ಅಂಕಣ

ಖಾಸಗೀಕರಣ ಮತ್ತು ಬಲಪಂಥಿಯ ಅರ್ಬನ್ ನಾಜಿಗಳು..!

ಬರಹ: ಡಾ. ಜೆ ಎಸ್ ಪಾಟೀಲ (ಲೇಖಕರು ಜನಪರ ಚಿಂತಕರು)ಭಾರತದಲ್ಲಿ ಅತ್ಯುತ್ತಮ ಆಸ್ಪತ್ರೆ ಯಾವುದು ಎಂದು ನೀವು ಕೇಳಿದರೆ ತಕ್ಷಣಕ್ಕೆ ಬರುವ ಉತ್ತರ ದಿಲ್ಲಿಯ ಸರಕಾರಿ ಸ್ವಾಮ್ಯದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಎಂದು. ದೇಶದ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳು ಯಾವುವು ಎಂದಾಗ ಎಲ್ಲರೂ ಬೆರಳು ಮಾಡುವುದು ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿಗಳತ್ತ. ದೇಶದ ಅತ್ಯುತ್ತಮ ಮ್ಯಾನೆಜ್ಮೆಂಟ್ ಕಾಲೇಜುಗಳಾವುವು ಎಂದಾಗ ನಾವೆಲ್ಲ ಸರಕಾರಿ ಐಐಎಂಗಳತ್ತ ನೋಡುತ್ತೇವೆ. ಪ್ರಾಥಮಿಕˌ ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ ಪಡೆಯಲು ದೇಶದ ಅತ್ಯುತ್ತಮ ಶಾಲೆಗಳು ಯಾವುವು ಎಂದರೆ ಸರಕಾರದ ಕೇಂದ್ರೀಯ ವಿದ್ಯಾಲಗಳುˌ ಸೈನಿಕ ಶಾಲೆಗಳುˌ ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಎನ್ನುವ ಸಂಗತಿ ನಾವೆಲ್ಲ ಬಲ್ಲೆವು.

ದೇಶದ ಪ್ರವಾಸೋದ್ಯಮ ಮತ್ತು ಸಾರಿಗೆ ಕ್ಷೇತ್ರಕ್ಕೆ ಭಾರತೀಯ ರೈಲ್ವೆ ನೀಡಿದ ಕಾಣಿಕೆ ಮತ್ಯಾವ ಖಾಸಗಿ ಸಾರಿಗೆ ಸಂಸ್ಥೆಯು ಸರಿಗಟ್ಟಲಾರದು. ಇಂದಿಗೂ ದೇಶದ ಅತಿ ಹೆಚ್ಚು ಜನರು ಪ್ರಯಾಣಿಸುವುದು ಭಾರತೀಯ ರೇಲ್ವೆಗಳ ಮೂಲಕ. ಅಮೆರಿಕೆಯ ಅಂತರಿಕ್ಷ ಸಂಶೋಧನಾ ಸಂಸ್ಥೆಗೆ ಜಗತ್ತಿನಲ್ಲೆ ಅತ್ಯಂತ ಪ್ರತಿಸ್ಪರ್ಧಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯಾವುದು ಎಂದು ಕೇಳಿದರೆ ತಕ್ಷಣಕ್ಕೆ ಹೊಳೆಯುವ ಉತ್ತರ ಭಾರತ ಸರಕಾರದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಎನ್ನುವುದು ಜನಜನಿತ. ನಾವು ಈ ಬಗೆಯ ಅನೇಕ ನಿದರ್ಶನಗಳನ್ನು ನೀಡಬಹುದು. ಯಾವುದೇ ಕ್ಷೇತ್ರವಾಗಿರಲಿ ಸರ್ಕಾರಿ ಸಂಸ್ಥೆಗಳ ಕಾರ್ಯಕ್ಷಮತೆಗೆ ಸರಿಗಟ್ಟುವ ಮತ್ತೊಂದು ಖಾಸಗಿ ಸಂಸ್ಥೆ ದೇಶದಲ್ಲಿ ಕಳೆದ ಏಳು ದಶಕಗಳಲ್ಲಿ ಹುಟ್ಟಿಕೊಂಡಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ.

ಕೋವಿಡ್ ಸಾಂಕ್ರಮಿಕ ರೋಗ ಉಲ್ಬಣಿಸಿದ ಸಂಕೀರ್ಣ ಸಂದರ್ಭದಲ್ಲಿ ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳು ಮಾತ್ರ ಜನರಿಗೆ ಉಚಿತ ಮತ್ತು ಹೊರೆಯಾಗದ ಚಿಕಿತ್ಸೆ ನೀಡಿದ್ದನ್ನು ನಾವು ಮರೆಯಲಾಗದು. ಅದೇ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ದೇಶದ ಜನರಿಗೆ ಸೇವೆಯನ್ನು ನೀಡಿದ್ದವು. ಬಡತನˌ ಆರ್ಥಿಕ ಸಂಕಷ್ಟಗಳಿಗೆ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ನೆರವಾದವು. ಸರ್ಕಾರಿ ರೈಲುಗಳುˌ ಬಸ್ಸುಗಳು ಮಾತ್ರ ಕಾರ್ಮಿಕರನ್ನು, ಜನರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು. ಸರ್ಕಾರದ ಏರ್ ಇಂಡಿಯಾ ಸಂಸ್ಥೆಯ ವಿಮಾನಗಳು ಮಾತ್ರ ವಿದೇಶದಲ್ಲಿದ್ದ ಭಾರತೀಯರನ್ನು ದೇಶಕ್ಕೆ ಕರೆತಂದವು. ದೇಶಾದ್ಯಂತ ಕೋವಿಡ್ ಸಾಂಕ್ರಮಿಕ ರೋಗ ಹರಡಿದಾಗ ಸರಕಾರ ಅವೈಜ್ಞಾನಿಕ ಮತ್ತು ಅಮಾನುಷ ರೀತಿಯಲ್ಲಿ ಲಾಕ್ಡೌನ್ ಘೋಷಣೆ ಮಾಡಿದ್ದನ್ನು ನಾವು ಬಲ್ಲೆವು. ಆ ಕಾರಣದಿಂದ ದೇಶದಲ್ಲಿ ಕೃತಕ ಸಾರಿಗೆ ಅಭಾವ ಸ್ರಷ್ಠಿಸುವ ಮೂಲಕ ಖಾಸಗಿ ಸಾರಿಗೆ ಸಂಸ್ಥೆಗಳು ಜನರನ್ನು ಲೂಟಿ ಮಾಡಿದವು. ಕೋವಿಡ್ ಸಂದರ್ಭ ಒತ್ತಟ್ಟಿಗಿರಲಿˌ ವಾರದ ಕೊನೆ ದಿನಗಳುˌ ಸರಣಿ ರಜೆ ಮತ್ತು ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಖಾಸಗಿ ಸಾರಿಗೆ ಸಂಸ್ಥೆಗಳು ಪ್ರಯಾಣ ದರವನ್ನು ಬಹುಗುಣ ಹೆಚ್ಚಿಸುವ ಮೂಲಕ ಸಾರ್ವಜನಿಕರನ್ನು ಹಾಡುಹಗಲೇ ದೋಚುವುದು ನಾವು ಬಲ್ಲೆವು.

ಕೋವಿಡ್ ಎನ್ನುವ ಸಾಂಕ್ರಮಿಕ ರೋಗ ಹಬ್ಬಿದೆ ಎಂಬ ಸುದ್ದಿ ಹರಡಿದ್ದೇ ಒಂದು ಬಹುದೊಡ್ಡ ಅಂತರಾಷ್ಟ್ರೀಯ ಹಗರಣ ಎನ್ನುವುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಅದನ್ನೇ ನೆಪವಾಗಿಟ್ಟುಕೊಂಡು ಖಾಸಗಿ ಆಸ್ಪತ್ರೆಗಳು ಸಾಮಾನ್ಯ ಶೀತˌ ಜ್ವರˌ ನೆಗಡಿಗಳಿಂದ ಬಳಲುವ ಜನರನ್ನು ಹೇಗೆಲ್ಲ ಸುಲಿಗೆ ಮಾಡಿದವು ಎನ್ನುವುದನ್ನು ನಾವು ಹತ್ತಿರದಿಂದ ನೋಡಿದ್ದೇವೆ. ಕೋವಿಡ್ ಸಾಂಕ್ರಮಿಕ ಮಹಾಮಾರಿ ಉಲ್ಬಣಿಸಿದ ಸಂದರ್ಭದಲ್ಲಿ ಈ ಖಾಸಗಿ ಆಟಗಾರರು/ಕ್ರೀಡಾಪಟುಗಳು/ಸಿನೆಮಾ ನಟರು/ಸೆಲೆಬ್ರಿಟಿಗಳು ಮತ್ತು ಅವರ ಅಭಿಮಾನಿಗಳು ಎಲ್ಲಿದ್ದರು? ಸರ್ಕಾರಿ ವೈದ್ಯರು, ದಾದಿಯರು, ಪೊಲೀಸ್ˌ ಪೌರ ಕಾರ್ಮಿಕರು ಮತ್ತು ಪುರಸಭೆ ನೌಕರರು ತಮ್ಮ ಜೀವದ ಹಂಗನ್ನು ತೊರೆದು ಜನರ ಸೇವೆ ಮಾಡಿದ್ದನ್ನು ನಾವು ನೋಡಿದ್ದೇವೆ. ಸಾಂಕ್ರಮಿಕ ಸಂದರ್ಭದಲ್ಲಿ ಈ ಕಾರ್ಪೊರೇಟ್‌ ಕಳ್ಳೋದ್ಯಮಿಗಳು ಎಲ್ಲಿದ್ದರು?

ದಕ್ಷತೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯ ಗುತ್ತಿಗೆಯನ್ನು ಪಡೆದವರಂತಾಡುವ ಖಾಸಗಿ ಸಂಸ್ಥೆಗಳ ಹಣೆಬರಹ ನಾನು ಚನ್ನಾಗಿ ಬಲ್ಲೆ. ಕಳೆದ 25 ವರ್ಷಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗ ಮಾಡಿರುವ ನಾನು ಅಲ್ಲಿನ ಎಲ್ಲ ಹುಳುಕುಗಳನ್ನು ಹತ್ತಿರದಿಂದ ನೋಡಿದ್ದೇನೆ. ನಾನು ಕೆಲಸ ಮಾಡುತ್ತಿದ್ದ ಶಿಕ್ಷಣ ಸಂಸ್ಥೆಯೊಂದರಲ್ಲಿ ನಮ್ಮ ಮೇಲಾಧಿಕಾರಿಯೊಬ್ಬ “We want only average and below average employs. We don’t want gold medalist” ಎಂದು ಪದೇ ಪದೇ ಹೇಳುತ್ತಿದ್ದ. ನಾನು ಒಬ್ಬ ಗೋಲ್ಡ್ ಮೆಡಲಿಸ್ಟ್ ಆಗಿದ್ದಕ್ಕೆ ಮತ್ತು ನಾನು ಆತನ ಎಲ್ಲ ಅಕ್ರಮಗಳನ್ನು ಪ್ರಶ್ನಿಸುತ್ತಿದ್ದದ್ದಕ್ಕೆ ಆತ ಹಾಗೆ ಹೇಳುತ್ತಿದ್ದ ಎನ್ನುವುದು ನನಗೆ ತಿಳಿಯುತ್ತಿತ್ತು. ಈಗ ಆ ಶಿಕ್ಷಣ ಸಂಸ್ಥೆಯಲ್ಲಿ ನಕಲಿ ವಿಜ್ಞಾನಿಗಳುˌ ಆಡಳಿತ ಮಂಡಳಿಯ ಎದುರಿಗೆ ನಡು ಬಗ್ಗಿಸಿˌ ಕೈಕಟ್ಟಿಕೊಂಡು ನಿಂತು ಹೇಳಿದ್ದಕ್ಕೆಲ್ಲ ಹೂಂಗುಟ್ಟುವ ವ್ಯಕ್ತಿಗಳು ಅತ್ಯನ್ನತ ಹುದ್ದೆಗಳನ್ನು ಅಲಂಕರಿಸಿದ್ದು ಕಾಕತಾಳಿಯವೇನಲ್ಲ. ಇದು ಎಲ್ಲಾ ಖಾಸಗಿ ಸಂಸ್ಥೆಗಳ ಹಣೆಬರಹ ಎಂದು ಬೇರೆ ಹೇಳಬೇಕಿಲ್ಲ.

ನಾವು ಪ್ರತಿಯೊಂದು ಖಾಸಗಿ ಸಂಸ್ಥೆಗಳನ್ನು ಕೂಲಂಕುಷವಾಗಿ ಅವಲೋಕಿಸಬೇಕಿದೆ. ಇತ್ತೀಚಿಗೆ ಖಾಸಗಿ ಬ್ಯಾಂಕುಗಳು ಸಾರ್ವಜನಿಕರನ್ನು ಹೇಗೆಲ್ಲ ವಂಚಿಸುತ್ತಿವೆ ಮತ್ತು ಲೂಟಿ ಮಾಡಿ ಕೊನೆಗೆ ದಿವಾಳಿ ಘೋಷಿಸಿಕೊಳ್ಳುತ್ತಿವೆ ಎನ್ನುವುದು ನಮಗೆಲ್ಲ ತಿಳಿದಿದೆ. ಐಸಿಐಸಿಐ ಬ್ಯಾಂಕಲ್ಲಿ ಅತ್ಯುನ್ನತ ಮಟ್ಟದಲ್ಲಿ ನಡೆದ ಆರ್ಥಿಕ ಹಗರಣ ನಮ್ಮೆದುರಿಗೆ ಜ್ವಲಂತ ಉದಾಹರಣೆಯಾಗಿ ನಿಂತಿದೆ. ದೇಶಾದ್ಯಂತ ನೂರಾರು ಖಾಸಗಿ ಬ್ಯಾಂಕುಗಳು ಈ ಹಿಂದೆ ತಮ್ಮ ಗ್ರಾಹಕರನ್ನು ಮುಳುಗಿಸಿ ಕಣ್ಮರೆಯಾಗಿವೆ. ಉದ್ದೇಶಪೂರ್ವಕವಾಗಿಯೇ ಗ್ರಾಹಕರನ್ನು ಮುಳುಗಿಸಿ ದಿವಾಳಿ ಘೋಸಿಸಿಕೊಳ್ಳುತ್ತಿರುವ ಖಾಸಗಿ ಬ್ಯಾಂಕುಗಳ ದುಷ್ಕ್ರತ್ಯ ಇಂದಿಗೂ ನಿಂತಿಲ್ಲ. ಗ್ಲೋಬಲ್ ಟ್ರಸ್ಟ್ ಬ್ಯಾಂಕಿನ ಹಳೆಯ ಪ್ರಕರಣದಿಂದ ಹಿಡಿದು ಇತ್ತೀಚಿನ ಯೆಸ್ ಬ್ಯಾಂಕ್ ಹಗರಣದ ವರೆಗೆ ಮುಳುಗುವ ಹಂತದಲ್ಲಿದ್ದ ಅನೇಕ ಖಾಸಗಿ ಬ್ಯಾಂಕುಗಳು ಮತ್ತು ಅವುಗಳ ಗ್ರಾಹಕರನ್ನು ಸಾರ್ವಜನಿಕ ವಲಯದ ಬ್ಯಾಂಕುಗಳು ಮಾತ್ರ ರಕ್ಷಿಸಿವೆ.

ಖಾಸಗಿ ವಲಯದ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳ ಮೋಸˌ ವಂಚನೆ ಪ್ರಕರಣಗಳು ಟಿವಿ ಮೇಘಾ ಧಾರವಾಹಿಗಳಂತೆ ಇಂದಿಗೂ ಮುಂದುವರೆದಿವೆ. ಖಾಸಗಿ ಬ್ಯಾಂಕುಗಳು ಡೀಫಾಲ್ಟ್ ಮಾಡುವ ಮೂಲಕ ಲೂಟಿ ಹೊಡೆದವರೇ ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಖರೀದಿ ಪ್ರಕ್ರೀಯೆಯ ಮುಂಚೂಣಿಯಲ್ಲಿರುವುದನ್ನು ನಾವು ಗಮನಿಸಬಹುದಾಗಿದೆ. ಇದು ಕಳ್ಳನ ಕೈಯಲ್ಲಿ ಖಜಾನೆಯ ಕೀಲಿಕೈ ಕೊಟ್ಟಂತೆ. ಒಂದು ವೇಳೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಅಸಮರ್ಥ, ಪರಿಣಾಮಕಾರಿಯಲ್ಲದ, ಅಪ್ರಾಮಾಣಿಕ ಮತ್ತು ಭ್ರಷ್ಟ ಎನ್ನುವುದಾದಲ್ಲಿ, ಅವುಗಳನ್ನು ನಿರ್ವಹಿಸುವˌ ಮುನ್ನೆಡೆಸುವ ಸರಕಾರವೇ ಸ್ವತಃ ಅಸಮರ್ಥ, ಪರಿಣಾಮಕಾರಿಯಲ್ಲದ, ಅಪ್ರಾಮಾಣಿಕ ಮತ್ತು ಭ್ರಷ್ಟ ಎಂದು ಕರೆಯಬಹುದಾಗಿದೆ.

ಮೊನ್ನೆ ನಮ್ಮ ಪ್ರಧಾನಿಗಳು Government has no business to do the business ಎಂದು ಯಾವ ಅಳುಕೂ ಇಲ್ಲದೆ ಹೇಳಿಕೆ ನೀಡಿದ್ದಾರೆ. ಹಾಗಾದರೆ ಸರ್ಕಾರಕ್ಕೆ ಯಾವುದೇ ವ್ಯವಹಾರ ಮಾಡಲು ಇಚ್ಛೆ ಇಲ್ಲ ಅಂತಾದರೆ ವ್ಯವಹಾರ/ಉದ್ಯೋಗಗಳಿಗೆ ಸರ್ಕಾರವನ್ನು ನಡೆಸುವ/ನಿಯಂತ್ರಿಸುವ ಇಚ್ಛೆ ಏಕೆ ಎಂದು ಪ್ರಶ್ನಿಸಬೇಕಾಗುತ್ತದೆ. ದೇಶದ ರಸ್ತೆಗಳು, ಸಾರಿಗೆ ವ್ಯವಸ್ಥೆ, ರೈಲ್ವೆ, ವಿಮಾನ ನಿಲ್ದಾಣಗಳು, ಅಣೆಕಟ್ಟುಗಳು, ಕಾಲುವೆಗಳು, ವಿದ್ಯುತ್ ಸರಬರಾಜು, ನೀರು ಸರಬರಾಜು, ಸಂಪರ್ಕ ಹಾಗು ಸಂವಹನ ವ್ಯವಸ್ಥೆಗಳು ಮತ್ತು ಸೌಲಭ್ಯಗಳು, ಐಐಟಿಗಳು ಮತ್ತು ಐಐಎಂಗಳು ಮೂಲಸೌಕರ್ಯ ಅಭಿವೃದ್ಧಿಗಳು ಹೀಗೆ ಒಂದೆರಡಲ್ಲದೆ ದೇಶದ ಸಮಗ್ರ ಮೂಲಸೌಕರ್ಯ ವ್ಯವಸ್ಥೆಯು ನಿರ್ಮಾಣಗೊಂಡಿದ್ದೇ ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಎನ್ನುವುದನ್ನು ನಾವು ಮರೆಯಬಾರದು.

ಈಗ ಈ ಎಲ್ಲ ಅಭಿವೃದ್ಧಿ ಚಟುವಟಿಕೆಗಳನ್ನು ಸರಕಾರ ಇಂದು ವ್ಯವಹಾರವೆಂದು ಪರಿಗಣಿಸುತ್ತಿದೆ. ಆ ಕಾರಣದಿಂದಲೇ ಪ್ರಧಾನಿಗಳು ಸರಕಾರ ವ್ಯವಹಾರ- ಉದ್ಯಮಗಳನ್ನು ನಡೆಸುವುದಕ್ಕಲ್ಲ ಎಂದು ರಾಜಾರೋಷದಿಂದ ಘೋಷಿಸಿದ್ದಾರೆ. ಸಾರ್ವಜನಿಕ ಸೇವೆಯನ್ನು ಹಿಂದಿನ ಸರಕಾರಗಳು ಸೇವೆ ಎಂದು ಪರಿಗಣಿಸಿದ್ದರಿಂದಲೇ ದೇಶ ಇಷ್ಟೊಂದು ಮುಂದುವರೆಯಲು ಸಾಧ್ಯವಾಗಿದ್ದು. ಅವೇ ಸಾರ್ವಜನಿಕ ಸೇವೆಗಳನ್ನು ಬಳಸಿ ದೊಡ್ಡವರಾದ ಪ್ರಧಾನಿಗಳು ಸಾರ್ವಜನಿಕ ಸೇವೆಗಳನ್ನು ವ್ಯವಹಾರ/ಉದ್ಯಮಗಳೆಂದು ಪರಿಗಣಿಸಿ ಅವುಗಳನ್ನು ಮುನ್ನೆಡೆಸುವುದು ಸರಕಾರದ ಕೆಲಸವಲ್ಲ ಎಂದು ಜಾಣ ಹೇಳಿಕೆ ನೀಡುವ ಮೂಲಕ ಸರಕಾರಿ ಸ್ವಾಮ್ಯದ ಉದ್ಯಮಗಳನ್ನೆಲ್ಲ ತಮ್ಮ ಆಪ್ತ ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ನಂತರದ ಆರಂಭಿಕ ದಿನಗಳಿಂದ ಮತ್ತು ಮೊದಲನೇ ಪಂಚವಾರ್ಷಿಕ ಯೋಜನೆಯಿಂದ ಸಾರ್ವಜನಿಕ ಸೇವೆಗಳನ್ನು ಅಂದಿನ ಸರಕಾರ ವ್ಯವಹಾರವೆಂದು ಪರಿಗಣಿಸಿದ್ದರೆ ದೇಶ ಇಷ್ಟೊಂದು ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಅಂದಿನ ಸರಕಾರ ಬ್ಯಾಂಕುಗಳು ರಾಷ್ಟ್ರೀಕರಣ ಮಾಡಿರದಿದ್ದರೆ ದೇಶ ಈ ಬಗೆಯ ಗಮನಾರ್ಹ ಆರ್ಥಿಕ ಅಭಿವೃದ್ಧಿ ಸಾಧಿಸುತ್ತಿರಲಿಲ್ಲ. ಅಂದಿನ ಸರಕಾರ ಮಾಡಬೇಕಾದ ಕೆಲಸಗಳನ್ನು ಖಾಸಗಿಯವರಿಗೆ ವಹಿಸಿದ್ದರೆ ಇಂದು ದೇಶ ಖಾಸಗಿ ಕಾರ್ಪೋರೇಟಗಳ ಪಾಲಾಗಿರುತ್ತಿತ್ತು. ಅದಕ್ಕಾಗಿ ಹೊಂಚು ಹಾಕಿ ಕುಳಿತಿದ್ದ ಕಾರ್ಪೋರೇಟ್ ಕಳ್ಳರು ಇಂದು ತಮ್ಮ ಕಾರ್ಯವನ್ನು ಸಾಧಿಸುತ್ತಿದ್ದಾರೆ.

ಸರಕಾರಿ ಸ್ವಾಮ್ಯದ ಸಾರ್ವಜನಿಕ ವಲಯದಿಂದ ನಿರ್ಮಿಸಲ್ಪಟ್ಟ ಬ್ಯಾಂಕಿಂಗ್ ಸೇರಿದಂತೆ ಮೇಲೆ ಪ್ರಸ್ತಾಪಿಸಲಾದ ಎಲ್ಲಾ ಬಗೆಯ ಮೂಲಸೌಕರ್ಯಗಳ ಸೇವೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಬೃಹದಾಕಾರವಾಗಿ ಬೆಳೆದಿರುವ ಬೆರಳೆಣಿಕೆಯಷ್ಟು ಕಾರ್ಪೊರೇಟ್ ಕಳ್ಳೋದ್ಯಮಿಗಳು ತಮ್ಮ ಸ್ವಂತ ಲಾಭಕ್ಕಾಗಿ ಮತ್ತು ಕೋಟ್ಯಂತರ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಲಾಭದಲ್ಲಿರುವ ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ಯಮಗಳ ಮೇಲೆ ವಕ್ರದ್ರಷ್ಟಿ ನೆಟ್ಟಿರುವುದನ್ನು ನೋಡಬಹುದಾಗಿದೆ. ಇಂದಿನ ಸರಕಾರ ಈ ಕಾರ್ಪೋರೇಟ್ ಕಳ್ಳೋದ್ಯಮಿಗಳ ಹಿತಾಸಕ್ತಿಗಾಗಿ ದುಡಿಯುತ್ತಿರುವುದು ಸ್ಪಷ್ಟವಾಗುತ್ತಿದೆ. ಕಳೆದ ಎಪ್ಪತ್ತು ವರ್ಷಗಳಷ್ಟು ಹಳೆಯ ಮತ್ತು ನಮ್ಮ ಹಿಂದಿನ ನಾಯಕರ ದೂರ ದೃಷ್ಟಿಯ ಫಲದಿಂದ ಸ್ಥಾಪಿಸಲಾಗಿರುವ ಅನೇಕ ಸರಕಾರಿ ಉದ್ಯಮಗಳು ಲಾಭದಲ್ಲಿದ್ದರೂ ಕೂಡ ಕೃತಕ ನಷ್ಟವನ್ನು ತೋರಿಸಿ ಆಡಳಿತ ಪಕ್ಷಕ್ಕೆ ಆಪ್ತರಾಗಿರುವ ಕಾರ್ಪೋರೇಟ್ ಕಳ್ಳೋದ್ಯಮಿಗಳಿಗೆ ಮಾರಾಟ ಮಾಡುವ ಸರಕಾರದ ಖಾಸಗೀಕರಣ ನೀತಿಯು ದೇಶದ ಜನರ ಭವಿಷ್ಯಕ್ಕೆ ಮಾರಕವಾದದ್ದು ಎನ್ನುವ ಸತ್ಯ ನಾವು ತಿಳಿಯದೇಕಿದೆ.

ಈ ಕಾರಣದಿಂದ ಇದೇ ತಿಂಗಳ ಅಂದರೆ ಮಾರ್ಚ್ 15 ಮತ್ತು 16 ರಂದು ದೇಶದ ವಿವಿಧ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಅಖಿಲ ಭಾರತ ಮುಷ್ಕರ ಮತ್ತು ಖಾಸಗೀಕರಣದ ವಿರುದ್ಧದ ಆಂದೋಲನವನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ.

ಬರಹ: ಡಾ. ಜೆ ಎಸ್ ಪಾಟೀಲ (ಲೇಖಕರು ಜನಪರ ಚಿಂತಕರು) __________________________________

0Shares