದಿಂದ ೨೦೧೪ ರಲ್ಲಿ ಪ್ರಕಟವಾದ ʼನೆಲದನೆನಪುʼ ಜಾನಪದ ಅಧ್ಯಯನ ಕ್ಷೇತ್ರದ ವಿಶಿಷ್ಟ ಬಗೆಯ ಕೃತಿ. ತಾಯಿ ಮೂಲದ ಕುಟುಂಬ ಪದ್ಧತಿ ಹಾಗೂ ಆರಾಧನಾ ಪದ್ಧತಿ ಜೀವಂತವಾಗಿರುವ ಕರಾವಳಿಯ ಸೆರಗಿನ ಸಾಂಸ್ಕೃತಿಕಸೀಮೆ ಯಾದ ಕುಂದಾಪುರದಬದುಕು, ಭಾಷೆಯನ್ನು ಕುರಿತ ಅಧ್ಯಯನಾತ್ಮಕ ಕೃತಿಯಾಗಿ, ಇದು ಸ್ಥಳೀಯ ಆಚರಣೆಗಳನ್ನು ಆಪ್ತವಾಗಿ ಆಲಿಸುವ ಜೊತೆಗೆ ಆ ಆಚರಣೆ ಮತ್ತು ಜೀವನ ಪದ್ಧತಿಯ ಆಳದಲ್ಲಿರುವ ಕನ್ನಡಸಂಸ್ಕೃತಿಯ ಬನಿಯನ್ನು ಪ್ರೀತಿಯಿಂದ ದಾಖಲಿಸಿದೆ.ಅಷ್ಟೇ ಅಲ್ಲ, ಪ್ರಾದೇಶಿಕ ಸಮುದಾಯವೊಂದರ ಜೀವನಕ್ರಮದಲ್ಲಿರುವ ತನ್ನತನ, ಸ್ವಂತಿಕೆಯನ್ನು ದಾಖಲಿಸುವ ಮೂಲಕವೇ ಸಾಂಸ್ಕೃತಿಕ ವಸಾಹತಿಶಾಹಿಗೆ ಪ್ರತಿರೋಧ ರೂಪಿಸುವ ನೆನಪುಗಳ ಜೋಡಣೆಯಾಗಿಯೂ ಕೃತಿ ತನ್ನ ಮಹತ್ವವನ್ನು ಸಾದರಪಡಿಸುತ್ತದೆ. ಈ ಕೃತಿಗೆ ಮೌಲ್ಯ ಮಾಪಕರ ತೀರ್ಮಾನದ ಮೇರೆಗೆ ೨೦೧೪ನೇ ಸಾಲಿನ ಜಾನಪದ ಅಕಾಡೆಮಿಯ ಪುಸ್ತಕ ಬಹುಮಾನದ ಗೌರವ ಸಂದಾಯಗೊಂಡಿದೆ. ಕುಂದಾಪುರದ ಸಾಂಸ್ಕೃತಿಕ ಸೀಮೆಗೆ ಅದರದ್ದೇ ಆದ ಭಿನ್ನಚೈತನ್ಯವಿದೆ. ದಟ್ಟವಾದ ಶಿವಸಂಸ್ಕೃತಿಯ ಚಹರೆಯುಳ್ಳ ಈ ನೆಲದ ಸಮೃದ್ಧ ದೈವಾರಾಧನೆಯ ಪರಂಪರೆಯು ಆಚರಣೆ, ಅನುಸರಣೆಯಲ್ಲಿ ನಾಥ, ಬೌದ್ಧವೇ ಮೊದಲಾದ ಕಾಲುಹಾದಿ ಪರಂಪರೆಗಳನ್ನು ಒಡನಾಡಿಕೊಂಡು ಬಂದಿದೆ. ಮನೆಯ ಎದುರಿನ ಮೇಟಿಕಂಬದಿಂದ ತೊಡಗಿದಂತೆ ಲಿಂಗಸಂಕೇತವನ್ನೂ, ಹುಟ್ಟಿನಮೂಲವಾದ ಬಸಿರಿನ ಸಂಕೇತವಾಗಿ ಹುತ್ತಮತ್ತುನೀರು ತುಂಬಿದಮಣ್ಣಿನ ಮಗೆ(ಮಡಿಕೆ)ಗಳನ್ನೂ ಪವಿತ್ರ ಸಂಕೇತಗಳಾಗಿ ಆರಾಧಿಸಿ ಕೊಂಡು ಬಂದ ಈ ನೆಲಬೆಂಕಿಯನ್ನು ತುಳಿದು ನೀರನ್ನು ಹೊತ್ತು ಮೆರೆಯುತ್ತದೆ. ಕುಟುಂಬವನ್ನೂ, ದೈವವನ್ನೂ ತಾಯಿ ಮೂಲದಿಂದಲೇ ಹುಡುಕಿಕೊಳ್ಳುವ ಈ ನೆಲ ಆಕಾಶ ಮೂಲದ ಗೋತ್ರದ ಬದಲಿಗೆ ನೆಲಮೂಲದ ʼಬಳಿಪದ್ಧತಿʼ ಯನ್ನು ಆಚರಿಸಿಕೊಂಡು ಬಂದಿದೆ. ಹುಟ್ಟಿನ ಸತ್ಯವಾದ ಹೆಣ್ಣನ್ನೇ ಸಂತಾನವಾಗಿ ಪರಿಭಾವಿಸಿ ಮಾತೃಮೂಲೀಯ ಅಳಿಯಕಟ್ಟು ಸಾಮಾಜಿಕಪದ್ಧತಿಯ ಭಿನ್ನಕ್ರಮವನ್ನೂ ಚಾಲ್ತಿಯಲ್ಲುಳಿಸಿದೆ. ಹೀಗೆ ರಸ ಅಥವಾ ಜಲಪರಂಪರೆಗೆ ಆತುಕೊಂಡು ಅಗ್ನಿಪರಂಪರೆಯ ನಿಚ್ಚಳನಿರಾಕರಣೆಯನ್ನು ತೋರುವ ಈ ನೆಲಕ್ಕೆ ತನ್ನದೇ ಆದ ಭಿನ್ನಪುರಾಣವಿದೆ. ಇಲ್ಲಿದೈವಗಳು ʼಉಂಟಾಗುತ್ತವೆʼ, ಹಾಗೆಯೇ ಕರಗಿ ಮರೆಯಾಗುತ್ತವೆ. ಅವು ಸ್ವರ್ಗದ ಸರಕುಗಳಲ್ಲ. ಲೋಕದ ʼಗಾಳಿಮೊಟ್ಟೆʼಗಳು. ಅವು ಎಂದೂ ಜೀರ್ಣವಾಗಲಾರವು. ಆದರೆ ಹಾಗೆ ಎಂದೂ ಜೀರ್ಣವಾಗದ ಆ ʼಸತ್ಯʼಗಳನ್ನು ಜೀರ್ಣೋದ್ಧಾರದ ರುಬ್ಬುಗಲ್ಲಿನಲ್ಲಿ ತಿರುವಿ ಜೀರ್ಣಮಾಡಿ ರೂಪಾಂತರಗೊಳಿಸುತ್ತಿರುವ ವಿಸಂಗತಿಯನ್ನೂ ಈಗ ಈ ನೆಲಹಾದು ಹೋಗುತ್ತಿದೆ! ಇದು ನಿಜಕ್ಕೂಅಚ್ಚರಿ ಮತ್ತು ಆಘಾತದ ಸಂಗತಿ. ಯಾವುದೇ ಒಂದು ನೆಲ ಹೀಗೆ ತನ್ನ ಅಸ್ಮಿತೆಯ ಭಾಗವಾದ ಆಚರಣೆ, ಪದ್ಧತಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ದೈವಗಳನ್ನೂ ಕಳೆದುಕೊಳ್ಳುವುದೆಂದರೆ ತನ್ನ ನಿಜದ ನೆಲೆಗಳನ್ನೇ ಪರಭಾರೆ ಮಾಡಿ ಒತ್ತುವರಿಗೆ ಒಳಗಾದಂತೆಯೇ ಸರಿ. ಹೀಗಾಗದಂತೆ ನಮ್ಮನ್ನು ನಾವು ಉಳಿಸಿಕೊಳ್ಳಬೇಕಾದರೆ ನಮ್ಮಬಬದುಕಿನಾಳದಲ್ಲಿ ಹುದುಗಿರುವ ನಮ್ಮ ನೆಲದ ನೆನಪುಗಳನ್ನು ನಾವು ಹುಡುಕಿ ಕೊಳ್ಳಲೇಬೇಕಿದೆ. ಈ ನಿಟ್ಟಿನಲ್ಲಿ ಕುಂದಾಪುರದ ಜೀವನ ಸಂಸ್ಕೃತಿಯ ನೆನಪುಗಳನ್ನು ಮರಳಿಜೋಡಿಸಿ ಕೊಟ್ಟಂತಿರುವ ಜಯಪ್ರಕಾಶ್ ಶೆಟ್ಟಿಯವರ ʼನೆಲದನೆನಪುʼ ಕುಂದಾಪುರದ ಜೀವನಸಂಸ್ಕೃತಿಯ ಹಿನ್ನೆಲೆಯಲ್ಲಿ ಓದಲೇ ಬೇಕಿರುವ ಪುಸ್ತಕ. ಕುಂದಾಪುರದ ನೆಲದ ನೆನಪುಗಳನ್ನು ಅಗೆದು ಎದುರಿಗಿಡುವ ಮೂಲಕ ಈ ಕೃತಿ ನಮ್ಮನ್ನು ನಮಗೆ ಪರಿಚಯಿಸಿ ನೆನಪಿಸುವ ತಣ್ಣನೆಯ ಕೆಲಸ ಮಾಡುತ್ತಿದೆ. ಇಂತಹ ಕೃತಿಯೊಂದಕ್ಕೆ ಜಾನಪದ ಅಕಾಡೆಮಿಯು ೨೦೧೪ನೇ ಸಾಲಿನ ಸಂಕೀರ್ಣ ವಿಭಾಗದ ಪುಸ್ತಕ ಬಹುಮಾನವನ್ನು ನೀಡುವ ಮೂಲಕ ಈ ಭಾಗದ ಜೀವನ ಸಂಸ್ಕೃತಿಯ ನೆನಪುಗಳಿಗೆ ಮಾನ್ಯತೆ ಮತ್ತು ಮನ್ನಣೆ ಎರಡನ್ನೂ ಕೊಟ್ಟಂತಾಗಿದೆ. _______________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement